ಉಮಾ ವೆಂಕಟೇಶ್ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ಪ್ರಕಟಿಸಿದ ತಮ್ಮ ಬ್ರೆಜ಼ಿಲ್ ಪ್ರವಾಸದ ಎರಡನೇ ಕಂತು ಇಂದು ಹೊರಬರುತ್ತಿದೆ. ಸಸ್ಯ ಶಾಸ್ತ್ರಜ್ಞೆಯಾದ ಉಮಾ ತಾವು ಭೇಟಿಕೊಟ್ಟ ಪ್ರದೇಶಗಳಲ್ಲಿ ಕಂಡು ಬರುವ ಗಿಡ ಮರಗಳ ಅನನ್ಯತೆಯನ್ನು ಮನೋಹರವಾಗಿ ವರ್ಣಿಸುತ್ತಾರೆ. ತಮ್ಮ ಪ್ರವಾಸ ಕಥನಗಳಿಗೆ ಕನ್ನಡ ಸಾಹಿತ್ಯದ ಕಟ್ಟನ್ನು ಹಾಕಿ ಪ್ರದರ್ಶಿಸುವುದು ಅವರ ವೈಶಿಷ್ಟ್ಯ. ಈ ಲೇಖನವೂ ಅದಕ್ಕೆ ಹೊರತಲ್ಲ. ಬ್ರೆಜ಼ಿಲ್ನಲ್ಲಿ ಭಾರತದ ಸೊಗಡನ್ನು ಹುಡುಕುತ್ತಿರುವ ಲೇಖನ ನಮ್ಮ ಓದುಗರಿಗೆ ಮುದ ನೀಡುವುದರಲ್ಲಿ ಸಂದೇಹವೇ ಇಲ್ಲ.
ಮನೋಹರ ಕರಾವಳಿ ಪಟ್ಟಣ ನಟಾಲ್
ಇಗ್ವಸು ಜಲಪಾತದ ದರ್ಶನದಿಂದ ಸಂತೃಪ್ತವಾದ ನಾವು ಮರಳಿ ಸಾವೊ- ಪಾಲೋಗೆ ಬಂದೆವು. ಅಲ್ಲಿಂದ ೩ ಗಂಟೆಗಳ ವಿಮಾನ ಪ್ರಯಾಣದ ದೂರದಲ್ಲಿರುವ, ನಟಾಲ್ ಎನ್ನುವ ಈಶಾನ್ಯ ದಿಕ್ಕಿನ ಕರಾವಳಿ ಪಟ್ಟಣವನ್ನು ತಲುಪಿದೆವು. ಅಟ್ಲಾಂಟಿಕ್ ಸಾಗರದ ತೀರದಲ್ಲಿರುವ ಈ ಪಟ್ಟಣ, ರಿಯೋ ಗ್ರಾಂಡೇ ದೋ ನಾರ್ತೆ ಪ್ರಾಂತ್ಯದ ರಾಜಧಾನಿ. ಈ ಪಟ್ಟಣದ ಮುಖ್ಯ ಭಾಗ ಉತ್ಕೃಷ್ಟ ದರ್ಜೆಯ ಹೋಟೆಲುಗಳು, ಮತ್ತು ಇನ್ನಿತರ ಐಶಾರಾಮದ ಕಟ್ಟಡಗಳಿಂದ ತುಂಬಿದ್ದು, ನೋಡಿದೊಡನೆಯೇ ಅಮೆರಿಕೆಯ ದೊಡ್ದ ಪಟ್ಟಣಗಳ ಡೌನ್ ಟೌನ್ನಂತೆ ಕಾಣುತ್ತದೆ. ಎಲ್ಲೆಲ್ಲೂ ಕಾಣುವ ಹಲವಾರು ರೀತಿಯ ರೆಸ್ಟುರೆಂಟುಗಳು, ವ್ಯಾಪಾರ ಮಳಿಗೆಗಲಿರುವ ನಟಾಲ್, ಪ್ರವಾಸಿಗರನ್ನು ಖುಷಿಪಡಿಸುವ ಕರಾವಳಿ ಪಟ್ಟಣವೆಂದು ನೋಡಿದೊಡನೆ ಹೇಳಿಬಿಡಬಹುದು. ಪಟ್ಟಣದ ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ, ಒಳನಾಡಿನಲ್ಲಿ ಅಪೂರ್ವವಾದ ಮರಳಿನ ದಿಣ್ಣೆ ಮತ್ತು ವಿಶಿಷ್ಟ ಬಗೆಯ ಸಸ್ಯವರ್ಗ ಕಣ್ಣಿಗೆ ತಂಪನ್ನೀಯುತ್ತವೆ. ಸಾಗರದ

ತೀರದುದ್ದಕ್ಕೂ ತೂಗುವ ತೆಂಗು ಮತ್ತು ಸರ್ವೆಮರಗಳು, ಕರ್ನಾಟಕದ ಕಡಲತೀರ ಕಾರವಾರವನ್ನು ನೆನಪಿಸುತ್ತದೆ. ನಗರದ ಹೊರಭಾಗಕ್ಕೆ ಸಾಗರ ಮತ್ತು ನದಿಯ ಕೂಡುವಿಕೆಯ ಭಾಗವನ್ನು ದಾಟಲು ನಿರ್ಮಿಸಿರುವ ಆಧುನಿಕ ಸೇತುವೆ, ಬ್ರಿಟನ್ನಿನ ವೇಲ್ಸ್ ಪ್ರಾಂತವನ್ನು ಇಂಗ್ಲೆಂಡಿನಿಂದ ಪ್ರವೇಶಿಸುವಾಗ, ಬ್ರಿಸ್ಟಲ್ ಕಾಲುವೆಗೆ ಅಡ್ಡಲಾಗಿ ಕಟ್ಟಿರುವ, ಸೆವರನ್ ಸೇತುವೆಯಂತಿದೆ. ಆದರೆ ಇಲ್ಲಿ ಪ್ರವೇಶದರ ಕೊಡಬೇಕಿಲ್ಲ!
