ಬಿ ಜಯಶ್ರೀಯವರು ಇಂಗ್ಲೆಂಡಿಗೆ ಬಂದಾಗ ಅವರೊಂದಿಗೆ ಅರ್ಧ ಗಂಟೆ ಮಾತಾಡುವ ಅವಕಾಶ ಸಿಕ್ಕಿತ್ತು. ಅವರ ಮಾತುಗಳು ನಿಮ್ಮ ಮುಂದೆ..
ಗುಬ್ಬಿ ವೀರಣ್ಣನವರ ಬಗ್ಗೆ…
ಅಷ್ಟು ಬೇಗ ಮುಗ್ಸೋಕೆ ಆಗಲ್ವಲ್ಲಾ (ನಗು). ಗುಬ್ಬಿ ವೀರಣ್ಣ ನನ್ನ ತಾತ, ಓದಿದ್ದು ಬಹುಷಃ ನಾಕನೇ ಕ್ಲಾಸು. ಆದರೆ ಗಳಿಸಿದ್ದು ಅಪಾರ. ‘ನಾನು ತಿಳಿದೋನಲ್ಲ, ಓದಿದವನಲ್ಲ’ ಎಂಬ ವಿನಯ. ಕಂಪನಿ ಮಾಲಿಕನಿಂದ ಬಂದ ಬಳುವಳಿ. ೧೦೫ ವರ್ಷ ಯಾವ ಡಿಗ್ರಿ ಹೋಲ್ಡರಿಗೂ ಕಡಿಮೆ ಇಲ್ಲದಂತೆ ನಡೆಯಿತು ಕಂಪನಿ. Its just not a company, its University ಅಂತ ಪ್ರೂವ್ ಮಾಡಿದರು. ಅಂಥ ದೊಡ್ಡ ವ್ಯಕ್ತಿಯ ಮೊಮ್ಮಗಳಾಗಿ ನನಗೆ ಹೆಮ್ಮೆ. ಅವರ ಮೊಮ್ಮಗಳಾಗಿ ಅಷ್ಟೊಂದು ಸಾಧನೆ ಮಾಡಿದ್ದೇನೂ ಇಲ್ಲವೋ ಗೊತ್ತಿಲ್ಲ.
ಎಲ್ಲಿ ಹೋದರೂ ನನ್ನ ತಾತನ ನೆನಪು ನನಗೆ ತುಂಬಾ ಇದೆ. ಅವರು ಮಾಡಿದಂಥಾ ರಂಗಭೂಮಿಗೆ ನನ್ನಿಂದ ಯಾವುದೇ ಅಪಚಾರ ಆಗಬಾರದು, ತಪ್ಪು ಆಗಬಾರದು, ಅವರ ಹೆಸರಿಗಾಗಲೀ ರಂಗಭೂಮಿಗಾಗಲೀ ಯಾವ ಅಪಚಾರವಾಗಬಾರದು ಎಂದು ನೆನಪಿಟ್ಟುಕೊಂಡೇ ನಾನು ರಂಗಭೂಮಿಯಲ್ಲಿರೋದು.
ನಾನು ನಾಕು ವರ್ಷಕ್ಕೆ ರಂಗಭೂಮಿಗೆ ಬಂದಿದ್ದು. ನನ್ನ ತಾತನನ್ನು ಅವರ ೭೨ ವರ್ಷದವರೆಗೂ ನೋಡಿದ್ದೇನೆ. ಎನ್ ಎಸ್ ಡಿ (ನ್ಯಾಷನಲ್ ಸ್ಕೂಲ್ ಆಫ ಡ್ರಾಮಾ)ದಲ್ಲಿ ನಾನಿದ್ದಾಗ ಅವರು ತೀರಿಕೊಂಡ್ರು, ಆ ವಿಷಯಾನ ಅಲ್-ಖಾಜಿ ಹೇಳಿದ್ರು, ‘ನಿಮ್ಮ ತಾತ ಹೊರಟುಹೋದ್ರು, ಯಾವುದೇ ಕಾರಣಕ್ಕೂ ನೀನು ಅಳಬಾರದು. ಅವರಿಗೆ ನಿನ್ನ ರಂಗಭೂಮಿಯ ಮೂಲಕ ಶೃದ್ದಾಂಜಲಿ ಅರ್ಪಿಸು’. ನಾನು ಅದನ್ನು ಪಾಲಿಸಿದೆ.
