ಸುದರ್ಶನ್ ಸಧ್ಯದವರೆಗೂ ಇಂಗ್ಲೆಂಡಿನಲ್ಲಿ ಅರಿವಳಿಕೆ ಶಾಸ್ತ್ರಜ್ಞರಾಗಿ ಕೆಲಸ ಮಾಡಿ ಕೆನಡಾಕ್ಕೆ ಹಾರಿದ್ದಾರೆ. ಅನಿವಾಸಿ ಬಳಗದವರಿಗೆಲ್ಲ ಚಿರಪರಿಚಿತ. ಅವರ ನೀಳ್ಗವಿತೆಗಳು ಹಿಂದೆಯೂ ಅನಿವಾಸಿ ಅಂಗಳದಲ್ಲಿ ಬೆಳಕು ಕಂಡಿವೆ. ದೂರದೂರಿನಿಂದ ಸುದರ್ಶನ್ ಇಂದಿಗೂ ನಮ್ಮ ಜಾಲತಾಣವನ್ನು ಪ್ರೋತ್ಸಾಹಿಸುತ್ತಿರುವುದು ಅನುಕರಣೀಯ.
ದೇಶಗಳ ಮೇರೆ ಮೀರಿ ಇಂದಿನ ಸಾಮಾಜಿಕ- ರಾಜಕೀಯ ಪರಿಸ್ಥಿತಿಗಳನ್ನು ಪ್ರತಿಧ್ವನಿಸುವಲ್ಲಿ ಈ ಕವನ ಯಶಸ್ವಿಯಾಗಿದೆ. ಕವಿತೆಗೆ ಪೂರಕವಾಗಿ ಅನಿವಾಸಿಯ ‘ನಿವಾಸಿ’ ಕಲಾವಿದ ಲಕ್ಷ್ಮೀನಾರಾಯಣ ಗುಡೂರ್, ಸುಂದರವಾದ ಚಿತ್ರ ರಚಿಸಿದ್ದಾರೆ.
ತೋಳ -ಕುರಿ ನ್ಯಾಯ
ಕುರಿಯು ಒಂದು ನೀರು ಕುಡಿಯಲೆಂದು
ತೊರೆಯ ಬಳಿಗೆ ಬಂದು
ಹರಿವ ತೊರೆಯ ನೀರಿನಲ್ಲಿ ಬಾಯಿಯಿಟ್ಟಿತು
ಹೊಟ್ಟೆ ತುಂಬಿದಂಥ ಕುರಿಯ
ದಾಹ ತಣಿಸುವಂಥ ತೊರೆಯ
ನೀರು ಕುಡಿಯೆ ಸ್ವರ್ಗ ಅಲ್ಲೆ ಸಿಕ್ಕಿಬಿಟ್ಟಿತು
ಅಷ್ಟರಲ್ಲೆ ಅಲ್ಲಿಗೊಂದು
ದುಷ್ಟತೋಳವೊಂದು ಬಂದು
ದೃಷ್ಟಿಯನ್ನು ಅತ್ತ ಇತ್ತ ಹಾಯ ಬಿಟ್ಟಿತು
ಉಂಡು ದುಂಡಗಿತ್ತು ಕುರಿಯು
ಕಂಡು ಕೆರಳಿ ಹೊಟ್ಟೆ ಉರಿಯು
ಭಂಡ ತೋಳ ತಿನ್ನಲದನು ಹೊಂಚು ಹಾಕಿತು
ಇಂದು ಕುರಿಯ ಮೇಲೆ ಹಾರಿ
ಕೊಂದು ರಕ್ತವನ್ನು ಹೀರಿ
ತಿಂದುಬಿಡಲು ಧೂರ್ತನೆಂದು ಹೆಸರು ಕೆಡುವುದು
ಹೆಸರು ನನ್ನದುಳಿಯಬೇಕು
ಕೆಸರು ಕುರಿಗೆ ಬಳಿಯಬೇಕು
ಹಸಿವು ನನಗೆ ಕಳೆಯ ಬೇಕು ಏನು ಮಾಳ್ಪುದು
ಅಲ್ಲೆ ಒಂದು ಹೊಂಚು ಹೊಸೆದು
ಕಾಲು ಕೆರೆದು ಜಗಳ ತೆಗೆದು
ಮೂಲ ದೋಷ ಕುರಿಯ ಮೇಲೆ ಹೇರ ತೊಡಗಿತು
ಎಲವೋ ಅಹಂಕಾರಿ ಕುರಿಯೆ
ನೆಲೆಯು ನಿನ್ನದೇನು ಅರಿಯೆ
ಜಲವನೆಲ್ಲ ಎಂಜಲೇಕೆ ಮಾಡುತಿರುವೆಯೊ?
ಕುರಿಯು ಹೆಜ್ಜೆ ಹಿಂದೆ ಹೋಗಿ
ಹಿರಿಯ ವೃಕಕೆ ತಲೆಯ ಬಾಗಿ
ಅರಿಕೆಯನ್ನು ವಿನಯದಿಂದ ತಾನು ಮಾಡಿತು
ದೈವ ಕರುಣೆ ಹರಿವ ನೀರು
ತಾವು ಅದನು ಕೇಳಲ್ಯಾರು
ನೀವು ನನ್ನ ಪಾಡಿಗೆನ್ನ ಬಿಡಿರಿ ಎಂದಿತು
ಇಷ್ಟು ತಿಳಿಯದೇನೊ ಕುರಿಯೆ
ಎಷ್ಟು ಸೊಕ್ಕು ನಿನಗೆ, ಸರಿಯೆ?
