
ಸಿನೆಮಾ ಬಂದ ಮೇಲೆ ಕನ್ನಡಿಗರಲ್ಲಿ ನಾಟಕ ಆಡುವ ಮತ್ತು ನೋಡುವ ಚಟ ತುಂಬ ಕಡಿಮೆಯಾದುದರಲ್ಲಿ ಯಾವ ಸಂಶಯವೂ ಇಲ್ಲ. ಸಿನೆಮಾದ ಝಂಝಾವಾತಕ್ಕೆ ತತ್ತರಿಸಿ ನಾಟಕ ಕಂಪನಿಗಳೆಲ್ಲ ಮುಚ್ಚಿ ಹೋದ ಮೇಲೆ, `ನೀನಾಸಂ` ತರಹದ ಹವ್ಯಾಸಿ ಕಂಪನಿಗಳು ಪಶ್ಚಿಮದ ಆಧುನಿಕ ನಾಟಕದ ಶೈಲಿಯತ್ತ ಹೊರಳಿದವು. ಸಿನೆಮಾದ ಹಾವಳಿಯಿಂದ ಪಶ್ಚಿಮ ದೇಶಗಳಲ್ಲಿ ನಾಟಕಗಳು ಕಡಿಮೆಯಾಗಿವೆ ಆದರೂ, ನಾಟಕಗಳಿಗೆ ಇನ್ನೂ ಬೇಡಿಕೆ ಇದೆ, ವ್ಯಾವಹಾರಿಕವಾಗಿ ಕೂಡ ಲಾಭ ಮಾಡುತ್ತವೆ. ಶ್ರೀವತ್ಸ ದೇಸಾಯಿಯವರು ತಾವು ಇತ್ತೀಚೆ ನೋಡಿದ ಶರಲೇಖ ಹೋಮ ಮತ್ತು ವಾತ್ಸಾಯನನ `ಚಂಡಾಳ ಚೌಕಡಿ` ನಾಟಕದ ಬಗ್ಗೆ ಆಪ್ತವಾದ ಲೇಖನ ಬರೆದಿದ್ದಾರೆ. – ಸಂ

ಕಳೆದ ತಿಂಗಳು ಯಾರ್ಕ್ ಶೈರ್ ದ ಡೋಂಕಾಸ್ಟರ್ ದಲ್ಲಿ ಸರ್ ಆರ್ಥರ್ ಕೋನನ್ ಡಾಯ್ಲ ಬರೆದ ” ಎ ಸೈನ್ ಆಫ್ ಫೋರ್” (ಆ ನಾಲ್ವರನ್ನೇ ನಾನು ಕುಪ್ರಸಿದ್ಧ ಚಾಂಡಾಳ್ ಚೌಕಡಿ ಎಂದು ಕರೆದದ್ದು – ವಿವರ ಕೊನೆಯಲ್ಲಿ) ಕಥೆಯ ರಂಗಪ್ರದರ್ಶನವನ್ನು ನೋಡಿದೆ. ಅದು ಬ್ಲ್ಯಾಕ್ ಐಡ್ ಥಿಯೇಟರ್ (Blackeyed Theatre) ಅವರ ಪ್ರಸ್ತುತಿಯಾಗಿತ್ತು. ಅದು ನನ್ನ ಅಭಿಪ್ರಾಯದಲ್ಲಿ ಮನಸ್ಸಿನಲ್ಲಿ ಉಳಿಯುವ ಒಂದು ಒಳ್ಳೆಯ ನಾಟಕ ಪ್ರಯೋಗವಾಗಿತ್ತು.
ನಾನು ಕಾಲೇಜಿನಲ್ಲಿದ್ದಾಗಿನಿಂದಲೂ ಜಗತ್ತಿನ ಏಕಮೇವಾದ್ವಿತೀಯನಾದ ಡಿಟೆಕ್ಟಿವ್ ಶೆರ್ಲಾಕ್ಸ್ ಹೋಮ್ಸ್ ನನ್ನ ಅಚ್ಚುಮಚ್ಚಿನ ಪತ್ತೇದಾರನಾಗಿದ್ದ. ಆತನ ಪತ್ತೇದಾರಿ ಸಾಹಸಗಳನ್ನು ವರ್ಣಿಸುವ ಕೋನನ್ ಡಾಯ್ಲ್ ಬರೆದ ನಾಲ್ಕು ಕಿರುಕಾದಂಬರಿಗಳು ಮತ್ತು ಛಪ್ಪನ್ನೈವತ್ತಾರು ಕಥೆಗಳಲ್ಲಿ ಆತನ ಸಾಹಸವನ್ನೆಲ್ಲ ಓದಿದ್ದೆನಾದ್ದರಿಂದ ನನ್ನ ಊರಲ್ಲೇ ಈ ನಾಟಕ ಬಂದಾಗ ಅವಕಾಶ ತಪ್ಪಿಸಿಕೊಳ್ಳಲಿಲ್ಲ. ನೋಡಿದ್ದಕ್ಕೆ ನಿರಾಶೆಯಂತೂ ಆಗಲಿಲ್ಲ. ತದ್ವಿರುದ್ಧವಾಗಿ ಇನ್ನೊಮ್ಮೆ ಅದನ್ನು ನೋಡುವ ಇಚ್ಚೆಯಾಗುವಷ್ಟು ಹಿಡಿಸಿತು.