ನನ್ನ ತಾತನ ಪ್ರಭಾವ ನನ್ನ ಮೇಲೆ ತುಂಬಾ ದೊಡ್ಡದು. ಅವರಿಗೆ ಬಹಳ ಒಳ್ಳೆಯ ಹಾಸ್ಯಪ್ರಜ್ಞೆ ಇತ್ತು. ಬಹಳ ಒಳ್ಳೆ organizer. ಎಲ್ಲಕ್ಕಿಂತ ಹೆಚ್ಚಾಗಿ ಬಹಳ ದೊಡ್ಡ ಮನುಷ್ಯ. ತಾನು ಒಂದು ದೊಡ್ಡ ಕಂಪನಿಯ ಮಾಲಿಕ, ಕಂಪನಿ ನಡೆಸ್ತಿರೋ ಓನರು ಎನ್ನುವ ಭಾವನೆ ಯಾವತ್ತೂ ಇರಲಿಲ್ಲ. ತಾನು ಎಲ್ಲರಿಗಿಂತ ಕಿರಿಯವ ಎನ್ನುವ ಭಾವನೆ. ಯಾವ ನಟನಿಗೆ ನೋವಾದರೂ ಆ ನಟನ ನೋವು ನಿವಾರಣೆ ಮಾಡೋವ್ರು.
ಒಂದು ಸರ್ತಿ, ಕಂಪನಿಯಲ್ಲಿ ಒಬ್ಬ ನಟ, ಬಹಳ ದೊಡ್ಡ ನಟ, ಮೇರು ನಟ…ಅವನಿಗೆ ಸ್ನಾನಕ್ಕೆ ಬಿಸಿನೀರು ಸಿಗಲಿಲ್ಲ. ಸಿಟ್ಟು ಬಂದು ಕಂಪನಿ ಬಿಟ್ಟು ಹೊರಟು ಹೋಗ್ತೀನಿ ಅಂತ ಹಠ ಹಿಡಿದ. ಆಗ ಡ್ರಂನಲ್ಲಿ ನೀರು ಕಾಯಿಸ್ತಾ ಇದ್ರು. ೧೦೦ ಜನ ಇದ್ದಂಥ ಕಂಪನಿ. ಆ ವಿಷಯ ಗೊತ್ತಾದ ತಕ್ಷಣ ಇವರು ಓಡಿ ಬಕೆಟ್ಟಿನಲ್ಲಿ ನೀರು ಕಾಯಿಸಿಕೊಂಡು ತೋಡಿಕೊಂಡು ಅವರತ್ತ ಓಡಿಹೋಗಿ, ‘ಹಾಗೆಲ್ಲ ಬಿಟ್ಟೋಗೋ ಮಾತಾಡಬೇಡಿ, ನೀವು ಬಿಟ್ರೆ ಕಂಪನಿಗೆ ಒಳ್ಳೆಯದಲ್ಲ’, ಅಂತೆಲ್ಲ ಸಮಾಧಾನ ಮಾಡಿದರು. ಅಂಥಾ ದೊಡ್ಡ ವ್ಯಕ್ತಿ, ಮೇರು ವ್ಯಕ್ತಿ, ನನ್ನ ತಾತ.
ಗುಬ್ಬಿ ವೀರಣ್ಣನವರೇ ಕನ್ನಡದ ಮೊಟ್ಟಮೊದಲ ಮೂಕಿ ಸಿನೆಮಾ ಮಾಡಿದ ವ್ಯಕ್ತಿ. ಅಂಥ ಛಲ ಇತ್ತು ಅವರಲ್ಲಿ, ‘ಸೋತರೂ ಚಿಂತೆಯಿಲ್ಲ, ಈ ವಿಷಯ ಗೊತ್ತಾಗಬೇಕು. ತಪ್ಪು ಮಾಡಿದ್ರೆನೇ ಸರಿ ಯಾವುದು ಅಂತ ಗೊತ್ತಾಗಲು ಸಾಧ್ಯ’, ಎನ್ನುವಂಥ ಯೋಚನೆ.