ಉತ್ತಮ ದರ್ಜೆಯ ಸಾಗರ ತೀರಗಳು ಮತ್ತು ಹಲವಾರು ಆಸಕ್ತಿಪೂರ್ಣ ಸ್ಥಳಗಳಿರುವ ಈ ಪಟ್ಟಣ, ಇಂದು ಪ್ರವಾಸಿಗರಿಗೆ ಉತ್ತಮ ಆಕರ್ಷಣೆಯಾಗಿದೆ. ನಾವು ಹೋದ ಸಮಯ ಅಲ್ಲಿ ಚಳಿಗಾಲ. ಹಾಗಾಗಿ ತಾಪಮಾನ ಸುಮಾರು ೩೦ ಡಿಗ್ರಿ! ಇದರೊಡನೆ ಆರ್ದ್ರತೆ ಸೇರಿ, ಆ ಶಾಖವನ್ನು ತಡೆದುಕೊಳ್ಳುವುದು ನಮಗೆ ಸ್ವಲ್ಪ ಕಷ್ಟವೆನಿಸಿತು. ಭಾರತ ಬಿಟ್ಟು, ೨೧ ವರ್ಷಗಳು ಬ್ರಿಟನ್ನಿನಲ್ಲಿ ಜೀವಿಸಿದ್ದ ಫಲವಿದು.
ನಟಾಲಿನ ಉತ್ತರ ಭಾಗವು, ಯೂರೋಪ್ ಮತ್ತು ಕೆರಿಬಿಯನ್ ದ್ವೀಪಗಳಿಗೆ ಅತ್ಯಂತ ಹತ್ತಿರ. ೧೫೦೧-೨ ರ ಸಮಯದಲ್ಲೇ ಪೋರ್ಚುಗೀಸರು ಇಲ್ಲಿಗೆ ಬಂದಿಳಿದರೆಂದು ತಿಳಿಯುತ್ತದೆ. ನಮಗಂತೂ, ಇಲ್ಲಿನ ಮನೆಗಳು, ಸಾಗರದ ತಡಿ, ಅಲ್ಲಿದ್ದ ಸಸ್ಯವರ್ಗ, ಸಂಸ್ಕೃತಿ, ಬಾರಿಬಾರಿ ನಮ್ಮ ಪಶ್ಚಿಮ ತೀರದ ಗೋವಾ ಪ್ರಾಂತ್ಯವನ್ನು ನೆನಪಿಗೆ ತರುತ್ತಿತ್ತು. ಅಲ್ಲಿಯೂ ಪೋರ್ಚುಗೀಸರೇ ಬಂದು ನೆಲಸಿದ್ದರಲ್ಲವೇ! ನಮ್ಮ ಫ಼್ಲಾಟಿನ ಮುಂದೆಯೇ ಪ್ರಶಾಂತವಾದ ಸಾಗರ. ಇಲ್ಲಿನ ರಸ್ತೆಯ ಪಕ್ಕದಲ್ಲಿ ಸಾಲಾಗಿದ್ದ ಮಾವಿನ ಮರಗಳು, ಕಾಡುಬಾದಾಮಿಯ ಮರಗಳು, ಕಣಿಗಿಲೆ, ತೆಂಗಿನ ಸಾಲುಗಳನ್ನು ನೋಡಿದಾಗ, ಶಾಲೆಯಲ್ಲಿ ಕನ್ನಡ ಪುಸ್ತಕದಲ್ಲಿದ್ದ ಕಡೆಂಗೊಡ್ಲು ಶಂಕರ ಭಟ್ಟರ, “ಪಡುವಣ ಕಡಲಿನ ತೆಂಗಿನ ಮಡಿಲಿನ ಮರೆಯಲಿ ಮೆರೆವುದು ನಾಡೊಂದು” ಪದ್ಯವನ್ನು ಮೆಲಕುಹಾಕಿದೆ. ಈ ಪ್ರದೇಶದಲ್ಲಿರುವ ಅಟ್ಲಾಂಟಿಕ್ ಅರಣ್ಯಗಳು, ಬಹಳ ವೈಶಿಷ್ಟ್ಯಪೂರ್ಣವಾದ ಸಸ್ಯಪ್ರಬೇಧಗಳನ್ನು ಹೊಂದಿದೆ ಎಂದು, ಈ ಮೊದಲೇ ನನ್ನ ಸಹೋದ್ಯೋಗಿ ತಿಳಿಸಿದ್ದ. ಹಾಗಾಗಿ, ಇಲ್ಲಿನ ವಿಶ್ವವಿದ್ಯಾಲಯದ, ಸಸ್ಯಶಾಸ್ತ್ರ ಪ್ರಾಧ್ಯಾಪಕರನ್ನು ಕಂಡು, ಅವರಲ್ಲಿರುವ ಸಸ್ಯಸಂಗ್ರಹಣೆಯ ಬಗ್ಗೆ ತಿಳಿದುಕೊಳ್ಳಲು ಏರ್ಪಾಡುಮಾಡಿಕೊಂಡಿದ್ದೆ.
