ನಾನು ಸ್ಕೀಯಿಂಗ್ ಕಲಿತಿದ್ದು – ವಿನತೆ ಶರ್ಮ

ski 1ಹಿಮದೇಶಗಳಲ್ಲಿ ಚಳಿ ಮುಗಿದು ಪರ್ವತಗಳ ಬಿಳಿ ನೆತ್ತಿಗಳು ಈಗ ಸ್ವಲ್ಪಸ್ವಲ್ಪವಾಗಿ ಕಂದು, ಕಪ್ಪು, ಬಿಳಿ ಬಣ್ಣಗಳ ಮಿಶ್ರಿತ ಮೋಹಕ ಟೋಪಿಗಳನ್ನ ಧರಿಸಿಕೊಳ್ಳುವ ಪಂದ್ಯ ಹೂಡಿವೆ. ನಾವು ಈಸ್ಟರ್ ಹಬ್ಬಕ್ಕೆಂದು ಬರುವ ರಜಾ ದಿನಗಳಲ್ಲಿ ಫ್ರಾನ್ಸ್ ನ ಕಡೆಯ ಆಲ್ಪ್ಸ್ ಪರ್ವತ ಶ್ರೇಣಿಗೆ ಬಂದೆವು – ಸ್ಕೀಯಿಂಗ್ ಗೋಸ್ಕರ. ಎಲ್ಲಿ ನೋಡಿದರೂ ಎಲ್ಲಾ ವಯಸ್ಸಿನ ಹೆಣ್ಣು, ಗಂಡು ಹಿಮ ಜಾರುಪಟ್ಟಿಧಾರಿಗಳು (ಸ್ಕೀಯರ್ಸ್) ಅಥವಾ ಹಿಮಹಲಗೆ (ಸ್ನೋ ಬೋರ್ಡ್ ) ಧಾರಿಗಳು. ಕುಟುಂಬದ ಬೇರೆಲ್ಲರೂ ಈ ಕ್ರೀಡೆಗಳಲ್ಲಿ ಪರಿಣಿತರು. ಎಲ್ಲರಿಗೂ ಸ್ಕೀಯಿಂಗ್ ಹುಚ್ಚು.

ನಾನು ಕಳೆದ ವರ್ಷವಷ್ಟೇ (2015) ಸ್ಕೀಯಿಂಗ್ ಕಲಿಯಲಾರಂಭಿಸಿದ್ದು. ಹಿಂದೆ ಯಾವಾಗಲೋ ನಾನು ಆಸ್ಟ್ರೇಲಿಯಾದ ಸ್ನೋಯಿ ಪರ್ವತ ಶ್ರೇಣಿಗೆ ಹೋಗಿ, ಎರಡು ಗಂಟೆಗಳ ಗುಂಪು ಸ್ಕೀಯಿಂಗ್ ಕ್ಲಾಸ್ ಗೆ ಹಾಜರಾಗಿದ್ದೆ. ಸ್ಕೀಯಿಂಗ್ ಕಲಿಯುವುದಿರಲಿ, ಸ್ಕೀಗಳ ಮೇಲೆ ನೆಟ್ಟಗೆ ನಿಲ್ಲಲೂ ಆಗಲಿಲ್ಲವೇ!! ನನ್ ಕೈಯಲ್ಲಿ ಆಗಲ್ಲಾ ಮಾರಾಯಾ ಬಿಟ್ಟು ಬಿಡು, ಗುಂಪಿನ ಮತ್ತೆಲ್ಲರನ್ನು ಕರೆದು ಕೊಂಡು ನೀ ಹೋಗು ಎಂದರೆ ಆ ಸ್ಕೀಯಿಂಗ್ ಕೋಚ್ ಕೇಳಲಿಲ್ಲವೇ!!ski 2

ಆಗ ಬಿದ್ದು ಎದ್ದು ಮಾಡಿದ ಸರ್ಕಸ್, ಅನುಭವಿಸಿದ ನೋವು, ಪಟ್ಟ ಅವಮಾನ, ಇಟ್ಟ ಕಣ್ಣೀರು ಎಲ್ಲವೂ ಮನದಾಳಕ್ಕೆ ಇಳಿದು ಈ ನನ್ನ ಜನ್ಮದಲ್ಲಿ ಮತ್ತೆ ಸ್ಕೀಯಿಂಗ್ ಕನಸು ಕಾಣುವುದಿಲ್ಲ ಎಂದು ಶಪಥ ಮಾಡಿದ್ದೆ. ಜುಮ್ಮೆಂದು ರಾಕೆಟ್ ಥರ, ಚಕ್ರದ ಥರ ಬಳುಕಿಕೊಂಡು ಸ್ಕೀಯಿಂಗ್ ಮಾಡಿ ಬಂದ ಜೇಬೀಯನ್ನ ನೋಡಿ ಹೊಟ್ಟೆ ಉರಿಸಿಕೊಂಡಿದ್ದೆ.

