ಬದುಕಿನ ಹಾಸು ಹೊಕ್ಕಾಗಿ ಸುರಿವ ‘ಇಂಗ್ಲೆಂಡಿನಲ್ಲಿ ಮಳೆ’ – ಡಾ. ಜಿ.ಎಸ್. ಶಿವಪ್ರಸಾದ್ ಬರೆದ ಕವನ

ನಮ್ಮ ‘ಅನಿವಾಸಿ’ ಗುಂಪಿನ ಸಕ್ರಿಯ ಬರಹಗಾರರಾದ ಡಾ. ಜಿ.ಎಸ್. ಶಿವಪ್ರಸಾದ್ ರಿಗೆ ಕಳೆದ ತಿಂಗಳು ಆಗಸ್ಟ್ ನಲ್ಲಿ ಅರವತ್ತು ತುಂಬಿದ ಸಂಭ್ರಮ. ಸರಿ, ಅವರ ಕುಟುಂಬದವರು, ಸ್ನೇಹಿತರು ಸುಮ್ಮನಿದ್ದರೆ?! ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮವನ್ನು ನಡೆಸೇಬಿಟ್ಟರು. ಆ ಸಂಭ್ರಮದಲ್ಲಿ ಪಾಲ್ಗೊಂಡವರಿಗೆ ಕಾದಿತ್ತು ಸರ್ ಪ್ರೈಸ್! ಶಿವಪ್ರಸಾದ್ ರಿಗೆ ಎಲ್ಲರೂ ಕೊಡುವ ಉಡುಗೊರೆಯ ಮಾತಿರಲಿ, ಅವರೇ ಎಲ್ಲರಿಗೂ ತಮ್ಮ ಕವನಗಳ ಉಡುಗೊರೆಯನ್ನು (ಪುಸ್ತಕ ಬಿಡುಗಡೆ) ಕೊಟ್ಟು ಸತ್ಕರಿಸಿದರು. ಹಾಂ, ಆ ಸಮಾರಂಭದ ಬಗ್ಗೆ “ಅನಿವಾಸಿ” ಜಾಲ ಜಗುಲಿಯಲ್ಲಿ ಸೆಪ್ಟೆಂಬರ್ ೯ ರ ಇಂಗ್ಲೆಂಡಿನ ಕನ್ನಡಿಗ ಮತ್ತು ಹುಟ್ಟುಹಬ್ಬ – ಡಾ. ಪ್ರೇಮಲತ ಬಿ.ಲೇಖನವನ್ನು ಓದಿ, ಮತ್ತಷ್ಟು ಆಸಕ್ತ ವಿವರಗಳು ಸಿಗುತ್ತವೆ . ಈ ಶುಕ್ರವಾರದ ಜಗುಲಿಯಲ್ಲಿ ಶಿವಪ್ರಸಾದ್ ರ ಮೊದಲ ದ್ವಿಭಾಷಿಕ ಕವನ ಸಂಗ್ರಹದಿಂದ ಆಯ್ದ ಒಂದು ಕವನವಿದೆ, ತಪ್ಪದೆ ಓದಿ. – ಸಂ.

ಇಂಗ್ಲೆಂಡಿನಲ್ಲಿ ಮಳೆ

 

ಮಳೆ, ಮಳೆ, ಜಡಿ ಮಳೆ%e0%b2%9c%e0%b2%bf%e0%b2%a8%e0%b3%81%e0%b2%97%e0%b2%bf-%e0%b2%9c%e0%b2%bf%e0%b2%a8%e0%b3%81%e0%b2%97%e0%b2%bf-%e0%b2%9c%e0%b2%bf%e0%b2%97%e0%b3%81%e0%b2%aa%e0%b3%8d%e0%b2%b8%e0%b3%86-%e0%b2%a4

ಹಗಲಿರುಳು ಸುರಿಯುವ ಮಳೆ

ಜಿನುಗಿ, ಜಿನುಗಿ, ಜಿಗುಪ್ಸೆ ತರುವ ಮಳೆ

ಹಲವೊಮ್ಮೆ

ಹದವಾಗಿ ಇಳಿಯುವ ತುಂತುರು ಮಳೆ

 

%e0%b2%95%e0%b2%a3%e0%b3%8d%e0%b2%a3%e0%b2%bf%e0%b2%97%e0%b3%86-%e0%b2%a4%e0%b2%82%e0%b2%aa%e0%b2%a8%e0%b3%8d%e0%b2%a8%e0%b3%80%e0%b2%af%e0%b3%81%e0%b2%b5-%e0%b2%ae%e0%b2%b3%e0%b3%86