”ಎ ಸೈನ್ ಆಫ್ ದ ಫೋರ್” (ಐದು ಶಬ್ದಗಳು, ಆನಂತರ ’ದ’ ಲೋಪವಾಯಿತು) ಎಂಬ ಶೀರ್ಷಿಕೆಯೊಂದಿಗೆ 1890 ರಲ್ಲಿ ಮೊದಲ ಬಾರಿ ಲಿಪ್ಪಿನ್ಕಾಟ್ ಮಾಸಿಕದಲ್ಲಿ ಪ್ರಕಟವಾದ ಕೋನನ್ ಡಾಯ್ಲನ ಎರಡನೆಯ ಶೆರ್ಲಾಕ್ (ಹೋಮ್ಸ್) ಕಥೆಯನ್ನು ನಾನು ಮೊದಲು ಓದಿದ್ದು, 1963ರಲ್ಲಿ. ಮೊದಲನೆಯದು ’ಎ ಸ್ಟಡಿ ಇನ್ ಸ್ಕಾರ್ಲೆಟ್’. ಕಥೆಯ ಹಿನ್ನೆಲೆಯಲ್ಲಿ 1857ರ ಭಾರತದ ಮೊದಲ ಸ್ವಾತಂತ್ರ್ಯ ಚಳುವಳಿ (ಬ್ರಿಟಿಶರು ಸಿಪಾಹಿ ದಂಗೆ ಎಂದು ಕರೆದರು!) ಚಿತ್ರಿತವಾಗಿದೆ. ಯುದ್ಧ, ಕಳವು, ಕೊಲೆ, ವಂಚನೆ. ಸೇಡು, ರೋಮಾನ್ಸ್, ಕೊನೆಯ ಹಂತದಲ್ಲಿ ’ಚೇಸ” ಇವೆಲ್ಲ ಕೂಡಿದ ನವರಸ ಭರಿತ ಕಥೆ ಅದು. ನೀವೆಲ್ಲ ಓದಿದ್ದರೂ ಆ ಕಥೆಯನ್ನು ನೆನಪಿಸಲು ಅದರ ಸಾರಾಂಶವನ್ನು ಮೊದಲು ಕೊಡುತ್ತೇನೆ:

ಕಥೆಯ ಪ್ರಾರಂಭದ ಇಸವಿ 1878. ಬಿಡಿಸಲು ಕ್ರೈಮ್ ಕೇಸುಗಳಿಲ್ಲದೆ ಬೇಜಾರು ಕಳೆಯಲು ಕೋಕೇನ್ ಸೂಜಿಮದ್ದು ಏರಿಸುವ, ಮೂಡು ಬಂದಾಗ ವಯೋಲಿನ್ ನುಡಿಸುವ, ಆದರೆ ಸ್ವಲ್ಪ ವಿಕ್ಷಿಪ್ತ ಸ್ವಭಾವದ ಡಿಟೆಕ್ಟಿವ್ ಶೆರ್ಲಾಕನ 221 B ಬೇಕರ್ಸ್ ಸ್ಟ್ರೀಟ್ ಕೋಣೆಗೆ ಬರುತ್ತಾಳೆ ಮಕ್ಕಳ ಗವರ್ನೆಸ್ ಆಗಿ ಕೆಲಸ ಮಾಡುತ್ತಿರುವ ಮೇರಿ. ಆಕೆಯ ತಂದೆ ಕ್ಯಾಪ್ಟನ್ ಮಾರ್ಸ್ಟನ್ ಭಾರತದಿಂದ ಸರ್ವಿಸ್ ಮುಗಿಸಿ ಮರಳಿ ಲಂಡನ್ನಿಗೆ ಬಂದ ಕೂಡಲೆ ನಾಪತ್ತೆಯಾಗಿದ್ದಾನೆ. ಇನ್ನೂ ಆತನ ಸುಳುವೇ ಸಿಕ್ಕಿಲ್ಲ. ಯಾರೋ ಒಬ್ಬ ಹಿತೈಷಿ ವರ್ಷಕ್ಕೊಂದರಂತೆ ಆರು ಅಮೂಲ್ಯ ಮುತ್ತುಗಳನ್ನು ಅವಳಿಗೆ ಅಂಚೆಯಲ್ಲಿ ತಲುಪಿಸುತ್ತಿದ್ದಾರೆ. ಆತನನ್ನು ಭೇಟಿಯಾಗಿ ತನ್ನ ತಂದೆಯ ಅನ್ವೇಷಣೆ ಮಾಡಲು ಹೋಂಸ್ ಮತ್ತು ಆತನ ಸಂಗಾತಿ ಡಾ ವಾಟ್ಸನ್ನರ ಸಹಾಯ ಕೋರಿ ಬಂದಿದ್ದಾಳೆ. ಅವಳ ಬಳಿ ನಾಲ್ವರ ನಿಗೂಢ ಸಹಿಯಿರುವ ಒಂದು ಕಾಗದ (Sign of the Four) ಇದೆ. ಅವರಲ್ಲೊಬ್ಬ ಒಂದು ಮರಗಾಲಿನ ಜೋನಾಥನ್ ಸ್ಮಾಲ್ ಎನ್ನುವ ಬ್ರಿಟಿಷ್ ಕಂಪನಿ ಸೈನ್ಯದಿಂದ ಹೊರಬಿದ್ದ ಸಿಪಾಹಿ. ಆತನೋ ಅತ್ಯಂತ ಬೆಲೆಬಾಳುವ ”ಆಗ್ರಾ ನಿಧಿ”ಯ ಶೋಧದಲ್ಲಿದ್ದಾನೆಂದು ಗೊತ್ತಾಗುತ್ತದೆ. ಆ ಲೂಟಿಯ ಪಾಲುಗಾರರಾದ ನಾಲ್ವರಲ್ಲಿ ಒಬ್ಬನಾದ ಸ್ಮಾಲ್ ನನ್ನು ವಂಚಿಸಿ ಅದನ್ನು ’ಪಾಂಡಿಚೇರಿ ಲಾಡ್ಜ್ ’ ನಲ್ಲಿ ಗುಪ್ತವಾಗಿ ಅಡಗಿಸಿಟ್ಟಿದ್ದ ಮೇಜರ್ ಶೋಲ್ಟೋನ ಅವಳಿ-ಜವಳಿ ಮಕ್ಕಳಲ್ಲೊಬ್ಬನೇ ಮೇಲೆ ಹೇಳಿದ ಆ ಹಿತೈಷಿ ಥೇಡ್ಡಿಯಸ್ ಶೋಲ್ಟೋ. ಕ್ರೈಮ್ ಥ್ರಿಲ್ಲರ್ ಅಂದ ಮೇಲೆ ಹೆಣಗಳು ಬೀಳಲೇ ಬೇಕಲ್ಲವೆ? ಥೇಡ್ಡಿಯಸ್ ಶೋಲ್ಟೋನ ಸಹೋದರನ ಕೊಲೆಯನ್ನಷ್ಟೇ ನಾವು ರಂಗದ ಮೇಲೆ ನೋಡುವದು. ಈಗಾಗಲೆ ಇನ್ನು ಮೂವರ ಹತ್ಯೆಗಳಾಗಿವೆ, ಅಥವಾ ಆಗಲಿವೆ. ಒಂದು ಕಾಲಕ್ಕೆ ಒಬ್ಬ ಮಹಾರಾಜನ ವಶದಲ್ಲಿದ್ದ ಬೆಲೆಕಟ್ಟಲಾರದ ’’ಆಗ್ರಾ ನಿಧಿ” ಇಷ್ಟರಲ್ಲಿ ಮಾಯವಾಗಿದೆ. ಅದನ್ನು ಟೇಮ್ಸ ನದಿಯಲ್ಲಿಯ ಒಂದು ಹಡಗದಲ್ಲಿ ಪತ್ತೆ ಹಚ್ಚುವದರಲ್ಲಿ ಶೆರ್ಲಾಕ್ ಹೋಂಸ್ ಸಫಲನಾದರೂ ಈ ಮೊದಲು ಅದನ್ನು ಕದ್ದು ತೊಗೊಂಡೋಡಿದ್ದವರು ಸ್ಮಾಲ್ ಮತ್ತವನ ಸಹಾಯಕ -ಅಂದಮಾನ್ ಮೂಲದ ಟೋಂಗಾ ಎನ್ನುವ ”ಕುಳ್ಳ, ಕರಿಯ, ಕಾಡುಮನುಷ್ಯನಂಥ ಅಸಹ್ಯಪ್ರಾಣಿ.” ಅವರು ಹೋಂಸ್ ಮತ್ತು ಸ್ಕಾಟ್ಲಂಡ ಯಾರ್ಡ ಪತ್ತೇದಾರರ ಕಣ್ಣಿಗೆ ಸಿಕ್ಕರೂ ನಿಧಿ ಅವರ ಕೈಗೆ ಸಿಗುತ್ತದೆಯೇ? ಅದರ ಹಕ್ಕಿನ ವಾರಸುದಾರಳಾದ ಮೇರಿ ಶ್ರೀಮಂತಳಾಗುತ್ತಾಳೆಯೇ? ಆಕೆಯನ್ನು ಪ್ರೀತಿಸುವ ’ಬಡ’ ಡಾಕ್ಟರ್ ವಾಟ್ಸನ್ನನ್ನು ವರಿಸುವಳೇ? ಇವನ್ನು ರಹಸ್ಯವಾಗಿಯೇ ಇಡುತ್ತೇನೆ. ಹೋಂಸನ ಪೈಪೋಟಿ ಯಾರು ಅಂದರೆ ಸ್ಕಾಟ್ಲಂಡ್ ಯಾರ್ಡಿನ ಅಧಿಕೃತ ಡಿಟೆಕ್ಟಿವ್ ಅಥೆಲ್ನಿ ಜೋನ್ಸ್. ಆತ ತಪ್ಪು ಮಾಡಿದರೂ (ಥೇಡ್ಡಿಯಸ್ ನೇ ಸ್ವತಃ ದಾಯಾದಿಯ ಕೊಲೆಗಾರ ಎಂದು ತಪ್ಪಾಗಿ ಕೈದುಮಾಡಿದ್ದು) ಕೇಸ್ ಬಿಡಿಸಿದ್ದಕ್ಕೆ ಕೊನೆಗೆ ಅವನಿಗೇ ಶ್ರೇಯಸ್ಸು ಬರುತ್ತದೆ!

ಕಥಾವಸ್ತು ತೊಡಕಿನದು. ಭಾರತದಲ್ಲಿ 1857ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ದಂಗೆದ್ದ ಸಿಪಾಹಿಗಳಿಂದಾದ ಅಶಾಂತಿ, ಆಗ್ರಾ ನಿಧಿಯ ಅಪಹರಣ, ಭೀಕರ ಕೊಲೆ, ಅದರ ಶಿಕ್ಷೆಗೆ ಗುರಿಯಾಗಿ ಅಂದಮಾನ್ ಕಾರಾಗೃಹ ಸೇರಿದ ಒಂದು ಮರಗಾಲಿನ ಸ್ಮಾಲ್, ಅವನನ್ನು ವಂಚಿಸಿ ನಿಧಿಯನ್ನು ತಾನೊಬ್ಬನೇ ಲಪಟಾಯಿಸಿದ ಮೇಜರ್ ಶೊಲ್ಟೋ, ಮೇರಿಯ ತಂದೆಯ ನಿಗೂಢ ನಿರ್ಗಮನ, ಇವೆಲ್ಲವುಗಳನ್ನು ಸಂಭಾಷಣೆಯಲ್ಲೇ ತೋರಿಸಬೇಕು. ಪುಸ್ತಕದಿಂದ ರಂಗ ಭೂಮಿಗೆ ಅಳವಡಿಸಿದ ನಿಕ್ ಲೇನ್ ಅವರ ಬರಹ ಮತ್ತು ಡೈರೆಕ್ಷನ್ ಎಲ್ಲಿಯೂ ಎಡವುವದಿಲ್ಲ. ಇದನ್ನು ಪರಣಾಮಕಾರಿಯಾಗಿ ತೆರೆಯಿಲ್ಲದ ರಂಗ ಮಂಚದ ಮೇಲೆ ತಂದ ಯಶಸ್ಸು ಸ್ಟೇಜ್ ಡಿಸೈನರ್ ವಿಕ್ಟೋರಿಯಾ ಸ್ಪಿಯರಿಂಗ್ ಅವರ ಕುಶಲ ರಂಗ ಸಜ್ಜಿಕೆಯ ಮತ್ತು ಸ್ಟೇಜ್ ಪ್ರಾಪ್ಸ್ (props) ದಲ್ಲಿ ಕಾಣುತ್ತದೆ. ಇಡೀ ನಾಟಕದಲ್ಲಿ ಆರೇ ಜನ ಪ್ರತಿಭಾಶಾಲಿ ನಟರು (ensemble cast). ಅವರೇ ಹದಿನೇಳು ಪಾತ್ರಗಳನ್ನು ಆಡುವದಲ್ಲದೆ ಪ್ರತಿಯೊಬ್ಬರೂ ಒಂದೊಂದು ವಾದ್ಯವನ್ನು ಸಹ ನುಡಿಸುತ್ತಾರೆ! ಅಂದರೆ ಹಿನ್ನೆಲೆ ಸಂಗೀತ, ಮುದ್ರಿತ ಧ್ವನಿಪ್ರಸಾರ ಇಲ್ಲವೆಂತಲ್ಲ. ಅದು ಅತಿ ಕಡಿಮೆಯೇ. ನಾಟಕದ ಅಂಕದ ದೃಶ್ಯಗಳು ಬದಲಾಗುವಾಗ props ಜೋಡಣೆ ಸಹ ನಟರೇ ಮಾಡುವದು. ಬಲಾವಣೆಗೆ ಒಂದೂವರೆ ನಿಮಿಷ ಸಹ ಹಿಡಿಯುವದಿಲ್ಲ. ಹೋಂಸ್-ವಾಟ್ಸನ್ ಕುಳಿತ ಕುರ್ಚಿ ಮತ್ತಿತರ ಸಲಕರಣೆಗಳನ್ನು ಒಂದರ ಮೇಲೆ ಒಂದಾಗಿ ಜೋಡಿಸಿ ಅದರ ಮೇಲೆ ಮೂವರು ಕುಳಿತು ಕುದುರೆಯ ಖುರಪುಟದದೊಡನೆ ಹೊರಟಂತೆ ಮೈಯಲಾಡಿಸಿದರೆ ಲಂಡನ್ನಿನ ಕಾಬ್ಬಲ್ ಸ್ಟೋನ್ ಹಾಸುಗಲ್ಲುಗಳ ಮೇಲೆ ಓಡುತ್ತಿದ್ದ ವಿಕ್ಟೋರಿಯನ್ ಕ್ಯಾಬ್ ಕಣ್ಣ ಮುಂದೆ ಬರುತ್ತದೆ! ಅದು ಸಹ ವಿಕ್ಟೋರಿಯಾ ಸ್ಪಿಯರಿಂಗ್ ಅವರೇ ಯೋಜಿಸಿದ್ದು. ಆಳವಾಗಿ ಭಾರತೀಯ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಅಭ್ಯಾಸ ಮಾಡಿ ಅಲ್ಲಿಯ ಗೋಪುರಗಳ ಆಕಾರವನ್ನು ಲಂಡನ್ನಿನ ಬಂದರಿನ ಸುತ್ತಲಿನ ಕಟ್ಟಡಗಳಿಗೆ ಅದನ್ನು ಜೋಡಿಸಿ ಮೊದಲ ಮಾದರಿಯನ್ನು ತಯಾರಿಸಿದಳಂತೆ. (ಚಿತ್ರ ನೋಡಿರಿ). ಸಿಪಾಹಿಗಳು ದಂಗೆ ಏಳುವ ದೃಶ್ಯದಲ್ಲಿ ಮೀನಾರುಗಳು, ಗೋಪುರಗಳ ತುದಿಗಳು ಕ್ಷಣಾರ್ಧದಲ್ಲಿ ಕೊನೆಯ ದೃಶ್ಯದಲ್ಲಿ ಲಂಡನ್ನಿನ ಟೇಮ್ಸ್ ನದಿಯಲ್ಲಿ ಹಾಯ್ದು ಹೋಗುವ ಮೊನಚಾದ ಮೂಗಿನ ಹಡಗವಾಗಿ ಪರಿವರ್ತನಗೊಂಡದ್ದನ್ನು ಪ್ರೇಕ್ಷಕರು ಕರತಾಡನದೊಂದಿಗೆ ಸ್ವಾಗತಿಸ್ಸಿದ್ದು ಆಶ್ಚರ್ಯವಲ್ಲ! ಈ ಹಿಂದೆ 14 ಕ್ಕೂ ಹೆಚ್ಚು ಸಲ ಕೋನನ್ ಡಾಯ್ಲ ನ ಈ ಕಥೆ ನಾಟಕ, ಸಿನಿಮಾ ಅಥವಾ ಟೆಲಿವಿಷನ್ ಮಾಧ್ಯಮದಲ್ಲಿ ಪ್ರದರ್ಶಿತವಾಗಿದ್ದರೂ ಇದು ನವೀನ ಮತ್ತು ಭಿನ್ನ ರೂಪದ್ದು ಎನಿಸಿತು. ಇದು ಪ್ರವಾಸೀ ರಂಗಭೂಮಿಯ ಟೂರಿಂಗ್ ಗೆ ಹೇಳಿಮಾಡಿಸಿದಂತಿದೆ ಎಂದು ನನ್ನ ಎಣಿಕೆ. ಈ ಕಂಪನಿಯವರು (www.blackeyedtheatre.co.uk). ಇದನ್ನು ಹಾಲೆಂಡ ಸೇರಿ ಮುಂದಿನ ಹದಿನೆಂಟು ತಿಂಗಳಲ್ಲಿ ಈ ದೇಶದ 55 ಜಾಗಗಳಲ್ಲಿ ಪ್ರದರ್ಶಿಸಲಿದ್ದಾರೆಂದ ಮೇಲೆ ಇದರ ಅವಶ್ಯಕತೆ ಮನದಟ್ಟವಾಗುತ್ತದೆ.