ski 3ನಾವು ಇಂಗ್ಲೆಂಡ್ ಗೆ ಬರುವ ಮುನ್ನ ಜೀಬೀ “ಮಕ್ಕಳಿಗೆ ಈ ಬಾರಿ ಸ್ಕೀಯಿಂಗ್ ಕಲಿಸಬೇಕು” ಎಂದಿದ್ದರು. ನಾನೋ ದುಃಸ್ವಪ್ನವನ್ನು ಕಂಡಂತೆ ಮುಖ ಮಾಡಿ ಗಪ್ ಚಿಪ್ ಆಗಿದ್ದೆ. ಮಕ್ಕಳು ಭಾಳಾ ಖುಷಿಯಲ್ಲಿದ್ದರು. “ನಾನೂ ಮಕ್ಕಳು ಸ್ಕೀಯಿಂಗ್ ಮಾಡಲು ಪರ್ವತದ ಮೇಲೆ ಹೋದಾಗ ನೀನೊಬ್ಬಳೆ ಉಳಿದು ಬಿಡುತ್ತೀಯ, ಈ ಒಂದು ಬಾರಿ ಪ್ರಯತ್ನ ಮಾಡಿ ಸ್ವಲ್ಪ ಕಲಿ, ಅಮ್ಮನಿಂದ ಮಕ್ಕಳಿಗೂ ಹೆಚ್ಚು ಸ್ಫೂರ್ತಿ ಸಿಗುತ್ತದೆ” ಎಂದೆಲ್ಲ ಜೀಬಿ ಪುಸಲಾಯಿಸಿದ್ದಕ್ಕೆ ಅರೆ ಮನಸ್ಸಿನಿಂದ ಒಪ್ಪಿಕೊಂಡೆ, ಒಳಗೊಳಗೇ ಆತಂಕ ಗೂಡು ಕಟ್ಟಿತ್ತು.

ಅದ್ಯಾಕೋ ಏನೋ, “ಸ್ಕೀಯಿಂಗ್ ಬೇಡ, ಆಗಲೇ ಅದಕ್ಕೆ ತಿಲಾಂಜಲಿ ಕೊಟ್ಟಾಗಿದೆ, ಸ್ನೋ ಬೋರ್ಡ್ ಕಲೀತೀನಿ, ಸೂರ್ಯ ನೀನು ಕೂಡ ನನ್ ಜೊತೆ ಸ್ನೋ ಬೋರ್ಡ್ ಕಲಿಯೋ” ಎಂದು ಅವನನ್ನೂ ಜೊತೆಗೆಳೆದುಕೊಂಡು ಆ ಸಾಹಸಕ್ಕಿಳಿದೆ. ಮೊದಲ ಎರಡೇ ದಿನಗಳಲ್ಲಿ ದೊಡ್ಡ ಮಗ ಸ್ನೋ ಬೋರ್ಡಿಂಗ್ ಪಟ್ಟಂತ ಕಲಿತುಬಿಟ್ಟ; ಚಿಕ್ಕ ಮಗ ಸ್ಕೀಯಿಂಗ್ ನಲ್ಲಿ ನಾನೇ ಕಿಂಗ್  ಅನ್ನುವಂತೆ ಆದ. ನಾನು ಮಾತ್ರ ಸ್ನೋ ಬೋರ್ಡ್ ಕಲಿಯಲು ಹೋಗಿ ಮೊದಲ ದಿನವೇ ಎಡಗಾಲಿಗೆ ಭಾರಿ ಪೆಟ್ಟನ್ನ ಮಾಡಿಕೊಂಡು ನಂತರ ಸ್ಕೀಯಿಂಗ್ ಕಡೆ ಕಣ್ಣು ಹಾಯಿಸಿದ್ದೆ. ಇದ್ದಷ್ಟು ದಿನವೂ ಪರ್ವತಗಳ ಮೇಲೆ ಬೋಂಡಾದಂತೆ ಊದಿಕೊಂಡಿದ್ದ ಕಾಲನ್ನೆಳೆದುಕೊಂಡೇ ಓಡಾಡಿದ್ದೆ.ski 4

