ಜಮುನ ಮಿಸ್ ಮಾಡಿದ್ದೇನು? – ಪ್ರೇಮಲತ ಬಿ. ಅವರ ಕವನ

ಜೋಡಿಜಡೆಯ ಜಂಬಗಾತಿ, ಜಮುನಳೊಂದು ದಿನ
ಯೋಚಿಸುತ್ತ ತನ್ನ ಬಗ್ಗೆ, ಕುಳಿತಳೊಂದು ಕ್ಷಣ !
ಊರಿಗೆಲ್ಲ ಜಾಣೆಯಿವಳು,ಹೊಳೆದಂತೆ ಮುತ್ತು
ಜಡೆಯನೆಸದು ನಡೆದಳಂದ್ರೆ, ಹುಡುಗ್ರಗೆಲ್ಲ ಮತ್ತು!

ನಡೆ ಚಂದ, ನುಡಿ ಚಂದ,ಇವಳ ಮುಖಾರವಿಂದ
ಹಾಡು ಹಸೆ ರಂಗೋಲಿಯೆಲ್ಲ,ಇವಳಿಗೆ ಮಹದಾನಂದ!
ಬಳುಕೊ ಸೊಂಟ, ತುಂಬು ಎದೆ, ಚೆಂದುಟಿಯ ಗಲ್ಲ
ಮೂರು ಊರಿನಲ್ಲಿ ಇವಳ ಸಾಟಿ, ಬೇರೆ ಯಾರು ಇಲ್ಲ!

ಜಮುನ ರಸ್ತೆ ತುಳಿದಳಂದ್ರೆ,ಹುಡುಗರೆಲ್ಲ ಬಿಜ್ಹಿ
ಯುವಕರಿರಲಿ ಮುದುಕರಿಗೂ, ಮೈಯೆಲ್ಲ ಬಿಸಿ!
ಶ್ವೇತವರ್ಣದುಡುಗಿ ಇವಳು,ತಮಗೇನೆ ಸರಿ
ಸ್ಪರ್ದೆಗಿಳಿದು ಕೊಡಿಸುವರು, ಐಸ್ಕ್ರೀಮ್ ಪಾನಿಪುರಿ!

ಸೂಟು ಬೂಟು ದರಬಾರು,ಬಂತು ದೊಡ್ಡ ಕಾರು
ಕಣ್ಣಮಿಂಚು,ಕುಡಿನೋಟ, ಕೆಂಪಗಾದ್ಲು ಜಮುನ!
ಚಾಕಲೇಟು, ಕನ್ನಡಕದ, ಹುಡುಗನೆಸರು ಹರಿ
ನಿರಾಶರಾದ ಗಂಡುಗಳು ಇಟ್ಟ ಹೆಸರು, ‘ಠಕ್ಕ ನರಿ’!

ಊರಿಗೂರೆ ದೊಡ್ಡಗುಲ್ಲು, ಇವಳ ಮದುವೆ ದಿನ
ಊಟಬಿತ್ತು, ನಿದ್ದೆಗೆಟ್ಟು , ಕುಳಿತವ್ರೆಷ್ಟು ಜನ!
ಫಾರಿನ್ ಗಂಡು, ಸಂಬ್ಳದ್ ಕೊಂಬು ,ಬೀಗಿದ್ರು ತಾಯಿ -ತಂದೆ
ಅಂದು ಕೊಂಡ್ಲು ಜಮುನ, ಈ ಪ್ರಪಂಚವೆಲ್ಲ ಒಂದೆ!

ಏರೋಪ್ಲೇನು,ಕಾರು,ಮನೆ ಎಲ್ಲದರ ಭರಾಟೆ
ವರ್ಷ ಕಳೆಯೊದ್ರಲ್ಲಿ, ಇಳೀತು ಎಲ್ಲ ಗಲಾಟೆ!
ಕೆಲಸದಲ್ಲಿ ಗಂಡ, ಒಂಟಿ ಬದುಕು ಇದು ಪರದೇಶ
ನೋಡೋವ್ರಿಲ್ಲ, ಕೇಳೋವ್ರಿಲ್ಲ, ಇವಳ ಮನದ ಕ್ಲೇಶ !

ಮದುವೆ,ಮುಂಜಿ,ಪೂಜೆ ಶಾಸ್ತ್ರ,ಯಾವುದು ಇಲ್ಲ
ರಸ್ತೆಯಲ್ಲಿ ‘ಹಲೋ’ಅಂದ್ರೆ, ಮುಗಿದೇ ಹೋಯ್ತು ಎಲ್ಲ!
ಎಲ್ಲ ಉಂಟು ಆದರೇನು ಮನಸಿಗಿಲ್ಲ ತೃಪ್ತಿ
ಕೃತಕ ಆಡಂಬರದ ಮಾತುಕತೆ ಇಲ್ಲಿ ಜಾಸ್ತಿ!