ಇನ್ನು ಅಭಿನಯದ ಬಗ್ಗೆ ಹೇಳಬೇಕೆಂದರೆ ಆರೂ ನಟರು ತಮ್ಮ ಪಾತ್ರಗಳಲ್ಲಿ ಜೀವ ತುಂಬಿದ್ದಾರೆ. ನಾಟಕ ನೋಡುವ ಮೊದಲು ನನ್ನ ಕಣ್ಣ ಮುಂದೆ ನಿಂತದ್ದು ಮಧ್ಯ ವಯಸ್ಸಿನ ಡಿಯರ್ ಸ್ಟಾಕರ್ (Deer stalker)) ಹ್ಯಾಟ್ ಧರಿಸಿ, ತನ್ನ ಬಾಯಲ್ಲಿ ಜೋತುಬಿದ್ದ ಬಾಗಿದ ಪೈಪನ್ನು ಕಚ್ಚುವ ಶೆರ್ಲಾಕ್ ಹೋಮ್ಸ್ ಮತ್ತು ಸ್ಥೂಲ ಕಾಯದ ಮತ್ತು ಸ್ವಲ್ಪ ಪೆದ್ದನಂತೆ ನಟಿಸುವ ಡಾಕ್ಟರ್ ವಾಟ್ಸನ್. ಆದರೆ ಈ ನಾಟಕದಲ್ಲಿಯೂ ನಾವು ನೋಡುವದು ಎಳೆವಯಸ್ಸಿನ ಹೋಂಸ್-ವಾಟ್ಸನ್ ಪಾರ್ಟ್ನರ್ ಶಿಪ್ಪನ್ನೇ. ಇತ್ತೀಚಿನ ವರ್ಷಗಳಲ್ಲಿ ಟೆಲಿವಿಷನ್ ಮಾಧ್ಯಮದಲ್ಲಿ ಜಯಭೇರಿ ಹೊಡೆದ ಬಿಬಿಸಿಯ ’ಶೆರ್ಲಾಕ್ ’ಸರಣಿಯಲ್ಲಿ ಕಂಡ ಕಂಬರ್ಬ್ಯಾಚ್- ಮಾರ್ಟಿನ್ ಫ್ರೀಮನ್ ಜೋಡಿಯ ಕೆಮಿಸ್ಟ್ರಿಯನ್ನು ಇದು ನೆನಪಿಸುತ್ತದೆ. ಅದು ಸರಿಯೇ, ಏಕೆಂದರೆ ಸೈನ್ ಆಫ್ ಫೋರ್ ಈ ಪತ್ತೇದಾರನ ಬರೀ ಎರಡನೆಯ ಸಾಹಸವೆ ಅಲ್ಲವೆ? ಲೂಕ್ ಬಾರ್ಟನ್ನನ ಹೋಮ್ಸ್ ಮತ್ತು ವಾಟ್ಸನ್ನನ ಪಾತ್ರದಲ್ಲಿರುವ ಜೋಸೆಫ್ ಡೆರ್ರಿಂಗ್ಟನ್ ಮಾತ್ರ ಒಂದೊಂದೇ ಪಾತ್ರದಲ್ಲಿದ್ದಾರೆ. ನಾಟಕದ ಡಾ. ಜಾನ್ ವಾಟ್ಸನ್ ನೈಜ ಜೀವನದಲ್ಲಿ ವೈದ್ಯನಾಗಿರುವದು ಆಕಸ್ಮಿಕವಲ್ಲವೇನೋ. ಅವರಿಬ್ಬರ ಅಭಿನಯ ಮನಸ್ಸಿನಲ್ಲಿ ಉಳಿಯುತ್ತದೆ. ಕೊನೆಯ ದೃಶ್ಯದಲ್ಲಿ ಗಿಟಾರ್ ಪಟು ಝಾಕ್ ಲೀ (ಜೊನಾಥನ್ ಸ್ಮಾಲ್) ತನ್ನ ಸುದೀರ್ಘ ಸ್ವಗತದಲ್ಲಿ ಕಥೆಯ ತೊಡಕು ಬಿಡಿಸುವಾಗ ಮಾತ್ರ ಸ್ವಲ್ಪ ಎಳೆದಂತೆ ಕಂಡರೂ ಕಥೆ ಅರ್ಥವಾಗುತ್ತದೆ. ಸೀರಿಯಸ್ ಡಿಟೆಕ್ಟಿವ್ ಶೆರ್ಲಾಕ್ ಹೋಂಸ್ ಪಾತ್ರದಲ್ಲಿ ಲೂಕ ಬಾರ್ಟನ್ ಮತ್ತು ಶೋಲ್ಟೋ ಅವಳಿಗಳ ಪಾತ್ರದಲ್ಲಿರುವ ರೂ ಹ್ಯಾಮಿಲ್ಟನ್ ಇವರ ಮಾತುಗಳಲ್ಲಿ ಅಲ್ಲಲ್ಲಿ ಹಾಸ್ಯ ತುಂಬಿದ್ದು ದಿಗ್ದರ್ಶಕರ ಸಾಮರ್ಥ್ಯಕ್ಕೆ ಸಾಕ್ಷಿ.

ಚಾಂಡಾಳ ಚೌಕಡಿ: ಈ ನುಡಿಗಟ್ಟು – ನಾಲ್ಕು ಅಥವಾ ಹೆಚ್ಚು- ದುರುಳರ ಗುಂಪಿಗೆ ಚೆನ್ನಾಗಿ ಅನ್ವಯಿಸುತ್ತದೆ ಎಂದೇ ಅ ಅರ್ಥದಲ್ಲಿ ಇಲ್ಲಿ ಉಪಯೋಗಿಸಿದ್ದೇನೆ. ಇದರ ಮೂಲ ಮಹಾಭಾರತದ ದುಷ್ಟ ಚತುಷ್ಟಯ (ದುರ್ಯೋಧನ, ದುಶ್ಶಾಸನ, ಶಕುನಿ, ಕರ್ಣ) ಇರಬಹುದು. ಈ ಹೆಸರಿನಲ್ಲಿ ಮರಾಠಿ, ಭೋಜಪುರಿ ಭಾಷೆಗಳಲ್ಲಿ ಸಿನಿಮಾಗಳು ಸಹ ಆಗಿವೆಯಂತೆ. ಕೋನನ್ ಡಾಯ್ಲನ ಕಥೆಯಲ್ಲಿ ಕಾಗದದ ಮೇಲೆ ಸಹಿ (sign) ಮಾಡಿದ ನಾಲ್ವರು ಅಪರಾಧಿಗಳೆಂದರೆ ಜೊನಾಥನ್ ಸ್ಮಾಲ್, ದೋಸ್ತ್ ಅಕ್ಬರ್, ಮೆಹಮತ್ ಸಿಂಗ್ ಮತ್ತು ಅಬ್ದುಲ್ಲಾ ಖಾನ್.
