ಇಷ್ಟಕ್ಕೂ ಈ ಹಾಳಾದ ಕವಿತೆ ಎಂದರೇನು?- ಕೇಶವ ಕುಲಕರ್ಣಿ ಅವರ ಕವನ

ನಮ್ಮ ಜೀವನದಲ್ಲಿ ಪ್ರತಿಕ್ಷಣವೂ ನಮಗೆ ಒಂದಲ್ಲಾ ಒಂದು ಅನುಭವಗಳಾಗುತ್ತವೆ.ಪ್ರತ್ಯಕ್ಷ, ಪರೋಕ್ಷ, ಭೌತಿಕ, ಮಾನಸಿಕ, ಲೌಕಿಕ, ಅಧ್ಯಾತ್ಮಿಕ ಹೀಗೆ ಅವುಗಳ ಸ್ವರೂಪ ಅಪಾರ ಹಾಗೂ ಅವುಗಳ ರಸಾನುಭವ ಅಗಣಿತ. ಈ ಅನುಭವಗಳನ್ನು ಯಥಾವತ್ ನಿರೂಪಿಸಿದರೆ ಅದು ವರದಿಯಾಗಿ ಬಿಡುತ್ತದೆ! ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಅದು ಶಾಸ್ತ್ರವಾಗಿಬಿಡುತ್ತದೆ. ಇಲ್ಲಾ ಅದನ್ನು ಅಂತರ್ಗತಗೊಳಿಸಿ, ಅಲಂಕಾರವನ್ನು ನೀಡಿ, ಒಂದು ರೀತಿ ನೀತಿಯ ಚೌಕಟ್ಟಿನಲ್ಲಿ ಬಣ್ಣಿಸಿದರೆ ಕಾವ್ಯವಾಗುವುದೇನೋ!! ಹಾಗಾದರೆ ಈ ಕಾವ್ಯ ಎಂದರೇನು? ಕವಿತೆಯೇ? ಸಾಹಿತ್ಯವೇ, ಪದ್ಯವೇ,ಗದ್ಯವೇ? ಮುಂದೆ ಓದಿ.

ಅನುಭವಗಳನ್ನು ಚಿತ್ರಿಸುವಲ್ಲಿ ಅವುಗಳಿಗೆ ಒಂದು ವಿಶೇಷತೆಯನ್ನು ನೀಡಿ ಪದಗಳಲ್ಲಿ ಹಿಡಿದಿಟ್ಟಾಗ, ಕಾವ್ಯ ‘’ಅನುಭವ ವಿಶೇಷ ‘’ ವಾಗಿ ರೂಪುಪಡೆಯುತ್ತದೆ ಎನ್ನುತ್ತಾರೆ ನಮ್ಮ ಜಿ.ಎಸ್.ಶಿವರುದ್ರಪ್ಪನವರು.

ಕವಿತೆ ಎಂದರೇನು?

ಈ ಪ್ರಶ್ನೆ ಜಿಜ್ಞಾಸುಗಳನ್ನು, ಪಂಡಿತರನ್ನು ಕಾಲಕ್ಕೂ ಕಾಡದೇ ಬಿಟ್ಟಿಲ್ಲ. ಪೌರಾತ್ಯ ಹಾಗೂ ಪಾಶ್ಚಾತ್ಯ ಚಿಂತಕರು ಈ ನಿಟ್ಟಿನಲ್ಲಿ ಸಾಕಷ್ಟು ವ್ಯಾಖ್ಯಾನಗಳನ್ನು ನೀಡಿದ್ದಾರೆ.

ಇಂಗ್ಲೀಷಿನ ನಿಘಂಟಿನ ಪ್ರಕಾರ,ಕಾವ್ಯ ಅಂದರೆ  poetry ( poeto =I create ); ಇದು ಗ್ರೀಕ್ ಭಾಷೆಯಿಂದ ಬಂದ ಪದ.

