ನಾನೂ ರಾಮನಾದೆ (ಕೊವಿಡ್ ಕವಿತೆ)

ನಾವು, ನೀವು, ಅವರು, ಇವರು…. ಎಲ್ಲರೂ, ಎಲ್ಲೆಲ್ಲೂ ಕರೋನ ಅಧೀನರು. ಹಿ೦ದೆ೦ದೆಯೂ ಕೇಳದಿದ್ದ ಲಾಕ್ ಡೌನ್, ಸೊಶಿಯಲ್ ಡಿಸ್ಟೆನ್ಸಿ೦ಗ್ ಮು೦ತಾದ ಪದಗಳು ಮಕ್ಕಳಿಗೂ ಈಗ ಬಾಯಿಪಾಠ. ಈ ಹೊಸ ಮದ್ದಿಲ್ಲದ, ಲಸಿಕೆಯಿಲ್ಲದ ವೈರಾಣು ಪ್ರಪ೦ಚವನ್ನೆ ಅಲ್ಲೋಲ ಕಲ್ಲೋಲಗೊಳಿಸಿ ಮೆರೆಯುತ್ತಿದೆ. ಈ ಕೋವಿಡ್-ನ ಕರಾಳ ಕಥೆಗಳನ್ನು ನಾವೆಲ್ಲ ಕೆಲ ತಿ೦ಗಳಿ೦ದ ದಿನ ಬೆಳಗಾದರೆ ಕೇಳುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ, ಮತ್ತದೆ ಬೇಸರದ ದಾರಿಯನ್ನು ಈಗ ತುಳಿಯುವುದು ಬೇಡ .

ಈ ವೈರಾಣು ಅತಿವೇಗದಿ೦ದ ಸಾಗುತ್ತಿದ್ದ ನಮ್ಮ ಜೀವನಗಳನ್ನು, ಲಗಾಮು ಹಾಕಿ ಹಿಡಿದು ನಿಲ್ಲಿಸಿ, ಸುತ್ತಲಿನ ಪ್ರಪ೦ಚವನ್ನು, ಜೀವಗಳನ್ನು ಹೊಸದೃಷ್ಟಿಯಲ್ಲಿ ನೋಡುವ೦ತೆ ಮಾಡಿದೆ. ಕು೦ಟುಬದ ಸದಸ್ಯರಲ್ಲಿ, ಸ್ನೇಹಿತರಲ್ಲಿ ಹೊಸರೀತಿಯ ಸ೦ಭಾಷಣೆಯನ್ನು ಹುಟ್ಟುಹಾಕಿದೆ.

