ಜನ ಮರುಳೋ ಜಾತ್ರೆ ಮರುಳೋ -ಪ್ರತಿಮಾ ಪರಾಂಜಪೆ ಬರೆದ ಹರಟೆ

shopping
ಶಾಪಿಂಗ್

ನಾವು ಇಂಗ್ಲೆಂಡ್ ಗೆ ಹೊಸದಾಗಿ ಬಂದ ದಿನಗಳವು. ಆಗ ನಾವು ಮೊದಲಿಗೆ ಬಂದಿಳಿದಿದ್ದು ನನ್ನ ಮನೆಯವರ ಸಹೋದ್ಯೋಗಿ ಮಿತ್ರರ ಮನೆಯಲ್ಲಿ. ವಾರಾಂತ್ಯಕ್ಕೆ ಮೊದಲ ಬಾರಿ “ಟೌನ್” ನೋಡಲು ಹೋದಾಗ ಏನಾದರೂ ಖರೀದಿಸುವುದಿದೆಯಾ ಎಂದು ನಮ್ಮನ್ನು ‘Peacock’, ‘Debenhams’ ಹೀಗೆ ಬೇರೆ ಬೇರೆ ಅಂಗಡಿಗಳಿಗೆ ಕರೆದುಕೊಂಡು ಹೋದರು. ಮಹಿಳಾ ಸಹಜ ಗುಣದಂತೆ ನನಗೂ ಶೋಪಿಂಗ್‌ನಲ್ಲಿ ಆಸಕ್ತಿ. ಹಾಗೆ ಪ್ರತಿಯೊಂದು ಬಟ್ಟೆ ತೆಗೆದು ನೋಡುತ್ತಾ ಹೋದೆ. ಆದರೆ ಬೆಲೆ ನೋಡಿ ಕಂಗಾಲಾದೆ. ಹಾಂ!!!! 1500, 4000 ರೂಪಾಯಿಗಳು??? ಪ್ರತಿಯೊಂದರ ಬೆಲೆ ನೋಡಿದಾಕ್ಷಣ ಮನಸ್ಸು ಅದರ ಬೆಲೆಯನ್ನು ರೂಪಾಯಿಯಲ್ಲಿ ಹೇಳುತ್ತಿತ್ತು. ಅಬ್ಬಬ್ಬಾ!! ಹೀಗಾದರೆ ನಾನಿಲ್ಲಿ ಬಟ್ಟೆ ಖರೀದಿಸುವ ಆಸೆಯನ್ನೇ ಬಿಟ್ಟುಬಿಡಬೇಕೆಂದು ಸುಮ್ಮನಾದೆ. ಹೀಗೆ ಕೆಲದಿನಗಳು ಅಲ್ಲಲ್ಲಿ ‘ವಿಂಡೋ ಶಾಪಿಂಗ್’ ಮಾಡಿ ದಿನನಿತ್ಯಕ್ಕೆ ಬೇಕಾಗುವ ಹಾಲು, ತರಕಾರಿ, ಹಣ್ಣು ತೆಗೆದುಕೊಂಡು ಮನೆಗೆ ಬರುತ್ತಿದ್ದೆ.

