ತಪ್ಪೇನಿಲ್ಲ ದೋಸ್ತ! – ಸುಹಾಸ ಕರ್ವೆ ಬರೆದ ಕವಿತೆ

ಹೇಳುವರು ಕೆಲವರು ಭಾಳ ಕೆಟ್ಟದ್ದಂತ ಈ ಚಟ
ಚಟದ ಮಹತ್ವ ಅವರಿಗೇನು ಗೊತ್ತೋ ದೋಸ್ತ?
ಚಟ ಮಾಡಲೇಬೇಕೆಂಬ ಚಟ ಬೆಳೆಸುವುದೂ ಒಂದು ಚಟ
ಚಟ ಮಾಡ್ತಾ ಇದ್ರೆ ಸಿಗುತ್ತೆ ಬದುಕು ದೋಸ್ತ

ಕುಡಿಯುವವ ದಿನವೂ ಮಾಯವಾದರೆ ತಪ್ಪೇನಿಲ್ಲ ದೋಸ್ತ
ಚಂದ್ರನಿಗಿಲ್ಲವೇ ತಿಂಗಳಿಗೊಮ್ಮೆ ಮಾಯವಾಗುವ ಚಟ?
ಸೇದುವವ ಹೊಗೆ ಹೊರಹಾಕಿದರೆ ತಪ್ಪೇನಿಲ್ಲ ದೋಸ್ತ
ಚಳಿಗಾಲಕ್ಕಿಲ್ಲವೇ ಮಂಜು ಹೊರಹಾಕುವ ಚಟ?

ತಂಬಾಕು ತಿಂದುಗುಳಿದರೆ ತಪ್ಪೇನಿಲ್ಲ ದೋಸ್ತ
ಮೋಡಕ್ಕಿಲ್ಲವೇ ಮಳೆ ಉಗುಳುವ ಚಟ?
ಗುಂಡು ಹಾಕಿದವನು ತೂರಾಡಿದರೆ ತಪ್ಪೇನಿಲ್ಲ ದೋಸ್ತ
ಮರಕ್ಕಿಲ್ಲವೇ ಗಾಳಿಯಲ್ಲಿ ತೂರಾಡುವ ಚಟ?

ಸೋತರೂ ಮತ್ತೆ ಮತ್ತೆ ಜೂಜಾಟ ಆಡಿದರೆ ತಪ್ಪೇನಿಲ್ಲ ದೋಸ್ತ
ಹಿಮಕ್ಕಿಲ್ಲವೇ ವರುಷ-ವರುಷ ಕರಗಿದರೂ ಮತ್ತೆ ಹುಟ್ಟುವ ಚಟ?
ಮೇಲಿನಿಂದ ಕೆಳಕ್ಕೆ ಬಿದ್ದರೂ ಷೇರು ಖರೀದಿಸಿದರೆ ತಪ್ಪೇನಿಲ್ಲ ದೋಸ್ತ
ನದಿಗಿಲ್ಲವೆ ಬೆಟ್ಟದಿಂದ ಧುಮುಕಿ ಜಲಪಾತವಾಗುವ ಚಟ?

ಹೇಳುವರು ಕೆಲವರು ಭಾಳ ಕೆಟ್ಟದ್ದಂತ ಈ ಚಟ
ಚಟದ ಮಹತ್ವ ಅವರಿಗೇನು ಗೊತ್ತೋ ದೋಸ್ತ?
ಚಟವಿಲ್ಲದೇ ಗ್ರಹತಾರೆಗಳಿಲ್ಲ ಮಳೆ ಬೆಳೆಗಳಿಲ್ಲ
ಚಟ ಮಾಡದೇ ಮತ್ತೆ ಬದುಕುವದ್ಯಾಕೋ ದೋಸ್ತ?

