ಅಮ್ಮಂದಿರ ಅನುಭವಗಳು

ಇಲ್ಲಿಯವರೆಗೂ `ಅನಿವಾಸಿ`ಯಲ್ಲಿ ಯು.ಕೆಯಲ್ಲಿ ಕೆಲವು ವರ್ಷಗಳಿಂದ ನೆಲೆನಿಂತ ಕನ್ನಡಿಗರು ಬರೆದಿದ್ದಾರೆ. ಆದರೆ ಮೊಟ್ಟಮೊದಲ ಬಾರಿಗೆ ಮೊಮ್ಮಕ್ಕಳನ್ನು ನೋಡಿಕೊಳ್ಳಲು, ಮಕ್ಕಳ ಜೊತೆ ಇರಲು ಭಾರತದಿಂದ ಯುಕೆಗೆ ಬಂದ ಇಬ್ಬರು ಅಮ್ಮಂದಿರು ತಮ್ಮ ಯು.ಕೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈಗೆರೆಡು ತಿಂಗಳ ಹಿಂದೆ ಮ್ಯಾಂಚೆಸ್ಟರಿನಲ್ಲಿ ನಡೆದ ಕನ್ನಡ ಕಾರ್ಯಕ್ರಮವನ್ನು ನೆನೆದು ಬರೆದಿದ್ದಾರೆ. ಓದಿ, ಹಂಚಿ, ಪ್ರತಿಕ್ರಿಯೆ ವ್ಯಕ್ತಪಡಿಸಿ.- ಸಂ

ಅನಿವಾಸಿ ಕನ್ನಡಿಗರ ರಾಜ್ಯೋತ್ಸವ ಆಚರಣೆಯ ಒಂದು ಸವಿನೆನಪು – ನಾಗಲಲಿತಾ

ನಾಗಲಲಿತಾ ಮೂಲತಃ ಮೈಸೂರಿನವರು. ಮಗಳು, ಅಳಿಯ ಹಾಗೂ ಮೊಮ್ಮಗಳು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದು, ಭಜನೆ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಮೆಚ್ಚಿನ ಹವ್ಯಾಸಗಳು. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ನಾನು ಮೂಲತಃ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ರಾಜಧಾನಿ ಮೈಸೂರಿನವಳು. ನನ್ನ ಮಗಳು ಮತ್ತು ಅಳಿಯ ವೃತ್ತಿಯಲ್ಲಿ ವೈದ್ಯರಾಗಿ ೧೪ ವರ್ಷಗಳಿಂದ ಇಲ್ಲೇ ನೆಲೆಸಿ ಅನಿವಾಸಿ ಭಾರತೀಯರಾಗಿದ್ದಾರೆ. ಅವರಿಗೆ ಮುದ್ದಾದ ಮಗಳಿದ್ದಾಳೆ. ಎಂದಿನಂತೆ ೬ ತಿಂಗಳ ಕಾಲ ನಾನು ಮತ್ತು ನನ್ನ ಬೀಗಿತ್ತಿ ಮಕ್ಕಳೊಡನೆ ಕಾಲ ಕಳೆಯುವ ಅವಕಾಶ ದೊರೆಯಿತು. ಆಗ ಒದಗಿಬಂದ ಅವಕಾಶವೇ ಈ ನನ್ನ ಸವಿನೆನಪುಗಳು.

ನವೆಂಬರ್ ತಿಂಗಳು ಎಂದರೆ ಕರ್ನಾಟಕದಲ್ಲಿ ರಾಜ್ಯೋತ್ಸವದ ಸಂಭ್ರಮ ಸರ್ವೇಸಾಮಾನ್ಯ. ಆದರೆ ಇಲ್ಲಿನ ಅನಿವಾಸಿ ಕನ್ನಡಿಗರು ಈ ಆಚರಣೆಯನ್ನು ಇಲ್ಲಿ ಚಾಲನೆಗೆ ತಂದದ್ದು ಬಹಳ ಹೆಮ್ಮೆಯ ವಿಷಯ. ನವೆಂಬರ್ ೪ ರ ಮಧ್ಯಾಹ್ನ ಮಾಂಚೆಸ್ಟರ್ ಬಳಿಯಿರುವ ಹಲವು ಕನ್ನಡಿಗ ಕುಟುಂಬಗಳು ಒಂದು ಶಾಲೆಯಲ್ಲಿ ಸೇರಿದೆವು. ನಾನೂ ಕೂಡಾ ನನ್ನ ಕುಟುಂಬದವರ ಜೊತೆ ಭಾಗಿಯಾದೆ. ಎಲ್ಲರ ಪರಸ್ಪರ ಪರಿಚಯವಾಯಿತು. ಬಹಳ ಸ್ನೇಹಮಯ ವಾತಾವರಣವಿತ್ತು.