ಇಲ್ಲಿಯ ಮತ್ತೊಂದು ಅಪರೂಪದ ಭೌಗೋಳಿಕ ಲಕ್ಷಣ ಮರಳಿನ ದಿಬ್ಬಗಳು. ಡ್ಯೂನ್ ಬಗ್ಗಿ ಎನ್ನುವ

ವಿಶೇಷವಾದ ವಾಹನಗಳಲ್ಲಿ ಕುಳಿತು, ಈ ಮರಳುದಿಣ್ಣೆಗಳನ್ನೇರಿ ಇಳಿಯುವ ಅನುಭವ ನಿಜಕ್ಕೂ ಅಪೂರ್ವವೆನಿಸಿತು. ನನ್ನ ಜೀವನದಲ್ಲೇ ಮೊದಲ ಬಾರಿಗೆ ಮರಳ ದಿಣ್ಣೆಯನ್ನೇರಿದ ಅನುಭವ ಈ ಬಗ್ಗಿ ವಾಹನ ಸವಾರಿ. ಮೈಸೂರಿನ ಬಳಿಯಿರುವ ಕಾವೇರಿತೀರದ ಮರಳು ದಿಣ್ಣೆಯ ವಿಶಿಷ್ಟ ಸ್ಥಳವಾದ ತಲಕಾಡನ್ನು ನೋಡಿದ್ದಷ್ಟೇ ಗೊತ್ತು. ರಾಜಸ್ಥಾನವನ್ನು ನೋಡುವ ಅವಕಾಶವಿನ್ನೂ ದೊರೆತಿಲ್ಲ. ೩೦ರ ಮೇಲಿನ ತಾಪಮಾನಕ್ಕೆ, ಸೂರ್ಯನ ಪ್ರಖರತೆಗೆ ನಮ್ಮ ಉತ್ಸಾಹದ ಮೇಲೆ ತಣ್ಣೀರೆರಚಲು ಸಾಧ್ಯವಾಗಲಿಲ್ಲ. ಅಲ್ಲಲ್ಲೇ ಮರಳ ದಿಣ್ಣೆಗಳ ಸಮೂಹದಲ್ಲಿ, ಅರೇಬಿಯನ್ ಮರುಭೂಮಿಯ ವಾತಾವರಣವನ್ನು ಅನುಕರಿಸಿ ಮಾಡಿರುವ ಓಯಸಿಸ್ ಬಹಳ ಸುಂದರವಾಗಿದೆ. ಹಲವಾರು ಒಂಟೆಗಳು, ತಾಳೆಮರಗಳು, ಸಿಹಿನೀರಿನ ಊಟೆಗಳು, ಪ್ರವಾಸಿಗರ ಮನದಲ್ಲಿ ಅರೇಬಿಯಾದ ಅನುಭವ ನೀಡುವುದರಲ್ಲಿ ಸಫಲವಾಗಿದೆ. ಅಲ್ಲಲ್ಲೇ ಇದ್ದ ರಮಣೀಯವಾದ ಸಾಗರ ತೀರಗಳು, ಚಿಕ್ಕಚಿಕ್ಕ ಸಿಹಿನೀರಿನ ಸರೋವರಗಳು, ಸಾಗರದ ಹಿನ್ನೀರಿನ ಪ್ರದೇಶಗಳು, ಎಲ್ಲೆಡೆ ಹಾರಾಡುವ ವಿವಿಧ ಬಗೆಯ ಹಕ್ಕಿಗಳು, ತೆಂಗು, ತಾಳೆ ಮರಗಳು ಗಾಳಿಯಲ್ಲಿ ತೊನೆದಾಡುವ ವೈಖರಿಯನ್ನು ನೋಡಿ, ಮನ ಕವಿತೆ ಹೆಣೆಯುವ ಪ್ರಯಾಸವನ್ನೂ ಮಾಡಿತು. ಸುಂದರವಾದ ತೈಲಚಿತ್ರದ ದೃಶ್ಯದಂತಿರುವ ಈ ಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ, ನನ್ನ ಮನಸ್ಸಿಗೆ ವಿಶೇಷವಾದ ನೆಮ್ಮದಿಯನ್ನು ನೀಡಿತೆನ್ನಬಹುದು.