ನನ್ನದೇ ಸ್ವಂತ ಪ್ರಯತ್ನದಿಂದ ಮತ್ತು ಬೇರೆಯವರನ್ನ ನೋಡಿ, ಕುಟುಂಬದವರ ಸಹಕಾರದಿಂದ ನಾನೇ ಒಂದಷ್ಟು ಸ್ಕೀಯಿಂಗ್ ಕಲಿತುಕೊಂಡು ಕಡೆಯ ದಿನ ನನ್ನ ಮೊಟ್ಟ ಮೊದಲ ಬ್ಲೂ ರನ್(ಆರಂಭಿಕರ) ಸ್ಕೀಯಿಂಗ್ ಮಾಡಿದೆ. ನಂತರ ಇಡೀ ವರ್ಷ ಆ ಫಿಸಿಯೋ ಥೆರಪಿಸ್ಟ್ ಮತ್ತು ಡಾಕ್ಟರ್ ಗಳಿಂದ ಉಗಿಸಿಕೊಂಡು ಕಾಲನ್ನ ರಿಪೇರಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದೆ.

ಈ ಬಾರಿ (2016) ಮತ್ತೆ ಆಲ್ಪ್ಸ್ ಹಿಮ ಪರ್ವತಗಳಿಗೆ ಬಂದಿಳಿದಾಗ ಬೆಟ್ಟ, ಪರ್ವತಗಳನ್ನ ಇನ್ನಿಲ್ಲದಷ್ಟು ಪ್ರೀತಿಸುವ ನನ್ನ ಜೀವ ಸುಮ್ಮನಾಗಲಿಲ್ಲ. ಮತ್ತೆ ಆ ಹಿಮದ ಮೇಲೆ ಓಡಾಡಿ, ಪರ್ವತಗಳ ನೆತ್ತಿಗಳಿಗೆ ಹಾಯ್ ಹೇಳಿದೆ. ಮತ್ತೆ ಸ್ಕೀಗಳನ್ನ, ಆ ಭಾರವಾದ ಬೂಟುಗಳನ್ನ ಹಾಕಿಕೊಂಡು ಹೋದೆ – ಬ್ಲೂ ರನ್‘, ಇಗೋ ನಾ ಬಂದೆ ಎಂದು ಹೇಳಿ ಆ ಹಿಮ ಜಾರುಗಳಲ್ಲಿ ಸುಯ್ ಅನ್ನುತ್ತಾ ಜಾರಿದೆ. ಅಯ್ಯೋ ಇಷ್ಟನ್ನ ಕಲಿಯಕ್ಕೆ ಅಷ್ಟೆಲ್ಲಾ ವರ್ಷ ವ್ಯರ್ಥವಾಗಿ ಕಾದು ಸಿಕ್ಕ ಅವಕಾಶಗಳನ್ನ ಬಿಟ್ಟು ಕೂತೆನಲ್ಲಾ ಎಂದು ಬೇಸರ ಪಟ್ಟುಕೊಂಡೆ. ಅಮ್ಮ ಸ್ಕೀಯಿಂಗ್ ಮಾಡುವುದನ್ನ ನೋಡಿ ಮಕ್ಕಳು ಖುಷಿಪಟ್ಟರು. ಜೀಬೀಗೋ ಭಾರಿ ಹೆಮ್ಮೆ. ಅವರ ಕುಟುಂಬದವರು ” ಯು ಡಿಡ್ ನಾಟ್ ಗಿವ್ ಅಪ್ , ವೆಲ್ ಡನ್ ” ಎಂದರು . ಭಾರತದ ನನ್ನ ಕಡೆ ಕುಟುಂಬದಲ್ಲಿ ನಾನೇ ಮೊಟ್ಟ ಮೊದಲ ಸ್ಕೀಯಿಂಗ್ ಮಾಡುವ ಹೆಣ್ಣು ಎಂದು ನನಗೂ ಸ್ವಲ್ಪ ಸಂತೋಷವಾಯಿತು. ಕಳೆದ ವರ್ಷಕ್ಕಿಂತಲೂ ಈ ವರ್ಷ ಸ್ಕೀಯಿಂಗ್ ಮಾಡುತ್ತಿದ್ದ ಅನೇಕ ಭಾರತೀಯ ಮೂಲದವರನ್ನು ನೋಡಿ  ಮತ್ತಷ್ಟು ಸ್ಫೂರ್ತಿ ಬಂತು.