ಇನ್ನೊ೦ದು ಹೊಸ ರೀತಿಯ ವಿಚಿತ್ರ/ವಿಕಟ ಸನ್ನಿವೇಶಗಳು ಧುತ್ತೆ೦ದು ಇ೦ದು ನಮ್ಮ ಎದುರಾಗಿವೆ. ೫ ವರ್ಷಕ್ಕೊಮ್ಮೆಯೂ ಕರೆಯದಿರುವ ದೂರದ ಸ್ನೇಹಿತರು, ವಾರಕ್ಕೆರಡು ಬಾರಿ ದೂರವಾಣಿ ಕರೆಗಳನ್ನು ಮಾಡಿ ನನ್ನ ಎಕಾ೦ತಕ್ಕೆ ಭ೦ಗ ತರುವುದರಲ್ಲಿ ನಿಸ್ಸೀಮರಾಗಿದ್ದಾರೆ. ತಮ್ಮ ಕರ್ಕಶದನಿಯಿ೦ದಲೆ ಚಿರಪರಿಚಿತರಾದ ಸಹಪಾಟಿಗಳು, ಪ್ರತಿದಿನ ಹಾಡುಗಳನ್ನು ಹಾಡಿ ಧ್ವನಿಸುರಳಿಯನ್ನು ಮಾಡಿ ನಮಗೆಲ್ಲ ಕಳುಹಿಸಿ ’ಗಾನ ಕೋಗಿಲೆ’ ಎನ್ನುವ ಹೊಗಳಿಕೆಗೆ (?ವ್ಯ೦ಗದ) ಪಾತ್ರರಾಗಿದ್ದಾರೆ. ಕೆಲಸವಿಲ್ಲದ ಕಲಿಗಳೆಲ್ಲ ಚಿತ್ರಕಾರರಾಗಿ, ನೃತ್ಯಕಾರರಾಗಿ, ಸ೦ಯೋಜಕರಾಗಿ, ಹಾಸ್ಯನಟರಾಗಿ, ಬಾಣಸಿಗರಾಗಿ ರಾತ್ರೋರಾತ್ರಿ ಪರಿಣಿತಿಯನ್ನು ಹೊ೦ದಿ ನಮ್ಮೆಲ್ಲರನ್ನು ಒಳಗೊಳಗೇ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಕೋವಿಡ್-ನ ಜೊತೆಗೆ ಸಾಮಾಜಿಕ ಮಾಧ್ಯಮವನ್ನು ಸಹ ದೂಷಿಸಬೇಕೆನ್ನುವುದು ನನ್ನ ಅಭಿಪ್ರಾಯ. ಓದುಗರೆ, ಈ ವಾರದ ಬರಹ ಹಾಸ್ಯದ ವರ್ಗಕ್ಕೆ ಸೇರುತ್ತದೆಯೆ೦ದು ಮತ್ತೊಮ್ಮೆ ನಿಮಗೆ ನೆನಪಿಗೆ ತರಬಯಸುತ್ತೇನೆ.

ಈಗಿನ ಪ್ರಪ೦ಚದ ಪರಿಸ್ಥಿಯನ್ನು ಬೈದು, ಬೇಜಾರುಮಾಡಿಕೊ೦ಡು, ದಿನಕಳೆಯುವ ಬದಲು, ಅದರಲ್ಲೂ ಹಾಸ್ಯವನ್ನು ಕ೦ಡು ನಕ್ಕು, ನಗಿಸಿ, ನೋವನ್ನು ಕೆಲ ಗಳಿಗೆಯಾದರೂ ಮರೆಯುವ ಪ್ರಯತ್ನ ನಾವೆಲ್ಲರೂ ಮಾಡುವುದು ಆರೋಗ್ಯಕರ. “ನಗುವಿಗಿ೦ತ ದೊಡ್ಡ ಮದ್ದಿಲ್ಲ“ ಎನ್ನುವ ಹೇಳಿಕೆಯನ್ನು ನೀವೆಲ್ಲರೂ ಕೇಳಿದ್ದೀರ. ಈ ವಾರದ ಲೇಖಕ ಲಕ್ಶ್ಮಿನಾರಾಯಣ ಗುಡೂರ್ ಅವರು ’ಕೊವಿಡ್ ವೈರಿ’ ಅವರ ಮೇಲೆ ನಡೆಸಿದ ದಾಳಿ ಮತ್ತದರೊಡನೆ ಬ೦ದ ದಾಸ್ಯದಲ್ಲಿ, ಹಾಸ್ಯಹುಡುಕಿ, ಪ್ರಾಸಬದ್ಧವಾದ ಕವಿತೆ ಬರೆದಿದ್ದಾರೆ. ಓದಿ ನಗುವ ಸರದಿ, ಅವಕಾಶ ನಮ್ಮದು – ಸ೦ ( ದಾಕ್ಷಾಯಿಣಿ ಗೌಡ)