ಇಲ್ಲಿನ ಜನವೃಂದ ಧರಿಸುವ ಕಡುವರ್ಣದ ಬಟ್ಟೆಬರೆಗಳು ನನಗಂತೂ ಬಹಳ ಹಿಡಿಸಿದವು. ಅದರಲ್ಲೂ ಉತ್ತಮ ದರ್ಜೆಯ ದಾರಗಳಲ್ಲಿ, ಕ್ರೋಶೆ ಕಡ್ಡಿಯಿಂದ ನೇಯ್ದ, ಸುಂದರವಾದ ಪೋಷಾಕುಗಳಂತೂ, ಅವನ್ನು ಕೊಳ್ಳಲು ಮನವನ್ನು ಒತ್ತಾಯಿಸಲಾರಂಭಿಸಿತ್ತು. ನನ್ನ ಮಗಳು ಮತ್ತು ನಾನು, ಕಡೆಗೂ ಬಿಡದೆ ಸುಂದರವಾದ ಬ್ಲೌಸುಗಳನ್ನು ಖರೀದಿಸಿದೆವು. ಇಲ್ಲಿ ಕತ್ತಿಗೆ ಹಾರ ಧರಿಸಿದ ಕತ್ತೆಗಳನ್ನು ನೋಡಿ, ನಮ್ಮಲ್ಲಿ ಎತ್ತಿಗೆ ಸಿಂಗರಿಸಿ ಬೀದಿಯಲ್ಲಿ ಕೋಲೆಬಸವನ ಮೆರವಣಿಗೆ ಮಾಡುವ ದೃಶ್ಯ ಜ್ಞಾಪಕಕ್ಕೆ ಬಂತು. ಕೇವಲ ಜನಗಳ ಬಾಯಲ್ಲಿ ಬೈಗುಳರೂಪ ಪಡೆಯುವ ಈ ಜೀವಿಗೂ, ಕತ್ತಿಗೆ ಹಾರ ಧರಿಸುವ ಸೌಭಾಗ್ಯವನ್ನು ದಕ್ಷಿಣ ಅಮೆರಿಕೆಯ ಜನರು ನೀಡಿದ್ದು ಕಂಡು ಸೈ ಎಂದೆ. ಪ್ರೈಮರಿಶಾಲೆಯಲ್ಲಿದ್ದ “ನೀ ನನಗಿದ್ದರೆ, ನಾ ನಿನಗೆ”, ಕನ್ನಡ ಪದ್ಯದಲ್ಲಿ, ಮಾಲೀಕ ಕುದುರೆಯನ್ನು ಬಿಟ್ಟು ಕತ್ತೆಗೆ ಹೆಚ್ಚಿನ ಭಾರ ಹೊರೆಸಿದ್ದು ನೆನಪಾಯಿತು. ಈ ಕತ್ತೆಯ ಸವಾರಿಯ ಮನುಷ್ಯ, ಅದರ ಪಕ್ಕದಲ್ಲಿ ನಡೆಯುತ್ತಾ, ಕೈಯಲ್ಲಿ ಸ್ಮಾರ್ಟ್

ಫ಼ೋನಿನಲ್ಲಿ ಮಾತಾಡುತ್ತಾ ಸಾಗಿದ್ದ. ಮನುಷ್ಯನ ಹೊಟ್ಟೆಯ ಪಾಡಿಗೆ, ಪ್ರಾಣಿ ಶೋಷಣೆ ತಂತ್ರಜ್ಞಾನ-ಶತಮಾನ ಬದಲಾದರೂ ಸಾಗುತ್ತಲೇ ಇದೆ!