ski 5ಒಂದು ಸಂದರ್ಭದಲ್ಲಿ ಪಕ್ಕದಲ್ಲಿ ಕುಳಿತಿದ್ದ ಭಾರತೀಯ ಹೆಂಗಸೊಬ್ಬರನ್ನ ಮಾತನಾಡಿಸಿ ಅವರ ಸ್ಕೀಯಿಂಗ್ ಅನುಭವದ ಬಗ್ಗೆ ಕೇಳಿದೆ. ಅವರ ತಂದೆತಾಯಿ ದಕ್ಷಿಣ ಅಫ್ರಿಕಾದಿಂದ ವಲಸೆ ಬಂದು ಬ್ರಿಟನ್ ನಲ್ಲಿ ನೆಲಸಿದ ಪಂಜಾಬಿ ಮೂಲದವರು, ಅಪ್ಪಾಮ್ಮಂದಿರು ನಮ್ಮನ್ನೆಲ್ಲಾ ಕಷ್ಟದಿಂದ ಬೆಳೆಸಿದರು ಎಂದು ಹೇಳಿಕೊಂಡು ಆಕೆ ಅವರ ಬಾಲ್ಯದಲ್ಲಿ ಎಂದೂ ತಮ್ಮ ಕುಟುಂಬದವರೊಡನೆ ಒಟ್ಟಾಗಿ ರಜೆಯನ್ನ ಅನುಭವಿಸದೆ ಬೆಳೆದರು ಎಂದರು. “ನನ್ನ ಮಕ್ಕಳಿಗೆ ನಾನು ಅನುಭವಿಸಿದ ಒಂಟಿತನದ ಅನುಭವವಾಗಬಾರದು, ಅವರು ರಜೆಯ ಮಜೆ, ಕುಟುಂಬದೊಟ್ಟಿಗೆ ಕಳೆಯುವ ಹರ್ಷದ ಕ್ಷಣಗಳನ್ನು ಪಡೆಯಬೇಕು, ಈ ಸ್ಕೀಯಿಂಗ್ ಕೂಡ ಅವರಿಗೋಸ್ಕರವೇ, ಜೊತೆಗೆ ನಾನೂ ಅಷ್ಟಿಷ್ಟು ಕಲಿಯುತಿದ್ದೀನಿ” ಎಂದರು.

