ವರ್ಡ್ಸ್ ವರ್ಥನ ಪ್ರೀತಿಯ ಹೂ ಮತ್ತು ‘ಡಾಫೋಡಿಲ್ಸ’ ಕವನ –ಶ್ರೀವತ್ಸ ದೇಸಾಯಿ ಅವರ ಲೇಖನ

ಈ ವಾರ ಶ್ರೀವತ್ಸ ದೇಸಾಯಿಯವರು ವಿಲ್ಲಿಯಂ ವರ್ಡ್ಸ್ ವರ್ಥ್ ನ ಸುಪ್ರಸಿದ್ಧ ಡ್ಯಾಫೋಡಿಲ್ ಕವನದ ದ್ವಿಶತಮಾನೋತ್ಸವ ಆಚರಿಸುತ್ತ ಸೊಗಸಾದ ಲೇಖನ ಬರೆದಿದ್ದಾರೆ. ನಮ್ಮ ಓದುಗರಿಗೆ ದೇಸಾಯಿಯವರು ಚಿರಪರಿಚಿತರು. ಅನಿವಾಸಿಯಲ್ಲಿ ವಿವಿಧ ಪ್ರಕಾರಗಳ ಲೇಖನ, ಕವನಗಳನ್ನು ಪ್ರಕಟಿಸಿದ್ದರೂ, ಕಾವ್ಯ ಅವರ ಮೆಚ್ಚಿನ ಮಾಧ್ಯಮ. ಈ ಲೇಖನದಲ್ಲಿ ಅವರ ಕಾವ್ಯ ಪ್ರೇಮದ ಮೂಲವನ್ನು ಅನಾವರಣಗೊಳಿಸುತ್ತಾ ನಾಡಗೀರ ಮಾಸ್ತರರ ಜನ್ಮ ಶತಾಬ್ದಿಯನ್ನು ಅನುಪಮವಾಗಿ ಆಚರಿಸಿದ್ದಾರೆ. ಓದೋಣವೇ….

 ವರ್ಡ್ಸ್ ವರ್ಥ್ ನ ಪ್ರೀತಿಯ ಹೂ ಮತ್ತು ’ಡಾಫೋಡಿಲ್ಸ” ಕವನ

ನನ್ನ ವೈಯಕ್ತಿಕ ಜೀವನದಲ್ಲಿ ಈ ವರ್ಷದ ವಸಂತ ಋತು ಎರಡು ತರಹದ ಶತಾಬ್ದಿಗಳನ್ನು ಕಂಡಂತಾಯಿತು.

ಈ ವರ್ಷ ‘ಡಾಫೋಡಿಲ್ಸ್’ಗೆ 200 ತುಂಬಿತು!

ಹತ್ತೊಂಬತ್ತನೆಯ ಶತಮಾನದ ಆಂಗ್ಲ ಮಹಾಕವಿ ವಿಲ್ಲಿಯಮ್ ವರ್ಡ್ಸ್ ವರ್ಥ್ ಅವರ ಜನಪ್ರಿಯ ಕವನ ”ಡಾಫೋಡಿಲ್ಸ್’’ ಪ್ರಕಟವಾದದ್ದು ಸರಿಯಾಗಿ 200 ವರ್ಷಗಳ ಹಿಂದೆ.  ಆತನ ತಂಗಿ ಡೊರೊಥಿ ಎಪ್ರಿಲ್ 15, 1802 ರಂದು ತನ್ನ ದಿನಚರಿಯಲ್ಲಿ ಉಲ್ಲೇಖಿಸಿದ ”ಕೆರೆಯ ದಂಡೆಯಮೇಲೆ ಗಾಳಿಯಲ್ಲಿ ನಲಿದಾಡುತ್ತ, ಕುಣಿದ ನೆಲನೈದಿಲೆ”ಗಳ ವರ್ಣನೆಯೇ ಅವಳ ಅಣ್ಣನ ಈ ಪದ್ಯಕ್ಕೆ ಸ್ಫೂರ್ತಿ ಕೊಟ್ಟಿತ್ತು ಎಂದು ಪಂಡಿತರ ಒಮ್ಮತವಿದೆ.

Daffodil by SPD

ಅದು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಎಂದೂ ಸೂರ್ಯಾಸ್ತವಾಗುತ್ತಿರಲಿಲ್ಲ ಎನ್ನುತ್ತಿದ್ದ ಕಾಲವದು. ಆಂಗ್ಲಭಾಷೆಯ ಬಳಕೆಯಿರುವ ದೇಶಗಳಲ್ಲೆಲ್ಲ, ಅದರಲ್ಲೂ ಬ್ರಿಟನ್ನಿನ ಹಿಂದಿನ ವಸಾಹತುಗಳ ಶಾಲೆಗಳಲ್ಲಿ ಈ ಪದ್ಯ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿ ಎಲ್ಲರಿಗೂ ಇದರ ಪರಿಚಯವಾಗಿದ್ದು ಆಶ್ಚರ್ಯವಲ್ಲ. ನಾನು ಧಾರವಾಡದಲ್ಲಿ ಶಾಲೆ ಕಲಿಯುತ್ತಿದ್ದಾಗಲೂ ನಾವು ಇದನ್ನು ಕಂಠಪಾಠ ಮಾಡಿದ್ದೆವು. ಆಗ ನಮಗೆ ಇಂಗ್ಲಿಷ್ ಕಲಿಸುತ್ತಿದ್ದ ಶಿವರಾವ ಗುರುರಾವ ನಾಡಗೀರ ಗುರುಗಳ ಜನ್ಮ ಶತಾಬ್ದಿಯನ್ನು ಕಳೆದ ತಿಂಗಳಲ್ಲಷ್ಟೇ ಧಾರವಾಡದ ಕೆ.ಇ.ಬೋರ್ಡ್ ಹೈಸ್ಕೂಲ್ ವಿಜೃಂಭಣೆಯಿಂದ ಆಚರಿಸಿತು. ಈ ಹೂವು ಹೇಗಿರ ಬಹುದು? ಇದರ ಬಗ್ಗೆ ಏಕಿಷ್ಟು ಉತ್ಸಾಹ ಎಂಬ ವಿಷಯದಲ್ಲಿ ನನಗೆ ಎಳ್ಳಷ್ಟೂ ಕಲ್ಪನೆಯಿರಲಿಲ್ಲ. ಅದು ನಮಗೆ ಸ್ವಾತಂತ್ರ್ಯ ಸಿಕ್ಕ ದಶಕ. ಬ್ರಿಟಿಷ್ ರಾಜ್ಯದ ವರ್ಚಸ್ಸು ಇನ್ನೂ ಮಾಸಿರಲಿಲ್ಲ. ಅವರನ್ನು ಭಕ್ತಿಯಿಂದ, ಬೆರಗುಗಣ್ಣಿನಿಂದ ನೋಡುವವರನೇಕರಿದ್ದರು.

ನಮ್ಮನೆ ಅಲ್ಲಿದೆ, ಇಲ್ಲಿ ಬಂದೆ ಸುಮ್ಮನೆ.

ಯಾರಿಗೆ ಕನಸಿಲ್ಲ?