ಕೆಲ ದಿನಗಳು ಕಳೆದ ಮೇಲೆ ಒಂದು ಶನಿವಾರ ಬೆಳಗ್ಗೆ ನನ್ನ ಸ್ನೇಹಿತೆಯೊಬ್ಬಳು ಕರೆ ಮಾಡಿ “ಏನ್ಮಾಡ್ತಿದ್ದೀಯಾ ?” ಅಂತ ಕೇಳಿದ್ಲು. “ಏನಿಲ್ಲಾ, ಆರಾಮವಾಗಿ ಎದ್ದು ತಿಂಡಿ ತಿನ್ನುತ್ತಾ ಕೂತಿದ್ದೀವಿ” ಅಂದೆ. “ವಿಷಯ ಗೊತ್ತಿದೆಯಾ?, JJB Shop close ಆಗ್ತಾ ಇದೆ, closing down sale ನಡೀತಾ ಇದೆ ಬೇಗ ಬನ್ನಿ ಅಂದಳು”. ಅಲ್ಲಿ ತನಕ ಇಲ್ಲಿಯ ಸೇಲ್ ಗಳ ರುಚಿ ಗೊತ್ತಿಲ್ಲದಿರೋ ನಾವು ತಯಾರಾಗಿ ಶಾಪ್ ತಲುಪಿದ್ರೆ ಬಾಗಿಲು ಅರ್ಧ ಮುಚ್ಚಿತ್ತು. ಕರೆ ಮಾಡಿ ಒಳಗಿದ್ದ ನನ್ನ ಸ್ನೇಹಿತೆಯನ್ನ ಹೊರಗೆ ಕರೆಯಿಸಿಕೊಂಡ್ವಿ. ಅವಳು ಹೊರಬಂದು ಇವರು ನಮ್ಮ ಜೊತೆಗೆ ಇದ್ದವರು ಅಂತ ಹೇಳಿ ನಮ್ಮನ್ನು ಒಳಗೆ ಕರೆದುಕೊಂಡು ಹೋದಳು. ಅಲ್ಲಿ ಇಲ್ಲಿ ಎಲ್ಲ ಬ್ರ್ಯಾಂಡೆಡ್ ಬಟ್ಟೆ, ಶೂ, ಜ್ಯಾಕೆಟ್ ತುಂಬಾ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದನ್ನು ನೋಡಿ ಖುಷಿಯೋ ಖುಷಿ. ನಾವೂ ಒಂದಿಷ್ಟು ಖರೀದಿ ಮಾಡಿದ್ವಿ. ಇಂಗ್ಲೆಂಡ್ ಗೆ ಬಂದಮೇಲೆ ಮೊದಲಬಾರಿಗೆ ಮನಸ್ಸಪೂರ್ತಿ ಖರೀದಿ ಮಾಡಿದುದರ ಆನಂದ ನನಗಾಗಿತ್ತು.

ಅಲ್ಲಿಂದ ಮುಂದೆ ಇಲ್ಲಿಯ ಒಂದೊಂದೇ ಸೇಲ್ ಗಳ ಪರಿಚಯ ಆಗ್ತಾ ಬಂತು. End of Season Sale, Winter Sale, Summer Sale, Closing Down Sale, Boxing Day Sale… ವ್ಹಾ! ವ್ಹಾ!!! ಆನಂದವೋ ಆನಂದ. ನಮ್ಮ ಮಿತ್ರರೊಬ್ಬರು ಯಾವಾಗಲೂ ಹೊರಹೋದಾಗ ಸೇಲ್, ಸೇಲ್ ಅಂದ್ರೆ ಚೆನ್ನಾಗಿರಲ್ಲ ಅಂತ “ಸಾಲೆ, ಸಾಲೆ” ಅನ್ನುತ್ತಿದ್ದರು. ನಿಜವಾಗಿಯೂ ಇಲ್ಲಿಯ ಸೇಲ್ ಗಳು ಅದ್ಭುತ ವಿಷಯವೇ. ಯಾವಾಗ ಯಾವ ವಸ್ತುವೂ ನಿಮಗೆ ಬೇಕಾದ ಬೆಲೆಯಲ್ಲಿ ಸಿಗಬಹುದು. ನಮಲ್ಲಿ ಕಾಯುವ ತಾಳ್ಮೆ ಇರಬೇಕು ಅಷ್ಟೇ!!