ski 6ಹೋದ ವರ್ಷ, ಈ ವರ್ಷ ಆ ಹಿಮ ಪರ್ವತಗಳ ಅಂದದ ಜೊತೆ ಅನೇಕ ಅನುಭವಗಳನ್ನ ಪಡೆದೆ. ನಾನಾ ತರಹದ ಗೋನ್ದಲಾ, ಸ್ಕೀ ಲಿಫ್ಟ್ ಗಳು ಇತ್ಯಾದಿಗಳಲ್ಲಿ ಓಡಾಡಿ ಒಂದು ಪರ್ವತದಿಂದ ಮತ್ತೊಂದು ಪರ್ವತಕ್ಕೆ ಹಾರುತ್ತ ಬಹಳ ಮೋಜನ್ನು, ವಿಶಿಷ್ಟ ಅನುಭವವನ್ನ ಪಡೆದೆ. ಪುಟ್ಟಪುಟ್ಟ ಮಕ್ಕಳು ಕಲಿಯುತ್ತಾ ಪುಸಕ್ ಎಂದು ಬಿದ್ದು ಮತ್ತೆ ಹಿಮವನ್ನ ಒರೆಸಿಕೊಂಡು ಜಾರುತ್ತಾ ಹೋಗುವುದು, ಅಪ್ಪಂದಿರು ಅಮ್ಮಂದಿರು ಪೆಂಗ್ವಿನ್ ಗಳಂತೆ ತಮ್ಮ ಕಾಲುಗಳ ಮಧ್ಯದಲ್ಲಿ ಮಕ್ಕಳನ್ನ ಅದುಮಿಕೊಂಡು ಸ್ಕೀಗಳ ಮೇಲೆ ಭಾರವೂರಿ ಹಿಮದ ಮೇಲೆ ನಡೆಯುತ್ತಾ ಹೋಗುವುದು – ಕೂತು ನೋಡುತ್ತಾ ಇದ್ದರೆ ಸಮಯ ಹೋಗುವುದೇ ತಿಳಿಯಲ್ಲ. ಸ್ಕೀಯಿಂಗ್ ಮಾಡದ ಕೆಲ ಹೆಂಗಸರು ಭಾರೀ ಬೆಲೆಯ ಉಡುಗೆಗಳನ್ನ, ಶೂ, ಬೂಟುಗಳನ್ನ , ಸನ್ ಗ್ಲಾಸಸ್ ಗಳನ್ನ ಹಾಕಿಕೊಂಡು, ಮಿರಿಗುಟ್ಟುವ ಲಿಪ್ಸ್ಟಿಕ್ ಪ್ರದರ್ಶಿಸುತ್ತಾ ಸೂರ್ಯನಿಗೆ ಮುಖವೊಡ್ಡಿ ಸನ್ ಟ್ಯಾನ್ಗೆಂದು ಆರಾಮು ಖುರ್ಚಿಗಳ ಮೇಲೆ ಒರಗಿರುವ ದೃಶ್ಯಗಳ ಬಗ್ಗೆ ಬೇಕಾದಷ್ಟು ಜೋಕ್ ಗಳು ಇವೆಯಂತೆ. ಅಂತೂ ಇಂತೂ ಎರಡೂ ವರ್ಷಗಳ ಅನುಭವಗಳನ್ನ ಆಗಾಗ ನಾವೆಲ್ಲಾ ಮೆಲಕು ಹಾಕುತ್ತಲೇ ಇದ್ದೀವಿ.

7 thoughts on “ನಾನು ಸ್ಕೀಯಿಂಗ್ ಕಲಿತಿದ್ದು – ವಿನತೆ ಶರ್ಮ

 1. ವಿನುತೆಯವರೇ ಉತ್ತ್ತಮ ನಿರೂಪಣೆ. ನಿಮ್ಮ ಸಾಹಸ ಓದಿದಾಗ ಕೆಲ ವರ್ಷಗಳ ಹಿಂದೆ ನನ್ನ ಮಗಳು ಅವಳ ಅಪ್ಪನ ಜೊತೆ ಲೀಡ್ಸ್ ಬಳಿಯಲ್ಲಿರುವ ಕೃತಕವಾದ ಸ್ಕೀಯಿಂಗ್ ರೆಸಾರ್ಟ್ನಲ್ಲಿ ಮಾಡಿದ ಸಾಹಸ, ಶ್ರಮ, ತಿಂದ ಪೆಟ್ಟು ನೆನಪಿಗೆ ಬಂತು.

  Like

 2. ಎಲ್ಲರಿಗೂ ಥ್ಯಾಂಕ್ಸ್. ಕಷ್ಟಪಟ್ಟರೆ ಕಲಿಯಬಹುದು, ಮನಸ್ಸಿದ್ದರೆ ಮಾರ್ಗ ಅನ್ನುವುದು ಕಳೆದ ಮತ್ತು ಈ ವರ್ಷ ನನಗೆ ಇನ್ನೂ ಚೆನ್ನಾಗಿ ಮನದಟ್ಟಾಯಿತು. ಆದರೆ ಪಾಪ, ನನ್ನ ಎಡಗಾಲಿನ ಮಂಡಿ ಪ್ರತಿ ದಿನವೂ ನನ್ನನ್ನ ಬೈಯುತ್ತಲೇ ಇದೆ. ಹರಿದಿರುವ ಮೆನಿಸ್ಕುಸ್ ರಿಪೇರಿಗಾಗಿ ಸರ್ಜರಿಯಾಗಬೇಕು ಎಂದಿದ್ದಾರೆ. ಕಷ್ಟಪಟ್ಟರೆ ಕಾಲನ್ನೂ ಕೂಡ ಸರಿಮಾಡಿಕೊಳ್ಳಬಹುದು ಎಂಬ ಭಂಡ ಧೈರ್ಯ!!