ನಮ್ಮದು ಕನ್ನಡ ಮಾಧ್ಯಮದ ಶಾಲೆಯೇ. ಆದರೆ ಇಂಗ್ಲಿಷ್ ಪಾಠ ಮಾಡುತ್ತಿದ್ದವರು ನಾಡಗೀರ ಸರ್. ಆಗಾಗಲೇ ಇಂಗ್ಲಿಷ್ ಎಮ್ ಎ ಮಾಡಿದ್ದ ಅವರಿಗೆ ಕಾಲೇಜಿನಲ್ಲಿ ಸೇರಿಕೊಳ್ಳುವ ಅವಕಾಶವಿದ್ದರೂ ನಮ್ಮ ಪ್ರಾಂತದಲ್ಲಿಯ ದೇಶಭಕ್ತರ, ಸ್ವಾತಂತ್ರ್ಯ ಆಂದೋಲನದ ಮುಂಚೂಣಿಯಲ್ಲಿದ್ದ ಹಿರಿಯರಿಂದ ಸ್ಥಾಪಿತವಾದ ಕರ್ನಾಟಕ ಎಜುಕೇಶನ್ ಬೋರ್ಡಿನ ಶಾಲೆಗೆ ಬಂದು ಸೇರಿದರು. ಆಂಗ್ಲ ಭಾಷೆ ಮತ್ತು ಅದರ ಕವಿಗಳನ್ನು ಚೆನ್ನಾಗಿ ಅಭ್ಯಸಿಸಿದ ಅವರು ನಮಗೆ ಆಸ್ಥೆಯಿಂದ ಕಲಿಸುವಾಗ ಆ ಭಾಷೆಯಮೇಲಿನ ಅವರ ಪ್ರೇಮ ಮತ್ತು ಪ್ರಭುತ್ವ ಎದ್ದು ಕಾಣಿಸುತ್ತಿತ್ತು. ಅದು ನಮಗೂ ಸ್ಫೂರ್ತಿ ಕೊಟ್ಟಿತ್ತು. ಅದು 1959-60 ರ ಸಮಯ. ಮೊಬೈಲ ಫೋನು, ಇಂಟರ್ನೆಟ್ ಬಿಡಿ, ಟೆಲಿವಿಜನ್ ಸಹ ಇರಲಿಲ್ಲ. ಶಾಲೆಯಲ್ಲಿ ನಾವು ಕಂಠಪಾಠ ಮಾಡಿದ ಡಾಫೋಡಿಲ” ಮತ್ತು ಯೇಟ್ಸನ ”ಲೇಕ್ ಐಲ್ ಆಫ್ ಇನ್ನಿಸ್ಫ್ರೀ” ಈ ಎರಡು ಕವನಗಳು ನನ್ನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದವು. ಹಳದಿ ವರ್ಣದ್ದೆಂದು ಕೇಳಿದ ಆ ಹೂವು ಹೇಗಿರಬಹುದು? ಎಂದಾದರು ನೋಡಿಯೇನೆ? ಆ ಇನ್ನಿಸ್ಫ್ರೀ ಎಂಬ ಕೆರೆ ಮಧ್ಯದ ನಡುಗಡ್ಡೆ ನಿಜವಾಗಿಯೂ ಇದೆಯೇ ಅಥವಾ ಕೇವಲ ಕವಿಯ ಕಲ್ಪನೆಯೋ? ಆಗ ಧಾರವಾಡದ ಕರ್ನಾಟಕ ಕಾಲೇಜಿಗೆ ವಿನಾಯಕ ಕೃಷ್ಣ ಗೋಕಾಕರು ಪ್ರಿನ್ಸಿಪಾಲರಾಗಿದ್ದರು. ಇಂಗ್ಲಂಡಿನಲ್ಲಿ ಆಂಗ್ಲ ಕವಿಗಳ ಅಭ್ಯಾಸ ಮಾಡಿ ಆಕ್ಸ್ಫರ್ಡಿನಿಂದ ಉತ್ತಮ ದರ್ಜೆಯಲ್ಲಿ ಪದವಿ ಪಡೆದು ಮರಳಿದ ಅವರು ಎಷ್ಟೆಲ್ಲ ವಿದ್ಯಾರ್ಥಿಗಳಿಗೆ ಆದರ್ಶಪ್ರಿಯರಾಗಿದ್ದರು. ಕಾಲೇಜಿನ ಪಕ್ಕದಲ್ಲೇ ನಮ್ಮನೆ. ಅವರು ಕಾಲೇಜಿನಲ್ಲಿ ಯಾವಾಗಲಾದರು ಕಣ್ಣಿಗೆ ಬೀಳುತ್ತಿದ್ದರು. ನಮ್ಮ ಮನೆಯಲ್ಲಿ ಬಾಡಿಗೆಗೆ ಬಂದ ಸಿರ್ಸಿಯ ಪಿ. ಎಂ (ಪೋಯಂ ಹೆಗಡೇ ಎಂದೇ ಅವರಿಗೆ ಅಂಟಿದ ಹೆಸರು!) ಅವರ ಶಿಷ್ಯವೃಂದದಲ್ಲೊಬ್ಬರು. ಅವರಿಗೆ ವಿಲ್ಲಿಯಮ್ ಬಟ್ಲರ್ ಯೇಟ್ಸ್ ಅಂದರೆ ಪಂಚಪ್ರಾಣ. ಬೆಳಿಗ್ಗೆ ಚಹಾ ಮಾಡಿ, ನನಗೂ ಕುಡಿಸುತ್ತ ಪ್ರತಿದಿನಕ್ಕೊಂದು ಅವನ ಕವಿತೆಯನ್ನು ಓದಿ ತೋರಿಸುತ್ತಿದ್ದರು. ನನ್ನ ಕನಸು ನೆರವೇರಿದರೆ, ಮತ್ತು ಇಂಗ್ಲಂಡಿಗೆ ಹೋಗಲಾದರೆ, ಡಾಫೋಡಿಲ್ ಜೊತೆಗೆ ಅಯರ್ಲಂಡಿನ ಇನ್ನಿಸ್ಫ್ರೀಗೂ ಹೋಗಬಹುದಲ್ಲ ಎಂದು ಪದೇ ಪದೇ ಕನಸು ಕಂಡರೂ ಮುಂದೆ ಮೆಡಿಕಲ್ ಅಭ್ಯಾಸದಲ್ಲಿ ಅದರ ವಿಚಾರವನ್ನು ಹಿಂದಕ್ಕೆ ಹಾಕಿದ್ದೆ.

ನನಗೆ ಅವಕಾಶ ಕೂಡಿ ಬಂದು ಇಂಗ್ಲಂಡಿನಲ್ಲಿ ಎಫ್ ಆರ್ ಸಿ ಯಸ್ ಪಾಸಾದನಂತರ ’ಸುಮ್ಮನೆ” ಒಂದು ಸಲ ಮಾರ್ಚಿನಲ್ಲೊಮ್ಮೆ ಲೇಕ್ ಡಿಸ್ಟ್ರಿಕ್ಟ್ ಹೋಗಿ ’ವರ್ಡ್ಸ್ವರ್ಥ್ ಯಾತ್ರೆ’ ಮಾಡಿ ನಮ್ಮೂರಿಗೆ ಮರಳುವಾ ಎಂದು ಹೊರಟೆ.

”I wandered lonely as a cloud

daffodils and Clouds MMವಿಲ್ಲಿಯಮ್ ನ ಪದ್ಯದ ಏಕಾಕಿ ಮೋಡದಂತೆಯಲ್ಲದಿದ್ದರೂ, 1982ರಲ್ಲಿ ನಮ್ಮ ಕುಟುಂಬದವರೊಡನೆ ಡ್ರೈವ್ ಮಾಡುತ್ತ ಅಲ್ಸ್ ವಾಟರ್ ಕೆರೆಯ ದಂಡೆ ಗುಂಟ ಹೋದಾಗ ಕಂಡ ದೃಶ್ಯ ಮರೆಯುವಂತಿಲ್ಲ! ನೀರಂಚಿನಲ್ಲಿ ಸಾಲು ಮರಗಳು. ಅವುಗಳಡಿ ಬಂಗಾರದ ಬಣ್ಣದ ಮಂಜಳಹೂಗಿಡಗಳ ಗುಂಪೇ ರಾರಾಜಿಸಿತ್ತು. ನಾನು ಹೋದಾಗಲೆಲ್ಲ ಲೇಕ್ ಡಿಸ್ಟ್ರಿಕ್ಟ್ ನಲ್ಲಿ ಮೋಡ, ಗಾಳಿ, ತಂಪು ಹವೆ! 15 ಏಪ್ರಿಲ್, 1802 ರಲ್ಲೂ ಹಾಗೇ ಇತ್ತಂತೆ. ಈಗ ಪ್ರಸಿದ್ಧಿಯಾದ ಡೋರಥಿ ವರ್ಡ್ಸ್ವರ್ಥಳ ದಿನಚರಿಯ ಪುಟಗಳಲ್ಲಿ ಅದು ದಾಖಲಾಗಿದೆ.

Part_of_the_diary_entry_for_15_April_1802
(ಡೋರೋಥಿ ವರ್ಡ್ಸ್ವ ವರ್ಥಳ ದಿನಚರಿಯ ಪುಟ: ಎಪ್ರಿಲ್ 15, 1802)

”ಮಂಜು ಮುಸುಕಿದ ಮುಂಜಾನೆ. ಗಾಳಿ ಉಸಿರನ್ನು ಕಟ್ಟಿದೆ”, ಅವಳ ದಿನಚರಿಯಲ್ಲಿ ಉಲ್ಲೇಖ. ”ಅಲ್ಲಿ ಪ್ರಿಮ್ ರೋಸ್, ವಾಯೋಲೆಟ್ ಅಲ್ಲದೆ ಹಳದಿ ಕಾಕಪಾದಗಳೂ ಕಂಡವು. ಗೌಬಾರೋ ಪಾರ್ಕಿನೊಳಗೆ ಹೋದಾಗ ಡಾಫೋಡಿಲ್ಲುಗಳು ಕಣ್ಸೆಳೆದವು. ಕೆರೆಯ ದಂಡೆಗುಂಟದ ಪಾಚಿ ಮೆತ್ತಿದ ಕಲ್ಲುಗಳ ಮಧ್ಯೆ ಗೋಚರಿಸಿದ ಡಾಫೋಡಿಲ್ಲುಗಳಷ್ಟು ಅಂದದ ಹೂಗಳನ್ನೆಂದೂ ನಾನು ಕಂಡಿರಲಿಲ್ಲ. ಕೆಲವು ದಣಿದು ಕಲ್ಲನ್ನೇ ದಿಂಬಾಗಿ ಮಾಡಿಕೊಂದು ತಲೆಯಿಟ್ಟಿದ್ದರೆ, ಉಳಿದವು ಇನ್ನೂ ಕುಣಿಯುತ್ತ, ತಲೆಯನ್ನು ಚಿಮ್ಮಿ ಚಕ್ಕಂದವಾಡುತ್ತ ಕೆರೆಯ ಮೇಲಿಂದ ಬೀಸಿ ಬಂದ ಮಂದ ಮಾರುತದೊಡನೆ ನಕ್ಕು ನಲಿದಾಡುತ್ತಿದ್ದವು. ಅತ್ತಿತ್ತ ಮುಖ ತಿರುಗಿಸುತ್ತ ಅವು ಅನಂದಪರವಶವಾಗಿದ್ದವು. ಸ್ವಲ್ಪ ಸಮಯದ ನಂತರ ಮಳೆ ಬಂತು.” ಎರಡು ವರ್ಷಗಳ ನಂತರ ಈ ವರ್ಣನೆಯ ಸ್ಫೂರ್ತಿಯಿಂದಲೇ ವಿಲ್ಲಿಯಮ್ ಅವನ ಅಮರ ಕವನ ”ಡಾಫೋಡಿಲ್ಸ್” ರಚಿಸಿದ. ಮೊದಲ ಆವೃತ್ತಿ 1807ರಲ್ಲಿ ಪ್ರಕಟವಾಯಿತು. 1815ರಲ್ಲಿ ಪ್ರಕಟವಾದ ಎರಡನೆಯ ಆವೃತ್ತಿಯೇ ಇಂದು ಜಗದ್ದಾದ್ಯಂತ ಹಾಡಲ್ಪಡುತ್ತಿದೆ. ಬಹುತೇಕ ಎಲ್ಲರಿಗೂ ಮೊದಲ ಎರಡು ಮತ್ತು ಕೊನೆಯ ಎರಡು ಸಾಲುಗಳು ನೆನಪಿನಲ್ಲಿ ಉಳಿದಿರುತ್ತವೆ. ಬ್ರಿಟನ್ನಿನ ಅತ್ಯಂತ ಜನಪ್ರಿಯ ಕವನಗಳ ಸಾಲಿನಲ್ಲಿ ಅದು ಐದನೆಯದು. ಆದರೂ ಒಂದಿಬ್ಬರು ಕವನದ ಕೆಲವು ಸಾಲುಗಳ ಅಂತ್ಯ ಪ್ರಾಸವನ್ನು ಪ್ರಶ್ನಿಸಿದ್ದುಂಟು.