ಲೇಖಕರ ಕಿರುಪರಿಚಯ

ಹೆಸರು ಲಕ್ಷ್ಮೀನಾರಾಯಣ ಗುಡೂರ.  ಅಂಚೆ ಇಲಾಖೆಯಲ್ಲಿದ್ದ ತಂದೆಯ ವರ್ಗಾವಣೆಗಳಿಂದ ಉತ್ತರ ಕರ್ನಾಟಕದ ಹಲವು ಊರು ತಿರುಗಿದ್ದರೂ, ವಿದ್ಯಾರ್ಥಿ ಜೀವನದ ಹೆಚ್ಚು ಭಾಗ ಕಳೆದದ್ದು ಅಜ್ಜನ ಮನೆಯಲ್ಲಿ – ಕಲಬುರ್ಗಿಯಲ್ಲಿ. ವೈದ್ಯಕೀಯ ಪದವಿಯ ನಂತರ ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ತಿರುಗಿ ಇಂಗ್ಲೆಂಡಿಗೆ ಬಂದು ಮುಟ್ಟಿದ್ದು ೨೦೦೧ ರಲ್ಲಿ.  ಈಗ ರೋಗನಿದಾನಶಾಸ್ತ್ರಜ್ಞನ  (histopathologist) ವೃತ್ತಿಯಲ್ಲಿದ್ದು, ಪ್ರೆಸ್ಟನ್ (Preston) ನಗರದಲ್ಲಿ ವಾಸ.  ಕಳೆದ ಒಂದಷ್ಟು ವರ್ಷಗಳಿಂದ ಅನಿವಾಸಿಯ ಲೇಖನಗಳ ಜೊತೆಗೆ ಮೂಡಿ ಬಂದ ನನ್ನ ಚಿತ್ರಗಳ ಮೂಲಕ ಹಲವರಿಗೆ ಪರಿಚಯವಿರಬಹುದಾದರೂ, ಕವನ ರೂಪದಲ್ಲಿ ಪ್ರಸ್ತುತಿ ಇದೇ ಮೊದಲನೇ ಪ್ರಯತ್ನ ಅನಿವಾಸಿಯಲ್ಲಿ.

ನಾನೂ ರಾಮನಾದೆ !

Cartoon by Dr Lakshminarayana Gudur

ತಂದೆ ದಶರಥನಲ್ಲ, ರಾಜ್ಯ ಕೋಶಲವಲ್ಲ
ತಮ್ಮ ಲಕ್ಷ್ಮಣನಿಹನು, ಊರಲಿಲ್ಲ |
ಸೀತೆಯಂದದಿ ಎನಗೆ ಮಡದಿಯೊಬ್ಬಳೆ ಇಹಳು
ಬರಬೇಕು ಲವ-ಕುಶರಿನ್ನು, ಮಕ್ಕಳಿಲ್ಲ ||

ಇಂತಿಪ್ಪ ಮನೆಗೆನ್ನ ಬಂದು ರಾವಣನಂತೆ
ಕಾಡಿ ಹಿಡಿಯಿತು ವೈರ ಅಣುವು ಒಂದು |
ಉಸಿರಿನಲಿ ಒಳಗಿಳಿದು, ಎದೆಯೊಳಗೆ ಮನೆಮಾಡಿ,
ಮಲಗಿಸಿತು ಸುಸ್ತಿನಲಿ ಜ್ವರವ ತಂದು ||

ಮೈಯಿ-ಕೈಯಿಗಳೆಲ್ಲ ಒದ್ದಂತೆ ನೋಯುತಿರೆ
ತಲೆಯು ಸಿಡಿಯುವ ತೆರದಿ ಭಾಸವಾಯ್ತೈ |
ರಕ್ತದಲಿ ಕರಗಿರುವ ಆಮ್ಲಜನಕವು ಇಳಿದು
ಉಸಿರ ಎಳೆಯಲು ಎನಗೆ ತ್ರಾಸವಾಯ್ತೈ ||

ಮಾಡಿ ಕರೆಯನು ನಾನು ನೂರಹನ್ನೊಂದಕ್ಕೆ
ಹಿಡಿದು ಕಾದೆನು ಫೋನ ಗಂಟೆ ಕಾಲ |
ಸೀನಿದರೂ, ಕೆಮ್ಮಿದರೂ ಹರಸಿದಳು ನನ್ನವಳು
ಹೊರಗಿನಿಂದಲೇ “ಬಾಳಿ ನೂರು ಕಾಲ” ||