ಸೇಲ್ ಗಳಲ್ಲಿ “Next Half Price Sale” ತುಂಬಾ ಚಿರಪರಿಚಿತ. ಮುಂಜಾನೆಯೇ 4.30 ರಿಂದ ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡುವವರನ್ನು ನೋಡುವಾಗ, ನನ್ನಂತೆ ಬಹಳಷ್ಟು ಜನ ಇದ್ದಾರೆ ಸೇಲ್ ಇಷ್ಟ ಪಡೋರು, ನಾನೊಬ್ಬಳೇ ಅಲ್ಲ ಅಂತ ಏನೋ ಮನಸ್ಸಲ್ಲಿ ಸಮಾಧಾನವೂ, ಖುಷಿಯೂ ಆಗುತ್ತದೆ.

ಇನ್ನು ಈ ಸೇಲ್ ಗಳ ಮೇಲೆ ಬಹಳಷ್ಟು ಟಿಪ್ಸಗಳೂ ಸಿಕ್ಕಿವೆ.

– ಸೇಲ್ ನ ಮೊದಲನೇ ದಿನ ನಮಗೆ ಬೇಕಾಗಿರುವ ಬಟ್ಟೆ, ವಸ್ತು ಎಲ್ಲಿವೆ ಅಂತ ನೋಡಿಟ್ಟುಕೊಳ್ಳುವುದು.
– ಬಟ್ಟೆ ಆರಿಸಿಕೊಳ್ಳಲು ತುಂಬಾ ಹೊತ್ತು ಮಾಡದೆ ತಮಗೆ ಇಷ್ಟವಾದ ಎಲ್ಲ ಬಟ್ಟೆಗಳನ್ನು ತರುವುದು. ಹಿಂದಿರುಗಿಸುವ ವರದಾನ ಇದ್ದೇಇದೆಯಲ್ಲಾ !! ಮನೆಯಲ್ಲಿ ತಮಗೆ ಬೇಕಾಗಿರೋ, ಸರಿಯಾಗೋ ಬಟ್ಟೆಗಳನ್ನ ಆರಿಸಿದರಾಯಿತು.
– ಮಕ್ಕಳು, ಗಂಡನನ್ನು ಮನೆಯಲ್ಲೇ ಬಿಟ್ಟು ಹೋಗುವುದು.
– ನಮ್ಮ ಅಂದಾಜಿಗಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋಗುವುದು [ಕಾರ್ಡ್ ಜೊತೆಗಿದ್ದರೆ ಯಾವಾಗಲೂ ಒಳ್ಳೆಯದು]
– ಇದು ನಮ್ಮೂರಿಗೆ ಸಂಬಂಧ ಪಟ್ಟಿದ್ದು. ASDAಗೆ ಗುರುವಾರ ಹೆಚ್ಚಾಗಿ ಭೇಟಿ ನೀಡುವುದು. ಯಾಕೆಂದರೆ ಇಲ್ಲಿ ಗುರುವಾರವೇ ಹೆಚ್ಚಾಗಿ ಸೇಲ್ ಹಾಕುತ್ತಾರೆ [ಸೀಸನ್ ಟೈಮ್ ನಲ್ಲಿ]

ಹೀಗೆ ಹಲವಾರು ಟಿಪ್ಸ್‌ಗಳು ನನಗೆ ನನ್ನ ಸ್ನೇಹಿತೆಯರಿಂದ ಲಭ್ಯವಾಗಿದೆ. ಸಂಶಯವೇ ಇಲ್ಲಾ , ತುಂಬಾ ಉಪಕಾರಿಯೇ!

