ತಂತ್ರ ಯುಗದಲ್ಲಿ ಯಾನ ಮಾಡುತ್ತಿರುವಾಗ ಸುದರ್ಶನ್ ಅವರ ನೀಳ್ಗವನ ಬೇರೊಂದು ಕಾಲದಲ್ಲಿ ನಡೆದ ಕಥೆಯೇನೋ ಎಂದು ಪ್ರಾರಂಭದಲ್ಲಿ ಅನಿಸುವುದು ಸಹಜ. ಆದರೆ ಇಲ್ಲಿ ಬರುವ ಸನ್ನಿವೇಶಗಳು ನಿತ್ಯ ಸತ್ಯ. ಅನಿವಾಸಿಯ ಸಂಪಾದಕನಾಗಿ ನನಗೆ ಪ್ರತೀ ಸೋಮವಾರ, ಗುರುವಾರ ಮನಸ್ಸಿನಲ್ಲಿ ಇದೇ ಬಗೆಯ ತಳಮಳ. ನಾಳೆ ಪ್ರಕಟವಾಗುವ ಕೃತಿ ಯಾವುದು, ಅದನ್ನು ಜಾಲ ತಾಣಕ್ಕೆ ಏರಿಸಿಯಾಯಿತೇ, ತಪ್ಪುಗಳಿವೆಯೇ ಹೀಗೆ ಹಲವಾರು ಯೋಚನೆಗಳು. ಕೆಲಸ, ಸಂಸಾರದ ಎಳೆತಗಳು ಇವೆಲ್ಲವೂ ಇಲ್ಲಿ ಪದರ ಪದರವಾಗಿ ತೆರೆದುಕೊಳ್ಳುತ್ತವೆ. ತೆರೆದುಕೊಳ್ಳುತ್ತಲೇ ಸದ್ಯಕ್ಕೆ ಧಡಕ್ಕನೆ ಎಳೆತರುತ್ತದೆ.
ಬಲುದಿನದಿ ಮಿತ್ರನಿಗೆ ಪತ್ರವನೆ ಬರೆದಿಲ್ಲ
ಬರೆಯಲೆ ನಾನು ಬೇಗ
ತಾಳೆಗರಿಯೊಂದೆಳೆದು ಕುಳಿತಿರುವೆ ಯೋಚಿಸುತ
ಏನನ್ನು ಬರೆಯಲೀಗ
ಉಭಯಕುಶಲೋಪರಿಯ ಎರಡು ಸಾಲುಗಳನ್ನು
ಬರೆದಿರುವೆ ಲೇಖನಿಯಲಿ
ಮದ್ಯಾಹ್ನದೂಟಕ್ಕೆ ಆಲಸ್ಯವದು ಸೇರಿ ನಿದ್ದೆ
ಮೂಡಿತು ಕಣ್ಣುಗಳಲಿ
ನಿದ್ರೆಯಿಂದೆದ್ದು ಮುಂದೆ ಬರೆಯುವೆನೆಂದು
ನಾ ಅಲ್ಲಿ ವಿಶ್ರಮಿಸಲು
ಎದ್ದು ನೋಡಲು ತಾಳೆ ಗರಿ ಬದಲಾಗಿ
ತೊಗಲಿನಾ ಪತ್ರವಿರಲು
ತೊಗಲಿನಾ ಹಾಳೆಯಲಿ ನಾ ಪತ್ರ ಉದ್ಧರಿಸೆ
ಮತ್ತೆರೆದು ಸಾಲು ಬರೆದು
ಮುಂದಿನಾ ವಿಷಯಗಳ ಬರೆಯುವೆನು ನಂತರದಿ
ಎಂದಂದು ಒಳಗೆ ಸರಿದು
ಸಂಜೆಯಾಯಿತು ಸಂಧ್ಯಾ ವಂದನೆಯ ನಾ ಮುಗಿಸಿ
ಬಂದಿರಲು ಪತ್ರ ಬರೆಯೆ
ತೊಗಲು ಹಾಳೆಯ ಬದಲು ಅಲ್ಲಿತ್ತು ಸುಂದರ
ಬಟ್ಟೆಯ ಓಲೆ ಗರಿಯೆ
ನನ್ನ ಊರಿನ ವಿಷಯ ಅರುಹುತ್ತ ಕೇಳಿದೆನು
ಆತನ ಸುದ್ದಿಯೆಂತು
ಆಷ್ಟಕ್ಕೆ ಅಡಿಗೆಯಾ ಮನೆಯಿಂದ ನನಗೊಂದು
ಊಟಕ್ಕೆ ಕರೆಯು ಬಂತು
ಪತ್ರವನು ಬದಿಗಿಟ್ಟು ರುಚಿಯೂಟ ಸವಿಯಲಿಕೆ
ನಾನಂದು ಹೋದೆ ಒಳಗೆ
ಬಟ್ಟೆಯಾ ಓಲೆಯದು ಕಾಗದದ ಪತ್ರವಾಗಿತ್ತು
ತಾ ಅಷ್ಟರೊಳಗೆ!!
