ಬೆಳ್ಳೂರು ಗದಾಧರ ಬರೆವ `ಮೂರು ಪೌಂಡ್ ಕ್ಲಬ್`

bellur
ಲೇಖಕರು: ಬೆಳ್ಳೂರು ಗದಾಧರ

 

ನೀವು ಮೂರು ಪೌಂಡ್ ಕ್ಲಬ್ಬಿಗೆ ಸೇರಿದವರಾಗಿಲ್ಲದ್ದಿದ್ದರೆ ಸುಮಾರು ಐದು ದಶಕಗಳ ಮೊದಲು ಯುಕೆಗೆ ಬಂದವರ ಮೊದಲ ದಿನಗಳ ಅನುಭವ ಬಹುಷಃ ನಿಮಗೆ ಗೊತ್ತಿರಲಿಕ್ಕಿಲ್ಲ.

ಎಲ್ಲರಿಗೂ ತಿಳಿದಹಾಗೆ ೧೮ನೇ ಶತಮಾನದ ಮಧ್ಯದಿಂದ ಸುಮಾರು ೧೯೫೬ ರವರಗೆ ಬ್ರಿಟಿಷ್ ರಾಜ್ಯ ಪ್ರಪಂಚದ ಬಹು ಭಾಗ ಆವರಿಸಿತ್ತು. ಎರಡನೇ ಮಹಾಯುದ್ಧದ ನಂತರ ಬ್ರಿಟಿಷ್ ಸಾಮ್ರಾಜ್ಯದ ೮೦೦ ದಶಲಕ್ಷ ಪ್ರಜೆಗಳಿಗೆ ವೀಸಾ ಗೊಂದಲವಿಲ್ಲದೆ UK ಗೆ ಬರಲು ಬ್ರಿಟಿಷ್ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಆಗ ಇದರ ಉದ್ದೇಶ ಎರಡನೇ ಮಹಾಯುದ್ಧದಿಂದ ಈ ದೇಶದಲ್ಲಿ ಉಂಟಾದ ಕಾರ್ಮಿಕರ ಮತ್ತು ನೈಪುಣ್ಯತೆಯ ಕೊರತೆಗಳನ್ನು ನಿವಾರಣೆ ಮಾಡಲಿಕ್ಕೆಂದು. ಈ ಅವಕಾಶದಿಂದಾಗಿ ಯುಕೆಯ ಬಂದರುಗಳಿಗೆ ವೆಸ್ಟ್ ಇಂಡೀಸ್, ಭಾರತ ಮತ್ತು ಅಫ್ರಿಕಗಳಿಂದ ಬಂದ ಹಡಗುಗಳ ತುಂಬಾ ಅಲ್ಲಿನ ಜನರು ಬಂದರು. ಆದರೆ ಇದರ ಉದ್ದೇಶ ಸಾಮೂಹಿಕ ವಲಸೆಯಂತೂ ಆಗಿರಲಿಲ್ಲ. ೧೯೫೩ ರಲ್ಲಿ ಬಂದವರು ೩೦೦೦ ಜನ, ೧೯೫೬ ರಲ್ಲಿ ೪೬೮೦೦ ಹೀಗೆ ಪತಿವರ್ಷವೂ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದು, ೧೯೬೧ ರಲ್ಲಿ ೧೩೬೪೦೦ ಮುಟ್ಟಿದಾಗ ಬ್ರಿಟಿಷ್ ಸರ್ಕಾರ ಎಚ್ಛೆತ್ತು ಈ ಜನಾಂಗಗಳ ವಲಸೆಯನ್ನು ಹತೋಟಿಯಲ್ಲಿ ತರುವುದಕ್ಕೋಸ್ಕರ British Nationality Act ಜಾರಿಗೆ ತಂದಿತು. ಈ ಕಾಯಿದೆಯ ಪ್ರಕಾರ ಬ್ರಿಟನ್ನಿಗೆ ಬೇಕಾದ ಕೆಲಸಗಾರರು ಮತ್ತು ನೈಪುಣ್ಯತೆ ಇರುವವರಿಗೆ ಮಾತ್ರ ವೀಸಾ (ವರ್ಕ್ ಪರ್ಮಿಟ್) ಕೊಡುತ್ತಿದ್ದರು.