ನನ್ನ ಗೆಳತಿಗಾದ ಕಷ್ಟ ನಿಮ್ಮ ಜೊತೆ ಹಂಚಿಕೊಳ್ಳಲೇ ಬೇಕು. ಈಗ ನಡೀತಿರೋ ‘Summer sale’ ಗೆ ಏನೂ ಖರೀದಿ ಮಾಡಲೇಬಾರದು ಅಂತ ಅಂದುಕೊಂಡಿದ್ಲಂತೆ.”‘New Look sale’ ಯಾವತ್ತೂ ಬಿಟ್ಟು ಬರೋಲ್ಲ ಆದ್ರೂ ಈ ಬಾರಿ ಆ ಕಡೆ ಹೋದರೂ ಒಳಗೆ ಹೋಗಲೇ ಇಲ್ಲ. ಹೊರಗಿಂದ ನೋಡಿದೆ, ನನ್ನ ಅಳತೆಗೆ ಆಗಿ ಬರೋ ಒಳ್ಳೆ ಡ್ರೆಸ್ ಕಾಣಿಸ್ತು. ಬರೀ ಎಂಟೇ ಪೌಂಡ್. ಒಳಗೆ ಹೋಗಿ ಖರೀದಿಸಿ ಬಿಡುತ್ತೇನೆ ಅಂದ್ಕೊಂಡೆ. ಆದ್ರೂ ದೃಢ ಮನಸ್ಸು ಮಾಡಿ ಹಾಗೆ ಮನೆಗೆ ಬಂದೆ. ಮನೆಗೇನೋ ಬಂದೆ ಆದ್ರೆ ಮನಸ್ಸು ಆ ಡ್ರೆಸ್ ಅಕ್ಕಪಕ್ಕನೇ ಉಳಿದುಹೋಯಿತು. ಅಯ್ಯೋ!!! ಬರೀ 8 ಪೌಂಡ್ ಗೋಸ್ಕರ ಯಾಕಿಷ್ಟು ಯೋಚನೆ ಮಾಡ್ತಿದ್ದೀನಿ ಅನ್ನಿಸ್ತು. ಸುಮ್ನೆ ತಂದು ಬಿಡಬೇಕಾಗಿತ್ತು. ಮುಂದೆ ಸಿಗುತ್ತೊ ಇಲ್ಲವೋ ಅಂತ ಅದೇ ಅದೇ ಯೋಚನೆ. ಏನೇ ಇರಲಿ ನಾಳೆ ಮತ್ತೆ ಹೋಗ್ತೀನಿ. ನನ್ನ ಅಳತೆ ಸಿಗದೇ ಹೋದರೆ ಸಮಾಧಾನ ಆಗಬಹುದು. ತಗೋಬೇಕು ಅಂತ ಇದ್ದೆ ಆದ್ರೆ ನನ್ನ ಅಳತೆ ದು ಸಿಕ್ಕಿಲ್ಲ ಅಂತ. ಸಿಕ್ಕಿದ್ರೆ ತಗೊಂಡೇ ಬರ್ತೀನಿ. ಇಲ್ಲಾಂದ್ರೆ ಅದೊಂದು ಮನಸ್ಸಿಗೆ ದಿನಾ ಕಾಡುವ ಕಿರಿಕಿರಿ.” ಅಬ್ಬಬ್ಬಾ!!! ಅವಳ ಮಾತು ಕೇಳಿ ಅನ್ನಿಸ್ತು ಯಾವೆಲ್ಲಾ ತರಹದ ತಲೆ ನೋವು ಈ ಸೇಲ್ ಗಳಿಂದ.