ಕಾಗದದ ಮೇಲೆರೆಡು ಸಾಲು ಗೀಚಿರಲಿಲ್ಲ
ಅಷ್ಟರಲೆ ಮಗನು ಬಂದು
ನಮ್ಮ ಜೊತೆಯಲಿ ನೀನು ಆಟವಾಡುವುದಿಲ್ಲ
ದೂಷಿಸುತ ಕರೆದನಂದು
ಎಲವೊ ಮಿತ್ರನೆ ನಿನಗೆ ಪತ್ರ ಬರೆಯುವ ಕೆಲಸ
ಎಳೆಯುತಿದೆ ದೀರ್ಘವಾಗಿ
ಎಂದು ಮರುಗುತ ಹೊರಟೆ ಮಗನೊಡನೆ ಆಡಲಿಕೆ
ಅವನ ಮನ ಶಾಂತಿಗಾಗಿ
ಬಂದು ಪತ್ರವ ಮುಗಿಸಿ ಮಡಿಸಿ ಲಕೋಟೆಗೆ
ಹಾಕಬೇಕೆಂದು ನೆನೆದು
ಮೇಲೊಂದು ಮರೆಯದೆಯೆ ಅಂಚೆ ಚೀಟಿಯನೆಂದು
ಮೆತ್ತಬೇಕೆಂದು ಬಗೆದು
ಮಗನಲ್ಲಿ ಮಲಗಿದನು ಇನ್ನು ತೊಂದರೆಯಿಲ್ಲ
ಪತ್ರವನು ನಾ ಮುಗಿಸಲು
ಭರದಿಂದ ಬಂದಿರಲು ಕಾಣದೆಯೆ ಕಾಗದವ
ಸುತ್ತಲೂ ಹುಡುಕುತಿರಲು
ಅಲ್ಲಿತ್ತು ಗಣಕಯಂತ್ರದ ಪರದೆ ಪರದೆಯಲಿ
ನನ ಒಕ್ಕಣೆಗಳು
ಮುಂದೆ ಬರೆಯುವುದಕೆ ಲೇಖಣಿಯೆ ಬೇಕಿಲ್ಲ
ಬೆರಳಚ್ಚು ಗುಂಡಿಗಳಿರಲು
ಪಟಪಟನೆ ನಾ ಬಡಿಯೆ ಮೂಡಿರಲು ಪರದೆಯಲಿ
ನನ್ನೆಲ್ಲ ಮನದ ಮಾತು
ಸಂಗ್ರಹಿಸಿ ಪರದೆಯಲಿ ಶೇಖರಿಸಿ ಕಳುಹಿಸಿರೆ
ಕ್ಷಣದಲ್ಲಿ ಹಾರಿಹೋಯ್ತು
ಪತ್ರಗಳ ವಿನಿಮಯಕೆ ಬೇಕಿತ್ತು ಹಿಂದೆಲ್ಲ
ದಿನ ವಾರ ಮಾಸ ಕಾಲ
ಕಣ್ಣೆವೆಯ ಬಡಿವಲ್ಲಿ ಹೊತ್ತೊಯ್ದು ತಲುಪಿಸಿದೆ
ಮಾಯೆಯಾ ಅಂತರ್ಜಾಲ
ಏನಿದಚ್ಚರಿ ದೇವ ಪ್ರತಿಸಲಕು ಪಡೆಯುತಿದೆ
ನನ ಪತ್ರ ರೂಪಾಂತರ
ಸಂದೇಶದ ಮಣ್ಣ ಕಲಸಿ ರೂಪಾಂತರವ
ನೀಡಿರೆ ಕಾಲ- ಕುಂಬಾರ
ಕಾಲನಾ ಹರಿವಿನಲಿ ಕುಳಿತು ನಾ ದೋಣಿಯಲಿ
ಅನುಭವಿಸಿ ಅಚ್ಚರಿಯನು
ಕನಸೊ ನನಸೊ ಎಂದು ತಿಳಿಯದಲೆ ಬೆಚ್ಚುತಲಿ
ಬಿಟ್ಟಿರಲು ನನ ಕಣ್ಣನು
ನಿಮ್ಮ ಬಡಬಡಿಕೆಯಲಿ ನನಗೆ ನಿದ್ರೆಯದಿಲ್ಲ
ದೂರುತಲಿ ನನ ಹೆಂಡತಿ
ಪತ್ರ ಬರೆಯುವುದೆಂದು ನಿಮ್ಮ ಹಣೆಯಲ್ಲಿಲ್ಲ
ಎಂದೆನುತ ತಿವಿದು ಮೂತಿ
ಮಗ್ಗುಲಿಗೆ ಹೊರಳಿದಳು ಕೊಡುತಲಿ ಎಚ್ಚರಿಕೆ
ಹೊಡೆದಳು ತಾನು ಗೊರಕೆ
ನಿದ್ರೆ ಬಾರದೆ ನಾನು ಮನದ ಕಸವನು ಗುಡಿಸೆ
ಹಿಡೆದೆ ಮರೆವಿನ ಪೊರಕೆ.