 

ನಾಡಿನ ಅಡಿಯಿಂದ ಮುಡಿಯವರೆಗೆ

ಹಸಿರು ಮೂಡಿಸಿ

ಕಣ್ಣಿಗೆ ತಂಪನ್ನೀಯುವ ಮಳೆ

ಮೋಡ ಕಟ್ಟಿ ಮಬ್ಬು ಕವಿದ

ಬೇಸರ ದಿನಗಳ ಹಿಂದೆ ಮಳೆ

 

 ಹೆನ್ರಿ ದೊರೆ ದಂಡೆತ್ತಿ ಹೋದಾಗ

ವಿಜಯೊತ್ಸಾಹದಲಿ ಸುರಿದ ಮಳೆ

ಆನ್ ಬಲೀನಳ ಶಿರಚ್ಛೇದನವಾಗಿ

ರುಂಡ ಉರುಳಿದಾಗ ರೋದಿಸಿದ ಮಳೆ

ಶತಮಾನಗಳ ಇತಿಹಾಸದಲಿ

ಬೆರತು ಮಣ್ಣಾದ ಮಳೆ

 

ಟೆನ್ನಿಸ್ ರಾಣಿ ವೀನಸ್ ಆಟ ಕಾವೇರಿದಾಗಅವತರಿಸಿದ ಮಳೆ.jpg

ಹೃದಯ ಮಿಡಿತಗಳ ಹಿಡಿದಿಟ್ಟ ಮಳೆ

ಎಲಿಜ಼ಬತ್ ರಾಣಿ ಹುಟ್ಟು ಹಬ್ಬದ

ಸಡಗರವನ್ನಡಗಿಸಲು ಅವತರಿಸಿದ ಮಳೆ

 

ಹಲವು ಬಿಳಿ ತಲೆಗಳ ಒಳಗೆ

ವರ್ಣ ಭೇದ (ರೇಸಿಸಮ್)  ಭಾವನೆಗಳ

ತೊಳೆಯಲೆತ್ನಿಸಿ ವಿಫಲವಾದ ಮಳೆ

 

ಇಂಗ್ಲಿಷ್ ಸಂಸ್ಕೃತಿಯ ಸೌಜನ್ಯ

ನಯ ನಾಜೂಕುಗಳ ಬದುಕಿನ

ಹಾಸು ಹೊಕ್ಕಾಗಿ, ಸಾರಿ, ಥ್ಯಾಂಕ್ಯುಗಳ

ನಡುವೆ ಎಡಬಿಡದೆ ಸುರಿಯುವ ಮಳೆ

 

ಡಾ. ಜಿ.ಎಸ್. ಶಿವಪ್ರಸಾದ್

7 thoughts on “ಬದುಕಿನ ಹಾಸು ಹೊಕ್ಕಾಗಿ ಸುರಿವ ‘ಇಂಗ್ಲೆಂಡಿನಲ್ಲಿ ಮಳೆ’ – ಡಾ. ಜಿ.ಎಸ್. ಶಿವಪ್ರಸಾದ್ ಬರೆದ ಕವನ

  1. ಉಮಾ ಅವರೇ ‘ರವಿ ಕಾಣದ್ದನ್ನು ಕವಿಕಂಡ’ ಎಂಬ ವಿಚಾರ ಬಂದಾಗ ಮೋಡ ಮುಸುಕಿದ ಇಂಗ್ಲೆಂಡಿನಲ್ಲಿ ರವಿಗೆ ಪಾಪ ಏನು ಕಾಣುವುದಿಲ್ಲ! ಆಗೊಮ್ಮೆಈಗೊಮ್ಮೆ ಇಣುಕಿ ನೋಡುತ್ತಾನೆ ಅಷ್ಟೆ

    Like

    • ನಿಮ್ಮ ಮಾತು ನಿಜವೇ! ಇಂಗ್ಲೆಂಡಿನಲ್ಲಿ ರವಿಯ ಮುಖಾರವಿಂದವನ್ನು ಕಾಣುವುದೇ ಅಪರೂಪ. ಕಂಡಾಗ ಕವಿಯ ಹೃದಯದಲ್ಲಿ ಉಕ್ಕೇರುವ ಸ್ಫೂರ್ತಿಯಲ್ಲಿ, ಅವನ ಲೇಖನಿಯಲ್ಲಿ ಇಂತಹ ಉತ್ತಮ ಕವನಗಳು ತಾನೇತಾನಾಗಿ ಹೊರಬೀಳುತ್ತವೆ.
      ಉಮಾ ವೆಂಕಟೇಶ್