೧೦೦ ವರ್ಷ ನಡೆದಿರುವಂಥ ಕಂಪನಿ ಏಶ್ಯಾದಲ್ಲೇ ಮೊದಲು. ಕಂಪನಿಯಿಂದ ಎಷ್ಟೊಂದು ಮೇರು ನಟರು, ಕಲಾವಿದರು ಸಿನೆಮಾಗೆ ಬಂದರು. ರಾಜಣ್ಣ, ಬಾಲಣ್ಣ, ನರಸಿಂಹರಾಜು… ಒಬ್ರೇ ಇಬ್ರೇ.. ಕಾಲ ಸರಿದಂತೆ ಅವರು ತಮ್ಮ ತಮ್ಮ ವೃತ್ತಿಯಲ್ಲಿ ಬಿಜಿಯಾದರು. ಆದ್ರೆ ತಾತ ತೀರಿಕೊಂಡಾಗ ಎಲ್ಲ ಬಂದಿದ್ದರು.
ನ್ಯಾಷನಲ್ ಸ್ಕೂಲ್ ಆಪ್ಹ್ ಡ್ರಾಮ (ಎನ್.ಎಸ್. ಡಿ) ಬಗ್ಗೆ…
ಎನ್.ಎಸ್.ಡಿ ಗೆ ಹೋಗುವ ಮೊದಲೇ ಎಲ್ಲ ಪ್ರಾಕ್ಟಿಕಲ್ಸ್ ಆಗಿ ಹೋಗಿತ್ತು. ಎನ್.ಎಸ್.ಡಿ ನಲ್ಲಿ ಥಿಯರಿ ಕಲಿತಿದ್ದು.
ಗುಬ್ಬಿ ಕಂಪನಿಯಲ್ಲಿ ಲೈಟ್ಸ್ ಇರಲಿಲ್ಲ, ಪೆಟ್ರೋಮ್ಯಾಕ್ಸ್ ಹಾಕಿ ನಾಟಕ ಮಾಡೋವ್ರು. ಆದ್ದರಿಂದ ಮುಖಕ್ಕೆ ಹಾಕುವ ಬಣ್ಣ ತುಂಬಾ ಜಾಸ್ತಿ ಆಗಿರ್ತಾ ಇತ್ತು. ಗ್ರೀಕ್ ಥೇಟರಿನಲ್ಲಿ ಮಾಸ್ಕ್ ಹಾಕಿದಂತೆ. ಲೈಟ್ಸ್ ಬಂದಮೇಲೆ ಅದರದೇ ಆದಂಥ ಒಂದು ಬೆಳವಣಿಗೆ ಶುರುವಾಯಿತು. ಆಮೇಲೆ ಸ್ಪಾಟ್ ಲೈಟ್ಸ್ ಬಂತು. ಲೈಟನ್ನು ಹೀಗೆ ಬಿಡಬೇಕು ಅಂತ ಗೊತಾಯಿತೇ ವಿನಃ ಬಣ್ಣ ಎಷ್ಟರ ಮಟ್ಟಿಗೆ ಕಡಿಮೆ ಮಾಡಬೇಕು ಅನ್ನೋದು ಗೊತಾಗಲಿಲ್ಲ. ಇದು ಎನ್.ಎಸ್.ಡಿ ಗೆ ಹೋದಾಗ ನನ್ನ ಅರಿವಿಗೆ ಬಂತು.