ನಾನೂ ನೋಡಿದಂತೆ ಕೆರೆಯ ದಂಡೆಯ ಮೇಲೆ ಆಕಾಶಗಂಗೆಯ ಚುಕ್ಕೆಗಳಂತೆ ಕೊನೆಯಿಲ್ಲದ ಸಾಲಿನಲ್ಲಿ ಕಂಗೊಳಿಸಿದ ಹೂಗಳ ವರ್ಣನೆ ಅದ್ಭುತವಾಗಿದೆ. ಆದರೆ “Ten thousand I saw at once” ಮಾತ್ರ ಕವಿಸಮಯ ಎಂದು ನುಂಗಿಕೊಳ್ಳ ಬೇಕಾಗುತ್ತದೆ. ”ಗಾಳಿಯೆಬ್ಬಿಸಿದ ತೆರೆಗಳೂ ಅವುಗಳನ್ನೂ ಮೀರಿ ಕುಣಿದ ಪುಷ್ಪಗಳ’’ ದೃಶ್ಯವನ್ನು ವರ್ಣಿಸುವ ಸಾಲುಗಳು ನನಗೆ ನೆನಪಾಗುತ್ತಲೇ ಇರುತ್ತವೆ. ಪ್ರತಿ ವಸಂತದಲ್ಲಿ ಎಲ್ಲೆಡೆಗೆ ಕಣ್ಣನ್ನಾಕರ್ಷಿಸುವ ಆ ನೆಲನೈದಿಲೆಗಳ ಥಕ ಥೈ ಮರೆಯುವಂತಿಲ್ಲ. ಬೇರೆಲ್ಲ ಸರಿ-ತಪ್ಪು ವಿಷಯವೇನೇ ಇರಲಿ,  ನಾವು ಅನಿವಾಸಿಯಾಗಿ ಇಲ್ಲಿ ಬಂದು ನೆಲಸಿದ್ದಕ್ಕೆ ಅದೊಂದು ಬೋನಸ್ ಎಂದು ಕೊಳ್ಳುತ್ತೇನೆ! ನನ್ನ ನಾಡಗೀರ್ ಗುರುಗಳು ತಮ್ಮ ತೊಂಬತ್ತರ ಹರೆಯದಲ್ಲೂ ನನ್ನೊಡನೆ ಅಷ್ಟೇ ಅಲ್ಲ, ಮತ್ತೆ ಕೆಲ ವಿದ್ಯಾರ್ಥಿಗಳೊಡನೆಯೂ ಪತ್ರ ವ್ಯವಹಾರ ಇಟ್ಟುಕೊಂಡಿದ್ದರು. ಅವರೆಲ್ಲರ ಪತ್ರಗಳನ್ನು ಓದಿ ಮೆಲಕು ಹಾಕುತ್ತ ಅವರು ಬರೆದ ’ಡಾಫೋಡಿಲ್’ ಸಾಲುಗಳು ಹೀಗಿವೆ:”Whenever I am in a vacant or pensive mood, I just thumb your (he means ನಮ್ಮೆಲ್ಲರ) letters hurriedly and then ‘my heart with pleasure fills.”

ಡಾಫೋಡಿಲ್ ಬ್ರಾಂಡ್

ಡಾಫೋಡಿಲ್ ಹೂವಿಗೆ ನೆಲನೈದಿಲೆ, ಮಂಜಳಹೂ ಎಂದೂ ಕೆಲವರು ಕರೆಯುತ್ತಾರೆ. ಉಷ್ಣ ವಲಯದಲ್ಲಿ ಅದು ನೈಸರ್ಗಿಕವಾಗಿ ಬೆಳೆಯುವದಿಲ್ಲವಾದರೂ ಇಂದು ಅದು ಒಂದು ಬ್ರಾಂಡ್ ಆಗಿ ಭಾರತದಲ್ಲಿ ಎಲ್ಲರಿಗೂ ಪರಿಚಯವಾಗಿದೆ. ಇತ್ತೀಚೆಗೆ ಉದ್ಯಾನಗಳಲ್ಲಿ ಅದನ್ನು ಬೆಳೆಸುವ ರೂಢಿ ಇದೆಯಂತೆ. ಅದಕ್ಕೆ ನರ್ಗಿಸ್ ಎಂದು ಕರೆಯುವದುಂಟು; ಆದರೆ ಅದು ಪೂರ್ತಿ ಹಳದಿಯಲ್ಲ, ಬಿಳಿ ಬಣ್ಣದ ಪಕಳೆಗಳೊಂದಿಗೆ ಮಧ್ಯದಲ್ಲಿ ಹಳದಿ ತುತ್ತೂರಿಯುಳ್ಳ ಹೂ, ಅದು ’ನಾರ್ಸಿಸ್ಸಸ್ ಪೋಯಟಿಕಸ” ಪ್ರಭೇದದ್ದು. ವರ್ಡ್ಸ್ ವರ್ಥ್ ಕವಿ ಕಂಡ ಡಾಫೋಡಿಲ್ Narcissus psedonarcissus. ಅದಕ್ಕೆ ಹಳದಿ ಪಕಳೆಗಳ ಮಧ್ಯೆ ಹಳದಿ ತುತ್ತೂರಿಯುಂಟು. ಅದಕ್ಕೇ ಅಲ್ಲವೆ ಅವನು ಬರೆದದ್ದು: ” A host, of golden daffodils”? ಕರ್ನಾಟಕದಲ್ಲಿ ವಿದ್ಯಾರ್ಥಿಗಳನ್ನಾಕರ್ಷಿಸಲು ಎಷ್ಟೋ ಆಂಗ್ಲ ಮಾಧ್ಯಮದ ವಿದ್ಯಾಸಂಸ್ಥೆಗಳೂ ಆ ಹೆಸರನ್ನಿಟ್ಟುಕೊಂಡಿವೆ. ಅಮೇರಿಕಾ, ನ್ಯೂಜಿಲಂಡ್, ಕೆನಡಾದ ಮುಂತಾದ ದೇಶಗಳ ಕ್ಯಾನ್ಸರ್ ಸೊಸೈಟಿಗಳು ಅದನ್ನು ತಮ್ಮ ಚಿಹ್ನೆಯಾಗಿ ಉಪಯೋಗಿಸಿಕೊಳ್ಳುತ್ತವೆ. ಕೆನಡಾದದಲ್ಲಿ ಆ ಸಂಘ ಪ್ರತಿ ಏಪ್ರಿಲ್ ತಿಂಗಳಲ್ಲಿ ತನ್ನ ಧನ ಸಂಗ್ರಹದ ಯೋಜನೆಯನ್ನು ಹಮ್ಮಿಕೊಂಡಿದೆ. ಇದಕ್ಕೂ ವರ್ಡ್ಸ್ವರ್ಥನ ಪದ್ಯಕ್ಕೂ ಏನಾದರು ಸಂಬಂಧವಿದೆಯೇ? ಯಾರಿಗೆ ಗೊತ್ತು? ಅಥವಾ ಪ್ರತಿವರ್ಷ ವಸಂತ ಋತುವಿನಲ್ಲಿ ಪುನರುಜ್ಜೀವ ಪಡೆಯುವ ಸಸ್ಯವನ್ನು ಅವರು ಸ್ಫೂರ್ತಿಗಾಗಿ ಆಯ್ದು ಕೊಂಡದ್ದರಲ್ಲಿ ಆಶ್ಚರ್ಯವಿಲ್ಲ.

screen-shot-2013-11-03-at-12-36-37-am
(ಬಟರ್ ಕಪ್ ಜಾತಿಯ lesser celandine ಹೂ)

ಆದರೆ ಕವಿಯ ಪ್ರೀತಿಯ ಹೂ ಡಾಫೋಡಿಲ್ ಆಗಿರಲಿಲ್ಲ, ಆತ ಮೆಚ್ಚಿದ್ದು ಕಾಕಪಾದ crowfoot, buttercup ಜಾತಿಯ lesser celandine ಹೂ. ಅವನು ಅದರ ಮೇಲೆ ಮೂರು ಕವನಗಳನ್ನು ಬರೆದಿದ್ದಾನಾದರೂ ಅವನ ಕೀರ್ತಿ ಡಾಫೋಡಿಲ್ಲಿನಿಂದಲೇ ಅಥವಾ ಆ ಹೂವಿನ ಪ್ರಸಿದ್ಧಿ ಅವನ ಕವಿತೆಯಿಂದಲೇ ಅನ್ನ ಬಹುದು.

(ವರ್ಡ್ಸ್ ವರ್ಥನ ಮನೆ ರೈಡಲ್ ಮೌಂಟ್ನಲ್ಲಿ ಯ ಒಣಗಿಸಿಟ್ಟ lesser celandine ಹೂ)
(ವರ್ಡ್ಸ್ ವರ್ಥನ ಮನೆ ರೈಡಲ್ ಮೌಂಟ್ನಲ್ಲಿ ಯ
ಒಣಗಿಸಿಟ್ಟ lesser celandine ಹೂ)

ಗೌಬಾರೋದಲ್ಲಿ ಗೋಗಮನ!