      Like

  2. ಇಂಗ್ಲೆಂಡ್ ನ ಮಳೆಯನ್ನು ಸುಂದರವಾಗಿ ಹದವಾಗಿ ಅಲ್ಲಿನ ಘಟನಾವಳಿಗಳೊಂದಿಗೆ ಬೆರೆಸಿ ವರ್ಣಿಸಿದ ವರ್ಣಮಯ ಕವನ .ಅಲ್ಲಿಯ ಮಳೆಯನ್ನು ನೋಡಿರದಿದ್ದರೂ ಶಿವಪ್ರಸಾದರ ಕವನ , ನನ್ನ ಕಲ್ಪನೆಗೂ ರೆಕ್ಕೆ ಪುಕ್ಕ ಹಚ್ಚಿ ಆ ಮಳೆಯಲ್ಲಿ ನೆಂದು ಮಿಂದು ಉಲ್ಲಸಿತವಾಗುವಂತೆ ಮಾಡುತ್ತಿದೆ ಅಂದರೆ ಅತಿಶಯೋಕ್ತಿಯೇನಲ್ಲ .ಜೊತೆಗೆ ಎಲ್ಲಿ ಏನಾದರೂ ನಾನು ನಿರ್ಬಾಧಿತ ಎನ್ನುವ ಕಾಲನ ಸಂದೇಶವೂ ಅಲ್ಲಿದೆ .ತುಂಬಾ ಒಳ್ಳೆಯ ಕವನ ಡಾ. ಶಿವಪ್ರಸಾದ್ ಅವರೇ
    ಸರೋಜಿನಿ ಪಡಸಲಗಿ

    Like

  3. ಬಹುಕಾಲದಿಂದ ಇಂಗ್ಲಂಡಿನಲ್ಲಿ ವಾಸಿಸುತ್ತಿರುವ ನಾವು ಕಾಣುತ್ತಿರುವ ದಿನನಿತ್ಯದ ಸತ್ಯ ಈ ಮಳೆ,ಯಾರಿಗೂ ಸೊಪ್ಪು ಹಾಕೊಲ್ಲ, ಯಾವ ಋತುವನ್ನೂ ಬಿಡೊಲ್ಲ! ಟೆಸ್ಟ್ ಮ್ಯಾಚನ್ನೂ ಬಿಟ್ಟಿಲ್ಲ. ಇಂಗ್ಲಿಷ್ನಲ್ಲಿ ಒಂದು ಮಾತಿದೆ: Time and tide wait for no man ಎಂದು. ಅದಕ್ಕೆ (rain) ಮಳೆಯನ್ನೂ ಜೋಡಿಸ ಬೇಕು. Quintessential Englishman ಕೈಯಲ್ಲಿ ಕೊಡೆಯಿರಲೇ ಬೇಕು, ಆ ಪಂಚ ಭೂತಗಳಲ್ಲೊಂದಾದ ನೀರಿನಿಂದ ರಕ್ಷಿಸಿಕೊಳ್ಳಲು. (ಆ quin -ಐದು ಅದನ್ನೇ ಸೂಚಿಸುತ್ತದೆ.). ಇಲ್ಲಿ ಅನುಭವಿ ಕವಿ ಮಳೆಯನ್ನು ನಿಲ್ಲಿಸಲಾರದ ಆಂಗ್ಲರ ಚಾರಿತ್ರಿಕ ಘಟನೆಗಳ ವರ್ಣನೆಯ ಮಧ್ಯೆ ಅವರ ಚರಿತ್ರೆಯ ಬಗ್ಗೆ ಒಂದು ಮರ್ಮಕ್ಕೆ ನಾಟುವ ಸತ್ಯವನ್ನೂ(ರೇಸಿಸಂ) ಹೂಳಿದ್ದಾರೆ: ಅದು ”ಮಲವ ತೊಳೆಯಬಲ್ಲಿರಲ್ಲದೆ ಮನವ ತೊಳೆಯಬಲ್ಲಿರೆ” ಎಂಬ ದಾಸವಾಣಿಯ ನೆನಪು ತರುತ್ತದೆ!