ಏನೇ ಇರಲಿ ಸೇಲ್ ಗಳ ಬಗ್ಗೆ ಬರೆದಷ್ಟು ಕಡಿಮೆಯೇ. ” ಜನ ಮರುಳೋ ಜಾತ್ರೆ ಮರುಳೋ” ಎಂಬ ಮಾತಿನಂತೆ ಮನಸ್ಸಿಗೇನೋ ನೆಮ್ಮದಿ ಕಡಿಮೆ ಬೆಲೆ ಗೆ ಸಿಕ್ತು ಅಂತ. ಆದ್ರೆ ಹಲವು ಬಾರಿ ಒಂದು ವಸ್ತು ಖರೀದಿಸುವಲ್ಲಿ ಮೂರ್ನಾಲ್ಕು ವಸ್ತುಗಳನ್ನ ಖರೀದಿಸಿ ಖರ್ಚು ಜಾಸ್ತಿಯೇ ಆಗಿರುತ್ತದೆ. “ಈ ಸೇಲ್ ಗಳು ಬಂದರೆ ನಮ್ಮ ಜೇಬಿಗೆ ಕತ್ತರಿ” ಅನ್ನೋದು ಗಂಡಸರ ಗೋಳು. Whatever it is at the end, peace of mind matters ಅಲ್ವಾ?!! ಎಲ್ಲರೂ ಅಲ್ಲದಿದ್ದರೂ ಕೆಲವರಾದರೂ ಸೇಲ್ ಗಳನ್ನು ಇಷ್ಟ ಪಡೋರು ಖಂಡಿತ ಇರಬಹುದು. ನಿಮಗೆಲ್ಲರಿಗೂ ” Happy Shopping”!!! :)..

4 thoughts on “ಜನ ಮರುಳೋ ಜಾತ್ರೆ ಮರುಳೋ -ಪ್ರತಿಮಾ ಪರಾಂಜಪೆ ಬರೆದ ಹರಟೆ

 1. ಪ್ರಿಯ ಪ್ರತಿಮಾರಿಗೆ
  ನಮಸ್ಕಾರ.
  ನಿಮ್ಮ ಸೇಲ್ಸ್ ,ಶಾಪಿಂಗ ಲೇಖನ ಓದಿ ನಾನು ನಾನಾ ತರಹಗಳ ಸೇಲ್ಸ ಬಂದ ತಕ್ಷಣ ವಂದೇ ಕಾಲಿನಲ್ಲಿ ಜಿಗಿದ ನನ್ನ ನಚ್ಚಿನ ಮಡದಿ ಸಂಗಡ ಹಲವಾರಿ ಬಾರೆ
  ಹೋಗಿ ,ಎಲ್ಲ ಬೇಸತ್ತು ಹೈರಾಣರಾದ ಗಂಡಂದಿರ ಸಲುವಾಗಿಯೇ ಇಟ್ಟಿದ್ದ ಖುರ್ಚಿದಲ್ಲಿ ಕುಳಿತುಕೊಂಡ ಅನುಭವಗಳು ಜ್ಞಾಪಕ್ಕೆ ಬಂದವು. ಎಷ್ಟೋ ಬಾರೆ ಅಲ್ಲಿ
  ಕುಳಿತುಕೂಳ್ಳಲು ಕೂಡ quee 😪. ಮಡದಿಗೆ ಬರೀ ಕೈಲೇ ಮನೆಗೆ ಹಿಂತಿರುಗುವ ಪ್ರಸಂಗಗಳು ಬಂದಲ್ಲಿ ಅವಳಿಗೆ ಕೋಪ😡. ಕೊನೆಗೆ ನಾನೇ ಅವಳ್ಗೆ surprise ಎಂದು
  ಖರೀದೆ ಮಾಡಿ ಸಮಾಧಾನಪಡಿಸಿ ,ಹೊರಗೆ ಊಟ ಮಾಡಿ ಬರುವದು ಕಳೆದ 47 ವರುಷಗಳಿಂದ ರೂಢಿಯಾಗಿಬಿಟ್ಟಿದೆ! ” buy one get one free ” ಮುಂತಾದ
  ಮನೆವರಿಕೆಯಾಗುವ ನೋಟಿಕೆಗಳಿಂದ ಮಡದಿಯವರೆಲ್ಲ ಶೊಪ್ಪಿಂಗಕ್ಕೆ ಓಡುವದು ಸಹಜ .ಅಲ್ಲಿದೆ ಸೇಲ್ಸ್ ,ಶೊಪ್ಪಿಂಗಗಳಲ್ಲಿ ಜಾಣತನ!
  ಇನ್ನೂ ನಿಂಮಿಂದ ಬಗೆ ಬಗೆಯ ಲೇಖನಗಳನ್ನು ಓದಲು ಆತುರನಾಗಿರುವೆ.
  ಅರವಿಂದ ಕುಲ್ಕರ್ಣಿ