ಟೋಂಗಾ ಎನ್ನುವ ಅಂದಮಾನಿನ ಕುಳ್ಳ ಮನುಷ್ಯನ ವರ್ಣನೆಯಷ್ಟೇ ನಾಟಕದಲ್ಲಿ ಕೇಳುತ್ತೇವೆ- ಆ ಜನರು ”ಸಣ್ಣ ಕಣ್ಣು, ಸದ್ದಾ ಮುದ್ದಾ ಆಕಾರದ ದೊಡ್ಡ ತಲೆ, ವಿಕಾರವಾದ ಮುಖವುಳ್ಳ ನರಭಕ್ಷಕರು ಇತ್ಯಾದಿ”. ಆ ಪಾತ್ರ ರಂಗಮಂಚಕ್ಕೆ ಬರುವದಿಲ್ಲ. ಆತನ ಉಲ್ಲೇಖ ಬಂದಾಗೆಲ್ಲ ಓದುಗರಿಗೆ ಮತ್ತು ಪ್ರೇಕ್ಷಕರಿಗೆ ಹೇಸಿಕೆ ಹುಟ್ಟುವ ಭಾಷೆಯನ್ನು ಉಪಯೋಗಿಸಲಾಗಿದೆ. ಮೊದಲ ನೋಟಕ್ಕೆ ಕೋನನ್ ಡಾಯ್ಲ ರೇಸಿಸ್ಟ್ ಎನಿಸಿದರೂ ಕಥೆಯನ್ನು ಬರೆದದ್ದು ವಿಕ್ಟೋರಿಯಾ ಮಹಾರಾಣಿ ಬ್ರಿಟಿಷ್ ಸಾಮ್ರಾಜ್ಞಿಯಾಗಿದ್ದ ಕಾಲ. ಆಗಿನ ಸಮಯದಲ್ಲಿ ಭಾರತದ ಬಗ್ಗೆ ಕೆಲ ತಪ್ಪು ತಿಳುವಳಿಕೆಗಳು ಇದ್ದವು; ಸಾಮಾನ್ಯ ಜನರಲ್ಲಿ ಪರಕೀಯರ ಬಗ್ಗೆ ಕುತೂಹಲವಿದ್ದಂತೆ ಕೆಲವರಿಗೆ ಅಸಹಿಷ್ಣುತೆಯೂ ಇತ್ತು. ಕೆಲವು ಅಸತ್ಯಗಳ ಪ್ರಚಾರವಿತ್ತೆಂದೂ ಅದನ್ನೇ ಕೋನನ್ ಡಾಯ್ಲ -ಆತ ಎಂದೂ ಭಾರತಕ್ಕೆ ಬಂದಿರಲಿಲ್ಲ- ಚಿತ್ರಿಸಿದ್ದಾನೆ ಎಂದು ಹೇಳಿ ಅವನು ಅನ್ಯದ್ವೇಶಿಯಾಗಿರಲಿಲ್ಲ (xenophobist or racist) ಎಂದು ನಿರ್ಣಯಕ್ಕೆ ಬಂದವರೇ ಹೆಚ್ಚು. (See McBratney below **) ಅದೇನೆ ಇರಲಿ, ಟೋಂಗಾ ವಿಷಲೇಪಿತ ಬಾಣಗಳನ್ನು ಊದುವ ಅಂದಮಾನಿನ ಬುಡಕಟ್ಟಿನ ಜನಾಂಗದವನೆಂದು ಇದರಲ್ಲಿ ರೂಪಿಸಲಾಗಿದೆ. ಅವನದು ಇದರಲ್ಲಿ ಮುಖ್ಯ ಪಾತ್ರ.
ಸೈನ್ ಆಫ್ ಫೋರ್ ನಾಟಕ ಈ ದೇಶದ ಬೇರೆ ಬೇರೆ ಊರುಗಳಲ್ಲಿ ಪ್ರದರ್ಶಿತವಾಗುತ್ತಿದೆ*, ಆಸ್ಥೆಯಿದ್ದವರು ಹೋಗಿ ನೋಡಬಹುದು. ಟಿಕೀಟು ದರ ಸ್ವಲ್ಪ ದುಬಾರಿಯೆನ್ನ ಬಹುದು; ಸೀನಿಯರ್ ಸಿಟಿಸನ್ ರಿಯಾಯಿತಿಯಿಲ್ಲ ಎಂದು ನನ್ನ ಗೊಣಗು! ಹೋಮ್ಸ್ ಭಕ್ತರು ಮಿಸ್ ಮಾಡಿಕೊಳ್ಳಬೇಡಿ. ನಾನೂ ಆತ ಪದೇ ಪದೇ ಹೇಳುವದನ್ನೇ ತಿರುಚಿ ಹೇಳುವೆ: “Come on, Watson. The game is afoot. Get into your clothes, and go and see!”
(I gratefully acknowledge the permission granted by Adrian McDougall, Artistic Director of Blackeyed Theatre for their consent to reproduce Victoria Spearing’s sketch and the poster of the play- Author)
*Link: www.blackeyedtheatre.co.uk
**McBratney, J. (2005). RACIAL AND CRIMINAL TYPES: INDIAN ETHNOGRAPHY AND SIR ARTHUR CONAN DOYLE’S THE SIGN OF FOUR. Victorian Literature and Culture, 33(1), 149-167. doi:10.1017/S106015030500077X
ದೇಸಾಯಿ ಅವರೇ ಎಂದಿನಂತೆ ನಿಮ್ಮ ಲೇಖನ ಬಹಳ ಅನನ್ಯವಾಗಿದೆ. ನೀವು ಷರ್ಲಾಕ್ ಹೋಮ ಅಭಿಮಾನಿಯೆಂದು ಈ ಹಿಂದೆ ಹೇಳಿದ್ದಿರಿ. ಅರ್ಥರ್ ಕಾನಾನ್ ಡಾಯಲ್ ವಿರಚಿತ ಪತ್ತೇದಾರಿ ಕಥೆಗಳ ಸ್ವಾದವನ್ನು ಅನುಭವಿಸದೆ ಇದ್ದವರು ಬಹಳ ಕಡಿಮೆ. ಇವರೆಲ್ಲ ಬ್ರಿಟಿಷ್ ಪರಂಪರೆಯ ಹೆಗ್ಗುರುತುಗಳು. ಷರ್ಲಾಕ್ ಮತ್ತು ವಾಟ್ಸನ್ ಜೋಡಿಯ ಸಾಹಸಗಾಥೆಯನ್ನು ರಂಗಮಂಚದ ಮೇಲೆ ನೋಡಿದ ಅನುಭವವನ್ನು ಬಹಳ ರಸವತ್ತಾಗಿ ವರ್ಣಿಸಿದ್ದೀರಿ. ಈಗ ಒಂದೆರಡು ವರ್ಷದ ಹಿಂದೆ ಪ್ರಸಾರವಾದ ಆಧುನಿಕ ಪ್ರಯೋಗದ ಸರಣಿಯಲ್ಲಿ ಈ ಕಥೆ ಇತ್ತೋ ಇಲ್ಲವೋ ಮರೆತು ಹೋಗಿದೆ. ಅದೇನೇ ಇರಲಿ ಸೈನ್ ಆಫ್ ಫೋರ್ ನಿಜಕ್ಕೂ ಆಸಕ್ತಿಪೂರ್ಣವಾದ ಕಥೆ. ಅದನ್ನು ನಮ್ಮ ಮುಂದಿಟ್ಟದ್ದಕ್ಕೆ ಧನ್ಯವಾದಗಳು.