ಕುತೂಹಲದ ವಿಷಯವೆಂದರೆ, ಮೇಲೆ ಉಲ್ಲೇಖಿಸಿದಂತೆ ಆ ದಿನ ಅಣ್ಣ-ತಂಗಿಯಂದಿರು ಗೌಬಾರೋ ಪಾರ್ಕ್ ಮತ್ತು ಅಲ್ಸ್ ವಾಟರ್ ಕೆರೆದಂಡೆಯೆಲ್ಲ ತಿರುಗಿ ಬಂದ ನಂತರ ಒಂದು ದಿನ ಅವಳ ದಿನಚರಿಯ ಟಿಪ್ಪಣಿಯಿಂದ ಸ್ಫೂರ್ತಿ ಪಡೆದೋ ಅಥವಾ ತನ್ನಷ್ಟಕ್ಕೆ ತಾನೇ ವಿಲ್ಲಿಯಮ್ ಕವನ ರಚಿಸುವಾಗ ಮೊದಲನೆಯ ಸಾಲನ್ನು “I wandered lonely as a cow” ಎಂದು ಬರೆದಿದ್ದನಂತೆ! ಅವಳ ಗಮನಕ್ಕೆ ಬಂದು ಅವಳು, ಅದು ಸರಿಯಲ್ಲ, ಎಂದು ಹೇಳಿದಾಗ ಅವನಿಗೂ ಅದು ’ಗೋಚರ’ವಾಯಿತಂತೆ! ಅವನು ಹೀಗೆ ಬರೆದಿದ್ದರೆ ಅವನ ಕೀರ್ತಿ ಎಂದೋ ಮೇಯ್ದು ಹೋಗಿರುತ್ತಿತ್ತೇನೋ:

“I wandered lonely as a cow

That grazes all over parks and fields!”

ಏನಿಲ್ಲವೆಂದರೂ ಜಗತ್ತಿನಲ್ಲಿ ಲಕ್ಷ ಏಕೆ ಕೋಟಿಗಟ್ಟಲೆ ಜನರು ಆ ಮೊದಲ ಸಾಲನ್ನಾದರೂ (I wandered lonely as a cloud) ನೆನಪಿನಲ್ಲಿಟ್ಟುಕೊಂಡಿದ್ದರೆ ಆಶ್ಚರ್ಯವಲ್ಲ. ಆಂಗ್ಲ ಭಾಷೆಯ ಪ್ರಭುತ್ವ ಅಷ್ಟೊಂದು ಇದೆಯಲ್ಲ! ಇಂಗ್ಲಂಡಿಗೆ ಭೆಟ್ಟಿ ಕೊಟ್ಟವರೆಲ್ಲ, ಅದರಲ್ಲೂ ಕವಿಗಳು ಲೇಕ್ ಡಿಸ್ಟ್ರಿಕ್ಟ್ ಮತ್ತು “Rose by any name smells as sweet” ಎಂದು ಬರೆದ ಶೇಕ್ಸ್ ಪಿಯರನ ಸ್ಟ್ರಾಟ್ ಫರ್ಡ್ ಗೆ ಅವನ ಜನ್ಮಸ್ಥಾನದ ದರ್ಶನಕ್ಕೆ ಹೋಗುತ್ತಾರೆ. ಡಾಫೋಡಿಲ್ ಹೂವಿನ ಎಣ್ಣೆ ಬಹಳಷ್ಟು ಸುಗಂಧ ದ್ರವ್ಯಗಳಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸುತ್ತಾರೆ. 500 ಕೆಜಿ ಪುಷ್ಪಗಳಿಂದ ಬರಿ 300 ಗ್ರಾಮ್ ದ್ರವ ಹೊರಡುತ್ತದೆ! ಅದನ್ನು ’ಸಂಸಾರ’, ”ಫಟಾಲ್’’ ಮುಂತಾದ ಜನಪ್ರಿಯ ಪರ್ಫ್ಯೂಮಗಳಲ್ಲಿ ಉಪಯೋಗಿಸುತ್ತಾರೆ. ಹಾಗೆ ನೋಡಿದರೆ ಡಾಫೋಡಿಲ್ಲಿಗೆ ಅಂಥದೇನೂ ಮೈಸೂರು ಮಲ್ಲಿಗೆಯಂಥ ಆಕರ್ಷಕ ಸುವಾಸನೆಯಿಲ್ಲ. ಕನ್ನಡದ ಒಬ್ಬ ಪ್ರಸಿದ್ಧ ಲೇಖಕರು ಬರೆದಂತೆ ಒಂದು ದಿನ ದೇಶ ವಿದೇಶದಿಂದ ಟೂರಿಸ್ಟ್ ಜನರೆಲ್ಲರು ಮೈಸೂರಿನ ಮಲ್ಲಿಗೆಯನ್ನು ಅರಸುತ್ತ ಬರುವ ದಿನ ನೋಡಬೇಕಾಗಿದೆ! ಆಗ ಮೈಸೂರು ಮಲ್ಲಿಗೆಯ ಕಂಪು ಜಗತ್ತಿನಲ್ಲೆಲ್ಲಾ ಹರಡೀತು!

(ಋಣ: ಸಸ್ಯಶಾಸ್ತ್ರದ ಮಾಹಿತಿಯ ಸಂಗ್ರಹಕ್ಕೆ ಸಹಾಯ ಮಾಡಿದ ಉಮಾ ವೆಂ. ಅವರಿಗೆ)

ಶ್ರೀವತ್ಸ ದೇಸಾಯಿ

April, 2015

THE DAFFODILS

I wandered lonely as a cloud
That floats on high o’er vales and hills,
When all at once I saw a crowd,
A host, of golden daffodils;
Beside the lake, beneath the trees,
Fluttering and dancing in the breeze.

Continuous as the stars that shine
And twinkle on the milky way,
They stretched in never-ending line
Along the margin of a bay:
Ten thousand saw I at a glance,
Tossing their heads in sprightly dance.

ಕಾಡಿನಲ್ಲಿ ಡ್ಯಾಫೊಡಿಲ್

The waves beside them danced; but they
Out-did the sparkling waves in glee:
A poet could not but be gay,
In such a jocund company:
I gazed – and gazed – but little thought
What wealth the show to me had brought:

For oft, when on my couch I lie
In vacant or in pensive mood,
They flash upon that inward eye
Which is the bliss of solitude;
And then my heart with pleasure fills,
And dances with the daffodils.

15 thoughts on “ವರ್ಡ್ಸ್ ವರ್ಥನ ಪ್ರೀತಿಯ ಹೂ ಮತ್ತು ‘ಡಾಫೋಡಿಲ್ಸ’ ಕವನ –ಶ್ರೀವತ್ಸ ದೇಸಾಯಿ ಅವರ ಲೇಖನ

 1. ಸುದರ್ಶನ್ ಅವರೆ, ಈ ಮೇಲಿನ ಜಿ.ಎಸ್.ಎಸ್ ಅವರ ಕವನವನ್ನು, ನಮ್ಮ ಗಮಕ ತರಗತಿಯಲ್ಲಿ ರಾಗ ಕಟ್ಟಿ ಹಾಡಿದ ನೆನಪು ನನಗಿದೆ. ಬಹಳ ಸುಂದರವಾದ ಕವಿಯ ಕಲ್ಪನೆ ನಮ್ಮ ಮೈಸೂರಿನ ಮಲ್ಲಿಗೆ ಬಗ್ಗೆ ಎಂದು ನನ್ನ ಭಾವನೆ. ಅದನ್ನುಮತ್ತೊಮ್ಮೆ ಇಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
  ಉಮಾ

  Like

 2. ಚೆಲುವು-ಒಲವು ೧೯೫೧-೧೯೫೩ – ಮಲ್ಲಿಗೆ
  G.S.SHIVARUDRAPPA.

  ನೋಡು ಇದೊ ಇಲ್ಲರಳಿ ನಗುತಿದೆ
  ಏಳು ಸುತ್ತಿನ ಮಲ್ಲಿಗೆ.
  ಇಷ್ಟು ಹಚ್ಚನೆ ಹಸುರ ಗಿಡದಿಂ-
  ದೆಂತು ಮೂಡಿತೊ ಬೆಳ್ಳಗೆ !
  ಮೇಲೆ ನಭದಲಿ ನೂರು ತಾರೆಗ-
  ಳರಳಿ ಮಿರುಗುವ ಮುನ್ನವೆ
  ಬೆಳ್ಳಿಯೊಂದೇ ಬೆಳಗುವಂದದಿ
  ಗಿಡದೊಳೊಂದೇ ಹೂವಿದೆ.
  ಸತ್ವಶೀಲನ ಧ್ಯಾನಮೌನವೆ
  ಅರಳಿ ಬಂದೊಲು ತೋರಿದೆ !
  ಒಲವು ತುಂಬಿದ ಮುಗುದೆಯೆದೆಯಿಂ-
  ದೊಗೆದ ನಲ್ನುಡಿಯಂತಿದೆ.
  ಕವಿಯ ಮನದಿಂದುದಿಸಿ ಮೆಲ್ಲನೆ
  ಅರಳಿ ಬರುವೊಲು ಕಲ್ಪನೆ,
  ಎಂಥ ನವುರಿನ ಕುಶಲ ಕಲೆಯಿದು
  ತನಗೆ ತಾನೇ ಮೂಡಿದೆ.
  ಮೌನದಲಿ ಮೊಳೆಯುತ್ತ ಮೆಲ್ಲನೆ
  ತನಗೆ ತಾನೆ ತಿಳಿಯದೆ
  ಮೊಗ್ಗಿನಲಿ ಮಲಗಿದ್ದ ಚೆಲುವಿದು
  ಇಂದು ಕಣ್ಣನು ತೆರೆದಿದೆ.
  ಎನಿತು ನವುರಾಗಿಹವು ದಳಗಳು
  ಹಸುಳೆ ಕಾಣುವ ಕನಸೊಲು !
  ಏನು ಇಂಪಿನ ಕಂಪು ಇದರದು
  ಆ ಮಹಾತ್ಮರ ಮನದೊಲು
  ಹರಿವ ಮನವನು ಹಿಡಿದು ಒಂದೆಡೆ
  ನಿಲಿಸಿ ತೊಳೆದಿದೆ ಹೂವಿದು.
  ಚೆಲುವು ಬಾಳನು ಹಸುನುಗೊಳಿಸುವ
  ಅಚ್ಚರಿಯ ಪರಿ ಎಂಥದು !