ರಂಗಭೂಮಿಯ ಬಗ್ಗೆ …
ಮನುಷ್ಯನನ್ನು ಮನುಷ್ಯನ ಹಾಗೇ ಕಾಣಿಸುವಂಥ ಮಾಧ್ಯಮ ನಾಟಕ ಒಂದೇ. ಮನುಷ್ಯನನ್ನು ತುಂಬಾ ಚಿಕ್ಕವನನ್ನಾಗಿ ಮಾಡುವುದು ಕಿರುತೆರೆ – ಟಿವಿ. ಇರೋದಕ್ಕಿಂತ ಅಗಾಧವಾಗಿ ತೋರ್ಸೋದು ಬೆಳ್ಳಿತೆರೆ.
ರಂಗಭೂಮಿಯ ಜನ ಸೀರಿಯಲ್ಲಿಗೆ ಹೋಗಿದ್ದಾರೆ. ಸೀರಿಯಲ್ಲಿನಲ್ಲಿ ಬೇಗ ದುಡ್ಡು ಸಿಗುತ್ತೆ. ಏನು ಮಾಡೋಕಾಗುತ್ತೆ?
ಪರದೇಶದ ಕನ್ನಡಿಗರ ಬಗ್ಗೆ…
ಹೊರದೇಶದಲ್ಲಿ ಕನ್ನಡಿಗರನ್ನು ನೋಡಿದಾಗ ಖುಶಿಯಾಗುತ್ತೆ, ಇನ್ನೂ ಜ್ಞಾಪಕ ಇಟ್ಟುಕೊಂಡಿದ್ದಾರಲ್ಲ ನಮ್ಮನ್ನ ಅಂತ. ಬರಿ ಸಿನೆಮಾಗಳನ್ನೇ ಜ್ಞಾಪಿಸಿಕೊಳ್ತಾರಲ್ಲ ಅಂತ ಬೇಜಾರಾನೂ ಆಗುತ್ತೆ.
ಹೊರದೇಶದಲ್ಲಿ ಕನ್ನಡಿಗರು ಮಾಡುವ ಕನ್ನಡ ಕಾರ್ಯಕ್ರಮಗಳು ಇನ್ನೂ ಬೆಳೆಯಬೇಕಿತ್ತೇನೋ ಅಂತ ಅನಿಸುತ್ತೆ. ತಾವು ನಾಡನ್ನು ಬಿಟ್ಟು ಬಂದ ಕಾಲದಲ್ಲಿ ಅವರು ನಿಂತು ಬಿಟ್ಟಿದ್ದಾರೆ. ಇನ್ನೂ ತುಂಬಾನೇ ಇದೆ, ತುಂಬಾ ಬದಲಾವಣೆ ಆಗಿದೆ. ಅದನ್ನು ಕಲಿಯಬೇಕು.
ಅಲ್ಲೇನಿದೆ ಬರೋದಿಕ್ಕೆ ಅಂತ ನೀವು ಕೇಳ್ತೀರಿ, ಇಲ್ಲೇನಿದೆ ಇರೋದಿಕ್ಕೆ ಅಂತ ನಾನು ಕೇಳ್ತೀನಿ. ಅಲ್ಲಿ (ಭಾರತದಲ್ಲಿ, ಕರ್ನಾಟಕದಲ್ಲಿ) ನನ್ನತನ ಇದೆ, ನಾನಿದೀನಿ, ನನ್ನ ಆತ್ಮ ಇದೆ.
ಬಿ. ಜಯಶ್ರೀ ಅವರು ಬಹಳ ಗೌರವಾನ್ವಿತ ಹಿರಿಯ ಕಲಾವಿದೆ, ಅವರ ಅಜ್ಜನಂತೆ ಅವರು ಕೂಡ ರಂಗ ಭೂಮಿಯ Legend ಎಂಬ ವಿಚಾರದಲ್ಲಿ ಯಾವ ಅನುಮಾನವಿಲ್ಲ. ನಮ್ಮ ಪರಿವಾರದ ಹಿತೈಷಿಗಳಾದ ಅವರನ್ನು ಹತ್ತಿರದಿಂದ ಕಾಣುವ ಹಾಗು ಅವರೊಡನೆ ಒಂದೆರಡು ದಿನಗಳನ್ನು ಕಳೆಯುವ ಅವಕಾಶ ಇತ್ತಿಚಿಗೆ ಒದಗಿ ಬಂದದ್ದು ನನ್ನ ಭಾಗ್ಯ. ರಂಗಭೂಮಿಯ ಮೇಲೆ ಜಯಶ್ರೀ ಅವರು ಜಯಶ್ರೀ ಯಾಗಿ ಕಂಡರು, ನಿಜಜೀವನದಲ್ಲಿ ಬೆಳ್ಳಿತೆರೆಯಲ್ಲಿ ಕಾಣುವುದಕ್ಕಿಂತ ಎತ್ತರವಾದ ವ್ಯಕ್ತಿತ್ವ. She is very simple, humble and down to earth. This small interview in itself an example of her simplicity.