ಅಷ್ಟು ನೀರು ಎಂಜಲಾಗಿ ನನಗೆ ಬಂದಿದೆ
ನಿನ್ನ ಎಂಜಲುಣುವ ಜೀವಿ
ನಾನು ಅಲ್ಲ ಎನುವ ಠೀವಿ
ನಿನಗೆ ತಿಳಿಸಲೇನು ಎಂದು ಹುಯಿಲು ಮಾಡಿತು
ಕುರಿಯು ಕುಡಿದ ನೀರು ಮುಂದೆ
ಹರಿದು ಹೋಯಿತೆನ್ನ ತಂದೆ
ಹರಿದು ಈಗ ಬರುವ ಜಲವ ಕುಡಿಯಿರೆನ್ನಲು
ಕುರಿಯು ಬಾಯಿ ಇಟ್ಟರಾಯ್ತು
ನೀರು ಮಲಿನವಾಗಿ ಹೋಯ್ತು
ಹರಿದು ಕೆಳಗೆ ಬರುವ ನೀರ ಕುಡಿಯಲಾಗದು
ಭಂಡವಾದ ಹೂಡಿ ತೋಳ
ಮೊಂಡು ಹಟವ ಮಾಡಿ ಕೊರಳ
ಖಂಡಗಳನು ಉಬ್ಬಿಸುತ್ತ ಕೂಗಿ ಮೊರೆಯಿತು
ಕಾಲ ಮಿಂಚಿ ತಪ್ಪು ಆಯ್ತು
ಮೇಲಕೇರಿ ಕುಡಿದರಾಯ್ತು
ನೀವು ಕುಡಿದು ಬಿಟ್ಟ ನೀರ ನಾವು ಕುಡಿವೆವು
ನಿನ್ನದೊಂದೆ ಎಂಜಲಲ್ಲ
ನಿನ್ನ ತಂದೆ ತಾತರೆಲ್ಲ
ಮುನ್ನ ತೊರೆಯ ತುಂಬ ಎಂಜಲಾಗಿಸಿರುವರು
ನಿಮ್ಮ ವಾದ ಬಹಳ ಜಟಿಲ
ಮೂಲಧ್ಯೇಯವಂತು ಕುಟಿಲ
ಜಲವನರಸಿ ತೊರೆಗೆ ಮುಂದೆ ಬಾರೆನೆನ್ನಲು
ಅನ್ನಕಾಗಿ ಹಸಿದ ತೋಳ
ತಿನ್ನಲೆಂದು ರಸದ ಕವಳ
ಇನ್ನು ರೋಷದಿಂದ ಜೋರು ಮಾಡಿ ಕೂಗಿತು
ಭಿಕ್ಷೆ ಏನು ಬೇಡ ನನಗೆ
ಶಿಕ್ಷೆಯಾಗಬೇಕು ನಿನಗೆ
ವಕ್ಷವನ್ನು ಸೀಳಿ ನಿನಗೆ ಪಾಠ ಕಲಿಸುವೆ
ಕುರಿಯ ಮೇಲೆ ಹೊರಿಸಿ ಲೋಪ
ದುರುಳತನಕೆ ಸುಳ್ಳ ಲೇಪ
ಮರುಳುಗೊಳಿಸಿ ಲೋಕಕೆಲ್ಲ ಮಂಕು ಎರಚುವೆ
ನನ್ನ ಆಗ ಎಲ್ಲ ಹೊಗಳಿ
ಕುರಿಯ ಬುದ್ಢಿಯನ್ನು ತೆಗಳಿ
ಎನ್ನ ಘನತೆ ಲೋಕದಲ್ಲಿ ವೃದ್ದ್ಧಿಗೊಳಿಸುವೆ
ಮಿಂಚಿನಂತೆ ಮೇಲೆ ನೆಗೆದು
ಹೊಂಚಿ ಕುರಿಯ ಪ್ರಾಣ ತೆಗೆದು
ಕಂಚು ಕಂಠದಿಂದ ಜಗಕೆ ಕೂಗಿ ಹೇಳಿತು
ಹಾಳು ಕುರಿಯೆ ದುಷ್ಟ ದುರುಳ
ತೋಳ ನೀನು ಬಹಳ ಸರಳ
ಕೊಳಕು ತೊಳೆದ ನ್ಯಾಯ ವಾದಿ ನೀನೆ ಎನ್ನುತ
ಅಂಧರಂತೆ ಲೋಕವೆಲ್ಲ
ತೋಳ ಸ್ತುತಿಯ ಮಾಡಿತಲ್ಲ
ಒಳಗೆ ಮೆರೆದು ಮದಿಸುತಿತ್ತು ತೋಳ ಹಿಗ್ಗುತ
ಶಕ್ತರೆಂದು ಲೋಕದಲ್ಲಿ
ಯುಕ್ತ ಮಂಕು ಬೂದಿಚೆಲ್ಲಿ
ಮುಕ್ತವಾಗಿ ತಮ್ಮ ಬೇಳೆ ಬೇಯ್ಸಿಕೊಳುತಿರೆ
ದೀನರೆಲ್ಲ ಕುರಿಗಳಾಗಿ
ಕಾಯ್ವ ಜನರು ತೋಳವಾಗಿ
ನೀತಿ ನಿಯಮ ತೋಳಕಾಗಿ ಜಗವು ನಡೆದಿರೆ!!!
-ಡಾ. ಸುದರ್ಶನ ಗುರುರಾಜರಾವ್