  Like

 3. ಈ ವೇದಿಕೆ ಬರಿ ಹೊಗಳಿಕೆಗಲ್ಲದೆ ಕೆಲವು ವಿಮರ್ಶೆಗಳಿಗೂ ತೆರೆದುಕೊಳ್ಳುತ್ತಿರುವುದು ಸ್ವಾಗತಾರ್ಹ.
  ಸಾಹಿತ್ಯ ಕೆಲವು ಭಾರಿ ಹೆಸರಿನ ಮೇಲೂ ಬಿಕರಿಯಾಗುತ್ತದೆ. ಜನ ತಮ್ಮದೇ ಅರ್ಥಗಳನ್ನು ಹುಡುಕಿಕೊಳ್ಳುತ್ತಾರೆ. ಇದೆಲ್ಲಾ ನಿಜವಿದ್ದೂ
  ದೆಸಾಯಿಯವರ ಮನಸಿನ ಮೇಲೆ ಗಾಢ ಪರಿಣಾಮ ಬೀರಿದ ಈ ಕವನ ಅಥವಾ ಅದನ್ನು ಅಷ್ಟು ಪರಿಣಾಮಕಾರಿಯಾಗಿ ಭೋದಿಸಿದ ಭೋದಕರು ಗಮನಾರ್ಹರಾಗಿದ್ದಾರೆ. ಆದನ್ನು ಸಂಶೋಧಿಸಿರುವ ದೇಸಾಯಿಯವರ ಪರ್ಯತ್ನ ಅಭೂತ.
  ಆ ಕಾಲದಿಂದಲೂ ಬ್ರಿಟಿಶರ ಮೇಲಿನ ನಮ್ಮ ಪೂರ್ವಾಗ್ರಹ ಪೀಡಿತ ಭಾವನೆಗಳು, ಅದರಿಂದ ಮುಕ್ತವಾಗಿ ಹೊರಬಂದು ನಮ್ಮಲ್ಲಿನ ಅಂದ -ಚಂದಗಳಿಗೂ ತೆರೆದುಕೊಳ್ಳಲು ಬಂದಿರುವ ಕರೆ ಈ ವೇದಿಕೆಗೆ ಮತ್ತೊಂದು ಮಜಲನ್ನು ನಿರ್ಮಿಸಿದೆ.
  ನನ್ನ ಕಾಲಕ್ಕೆ ಈ ಕವನ ಪಠ್ಯದಲ್ಲಿ ಇರಲಿಲ್ಲ. ಪರಿಚಯಿಸಿದ ದೇಸಾಯಿಯವರು ಕನ್ನಡ-ಆಂಗ್ಲ ಸಾಹಿತ್ಯದ ಕೊಂಡಿಯಾಗಿ ನಮ್ಮ ವೇದಿಕೆಯಲ್ಲಿರುವುದು ಸಮಂಜಸ.

  Like

  • ಮೇಲೆ ಪ್ರೇಮಲತಾ ಮತ್ತು ಪ್ರಸಾದರು ಸರಿಯಾಗಿಯೇ ಹೇಳಿದ್ದಾರೆ. ಸುದರ್ಶನರು ಉತ್ತರವನ್ನೂ ಕೊಟ್ಟಿದ್ದಾರೆ. ಯಾಕೆ ಈ ಕವನದ ಜನಪ್ರಿಯತೆ? ಈ ಕವನ ಮೊದಲು ಪ್ರಕಟವಾದಾಗಲೂ ಕಟು ಟೀಕೆಯಿತ್ತು. ಹಿಂದಿನ ರಾಷ್ಟ್ರ ಕವಿ ಆಂಡ್ರೂ ಮೋಷನ್ ಅವರ ಲೇಖನದಲ್ಲಿ (http://www.theguardian.com/books/2004/mar/06/andrewmotion.featuresreviews
   ) ಇದರ ಚರ್ಚೆಯಿದೆ. ನಾನು ಈ ಕವನದ ’ಅಮರತ್ವ’ದ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಪ್ರೇಮಲತಾ ಅವರು ಬರೆದಂತೆ ಓದುಗರು ತಮ್ಮ ಹಿನ್ನೆಲೆ, ಭಾಷೆ, ಅನುಭವ, ಸಂಸ್ಕಾರದ ಪ್ರಕಾರ ’ತಮ್ಮದೇ ಅರ್ಥ ಹುಡುಕಿಕೊಳ್ಳುತ್ತಾರೆ.’ ವರ್ಡ್ಸ್ ವರ್ಥನೇ ಇನ್ನೊಂದು ಕಡೆ ಹೇಳಿದಂತೆ: “The child is father of the Man” (The Rainbow). ”ಲೋಕೋ ಭಿನ್ನ ರುಚಿಃ”. ಜನಪ್ರಿಯತೆ ಯಾವುದನ್ನೂ ಶ್ರೇಷ್ಠತೆಗೆತ್ತುವದಿಲ್ಲ.ಇದು ಬಾಲ್ಯದಲ್ಲಿ ನಾನು ಕಲಿತ ಕವಿತೆಯ ಆಶ್ಚರ್ಯಕರವಾದ ಈ ದೀರ್ಘಾಯುಷ್ಯದ ಮೈಲಿಗಲ್ಲಿನ ಸಮಯದಲ್ಲಿಯ ಒಂದು ಅನ್ವೇಷಣೆಯಷ್ಟೇ. ಇಲ್ಲಿ ಬಂದ ಪ್ರತಿಕ್ರಿಯೆಗಳು (ಯಾವಾಗಲು ಸ್ವಾಗತ) ಪ್ರೇಮಲತಾ ಅವರು ಹೇಳಿದಂತೆ ವೇದಿಕೆಯ ಉದ್ದೇಶಕ್ಕೆ ಪೂರಕ. ನನಗೆ ಗೊತ್ತಿರದ ಕನ್ನಡದ ಕವನಗಳನ್ನು ಒದಗಿಸಿದ್ದಕ್ಕೆ ಸುದರ್ಶನರಿಗೆ ಕೃತಜ್ಞತೆಗಳು.

   Like

 4. ದೇಸಾಯಿಯವರೆಗೆ,
  ಮೇಲೆ ಉಲ್ಲೇಖಿಸಿದ ಮೂರೂ ಕವನಗಳು ಹೂವಿನ ಅಂದ ಚೆಂದಕ್ಕೆ ಸಂಬಂಧಿಸಿದಂತೆ ಕನ್ನಡದ ಕವಿಗಳು ರಚಿಸಿದ್ದಾರೆ. Wordsworth ನ ಕವಿತೆಗಳ ಅನುವಾದಗಳಲ್ಲ. ಹಾಗಾಗಿ ನಿಮಗೆ ಹುಡುಕಿದರೂ ಸಿಗದಿರಬಹುದು.

  ಅವನ ಕವಿತೆ ಚಂದವಿದೆಯಾದರೂ, ಅದು ಅತಿ ವಿಶೇಷ ಎಂದು ನನಗೂ (ಶಿವ ಪ್ರಸಾದರು ಅಂದಂತೆ) ಅನ್ನಿಸಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಕವಿ ಕವಿತಗಳಿಗೆ ಸಿಗುವ ಪ್ರಚಾರ ಪ್ರೋತ್ಸಾಹ ಅವುಗಳ ಜನಪ್ರಿಯತೆಯನ್ನು ನಿರ್ಧರಿಸಬಹುದೇನೋ.

  ಜಿ.ಎಸ್ ಎಸ್ ಅವರ ನೋಡಮ್ಮ ಮುಗಿಲತುಂಬ ಹಾಡಿನ ಪೂರ್ಣಪಾಠ ಹಾಕುತ್ತೇನೆ.

  Like

  • ನೋಡಮ್ಮ ಮುಗಿಲ ತುಂಬ ಬೆಳ್ ಬೆಳಕಿನ ಮಲ್ಲಿಗೆ
   ಹಾರಿ ಹೋಗಿ ಕಿತ್ತು ತಂದು ಮುಡಿಸಲೇನು ತುರುಬಿಗೆ

   ನಮ್ಮ ಮನೆಯ ಅಂಗಳದಲಿ ಅರಳಿ ನಗುವ ಹೂವಿಗಿಂತ ದೊಡ್ಡದೇನೆ ಅವುಗಳು
   ಹಸಿರು ನೆಲದ ಮೇಲೆ ಅರಳಿ ನಗುವ ಬದಲು ಅಷ್ಟು ಮೇಲೆ ಹೋದವೇಕು ಅವುಗಳು….

   ಇಷ್ಟು ಮಾತ್ರ ನನಗೆ ನೆನಪಿದೆ. ಮಿಕ್ಕ ಭಾಗವನ್ನು ನಿಮ್ಮಿಂದ ಕಾಯುತ್ತಿದ್ದೇನೆ.

   Like

   • ನಾನೆ ದೇವರಾಗಿದ್ದರೆ ಚುಕ್ಕಿಯೆಲ್ಲ ನಮ್ಮೂರಿನ
    ಮನೆ ಮನೆಯಲು ಅರಳುವಂತೆ
    ಸೃಷ್ಟಿ ಮಾಡುತಿದ್ದೆನು
    ಇಷ್ಟು ತಿಳಿಯಲಿಲ್ಲವೇನೆ ಜಗವ ಮಾಡಿದಂಥ ದೇವ
    ನಿಜವಾಗಿಯು ದಡ್ಡನೂ..
    ನೋಡಮ್ಮ ಮುಗಿಲ ತುಂಬ ಬೆಳ್ ಬೆಳಕಿನ ಮಲ್ಲಿಗೆ…..