    Like

  4. ಇಂಗ್ಲೆಂಡಿನಲ್ಲಿ ವಾಸವಿರುವ ಜನಗಳಿಗೆ ಅಲ್ಲಿಯ ಹವಾಮಾನದ ಬಗ್ಗೆ ಚರ್ಚೆ ನಡೆಸುವುದು ಒಂದು ಸಂಸ್ಕೃತಿಯ ವಿಷಯವೆನಿಸಿದೆ. ಅಂತಹ ದೇಶದಲ್ಲಿ ಎರಡು ದಶಕಗಳಿಂದ ವಾಸವಿರುವ ಪ್ರಸಾದ್ ಅವರ ಕವಿ ಹೃದಯ ಅಲ್ಲಿಯ ಮಳೆಯ ಬಗ್ಗೆ ಕವನ ರಚಿಸಿರುವುದು ಸಹಜವಾದ ವಿಷಯ. ಆದರೆ ಅದನ್ನು ವರ್ಣಿಸಿರುವ ವೈಖರಿ ಸುಂದರವಾಗಿದೆ. ಇಂಗ್ಲೆಂಡಿನ ಚಾರಿತ್ರಿಕ ಘಟನೆಗಳೊಂದಿಗೆ ಮಳೆಯ ವೈಷಿಷ್ಟ್ಯತೆಯನ್ನು ಬೆರೆಸಿ, ಅಲ್ಲಿನ ನೀರಸವಾದ ಹವಾಮಾನಕ್ಕೆ ಕಳೆನೀಡಿದ್ದಾರೆ. ಎಲಿಜ಼ಬೆತ್ ರಾಣಿಯ ಹುಟ್ಟುಹಬ್ಬದ ಸಂಭ್ರಮವಾಗಲಿ, ಹೆನ್ರಿ ದೊರೆಯ ದಂಡಯಾತ್ರೆಯಾಗಲಿ, ಆನ್ ಬಲೀನಳ ಶಿರಚ್ಛೇಧನವಾಗಲಿ, ಇಂದಿನ ಟೆನಿಸ್ ಆಟದ ರಾಣಿ ವೀನಸ್ ವಿಲಿಯಮ್ಮಳ ಆಟದ ಸಂಭ್ರಮವಾಗಲಿ, ಮಳೆಯ ಸುರಿಯುವಿಕೆ ನಿಲ್ಲದು. ಆ ವಿಷಯ ಎಲ್ಲರಿಗೂ ತಿಳಿದರೂ, ಅದನ್ನು ಕವನದಲ್ಲಿ ಸೆರೆ ಹಿಡಿದು ಅದರ ಸೊಬಗನ್ನು ಹೆಚ್ಚಿಸುವ ಕಲೆ ಶಿವಪ್ರಸಾದರ ಕವಿಹೃದಯಕ್ಕೆ ಮಾತ್ರ ಸಾಧ್ಯ! “ರವಿ ಕಾಣದ್ದನ್ನು ಕವಿ ಕಂಡ“ ಎನ್ನುವ ನಾಣ್ಣುಡಿ ನೂರಕ್ಕೆ ನೂರು ಸತ್ಯ.
    ಉಮಾ ವೆಂಕಟೇಶ್

    Liked by 1 person

  5. ಇಲ್ಲಿ ಬಳಸಿರುವ ಚಿತ್ರಗಳು ಅಂತರ್ ಜಾಲದಲ್ಲಿ ಲಭ್ಯವಾದದ್ದು.
    The generic images used in this blog came from various sources on the Internet.

    Like

  6. ಒಪ್ಪಲೇಬೇಕಾದ ಕವನ. ಇಂಗ್ಲೆಂಡಿನ ಮಳೆಯೆನ್ನುವುದು ಯಾರಿಗೆ ಗೊತ್ತಿಲ್ಲ? ಅದರ ಸುತ್ತ ನಡೆವ ಐಹಿಕ ಲೋಕದ ಘಟನೆಗಳಿಗೆ ಇದು ಕುರುಡು. ಹಾಗಾಗಿ ರಾಣಿಯನ್ನೂ ಬಿಟ್ಟಿಲ್ಲ!!
    ಇವೆಲ್ಲವನ್ನೂ ಸೊಗಸಾಗಿ ಹಿಡಿದಿಟ್ಟಿದೆ ಈ ಕವನ.

    Like

Leave a comment

This site uses Akismet to reduce spam. Learn how your comment data is processed.