  I

  L

  ಕೆ

  Like

 2. ಪ್ರತಿಮಾ ಅವರೇ ನಿಮ್ಮ ಶಾಪಿಂಗ್ ನ ಅನುಭವಗಳನ್ನ ತುಂಬಾ ರುಚಿಕಟ್ಟಾಗಿ ನೀಡಿದ್ದೀರಿ.ನಾನು ಅಮೆರಿಕಕ್ಕೆ ಮಗನ ಹತ್ರ ಹೋದಾಗ ಈ ಅನುಭವ ಆದದ್ದಿದೆ.’ಅಮ್ಮಾ ಯಾವುದನ್ನೂ ರೂಪಾಯಿಯಲ್ಲಿ ಬೆಲೆ ಕಟ್ಟಬೇಡ.ಹಾಗಾದರೆ ಉಪವಾಸ ಇರಬೇಕಾಗುತ್ತದೆ ‘ ಅಂತ ನನ್ನ ಮಗ ಹೇಳುತ್ತಿದ್ದ.ಅಲ್ಲಿನ ಸೇಲ್ ಗಳ ಸಂಭ್ರಮವನ್ನೂ ಅನುಭವಿಸಿ ಆನಂದಿಸಿದ್ದಾಯ್ತು.Black Friday ಸೇಲ್ ದ ಸಂಭ್ರಮ ವಂತೂ ಬಹಳ. ಅದಕ್ಕೋಸ್ಕರ ಕಾಯ್ತಿರ್ತಾರೆ.
  ನಮ್ಮಲ್ಲಿ ಅಂದರೆ ಇಂಡಿಯಾದಲ್ಲೂ ಈಗ ಸೇಲ್ ಗಳ ಹಾವಳಿ ಬಹಳ. ಆಷಾಢ ಸೇಲ್ ,ದೀಪಾವಳಿ ಸೇಲ್ ,ಯುಗಾದಿ ಸೇಲ್ ಇತ್ಯಾದಿ ಯಾವಾಗಲೂ ಒಂದು ಸೇಲ್.ಏನೂ ತಗೋಳಲ್ಲ ,ಸುಮ್ಮನೇ ನೋಡಿ ಬರುವದು ಅಂತ ಹೋಗಿ ತಗೊಂಡು ಬರುವದಂತೂ ಇದ್ದದ್ದೆ.ದರ ಹೆಚ್ಚು ಮಾಡಿ ಡಿಸ್ಕೌಂಟ ಕೊಡ್ತಾರೋ ಏನೋ ಎನ್ನುವುದು ಆದರೆ ಶಾಪಿಂಗ್ ಬಿಡೋ. ಹಾಗಿಲ್ಲ.ಸೇಲ್ ಗಳ ಪ್ರಭಾವನೇ ಹಾಗೆ ಅಲ್ಪೆ ಪ್ರತಿಮಾ ಅವರೇ? ಟಿಪ್ಸಗಳ ಲಿಸ್ಟಿಗೆ ಮತ್ತೆ ಹೊಸದನ್ನ ಸೇರಿಸಲು ಸಂತೋಷ .ತುಂಬಾ ರೋಚಕ ಸೇಲ್ ಶಾಪಿಂಗ್ ಲೇಖನ .ಅಭಿನಂದನೆಗಳು ಪ್ರತಿಮಾ.ಅವರಿಗೆ.
  ಸರೋಜಿನಿ ಪಡಸಲಗಿ