ನಾವು ಕುಳಿತಿದ್ದ ಬಗ್ಗಿ ವಾಹನವನ್ನು ಚಲಾಯಿಸುತ್ತಿದ್ದ ನಮ್ಮ ಚಾಲಕ, ಇಂಗ್ಲೀಷಿನಲ್ಲಿ ಸೊಗಸಾಗಿ ಸಂಭಾಷಿಸುತ್ತಾ ನಮಗೆ ಈ ಸ್ಥಳದ ಮಹಿಮೆಯನ್ನು ವಿವರಿಸಿ ನಮ್ಮ ಪ್ರವಾಸಕ್ಕೆ ಮೆರಗು ನೀಡಿದ. ಈ ಮರಳ ರಾಶಿಯ ಮೇಲ್ನಿಂತು, ಹಿನ್ನೆಲೆಯಲ್ಲಿ ಕಂಗೊಳಿಸುತ್ತಿದ್ದ ಸುಂದರ ನೀಲ ಸಾಗರರಾಶಿಯನ್ನು ಕಣ್ಣುಗಳು ಎಷ್ಟು ತುಂಬಿಕೊಂಡರೂ ಸಾಲದೆನಿಸಿತ್ತು. ಈ ಮರಳ ದಿಬ್ಬಗಳ ಮೇಲೆ ಅಲ್ಲಲ್ಲಿ ಕುದುರೆಗಳು ಮೇಯುತ್ತಿದ್ದನ್ನು ಕಂಡೆ! ಅಲ್ಲಿ ಬೆಳೆಯುವ ಸಸ್ಯಜಾತಿ ಈ ಪ್ರಾಣಿಗಳ ಹೊಟ್ಟೆತುಂಬಿಸುವುದರಲ್ಲಿ ಯಶಸ್ವಿಯಾಗಿದೆ. ಅಲ್ಲಿದ್ದ ಸುಂದರವಾದ ಸರೋವರವೊಂದರಲ್ಲಿ, ಈಜಾಡುವ ಸೌಲಭ್ಯವಿದ್ದು, ಅಲ್ಲಿ ಬೆಳೆದಿದ್ದ ತಾವರೆಗಳು, ನನ್ನ ಕ್ಯಾಮೆರಾದ ಸೆರೆಗೆ ಸಿಕ್ಕವು. ಉನ್ನತವಾದ ಮರಳದಿಣ್ಣೆಯ ತುದಿಯಿಂದ ಕೆಳಗಿದ್ದ ಆ ಸುಂದರ ಸರೋವರದೊಳಕ್ಕೆ ಜಾರುವ ಅವಕಾಶವನ್ನು ಪ್ರವಾಸಿಗರ ಮನರಂಜನೆಗೆ ಅಲ್ಲಿ ಏರ್ಪಡಿಸಿದ್ದರು. ಅಲ್ಲಂತೂ ಜನ ಕಿಕ್ಕಿರಿದ್ದರು.
ಮಧ್ಯಾಹ್ನ ಊಟದ ವೇಳೆಗೆ ನಮ್ಮ ವಾಹನದ ಚಾಲಕ ನಮ್ಮನ್ನೆಲ್ಲಾ, ಸಾಗರ ತೀರದಲ್ಲಿದ್ದ ಒಂದು ಸುಂದರವಾದ ರೆಸ್ಟುರೆಂಟಿಗೆ ಕರೆದೊಯ್ದ. ಉತ್ತಮದ ಸ್ವಾದಿಷ್ಟ ಭೋಜನಗೈದು, ಕೈಯಲ್ಲಿ ಎಳನೀರಿನ ಪಾನೀಯ ಹಿಡಿದು, ಸಾಗರ ತೀರದಲ್ಲಿ ಕುಳಿತಾಗ, ಸ್ವರ್ಗ ಎಂದರೆ ಇದೇ ಇರಬಹುದೇ ಎನ್ನಿಸುವ ಅನುಭವವಾಯಿತು. ಅಲ್ಲಿ ಹಾರಾಡುತ್ತಿದ್ದ ಗಿಡುಗಗಳು ನನ್ನ ಕಣ್ಣಿಗೆ ಬಿದ್ದೊಡನೆ, ಅವುಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಎದ್ದೋಡಿದೆ. ಈ ಬಲಿಷ್ಟ ಪಕ್ಷಿಗಳ ರೆಕ್ಕೆಯ ಹರವು, ಹಾರಾಡುವಾಗ ರೆಕ್ಕೆಗಳನ್ನು ಬಡಿಯುವ ವೈಖರಿ, ಅವುಗಳ ಸಾಮರ್ಥ್ಯಕ್ಕೆ ನನ್ನ ಮನದಲ್ಲಿ ಗೌರವದ ಭಾವನೆಗಳೆದ್ದವು. ಶ್ರೀಮನ್ನಾರಾಯಣನ ವಾಹನವಾಗಲು, ಇಂತಹ ಬಲದ ಅಗತ್ಯವಿರಲೇ ಬೇಕಲ್ಲವೇ!