ಡಾ. ಸುದರ್ಶನ ಗುರುರಾಜರಾವ್.
ಸುದರ್ಶನರವರೆ, ನಿಮ್ಮ ಈ ಕವಿತೆಯಲ್ಲಿ, ದಶಕಗಳು ಬಹಳ ವೇಗದಲ್ಲಿ ಕಳೆದು ನಾವು ಅದರ ಬಗ್ಗೆ ಯೋಚಿಸುವ ಮೊದಲೆ ಬರಹದ ಬದಲಾವಣೆಗಳು, ಬಹಳ ವೇಗದಲ್ಲಿ ನಮ್ಮ ಜೀವನವನ್ನು ಆಕ್ರಮಿಸಿರುವುದನ್ನು, ಸರಳವಾದ ಭಾಷೆಯಲ್ಲಿ ಸೊಗಸಾಗಿ ಹೇಳಿದ್ದೀರಿ. ನಿಮ್ಮಿಂದ ಮತ್ತೊಂದು ಉತ್ತಮ ಕೊಡುಗೆ ಅನಿವಾಸಿ ಓದುಗರಿಗೆ.
ದಾಕ್ಷಾಯಿಣಿ
LikeLike
ಪತ್ರ ರೂಪಾಂತರದಲ್ಲಿ ’ಕಾಲ’ದೈನಂದಿನ ಕೆಲಸ ಕಾರ್ಯಗಳಲ್ಲಿ ಕಳೆದು ಹೋದದ್ದು ಆದರೆ ಬದಲಾವಣೆ ನಿರಂತರವಾಗಿ ಅಪ್ಪಳಿಸಿದ್ದು,ಅದರ ಅಲೆಗಳಲ್ಲಿ ನಾವು ರಾತ್ರಿ ಹಗಲುಗಳನ್ನು ಮಾಡಿದ್ದು ಎಲ್ಲ ವಿವರವಾಗಿದೆ. ಅದರಂತೆ ನಾವು ಈ ಬದಲಾವಣೆಗಳನ್ನು ಒಪ್ಪಿ ್ಅಳವಡಿಸಿಕೊಳ್ಳುತ್ತಾ ಸಾಗಿರುವುದು ದೈನಂದಿನ ಪರಿಯಾಗಿರುವ ಸೋಜಿಗವೂ ಇದೆ.
LikeLike
ಸುದರ್ಶನರು ಸದ್ಯದ ದೈನಂದಿನ ಜಂಜಾಟದ ಹಿನ್ನೆಲೆಯಲ್ಲಿ ’ಪತ್ರ ಪರಾಚಿ’ ನಡೆದು ಬಂದ ದಾರಿಯನ್ನೂ ವರ್ಣಿಸುವ ಡೊಂಬರಾಟದ ಸಮತೋಲಕ್ಕೆ ಚ್ಯುತಿಯಿಲ್ಲದಂತೆ ಬರೆದ ಬರವಣಿಗೆ ಮೆಚ್ಚುವಂತದು. Timeline ನಲ್ಲಿ present ಬಿಡುವಿಲ್ಲದೆ ಕಾಡುತ್ತಿರುತ್ತದೆ. ಮತ್ತೆ ಮತ್ತೆ ಗತಕಾಲಕ್ಕೆ ಭೆಟ್ಟಿ ಕೊಟ್ಟು ’ಟೈಮ್ ಟ್ರಾವಲ್’ ಮುಂದುವರೆಯುತ್ತಿರುತ್ತದೆ. ಅದರ ಮೇಲೆ ಸುಂದರ ಕಲ್ಪನೆಗಳು (ಕಾಲ ಕುಂಬಾರ, ಮರೆವಿನ ಪೊರಕೆ,ಕಾಲನಾ ಹರಿವಿನ ದೋಣಿ) ,ಇವನ್ನೆಲ್ಲ ಅಸ್ವಾದಿಸಿದೆ.