ಈ ವಿಷಯಗಳೆಲ್ಲ ಸಾಕಷ್ಟು ದಾಖಲೆಗಳಾಗಿವೆ.
ನಾವುಗಳು (ಅಂದರೆ ಈಗ ಸುಮಾರು ೭೫ ಕ್ಕೂ ಹೆಚ್ಚು ವಯಸ್ಸಾದವರು) ಬಂದ ಕಾಲದಲ್ಲಿ ಈ ದೇಶಕ್ಕೆ ಬಂದವರನ್ನು ಮೂರು ವರ್ಗಗಳಲ್ಲಿ ಹಾಕಬಹುದು.
೧. ಯಾವುದೊ ಕಂಪನಿಯಿಂದ ತರಬೇತಿಗಾಗಿಯೋ ಅಥವಾ British Council ನಂತಹ ಸಂಸ್ಥೆಯಿಂದಲೋ, ಭಾರತ ಸರ್ಕಾರದಿಂದಲೋ ವಿದ್ಯಾರ್ಥಿವೇತನ ಪಡೆದು ಉನ್ನತ ಶಿಕ್ಷಣಕ್ಕಾಗಿಯೋ ಬಂದವರು
೨. ಇಲ್ಲಿ ಮುಂಚೆಯೇ ನೆಲೆಸಿದ್ದವರ ಅವಲಂಬಿಗಳು
೩. Work Permit ತೆಗೆದುಕೊಂಡು ಬಂದ Doctors , Engineers ಇತ್ಯಾದಿ ವೃತ್ತಿಗರು

ಮೊದಲನೇ ವರ್ಗದವರು ತಮ್ಮ ತರಬೇತಿ ಅಥವಾ ವ್ಯಾಸಂಗ ಮುಗಿದೊಡನೆ ಭಾರತಕ್ಕೆ ಹಿಂತಿರುಗಬೇಕಿತ್ತು. ಇವರಿಗೆ ಶಾಶ್ವತವಾಗಿ ನೆಲೆಸುವ ಅನುಮತಿ ಇರುತ್ತಿರಲಿಲ್ಲ. ಇಂತಹವರಿಗೆ ಇಲ್ಲಿರುವತನಕ ಸಾಮಾನ್ಯವಾಗಿ ಆರ್ಥಿಕ ತೊಂದರೆಗಳಾಗಲೀ, ಊಟ , ವಸತಿ ತೊಂದರೆಗಳಾಗಲೀ ಇರುತ್ತಿರಲಿಲ್ಲ.

ಎರಡನೇ ವರ್ಗದವರಿಗೆ ಶಾಶ್ವತವಾಗಿ ನೆಲೆಸುವ ಹಕ್ಕು ಇತ್ತು. ಇಲ್ಲಿಯೇ ನೆಲೆಸಿದ್ದ ಮನೆಯವರಿದ್ದಿದ್ದರಿಂದ ಇವರುಗಳ ನಿತ್ಯ ಅವಶ್ಯಕತೆಗಳ ಬಗ್ಗೆ ಅಷ್ಟಾಗಿ ಯೋಚೆನೆ ಇರುತ್ತಿರಲಿಲ್ಲ.

ಮೂರನೆಯ ವರ್ಗದವರಿಗೆ ಇಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೆ ಅಪ್ಪಣೆ ಇತ್ತು. ಇವರೇ ನಮ್ಮ ಮೂರು ಪೌಂಡ್ ಕ್ಲಬ್ಬಿನವರು.