ಪರಾವಲಂಬಿ ಸಸ್ಯವರ್ಗವಾದ ಮಿಸಲ್ಟೊ (Mistletoe) ಎನ್ನುವ ಸಸ್ಯ ಇಲ್ಲಿಯ ಹಲವಾರು ಮರಗಳ ಮೇಲೆ ಬೆಳೆದದ್ದನ್ನು ಕಂಡೆ. ನನ್ನ ಸಹೋದ್ಯೋಗಿಯೊಬ್ಬ, ಈ ಸಸ್ಯಗಳ ಪರಿಸರ ವಿತರಣೆ, ಆಣ್ವಿಕ ತಳಿಶಾಸ್ತ್ರ ಮತ್ತು ವಿಕಸನದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾನೆ. ನಮ್ಮ ದೇಶದಲ್ಲಿ ಈ ಜಾತಿಯ ಸಸ್ಯಗಳು, ಮಾವಿನ ಮರದ ಮೇಲೆ ವಿಶೇಷವಾಗಿ ಬೆಳೆಯುವುದನ್ನು ಕಾಣಬಹುದು (ಬಂದಳಿಕೆ). ಮುಂದೆ ಇಲ್ಲಿಯ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಪ್ರಾಧ್ಯಾಪಕರೊಡನೆ ಸಸ್ಯಸಂಗ್ರಹಾಲಯಕ್ಕೆ ಭೇಟಿಯಿತ್ತಾಗ, ಅಲ್ಲಿಯೂ ಈ ಸಸ್ಯಗಳ ಉತ್ತಮ ಸಂಗ್ರಹವನ್ನು ಕಂಡೆ. ಇಲ್ಲಿನ ವಿಶ್ವವಿದ್ಯಾಲಯದಲ್ಲಿ, ಬ್ರೊಮಿಲಿಯಾಡ್ ಮತ್ತು ಕಳ್ಳಿಗಿಡಗಳ ಬಗ್ಗೆ ಒಳ್ಳೆಯ ಸಂಶೋಧನೆ ನಡೆಸಿದ್ದಾರೆ. ಪ್ರಪಂಚದಲ್ಲೇ ಅತ್ಯಂತ ವೈವಿಧ್ಯಮಯ ಜೀವರಾಶಿಯನ್ನು ಹೊಂದಿರುವ ಈ ದೇಶಕ್ಕೆ, ಜೈವಿಕ ವೈವಿಧ್ಯತೆಯ (Biodiversity) Hotspot No 1 ಸ್ಥಾನ ದೊರೆತಿರುವುದರಲ್ಲಿ ಯಾವ ಅತಿಶಯವೂ ಇಲ್ಲ! ಇಲ್ಲಿಯ ಸಾಗರ ದಂಡೆಗಳನ್ನು ನೋಡಲು ಹೋದಾಗ, ನಮ್ಮ ವ್ಯಾನಿನ ಚಾಲಕ, ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಗೋಡಂಬಿ ಗಿಡವನ್ನು ತೋರಿಸಿದ. ಕರ್ನಾಟಕದ ಕರಾವಳಿಯಲ್ಲಿ ಮತ್ತು ಗೋವಾದಲ್ಲಿ ಬೆಳೆಯುವ ಈ ಮರವನ್ನು, ಪೋರ್ಚುಗೀಸರೇ ನಮ್ಮ ದೇಶಕ್ಕೆ ಪರಿಚಯಿಸಿದ್ದಾರೆಂದು ತಿಳಿದುಬರುತ್ತದೆ. ಇಲ್ಲಿರುವ ಈ ಬೃಹದಾಕಾರವಾದ ಗೋಡಂಬಿ ಮರವನ್ನು, ಅದರ ವಿಸ್ತಾರವನ್ನು ಕಂಡು ನಾವೆಲ್ಲಾ ಬೆರಗಾದೆವು. ಈ ಮರ ಮುಖ್ಯ ಕಾಂಡ ಕಾಣಸಿಗದಷ್ಟು ಹರವಾಗಿ ಬೆಳೆದಿವೆ. ಈ ಮರದ ವಿಸ್ತಾರವನ್ನು ನೋಡಲು, ಪ್ರವಾಸಿಗರಿಗೆ ಒಂದು ಎತ್ತರವಾದ ಅಟ್ಟಣೆಯನ್ನು ನಿರ್ಮಿಸಿದ್ದಾರೆ. ಇದರ ಶಾಖೆಗಳಂತೂ ಎಷ್ಟರ ಮಟ್ಟಿಗೆ ವಿಸ್ತರಿಸಿವೆ ಎಂದರೆ, ಅಟ್ಟಣಿಗೆಯ ಮೇಲೆ ನಿಂತು ನೋಡಿದರೆ, ಕಾಡಿನಲ್ಲಿ