ಉಮಾ ವೆಂಕಟೇಶ್
LikeLike
ಉಮಾ ಅವರೆ, ನಿಮ್ಮ ಹಿನ್ನುಣಿಕೆಗೆ ಧನ್ಯವಾದಗಳು. ಎರಡು ವರ್ಷಗಳ ಕೆಳಗೆ ಟಿವಿದಲ್ಲಿ ಬೆನೆಡಿಕ್ಟ್ .ಕಂಬರ್ಬ್ಯಾಕ್ ಮತ್ತು ಮಾರ್ಟಿನ್ ಫ್ರೀಮನ್ ಜೋಡಿ ನಟಿಸಿದ ಮೂರನೆಯ ಸರಣಿಯಲ್ಲಿ A sign of Three ಎನ್ನುವ ಹೊಸ ಕಥೆ ಇತ್ತಂತೆ. ನನಗೂ ಮಿಸ್ ಆಯಿತು. ಆದರೆ ಅದು ಶೀರ್ಷಿಕೆ ಬಿಟ್ಟರೆ ಪೂರ್ತಿ ಹೊಸ ಕಲ್ಪನೆ, ಮೊಫಾಟ್ ಮತ್ತು ಗ್ಯಾಟ್ಟಿಸ್ ಅವರ ಕೊಡುಗೆ. ಇಂಥ ಕ್ಲಾಸಿಕ್ ವಸ್ತುಗಳು ಚತುರ್ದಶ ಅವತಾರಗಳನ್ನು ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ!
LikeLike
Excellent review. I have an old publication of Sir AC where he has scripted 100 short stories all set in late 1890s.
Look forward to this play if it comes down south.
LikeLike
Thank you, Ramamurthy, for your comments. Good news is (for you) it is coming to your town Nov 1 to 3 playing at Haymarket. Tell me if I was right!
LikeLike
Thanks Desaiavare. Unfortunately will miss this as we are in Bengaluru now and returning mid Nov.
LikeLike
ಶ್ರೀವತ್ಸ ದೇಸಾಯಿ ಅವರ ಯಾವುದೇ ಬರವಣಿಗೆಯನ್ನು ಗಮನಿಸಿದಾಗ ಅದರಲ್ಲಿ ಶ್ರದ್ಧೆ ಮತ್ತು ವಸ್ತು ನಿಷ್ಠೆ ಎದ್ದು ತೋರುತ್ತದೆ.
ಅವರು ಬರೆಯುವುದಕ್ಕೆ ಮುನ್ನ ಸಂಶೋಧಿಸಿ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ, ತಮ್ಮ ಹದ್ದಿನ ಕಣ್ಣಿನ ದೃಷ್ಟಿ ನೆಟ್ಟು ಸಣ್ಣ ಪುಟ್ಟ ವಿಚಾರಗಳ ಕಡೆ ಗಮನ ಇಟ್ಟು ಉತ್ತಮವಾದ ಹಾಗು ನಿಷ್ಕಳಂಕವಾದ ಲೇಖನ ರಚಿಸುತ್ತಾರೆ. ಮೇಲಿನ ಬರವಣಿಗೆ ಇದ್ದಕ್ಕೆ ಸಾಕ್ಷಿ.
LikeLiked by 1 person
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಅದು ನಿಮ್ಮ ದೊಡ್ಡತನವನ್ನು ತೊರಿಸುತ್ತದೆ. ಓದಿದ್ದೇ,ನೋಡಿದ್ದೇಆಗಲಿ, ಆಲಿಸಿರಲಿ “Reading around it” ಅನುಭವವನ್ನು ಹೆಚ್ಚಿಸುತ್ತದೆಯಲ್ಲವೆ? ಅದನ್ನ ಹಂಚಿಕೊಳ್ಳುವದರಲ್ಲೂ ಒಂದು ಖುಶಿ. ಈ ನಮ್ಮ (ಕಸಾಸಾಂವಿ)ವೇದಿಕೆಯಿರುವದೂ ಅದಕ್ಕೇ ಅಲ್ಲವೆ ಅಂದುಕೊಳ್ಳಬೇಕು ಎಲ್ಲರೂ; ಮತ್ತು ಬರೆಯಬೇಕೆಂದು ವಿನಂತಿ. ಶ್ರೀವತ್ಸ
LikeLike
ದೇಸಾಯಿ ಅವರ ಆಂಗ್ಲ ಸಾಹಿತ್ಯದ ಮೇಲಿರುವ ಜ್ಞಾನದ ಆಳ ಮತ್ತು ಇತಿಹಾಸವನ್ನು ಬೆಸೆಯುವ ಪರಿಣಿತಿ ಈ ಲೇಖನ ಓದಿದಾಗ ಅರಿವಾಗದೇ ಇರದು.