ಕೊನೆಗೂ ಬಂದುಲಿದಳು ನಾರೀಮಣಿಯೊಬ್ಬಳು
ತಾಸುಗಟ್ಟಲೆ ನಾನು ಕಾಯ್ದ ಮೇಲೆ |
ಕಿವಿಗೊಟ್ಟು ಕೇಳಿದಳು ನನ್ನ ಕಷ್ಟವನೆಲ್ಲ
ಇರುವ ಜ್ವರ, ಮೈನೋವು, ತಲೆಯ ಶೂಲೆ ||

ಫೋನಿನಾಕಡೆಯಲ್ಲಿ ಕಾಗದದ ಪರಪರವು
ಉಲಿದಳಾ ನಾರಿಯು ಕಟ್ಟಕೊನೆಗೆ |
ಹೊರಗೆಲ್ಲೂ ಹೋಗದಿರಿ, ನುಂಗಿರೀ ಮಾತ್ರೆಯನು
ಸಂಜೆ ಬರುವೆವು ನಾವೇ ನಿಮ್ಮ ಮನೆಗೆ ||

ಬಂದು ಬಾಗಿಲಿಗಿಳಿದು ಗಗನಯಾತ್ರಿಗಳಂತೆ
ಹತ್ತಿಕಡ್ಡಿಗಳೆಳೆದು ಮೂಗಲಿಟ್ಟು |
ಮರುದಿನವೇ ಕರೆಮಾಡಿ ಎಚ್ಚರಿಕೆ ಪೇಳಿದರು
ಕೋವಿಡ್ಡೇ, ಹೋಗದಿರಿ ಮನೆಯ ಬಿಟ್ಟು ||

ಹದಿನಾಲ್ಕು ದಿನಗಳಿವು ಎಚ್ಚರದಲಿರಬೇಕು
ದೇಹ ತಾನಾಗಿಯೇ ಮಾಯಬೇಕು |
ಔಷಧಿಯು ಇದಕಿಲ್ಲ, ಲಸಿಕೆಯೂ ಬಂದಿಲ್ಲ,
ಪ್ರಕೃತಿಯೇ ನಿಮ್ಮನ್ನು ಕಾಯಬೇಕು ||

ಮುಂದೆರಡು ವಾರಗಳು ಕಳೆದರೂ ಕಳೆಯವು
ಮಡದಿ ಮನೆಯಲೆ ಇಹಳು, ಬಳಿಯಲಿಲ್ಲ |
ಜ್ವರದ ವೇದನೆಯೊಡನೆ ವಿರಹವೇದನೆ ಸೇರಿ
ಕಾಲ ಕಳೆವುದು ಹೇಗೋ, ತಿಳಿಯಲಿಲ್ಲ ||

ಎಳೆದನು ನಿಮಿಷಗಳ, ಕಳೆದನು ಗಂಟೆಗಳ
ದಿನವಾರಗಳ ಗಣಿತ ತಿಳಿಯದಾಯ್ತು |
ಜ್ವರದ ಮಂಪರಿನಲ್ಲಿ ನರಳುತ್ತ ಕೋಣೆಯಲಿ
ಹಗಲೋ ಇರುಳೋ ಒಂದೂ ಹೊಳಿಯದಾಯ್ತು ||

ಮಳೆ ಬಂದು ನಿಂತಾಗ ಸೂರ್ಯನುದಯಿಸಿದಂತೆ
ಮೋಡಗಳ ಮರೆಯಿಂದ ಚಂದ್ರ ಬಂದು |
ಹತ್ತೈದನೇ ಬೆಳಗು ಮುಸುಕು ಮಂಜದು ಕರಗಿ
ಏಳಿರೆಂದಳು ನಗುತಾ ಚಲುವೆ ನಿಂದು ||

ಅಂದು ವಿರಹದಿ ಹೇಗೆ ವರುಷ ಕಳೆದನೋ ಅವನು
ಇಂದು ದಿನ ಹದಿನಾಲ್ಕು ಕಳೆಯದಾದೆ |
ಗೆದ್ದು ಕೋರಾವಣನ*, ಸೇರಿ ಮಡದಿಯ ಮತ್ತೆ
ಎತ್ತದೆಯೇ ಶಿವಧನುವ ರಾಮನಾದೆ……..
…… ನಾನೂ ರಾಮನಾದೆ ||