ಮೊದಲು ದೀಪ ಬೆಳಗುವ ಮೂಲಕ ತಾಯಿ ಭುವನೇಶ್ವರಿಯನ್ನು ನಾಡಗೀತೆಯೊಂದಿಗೆ ಸ್ಮರಿಸಿದರು. ಹಿರಿಯರಿಂದ ದೀಪ ಬೆಳಗಿಸಿ ಅವರನ್ನು ಗೌರವಿಸಿದ ರೀತಿ ಬಹಳ ಇಷ್ಟವಾಯಿತು. ಆಹ್ವಾನಿತ ಹಿರಿಯ ಕನ್ನಡಿಗ ದಂಪತಿಗಳಿಂದ ಧ್ವಜಾರೋಹಣ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಣ್ಣರಿಂದ ಹಿರಿಯರವರೆಗೆ ಎಲ್ಲರೂ ಭಾಗವಹಿಸಿದರು. ಹಾಡು, ನೃತ್ಯ ರೂಪಕಗಳಿಂದ ಕನ್ನಡದ ಸೊಬಗನ್ನು ಎತ್ತಿಹಿಡಿದರು.

‘’ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸೀ’’ ಎಂಬ ಸಂಸ್ಕೃತ ಸುಭಾಷಿತದಂತೆ, ಎಲ್ಲೇ ಇದ್ದರೂ ತಮ್ಮ ಮಾತೃಭೂಮಿ, ಮಾತೃಭಾಷೆಯನ್ನು ಮರೆಯದೆ ಕನ್ನಡದ ಸಂಸ್ಕೃತಿಯ ಮೆರುಗನ್ನು ಹೆಚ್ಚಿಸಲು ಪಣತೊಟ್ಟಿರುವ ಅನಿವಾಸಿ ಕನ್ನಡಿಗರೆಲ್ಲರಿಗೂ ನನ್ನ ಅಭಿನಂದನೆಗಳು.

ಕರ್ನಾಟಕದ ಪಾರಂಪರಿಕ ತಿಂಡಿ ತಿನಿಸುಗಳನ್ನು ಒಳಗೊಂಡ ಊಟದ ವ್ಯವಸ್ಥೆ ಕೂಡಾ ಎಲ್ಲರಿಗೂ ಬಹಳ  ಇಷ್ಟವಾಯಿತು. ಒಟ್ಟಿನಲ್ಲಿ ಒಳ್ಳೆಯ ಸುಸಂಸ್ಕೃತ ವಾತಾವರಣ ಹಾಗೂ ಸ್ನೇಹಮಯಿ ಜನರ ಒಡನಾಟದಿಂದ ಈ ದಿನ ಬಹಳ ಅರ್ಥಪೂರ್ಣವೆನಿಸಿತು. ಎಷ್ಟೇ ಆದರೂ ಕನ್ನಡದವರಲ್ಲವೇ, ಒಳ್ಳೆಯ ಸಂಸ್ಕಾರಗಳು ಹುಟ್ಟಿನಿಂದಲೇ ಬಂದಿರುತ್ತವೆ. ಇಂತಹ ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಕುಟುಂಬದೊಂದಿಗೆ ಭಾಗಿಯಾಗುವ  ಸಂದರ್ಭ ಈ ಬಾರಿ ಒದಗಿಬಂದುದಕ್ಕೆ ಬಹಳ ಸಂತೋಷವಾಯಿತು.