  Like

 3. ನಿಮ್ಮದೇ ಹಿಂದಿನ ಲೇಖನಗಳನ್ನು ಓದಿ ತಿಳಿದಂತೆ, ಹೊರಾಂಗಣ ಮತ್ತು ಅತಿಸಾಹಸದ ಕ್ರೀಡೆಗಳಲ್ಲಿ ಪಳಗಿದವರು ಮತ್ತು ಪರ್ವತ ಗುಡ್ಡಗಳ ಪ್ರೇಮಿಯಾದ ನೀವು ಛಲದಿಂದ ಸ್ಕಿಯಿಂಗ ಕಲಿತ ವರ್ಣನೆಯನ್ನು ಸ್ಫೂರ್ತಿದಾಯಕವಾಗಿ ಮತ್ತು ಕಲಿಯ ಹೊರಟವರಿಗೆ ಹುರಿದುಂಬಿಸುವಂತೆ ಬರೆದಿರುವಿರಿ, ವಿನತೆಯವರೇ. ನೀವು ಮೈಯೆಲ್ಲ ಬೋಂಡಾ ಬಾಸುಂದೆಯಾದರೂ ಬಿಟ್ಟವರಲ್ಲ! ಮಕ್ಕಳೇನೋ ಲೀಲಾಜಾಲವಾಗಿ ಕಲಿತು ಪಳಗಿಬಿಡುತ್ತಾರೆ. ’ತಡಮಾಡ” ಕಲಿಯಲು ಹೊರಟರೆ ಅಂಥ ಏಕ ನಿಷ್ಠತೆಯಿಂದಲೇ ಸ್ಕಿಯಿಂಗ ಕಲಿಯುವುದು ಸಾಧ್ಯವೆಂದು ಅನಿಸುತ್ತದೆ. ಇದು ನನ್ನಂಥ ಅರಾಮಖುರ್ಚಿ ಕ್ರಿಕೆಟರ್, ಸ್ಕಿಯರ್ ಹೇಳುವ ಮಾತಾದರೂ ನಿಮ್ಮ ಬರವಣಿಗೆಗೆ ಮೆಚ್ಚಿದೆ! ಅಭಿನಂದನೆಗಳು. ನಿಮ್ಮ ಅನುಭವವನ್ನು ಅನಿವಾಸಿ ಓದುಗರೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

  Liked by 1 person

 4. ವಿನತೆಯವರೇ , ನಿಮ್ಮ ಸಾಹಸಕ್ಕೆ ಭಲೇ ಶಾಭಾಶ್ ಎಂಬೆ‌ .ಹಾಲ್ಹೊಗೆ ಹಾಯುತ್ತಿರುವ ಹಿಮಾಚ್ಛಾದಿತ ಬೆಟ್ಟಗಳಲ್ಲಿ ಜಾರುವದು ಸುಂದರ ಅನುಭವವಲ್ಲವೇ?ನಾವು ಕಾಶ್ಮೀರಗೆ ಹೋದಾಗ ನನ್ನ ಪತಿ ,ಮಕ್ಕಳು ಸ್ಕೀಯಿಂಗ ಪ್ರಯತ್ನ ಮಾಡಿದರೂ ನಾನು ಅಂಚಿನಲ್ಲಿಯೇ ,’ಏಸು ರೂಪವೇ ಚಲುವೆ’ಅಂತ ಆ ಚಲುವ ಸವೀತಾ ಇದ್ದೆ.ಈಗ ನಿಮ್ಮ ಲೇಖನ ಓದಿದ ಮೇಲೆ ಪ್ರಯತ್ನ ಮಾಡಬಹುದಿತ್ತಲ್ಲಾ ಅನಿಸುತ್ತಿದೆ.ತುಂಬಾ ಸ್ಫೂರ್ತಿದಾಯಕ ಲೇಖನ.ಅಭಿನಂದನೆಗಳು ವಿನತೆಯವರೆ
  ಸರೋಜಿನಿ ಪಡನನ್ನಿ

