ಜಪಾನಿನಲ್ಲಿ ಹೈಕುಗಳಿದ್ದಂತೆ ಬೇರೆ ಭಾಷೆಗಳಲ್ಲಿ ಏನಿದೆಯೋ ಗೊತ್ತಿಲ್ಲ. ಕನ್ನಡದಲ್ಲಿ ಚುಟುಕುಗಳಿವೆ, ಹನಿಗವನಗಳಿವೆ. ಆದರೆ, ಚುಟುಕುಗಳು ಎಂದ ತಕ್ಷಣ ನಗೆ ಉಕ್ಕಿಸುವಂಥ ಚಾಟಿಗಳು ಎಂದೇ ಅಂದುಕೊಳ್ಳುತ್ತೇವೆ, ಹನಿಗವನಗಳು ಎಂದ ತಕ್ಷಣ ಮಯೂರ, ತುಷಾರ ಪತ್ರಿಕೆಗಳ ಸವಕಲು ಫಿಲ್ಲರ್ಸ್ ಅಂದುಕೊಳ್ಲುತ್ಟೇವೆ. ಆದ್ದರಿಂದ ಚುಟುಕುಗಳು ಅತಥವಾ ಹನಿಗವನಗಳು ಹೈಕುಗಳಲ್ಲ. ಹೈಕುಗಳಂತೆ ಕೆಲವೇ ಕೆಲವು ಸಾಲುಗಳಲ್ಲಿ ಸಾಗರ ಹಿಡಿದಿಡುವುದಿಲ್ಲ. ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, `ನೀಲು` ಎನ್ನುವ ಹೆಸರಿನಲ್ಲಿ `ಲಂಕೇಶ್ ಪತ್ರಿಕೆ`ಯಲ್ಲಿ ವಾರಕ್ಕೆ ನಾಕಾರು ಬರೆಯುತ್ತಿದ್ದರು. `ನೀಲು` ಕೆಲವೇ ಕೆಲವು ಸಾಲುಗಳಲ್ಲಿ ಏನೆಲ್ಲವನ್ನು ಹೇಳುತ್ತಿದ್ದಳು! ಪ್ರೀತಿ, ಪ್ರೇಮ, ಕಾಮ, ಮೋಹ, ದಾಹ, ದ್ವೇಷ, ರಾಜಕೀಯ, ಧರ್ಮ, ಝೆನ್…
ಕನ್ನಡದಲ್ಲಿ ಅಂಥ ಒಂದು ಕಾವ್ಯ ಪ್ರಕಾರಕ್ಕೆ ‘ನೀಲುಗಳು’ ಎಂದು ನಾಮಕರಣ ಮಾಡಬಹುದೇ? ನಾನಂತೂ ಮಾಡಿದ್ದೇನೆ. ಆಗಾಗ ನಾನು `ನೀಲು`ವಿನ ಹೆಸರಿನಲ್ಲಿ ಬರೆದ ಒಂದಿಪ್ಪತ್ತು ನೀಲುಗಳು ಇಲ್ಲಿವೆ.
೧
ಲಂಡನ್ನಿನ ರಸ್ತೆಗಳಲ್ಲಿ
ನಡೆಯುವಾಗ
ಮಳೆ ಬಂದರೆ
ಮಣ್ಣಿನ ವಾಸನೆ
ಬರುವುದೇ ಇಲ್ಲ
೨
ತಲೆ ಕೂದಲಿಗೆ ಬಣ್ಣ ಹಾಕಿಕೊಳ್ಳುವಾಗ
ಕನ್ನಡಿಯಲ್ಲಿ
ಎದೆಯ ಮೇಲಿನ ಬಿಳಿಕೂದಲು ಕಂಡು
ಗಾಬರಿಯಾದ ನನ್ನ ಗಂಡ
೩
ಅದನ್ನು
ಶಬ್ದಗಳಲ್ಲಿ ಹೇಳಲು
ಬರುವುದಿಲ್ಲ
ಆದರೆ ಶಬ್ದಗಳಲ್ಲಿ ಹೇಳದೇ
ವಿಧಿಯಿಲ್ಲ
ಎನ್ನುವವಳು ಕವಿತೆ
ಬರೆಯಲು ಅಡ್ಡಿಯಿಲ್ಲ
೪
ಭರಪೂರ ಬಿಸಿಲು
ಕೆರೆಯಲ್ಲಿ ಈಸುವ
ಎಮ್ಮೆಯ ಕಣ್ಣುಗಳು
೫
ಮನೆ ಕೆಲಸದವಳು
ತಡವಾಗಿ ಬಂದಾಗ ಅಥವಾ ಬರದಿದ್ದಾಗ
ಮಗುವಿನ ಅನಾರೋಗ್ಯದ ಕಾರಣ ಕೊಡುತ್ತಿದುದು
ಶುದ್ಧ ಸುಳ್ಳು ಎಂದುಕೊಂಡಿದ್ದೆ
ನನಗೆ ಮಗುವಾಗುವವರೆಗೂ
೬
ಹರೆಯದಲ್ಲಿ
ಕದ್ದು ಮುಚ್ಚಿ ಮಾಡಿಯೂ ಮಾಡದ ಪ್ರೇಮಪ್ರಕರಣಗಳು
ಮುಪ್ಪಿನಲ್ಲಿ
ಆತ್ಮಕತೆ ಬರೆಯುವಾಗ
ರೆಕ್ಕೆ ಪುಕ್ಕ ಬಂದು
’ಛೇ! ಹಾಗೆ ಮಾಡಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಚಿನಾಲಿ!’
ಎಂದು ಬಯ್ದವು
೭
`ಧ್ಯಾನದಿಂದ ಏನು ಸಿಗುತ್ತದೆ,`
ಎಂದು ಕೇಳಿದ
ಝೆನ್ ಗುರು ಹೇಳಿದ,
`ನಥಿಂಗ್ ಸಿಗುತ್ತದೆ`
೮
ನೀನು
ಗಡ್ಡದಲ್ಲಿ ಕೈಯಾಡಿಸುವ
ರೀತಿಯಲ್ಲೇ
ಒಂದು ತರಹದ
ಕವಿತೆ ಇದೆ
೯
ಒಳ್ಳೆಯ ಕೆಲಸಗಳು
ಕೆಟ್ಟ ಕೆಲಸಗಳು ಕೊಡುವ
ಸುಖ ಮತ್ತು ಖುಷಿ
ಕೊಡುವಂತಿದ್ದರೆ
ಬದುಕು ಎಷ್ಟು
ಚೆನ್ನಾಗಿರುತ್ತಿತ್ತಲ್ಲವೇ, ಗೆಳತಿ?
೧೦
ಅಹಂಕಾರವಿಲ್ಲದ ಪ್ರತಿಭಾವಂತೆ
ಸಿಕ್ಕರೂ ಸಿಗಬಹುದು
ಅಹಂಕಾರವಿಲ್ಲದ ಸುಂದರಿ
ಇನ್ನೂ ಸಿಕ್ಕಿಲ್ಲ
೧೧
ನನ್ನ ಮಗ ಮುಂದೊಂದು ದಿನ
ಇನ್ನೊಂದು ಹೆಣ್ಣಿನ ಬಾಳು ಸೇರಿದರೂ
ನನ್ನ ಮಗನಾಗಿಯೇ ಉಳಿಯಬೇಕು,
ನನ್ನ ಗಂಡ ತನ್ನ ತಾಯಿಯ ಮಾತು ಕೇಳದ
ಬರೀ ನನ್ನವನಾಗಿರಬೇಕು
ಎನ್ನುವ ಇಬ್ಬಂದಿತನದಲ್ಲೇ
ಹೆಣ್ತನವಿದೆಯೇ?
೧೨
ತನಗಿಂತ
ತನ್ನ ಶಿಲ್ಪ
ಹೆಚ್ಚು ಸುಂದರಿ ಎಂದು
ಶಿಲ್ಪವನ್ನು ಧ್ವಂಸ ಮಾಡಿ
ಶಿಲ್ಪಿಯನ್ನೇ ಕೊಲ್ಲಿಸಿದ
ರಾಣಿಯ ಕತೆ
ಹೇಳಲೇ?
೧೩
ಕಂದಾಯವಿಲ್ಲದೇ
ಸುಲಿಗೆಯಿಲ್ಲದೇ
ಗುಲಾಮರಿಲ್ಲದೇ
ಎಷ್ಟುಕೊಟ್ಟರಷ್ಟಕ್ಕೆ ದುಡಿವ
ಬಡವರಿಲ್ಲದೇ
ತಾಜಮಹಲುಗಳಿರುತ್ತಿದ್ದವೇ?
ಪಿರಮಿಡ್ಡುಗಳಿರುತ್ತಿದ್ದವೇ?
೧೪
ಆ ಹುಡುಗಿಗೆ
ಹಾರಲು ಬರುತ್ತಿತ್ತು
ಅವಳಮ್ಮ
ನಿನಗೆ ರೆಕ್ಕೆಗಳಿಲ್ಲ
ಎಂದು ಹೇಳುವವರೆಗೂ!