ಜೈ ಭುವನೇಶ್ವರಿ, ಜೈ ಕರ್ನಾಟಕ. ಎಂದೆಂದಿಗೂ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ವಿದೇಶದಲ್ಲಿ ಅಮ್ಮನ ಅನುಭವ – ವನಮಾಲಾ ಎಸ್ ರಾವ್

ವನಮಾಲಾ. ಎಸ್. ರಾವ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದೇವರನಾಮ, ಜಾನಪದ ಗೀತೆ ಹಾಗೂ ಭಾವಗೀತೆಗಳನ್ನು ಹಾಡುವುದೆಂದರೆ ಬಹಳ ಆಸಕ್ತಿ. ಬೆಂಗಳೂರಿನಲ್ಲಿ ಭಜನಾಮಂಡಳಿಯೊಂದರ ಸಕ್ರಿಯ ಸದಸ್ಯೆ. ಪುರಾಣ ಗ್ರಂಥಗಳನ್ನೋದುವುದು ಹಾಗೂ ಏಕಪಾತ್ರಾಭಿನಯವನ್ನು ಮಾಡುವುದು ಇತರ ಹವ್ಯಾಸಗಳು.

ಅಂದು ನನ್ನ ಮಗ ”ಅಮ್ಮ, ನಾನು ವಿದೇಶಕ್ಕೆ ಹೋಗಿಬರುತ್ತೇನೆ” ಎಂದು  ಕಾಲಿಗೆರಗಿದ. ಅಮ್ಮನ ಹೃದಯ ಅಳುತ್ತಿತ್ತು. ಮನಸ್ಸಿಗೆ ನೋವಾದರೂ ಮಗನಿಗೆ ಬಾಯಿ ತುಂಬಾ ಹರಸಿದೆ. ”ಹೋಗಿ ಬಾ ಕಂದ. ನೀ ಎಲ್ಲಿದ್ದರೂ ಸುಖವಾಗಿರು. ನಿನ್ನ ಬೆನ್ನ ಹಿಂದೆ ದೇವರಿದ್ದಾನೆ” ಎಂದು ಆಶೀರ್ವದಿಸಿದೆ. ವೈದ್ಯವೃತ್ತಿಯ ಮಗ ಇಂಗ್ಲೆಂಡಿಗೆ ಹೊರಟ. ತಾಯಿ ಜ್ಞಾಪಿಸಿದಳು, ‘ದೇವರ ಸ್ಮರಣೆ ಮರೆಯಬೇಡ.

ಹಲವು ವರ್ಷಗಳು ಉರುಳಿದುವು. ವೈದ್ಯ ವೃತ್ತಿಯ ಸೊಸೆ ನಮ್ಮ ಮನೆಗೆ ಬಂದಳು. ಮಗನಿಗೆ ಜೊತೆಯಾದಳು, ಹೆಣ್ಣು ಮಕ್ಕಳಿಲ್ಲದ ನನಗೆ ಮಗಳಾದಳು. ಇನ್ನೆರಡು ವರ್ಷಗಳಲ್ಲಿ ಪುಟ್ಟ ಕಂದಮ್ಮ ನಮ್ಮನೆಗೆ ಬಂತು. ಹೆಣ್ಣು ಮಗು, ಅಳುವ ಹೃದಯ ನಲಿಯಿತು.

ನಾನು ಭಾರತದಿಂದ ಎರಡು ವರ್ಷಗಳಿಗೊಮ್ಮೆ ಇಂಗ್ಲೆಂಡಿಗೆ ಬಂದು ಮಕ್ಕಳ ಜೊತೆ ಇರುತ್ತಿದ್ದೆ. ಮೊಮ್ಮಗಳ ಆಟ-ಪಾಠದಲ್ಲಿ ಸಮಯ ಸರಿದದ್ದು ಗೊತ್ತಾಗುತ್ತಿರಲಿಲ್ಲ. ತುಂಬಾ ಸುಖದ ಅನುಭವ. ಮನಸ್ಸು ಹಕ್ಕಿಯಂತೆ ಸಂತಸದಿಂದ ಹಾರಾಡಿತು. ಮಗ, ಸೊಸೆ, ಮೊಮ್ಮಗಳ ಜೊತೆ ದೇವಸ್ಥಾನ, ಸ್ನೇಹಿತರ ಮನೆಗಳಿಗೆ ಭೇಟಿ, ಅವರು ನಮ್ಮ ಮನೆಗೆ ಬರುವುದು, ಮಾತು-ಕಥೆ, ಹಳೆಯ ನೆನಪುಗಳ ಸ್ಮರಣೆ, ಹೀಗೆ ಆನಂದದಿಂದ ದಿನ ಕಳೆಯುತ್ತಿದ್ದೆ.