ಬೆಳೆಯುವ ಹೆಮ್ಮರಗಳ ಮೇಲ್ಚಪ್ಪರದಂತೆ ಕಾಣುತ್ತದೆ. ನಿತ್ಯಹರಿದ್ವರ್ಣ ಮರವಾದ ಗೋಡಂಬಿಯನ್ನು, ಆಂಗ್ಲಭಾಷೆಯಲ್ಲಿ Anacardium occidentale ಎನ್ನುವರು. ಮಾವಿನಮರದ ಜಾತಿಗೆ ಸೇರಿದ ಈ ಮರ, ಬ್ರೆಜ಼ಿಲಿನ ಈ ಈಶಾನ್ಯಭಾಗದಲ್ಲೇ ಉತ್ಪತ್ತಿಯಾದ ಮರವೆಂದು ಸಸ್ಯಶಾಸ್ತ್ರ ಓದಿದ ನನಗೆ ತಿಳಿದಿತ್ತು. ಆದರೆ ಇದನ್ನು ಈ ದೇಶದಲ್ಲಿ ಕಾಣುವ ಅವಕಾಶ ಸಿಕ್ಕಬಹುದೆಂದು ತಿಳಿದಿರಲಿಲ್ಲ. 8,500 ಚದುರ ಮೀಟರ್ಗಳಷ್ಟು ಪಸರಿಸಿರುವ ಈ ಮರ ಪ್ರತಿ ವರ್ಷ ಸುಮಾರು 80,000 ಗೇರುಹಣ್ಣುಗಳನ್ನು ಉತ್ಪಾದಿಸುತ್ತದೆ. ನವೆಂಬರ್ ನಿಂದ ಜನವರಿಯವರೆಗೆ ಬೆಳೆಯುವ ಈ ಹಣ್ಣುಗಳನ್ನು ಮಾರದೇ, ಇಲ್ಲಿ ಬರುವ ಪ್ರವಾಸಿಗರಿಗೆ ತಿನ್ನಲು ಈ ಹಣ್ಣುಗಳನ್ನು ನೀಡುವ ಬ್ರೆಜ಼ಿಲಿಯನ್ನರ ಔದಾರ್ಯಕ್ಕೆ ತಲೆದೂಗಿದೆ. ಈ ಅಮೋಘವಾದ ಅಸಾಮಾನ್ಯ ಮರದ ವಯಸ್ಸು ೧೨೦ ವರ್ಷಗಳಂತೆ! ಈ ವಯೋವೃಕ್ಷದ ಕಾಂಡ ಮತ್ತು ಶಾಖೆಗಳನ್ನು ಸುರಕ್ಷಿತವಾಗಿಡಲು, ಇದರ ಸುತ್ತಲೂ ಮರದ ಬೇಲಿಗಳನ್ನು ನಿರ್ಮಿಸಿದ್ದಾರೆ.
ನಮ್ಮ ಪ್ರವಾಸದ ಕಡೆಯಲ್ಲಿ, ಇಲ್ಲಿಯ ಭೌತಶಾಸ್ತ್ರ ವಿಭಾಗದವರು ಏರ್ಪಡಿಸಿದ್ದ, ಒಂದು ದಿನದ ವನವಿಹಾರದಲ್ಲಿ, ಪ್ರಾಯ ದಿ ಪಿಪ್ಪ ಎನ್ನುವ ಸ್ಥಳಕ್ಕೆ ಕರೆದೊಯ್ದರು. ನಟಾಲಿನಿಂದ ಸುಮಾರು ೨ ಗಂಟೆಗಳ ದೂರದಲ್ಲಿರುವ ಈ ಜಾಗದಲ್ಲಿ ಅತ್ಯುತ್ತಮ ಸಾಗರ ತೀರಗಳಿವೆ. ದಾರಿಯುದ್ದಕ್ಕೂ ಹರಡಿದ ಕಬ್ಬಿನ ಗದ್ದೆಗಳು, ಹಸಿರಿನಿಂದ ತೊನೆದಾಡುತ್ತಿದ್ದವು. ಈ ಹಸಿರ ರಾಶಿಯ ಮಧ್ಯದಲ್ಲಿ ಹಾರಾಡುವ ಹಕ್ಕಿಗಳು, ವಿನೂತನ ಶಾಂತಿಯ ವಾತಾವರಣವನ್ನು ಸೃಷ್ಟಿಸಿದ್ದವು. ನಾವು ಹೋದ ಜಾಗದಲ್ಲಿ ಹಲವಾರು ಐಶಾರಾಮದ ರೆಸಾರ್ಟುಗಳಿದ್ದು, ಪ್ರತಿ ರೆಸಾರ್ಟಿಗೂ ಅದರದೇ ಆದ ಖಾಸಗಿ ಬೀಚುಗಳಿದ್ದವು. ಇದೊಂದು ಕೊಲ್ಲಿ; ಈ ತೀರಕ್ಕೆ ದಿನದಲ್ಲಿ ಒಂದು ಬಾರಿ ಡಾಲ್ಫಿನ್ ಮೀನುಗಳು ಬರುವುದರಿಂದ, ಈ ಸ್ಥಳವನ್ನು Dolphin Bay ಎಂದೇ ಕರೆಯುತ್ತಾರಂತೆ.