    Like

 5. ಆತ್ಮೀಯ ಶ್ರೀವತ್ಸ ಅವರೆ
  ಇಂಗ್ಲಿಷ್ ಕವಿಗಳ ಕವಿತೆಯನ್ನು ವಿಶ್ಲೇಷಿಸಿ ಬರೆಯುವ ನಿಮ್ಮ ಹವ್ಯಾಸ ನಮಗೆಲ್ಲ ಪರಿಚಿತವಾಗಿರುವ ವಿಷಯ. ಈ ಹಿಂದೆ ಕನ್ನಡ ಬಳಗದ ಸ್ಮರಣ ಸಂಚಿಕೆಯಲ್ಲಿ Thomas Campbell ಬರೆದ Lord Ullins daughter ಪದ್ಯ ಹಾಗು ಅದರ ಅನುವಾದದ ಬಗ್ಗೆ ನೀವು ಬರೆದ ಲೇಖನವನ್ನು ನಾನು ಇಲ್ಲಿ ನೆನೆಯುತ್ತೇನೆ. ನೀವು ಯಾವುದೆ serious ಬರವಣಿಗೆಗೆ ತೊಡಗಿದಲ್ಲಿ ಅದನ್ನು ಆಳವಾಗಿ ಸಂಶೊಧಿಸಿ, ಮಾಹಿತಿ ಸಂಗ್ರಹಿಸಿ ಅದ್ದಕ್ಕೆ ವೈಯುಕ್ತಿಕ ಅನುಭವಗಳನ್ನು ಜೋಡಿಸಿ ಓದುಗರ ಆಸಕ್ತಿಯನ್ನು ಹಿಡಿದಿಡುವ ಸಾಮರ್ಥ್ಯ ನಿಮಗಿದೆ. ನಾನು ಈ ಕವನವನ್ನು PUC ವರ್ಷಗಳಲ್ಲಿ ಓದಿದ ನೆನಪಾಗುತ್ತಿದೆ. Daffodils ಕಂಡರಿಯದ ನಾವು ಅದರ ಚಿತ್ರಣವನ್ನು ನಮ್ಮ ಕಲ್ಪನೆಗೆ ತಕ್ಕಂತೆ ಊಹಿಸಿಕೊಂಡು ಕವನವನ್ನು ಅರಿಯಲು ಆಗ ಪ್ರಯತ್ನಿಸಿದ್ದೆವು.

  ಈ ಪದ್ಯ ಯಾವ ಕಾರಣಕ್ಕೆ ವಿಶ್ವವಿಖ್ಯಾತವಾಗಿದೆ ಎನ್ನುವುದು ನನಗೆ ಅರ್ಥವಾಗದ ವಿಷಯ. Some things are famous because they are famous! May be the poem is appealing because of its simplicity and fondness towards pretty things. ಈ ಕವಿತೆ ಸುಂದರ ಪ್ರದೇಶವಾದ lake district ನ ಒಂದು ಸುಂದರ ಚಿತ್ರಣ ಹಾಗು ಕವಿಗೆ ನೆಮ್ಮದಿ ನೀಡಿದ Early spring portrait ಅನ್ನುವುದು ಬಿಟ್ಟರೆ ಇನ್ಯಾವ ಹಿರಿಮೆ ನನ್ನ ಗಮನಕ್ಕೆ ಬಂದಿಲ್ಲ. ಇದು ನನ್ನ ಅನ್ನಿಸಿಕೆ. ಕವನದ ಹಿಂದೆ ಇನ್ಯಾವ ಚರಿತ್ರೆ ಹಾಗು ಘಟನವಳಿಗಳಿರಬಹುದು ಅದು ನನಗೆ ತಿಳಿಯದ ವಿಷಯ.
  Timing of this poem is very appropriate indeed. ಸುದರ್ಶನ್ ಅವರ ಭಾವನುವಾದ ಮೂಲ ಕವನದ ಭಾವವನ್ನು ಮತ್ತು ಚಿತ್ರಣವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ

  Like

 6. ಉಮಾ ಮತ್ತು ಸುದರ್ಶನರಿಗೆ ಧನ್ಯವಾದಗಳು. ಇದರ ಚರ್ಚೆ, ವಿಷ್ಲೇಷಣೆಗೆ ಇನ್ನೂ ಮೆರಗು ಕೊಟ್ಟಿದ್ದೀರಿ! ಸುದರ್ಶನರೇ, ನಿಮ್ಮ ಅನುವಾದ ಎಷ್ಟು ಮುದ ಕೊಟ್ಟಿತೆ೦ದರೆ ಆ ಹೂವುಗಳಿಗೂ ಸಮಕ್ಕೂ ಕುಣಿದೆ! ನಿಜವಾಗಿಯೂ ಇದನ್ನು ಬರೆಯುವಾಗ ಅದನ್ನು ಬೇರೆ ಯಾರಾದರು ಕನ್ನಡಿಸಿದ್ದು ಸಿಗ ಬಹುದೇ ಎಂದು ಹುಡುಕಾಡಿದೆ. ನನಗೆ ನಿಮ್ಮಷ್ಟು ಸಾಹಿತ್ಯ ಜ್ಞಾನದ ಹರವಿಲ್ಲದ ಕಾರಣ ಸಿಗಲಿಲ್ಲ. ಈ ಭಾವಾನುವಾದ ಮೂಲಕ್ಕೆ ಸರಿಸಾಟಿಯಾಗಿ, ಏಕೆ ಅದ ಮೀರಿ ನಿಲ್ಲುವಂತಿದೆ. ನಿಮ್ಮದೇ ಸಾಲುಗಳಂತೆ:
  ”ಕೊಳದೊಳಗೆ ಜಲದಲೆಯು ಎದ್ದು ಕುಣಿದಿರಲೇನು/
  ನಮ್ಮ ನಾಟ್ಯದ ಸಮಕೆ ಅವುಗಳಿಲ್ಲೆಂದು”
  ಸುದರ್ಶನ, ಕನ್ನಡದ ಅಭಿವ್ಯಕ್ತಿಯ ಶಕ್ತಿಗಿದು ನಿದರ್ಶನ. ಅದನ್ನು ತೋರಿಸಿ ಕೊಟ್ಟಿದ್ದೀರಿ!
  ಇದೇ ತರಹ ಜಗತ್ತಿಗೆಲ್ಲ ನಮ್ಮ ಮಲ್ಲಿಗೆಯ ಕಂಪು ಪಸರಿಸಲು ಇಂಗ್ಲಿಷ್ ನಲ್ಲಿ ಅದರ ಬಗೆಗಿನ ಕವನಗಳನ್ನು ಅನುವಾದ ಮಾಡಿದರೆ ಉಂಟು.
  ಈಗಾಗಲೇ ಅನುವಾದಗಳು ಇದ್ದಿರಲು ಸಾಕು. ಆದರೆ ಅದನ್ನು ಪಸರಿಸಲು ಜಾಗತಿಕ ಕನ್ನಡ ಸಾಮ್ರಾಜ್ಯವಿಲ್ಲವಲ್ಲ!
  ಕೊಳದ ಜಲದಲೆಯ೦ತೆ, ಇನ್ನಷ್ಟು ಓದುಗರ ಪ್ರತಿಕ್ರಿಯದಲೆಗಳನ್ನು ಪ್ರತೀಕ್ಷಿಸ ಬಹುದೇ?

  Like

 7. ದೇಸಾಯಿಯವರ ಇನ್ನೊಂದು ಅಂತಃ ಸ್ಪರ್ಶೀ ಬರಹ. ಇತಿಹಾಸ, ಸಾಹಿತ್ಯ, ಗುರುಭಕ್ತಿ, ಹಾಗೂ ವೊರ್ದ್ಸ್ವಾರ್ತನ ಕವಿತೆ ಎಲ್ಲವೂ ಮೇಳೈಸಿದ ಲೇಖನ. ಬಹಳ ಇಷ್ಟವಾಯಿತು. ನಿಜ, ನೀವೆಂದಂತೆ ಕನ್ನಡದ ಕಂಪು, ಮೈಸೂರು ಮಲ್ಲಿಗೆ, ಹೂವು, ಸೌಂದರ್ಯವನ್ನು ಕುರಿತ ಕವಿತೆಗಳಿಗೇನೂ ಕೊರತೆಯಿಲ್ಲ. ಜಾಗತಿಕ ನೆಲೆಯಲ್ಲಿ ಕನ್ನಡದ ಅರಿವಿ ಹರವು ಕಡಿಮೆಯಷ್ಟೆ.

  ೧) ಇದೋ ನೋಡು ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ
  ಇಷ್ಟು ಹಚ್ಚನೆ ಹಸಿರು ಗಿಡದಿಂತೆಂತು ಮೂಡಿತೊ ಬೆಳ್ಳಗೆ!! ( GSS)

  ೨) ನೋಡಮ್ಮಾ ಮುಗಿಲ ತುಂಬ ಬೆಲ್ ಬೆಳಕಿನ ಮಲ್ಲಿಗೆ
  ಹಾರಿಹೋಗಿ ಕಿತ್ತು ತಂದು ಮುಡಿಸಲೇನು ತುರುಬಿಗೆ (GSS)

  ೩) ಏನಿದೇನಿದು ಮಾಟ ನೋದಲೆನಿತಿದಚ್ಚರಿ ಸೊಬಗೆ ಸೂರೆ ಹೋದ ಬೇಟ ನೋಡಿದಿನಿತು ಅಚ್ಚರಿ
  ಅರುಣ ಮೂಡಿದೊಡನೆ ಮೂಡಿ ಬಿಮ್ಮನೆ ಬಿರಿದರಳಿಹೆ ಕಿರಣ ಕಾಂತಿಯೊಡನೆ ಕೂಡಿ ಕಮ್ಮನೆ ಮಗ ಮಗಿಸಿಹೆ! (S.V.Parameshwara Bhatta)

  ಹೀಗೆ ಒಂದಲ್ಲಾ ಎರಡಲ್ಲಾ.