ಮತ್ತೆ ಈ ಬಾರಿ ಬಂದಿದ್ದೇನೆ. ಈ ಸಲ ಕನ್ನಡ ರಾಜ್ಯೋತ್ಸವವೂ ನಾನು ಇಲ್ಲಿದ್ದಾಗಲೇ ಬಂತು. ಈ ಸಂಭ್ರಮದಲ್ಲಿಇಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು. ನವೆಂಬರ್ ನಾಲ್ಕನೇ ತಾರೀಕಿನಂದು ಮಾಂಚೆಸ್ಟರ್ ಬಳಿಯಿರುವ ಕನ್ನಡಿಗರೆಲ್ಲರೂ ಸೇರಿ ರಾಜ್ಯೋತ್ಸವದ ಆಚರಣೆಯನ್ನು ನಡೆಸಿದರು. ನಾನು ಹಾಗೂ ನನ್ನ ಸಂಗಡ ಬಂದ ಸೊಸೆಯ ಅಮ್ಮ, ಮಕ್ಕಳೊಂದಿಗೆ ಹೊರಟೆವು.

ಆಹಾ! ಹಿರಿಯರಾದ ನಮ್ಮನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ ರೀತಿ ಮನಮುಟ್ಟಿತು. ಸಡಗರ, ಸಂಭ್ರಮ, ಸ್ನೇಹಿತರ ಗೂಡು, ಮಕ್ಕಳ ಗುಂಪು, ಚಂದ, ಚಂದ. ನಮ್ಮಿಂದ ದೀಪ ಬೆಳಗಿಸಿದರು. ಹಿರಿಯ ದಂಪತಿಗಳಿಂದ ಧ್ವಜಾರೋಹಣ ಮಾಡಿಸಿದರು. ಎಂತಹ ಗೌರವ ಹಿರಿಯರಿಗೆ!

ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಸರದಿ. ಮಕ್ಕಳು, ದೊಡ್ಡವರು ಎಲ್ಲರೂ ಹಾಡಿದರು, ಕುಣಿದರು. ಕನ್ನಡವನ್ನು ಹೆಮ್ಮೆಯಿಂದ ನೆನೆದರು. ಎಲ್ಲೆಲ್ಲೂ ಹಬ್ಬದ ವಾತಾವರಣ ತುಂಬಿತ್ತು. ಆ ಸಂಭ್ರಮವನ್ನು ವರ್ಣಿಸಲು ಪದಗಳು ಸಾಲದು. ಕನ್ನಡ ತಾಯಿ ಧನ್ಯಳಾದಳು ಅನ್ನಿಸಿತು.

ಈ ಮಧ್ಯೆ ಭೂರಿಭೋಜನದ ವ್ಯವಸ್ಥೆ. ಸವಿಸವಿಯಾದ ಊಟ, ಹೊಟ್ಟೆಗೆ ತೃಪ್ತಿ. ಪ್ರೀತಿ ತುಂಬಿದ ಊಟ ಅಮೃತದಂತೆನಿಸಿತ್ತು. ಹಲವು ಕನ್ನಡದ ಕುಟುಂಬಗಳು  ಒಂದೇ ಮನೆಯವರಂತೆ ಒಡನಾಡಿಕೊಂಡಿರುವ ರೀತಿ ನೋಡಿ ಆನಂದ ಬಾಷ್ಪಗಳು ಹರಿದುವು. ನನ್ನ ಮಗನಿಗೆ ನೂರಾರು ಜನರ ಕನ್ನಡದ ಬಳಗ, ಅಮ್ಮಗೆ ಇನ್ನೇನು ಬೇಕು? ಅಂದು ಅಳುತ್ತಿದ್ದ ನನ್ನ ಹೃದಯ ಇಂದು ಹೇಳಿತು, ನನಗೆ ಒಬ್ಬ ಮಗನಲ್ಲ, ನೂರಾರು ಮಕ್ಕಳು. ಎಲ್ಲಾ ಮಕ್ಕಳೂ ನಮ್ಮ ಮಕ್ಕಳು. ನೀವೆಲ್ಲ ಹೀಗೇ ಒಂದಾಗಿ ನಮ್ಮೆಲ್ಲ ಹಬ್ಬಗಳನ್ನೂ ಆಚರಿಸುತ್ತಾ ಸದಾ ಸುಖವಾಗಿ ಬಾಳಿರಿ. ದೇವರು ಸದಾ ನಿಮ್ಮ ಜೊತೆಯಿರಲಿ ಎಂಬುದೇ ನಿಮಗೆಲ್ಲರಿಗೂ ನನ್ನ ತುಂಬು ಹೃದಯದ ಹಾರೈಕೆ.