Literary work in which the expression of feelings and ideas is given intensity by the use of distinctive style and rhythm; poems collectively or as a genre of literature.

ಅಥವಾ

Is an art form in which human language is used for its aesthetic qualities in addition to, or instead of, its notional and semantic content. It consists largely of oral or literary works in which language is used in a manner that is felt by its user and audience to differ from ordinary prose.

ಅದನ್ನು, ಕಲೆ ಎಂದೂ, ಸಾಹಿತ್ಯಿಕ ಪ್ರಾಕಾರವೆಂದೂ ಬಣ್ಣಿಸಿ ಅದರ ಗುಣ ಲಕ್ಷಣಗಳನ್ನು ಸ್ಥೂಲವಾಗಿ ನೀಡಿದ್ದಾರೆ ಹಾಗೂ ಅದು ಬಹುತೇಕ ಪದ್ಯ ಪ್ರಾಕಾರವನ್ನು ಒಳಗೊಂಡಿದೆ.

ಭಾರತೀಯ ಕಾವ್ಯಮೀಮಾಂಸೆ ಇದರಲ್ಲಿ ಸವಿಸ್ತಾರವಾದ ಚಿಂತನೆಗಳನ್ನು, ಗುಣಲಕ್ಷಣಗಳ ಶ್ರೀಮಂತ ವಿಶ್ಲೇಷಣೆಗಳನ್ನು ನಮಗೆ ಬಳುವಳಿಯಾಗಿ ಕೊಟ್ಟಿದೆ.ಕನ್ನಡ ಭಾಷೆ ಹಾಗೂ ಸಂಸ್ಕೃತಗಳೆರಡರಲ್ಲೂ ಈ ವಿಷಯದಲ್ಲಿ ಕೊರತೆ ಇಲ್ಲ. ಪಾಶ್ಚಾತ್ಯ ಚಿಂತನೆಗೆ ವಿಭಿನ್ನವಾಗಿ, ಭಾರತೀಯ ತತ್ವ/ಕಾವ್ಯ ಮೀಮಾಂಸೆ, ಗದ್ಯ ಮತ್ತು ಪದ್ಯಗಳೆರೆಡನ್ನೂ ಕಾವ್ಯವೆಂದು ಬಣ್ಣಿಸುತ್ತದೆ.

ಕಾವ್ಯವು ಭಾವಾಭಿವ್ಯಕ್ತಿಯ ಸಾಹಿತ್ಯಿಕ ರೂಪವೆಂದು ವ್ಯಾಖ್ಯಾನಿಸಿದರೆ, ಅದು ಈ ಗದ್ಯ ಪದ್ಯಗಳೆರೆಡೂ ಆಗಬಹುದು ಎಂಬುದು ನಮ್ಮ ಹಿರಿಯರ ಅಭಿಪ್ರಾಯ.

‘’ಶಬ್ದಾರ್ಥ ಸಹಿತೌ ಕಾವ್ಯ ಗದ್ಯ-ಪದ್ಯಂಚ ತತ್ ದ್ವಿಧಾ’’ ಎಂದಿದ್ದಾನೆ ಭಾಮಹ. ಅಂದರೆ ಕಾವ್ಯ ಎಂಬುದು ಶಬ್ದ ಮತ್ತು ಅರ್ಥ ಎರಡನ್ನೂ ಒಳಗೊಂಡ ಸಾಹಿತ್ಯ ಕೃತಿ- ಕಾವ್ಯ ಎಂದಾದರೆ ಅದು ಯಾವ ರೂಪವನ್ನು ಬೇಕಾದರೂ ಪಡೆಯಬಹುದು.ಆದರೆ, ಪ್ರಚಲಿತ ಲೋಕಾರೂಢಿಯಲ್ಲಿ ಕಾವ್ಯ ಎಂಬ ಪದವನ್ನು ಕವಿತೆಗೆ  ಆರೋಪಿಸುವುದು ಸಾಮಾನ್ಯ.ಅದನ್ನೇ ಸ್ವಲ್ಪ ನೋಡೋಣ.