  Liked by 1 person

 5. ವಿನತೆಯವರೇ , ನಿಮ್ಮ ಸಾಹಸಕ್ಕೆ ಭಲೇ ಶಾಭಾಶ್ ಎಂಬೆ‌ .ಹಾಲ್ಹೊಗೆ ಹಾಯುತ್ತಿರುವ ಹಿಮಾಚ್ಛಾದಿತ ಬೆಟ್ಟಗಳಲ್ಲಿ ಜಾರುವದು ಸುಂದರ ಅನುಭವವಲ್ಲವೇ?ನಾವು ಕಾಶ್ಮೀರಗೆ ಹೋದಾಗ ನನ್ನ ಪತಿ ,ಮಕ್ಕಳು ಸ್ಕೀಯಿಂಗ ಪ್ರಯತ್ನ ಮಾಡಿದರೂ ನಾನು ಅಂಚಿನಲ್ಲಿಯೇ ,’ಏಸು ರೂಪವೇ ಚಲುವೆ’ಅಂತ ಆ ಚಲುವ ಸವೀತಾ ಇದ್ದೆ.ಈಗ ನಿಮ್ಮ ಲೇಖನ ಓದಿದ ಮೇಲೆ ಪ್ರಯತ್ನ ಮಾಡಬಹುದಿತ್ತಲ್ಲಾ ಅನಿಸುತ್ತಿದೆ.ತುಂಬಾ ಸ್ಫೂರ್ತಿದಾಯಕ ಲೇಖನ.ಅಭಿನಂದನೆಗಳು ವಿನತೆಯವರೆ
  ಸರೋಜಿನಿ ಪಡಸಲಗಿ

  Like

 6. ಭಲೆ ವಿನುತೆ ಅವರೆ. ಈ ಬಾರಿ ನೀವು ಹೋಗಿದ್ದ ಸ್ಥಳಕ್ಕೆ ನಾನೂ ಹೋಗಿದ್ದೆ. ಅಲ್ಲಿನ ಸ್ಕೀಯಿಂಗ್ ಚಟುವಟಿಕೆ ನೋಡಿ ನನಗೂ ಕಲಿಯುವ ಹುಮ್ಮಸ್ಸು ಬಂದಿತ್ತು. ಆದರೆ ನಿಮ್ಮಂತೆ ಕುಟುಂಬದವರು ಜೊತೆಯಲ್ಲಿ ಇರಲಿಲ್ಲ. ನನ್ನ ಪತಿ ಅವರ ಭೌತಶಾಸ್ತ್ರದ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ಹಾಗಾಗಿ ಅವಕಾಶ ಸಿಗಲಿಲ್ಲ. ನಿಮ್ಮ ಹುಮ್ಮಸ್ಸು ಮತ್ತು ಶ್ರಧ್ಹೆಗಳು ನಿಜಕ್ಕೂ ಪ್ರಶಂಸನೀಯ. ಶ್ವೇತವರ್ಣದಿಂದ ಕಂಗೊಳಿಸುವ ಈ ಪರ್ವತಮಾಲೆಗಳಲ್ಲಿ ಹಿಮದ ಮೇಲೆ ಜಾರುವ ಅನುಭವ ನಿಜಕ್ಕೂ ಅಧ್ಭುತ ಎಂದು ಅಲ್ಲಿ ನೋಡಿದ ದೃಶ್ಯದಿಂದ ನನಗೆ ಮನವರಿಕೆಯಾಯಿತು. ಅದನ್ನು ಕಾರ್ಯರೂಪಕ್ಕಿಳಿಸಿ ನೀವು ಮಾಡಿರುವ ಸಾಹಸ ನನಗೂ ಸ್ಪೂರ್ತಿ ನೀಡಿದೆ. ನಿಮ್ಮಿಂದ ಇಂತಹ ಲೇಖನಗಳು ಬರುತ್ತಿರಲಿ, ನಮ್ಮ ವೇದಿಕೆಯ ಸದಸ್ಯರು ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಯೋಚನೆ ಮಾಡಬಹುದು.
  ಉಮಾ ವೆಂಕಟೇಶ್

  Liked by 1 person

 7. ಮಸ್ತ್ ಮಜಾ ಬಂತು ನಿಮ್ಮ ಸ್ಕೀಯಿಂಗ್ ಕಲಿಕೆಯ ಬಗ್ಗೆ ಓದಿ. ಅದರ ಜೊತೆ, ಪ್ರಯತ್ನ ಪಟ್ಟರೆ, ಅಲ್ಪ-ಸ್ವಲ್ಪ ಪೆಟ್ಟುಗಳ ಜೊತೆ ಯಾರು ಬೇಕಾದರೂ ಈ ಕ್ರೀಡೆಯನ್ನು ಕಲಿಯಬಹುದು ಎನ್ನುವ ಉತ್ಸಾಹ ಕೂಡಾ!!!
  ಸ್ಪೂರ್ಥಿದಾಯಕವಾದ ಬರಹ.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.