4 thoughts on “ಅಮ್ಮಂದಿರ ಅನುಭವಗಳು

  1. ಕಿರು ಲೇಖನಗಳನ್ನು ಬರೆದು ತಮ್ಮ ‘ಸ್ವಾದಿಷ್ಟ’ ಅನುಭವಗಳನ್ನು ಹಂಚಿಕೊಂಡಿರುವ ಈ ಇಬ್ಬರು ಅಮ್ಮಂದಿರಿಗೆ ಅಭಿನಂದನೆಗಳು. ಇದೇ ಹಿನ್ನೆಲೆಯಲ್ಲಿ ನೆನಪಿಗೆ ಬಂದದ್ದು ನವೆಂಬರ್ ೫, ೨೦೧೬ ರಂದು ಡಾರ್ಬಿ ನಗರದಲ್ಲಿ ನಡೆದ ಕಾರ್ಯಕ್ರಮಗಳು. ಮಗನ ಕುಟುಂಬಕ್ಕೆ ಭೇಟಿ ಕೊಡಲು ಭಾರತದಿಂದ ಬಂದಿದ್ದ ಶ್ರೀಮತಿ ಸೌಭಾಗ್ಯ ಜಯಂತ್ ಮೇರ್ವೆ ಯವರು (ಆಶೀರ್ವಾದ್ ಮೇರ್ವೆ ಯವರ ತಾಯಿ) ಕಾರ್ಯಕ್ರಮದ ಬಗ್ಗೆ ‘ಅನಿವಾಸಿ’ ಜಾಲತಾಣದಲ್ಲಿ ಕಿರು ಲೇಖನವನ್ನು ಬರೆದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು. ಇಂತಹ ಹಂಚಿಕೆಗಳು ಇನ್ನಷ್ಟು ಬರಲಿ.
    ವಿನತೆ ಶರ್ಮ

    Like

  2. ಭಾರತದಿಂದ ಬಂದ ಇಬ್ಬರು ಅಮ್ಮಂದಿರು ಮಂಚೆಸ್ರ್ದಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವದ ಬಗ್ಗೆ ಆತ್ಮೀಯತೆ,ಹರ್ಷಗಳಿಂದ ಬರೆದ ಲೇಖನ ತುಂಬಾ ಚೆನ್ನಾಗಿದೆ. ಅವರಿಬ್ಬರಿಗೂ ಧನ್ಯವಾದಗಳು. ಹಾಗೆಯೇ ,ಇಲ್ಲಿದ್ದ ಅಮ್ಮಂದಿರಾದರು ತಮ್ಮ ಅನುಭವಗಳನ್ನು ಬರೆದು ಎಲ್ಲರಿಗೂ ಹಂಚಿದಲ್ಲಿ, ಪರದೇಶದಲ್ಲಿ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಯಿರಬೇಕಾಗಿರುವ ಕೌಟುಂಬಿಕ ಸಮ್ಮಿಲನ,ಸೌಹಾರ್ದತೆಗಳನ್ನು ಇಮ್ಮಡಿಗೊಳಿಸಲು ಸಾಧ್ಯವಿದೆ .
    ಅರವಿಂದ ಕುಲ್ಕರ್ಣಿ