9 thoughts on “ತಪ್ಪೇನಿಲ್ಲ ದೋಸ್ತ! – ಸುಹಾಸ ಕರ್ವೆ ಬರೆದ ಕವಿತೆ

 1. ಚಟ ಮಾಡು ತಪ್ಪೇನೂ ಇಲ್ಲ ಎಂದು ಬಿಮ್ಬಿಸುವ ಕವನ ,ನಿಸರಗ್ದೋಂದಿಗೆ ತಳಕು ಹಾಕುವ ಪರಿ ,ಹಾಸ್ಯದ ಸಿಂಚನ,,ಬರಹದ ಸರಳತೆ ಸುನ್ದರ ,ಈ ಪರಿಗೆ ಅಭಿನಂದನೆಗಳು

  Like

 2. ತುಂಬಾ ತುಂಬಾ ಧನ್ಯವಾದಗಳು .. ನಿಮ್ಮ ಈ ಪ್ರೋತ್ಸಾಹ ನನಗೆ ಸ್ಫೂರ್ತಿದಾಯಕ.
  ಸುಹಾಸ್ ಪು. ಕರ್ವೆ

  Like

 3. ನನ್ನ ಮಿತ್ರರೊಬ್ಬರು ಕೆಲವು ಸಮಯದ ಹಿಂದೆ ಚಟವಿಲ್ಲದ ಬದುಕು ರಸಹೀನ ಎಂದು ಹೇಳಿದ್ದ ನೆನಪು. ಒಂದು ರೀತಿಯಲ್ಲಿ ಅದು ನಿಜವಾದ ಮಾತೇ! ಆದರೆ ನಮ್ಮ ಬದುಕನ್ನು ಹಾಳುಗೆಡುವಂತಹ ಚಟ ಬೇಕಿಲ್ಲ. ಉತ್ತಮ ಚಟಗಳು ಮಾನವನ ಬದುಕನ್ನು ರಸಮಯಗೊಳಿಸಬಲ್ಲದು. ನಮ್ಮ ಕವಿ ಸುಹಾಸ್ ಅವರ ಕವನದಲ್ಲಿ ವ್ಯಕ್ತವಾಗಿರುವ ಪ್ರಕೃತಿಯ ಚಟಗಳೆಲ್ಲ ನಮಗೆ ಕಲ್ಯಾಣ ನೀಡುವಂತಹದೇ. ಆದರೆ ಅದನ್ನು ಮಾನವನ ದುಷ್ಚಟಗಳಿಗೆ ಹೋಲಿಸಿ ಅವರು ರಚಿಸಿರುವ ಕವನ ಹಾಸ್ಯಮಯವಾಗಿದೆ. ಅಲ್ಪ ಸುಖಕ್ಕೆ ಜೀವನವನ್ನು ಬಲಿಕೊಡುವ ಚಟ ನಮಗೆ ಬೇಕಿಲ್ಲ. ಆದರೆ ಸುಹಾಸ್ ಅವರಿಗಿರುವ ಕವನ ರಚನೆಯಂತಹ ಉತ್ತಮ ಚಟ ನಮಗೆ ಬಲು ಖುಷಿ. ಪ್ರಾಣೆಶರ ಸಮ್ಮುಖದಲ್ಲಿ ಓದಿ ಅವರಿಂದ ಸೈ ಎನಿಸಿಕೊಂಡ ಈ ಕವನ, ಸುಹಾಸರ ಸೃಜನಶೀಲತೆಯನ್ನು ತೋರುತ್ತದೆ. ಪ್ರಕೃತಿಯ ನಿಯಮಗಳನ್ನು ನಮ್ಮ ಅಭಿವೃದ್ಧಿಗೆ ಉಪಯೋಗಿಸೋಣ. ಹಾಗೇ ದೇಸಾಯಿ ಅವರು ಬರೆದಿರುವಂತೆ ಇಂತಹ ಕವನಗಳು ಪ್ರಕಟವಾದಾಗ, ನಮ್ಮ ಸದಸ್ಯರು ಇದಕ್ಕೆ ತಮ್ಮ ಪ್ರತಿಕ್ರಿಯೆ ಬರೆಯುವ ಚಟವನ್ನು ಬೆಳೆಸಿಕೊಳ್ಳಲಿ ಎನ್ನುವುದೇ ನನ್ನ ಅಭಿಮತವೂ ಕೂಡಾ!
  ಉಮಾ ವೆಂಕಟೇಶ್

  Like

 4. ಸುಂದರವಾದ ಕವಿತೆ. Habit ಮುಂದುವರೆಯಿಸಿ– ಕವಿತೆ ಬರೆಯುವುದನ್ನು.