ಕವಿತೆ, ಅನುಭವ ವಿಶೇಷವಾಗಿ ಹೊರಹೊಮ್ಮಲು ಕವಿಯ ಪ್ರತಿಭೆ ಅವಶ್ಯಕ. ಹಾಗಾಗಿ ಕವಿತೆಯ ಮೂಲ ಕವಿಯ ಪ್ರತಿಭೆ.

ಇನ್ನು ಅಂತಹ ಅನುಭವವನ್ನು ಶಬ್ದ- ಅರ್ಥ ಸಹಿತವಾಗಿ ಬಣ್ಣಿಸಿದಾಗ ಅದೊಂದು ರೂಪು ಪಡೆಯುತ್ತದೆ. ಶಬ್ದಗಳು ಇಂಪು ತುಂಬಬೇಕು. ಇದು ಪ್ರಾಸ-ಲಯ-ಶ್ರುತಿ, ಒಳ ಸಂಬಂಧಗಳ ಮೂಲಕ ಮೂಡುವಂಥದ್ದು. ಇನ್ನು ಅರ್ಥ ಎಂಬುದು ಓದುಗನ, ಕೇಳುಗನ ಮನಸ್ಸನ್ನು ತಟ್ಟಬೇಕು. ಇದಕ್ಕೆ ರಸಾನುಭ ಮುಖ್ಯ. ಭೌತಿಕ ಸೃಷ್ಟಿಯಲ್ಲಿ ಕೇವಲ ಆರು ರಸಗಳಿದ್ದರೆ, ಸರಸ್ವತಿಯ ಕಾವ್ಯಪ್ರಪಂಚದಲ್ಲಿ ನವರಸಗಳು ತುಂಬಿರುತ್ತವೆ! ಹೀಗೆ  ಶಬ್ದ-ಅರ್ಥಗಳಿಂದ ತುಂಬಿದ ವಾಕ್ಯಗಳು ರಸಾತ್ಮಕವಾಗಿಯೂ ಇದ್ದಾಗ ಅದು ಕಾವ್ಯವಾಗುವ ಸಾಧ್ಯತೆ ಇದೆ

‘’ವಾಕ್ಯಂ ರಸಾತ್ಮಕೌ ಕಾವ್ಯಃ ‘’

ಹೀಗೆ ರಸಾತ್ಮಕವಾಗಿಯೂ, ಶಬ್ದಾರ್ಥ ಸಹಿತವಾಯೂ ಇರುವ ಸಾಹಿತ್ಯಿಕ ಕೃತಿಯೊಂದು ಮೊದಲಿನಿಂದ ಕೊನೆಯವರೆಗೂ ಒಂದು ವಿಷಯವನ್ನು/ಅನುಭವವನ್ನು ವ್ಯವಸ್ಥಿತವಾಗಿ ಓದುಗನ ಮನಮುಟ್ಟುವಂತೆ ರಚಿಸಲ್ಪಟ್ತಿರಬೇಕು , ಒಂದು ವ್ಯವಸ್ಥಿತ ಬಂಧಕ್ಕೆ ಒಳಪಟ್ಟಿರಬೇಕು.

‘’ಬಂಧೇ ವ್ಯವಸ್ಥಿತೌ  ಕಾವ್ಯಂ’’ ಎಂದಂತಾಯಿತು.

