ಸಾಂಗತ್ಯ
ಸೂಜಿ ಮೊನೆಯ ಚೂಪಿನಂತೆ
ನಿನ್ನ ಹೊಳಪು, ಝಳುಪು
ಅದಕ್ಕೆಂದೇ ದಾರವಾಗಿ ಅಂಟಿದ್ದೇನೆ
ಇನ್ನೊಂದು ತುದಿಯಲ್ಲಿ,
ನಯವಾಗಿ ಸಾಗಿದೆ, ಬದುಕು!!!
ಮೇಕಪ್ಪು ?!
ಗಂಡಸಿಗೇಕೆ ಬೇಕು ಮೇಕಪ್ಪು
ತಪ್ಪಿ ನುಡಿದಾಗಲೆಲ್ಲ
ಮಾಡುವ ತಪ್ಪುಗಳನ್ನೆಲ್ಲ
ಹೆಂಡತಿ ಸರಿತೂಗಿಸಿ ಮಾಡುವಾಗ make-up ಉ?
ತಂತ್ರ
ಗಮನಿಸುವ ಸೂಕ್ಷ್ಮವಿಲ್ಲವೆಂಬ ದೂರು
ತಾನು ತೊಡುವ ಉಡುಗೆ-ತೊಡುಗೆ
ಗಮನಿಸಿದರೆ ಅತಿಯಾಯ್ತು ಎನ್ನುವ ಕೋಪ-ತಾಪ
ಹದಿನಾರು ಸಾವಿರ ಹುಡುಗಿಯರ
ಹೇಗೆ ಗೆದ್ದೆಯೋ, ಹೇಳಿಕೊಡು ಗೋಪ!!?
ದೂರು
ಬೇಗ ವಯಸ್ಸಾಗುವುದಿಲ್ಲ ಗಂಡಸರಿಗೆ
ಎನ್ನುತ್ತ ಕೊರಗುವರು ಹೆಂಗಸರು
ಹೆಂಗಸಿನ ತಗಾದೆಗಿಲ್ಲ ಮೊನೆ
ತನ್ನ ಹೆಂಡತಿ ಅವಳಂತಿಲ್ಲ,ಹದಿನಾರಲ್ಲ
ಎನ್ನುತ್ತ ಚಂಚಲರು ಗಂಡಸರು
ಗಂಡಸಿನ ಚಪಲಕ್ಕಿಲ್ಲ ಕೊನೆ!!!
ಕಡಿವಾಣ
ನಿಧಾನ ಗತಿ ಗಂಡಸಲ್ಲಿ ವಯಸ್ಸು
ಗೊತ್ತು ಗುರಿಯಿಲ್ಲದ ಹುಮ್ಮಸ್ಸು
ಚಂಚಲ ಚಪಲಚಿತ್ತ ಮನಸ್ಸು
ಕಡಿವಾಣಕ್ಕೆ ಬೇಕೊಬ್ಬ ಹೆಂಗಸು!!!
ಹೆಣ್ಣಿಗೆ ಗಂಡನ ಮೇಲೆ, ಗಂಡಿಗೆ ಹೆಂಡತಿ ಮೇಲೆ ದೂರುಗಳ ಸರಮಾಲೆ. ಆದರೇನು ಇಬ್ಬರೂ ಒಬ್ಬರ ಬಿಟ್ಟು ಇನ್ನೊಬ್ಬರು ಇರಲಾರರು. ಹೀಗೆ ದೂರಿಕೊಂಡೇ ನಡೆಯುವುದು ಸಂಸಾರದ ರಥ. ಪ್ರೇಮಲತಾ ದಿನನಿತ್ಯದ ದೂರುಗಳ ಮರೆಯಲ್ಲಿ ನಡೆಯುವ ಹೆಣ್ಣು ಗಂಡಿನ ಸಮರಸದ ಜೀವನವನ್ನು ತಮ್ಮ ಸುಂದರವಾದ ಪದಗಳಲ್ಲಿ ಹಿಡಿದಿಟ್ಟು ಚಿತ್ರಿಸಿದ್ದಾರೆ.