3pounds

ಇಂಡಿಯಾದಲ್ಲಿ ಆರ್ಥಿಕ ಮುಗ್ಗಟ್ಟಿನ ಕಾಲ. ಅದರಲ್ಲೂ ವಿದೇಶಿ ಹಣಕಾಸಿನ ಅಭಾವ . ಅದರಿಂದಾಗಿ ಸರ್ಕಾರದ ಬಿಗಿ ಹಿಡಿತ. ವಿಮಾನಯಾನದ ಟಿಕೆಟ್ಟಿಗೂ Reserve Bank of India ಅನುಮತಿ ತೆಗೆದುಕೊಳ್ಳಬೇಕಾಗಿತ್ತು. ನಮ್ಮ ಪ್ರಯಾಣಕ್ಕೆ Reserve Bank ಕೊಡುತ್ತಿದ್ದು ಕೇವಲ ಮೂರು ಪೌಂಡುಗಳು. ಇದನ್ನು ಜೇಬಿನಲ್ಲಿ ಭದ್ರವಾಗಿ ಇಟ್ಟುಕೊಂಡು London ಗೆ ಪ್ರಯಾಣ. ನಮಗಿಂತ ಮುಂಚೆ ಬಂದಿದ್ದ ಸ್ನೇಹಿತರಿಗೋ, ಸ್ನೇಹಿತರ ಸ್ನೇಹಿತರಿಗೋ ಮೊದಲೇ ನಮ್ಮ flight details ಬಗ್ಗೆ ಪತ್ರ ಬರೆದಿದ್ದರೂ ಆದು ತಲುಪಿದೆಯೋ ಇಲ್ಲವೋ ಎಂಬ ಬಗ್ಗೆ ಆತಂಕ. ನಮ್ಮನ್ನು ಎದುರುಗೊಳ್ಳಲು ಬರುವವರ ಕೋರಿಕೆಗೆ ಒಂದು ಪೌಂಡಿಗೆ ಒಂದು ಬಾಟಲಿ ವಿಸ್ಕಿ, ಇನ್ನೊಂದು ಪೌಂಡಿಗೆ ೨೦೦ ಸಿಗರೆಟ್ ವಿಮಾನದಲ್ಲೇ ಕೊಂಡರೆ ಉಳಿಯುವುದು ಒಂದು ಪೌಂಡ್. Heathrow airport ನಿಂದ Victoria terminus ಗೆ ಬರಬೇಕಾದರೆ ಬಸ್ ಶುಲ್ಕ ೫೦ shilling (ಅರ್ಧ ಪೌಂಡ್). ಕಡೆಗೆ ಜೇಬಿನಲ್ಲಿ ಉಳಿಯುವುದು ೫೦ ಶಿಲ್ಲಿಂಗ್ ಮಾತ್ರ.
ಹೊರಗೆ ಬಂದ ಕೂಡಲೇ ಮೊದಲ ಯೋಚನೆ ವಸತಿಯದು.

ನನ್ನಂತಹ ಹಲವು ಅದೃಷ್ಟವಂತರ ನೆರವಿಗೆ ಸ್ನೇಹಿತರಿದ್ದರು. ಕೆಲವರು ಬೇರೆ ಸೌಕರ್ಯ ಹೊಂದಿಸಿಕೊಳ್ಳುವ ತನಕ Fitzroy square ನಲ್ಲಿದ್ದ Indian YMCA ನಲ್ಲಿ ಕೆಲವು ದಿನಗಳ ವಸತಿ. ಸುಮಾರು ಜನ Hampstead ನಲ್ಲಿದ್ದ ಗುಲಾಟಿ ದಂಪತಿಗಳ boarding and lodging ಗೃಹಗಳಲ್ಲಿ ವಸತಿ (ಇವನ್ನು ನಮ್ಮವರು ತಮಾಷೆಗೆ Gulati University ಅನ್ನುತ್ತಿದ್ದರು) ಒಂದು ಕೊಠಡಿಯಲ್ಲಿ ಮೂರು, ನಾಲ್ಕು ಜನ, ಪ್ರತಿದಿನ ಲಘು ಉಪಹಾರ, ರಾತ್ರಿ ಊಟ. ಇವಿಷ್ಟಕ್ಕೆ ವಾರಕ್ಕೆ ಸುಮಾರು ೩ ಪೌಂಡುಗಳು. ನನಗೆ ತಿಳಿದ ಹಾಗೆ ಗುಲಾಟಿ ದಂಪತಿಗಳು ಬಾಗಿಲಿಗೆ ಬಂದ ಯಾರನ್ನೂ ನಿರಾಕರಿಸುತ್ತಿರಲಿಲ್ಲ. ನಮ್ಮ ನಂತರ ಬಂದ ಸ್ನೇಹಿತರಿಗೆ, ಪರಿಚಯಸ್ಥರಿಗೆ ಬಂದ ಮೊದಲ ದಿನಗಳಲ್ಲಿ ನಮ್ಮಿಂದ ಆದಷ್ಟು ಸಹಾಯ. ಎಂದಿಗೂ ಮರೆಯಲಾಗದ ಈ ರೀತಿ ಸ್ನೇಹಿತರ ಸಹಾಯದಿಂದ ನಮ್ಮಗಳ ಅನಿವಾಸಿ ಜೀವನದ ಮೊದಲ ಹೆಜ್ಜೆ.