ಇನ್ನು ಅನುಭವಗಳನ್ನು ಅನುಭಾವಗಳಾಗಿಸಿ, ವಾಚಕ ಅಥವಾ ಕೇಳುಗನಲ್ಲಿ ಸ್ಥಾಯಿ ಭಾವವನ್ನು ಮೂಡಿಸುವಲ್ಲಿ ಯಶಸ್ವಿಯಾಗಲು ಅದು ನಾಟ್ಯ ಗೀತಾದಿಗಳಲ್ಲಿ ಬಳಕೆಯಾದರೆ ಇನ್ನೂ ಸೊಗಸು,

‘’ಅನುಭಾವ ವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ

ತೇಷಾಮೇವ ಪ್ರಯೋಗಸ್ತು ನಾಟ್ಯ ಗೀತಾದಿ ರಂಜಿತಂ ‘’  

ಎಂದಿದ್ದಾರೆ. ಶಬ್ದ-ಅರ್ಥ-ನಾದ ಈ ಮೂರೂ ಕವಿತೆಯ ಆತ್ಮತ್ರಯಗಳು ಎಂದೆನ್ನಬಹುದೇನೋ! ಆದರೆ ಬರೆದಿದ್ದೆಲ್ಲವೂ ಗೀತಯಾಗಬೇಕಿಲ್ಲ.  ಮೇಲೆ ಚರ್ಚಿಸಿದ ಲಕ್ಷಣಗಳಲ್ಲಿ ಕೆಲವಾದರೂ ಇದ್ದಾರೆ, ಅದಕ್ಕೆ ಕಾವ್ಯ/ಕವಿತೆ ಎಂದು ಕರೆಯಬಹುದೇನೋ.

ನವೋದಯದ ವರೆಗೂ, ಈ ನಿಟ್ಟಿನಲ್ಲಿ ಗಮನ ಕೊಟ್ಟು ಕವಿತೆಗಳ ರಚನೆಯಾಗುತ್ತಿತ್ತು. ನವ್ಯ, ಬಂಡಾಯ, ದಲಿತ ಇತ್ಯಾದಿ ಬೆಳವಣಿಗೆಗಳು ಇವುಗಳನ್ನು ಗಾಳಿಗೆ ತೂರಿ ತಮ್ಮದೇ ಹಾದಿ ಹಿಡಿದಿದ್ದು, ಅದರಲ್ಲೂ ಮನುಷ್ಯನ ಅನುಭವ, ಜೀವನವನ್ನು ಯಥಾವತ್ ನಿರೂಪಿಸಬೇಕೆಂಬ ನಿಯಮವನ್ನು ಆರೋಪಿಸಿಕೊಂಡು ಬರೆದ ಕವಿತೆಗಳು ಗದ್ಯ ಪದ್ಯಗಳ ನಡುವಿನ ಭೇದವನ್ನು ಅಳಿಸಿಹಾಕಿರುವುದು ಸರ್ವ ವೇದ್ಯ. ಅದರಲ್ಲೂ ಅವರು ಛಲಕ್ಕೆ ಬಿದ್ದವರಂತೆ, ಸಂಗೀತದ ಹಿಡಿತಕ್ಕೆ ಕವಿತಯನ್ನು ತರಬಾರದೆಂದೇ ಬಗೆದರಂತೆ. ಹಾಗಾಗಿ ಇಂದಿನ ಕವಿತೆಗಳು ಹೊಸ ಸ್ವರೂಪವನ್ನು ಪಡೆದಿರುವುದು! ನಾದ ನಿನಾದಿಸದ ಕವಿತೆಗಳು ಮಕ್ಕಳ ಪಠ್ಯಗಳನ್ನೂ  ಸೇರಿ ಛಾಪು ಕಳೆದುಕೊಳ್ಳುವತ್ತ ಸಾಗಿವೆ. ಇದು ಭಾಷೆಯ ಬಗೆಗೆ ಆಸಕ್ತಿ-ಅಭಿಮಾನ ಮಕ್ಕಳಲ್ಲಿ ಮೂಡಿಸುವ ವಿಷಯವಂತೂ ಅಲ್ಲ.  