ನಮ್ಮ ಕನ್ನಡಬಳಗದಲ್ಲಿ ಮಾಡುವ ಕಾರ್ಯಕ್ರಮ ಇನ್ನು ಬೆಳೆಯಬೇಕು ಎಂಬ ಅವರ ಒಂದು constructive ಸಲಹೆಯನ್ನು ನಾವು ಪರಿಶೀಲಿಸಬೇಕು. ಹುಚ್ಚು ಮಾಧ್ಯಮಗಳ ಹಾಗು ಸಿನಿಮಾ ಹಾವಳಿಯಲ್ಲಿ ರಂಗಭೂಮಿಯ ಕಲೆ ಇನ್ನು ಜೀವಂತವಾಗಿರುವುದ್ದಕ್ಕೆ ಜಯಶ್ರೀ, ಕಂಬಾರ, ಹಾಗು ಕಾರ್ನಾಡರು ಕಾರಣರಾಗಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ರಂಗಗೀತೆಗಳನ್ನು ಭಾವಗೀತೆಗಳಷ್ಟೆ ಜನಪ್ರಿಯಗೊಳಿಸಿದವರು ಬಿ. ಜಯಶ್ರೀ
LikeLike
”ಹೊರದೇಶದಲ್ಲಿ ಕನ್ನಡಿಗರು ಮಾಡುವ ಕನ್ನಡ ಕಾರ್ಯಕ್ರಮಗಳು ಇನ್ನೂ ಬೆಳೆಯಬೇಕಿತ್ತೇನೋ ಅಂತ ಅನಿಸುತ್ತೆ. ತಾವು ನಾಡನ್ನು ಬಿಟ್ಟು ಬಂದ ಕಾಲದಲ್ಲಿ ಅವರು ನಿಂತು ಬಿಟ್ಟಿದ್ದಾರೆ. ಇನ್ನೂ ತುಂಬಾನೇ ಇದೆ, ತುಂಬಾ ಬದಲಾವಣೆ ಆಗಿದೆ. ಅದನ್ನು ಕಲಿಯಬೇಕು.”
this statement crystallises a lot of things regarding kannada,kannadigaru and the activities around that cause.
it was a really wonderful experience to have met her. A great personality who gives the impression that she walks the talk.