ನಮ್ಮ ಮೊದಲ ಆದ್ಯತೆ ನೌಕರಿ ಅನ್ವೇಷಣೆ. ನಾವುಗಳು ಬಂದ ಕಾಲದಲ್ಲಿ ಕೆಲಸ ಸಿಗುವುದು ಕಷ್ಟವಾಗಿರಲಿಲ್ಲ. ಕೆಲಸ ಸಿಕ್ಕಿದನಂತರ ವಸತಿಯ ಯೋಚನೆ. ಸಾಮಾನ್ಯವಾಗಿ ವೈದ್ಯರಿಗೆ ತಾವು ಕೆಲಸಮಾಡುವ ಆಸ್ಪತ್ರೆಯಲ್ಲೇ ವಸತಿ ಸೌಕರ್ಯವಿರುತ್ತಿತ್ತು. ಕೆಲವು ಆಸ್ಪತ್ರೆಗಳ ಕೊಠಡಿಗಳಲ್ಲಿ ಅದರಲ್ಲೂ ಹಳೆಯ ಆಸ್ಪತ್ರೆಗಳಲ್ಲಿ ಹೇಳಿಕೊಳ್ಳುವಂತಹ ಸೌಕರ್ಯಗಳೇನೂ ಇರುತ್ತಿರಲಿಲ್ಲ. (Edinburghನ ಹೆಸರಾಂತ ಆಸ್ಪತ್ರೆ Royal Infirmaryಯಲ್ಲಿ Refrigerator ಇಲ್ಲದ ಕಾರಣ ಐದನೇ ಮಹಡಿಯ ವಸತಿ ಕೊಠಡಿಯ ಕಿಟಕಿಯ ಹೊರಗೆ ಕೆಡದಿರಲೆಂದು ಹಾಲು ಮೊಸರು ಇತ್ಯಾದಿಗಳನ್ನು ಒಂದು ಚೀಲದಲ್ಲಿ ಹಾಕಿ ಇಳಿಬಿಟ್ಟಿರುವುದನ್ನು ಸ್ವತಃ ನೋಡಿದ್ದೇನೆ). ಆದರೂ ಇರುವುದಕ್ಕೆ ಒಂದು ಜಾಗ ಸಿಗುತ್ತಿತ್ತು. ಇತರರಿಗೆ ಈ ಸೌಲಭ್ಯವಿರಲಿಲ್ಲ. ಅನುಕೂಲವಾದ ವಸತಿ ಸಿಗುವುದು ಕೆಲಸ ಸಿಗುವುದಕ್ಕಿಂತ ಕಷ್ಟವಾಗಿತ್ತು.