ಬದಲಾಗುವ ಮಾನವನ ಅಭಿರುಚಿ, ಜೀವನ ವಿಧಾನ, ಸಾಮಾಜಿಕ, ವೈಚಾರಿಕ ಪಲ್ಲಟಗಳು ಬಾಳ್ವೆಯನ್ನು ಒಂದು ನಿರ್ದಿಷ್ಟ ಬಂಧಕ್ಕೆ ಒಳಪಡಿಸಿ ವ್ಯಾಖ್ಯಾನಿಸಲು ಹೇಗೆ ಸವಾಲಾಗುವವೋ, ಹಾಗೆಯೇ ಕವಿತೆಯನ್ನು ಸಹ ಒಂದು ಕಡ್ಡಾಯ ಶಿಷ್ಟಾಚಾರಕ್ಕೆ ಒಳಪಡಿಸುವುದೂ ಸವಾಲಾಗೆಯೇ ಉಳಿಯುವುದು. ಅಭಿವ್ಯಕ್ತಿಯನ್ನು ನಿಯಂತ್ರಿಸಲು ಅಸಾಧ್ಯವೇ ಸರಿ.

ಹಾಗಾಗಿ, ಇದು ಬೇತಾಳನ ಕಥೆಗೆ ತ್ರಿವಿಕ್ರಮನಂತೆಯೂ, ಯಕ್ಷನ ಪ್ರಶ್ನೆಗೆ ಧರ್ಮರಾಯನಂತೆಯೂ ಕರಾರುವಾಕ್ಕಾಗಿ ಉತ್ತರಿಸಲು ‘ಕವಿತೆ ಎಂದರೇನು?’ ಎಂಬ ಪ್ರಶ್ನೆಗೆ ಕಷ್ಟಕರವಾದರೂ, ಕೇಶವ (ವಿಷ್ಣು) ಕುಲಕರ್ಣಿಯವರು ಆ ಸಾಹಸ ಮಾಡಿದ್ದಾರೆ. ಫಣಿಶಯನ ವಿಷ್ಣುವಿನ ನಾಮಧಾರಕರಾದ್ದರಿಂದ ಇವರ ಈ ಸಾಹಸವನ್ನು,

‘’ತಿಣುಕಿದನು ಫಣಿಶಯನ ಕಾವ್ಯವೆಂಬುದರ ವ್ಯಾಖ್ಯಾನದಲಿ” ಎಂದು ಹೇಳುತ್ತಾ ಈ ಪೀಠಿಕೆಯನ್ನು ಮುಗಿಸುತ್ತಿದ್ದೇನೆ. ( ಮೇಲೆ ಹೇಳಿದ ಬಹಳಷ್ಟು ವಿಷಯಗಳ ಮೂಲ, ಜಿ.ಎಸ್.ಶಿವರುದ್ರಪ್ಪನವರ ಲೇಖನ; ಹಾಗಾಗಿ ಅವರಿಗೆ ಆಭಾರಿ)

kehav intro_280315_161908_1

ಇಷ್ಟಕ್ಕೂ ಈ ಹಾಳಾದ ಕವಿತೆ ಎಂದರೇನು? 

 ’ಕವಿತೆ ಎಂದರೆ ಪದಗಳಲ್ಲವೋ
ಭವಿಸಿ ಸಾಯುವ ಕ್ಷರಗಳಲ್ಲವೋ
ಸವಿಸಿ ಸೇವಿಸಿ ಮನವ ತಣಿಸುವ ಕುಣಿವ ಸಾಲುಗಳೋ’
ವ್ಯಾಕರಣ ಪಂಡಿತರು ತಪ್ಪು ಹುಡುಕಿಯಾರು, ಹುಷಾರು!
 