    Like

  3. ಈ ಹೊತ್ತಿನ ಅನಿವಾಸಿ ಬಳಗದ ಮಂಟಪದಲ್ಲಿ ಇಬ್ಬರು ತಾಯಂದಿರು ಹಂಚಿಕೊಂಡ ಅನುಭವಗಳನ್ನೋದುತ್ತಿದ್ದಂತೆ , ಅರಿಯದೇ ಕಣ್ಣು ತುಂಬಿ ಭಾವಸಾಗರದಲ್ಲಿ ತೇಲಿ ನನ್ನ ಮನ ಅಮೇರಿಕದಲ್ಲಿರುವ ನನ್ನ ಮಗ, ಸೊಸೆ, ಮೊಮ್ಮಗಳ ಹಿಂದೆ ಹಾರಿತು.ನಿಜ ಅಲ್ಲಿರುವ ಭಾರತೀಯ ಅನಿವಾಸಿ ಗಳ ಗುಂಪಿನಲ್ಲಿ ಕಾಣುವ ಅನ್ಯೋನ್ಯತೆ, ಎಲ್ಲರೂ ಒಂದೇ ಎಂಬ ಭಾವನೆ ಬೆಳೆದು ಬಂದ ರೀತಿ ಕಂಡು ಮನ ತುಂಬಿ ಬಂದದ್ದಿದೆ.ಏನೇ ನೋವು, ನಲಿವು ಹಂಚಿಕೊಳ್ಳಲು ಇಷ್ಟು ದೊಡ್ಡ ಬಳಗ ಇದೆಯಲ್ಲ ಅಂತ ಮನ ಸಮಾಧಾನ ಹೊಂದಿದ್ದಿದೆ.ಎಲ್ಲಿದ್ದರೂ ನಾವು ಭಾರತೀಯರು, ಕನ್ನಡಿಗರು ಮೊದಲು ಎಂಬಂತೆ ಅವರು ಆಚರಿಸುವ ಹಬ್ಬ-ಹರಿದಿನ, ರಾಷ್ಟ್ರೀಯ ಹಬ್ಬಗಳ ಆಚರಣೆ ಕಂಡು ಅಭಿಮಾನದಿಂದ ಎದೆ ಯುಬ್ಬಿದ್ದಿದೆ.ತಮ್ಮ ಹಿಂದೆ ಬಿಟ್ಟು ಬಂದ ಒಲವು ಪ್ರೀತಿಯ ತುಡಿತ ಮಿಡಿತಗಳಿಗೆ ಈ ರೀತಿ ಹೊರ ಹರಿವನ್ನು ಕಂಡು ಕೊಳ್ತಾರೋ ಏನೋ ಎಂಬ ಪ್ರಶ್ನೆ ಉದ್ಭವಿಸಿದ್ದೂ ಇದೆ.ಏನೇ ಇರಲಿ ಎಲ್ಲೇ ಇರಲಿ ತನ್ನತನ ಮರೆಯದಿರಿ ಕಂದಮ್ಮಗಳಿರಾ ಅಂತ ಮನದುಂಬಿ ಹರಸಿದ್ದಿದೆ. ಈಗ ಮತ್ತೆ ಈ ಇಬ್ಬರೂ ತಾಯಂದಿರೊಂದಿಗೆ ನನ್ನ ಹಾರೈಕೆಯನ್ನೂ ಮಿಳಿಸುತ್ತಿದ್ದೇನೆ.
    ಸರೋಜಿನಿ ಪಡಸಲಗಿ

    Like

  4. ನಮ್ಮನ್ನು ಇನ್ನೊಬ್ಬರ ಕಣ್ಣಿನಿಂದ ನೋಡಿದಾಗಲೇ ವಾಸ್ತವಿಕತೆಯ ಅರಿವಾಗುತ್ತದೆ. ಈ ವಾರದ ಅನಿವಾಸಿ ‘ಕೈತುತ್ತಿನಲ್ಲಿ’ ಇಬ್ಪರು ತಾಯಂದಿರು ತಮ್ಮ ಅನುಭವಗಳನ್ನು ಪ್ರೀತಿಯಿಂದ ಹಂಚಿಕೊಂಡಿದ್ದಾರೆ. ಅವರಿಗೆ
    ನೀಡಿದ ಸ್ವಾಗತ ಕನ್ನಡ ಬಳಗದ ಟ್ರೆಡಿಷನ್ ಅನ್ನು ಒತ್ತಿ ಹೇಳುತ್ತದೆ. ಅವರಿಗೂ, ಮ್ಯಾಂಚೆಸ್ಟರ ಕನ್ನಡಿಗರಿಗೂ ಅಭಿನಂದನೆಗಳು. ಶ್ರೀವತ್ಸ ದೇಸಾಯಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.