ನೌಕರಿ, ವಸತಿಗಳನ್ನು ಹೊಂದಿಸಿಕೊಂಡ ಮೇಲೆ ಹೊಸ ಜಾಗ, ಹೊಸ ಕೆಲಸ, ಹೊಸ ಜನ, ಕೊರೆಯುವ ಚಳಿ ಇವುಗಳ ಜೊತೆಗೆ ಹೊಸ ತರಹ ಊಟಗಳ ಅಭ್ಯಾಸ. London , Manchester ,Birmingham ನಂತಹ ದೊಡ್ಡ ನಗರಗಳಲ್ಲಿ “Indian Restaurant ‘ ಇದ್ದವು. ಸಣ್ಣ ಊರುಗಳಲ್ಲಿ ಇದ್ದವರಿಗೆ ಅದರಲ್ಲೂ ಸಸ್ಯಾಹಾರಿಗಳಿಗೆ ಸ್ವಯಂಪಾಕಕ್ಕೆ ಅವಕಾಶವಿಲ್ಲದಿದ್ದರೆ ಬರಿ ಉಪ್ಪುಹಾಕಿ ಬೇಯಿಸಿದ ಆಲೂಗೆಡ್ಡೆ, ಹುರುಳಿಕಾಯಿ ಜೊತೆಗೆ ಬ್ರೆಡ್ಡು ಇಂಥವುಗಳೇ ಆಹಾರ. ಇವುಗಳೆಲ್ಲಕ್ಕೂ ಮೀರಿ ಕಾಡುತ್ತಿದ್ದು ಏಕಾಂಗಿತನ. ದಿನದ ಕೆಲಸ ಮುಗಿಸಿ ವಸತಿಗೆ ಬಂದನಂತರ ನಾಲ್ಕು ಗೋಡೆಗಳ ಕಾರಾಗೃಹ. ಮುಖ್ಯ ನಗರಗಳಲ್ಲದೆ ಸಣ್ಣ ಸಣ್ಣ ಊರುಗಳಲ್ಲಿ ಇರುವವರಿಗಂತೂ ಏಕಾಂಗಿತನದ ಹೊಡೆತ ಹೆಚ್ಚು. (ಇಲ್ಲಿ ನಮ್ಮ ಸ್ನೇಹಿತರೊಬ್ಬರು ಹೇಳಿದ್ದು ನೆನಪಿಗೆ ಬರುತ್ತೆ. ಒಮ್ಮೆ ಅವರು Edinburghನ Princes Street ನಲ್ಲಿ ಇದ್ದಾಗ ಯಾರೋ ದೂರದಲ್ಲಿ ಅವರ ಹೆಸರು ಕೂಗುತ್ತ ಓಡಿ ಹತ್ತಿರ ಬಂದು ಎರಡು ನಿಮಿಷ ತಡೆಯಿಲ್ಲದೆ ಕನ್ನಡದಲ್ಲಿ ಕೆಟ್ಟ ಭಾಷೆಯಲ್ಲಿ ಬೈದು ನಂತರ ಉಸಿರು ತೆಗುದುಕೊಂಡು ಹೇಳಿದರಂತೆ, ‘ಸಾರಿ, ಏನೂ ಅನ್ಕೋ ಬೇಡಮ್ಮಾ , ಕನ್ನಡ ಮಾತಾಡಿ ವರ್ಷಗಳಾಗ್ಹೋಗಿತ್ತು).

ದೇವರ ದಯೆಯಿಂದ ಈ ಎಲ್ಲ ತಾಪತ್ರಯಗಳನ್ನು ಎದುರಿಸಿ ನಾವು ಇಲ್ಲಿಗೆ ಬಂದ ಕಾರಣ, ನಮ್ಮ ಧ್ಯೇಯಗಳ ಮೇಲೆ ಕೇಂದ್ರೀಕರಿಸುತ್ತ ಅನಿವಾಸಿಯಾಗಿ ಸಂತೋಷವಾಗಿ ಬದುಕಿ ಬಾಳುವುದನ್ನು ಕಲಿಯಲಿಕ್ಕೆ ಬಹಳ ಸಮಯ ಹಿಡಿಯಲಿಲ್ಲ.

ಮೂರು ಪೌಂಡ್ ಕ್ಲಬ್ಬು ನಮ್ಮ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯವಾಯಿತು ಎಂದು ಅನಿಸುತ್ತದೆ.

19 thoughts on “ಬೆಳ್ಳೂರು ಗದಾಧರ ಬರೆವ `ಮೂರು ಪೌಂಡ್ ಕ್ಲಬ್`

 1. ಇಬ್ಬರ ಬರವಣಿಗೆಗಳು ಚೆನ್ನಾಗಿವೆ
  ಮುರಳಿ ಅವರ ಬರಹ Mee too ಬಗೆಗಿನ ವಿವಿಧ ರೂಪಗಳನ್ನು ತೆರೆದಿಡುತ್ತದೆ.

  ಅಮಿತ ಅವರ ಚೆನ್ನಮ್ಮನ ಸಾಹಸ ಮೆಚ್ಚುವಂತದ್ದು
  ಎಲ್ಲಾ ಹೆಣ್ಣು ಮಕ್ಕಳು ಇಂತಹ ಅನ್ಯಾಯವನ್ನು ಎದುರಿಸಿ, ಪ್ರತಿಭಟಿಸುವ ದೈರ್ಯ ತಾಳಬೇಕು.