ಉಮಾ ವೆಂಕಟೇಶ್
LikeLike
ಪ್ರೇಮಲತಾರಿಗೆ
ನಮಸ್ಕಾರ. ನಿಮ್ಮ ಚುಟುಕುಗಳನ್ನು ಓದಿ, ಗಂಡ ಹೆಂಡಂದಿರಲ್ಲಿ ಸದಾ ನೆಲಿಸಿರಬೇಕಾದ ಸರಸ,ಸಲ್ಲಾಪ,ಪ್ರೇಮಗಳಿಂದ ಹೊಂದಿಕೊಂಡು ನಡೆದುಕೊಂಡಲ್ಲಿ ಜೀವನ
ಆನಂದಮಯವಾಗುವದೇ ಸರಿ ಎಂದು ಪುನಃ ಜ್ಞಾಪಕಕ್ಕೆ ಬಂದಿತು. ಇದನ್ನೆಲ್ಲ ನಿಮ್ಮ ಚಿಟುಕುಗಳಲ್ಲಿ ಕಂಡು ಬರುವವು. “ಸಮರಸವೇ ಜೀವನ”.
ಅರವಿಂದ
LikeLike
ಆತ ತನ್ನನ್ನು ಗಮನಿಸುತ್ತಿಲ್ಲ ಅಂತ ದೂರುತ್ತ ,ಒಮ್ಮೆ ಅತಿಯಾಯ್ತು ಅಂತ ಕೋಪ ತೋರುತ್ತ ,ಆತನ ತಪ್ಪುಗಳನ್ನ ಮೇಕಪ್ ಮಾಡುತ್ತ ,ಹದಿನಾರರ ಚಲುವನ್ನೇ ಅರಸುವ ಚಂಚಲತೆಗೆ ಕಡಿವಾಣ ಹಾಕುತ್ತಾ ,ಸೂಜಿ ಮೊನೆಯಂತಿರುವ ಆತನ ಜೊತೆಗೆ ದಾರದಂತೆ ಹೊಂದಿಕೊಂಡು ನಯವಾಗಿ ಬದುಕು ಸಾಗಿಸುವ ರಮ್ಯ ಬಾಳ ಚಿತ್ರಣ.ಶೃಂಗಾರ ಮಾಸ ಶ್ರಾವಣದಲ್ಲಿ ಸರಸ ,ಶೃಂಗಾರಮಯ ಜೀವನದ ಸುಂದರ ನೇಯ್ಗೆಯ ಅಪರೂಪದ. ಕಾಣಿಕೆ.ಧನ್ಯವಾದಗಳು ಪ್ರೇಮಲತಾ ಅವರೇ.
ಸರೋಜಿನಿ ಪಡಸಲಗಿ
LikeLike
ಈ ದಿನದ ಶ್ರಾವಣ ಶುಕ್ರವಾರದಂದು ಸಮಯೋಚಿತವಾಗಿ ಪ್ರಕಟವಾದ ಚುಟುಕಗಳಿವು! ಅಲ್ಲಿ ಗರತಿಯರು ಶ್ರಾವಣದ ಹಾಡು ಹಾಡುತ್ತಿದ್ದಂತೆ ನವ ಯುಗದ ದಾಂಪತ್ಯದ (ಅಥವಾ ರಿಲೇಷನ್‍ಶಿಪ್ ಅನ್ನಿ) ಜೀವನಕ್ಕೆ ಪ್ರೇಮಲತಾ ಅವರು ಹಿಡಿದ ಕನ್ನಡಿಯಲ್ಲಿ, ಹೊಳಪಿದೆ, ಮೊನಚಿದೆ, ನಯವಾಗಿ ಸಾಗಬೇಕಾದ ಬದುಕಿನ ಚಿತ್ರವಿದೆ, ಅವರಿಗೆ ಭಾಷೆಯ ಮೇಲೆಯೂ (!) ಪ್ರಭುವತ್ವವಿದೆ. ಬರಹಗಾರ್ತಿ ಮೊನೆಯಿಲ್ಲದ ಹೆಂಗಸಿನ ತಗಾದೆಯನ್ನರಿತವರು, ಹೊಳಪು ಝಳಪಿನ ಸೂಜಿಮೊನೆಯಾಗಿ ಅಂಟಿದ ದಾರದ ಮೇಲೆ ಸೂಜಿಯ ಕಣ್ಣಿಟ್ಟವರು,(ಅಥವಾ ಅದು ಆತನದೋ?), ಕಡಿವಾಣದ ಅವಶ್ಯಕತೆಯನ್ನರಿತವರು. ಈ ಚಿಕ್ಕ ಚುಟುಕಗಳ ಸಂಗ್ರಹದಲ್ಲಿ ಕಂಡ ಒಂದೊಂದು ರಸವನ್ನೂ ಅಸ್ವಾದಿಸಿದೆ. ಮುಂದಿನ ಶ್ರಾವಣ ಶುಕ್ರವಾರದಂದು ಏನು ಕಾದಿದೆಯೋ!
LikeLiked by 1 person