  Like

 5. ಸುಹಾಸ ಕರ್ವೆ ಅವರಿಗೆ ಭಲೇ ಎಂಬೆ .ಚಟಗಳ ಸಮರ್ಥನೆಗೆ ನಿಸರ್ಗವನ್ನೇ ತಂದು ಬಿಟ್ಟರಲ್ಲ!!ಪಾಪದ ಪ್ರಕೃತಿ.ಅವರ ಹಾಸ್ಯಪ್ರಜ್ಞೆಯನ್ನ ಮೆಚ್ಚಬೇಕಾದ್ದೇ.ಆದರೆ ಅದರ ಜೊತೆಗೆ ಅಡಕವಾಗಿರುವ ಜೀವನಸತ್ಯವನ್ನು ಅಲ್ಲಗಳೆಯುವಂತಿಲ್ಲ.ಚಟವಿಲ್ಲದ ಜೀವನ ಜೀವನವೇ? ಶ್ರೀವತ್ಸ ದೇಸಾಯಿಯವರು ಬರೆದಂತೆ ನಾವು ಸಂತೋಷಕಂಡು ಕೊಳ್ಳುವ ಕೃತಿಯ ಪುನರಪಿ ಗೈಯುವಃದೇ ಚಟ.ಅಂದ ಮೇಲೆ ನಮ್ಮ ಜೀವನಶೈಲಿಯಲ್ಲಿಯೂ ಚಟ ಅಡಕವಾಗಿದೆ.ಬಾಳ ವೈಶಿಷ್ಟ್ಯವೇ ಚಟವಲ್ಲವೇ?ಪದ್ಯವನ್ನ ಬಗೆದಷ್ಟೂ ಹೊಸ ಹೊಸ ಅರ್ಥಗಳು.ಹಾಸ್ಯದ ಹೊನಲು ಬೆಳಕಿನಲ್ಲಿ ನಿತ್ಯಸತ್ಯ ಸಾರುವ ಕವನ ನೀಡಿದ ಸುಹಾಸ ಕರ್ವೆಯವರಿಗೆ ಅಭಿನಂದನೆಗಳು
  ಸರೋಜಿನಿ ಪಡಸಲಗಿ

  Liked by 1 person

 6. ಕವಿ ಬಿ.ಆರ್.ಎಲ್. …. ಬಿಡಲಾರೆ ನಾನು ಸಿಗರೇಟು…. ಹುಡುಗಿ ನಿನ್ನಂತಯೇ ಅದು ಬಲು ಥೇಟು… ಅಂತ ಒಂದು ಹಾಸ್ಯಮಯ ಕವನ ಬರೆದಿದ್ದಾರೆ. ಕರ್ವೆಯವರ ಕವನದಲ್ಲಿ ಎಲ್ಲ ಚಟಗಳಿಗೂ ಒಂದು ಹೋಲಿಕೆ ಬರೆದು ಸಮರ್ಥಿಸಿಕೊಳ್ಳುವ ಹಾಸ್ಯವಿದೆ. ಬದುಕುವ ಹಂಬಲವೇ ಒಂದು ಚಟ. ಬರೆಯುವುದೂ ಸೇರಿದಂತೆ!!
  ದೇಸಾಯಿಯವರು ಸಮಂಜಸವಾಗಿ ಬರೆದಿರುವಂತೆ!!.