 • ಲಕ್ಷ್ಮೀನಾರಾಯಣ ಗುಡೂರ
 • ಕರೋನಾದ ಅಪಭ್ರಂಶವೆಂದುಕೊಳ್ಳಿ

ಸಲಹೆ: ಕೆ ಎಸ್ ನ ಅವರ ಶಾನುಭೋಗರ ಮಗಳು ಅಥವಾ ಹತ್ತು ವರುಷದ ಮುನ್ನ ಮುತ್ತೂರ ಜಾತ್ರೆಯಲಿ ರಾಗದಲ್ಲಿ ಹಾಡಿ ನೋಡಿ!

ವಿ.ಸೂ.: ಈ ಕವನದಲ್ಲಿ ಕಾಣುವ ಪರಿಸ್ಥಿತಿ ವರ್ತಮಾನದ್ದಾದರೂ, ನಿಮ್ಮ ಗಮನಕ್ಕೆ ಬರಬಹುದಾದ ಹೆಸರುಗಳು ಕಾಲ್ಪನಿಕ ಮಾತ್ರ. ಒಂದು ವೇಳೆ ಅನುಮಾನ ಬಂದರೆ, ಅದನ್ನು ಅನನುಭವಿ ಕವಿಯ ಸಾಹಿತ್ಯಿಕ ಸ್ವಾತಂತ್ರ್ಯ ಅಂದುಕೊಂಡು ಕ್ಷಮಿಸಿಬಿಡಿ – ಕವಿ.

8 thoughts on “ನಾನೂ ರಾಮನಾದೆ (ಕೊವಿಡ್ ಕವಿತೆ)

 1. ರಾಮನ ಕಥೆಯ ವಿವಿಧ ರೂಪಗಳನ್ನು ನೋಡಿದ್ದೇವೆ, ಕೇಳಿದ್ದೇವೆ – ವಾಲ್ಮೀಕಿ. ತುಲಸಿ, ಕಂಬನ್
  ಹೀಗೆಯೇ. ಈಗ ಇನ್ನೊಂದು ತರದ ಕೊರಾಯಣವನ್ನು ಕೊಟ್ಟಿದ್ದಾರೆ ಲಕ್ಷ್ಮಿನಾರಾಯಣ ಗುಡೂರು ಅವರು. ಓದಿ ಮುದಕೊಟ್ಟಿತು. ಪ್ರಸ್ತುತ ಸ್ಥಿತಿಗೆ ಹೋಲಿಸಿ ರಾಮನ ಮೇಲಿನ ಗೌರವ ಹೆಚ್ಚೇ ಆಯಿತು ಅನ್ನಿ. ಈಗಿನ ರಾಮನ ಸಂಕಟ ನೋಡಿ ಸ್ವಲ್ಪವಾದರೂ ಕನಿಕರ ಆದರೆ ಆಶ್ಚರ್ಯವಿಲ್ಲ. ಅವರ ಹಿಂದಿನ ಕೊರೋನಾ ವ್ಯಂಗ ಚಿತ್ರದಲ್ಲಿ ಆತ ರೋಮನ್ ಯೋಧ , ಇದರಲ್ಲಿ ಆತ ತ್ರೇತಾಯುಗಕ್ಕೆ ಸರಿದಿದ್ದಾನೆ! ಜ್ವರದ ಕಾವೇರಿ ಥರ್ಮಾಮೀಟರಿನ ಬಿಲ್ಲು ಬಾಗಿದೆ. ಅರ್ಥಪೂರ್ಣ ಹಾರ್ಟೂನ್. ಕಾವ್ಯದ ವಸ್ತು ಅದೇ ಕೊರೋನಾ ಆದರೂ ಇದರಲ್ಲಿಯ ಹೊಸ ನಿರೂಪಣೆಗೆ ಚಪ್ಪಾಳೆ!