sudarshan
LikeLike
ರಂಗಭೂಮಿಯ ಉನ್ನತ ಪರಂಪರೆಯಿಂದ ಬಂದ ಬಿ. ಜಯಶ್ರಿ ನಿಜಕ್ಕೂ ಒಬ್ಬ ಅಧ್ಭುತ ನಟಿ ಮತ್ತು ಗಾಯಕಿ. ಈಗ ೪ ವರ್ಷಗಳ ಹಿಂದೆ ಬೆಳಗಾವಿಯ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನೆಯಲ್ಲಿ, ಮೊದಲ ಬಾರಿಗೆ ಆಕೆಯ ಕಂಚಿನ ಕಂಠವನ್ನು ಕೇಳಿದಾಗ ನನಗೆ ರೋಮಾಂಚನವಾಗಿತ್ತು. ಈ ಬಾರಿ ಆಕೆಯನ್ನು ಮುಖತಃ ಭೇಟಿ ಮಾಡುವ ಸುವರ್ಣ ಅವಕಾಶವನ್ನು ತಪ್ಪಿಸಿಕೊಂಡಿದ್ದೇನೆ. ಕನ್ನಡ ರಂಗಭೂಮಿಗೆ ಆಕೆ ಮಾಡುತ್ತಿರುವ ಸೇವೆ ಶ್ಲಾಘನೀಯವಾದದ್ದು. ತಮ್ಮ ಸಂದರ್ಶನದಲ್ಲಿ ಅವರು ತಿಳಿಸಿರುವಂತೆ, ಹೊರನಾಡ ಕನ್ನಡಿಗರು ತಾವು ತಮ್ಮ ನಾಡನ್ನು ಬಿಟ್ಟು ಬಂದ ಸಮಯದಲ್ಲಿ ಇನ್ನೂ ವಿಹರಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಅನೇಕ ಬದಲಾವಣೆಗಳು ಅವರನ್ನು ತಲುಪಿಲ್ಲ. ಅದರಲ್ಲೂ ರಂಗಭೂಮಿಯ ಮಾಧ್ಯಮದಲ್ಲಿ ಕ್ರಾಂತಿಯೇ ನಡೆದಿದೆ. ಅಂತಹ ಕ್ರಾಂತಿಕಾರಕ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿ ಮುನ್ನಡೆಯುತ್ತಿರುವ, ಬಿ.ಜಯಶ್ರಿ ಅವರ ಸಂದರ್ಶನ ಸಮಯೋಚಿತವಾಗಿದೆ. ಕೇಶವ್ ಈ ಸಂದರ್ಶನದಲ್ಲಿ, ಅವರ ಮನಸ್ಸಿನ ಮಾತುಗಳನ್ನು ಹೊರಗೆಡುಹುವುದರಲ್ಲಿ ಸಫಲರಾಗಿದ್ದಾರೆ. ಧನ್ಯವಾದಗಳು ಕೇಶವ್.
ಉಮಾ ವೆಂಕಟೇಶ್
LikeLike
ಈ ಪುಟ್ಟ ಸಂದರ್ಶನ ಜಯಶ್ರೀ ಅವರ ಮೇರು ಸದೃಶ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಅವರ ಕಂಠಶ್ರೀಯನ್ನು ಕನ್ನಡಬಳಗದ ಸಮಾರಂಭದಲ್ಲಿ ಕೇಳಿ ಬೆರಗಾಗಿ, ಆನಂದಿಸಿ ಪ್ರಫುಲ್ಲರಾದ ನಮಗೆ ಅವರ ಅಂತರಾತ್ಮದ ಝಳಕು ಇದು. ಎಷ್ಟೊಂದು ವಿಚಾರಗಳು ನಮ್ಮನ್ನು ಚಿಂತಿಸುವಂತೆ ಮಾಡುತ್ತವೆ. ನೆನಪಿಡುವಂತ ಮಾತುಗಳು: ಮನುಷ್ಯನನ್ನು ಮನುಷ್ಯನ ಹಾಗೇ ಕಾಣಿಸುವಂಥ ಮಾಧ್ಯಮ ನಾಟಕ ಒಂದೇ, ಅವನನ್ನು ಚಿಕ್ಕವನಾಗಿಸುವ ಕಿರು ತೆರೆ, ನಾವು ಅನಿವಾಸಿಗಳು ಅಲ್ಲಿಯ ಬಗ್ಗೆ ಕಲಿಯಬೇಕಾದ್ದು, ಇತ್ಯಾದಿ. ಮಾರ್ಮಿಕ ಮೂರು ಕೊನೆಯ ಪದಗಳು: (ಅಲ್ಲಿ) ನನ್ನ ಆತ್ಮ ಇದೆ! ಸಂದರ್ಶನಕ್ಕೆ ಧನ್ಯವಾದಗಳು- ತೊಗೊಂಡವರಿಗೂ, (ತಡವಾದರೂ!)ಪ್ರಕಟಿಸಿದ್ದಕ್ಕೂ!
LikeLike