  Liked by 1 person

 3. ಪ್ರತಿಮಾ ಅವರೆ,
  ’ಅನಿವಾಸಿ’ಗೆ ಹಾರ್ದಿಕ ಸ್ವಾಗತ. ನಿಮ್ಮ ಬರಹ ಬಹಳೇ ಸ್ವಾರಸ್ಯಕರವಾಗಿದೆ. ಅದು ನಾಲ್ಕು ದಶಕಗಳ ಕೆಳಗೆ ನನಗಾದ ಅನುಭವವನ್ನು ನೆನಪಿಗೆ ತಂದಿತು. ಉದಾಹರಣೆಗೆ, ಎಲ್ಲವನ್ನೂ ರೂಪಾಯಿಗೆ ಪರಿವರ್ತಿಸಿ, ಎಷ್ಟು ದುಬಾರಿ! ಹೇಗೆ ಕೊಳ್ಳುವದು ಎಂದು ಮನೆಗೆ ಬಂದದ್ದು, ’ಸುಳ್ಳು ಬಡತನ’ದಲ್ಲೇ ಜೀವನ ಕಳೆದದ್ದು, ಆಮೇಲೆ ಧೈರ್ಯ ಬಂದು ಶಾಪ್ಪಿಂಗ್ ಹುಚ್ಚು ಹಿಡಿದದ್ದು, ’ಸೇಲ್ ಸಾರ್ವಭೌಮ’ ಆದದ್ದು ಎಲ್ಲವೂ ಹೊಸ ವಲಸೆಗಾರನ (immigrant) ಕಡ್ಡಾಯದ ರೂಪಪರಿವರ್ತನೆಯ (metamorphosis) ಘಟ್ಟಗಳು.
  ನಾನು ಮುಂಬಯಿಯಲ್ಲಿದ್ದಾಗ ನಾನು ವಾಸಿಸುತ್ತಿದ್ದ ಗ್ರಾಂಟ್ ರೋಡಿನ ಇಬ್ಬದಿಯಲ್ಲಿ ಇಲ್ಲಿಯವರ ಕಾಪಿ ಮಾಡಿ ಎಲ್ಲ ಅಂಗಡಿಗಳಲ್ಲೂ ದಿನ ನಿತ್ಯ SALE ಚೀಟೀಯೇ ಕಾಣಬರುತ್ತಿತ್ತು. ಅದನ್ನು ಎಂದೂ ತೆಗೆದದ್ದೇ ನೆನಪಿಲ್ಲ! ಅದೊಂದು ಅವರ ಗಿಮ್ಮಿಕ್ಕಾಗಿತ್ತೆಂದು ಕಾಣುತ್ತದೆ. ನಿಮ್ಮ ಮಿತ್ರರು ಸೇಲ್‍ಗೆ ’ಸಾಲೆ’ ಅಂದಂತೆ ನಾನೂ ಮೊದಲು ಹಾಗೇ ಉಚ್ಚಾರ ಮಾಡುತ್ತಿದ್ದೆ. ’ರಿಟೇಲ್ ಥೆರಪಿ’ಗೆಂದು ಸೇರಿದ ಸೇಲ್ ಶಾಲೆಯಲ್ಲಿ ಮಾರ್ಕ್ಸ್ ಗಿಟ್ಟಿಸುವ ನಿಮ್ಮ ಟಿಪ್ಸ್ ಚೆನ್ನಾಗಿವೆ! ನಿಮ್ಮ ”ಎಂಟು ಪೌಂಡಿನ ಗೆಳತಿ”ಯ ಮನಸ್ಸಿನ ತಾಕಲಾಟದ ವರ್ಣನೆ ಹಿಡಿಸಿತು. ಅವಳು ಆ ಡ್ರೆಸ್ಸನ್ನು ಇಟ್ಟುಕೊಂಡಳೋ ವಾಪಸ್ಸು ಕೊಟ್ಟಳೋ ತಿಳಿದುಕೊಳ್ಳಲು ಇನ್ನೂ ಕುತೂಹಲ!
  ’ಹೀಗೇ ಬರೆಯುತ್ತಿರಿ ’ಅನಿವಾಸಿ’ಗೆ.
  ಶ್ರೀವತ್ಸ ದೇಸಾಯಿ