  Sent from my iPhone

  Like

 2. ಹಾಸ್ಯ ಲೇಪಿತ ಕವಿತೆ ಚೆನ್ನಾಗಿ ಮೂಡಿಬಂದಿದೆ, ನಿಮ್ಮ ಕೈ ಕುಂಚದ ವಧುವಿಗೆ ಮನದ ಪದ ಪುಂಜದ ವರನಿಗೆ ಮದುವೆ ಮಾಡಿಸಿದಂತಿದೆ.
  ಮೊದಲ ಪ್ರಯತ್ನವೇ ಇಷ್ಟು ಚೆನ್ನಾಗಿದೆ ಅಂದರೆ ನೀವು ಮತ್ತೆ ಮತ್ತೆ ಬರೆಯಬೇಕು

  ವಿಜಯನರಸಿಂಹ

  Like

 3. ಲಕ್ಷ್ಮೀನಾರಾಯಣ ಅವರು ಹಿಂದೆ ಕವನವನ್ನು ಅನಿವಾಸಿಯಲ್ಲಿ ಪ್ರಕಟಿಸಿರುವುದು ನನಗೆ ನೆನಪಿಲ್ಲ. ಅವರು ರೇಖಾ ಚಿತ್ರ ಪರಿಣಿತರೆಂದಷ್ಟೇ ನನಗೆ ಗೊತ್ತು. ಸುಪ್ತವಾಗಿದ್ದ ಅವರ ಕಾವ್ಯ ಪ್ರಜ್ಞೆ ಎಚ್ಚರಗೊಂಡು ಅವರು ಅನಿವಾಸಿಗಳಿಗೆ ನೀಡಿರುವ ಈ ಕವನ ನಮಗೆಲ್ಲ Pleasant Surprise ತಂದಿದೆ ಎನ್ನ ಬಹುದು . ಹಾಸ್ಯ , ಪ್ರಾಸ , ಪದಗಳ ಬಳಕೆ, ಉತ್ತಮ ವಿನ್ಯಾಸ ಗಳಿಂದ ಕೂಡಿದ ಕರೋನಾಯಣ ಕವನ ಅಚ್ಚುಕಟ್ಟಾಗಿ ಮೂಡಿಬಂದಿದೆ. ಬಳಲಿದ ರೋಗಿಗೆ ವಿರಹ ವೇದನೆ ಮತ್ತು ಸಂಕಷ್ಟಗಳು ಒದಗಿರಬಹುದಾದರೂ , ಓದುಗರಿಗೆ ಖುಶಿ ಕೊಟ್ಟ ಕವನ.
  ಲಕ್ಷ್ಮೀನಾರಾಯಣ ಅವರಿಗೆ ಅಭಿನಂದನೆಗಳು.
  ‘ವಿರಹ ನೂರು ನೂರು ತರಹ’ ಎಂಬ ಪರಿಚಿತವಾದ ಸಾಲುಗಳಿಗೆ ಕರೋನ ಖಾಯಿಲೆ ಸೇರಿಸಿ ಕೊಳ್ಳಬಹುದು!

  Like

 4. ಅರ್ಥಪೂರ್ಣ, ಭಾವಪೂರ್ಣ, ಮತ್ತು ತಿಳಿ ಹಾಸ್ಯದ ಕವರಿನಲ್ಲಿ ಕಟ್ಟಿಟ್ಟ ಕಷ್ಟದ ಕಣ್ಣೀರು. ನಿಮ್ಮ ಕಥಾ-ಕವನಕ್ಕೊಂದು ಮೆಚ್ಚುಗೆಯ ಕವನದ ಹಾರ: 

  ಗೂಡೂರಿನೊಳಗೆ ಹರಡಿರ್ಪ
  ವೈರರಸನ ಆ ಮೈ ಗುಡಾರ
  ಅರ್ಧಾoಗಿಯ ಗೂಡನಪ್ಪುವ  
  ಕಡುಕಷ್ಟ ತಪ್ಪಿಸುವ ವೀರನಂತೆ!