೧೫
ಮೊದಲ ಸಲಕ್ಕೇ ಸಿಕ್ಕಿಬಿಟ್ಟರೆ
ಕವಿತೆ ಕತೆ ಸಿನೆಮಾ
ಮತ್ತು ಪ್ರೇಮ
ಹುಚ್ಚು ಹಿಡಿಸುವುದಿಲ್ಲ
೧೬
ಅರ್ಥಕ್ಕೆ ಅರ್ಥವಿಲ್ಲವೆಂದು
ಎಲ್ಲ ಅರ್ಥಕ್ಕೂ
ಕೃಷ್ಣಾರ್ಪಣ ಎಂದು ತರ್ಪಣ ಬಿಟ್ಟು
ಅಗರ್ಭ ಶ್ರೀಮಂತನೊಬ್ಬ
ಜೋಳಿಗೆ ತಂಬೂರಿ ಹಿಡಿದು
ಪುರಂದರದಾಸನಾಗಿ
ಅರ್ಥಕಂಡುಕೊಂಡ
೧೭
ಏಕಾಂತಕ್ಕೂ
ಒಂಟಿತನಕ್ಕೂ
ಇರುವ ಅಂತರ
ಸ್ವರ್ಗ ಮತ್ತು ನರಕ
೧೮
ಇರದ ಕೊನೆ ಮೆಟ್ಟಿಲನ್ನು
ಇಳಿಯಹೋಗಿ
ಕಾಲು ಉಳುಕಿಸಿಕೊಂಡು
ಕತ್ತಲಿಗೆ ಬಯ್ದವರಲ್ಲಿ
ನೀವೂ ಒಬ್ಬರಲ್ಲವೇ?
೧೯
ದೇವರೇ,
ಅವರವರು ಹೇಗಿದ್ದಾರೋ
ಹಾಗೆಯೇ ಒಪ್ಪಿಕೊಳುವ
ದೊಡ್ಡತನವಾನ್ನಾದರೂ ಕೊಡು
ಇಲ್ಲಾ ಅವರು ಹೇಗಿದ್ದಾರೆ ಎನ್ನುವುದು
ಅರ್ಥವಾಗದಿರುವ
ದಡ್ಡತನವನ್ನಾದರೂ ಕೊಡು
೨೦
ಬದುಕು
ಸಹ್ಯವಾಗಿರಬೇಕಾದರೆ
ಸುಳ್ಳುಗಳನ್ನು ಹೇಳುತ್ತಲೇ
ಇರಬೇಕು
ಬೇರೆಯವರಿಗೂ
ನಮಗೂ
Bahala ghanavaada arthagarbhita hanigalu
LikeLike
ಕೇಶವ ಕುಲಕರ್ಣಿಯವರ “ನೀಲು” ಗಳು ದಿನನಿತ್ಯದ ಜೀವನ ಸತ್ಯವನ್ನು ನಯವಾಗಿ ಹೇಳುತ್ತ , ಮರೆತು ಮೈಮರೆಯಲೆಳಸುವ ಮನವನ್ನ ಸುಂದರವಾಗಿ ವಾಸ್ತವದತ್ತ ಎಳೆಯುತ್ತಿವೆ.ಏನೇನೂ ಕಷ್ಟವಿಲ್ಲದೇ ,ಸರಳ ಸುಂದರ ಪದಗಳಲ್ಲಿ ದೊಡ್ಡ ವೇದಾಂತ ಎನುವದಕಿಂತ ಸುತ್ತಲೂ ನಡೆಯುತ್ತಿರುವ,ನಾವೇ ಆ ಕೃತಿಗಳ ರೂವಾರಿಯಾಗಿದ್ದರೂ ಅರಿಯದಂತಿರುವ ಮನವನ್ನ. ಹೊಗುವ ಪರಿ ಅದ್ಬುತ. ದೊಡ್ಡತನವಿಲ್ಲದಿದ್ದರೂ ದಡ್ಡತನವಿರಲಿ , ಹೇಳಲಾಗದ್ದನ್ನ ಕವಿತೆಯಲ್ಲಿ ಹೇಳು ,ಕೆಳಗಿನ ಮೆಟ್ಟಿಲಿದೆ ಅಂತ ಕಾಲು ಉಳುಕಿಸಿಕೊಳ್ಳುವುದು ,ಹೆಣ್ಣಿನ ಮನದ ಇಬ್ಬಂದಿ ಇವೆಲ್ಲ ಹೌದಲ್ಲ ಇದು ನಾವೇ ” ಎನ್ನುವಂತೆ ಮಾಡುವಲ್ಲಿ ನಮ್ಮನ್ನ ಅಚ್ಚರಿಯಲ್ಲೋ ,ಒಂದು ವಿಡಂಬನೆಯ ನಗುವಲ್ಲೋ ಮುಳುಗಿಸುವುದು ಖಂಡಿತ.ನಿಮ್ಮ ಇನ್ನಷ್ಟು ” ನೀಲು ” ಗಳನ್ನ ಕಳಿಸಿ ಕೇಶವ ಕುಲಕರ್ಣಿಯವರೇ.ಪದ್ಯದ ಈ ರೂಪ ತುಂಬಾ ಹೃದ್ಯವೇನೋ ಎನಿಸುತ್ತದೆ.