  ವಿಜಯನರಸಿಂಹ

  Like

 2. ಸರೋಜಿನಿ ಅವರೆ ಸ್ಪಂಧಿಸುವ ಮನೋಭಾವ ಇದ್ದರೆ ಎಷ್ಟೋ ನೋವುಗಳನ್ನು ಕಡಿಮೆ ಮಾಡಿಕೊಳ್ಳ ಬಹುದು .
  ಲೇಖನವನ್ನು ಓದಿ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ನಿಮಗೆ ಮತ್ತು ಪ್ರೇಮಲತಾ, ಶ್ರೀವತ್ಸ ದೇಸಾಯಿ , ಕೇಶವ ಕುಲಕರ್ಣಿ, ಅರವಿಂದ್ ಕುಲಕರ್ಣಿ, ಕೇಶವ್ ಮೂರ್ತಿ, ರಾಮ ಮೂರ್ತಿ ಹಾಗೂ ಮುರಳಿ ಅವರಿಗೆ ಧನ್ಯವಾದಗಳು

  Liked by 1 person

 3. ಧನ್ಯವಾದಗಳು ಗದಾಧರ ಅವರೇ.ಯಾವದೇ ಸಂಬಂಧವಾದರೂ ಅದಕ್ಕೊಂದು ಮಿತಿ, ಮಾತು ಕತೆಗೂ ಒಂದು ಮಿತಿ ಅನ್ನೋ ಈ ಕಾಲದಲ್ಲೂ ಮನದ ಮೂಲೆಯಲ್ಲೆಲ್ಲೋ ಒಂದು ಕಡೆ ಆ ಮಿಡಿತ ಇದ್ದೇ ಇರುತ್ತದೆ.ಅದು ಮಾನವ ಸಹಜ ಗುಣ.ಅದನ್ನು ಹತ್ತಿಕ್ಕಿ ಬಾಳುವ ಪರಿಸ್ಥಿತಿಗೆ ಏನೂ ಮಾಡಲಾಗೋದಿಲ್ಲ.ಸ್ಪಂದಿಸುವ ಮನೋಭಾವ ಇದ್ರೆ ಸಾಕು ಅನಿಸ್ತದೆ.ಮತ್ತೆ ಎರಡು ಮಾತು ಬರೆಯೋ ಅವಕಾಶ ಒದಗಿಸಿದ್ದಕ್ಕೆ ಇನ್ನೊಮ್ಮೆ ಧನ್ಯವಾದಗಳು ಗದಾಧರ ಅವರೇ.ಹಾಗೇ ಅನಿವಾಸಿ ಬಳಗಕ್ಕೂ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Like

 4. ಸರೋಜಿನಿ ಅವರೆ ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ ಅಂತರಾಳದಲ್ಲಿ ಕೊರತೆ ತುಡಿತಗಳು ನಾವು ಬದುಕಿರುವವೆರೆವಿಗೂ ನಮ್ಮಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಡಗಿರುತ್ತವೆ. ನಾವು ಈ ದೇಶದಲ್ಲಿ ಎಷ್ಟೇ ವರ್ಷಗಳು ಇದ್ದರೂ ನಾವು ಹೊರಗಿನವರೇ ಹೊರತು ಎಂದೂ ಇಲ್ಲಿಯವರಾಗಲು ಇಲ್ಲಿಯ ಸಮಾಜ ಬಿಡುವುದಿಲ್ಲ. ಇದಕ್ಕೆ ಒಂದು ಬಲವಾದ ಕಾರಣ ಎಲ್ಲರಿಗೂ ತಿಳಿದದ್ದೇ.
  ನಮ್ಮ ನಿರ್ಣಯಗಳಿಗೆ ನಾವೇ ಹೊಣೆ.
  Gadadhara