  ಹತ್ತರ ಮೇಲೆ ನಾಲಕ್ಕು ದಿನ-ರಾತ್ರಿ
  ಏಕಾಂತದಲಿ ಉಸಿರೆಣಿಸಿ ಗೆದ್ದನೈ  
  ಈ ಲಕ್ಕುಮೀ ರಹಿತ ನಾರಾಯಣ
  ಗುಡ್ಡವೇರಿದ ಗಡ್ಡದ ಮುನಿಗಳಂತೆ! 

  ಮತ್ತೆ ಉಕ್ಕಿದ ಹುರುಪಿನ ಸೊಕ್ಕಿನಲಿ 
  ಶಿವನ ಧನು ಮುರಿದ ರಾಮನ ನೆನೆದು 
  ತವಕದಲಿ ತನ್ನೊಡತಿಯ ಬರಸೆಳೆದು   
  ಕುಣಿದನೈ ರಾಧೆಯಪ್ಪಿದ ಆ ಕೃಷ್ಣನಂತೆ!

  ಮುರಳಿ ಹತ್ವಾರ್ 

  Liked by 1 person

 5. ಸಾಕ್ಷಾತ್ ನರಸಿಂಹನನ್ನೇ ಅಹ್ವಾನಿಸಿಕೊಂಡು ರೋಗನಿದಾನದ ಪಂಡಿತರಾದ ಶ್ರೀಲಕ್ಷ್ಮಿನಾರಾಯಣರಿಂದ
  ವಿರಚಿತವಾದ ಕೋರೊನಾಯಣವನ್ನು‌ ಪಾಮರರು ಪ್ರತಿದಿನ ಉದಯ ಕಾಲದಲ್ಲಿ ಪಠಿಸಿದರೆ ರೋಗನಿರೋಧವು ವೃದ್ಧಿಸಿ ಕೊರೋನಾ ವೈರಾಣುಗಳು ಸೋಂಕುವುದಿಲ್ಲ, ಕೊರೊನಾ ಶಂಕಿತರಾಗಿದ್ದರೆ ಶೀಘ್ರ ಉಪಶಮನವಾಗುವುದು.

  ಅತ್ಯದ್ಭುತ ಕಥನ ಕವನ. ಅತ್ಯುತ್ತಮ ಹಾಸ್ಯಪ್ರಜ್ಞೆ.

  – ಕೇಶವ

  Liked by 1 person

 6. ನೆನಪಿಸಿದಿರಲ್ಲ ನರಸಿಂಹ ಸ್ವಾಮಿ ಯನು, ಪ್ರಣಯ ಲೋಕದ ಆ ಚಕ್ರವರ್ತಿ ಯನು,
  ಕಹಿ ಯಿಲ್ಲ, ಭಯವಿಲ್ಲ, ಆ‌ಲೋಕದೊಳಗೆ, ಮಧುರ ಪ್ರೇಮ ದ ರೇಶಿಮೆ ಯ ನೇಯಿಗೆ.
  ರಾಗವೊಂದೇ ಸಾಮ್ಯ ನಿಮ್ಮ ಹಾಡಿಗೆ ನೋಡಿ, ಕೆ ಮ್ಮು, ಸೀನು, ,ಕರೋನದ ಸಾವಿನಾ ಮೋಡಿ,
  ಪುಳಕದ ಬದಲಾಗಿ ರೋಗ ದಾ ಹೆಜ್ಜೆ, ಅತಿ ಸನಿಹ ಬಂದಿರುವ ಸಾವಿನಾ ಗೆ ಜ್ಜೆ.
  ಬೇರೆಯೇ ಲೋಕವು, ಸಂದೇಶ ಬೇರೆ, ಆದರೂ ಮನವನ್ನು ಮುಟ್ಟಿ ಬಿಟ್ಟಿತು ನೋಡಿ, ವಿಷಯವೇನಾದರೂ, ಇದೆ ಕವಿಯ ಗಾರುಡಿ, ಓದಿ ಸಿತು ಪದ್ಯವನುಮುಗುದರನು ಮಾಡಿ.

  Like

 7. ತುಂಬಾ ಚೆನ್ನಾಗಿ ಬರೆದಿದ್ದೀರಿ. ತುಂಬು ಹೃದಯದ ಅಭಿನಂದನೆಗಳು

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.