  ನಿಮ್ಮ ಲೇಖನವನ್ನು ಓದಿ ಈ daffodils ಕವಿತೆಯನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ್ದೇನೆ. ಕನ್ನಡ ಭಾಷೆಯ ಸೌಂದರ್ಯ ಮತ್ತು ಅಭಿವ್ಯಕ್ತಿಗಳ ಶಕ್ತಿ ಕೂಡಾ ಅನುಪಮವಾದದ್ದೇ.

  ಗಿರಿಶಿಖರ ಕಂದರಗಳಾ ಮೇಲೆ ನಾನೊಮ್ಮೆ
  ಒಂಟಿ ಮೋಡದ ತೆರದಿ ಅಲೆಯುತಿರುವಲ್ಲಿ
  ಸ್ವರ್ಣ ವರ್ಣದ ಹೂವ ಕಂಬಳಿಯ ಹಾಸನ್ನು
  ಕಂಡು ಅಚ್ಚರಿಗೊಂಡು ನಿಂದೆ ನಾನಲ್ಲಿ

  ಕೊಳದ ಬದಿಯಲಿ ನಿಂತ ಸಾಲುಮರಗಳ ಕೆಳಗೆ
  ನಲಿವ ಹೂಗಳು ಕರೆಯೆ ಕೈಬೀಸಿ ಬಳಿಗೆ
  ಕ್ಷಣವೊಮ್ಮೆ ನಾನಿಂತು ಹರಿಸಿದೆನು ಚಿತ್ತ
  ನೋಡುತಲಿ ಕಣಿವೆಯಾ ಸುತ್ತ ಮುತ್ತ.

  ಆಕಾಶಗಂಗೆಯಲಿ ರಾತ್ರಿಯಾಗಸದಲ್ಲಿ
  ಎಣೆಯಿರದೆ ಮಿನುಗುವಾ ತಾರೆಗಳ ತೆರದಿ
  ಕೊಳದ ದಂಡೆಯ ಉದ್ದ ಅಗಲಕ್ಕೂ ಮೈಚಾಚಿ
  ಕಣ್ಣ ತುಂಬಿವೆ ಇಲ್ಲಿ ಕಾಣಿಸದೆ, ಪರಿಧಿ.

  ಹತ್ತಲ್ಲ ನೂರಲ್ಲ ಹತ್ತು ಸಾವಿರವಲ್ಲ
  ಲಕ್ಷಕ್ಕೂ ಮಿಗಿಲಾಗಿ ನಗುತಿರುವುವಲ್ಲಿ
  ಬಳುಬಳುಕಿ ನಸುನಗುತ ತಲೆದೂಗಿ ಆಡಿಹವು
  ತಂಗಾಳಿ ಮೃದುವಾಗಿ ಬೀಸುತಿರುವಲ್ಲಿ

  ಕೊಳದೊಳಗೆ ಜಲದಲೆಯು ಎದ್ದು ಕುಣಿದಿರಲೇನು
  ನಮ್ಮ ನಾಟ್ಯದ ಸಮಕೆ ಅವುಗಳಿಲ್ಲೆಂದು
  ಹೆಮ್ಮೆ -ಬಿಮ್ಮುಗಳಿಂದ ಹರುಷದೊನ್ನಲಿವಿಂದ
  ಸುಮರಾಜಿ ನರ್ತಿಸಿವೆ ನೋಡು ನೀಬಂದು

  ಪುಷ್ಪಹಾಸಿನ ಚೆಲುವು ನನ್ನ ಮನ ತುಂಬಿರಲು
  ನನ್ನ ಮೇಲೆಯೇ ನಾನು ಮೋಹಗೊಂಡು
  ಕಣ್ಣು ಮನ ತುಂಬಿರುವ ಈ ಸಿರಿಯ ಭಾಗ್ಯವನು
  ನಂಬಲಾರದೆ ನಂಬಿ ನಿಂದೆನಿಂದು

  ಮನೆಗೆ ಮರಳುತ ಒಂಟಿ ಭಾವದಲಿ ಪವಡಿಸಿದೆ
  ನಾ ಎನ್ನ ತಲ್ಪದಾ ಮೇಲೆ ತಲೆಯಿಟ್ಟು
  ಏಕಾಂತ ನೀಡಿದಾ ಸುಖದ ಸ್ಪರ್ಶಕೆ ಚೆಲುವ
  ಹೂವುಗಳ ಸಾಂಗತ್ಯ ಮನದೊಳಿಟ್ಟು

  ಹೃ-ನ್ಮನ ತುಂಬಿದಾ ಹೂವೆ ನಿನ್ನ ಹೆಸರೇನೆ?
  ‘ಡಾಫುಡಿಲ್ಸ್’ ಎಂಬ ನೆಲ ನೈದಿಲೆಯು ತಾನೆ!!

  Like

 8. ಮೊದಲ ವರ್ಷದ ಪಿ.ಯು.ಸಿ ಯ ಇಂಗ್ಲೀಷ್ ಪಠ್ಯ ಪುಸ್ತಕದಲ್ಲಿ ಡಾಫ಼ೋಡಿಲ್ಸ್ ಪದ್ಯ ನಮಗಿದ್ದದ್ದು ಚೆನ್ನಾಗಿ ನೆನಪಿದೆ. ನಮ್ಮ ಉಪನ್ಯಾಸಕ ಶ್ರಿ. ಶಂಕರ್ ಈ ಕವನವನ್ನು ಅತ್ಯದ್ಭುತವಾಗಿ ವರ್ಣಿಸಿದ್ದೂ ನೆನಪಿದೆ. ಆ ಪದ್ಯದ ವಿಷ್ಲೇಶಣೆ ನಮ್ಮ ಪರೀಕ್ಷೆಯಲ್ಲಿ ಪ್ರಶ್ನೆಯಾಗಿಯೂ ಬಂದಿತ್ತು. ಆದರೆ ಅದರ ಹಿಂದಿನ ಹಿನ್ನೆಲೆಯ ಮಾಹಿತಿ ಡಾ. ದೇಸಾಯಿ ಅವರ ಲೇಖನದಿಂದಲೇ ತಿಳಿದದ್ದು. ಈ ಕವನವನ್ನು ಜಗತ್ತಿನಾದ್ಯಂತ ಲಕ್ಷಗಟ್ಟಲೆ ಜನ ಓದಿ ನಮ್ಮಂತೆ ಆನಂದ ಪಟ್ಟಿರಬಹುದು. ಈಗ ಎರಡು ವರ್ಷಗಳ ಹಿಂದೆ ಗ್ರಾಸಮೀರಿಗೆ ಹೋದಾಗ, ಡೋವ್ ಕಾಟೇಜಿನಲ್ಲಿ ಒಂದು ಸುತ್ತು ಹಾಕಿದಾಗ , ನಿಜಕ್ಕೂ ವರ್ಡ್ಸವರ್ಥನನ್ನೇ ಕಂಡಷ್ಟು ಸಂತೋಷವಾಯ್ತು. ನಾನು ನನ್ನ ಪತಿ ಇಬ್ಬರೂ ಈ ಕವನದ ಬಗ್ಗೆ ಚರ್ಚಿಸುತ್ತಿದ್ದಾಗ, ನನ್ನ ಮಕ್ಕಳಿಗೆ ಅದರ ಬಗ್ಗೆ ಯಾವುದೇ ಕ್ಲೂ ಇಲ್ಲದ್ದು ಕಂಡು ಬಹಳ ವಿಚಿತ್ರವೆನಿಸಿತು. ಇಂದು ವರ್ಡ್ಸವರ್ಥನ ನಾಡಿನಲ್ಲೇ ಬೆಳೆದು, ವಿದ್ಯಾಭ್ಯಾಸ ಮಾಡುವ ಯುವಕರಿಗೆ, ಅವನ ಇಷ್ಟೊಂದು ಪ್ರಸಿದ್ಧ ಕವನದ ಬಗ್ಗೆ ಅರಿವಿಲ್ಲ ಎನ್ನುವುದು ಸ್ವಲ್ಪ ವಿಪರ್ಯಾಸವೇ ಸರಿ. ಸಸ್ಯಶಾಸ್ತ್ರದಲ್ಲಿ, ಈ ಪ್ರಭೇಧದ ಸಸ್ಯಗಳ ಬಗ್ಗೆ ನಾನು ಓದುವಾಗ, ಮತ್ತೊಮ್ಮೆ ನನ್ನ ಉಪಾಧ್ಯಾಯರೂ ಕೂಡಾ ಈ ಕವನದ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲಿಗೆ ಭಾರತದಲ್ಲಿ ನಮ್ಮ ಹಿಂದಿನ ಪೀಳಿಗೆ ಮತ್ತು ನಮ್ಮ ಪೀಳಿಗೆಯವರಿಗೆ ಈ ಕವನದ ಬಗ್ಗೆ ಇರುವ ಅಸ್ಥೆ ಚೆನ್ನಾಗಿ ತಿಳಿಯುತ್ತದೆ. ಅವನ ಅಕ್ಕ ಡೋರಥಿಯ ಜೀವನವೆಲ್ಲಾ , ವರ್ಡ್ಸವರ್ಥನ ಸಾಹಿತ್ಯ ಕೃಷಿಯ ಸುತ್ತಮುತ್ತಲೇ ಕಳೆಯಿತು ಎನ್ನುವುದನ್ನು, ದೇಸಾಯಿ ಅವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಡಾಫ಼ೋಡಿಲ್ಸ್ ಹೂವನ್ನು, ಅವರು ನೆಲನೈದಿಲೆ ಎಂದು ವರ್ಣಿಸಿರುವುದು ನನಗೆ ಬಹಳ ಮೆಚ್ಚಿಗೆಯಾಯಿತು. ಸಧ್ಯದಲ್ಲಿ ಶೀತವಲಯದ ದೇಶಗಳಲ್ಲಿ, ವಸಂತದ ಆಗಮನವಾಗುತ್ತಿದ್ದು, ಡಾಫ಼ೋಡಿಲ್ಸ್ ಎಲ್ಲೆಲ್ಲೂ ರಾರಾಜಿಸುತ್ತಿದೆ. ಈ ಕವನದ ದ್ವಿಶತಮಾನೋತ್ಸವದ ಸಂದರ್ಭದಲ್ಲಿ, ದೇಸಾಯಿ ಅವರು ಈ ಲೇಖನವನ್ನು ಬರೆದು, ನಮ್ಮ ಮನಗಳಲ್ಲಿ ಹುದುಗಿದ್ದ ನೆನಪನ್ನು ಮತ್ತೊಮ್ಮೆ ತಾಜಾಗೊಳಿಸಿದ್ದಾರೆ.
  ಉಮಾ ವೆಂಕಟೇಶ್