  Like

 5. ಬೆಳ್ಳೂರು ಗದಾಧರ ಅವರಮೂರು ಪೌಂಡ್ ಕ್ಲಬ್ ಬರಹ ಆಸಕ್ತಿ ಮೂಡಿಸುವ ಜೊತೆಗೆ ಸಮ್ಮಿಶ್ರ ಭಾವಗಳ ಹುಟ್ಟಿಸುವಂಥದು.ಅರಿಯದ ದೇಶ, ನಮ್ಮವರು ಯಾರಿಲ್ಲದೆ ಅಲ್ಲಿರುವ ನಮ್ಮವರನ್ನೇ ತನ್ನವರು ಎಂದು ಕೊಳ್ಳುವ ಪರಿಸ್ಥಿತಿ.ನಿಜಕ್ಕೂ ಕಷ್ಟಕರ.ಆ ಘಟ್ಟ ದಾಟಿ ತಿರುಗಿ ನೋಡಿದಾಗ ಸ್ವಾರಸ್ಯಕರ ಅನಿಸುವುದು ಸಹಜ. ಆದರೆ ದಾಟುವ ವರೆಗೆ? ನಿಜ ತನ್ನತನ ಬೆಳೆಸಿಕೊಳ್ಳುವ ಮೊದಲ ಮೆಟ್ಟಿಲು ಇದು.ವಿದೇಶದಲ್ಲಿರುವವರೆಲ್ಲ ಐಷಾರಾಮಿ ಜೀವನ ಜೀವಿಸುವವರೇ, ಅಂತ ಸಾಮಾನ್ಯ ಹೇಳಿಕೆ.ಇರಬಹುದು.ಆದರೂ ಅಲ್ಲಿಯೂ ಅದರದೇ ಆದ ಕಠಿಣತೆ ಇದೆ ಅನಕೋತೀನಿ.ನಮ್ಮವರು (ಎಷ್ಟರ ಮಟ್ಟಿಗೆ ಗೊತ್ತಿಲ್ಲ) ಇದ್ದಾರೆ ಎಂಬ ನೈತಿಕ ಧೈರ್ಯವನ್ನು ಕೂಡ ಹೊರಗೇ ಅರಸಬೇಕು.ಅದಕೇ ಏನೋ ಅಲ್ಲಿ ನಮ್ಮವರು ಎನ್ನುಕೊಳ್ಳುವ ಗುಂಪಿನಲ್ಲಿ ವಿಶಿಷ್ಟ ಆತ್ಮೀಯತೆ ಸಹಜ ಸ್ವಾಭಾವಿಕ ವಾಗಿ ಬೆಳೆದು ಬರತದೆ.ಇದನ್ನು ನಾನು ಅಮೇರಿಕಾದಲ್ಲಿರುವ ನನ್ನ ಮಗ ಸೊಸೆಯ ಸ್ನೇಹಿತರ ಬಳಗದಲ್ಲಿ ಕಂಡಿದ್ದೇನೆ.ಅದೇ ಒಂಥರಾ ತಂಪೆರೀತದೆ ಮನಸಿಗೆ.ಈಗ ಮೂರು ಪೌಂಡ್ ದ ಪರಿಸ್ಥಿತಿ ಇರಲಿಕ್ಕಿಲ್ಲ, ಆದರೆ ಅಂತರಾಳದಲ್ಲೆಲ್ಲೋ ಇನ್ನೊಂದು ತರಹದ ಕೊರತೆ, ತುಡಿತ ಇದೆ ಅನಿಸ್ತದೆ.ಬರೀ ಮೂರು ಪೌಂಡ್ ಜೇಬಲ್ಲಿ, ಅರಿಯದ ದೇಶದ ದುಬಾರಿ ಪರಿಸರದಲ್ಲಿ ಹೇಗಿರಬಹುದು ಜೀವನ? ನಿಜವಾಗಲೂ ಅಪ್ರತಿಮ ಆತ್ಮವಿಶ್ವಾಸ , ಧೈರ್ಯ,ಛಲ ಬೇಕು.ಹೃತ್ಪೂರ್ವಕ ಅಭಿನಂದನೆಗಳು ಮೂರು ಪೌಂಡ್ ಕ್ಲಬ್ ಸದಸ್ಯರಿಗೆ.ಈ ತರಹದ ಅನುಭವ ಗಳ ಅರಿವುಮೂಡಿಸುವ, ತಿಳಿಸುವ ಲೇಖನಗಳು ಇನ್ನಷ್ಟು ಬರಲಿ ಎಂಬ ಹಾರೈಕೆ. ಇಂತಹ ಲೇಖನ ನೀಡಿದ ಬೆಳ್ಳೂರು ಗದಾಧರ ಅವರಿಗೆ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Liked by 1 person

 6. Perhaps I am one of the earliest among KB members to have come with £3 in my pocket. Arrived in Sept 1965. I wrote about this two years back ” ೫೦ ವರ್ಷಗಳ ಜೀವನ ”
  Good old memories Gadadhar.