  Like

 4. ಯೂರೋಪ್ ಅಥವಾ ಅಮೆರಿಕೆಗೆ ಬಂದ ಭಾರತೀಯ ನಾರಿಯರೆಲ್ಲರ ಅನುಭವಗಳನ್ನೂ ಸೇರಿಸಿ ಬರೆದಂತಿರುವ ಈ ಲೇಖನ ನಮ್ಮೆಲ್ಲರ ಮನದ ಭಾವನೆಗಳನ್ನು ಪ್ರತಿಬಿಂಬಿಸುವಂತಿದೆ. ಪ್ರತಿಮಾ ಪರಾಂಜಪೆ ಹೊಸ ಲೇಖಕಿ, ತಮ್ಮ ನೂತನ ಶೈಲಿಯಲ್ಲಿ ಹೊಸ ಜಾಗದಲ್ಲಿ, ಹೊಸ ಕರೆನ್ಸಿಯನ್ನು ಪರ್ಸಿನಲ್ಲಿಟ್ಟು ಹೋಗಿ ಖರೀದಿಗೆ ಹೋದಾಗ, ರೂಪಾಯಿ ಮತ್ತು ಪೌಂಡುಗಳ ಅಂತರ ನೋಡಿ ಮನದಲ್ಲಿ ಹುಟ್ಟುವ ದಿಘ್ಬ್ರಮೆಯ ಅನುಭವನ್ನು ಚೆನ್ನಾಗಿ ವಿವರಿಸಿದ್ದಾರೆ. ನಾವೆಲ್ಲಾ ಸೇಲ್ ಸ,ಮಯದಲ್ಲಿ ಸಾಲಿನಲ್ಲಿ ನಿಂತ ಗೃಹಿಣಿಯರೇ ಒಂದು ಕಾಲಕ್ಕೆ! ಸಮಯ ಕಳೆದಂತೆ, ಪೌಂಡ್ ನಮ್ಮ ಜೇಬಿನಲ್ಲಿ ಹೆಚ್ಚುತ್ತಾ ಹೋದಂತೆ, ಆಸ್ಡಾ, ಟೆಸ್ಕೋ ಮತ್ತು ಪ್ರಿಮಾರ್ಕ್ ಅಂಗಡಿಗಳನ್ನು ಬಿಟ್ಟು, ಮಾರ್ಕ್ಸ್ ಅಂಡ್ ಸ್ಪೆನ್ಸರ್ ಅಥವಾ ಜಾನ್ ಲೂಯಿಸ್ ಕಡೆಗೆ ಧಾಪುಗಾಲಿಕ್ಕುವ ನಾವುಗಳು, ಹಿಂದಿನ ಅನುಭವಗಳನ್ನು ಖಂಡಿತಾ ಮೆಲಕುಹಾಕುವುದಂತೂ ನಿಜ. ಆ ಅನುಭವಗಳನ್ನು ತಮ್ಮ ಲೇಖನದಲ್ಲಿ ರಸವತ್ತಾಗಿ ವರ್ಣಿಸಿರುವ ಪ್ರತಿಮಾ ಪರಾಂಜಪೆ ಅವರಿಗೆ ಧನ್ಯವಾದಗಳು ಮತ್ತು ನಮ್ಮ ಜಾಲ-ಜಗುಲಿಗೆ ಹಾರ್ದಿಕ ಸುಸ್ವಾಗತ. ಇನ್ನೂ ಲೇಲ್ಹನಗಳು ಹೊರಬರಲಿ ನಿಮ್ಮ ಅನುಭವದ ಖಜಾನೆಯಿಂದ ಎಂದು ಆಶಿಸುತ್ತೇನೆ.
  ಉಮಾ ವೆಂಕಟೇಶ್

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.