ಕವಿತೆ ಇರಬೇಕು
ಮಗುವಿನ ನಗೆಯಂತೆ
ಹುಣ್ಣಿಮೆಯ ಚಂದಿರನಂತೆ
ಮಲ್ಲಿಗೆಯ ಮಾಲೆಯಂತೆ
ಮುಂಗಾರು ಮಳೆಯಂತೆ
ಮಾತಿನಲಿರುವ ಮೌನದಂತೆ
ಅಂತೆಲ್ಲ ಕ್ಲೀಷೆಗಳ ರಾಶಿ ಹಾಕಿದರೆ
ಆಯಿತೇ?

 
ಕವಿತೇ,
ಸವಿಯುವ ಸಮಯದಲಿ
ನೀನೇಕೆ ಕವಿಯದೇ ಅವಿತೆ?
ಎಂದರೆ ನಾಕುಜನ
ತಲೆ ಅಲ್ಲಾಡಿಸಿಯಾರು
 

ಕವಿತೆ ಸರಳವಾಗಿರಬೇಕು
ಮಗುವಿನ ಮಾತಿನಂತೆ
ಒಳಗೊಂದು ಅರ್ಥ
ಹೊರಗೊಂದು ಅರ್ಥ
ವಿಲ್ಲದಂತೆ
ಎಂದರಾಯಿತೇ?

 
ಕವಿತೆ
ಒಂದಿಂಚು ಮೇಕಪ್ಪು ಬಡಿದುಕೊಂಡು
ಘಮಘಮ ಸೆಂಟು
ಬಡಿದುಕೊಂಡು
ವಯ್ಯಾರಿಯಂತಿರಬೇಕೇ ಬೇಡವೇ
ಎಂದು ಗಂಟೆಗಟ್ಟಲೇ
ಚರ್ಚಿಸಬಹುದು

 
ಕವಿತೆ ಬರಬೇಕು
ಹುತ್ತಗಟ್ಟಿದ ಚಿತ್ತದಿಂದ
ಗಾಂಧಿಯೊಳಗಿನ ಗೋಡ್ಸೆಯಿಂದ
ಇಂಗ್ಲಂಡಿನ ಯಾವ ಅಂಗಡಿಯಲ್ಲೂ
ಸಿಗದ ಮಲ್ಲಿಗೆಯ ಹೂವಿನಿಂದ
 

ಕವಿತೆ ಇಕ್ಕಿಸಿಕೊಂಡಿರಬೇಕು
ಒದೆಯಿಸಿಕೊಂಡಿರುವವರ ಕೂಗಾಗಬೇಕು
ರಕ್ತದೋಕುಳಿಯಲ್ಲಿ ಬರೆದಂತಿರಬೇಕು
ನೊಂದವರ ಹಸಿವಾಗಿರಬೇಕು
ಬೆಂದವರ ಬಾಯಾಗಬೇಕು

 

ಕವಿತೆ ಯಾಕಿರಬಾರದು
ಎಸ್ಸೆಮ್ಮೆಸ್ಸಿನಂತೆ
ಟ್ವಿಟರಿನ ಸ್ಟೇಟಸ್ಸಿನಂತೆ
ಫೇಸ್ಬುಕ್ಕಿನ ಅಪ್ದೇಟಿನಂತೆ
ಝೆನ್ನಿನಂತೆ