  Like

 9. ವಿನತೆಯವರಿಗೆ ಧನ್ಯವಾದಗಳು. ಎಷ್ಟು ಬೇಗನೆ ಷರಾ ಬರೆದಿರುವಿರೆ೦ದ ಮೇಲೆ ಈ ವಿಷಯ ನಿಮಗೆ, ಹೃದಯಕ್ಕೆ ಅತ್ಯಂತ ನಿಕಟವಾದದ್ದು ಎಂದು ಕೊ೦ಡೆ. ನಾನೂ ಮೊದಲ ಸಲ 1981ರಲ್ಲಿ ಮಾರ್ಚ್ ತಿಂಗಳಲ್ಲಿ ಗ್ರಾಸ್ ಮಿಯರ್ ನ DoveCottage ಗೆ ಹೋಗಿದ್ದಾಗ ಆ ಹಸ್ತ ಪ್ರತಿಗಳನ್ನು ನೋಡಿ ಪುಳಕಿತನಾಗಿದ್ದೆ. ಆವೇಶದಲ್ಲಿ ಅತಿಥಿಗಳ ಪುಸ್ತಕದಲ್ಲಿ ಷರಾ ಬರೆದು ಕನ್ನಡದಲ್ಲಿಯೂ ಹೆಸರನ್ನು ಬರೆದು ಬಂದಿದ್ದೆ! (ಗೋರಿಯಲ್ಲೇ ವಿಲ್ಲಿಯಮ್ ವಿಲಿ ವಿಲಿ ಒದ್ದಾಡಿ ಹೊರಳಿದನೋ?). ಡಾರೊಥಿ ಎಲೆಯ ಮರೆಯ ಕಾಯಿಯ೦ತಿದ್ದವಳು. 200 ವರ್ಷಗಳ ನಂತರ ಕ್ಯಾರಲ್ ಡಫಿ ಈ ನಾಡಿನ ಮೊತ್ತ ಮೊದಲ ರಾಷ್ಟ್ರಕವಯತ್ರಿಯ ಸ್ಥಾನದಲ್ಲಿರುವದು ಉಚಿತವೆ ಅಲ್ಲವೆ?

  Like

 10. ಶ್ರೀವತ್ಸ ರವರೆ,
  ನಮಸ್ಕಾರ.
  ಡಾಫ್ಫಾದಿಲ್ ಹೂ ಕುರಿತ ನಿಮ್ಮ ವರ್ಣನೆ, ಮತ್ತು ಆ ಹೂವಿನ ಜೊತೆಗೆ ನೀವು ನೆನಪಿಸಿಕೊಂಡಿರುವ ಬಾಲ್ಯದ ಕೊಂಡಿಗಳು, ನಿಮ್ಮ ಗುರುಗಳ ಸಾಹಿತ್ಯ ಪ್ರೇಮ … ಎಲ್ಲವೂ ಚೆನ್ನಾಗಿ, ಸಕಾಲಿಕವಾಗಿ ಹೊರಹೊಮ್ಮಿವೆ. ಅಭಿನಂದನೆಗಳು. ಮತ್ತೊಮ್ಮೆ ಮನೆ ಮುಂದಿರುವ ಆ ಹೂ ಗುಚ್ಛ ಗಳಿಗೆ ಭೇಟಿ ಕೊಡುವಂತೆ ಪ್ರೇರೇಪಿಸಿದ್ದೀರ. ಹಿಂದೆ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿದ್ದ ನಾನು ಆ ಕವನವನ್ನು ಓದಿ ಹೂವಿನ ಬಗ್ಗೆ ನನ್ನದೇ ಚಿತ್ರಗಳನ್ನು ರೂಪಿಸಿಕೊಂಡಿದ್ದೆ. ಆ ಹೂವಿನ ಅಂದವನ್ನು ನೋಡಲು ಇಲ್ಲಿಗೆ ಬರಬೇಕು.

  ಕವಿ ವಿಲಿಯಂ ವರ್ಡ್ಸ್ ವರ್ತ್ ಅವರ ಪ್ರಸಿದ್ಧ ಕವನದಲ್ಲಿ ವರ್ಣಿಸಿದ ದಫ್ಫಾಡಿಲ್ ಹೂವಿನ ಅಂದ ಮತ್ತು ಅದರ ಸುತ್ತ ಹೆಣೆದ ಭಾವಗಳು – ಇದೆರಡರ ಹಿಂದಿನ ಸ್ಪೂರ್ತಿ ಖಂಡಿತವಾಗಲೂ ಕವಿಯ ತಂಗಿ ದೊರೋತಿ ವರ್ಡ್ಸ್ ವರ್ತ್. ನಾನು ೨೦೧೩ ರಲ್ಲಿ ಕವಿ ವಿಲಿಯಂ ವರ್ಡ್ಸ್ ವರ್ತ್ ರ ಮ್ಯೂಸಿಯಂ ಮತ್ತು ಅವರ ಸಂಸಾರ ವಾಸವಿದ್ದ ಪುಟ್ಟ ಮನೆಯನ್ನು, ಅವರ ಕೆಲ ಕವನಗಳಿಗೆ ಸ್ಪೂರ್ತಿ ಕೊಟ್ಟ ಗ್ರಾಸ ಮೀರ್ ಹಳ್ಳಿ (ಲೇಕ್ ಡಿಸ್ಟ್ರಿಕ್ಟ್ ನಲ್ಲಿ) ನೋಡಲು ಅಲ್ಲಿಗೆ ಹೋದಾಗ ನನಗೆ ಸಿಕ್ಕಿದ್ದು ಆತನ ತಂಗಿ ಡೋರತಿ ವರ್ಡ್ಸ್ ವರ್ತ್. ಆಕೆಯ ಬಗ್ಗೆ ಮೊತ್ತ ಮೊದಲ ಬಾರಿಗೆ ಏರ್ಪಡಿಸಿದ್ದ ಪ್ರದರ್ಶನಕ್ಕೆ ನಾನು ಹೋಗಿ ನೋಡಿದ್ದು, ತಿಳಿದದ್ದು ಬಹಳ – ಆಕೆಯ ಸಾಹಿತ್ಯ ಪ್ರೇಮ, ಅಣ್ಣನ ಸಾಹಿತ್ಯದ ಮೇಲೆ ಆಕೆ ಬೀರಿದ ಪ್ರಭಾವ, ಅಣ್ಣನ ಕುಟುಂಬವನ್ನು ಆಕೆ ಜೋಪಾನದಿದಂದ ಸಲಹಿದ್ದು, ಆಕೆಯ ಅಗಾಧ ಜೀವನ ಪ್ರೀತಿ ಇತ್ಯಾದಿ. ಡೋರತಿ ದಾಖಲಿಸಿದ, ಬರೆದ ಅನೇಕ ವಿವರಣೆಗಳು, ನೆನಪುಗಳು, ವರ್ಣನೆಗಳು ಇವುಗಳಿಂದ ಅಣ್ಣ ವಿಲಿಯಂ ಬಹಳಷ್ಟು ಶ್ರೀಮಂತರಾದರು. ಆಗಿನ ಕಾಲದಲ್ಲಿ ಹೆಂಗಸರು ಪ್ರಸಿದ್ಧ ಕವಿಯಿತ್ರಿಗಳಾಗಿ ಹೆಸರು ಪಡೆದು, ರಾಣಿಯ ಆಸ್ಥಾನವನ್ನು ಅಲಂಕರಿಸುವ ರೂಢಿ ಇರಲಿಲ್ಲ. ಆಗ ಎಲೆಮರೆ ಕಾಯಾಗಿ ಕಣ್ಮರೆಯಾದ ಡೋರತಿ ಕಡೆಗೆ ನಮ್ಮ ಕಾಲದಲ್ಲಾದರೂ ಹೆಚ್ಚು ಹೆಚ್ಚು ಗಮನಕ್ಕೆ ಬಂದಿದ್ದಾರೆ. ಆಕೆ ಬರೆದ ಹೂವಿನ ಚೆಂದದ ಬಗೆಗಿನ ಹಸ್ತಪ್ರತಿಯನ್ನು ಓದಿದ ಬಳಿಕ ನನಗೇನೋ ಡೋರತಿಯ ಡಾಫ್ಫಾದಿಲ್ ಹೆಚ್ಚು ಇಷ್ಟವಾಯಿತು. ಆಕೆಯ ಭಾವಪೂರಿತ ವಿವರಣೆಗಳಿಂದ ಅಣ್ಣ ವಿಲಿಯಂ ನ ಸುಪ್ರಸಿದ್ಧ ಕವನ ಹೇಗೆ ಹುಟ್ಟಿತು ಎಂದು ಕೂಡ ಅರ್ಥವಾಯಿತು. ಲೇಖನದಲ್ಲಿ ನೀವು ಆ ಸೂಕ್ಷ್ಮವನ್ನು ತೋರಿಸಿದ್ದೀರ. ಧನ್ಯವಾದಗಳು.
  ವಿನತೆ ಶರ್ಮ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.