ಮತ್ತೊಂದು ಓಳ್ಳೆಯ ಕವಿತೆ.
LikeLike
ಮಾನವ ತನ್ನ ಉಭಯಕುಶಲೋಪರಿಯನ್ನು ಬರೆಯುವ ಸಾಧನದ ವಿಕಾಸವನ್ನು, ದೈನಂದಿನ ಜೀವನದ ಆಗುಹೋಗುಗಳೊಂದಿಗೆ ಬೆರೆಸಿ ಬರೆದ ಸುದರ್ಶನ ಅವರ ನೀಳ್ಗವನ, ಅವರದೇ ವಿಶಿಷ್ಟ ಶೈಲಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ತಾಳೆಯ ಗರಿಯಿಂದ ಪ್ರಾರಂಭಿಸಿ, ಗಣಕಯಂತ್ರದವರೆಗೆ ಮಾನವ ತನ್ನ ಸಂವಹನವನ್ನು ನಡೆಸುವ ಪರಿಯನ್ನು ಹೇಗೆ ಅಭಿವೃದ್ಧಿಗೊಳಿಸಿರುವ ಎನ್ನುವುದನ್ನು ಆಸಕ್ತಿಪೂರ್ಣವಾಗಿ ಬರೆದಿದ್ದಾರೆ. ಅವರ ಪದಗಳ ಬಳಕೆಯ ವೈಖರಿ ಕವನದ ೧೫ನೆಯ ಸಾಲಿನಲ್ಲಿ ನನಗೆ ಮೆಚ್ಚುಗೆಯಾಯಿತು.
“ಏನಿದಚ್ಚರಿ ದೇವ ಪ್ರತಿಸಲಕು ಪಡೆಯುತಿದೆ
ನನ ಪತ್ರ ರೂಪಾಂತರ
ಸಂದೇಶದ ಮಣ್ಣ ಕಲಸಿ ರೂಪಾಂತರವ
ನೀಡಿರೆ ಕಾಲ- ಕುಂಬಾರ“
ಪತ್ರಗಳ ಸಂದೇಶವನ್ನು ಕಾಲನೆಂಬ ಕುಂಬಾರನು ಅಚ್ಚರಿಪಡುವ ರೀತಿಯಲ್ಲಿ ರೂಪಾಂತರಗೊಳಿಸಿದ್ದಾನೆ ಎನ್ನುವ ಸಾಲು ಸುಂದರವಾಗಿದೆ.
ಅದೇ ರೀತಿ ಕಡೆಯ ಸಾಲಿನಲ್ಲಿ ನಿದ್ರೆ ಬಾರದೆ ಮನವನ್ನು ಗುಡಿಸಲು, ಮರೆವು ಎಂಬ ಪರಕೆಯನ್ನು ಹಿಡಿದೆ ಎನ್ನುವ ಪದಗಳು ನನಗೆ ಹಿಡಿಸಿತು. ಸುದರ್ಶನ ಅವರ ಮತ್ತೊಂದು ಭಿನ್ನವಾದ ಶೈಲಿಯ ಪದ್ಯ ನಮ್ಮ ಅನಿವಾಸಿ ಜಾಲಜಗುಲಿಯನ್ನು ಸಂಪನ್ನಗೊಳಿಸಿದೆ.
ಉಮಾ ವೆಂಕಟೇಶ್
LikeLike
Sudarshanarige dhanyavadagalu. Nimma kavan odi nanna manassu namma haleya samsar nimma hageye nirvahisiddudu jnapakakke banditu. Yee deshakke band nanter navellaru namma namma vyavsaya,samsar,makkaLa shikshaNagaLalli heNagadale bekalla. Yeede yellara jeevanada daari.
Aravind Kulkarni
LikeLike