 
ಇಷ್ಟಕ್ಕೂ ಈ ಹಾಳದ ಕವಿತೆ ಎಂದರೇನು?
ಇದಲ್ಲ ಎಂದು ಧಾರಾಳವಾಗಿ ಹೇಳಿಬಿಡಬಹುದು

5 thoughts on “ಇಷ್ಟಕ್ಕೂ ಈ ಹಾಳಾದ ಕವಿತೆ ಎಂದರೇನು?- ಕೇಶವ ಕುಲಕರ್ಣಿ ಅವರ ಕವನ

 1. ಕವಿತೆಗಿರುವ ಆಳ ಹರವುಗಳನ್ನು ಅಳೆಯಲು ಸಾದ್ಯವೇ? ಇದನ್ನು ವಿಶ್ಲೇಶಿಸುವ ಪ್ರಯತ್ನದಲ್ಲಿ ಕವಿತೆಯ ಎಲ್ಲ ಸಾಮರ್ಥ್ಯಗಳನ್ನು ಅಳೆಯುತ್ತಾ ಜಾಣತನದಲ್ಲೇ ಸೋಲನ್ನು ಒಪ್ಪಿಕೊಳ್ಳುವಲ್ಲಿ ಈ ಕವಿತೆ ಅದ್ಭುತ ಗೆಲುವನ್ನು ಸಾಧಿಸುತ್ತದೆ. ಕಲ್ಪನೆಯ ಕಲ್ಪನೆಯಂತೆ,ಕವಿತೆಯ ಬಗ್ಗೆ ಕವಿತೆಯಾಗಿ ಸುಂದರವಾಗಿ ಮೂಡಿದೆ.
  ಈ ಕವಿತೆಗೆ ಹೊಸ ಜೋಡನೆಗಳನ್ನು ಮಾಡುತ್ತಲೇ ಹೋಗಬಹುದು.
  ಕೇಶವರು ಈ ವೇದಿಕೆಯಲ್ಲಿ ಬರೆದ ಬರಹಗಳಲ್ಲಿ ಇದು ನನ್ನ ಮೆಚ್ಚಿನದು.

  Like

 2. ಕವಿತೆಯ ಬಗ್ಗೆ ಸವಿಸ್ತಾರದ ಸಂಪಾದಕರ ಪೀಠಿಕೆಯಲ್ಲಿ ಅಂದಿನಿಂದ ಇಲ್ಲಿಯವರೆಗೆ ಬದಲಾದ ಅದರ ರೂಪದ ಬಗ್ಗೆ ಸಣ್ಣ ಥೀಸಿಸ್ ಏ ಇದೆಯೆನ್ನಬಹುದು. ಅದರೊಂದಿಗೆ ಈ ವಾರ ಕೇಶವ ಕುಲಕರ್ಣಿಯವರ (’ಹಾಳಾಗಿಲ್ಲ’ ಅದು!) ಚಮತ್ಕಾರದ ಕವಿತೆ ಎರಡೂ ಒಂದಕ್ಕೊಂದು ಪೂರಕವಾಗಿವೆ. ಈಗಿನ ದಿನಗಳಲ್ಲಿ ಕವನಗಳಲ್ಲಿ ಇಕ್ಕಿಸಿಕೊಂಡವರ, ಒದೆಯಿಸಿಕೊಂಡವರ, ಬೆಂದವರ, ನೊಂದವರ ಕೂಗನ್ನೇ ಹೆಚ್ಚಾಗಿ ಕೇಳುತ್ತೇವೆ. ವ್ಯವಸ್ಥಿತ ಬಂಧಕ್ಕೆ ಒಳಗಾವುದೂ ಕಡಿಮೆಯೇ. ಟ್ವಿಟ್ಟರ್, ಎಸ್ಸೆಮ್ಮೆಸ್ಸಿಗೂ ಮೊದಲೇ ಬಹುಶಃ ಜಗತ್ತಿನಲ್ಲೇ ಅತ್ಯಂತ ಚಿಕ್ಕದಾದುದು ಎಂದು ಪ್ರಸಿದ್ದಿ ಪಡೆದುದು Fleas ಎಂಬ ಶೀರ್ಷಿಕೆಯ ಕವನ: ”Adam, Had’em.” ಪ್ರಾಸ, ಲಯ, ಕೌತುಕ ಎಲ್ಲ ಇವೆ ಇದರಲ್ಲಿ!
  ಮೇಲಿರುವ ಕವಿತೆಯಲ್ಲಿ ಕೊನೆಯ ಎರಡು ಸಾಲುಗಳೇ ಕವಿಯ ಜಾಣ್ಮೆಗೆ ಸಾಕ್ಷಿ. ಅದರಲ್ಲೂ ಮೇಲೆ ಕೇಳಿದ ಪ್ರಶ್ನೆಗೆ ಉತ್ತರ ಹೇಳುವಂತೆ ನಟಿಸಿ, ಉತ್ತರಿಸದೆ ಜಾರಿಕೊಳ್ಳುವ ”ಹಾಳಾದ’ ಕೊನೆಯ ಸಾಲು! ಪಂಡಿತರು ಇದರಲ್ಲೂ ಕ್ಲೀಷೆ ಹುಡುಕಿಯಾರು.
  ದೀಪಾವಳಿ ಕಾವ್ಯಗೋಷ್ಠಿಯಲ್ಲಿ ಓದಿದಾಗ ವೈಕೆ ಎಮ್ ರಿಂದ ‘ಟಿಕ್” ಗಳಿಸಿಕೊಂಡ ಮೂರು ಕವನಗಳಲ್ಲಿ ಇದೂ ಒಂದು ಎಂಬ ರಹಸ್ಯವನ್ನು ಹೊರಹಾಕಿದ್ದೇನೆ