ನಾನು ಶರ್ಲಾಕ್ ಹೋಮನ ನಾಕಾರು ಕತೆಗಳನ್ನು ಓದಿದ್ದೇನೆ. ಸಾಕಷ್ಟು ಟಿವಿ ಅಥವಾ ಸಿನೆಮಾಗಳು ಬಂದಿವೆಯಾದರೂ ನಾನು ಒಂದನ್ನೂ ನೋಡಿಲ್ಲ. ದೇಸಾಯಿ ಅವರು ತಾವು ಇತ್ತೀಚೆ ನೋಡಿದ ನಾಟಕದಿಂದ ತಮ್ಮ ನೆನಪಿನ ಬುತ್ತಿ ಬಿಚ್ಚಿ ಬರೆದಿದ್ದಾರೆ.
ಧನ್ಯವಾದಗಳು
ಕೇಶವ
LikeLiked by 1 person
ಧನ್ಯವಾದಗಳು, ಕೇಶವ. ನನ್ನ (ಅ)ಜ್ಜಾನದ ಪರಿಮಿತಿಯ ಅರಿವು ನಮಗೆ ಇರಬೇಕು ಮತ್ತು ಬೆಳೆಯುವದು, ತಿಳಿದುಕೊಳ್ಲಬೇಕಾದದು ಅಗಾಧವಲ್ಲವೆ? ತಂದ ಬುತ್ತಿಯನ್ನು ಹಂಚಿಕೊಂಡರೇನೇ ಸುಖ!
LikeLike
ಸ್ಪಂದಿಸಿದ, ಪ್ರತಿಕ್ರಿಯೆ ಬರೆದ ಎಲ್ಲರಿಗೂ ಧನ್ಯವಾದಗಳು. ನಾಟಕ ಹಳೆಯದಾದರೇನು, ನೋಟ ಹೊಸತು. RSC ನೋಡಿಲ್ಲವೆ?
LikeLike
Very good article. I was very much impressed by the title ” chandala chaukadi”, because it has some meaning when four of our close friends ( Dr Desai, Nadgir, Kanekal, Koneri) meet.
LikeLiked by 1 person
ಧನ್ಯವಾದಗಳು. ಆದರೆ ನಮ್ಮ ಮುಗ್ಧ ಬಾಲ್ಯದ ಕುಕೃತ್ಯಗಳನ್ನು ಹೀಗೆ ಬಹಿರಂಗವಾಗಿ ಎಳೆದು ಅವಮಾನ ಮಾಡುವ ಕಾರಣವಿದ್ದಿಲ್ಲ! ಮೇಲಾಗಿ ಅದಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ. ( ಅರುಣ ಸಾರ್, ಅಲ್ಲಿಗೆ ಬಂದಾಗ ನೋಡಕೋತೇನಿ, ಹುಷಾರ!)
LikeLike
ನಾನು ಮರಾಠಿ, ಕನ್ನಡ ನಾಟಕಪ್ರಿಯಳಾದರೂ , ಬ್ರಿಟಿಷ್ ನಾಟಕಗಳ ಗಂಧವೇ ಇಲ್ಲದ ನಮ್ಮಂಥವರಿಗೂ ಆಸಕ್ತಿ ಮೂಡಿಸುವ, ಕಣ್ಣ ಮುಂದೆ ಪಾತ್ರಗಳು ಕುಣಿಯುವಂತೆ ಬರೆದ ಆಕರ್ಷಕ ಲೇಖನ.ಓದುವುದಕ್ಕೂ, ಪ್ರತ್ಯಕ್ಷ ವೀಕ್ಷಣೆ ಗೂ ತುಂಬಾ ವ್ಯತ್ಯಾಸ ಎನ್ನುವುದರಲ್ಲಿ ಸಂಶಯವಿಲ್ಲ.ಆದರೂ ಆ ಕೊರತೆ ಯನ್ನು ದೂರಮಾಡಿ ತನ್ಮಯತೆ ಹುಟ್ಟಿಸುವ ಚೆಂದದ ಬರಹ.ಜೊತೆಗೇ ಚಾಂಡಾಳಚೌಕಡಿಯ ಹೆಸರು ಕೊಟ್ಟು ಭಾರತೀಯ ಸ್ಪರ್ಶವನ್ನೂ ನೀಡಿ ಆಸಕ್ತಿ ಕೆರಳಿಸಿದ್ದಾರೆ. ಬೇಶರಮ, ಬೇಕಾರರ ಗುಂಪು ಕೆಲವು ಸಲ ನಿರುಪದ್ರವಿ ಯಾದರೂ ಪ್ರಚಂಡ ,ಉಪದ್ರವಿಗಳಾದದ್ದೆ ಬಹಳ ಸಂದರ್ಭಗಳಲ್ಲಿ ಅನಿಸ್ತಿದೆ ಈ ಚಾಂಡಾಳ ಚೌಕಡಿದು.ತುಂಬ ಕುತೂಹಲ ಮೂಡಿಸುವ ಸುಂದರ ಮಾಹಿತಿ ನೀಡುವ ಲೇಖನ ನೀಡಿದ ಶ್ರೀವತ್ಸ ದೇಸಾಯಿ ಅವರಿಗೆ ಧನ್ಯವಾದಗಳು.
ಸರೋಜಿನಿ ಪಡಸಲಗಿ
LikeLiked by 1 person
ತಮ್ಮ ಸಾಂಪ್ರದಾಯಿಕ, ಚಾರಿತ್ರಿಕ ಬೇರುಗಳನ್ನು ಉಳಿಸಿಕೊಳ್ಳುವುದರಲ್ಲಿ ಬ್ರಿಟಿಷರು ನಿಸ್ಸೀಮರು.
ಕಾಲಕ್ಕೆ ತಕ್ಕಂತೆ ಪಾತ್ರಗಳನ್ನು ( only out look)
ಬದಲಾಯಿಸುತ್ತ ಅದೇ ಕತೆಗಳನ್ನು ಹೇಳುತ್ತಾರೆ.
In the modern days of gadgets and intelligence also they suceed playing the same old plays, stories again and again. I am sure they make it interesting and play well.
ಅಂತ ಒಂದು ನಾಟಕವನ್ನು ನಮಗೆ ನಿಮ್ಮ ಬರಹ ಯಶಸ್ವಿಯಾಗಿ ತಲುಪಿಸಿದೆ. ಧನ್ಯವಾದಗಳು.
LikeLike
Your Review has made us to watch the play
Thanks
Vijayanarasimha
LikeLiked by 1 person