ಸರೋಜಿನಿ ಪಡಸಲಗಿ
LikeLiked by 1 person
ಎಲೆ ಮರೆ ಮಾಚಿದ ಕಣ್ಣು ಕೋರೈಸುವ ಬೆಳಕನ್ನಇದುರಿಗೇ ನಿಂತಿದ್ದರೂ ಕಣ್ಣಿಗೆ ಕಾಣದ ಸತ್ಯಗಳನ್ನು ‘ಗಾಗರ್ ಮೇ ಸಾಗರ್ ತುಂಬುವ ಅನುಭವಗಳನ್ನು ಇಂಥ ಪುಟ್ಟ ಪದ್ಯಗಳಲ್ಲಿ ಹಿಡಿದಿಡುವ ಸಾಹಸ ‘ನೀಲಿ‘ ಕೇಶವ ಅವರದು!. ಕೆಲವನ್ನು ಈ ಮೊದಲೇ ಓದಿದ್ದರೂ ಹೊಸ ಅರ್ಥಗಳು ಹೊರಬಂದವು. ಈಗಾಗಲೆ ಸೆಂಚ್ರಿ ದಾಟಿದ್ದಾರು!
LikeLiked by 1 person
ಕೇಶವ್ ೭೦ – ೮೦ ರ ದಶಕಗಳಲ್ಲಿ, ಲಂಕೇಶ್ ಬಿತ್ತಿದ ನವ್ಯ, ಕ್ರಾಂತಿಕಾರಿ ಬೀಜ ಆ ಪೀಳಿಗೆಯ ತರುಣರನ್ನು ಬಹಳಷ್ಟು ಪ್ರೇರೇಪಿಸಿತ್ತು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ನವೀನ ಮಾದರಿಯ ಕವನಗಳು ಮತ್ತು ಚಲನಚಿತ್ರಗಳನ್ನು ಸೃಷ್ಟಿಸಿದ ಲಂಕೇಶರ ಪ್ರಭಾವ ನಿಮ್ಮ ಮೇಲೆ ಬೀರಿದೆ ಎನ್ನುವುದನ್ನು ನೀವೇ ಹೇಳಿದ್ದೀರಿ. ನಿಮ್ಮ “ನೀಲುಗಳು“ ಅದಕ್ಕೆ ಸಾಕ್ಷಿ. ನಿಮ್ಮಮಾತು ನಿಜ. ಈ ಅನನ್ಯವಾದ ಚುಟುಕಗಳಲ್ಲಿ, ಜೀವನದ ವಿವಿಧ ಮುಖಗಳ ಬಗ್ಗೆ ರಸವತ್ತಾಗಿ ಬರೆಯುವ ಕಲೆ ಎಲ್ಲರಿಗೂ ಇಲ್ಲ. ಅದೂ ಒಂದು ಪ್ರತಿಭೆಯೇ ಸರಿ! “ಲಂಡನ್ನಿನ ರಸ್ತೆಗಳಲ್ಲಿ ನಡೆಯುವಾಗ, ನಮ್ಮಲ್ಲಿ ಬರುವ ಮಣ್ಣಿನ ಆ ವಾಸನೆ ಇರುವುದಿಲ್ಲ ಎನ್ನುವುದು ನಿಜ“ ಆದರೆ ಅದನ್ನು ಕವನದಲ್ಲಿಳಿಸ ಬೇಕು ಎನ್ನುವುದು ನನಗೆ ಹೊಳದೇ ಇರಲಿಲ್ಲ. ಇನ್ನೂ ಹೆಚ್ಚಿನ ನೀಲುಗಳನ್ನು ಸೃಷ್ಟಿಸಿ!
ಉಮಾ ವೆಂಕಟೇಶ್
LikeLiked by 1 person
sakhatagive
LikeLiked by 1 person
ಚಂದದ ಕವನಗಳು
LikeLiked by 1 person