  Like

 7. ಮೂರು ಪೌಂಡಿಗೆ ಒಂದು ಬಾಟಲಿ ವೈನು ಕೂಡ ಈಗ ಸಿಗುವುದಿಲ್ಲ, ಎರಡು ಲೀಟರ್ ಪೆಟ್ರೋಲನ್ನು ಕಾರಿಗೆ ಕುಡಿಸಬಹುದು ಅಷ್ಟೇ. ನಾನು ಈ ದೇಶಕ್ಕೆ ಬರುವಾಗ ೧೫೦೦ ಪೌಂಡಿಗಿಂತ ಹೆಚ್ಚು ತರಬಾರದು ಎಂದು ಯಾರೋ ಹೇಳಿದ್ದರು. ಕಷ್ಟಪಟ್ಟು ಅಷ್ಟು ದುಡ್ಡು ಹೊಂದಿಸಿಕೊಂಡು ಈ ದೇಶಕ್ಕೆ ಬಂದೆವು, ಸಾಲುತ್ತದೋ ಇಲ್ಲವೋ ಎಂದು ಹೆದರಿಕೊಂಡು. ಬರೀ ಮೂರು ಪೌಂಡನ್ನು ಇಟ್ಟುಕೊಂಡು ಯಾರೂ ಗೊತ್ತಿಲ್ಲದ ದುಬಾರಿ ದೇಶಕ್ಕೆ ಬಂದಿರುವ ನಿಮ್ಮ ಸಾಹಸ ಅಪ್ರತಿಮ. ನಿಮ್ಮ ಲೇಖನಿಯಿಂದ ಇನ್ನೂ ಇಂಥಹ ಆಪ್ತ ಬರಹಗಳು ಮೂಡಿ ಬರಲಿ. – ಕೇಶವ

  Like

 8. Excellent article. Forget about hiding our ages and which year we entered U.K.
  The motive to write these personal experiences will be an eye opener for our second, third generation in U.K. It is worth h sharing before we join the other club.Alzeimers group!
  I am one of this group of £3 pounds in pocket when I entered. I have been longing to write about my experiences ,the day Ianded in U.K.on 13 January ne 1968. GaDhaaDhar’s article should inspire people belonging to this special group.
  Aravind Kulkarni

  Like

 9. ನಿಮ್ಮ ಮೂರು ಪೌಂಡ್ ಕ್ಲಬ್ ಕಥೆ ಸ್ವಾರಸ್ಯಕರವಾಗಿದೆ. ನಾನು ನಲವತ್ತು ಪೌಂಡ್ ಕ್ಲಬ್ ನವನು. ನಾನು ಯುಕೆ ಗೆ ಬರಲು ಹವಣಿಸುತ್ತಿರುವಾಗ ನನಗೆ ಸಿಕ್ಕ ಮಾಹಿತಿಯೂ ಅದೇ. ರಿಸರ್ವ್ ಬ್ಯಾಂಕಿನಿದ್ದ ಸಿಗುವದು ಅಷ್ಟೇ ಎಂದು. ನಾನು ಬರುವಷ್ಟರಲ್ಲಿ (1974) ಸವಲತ್ತು ಸುಧಾರಿಸಿತ್ತೆಂದೋ ಏನೋ 40 ಪೌಂಡ್ ಕಿಸಿಗೇರಿಸಿಕೊಂಡು ಬಂದೆ. ಕೆಲಸ ಇರಲಿಲ್ಲ. ಇದರ ಬಗ್ಗೆ ಬರೆಯುವವನಿದ್ದೇನೆ, ಈ ಸರಣಿಯಲ್ಲಿ- ಅವಕಾಶ ಸಿಕ್ಕರೆ. ಈ ಕ್ಲಬ್ಬಿನ ಕಥೆಗಳು ಮೈಲ್ ಹೈ ಕ್ಲಬ್ ಕಥೆಗಳಿಗಿಂತ ಸ್ವಾರಸ್ಯಕರ, ಮತ್ತು ಶಿಷ್ಟ! Gentlemanly.

  Like

 10. Thank you, Dr Premalatha. As you know this article was about the experiences , in general, of those who came to Britain in 60s. From then on anything else will be very much about my early life here. Should I write about it? I am not sure.

  Like

 11. Very informative and very interesting article. An opt title too.
  I wanted to read more about those days but felt that the article ended very quickly !
  Please write more about those days and experiences as part -2

  Like

  • I agree with Premalata. We need more articles about the earlier days before the age of globalization and internet.

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.