‘ಬಾ ಗೆಳತಿ’ – ವಿಜಯನರಸಿಂಹ ಅವರ ಪ್ರೇಮ ಕವನ

evening walk

ಬಾ ಗೆಳತಿ ಮತ್ತೆ ಕೈ ಕೈ ಹಿಡಿದು
ನಡೆಯೋಣ ತುಸು ದೂರ ಇಳಿ ಸಂಜೆಯಲಿ
ಇಳಿಸುತ ನಮ್ಮೆದೆಗಳ ಭಾರವನು
ಮಾತಿನಿತು, ಮೌನವಿನಿತು
ವಾದ ಬೇಡ, ವಿವಾದ ಬೇಡ
ಅರ್ಥಬೇಡ , ಅನರ್ಥಬೇಡ

ನೆನಪು ಮಾಡಿಕೋ ಮುತ್ತೊಂದ
ಕೇಳಿದ್ದೆ ನಾನು ನಿನ್ನ
ಮದುವೆಗೂ ಮುನ್ನ
ಕಣ್ಣ ಮುಚ್ಚಲು ಹೇಳಿ ನನ್ನ
ಭಯದಲ್ಲೇ ನೀ ಕೊಟ್ಟುದನ್ನ
ಕಣ್ಬಿಡಲು ಮತ್ತೆ ನೀ ಮಾಯವಾದದ್ದನ್ನ

ಮುಂದೆ ಒಳ್ಳೆಯ ದಿನಗಳಿಲ್ಲದ್ದನ್ನು
ನೆಪಮಾಡಿ ದೂರವಿಟ್ಟರು ಬಹು ದಿನ ನಮ್ಮನ್ನು
ನೀನೂ ಮೀರದಾದೆ ಹಿರಿಯರನ್ನು
ನಾನೂ ಕೇಳದಾದೆ ನಿನ್ನನ್ನು

ಗೊತ್ತೇನು ನಿನಗಾಗಿ ನಾ ಬರೆದ ಮೊದಲ ಕವನ
ಸ್ಪಷ್ಟವಾಗಿ ಓದಲು ಬಾರದಾದೆ ನೀನದನ್ನ
ಅಂದಿಗೇ ನಿಲ್ಲಿಸಬೇಕೆನಿಸಿತ್ತು ಬರೆಯುವುದನ್ನ
ಮತ್ತೆ ನಾನೇ ಬಿಡಿಸಿ ಹೇಳಿದೆನು ಅದರರ್ಥವನ್ನ

ಇದೇ ನೋಡು ಬಾಳ ಪಯಣದ ಗುಟ್ಟು
ನನ್ನ ತಪ್ಪಾದರೆ ನಿನ್ನ ಕ್ಷಮೆಯಿರಲಿ
ನಿನ್ನ ತಪ್ಪಾದರೆ ನನ್ನ ಕ್ಷಮೆಯಿರಲಿ

ತೆರೆಮೇಲು ತೆರೆಬೀಳು ಈ ಸರಿ-ತಪ್ಪುಗಳು
ಎಲ್ಲ ಕಹಿಗಳಿಗೆ ಮರೆವು ತಾಳೋಣ
ರವಿ ಜಾರಿದ ಬಾ ಚಂದಿರನೂರ ಸೇರೋಣ

 

                                ✍ವಿಜಯನರಸಿಂಹ
                                  (ಚಿತ್ರ ಕೃಪೆ: ಗೂಗಲ್)

9 thoughts on “‘ಬಾ ಗೆಳತಿ’ – ವಿಜಯನರಸಿಂಹ ಅವರ ಪ್ರೇಮ ಕವನ

  1. ‘ಅಂದಿಗೇ ನಿಲ್ಲಿಸಬೇಕೆನಿಸಿತ್ತು ಬರೆಯುವುದನ್ನ
    ಮತ್ತೆ ನಾನೇ ಬಿಡಿಸಿ ಹೇಳಿದೆನು ಅದರರ್ಥವನ್ನ’
    ಸೊಗಸಾದ ಸಾಲುಗಳು.
    – ಕೇಶವ

    Liked by 1 person

  2. ಸುಂದರವಾದ ಭಾವಗಳಿವೆ. ಏನನ್ನೋ ಹೇಳುವ ಹಂಬಲ, ತುಸು ಹಾಸ್ಯ, ನೆನಪು, ಕಾತುರ ಜೊತೆಗೆ ಸಂದೇಶಗಳು ಎಲ್ಲ ಒಟ್ಟಿಗೆ ಸೇರಿ ಕವನದ ಹಾದಿ ಅಂಕು ಡೊಂಕಿನಲ್ಲಿ ಸಾಗಿದೆ. ಆದರೂ ಇದರಲ್ಲಿನ ರಮ್ಯತೆಗೆ ಕೊರತೆಯಿಲ್ಲ.
    ಬಹಳಷ್ಟು ದಿನದ ಮೇಲೆ ಬರೆದಿದ್ದೀರಿ. ಮತ್ತೆ ಮತ್ತೆ ಬರೆಯುತ್ತಿರಿ.

    Like

    • ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
      ಅಂಕು ಡೊಂಕಿನ ಬಗ್ಗೆ ಗಮನ ಹರಿಸುವೆ

      Like

Leave a Reply to premalatha B Cancel reply

Your email address will not be published. Required fields are marked *