  Like

 3. ಕೇಶವ್ ಅವರೆ ತಮ್ಮ ಕವನದಲ್ಲಿರುವ ಕಾವ್ಯಾರ್ಥ ಚಿಂತನೆಯ ಕಿರು ವಿಮರ್ಶೆ ಬಹಳ ಚೆನ್ನಾಗಿದೆ
  ಕವಿತೆ ಎನೆಂಬುದರ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸುತ್ತ ಸಾಗುವ ಕವನದ ಶೈಲಿಯಲ್ಲಿ ಹೊಸತನವಿದೆ ಹಾಗು ಅದರ ಹಿಂದೆ ಜಾಣತನ ಅಡಗಿದೆ. ನಿಮ್ಮ ಕವನದಲ್ಲಿನ ಪ್ರಶ್ನೆಗಳಿಗೆ ನನಗೂ ಉತ್ತರ ಸಿಕ್ಕಿಲ್ಲ !
  ಮೇಲೆ ಪ್ರಸ್ಥಾಪಿಸಿರುವಂತೆ ಕವಿತೆಯನ್ನು ಒಂದು ಕಡ್ಡಾಯ ಶಿಷ್ಟಾಚಾರಕ್ಕೆ ಒಳಪಡಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸಮ್ಮತಿಸುತ್ತೇನೆ. ಈ ಕವನವನ್ನು ತಾವು ಕನ್ನಡ ಬಳಗದ ಕಾವ್ಯ ಕಮ್ಮಟದಲ್ಲಿ ಮಂಡಿಸಿದಲ್ಲಿ ಒಳ್ಳೆ ಚರ್ಚೆಗೆ ಅವಕಾಶವಾಗಬಹುದು

  Like

 4. ನಾನು ವಿಜಯಾ ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಕನ್ನಡ ಪ್ರೊಫೆಸರು ಜಿ. ವೆಂಕಟಸುಬ್ಬಯ್ಯನವರು (ಅವರಿಗೆ ಈಗ ೧೦೩ ವರ್ಷ) ವಿಲಿಯಮ್ ವರ್ಡ್ಸ್‍ವರ್ತ್ ಹೇಳಿದ ವಾಕ್ಯವನ್ನು ಅವರು ಉದ್ಧರಿಸಿದ್ದು ನನ್ನಗೆ ಇನ್ನೂ ನೆನಪಿದೆ- ”
  “Poetry is the spontaneous overflow of powerful feelings: it takes its origin from emotion recollected in tranquility – William Wordsworth”.
  —Rajaram Cavale

  Like

  • ನಿಮ್ಮ ಬರಹ ಅದ್ಭುತ ಸರ್.ಪದಗಳ ಸಾರ ತುಂಬಾ ರುಚಿಸಿತು

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.