ಸಂಬಂಧಗಳ ಆಳವಳೆಯುತ್ತ ಪದರುಗಳನ್ನು ಬೇರ್ಪಡಿಸುತ್ತ ಪ್ರಶ್ನೆಗಳ ತರಂಗಗಳನ್ನೆಬ್ಬಿಸಿದ್ದಾರೆ ಸುದರ್ಶನ್ ತಮ್ಮ ಹೊಸ ಕವನದಲ್ಲಿ. ಓದುತ್ತಿದಂತೆ ನಿಮ್ಮ ವಿಚಾರ ಲಹರಿಯನ್ನು ಹರಿ ಬಿಡುವುದರಲ್ಲಿ ಯಾವ ಸಂದೇಹವೂ ಇಲ್ಲ.
ಜಗ ಎದುರು ಬಿದ್ದಾಗ ಜಗದೆದುರು ಬಿದ್ದಾಗ
ಜಗದ ಜೀವರುಗಳೆಲ್ಲ ನಕ್ಕಾಗ
ಜಗಕೆ ಕಿವಿಗೊಡದಂತೆ ಜಗದ ಪರಿವೆಯ ಚಿಂತೆ
ಇರದಂತೆ ನೀನಂದು ನನಗಾಗಿ ನಿಂತೆ
ಕೈ ಚಾಚಿ ಎಬ್ಬಿಸುತ ಮೈ ಮನವ ಝಾಡಿಸುತ
ಮೈದಡವಿ ಮನದಲ್ಲಿ ಮನದಲ್ಲಿ ಧೈಯ೯ ಮೂಡಿಸಿದೆ
ತನುವ ಧೂಳನು ಒರೆಸಿ ಮನದ ಗಾಯವ ಮರೆಸಿ
ಹಳೆಯ ಪುಟಗಳ ಹರಿದು ಹೊಸದು ತೋರಿಸಿದೆ
ಹೊಸ ಬದುಕ ನಾಳೆಗಳು, ನಾಳೆಗಳ ಹಾಳೆಗಳು
ಹಾಳೆಗಳು ತುಂಬಿರುವ ಪುಸ್ತಕವಿದೆ
ಪುಸ್ತಕದ ಮೊದಲೇನು, ನಡುವೇನು ಕೊನೆಯೇನು
ಪುಸ್ತಕದ ತುಂಬೆಲ್ಲ ನಿನ್ನಿರುವಿದೆ
ಕರುಳ ಕುಡಿ ನಾವಲ್ಲ, ಕರುಳ ರಕ್ತವು ಇಲ್ಲ
ನೆರೆ ನೆರೆದು ನಿಂತ ಸಂಬಂಧಗಳು ಇಲ್ಲ
ಬರಿದೆ ಭಾವದ ಬೇರು ಹೀರಿ ಪ್ರೀತಿಯ ನೀರು
ಬೆಳೆಸಿರುವ ಈ ತರುವಿಗೇನು ಹೆಸರು?
ನಿನಗೇನು ಅಲ್ಲದ ಎನಗಾರು ನೀನು?
ನಮ್ಮ ನಡುವಿನ ಬಂಧಕಿರುವ ಹೆಸರೇನು?
-ಸುದರ್ಶನ ಗುರುರಾಜ ರಾವ್
ಒಗಟಿನಂತಹ ಪದ ಜಾಲದಲ್ಲಿ ಮನುಶ್ಯ ಸಂಭದಗಳನ್ನು ಹಣೆದಿರುವ ಸುದರ್ಶನರ ಕವನ ಹೊಸಬಗೆಯದು.
ಓದುಗರಲ್ಲಿ ಮುದ ತಂದಿದೆ. ತುಂಬ ಚೆನ್ನಾಗಿದೆ.
LikeLike
ಸುದರ್ಶನರ ಈ ಕೊಡುಗೆ ಪ್ರಾಸ, ಲಯ, ಪದಗಳ ಭಾವ, alliteration, ಇವುಗಳ ‘ಬಂಧ’ ತುಂಬಿದ ಸುಂದರ ಕವನ ಓದುಗನನ್ನು ಓಡಿಸಿಕೊ೦ಡು ಹೋಗಿ ಪ್ರೀತಿಯ ಬಂದದ ವಿವಿಧ ಮುಖಗಳನ್ನು ತೋರಿಸುತ್ತದೆ. ಪದಗಳ ಜೋಡಣೆ, ಭಾವನೆಗಳ ಹೊಸೆತ ಮುದಕೊಟ್ಟಿತು. ಆಹ್ಲಾದಕರ ಅನುಭವ. ಆನಂದಿಸಿದೆ. ಧನ್ಯವಾದಗಳು.
LikeLike
ಸಂಬಂಧಗಳ ಪದರಗಳನ್ನು ಬಿಡಿಸಿ ಅದರ ಮಹತ್ವವನ್ನು ಸುಂದರವಾದ ಪದಗಳಲ್ಲಿ ಹೆಣೆದು ವಿವರಿಸಿರುವ ಸುದರ್ಶನರ ಕವನ ನೂತನವೆನಿಸುತ್ತದೆ. ಕರುಳ ಕುಡಿ ನಾವಲ್ಲ, ಕರುಳ ರಕ್ತವು ಇಲ್ಲ ಎನ್ನುವ ಸಾಲುಗಳಲ್ಲಿ ಮನದನ್ನೆಯ ನಡುವೆ ಇರುವ ಪ್ರೀತಿಯ ಬೇರಿನ ಸಂಬಂಧವನ್ನು ಚೆನ್ನಾಗಿ ಬಿಡಿಸಿಟ್ಟಿದ್ದಾರೆ.
ಉಮಾ ವೆಂಕಟೇಶ್
LikeLike