ಭೂಮಧ್ಯರೇಖೆಗೆ ಹತ್ತಿರದಲ್ಲಿರುವ ಬ್ರೆಜ಼ಿಲಿನ ವೈವಿಧ್ಯಮಯ ಸಸ್ಯ-ಪ್ರಾಣಿವರ್ಗಗಳ ಜೊತೆಗೆ, ಪ್ರಪಂಚದ ಅತ್ಯಂತ ದೊಡ್ಡ ನದಿ ಅಮೆಜ಼ಾನಿನ ಜಲಸಂಪತ್ತನ್ನು ಪಡೆದ ಈ ಬೃಹದ್ ದೇಶದ ಆರ್ಥಿಕ ಬೆಳವಣಿಗೆಯೂ ಮಹತ್ತರವಾಗಿ ನೆಡೆದಿದೆ. ಚಿಲಿ ಮತ್ತು ಈಕ್ವೆಡಾರ್ ದೇಶಗಳನ್ನು ಬಿಟ್ಟು, ದಕ್ಷಿಣ ಅಮೆರಿಕೆಯ ಎಲ್ಲಾ ದೇಶಗಳ ಜೊತೆಗೆ ತನ್ನ ಸೀಮಾರೇಖೆಯನ್ನು ಹಂಚಿಕೊಂಡಿರುವ ಈ ಬೃಹತ್ ದೇಶವನ್ನು ಒಂದೇ ಬಾರಿಗೆ ನೋಡುವುದು ಅಸಾಧ್ಯವಾದ ಮಾತು. ಮುಂದೆಂದಾದರೂ ಮತ್ತೊಮ್ಮೆ ಇಲ್ಲಿಗೆ ಬರುವ ಆಸೆ ಹೊತ್ತ ನಾವು, ಪ್ರವಾಸದಲ್ಲಿ ತೆಗೆದ ಚಿತ್ರಗಳೊಂದಿಗೆ, ಸವಿನೆನಪುಗಳ ಚಿತ್ರಶಾಲೆಯನ್ನೇ ಮನದಲ್ಲಿ ತುಂಬಿಕೊಂಡು ಮರಳಿಬಂದೆವು. ಮುಂದೆ ಸಸ್ಯಶಾಸ್ತ್ರದ ಸಮ್ಮೇಳನಕ್ಕೆ ಹೋಗುವ ಅವಕಾಶ ದೊರೆಯಬಹುದು ಎನ್ನುವ ಕಿರು ಆಸೆಯ ಸಣ್ಣ ಜ್ಯೋತಿಯೊಂದು ನನ್ನ ಮನದಲ್ಲಿ ಉರಿಯುತ್ತಿದೆ!
Dr Uma Venkatesh, Post Doctoral Scientist, Department of Plant Biology, Plant Genomics Lab, Penn State University, State College, Pennsylvania, USA
ಉಮಾ, ಎಂದಿನಂತೆ ನಿಮ್ಮ ಪ್ರವಾಸ ಕಥನಗಳು ವಿಶಿಷ್ಟ. ಒಂದಷ್ಟು ಮಾಹಿತಿ, ಇನ್ನೊಂದಷ್ಟು ಅನುಭವ – ಒಗ್ಗರಣೆಗೆ ಸಾಹಿತ್ಯಸಲ್ಲಾಪ. ಇಷ್ಟವಾಯಿತು. ವಿನತೆ
LikeLike
ಸುಂದರ ಚಿತ್ರಗಳು ಮತ್ತು ಆಪ್ತ ಬರಹ. ಬ್ರೆಝಿಲ್ ಯಾವಾಗ ನೋಡುತ್ತೇನೋ ಗೊತ್ತಿಲ್ಲ, ಆದರೆ ಅದನ್ನು ಬಕೆಟ್ ಲಿಸ್ಟಿನಲ್ಲಿ ಸೇರಿಸಿದ್ದೇನೆ, ನಿಮ್ಮ ಲೇಖನ ಓದಿ. ಇನ್ನೂ ಪ್ರವಾಸ ಮಾಡಿ ಬರೆಯುತ್ತಿರಿ, ನಾವು ಓದಿ ಸವಿಯುತ್ತೇವೆ.
LikeLiked by 1 person
ಉಮಾ ಅವರು ಈ ಎರಡನೆಯ ಕಂತಿನಲ್ಲಿಯೂ ಓದುಗನಿಗೆ ತಮ್ಮ ಪ್ರವಾಸದ ವಿವರಣೆಯ ಜೊತೆಗೆ ಅವನ ಕುತೂಹಲವನ್ನೂ ಹಿಡಿದಿಡುವ ಬರವಣಿಗೆ ಇದೆ. ಅವರ ಬರಹಗಳಲ್ಲಿ The child is father of man ಎನ್ನುವಂತೆ ಅವರನ್ನು ರೂಪಿಸಿರಬಹುದಾದ ಬಾಲ್ಯದ ಓದು ಮತ್ತು ಅನುಭವಗಳು ಇಣುಕುತ್ತಿರುತ್ತವೆ! ಅವು ಮತ್ತು flora and fauna ಗಳ ವರ್ಣನೆ ಅವರ ಕಥನಕ್ಕೆ ಇನ್ನಷ್ಟು ಮೆರಗು ಕೊಡುತ್ತವೆ. ಅವರು ಹೋಗಲಿರುವ ಪ್ರವಾಸದ ಯಾದಿ ಇನ್ನೂ ಉದ್ದ ಬೆಳೆಯಲಿ!
LikeLiked by 1 person