  Liked by 1 person

 7. ಚಟದ ಬಗ್ಗೆ ಈ ಲಘು ಹಾಸ್ಯಭರಿತ ಕವನವನ್ನು ಬರೆದ ಸುಹಾಸ ಕರ್ವೆಯವರು ಅದರೊಳಗೆ ಒಂದು ಚಿಕ್ಕ ಧೀಸಿಸ್ ಅನ್ನೇ ಹುದುಗಿಟ್ಟಂತೆ ಕಾಣುತ್ತದೆ. ಚಟವೆಂದ ಕೂಡಲೆ ಕೆಟ್ಟ ಚಟವೇ (ತಂಬಾಕು, ಹೊಗೆ ಸೇದುವದು, ಗುಂಡು, ಜೂಜು) ನೆನಪಾಗಬೇಕೆ? ಒಳ್ಳೆಯವೂ ಇಲ್ಲವೆ? ಚಟವೆಂದರೇನು? ಮಾನಸ ಶಾಸ್ತ್ರಜ್ಞರ ಪ್ರಕಾರ: A habit, from the standpoint of psychology, is a more or less fixed way of thinking, willing, or feeling acquired through previous repetition of a mental experience.” (ವಿಕಿ). ಹಿಂದಿನ ಸುಖಾನುಭವದಿಂದ ದೊರೆತ ಪ್ರತಿಫಲಕಾಗಿಯೇ ತನ್ನ ವರ್ತನೆಯನ್ನು ಬದಲಾಯಿಸುವದೆ ಚಟ. ಇದನ್ನು ಸ್ವಲ್ಪ ಎಳೆದು ಪ್ರಕೃತಿಯ ನಿಯಮಗಳಿಗೆ ಮನುಷ್ಯನ ಚಟಗಳನ್ನು ಹೋಲಿಸಿ ಸಮರ್ಥಿಸಿಕೊಳ್ಳುವದರಲ್ಲಿ ತಮ್ಮ ಚಾತುರ್ಯವನ್ನು ತೋರಿಸಿದ್ದಾರೆ, ಕವಿ! ’”ಚಟ ಮಾಡಲೇಬೇಕೆಂಬ ಚಟ ಬೆಳೆಸುವುದೂ ಒಂದು ಚಟ” ಈ ಸಾಲಿನಲ್ಲಿ ಸ್ವಲ್ಪ ಸೀರಿಯಸ್ಸಾಗೇ OCDಯತ್ತ ಹೊರಟರೂ, ಕೊನೆಗೆ ’ನಾವು ಬದುಕಲೇ ಬೇಕಲ್ಲ, ಬದುಕುವದಕ್ಕೊಂದು ಚಟ ಬೇಕಲ್ಲ’ ಎಂಬ ತಮ್ಮ ನಿರ್ಧಾರವನ್ನೆತ್ತಿಟ್ಟಿದ್ದಾರೆ. ಮೊನ್ನೆ ಯುಗಾದಿ ಹಾಸ್ಯಗೋಷ್ಠಿಯಲ್ಲಿ ಗಂಗಾವತಿ ಪ್ರಾಣೇಶರಿಂದ ಸೈ ಅನಿಸಿಕೊಂಡ ಕವನವಿದು. ನನ್ನದೂ ಚಪ್ಪಾಳೆ ಜೋಡಿಸುವೆ! ನಿಮಗೆ ಏನೇ ಚಟವಿರಲಿ, ಇಲ್ಲದಿರಲಿ, ಪ್ರತಿ ವಾರ ತಪ್ಪದೆ ”ಅನಿವಾಸಿ” ಓದಿ ಕಮೆಂಟ್ಸ್ ಬರೆಯುವ ಚಟವನ್ನು ಮಾತ್ರ ಬೆಳೆಸಿಕೊಳ್ಳದೆ ಇರ ಬೇಡಿ ಎಂದು ಕಳಕಳಿಯಿಂದ ಕೇಳುವೆ. ಅದನ್ನು ನೆನಪಿಸುವದು ನನ್ನ ಚಟ!

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.