ಇಂದು ಗುರು ಪೌರ್ಣಮಿಯ ದಿನದ ಕಾಣಿಕೆ.
ಗುರುವಂದನೆ
ನಮ್ಮ ವೈದ್ಯಕೀಯ ಶಿಕ್ಷಣಾರಂಭದ ೨೫ ನೇ ವರ್ಷ ತುಂಬಿದ, ಬೆಳ್ಳಿ ಹಬ್ಬದಾಚರಣೆಯ ಸಂದರ್ಭದಲ್ಲಿ ಗುರುವಂದನೆ ಹಮ್ಮಿಕೊಂಡಿದ್ದೆವು. ಆ ದಿನ ನಾನು ಮಾಡಿದ ಸ್ವಾಗತ ಭಾಷಣದ ಲೇಖನ ರೂಪ
ಪೂರ್ವ ಪೀಠಿಕೆ
(ಸೆಪ್ತೆಂಬರ್ ೫ನೇ ತಾರೀಖು ಶಿಕ್ಷಕರ ದಿನ ನಮ್ಮ ಹೆಮ್ಮೆಯ ಡಾ. ರಾಧಾಕೃಷ್ಣನ್ ಅವರ ಜನ್ಮದಿನದ ಸಂದರ್ಭದಲ್ಲಿ ಆಚರಿಸಲ್ಪಡುವ ದಿನ . ಇದಕ್ಕೆ ಸ್ವಲ್ಪ ಮೊದಲಲ್ಲಿ ಗುರುಪೂರ್ಣಿಮೆಯೂ ನಮ್ಮ ಪರಂಪರೆಯಲ್ಲಿ ಆಚರಿಸಲ್ಪಡುತ್ತದೆ. ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟ ಅಂಗ. ಚೀನಾ ನಾಗರೀಕತೆಯಲ್ಲಿ ಹೊರತು ಬೇರೆಲ್ಲ (ಪ್ರಮುಖವಾಗಿ ಯೂರೋಪದಲ್ಲಿ) ನಾಗರೀಕತೆಗಳಲ್ಲಿ ಶಿಕ್ಷಣ ಎನ್ನುವುದು ಒಂದು ವಹಿವಾಟಿನಂತೆ ಆಚರಿಸಲ್ಪಡುತ್ತಿದ್ದ ಕಾಲದಲ್ಲಿ ಹಾಗೂ ಅದಕ್ಕೆ ಬಹಳ ಹಿಂದೆ ಭಾರತದಲ್ಲಿ ವಿದ್ಯೆಯನ್ನು ವಿದ್ಯೆ ಕಲಿಸುವುದಕ್ಕಾಗಿಯೇ, ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ ಕಲಿಯುವುದಕ್ಕೆ ಹಾಗೂ ಕಲಿಸುವುದಕ್ಕೆ ತಕ್ಕ ವಿದ್ಯಾರ್ಥಿ ಸಿಕ್ಕಲ್ಲಿ ಹೇಳಿಕೊಡುವ ಪರಿಪಾಠ ಇತ್ತು; ಕಡಿಮೆಯಾದರೂ ಈಗಲೂ ಇದೆ. ಗುರು ಶಿಷ್ಯ ಸಂಬಂಧಿತ ಕಥೆಗಳು ನಮ್ಮ ಪುರಾಣದಲ್ಲಿ ಸಾಕಷ್ಟಿವೆ.)