ನೆನದಳವಳು ಮನದಲ್ಲಿ ತಾನು ಬಿಟ್ಟ ಊರು
ನೆಲ್ಲಿ, ನೇರಳೆ,ಹಲಸು, ಮಾವು, ಬೇಲ,ತೆಂಗು-ಕಂಗು
ತುಂಬೆ, ರುದ್ರಾಕ್ಷಿ, ಮಲ್ಲೆ,ಜಾಜಿ, ಪಾರಿಜಾತ
ಜಲಜ,ಕುಮುದ, ಶಾರದೆ ಮತ್ತು ಸುಜಾತ

ಹಲ್ಲು ಗಿಂಜಿ ಹಿಂದೆ ಬಿದ್ದ, ಗಮ್ಮನೆಯ ರಾಜೇಶ
ಕುಮಾರ, ಸೀನ, ಮೂರ್ತಿ ಮತ್ತು ಕರೀ ಸತೀಶ !
ಶಿಳ್ಳೆ ಶೀಟಿ ಚುಡಾಯಿಸೋ ಕುಚೋದ್ಯದಾಟ
ಕಳ್ಳನೋಟ,ಹಲ್ಲುಕಿರಿತ,ಕೇಳಿದ್ಯಾರು ಮೇಷ್ಟ್ರ ಪಾಠ?

ಬಂದು ಬಳಗ, ತಾಯಿ ತಂದೆ ,ಅಜ್ಜಿ ತಾತರ ಅಕ್ಕರೆ
ಅಣ್ಣ, ತಂಗಿ, ಗೆಳತಿಯರ, ಮಾತು ಬಲುಸಕ್ಕರೆ!
ಸೂಟುಕೇಸು ಹಿಡಿದು ಹೊರಟ್ರೆ, ಬಾಯ್ಗೆ ಬಂತು ಹೃದಯ
ಅನ್ಯರೆದುರು ಗೆದ್ದ ಭಾವ, ಕಣ್ಣಲ್ಲಿ ಮಾತ್ರ ತೇವ!

10 thoughts on “ಜಮುನ ಮಿಸ್ ಮಾಡಿದ್ದೇನು? – ಪ್ರೇಮಲತ ಬಿ. ಅವರ ಕವನ

 1. Bellur Gadadhara
  ಡಾಕ್ಟರ್ ಪ್ರೇಮಲತ ಅವರ ನಾಲ್ಕು ಚುಟಕಗಳು ಮೊಲು ಮುಗುಳುನಗೆ ತರಿಸಿ ನಂತರ ತಲೆಹೊಕ್ಕಿ ಓದುಗರ ಮೆದುಳನ್ನು ಕೆದಕುವುನ್ತಿವೆ.

  ಪ್ರೇಮಲತ ಅವರನ್ನು ದಿನಕರ ದೇಸಾಯಿ , ಡುಂಡಿರಾಜ್ ಅವರ ವರ್ಗಕ್ಕೆ ಸೇರಿಸ ಬಹುದಲ್ಲವೇ

  ಡಾಕ್ಟರ್ ಪ್ರೇಮಲತ ಅವರ ನಾಲ್ಕು ಚುಟಕಗಳು ಮೊಲು ಮುಗುಳುನಗೆ ತರಿಸಿ ನಂತರ ತಲೆಹೊಕ್ಕಿ ಓದುಗರ ಮೆದುಳನ್ನು ಕೆದಕುವುನ್ತಿವೆ.

  ಪ್ರೇಮಲತ ಅವರನ್ನು ದಿನಕರ ದೇಸಾಯಿ , ಡುಂಡಿರಾಜ್ ಅವರ ವರ್ಗಕ್ಕೆ ಸೇರಿಸ ಬಹುದಲ್ಲವೇ

  Like

 2. ರಾಮಶರಣ್ ಅವರು ಎತ್ತಿದ ಪ್ರಶ್ನೆ ಉಚಿತವಾಗಿಯೇ ಇದೆ. ಭಾರತದಿಂದ/ಕನ್ನಡ ನಾಡಿನಿಂದ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನ ವಿಧಾನಗಳನ್ನು ನಮ್ಮ ನರ ನಾಡಿಗಳಲ್ಲಿ ತುಂಬಿಕೊಂಡು ಬಂದ ನಮಗೆ ಇಲ್ಲಿನ ಜೀವನ ಸೌಲಭ್ಯಪೂರ್ಣವಾಗಿದ್ದರೂ ಅಪೂರ್ಣ ಎನಿಸುತ್ತದೆ. ಇಲ್ಲಿಗೆ ಬಂದ ಕಾರಣವಾದರೂ ಮುಖ್ಯವಾಗಿ ಆರ್ಥಿಕ ಸಬಲತೆಗಾಗಿ ಆದ್ದರಿಂದ ನಾವು ನಮ್ಮ ಮನಸ್ಸಿನಲ್ಲಿ ಈ ಹೊಯ್ದಾಟವನ್ನು ನಡೆಸುತ್ತಲೇ ಇರುತ್ತೇವೆ ಎಂದು ನನ್ನ ಅನುಭವ. ಈ ಹೊಯ್ದಾಟದ ಜೊತೆ ಜೊತೆಗೆ ಇಲ್ಲಿನ ಜೀವನದ ಏಕತಾನತೆ ನಮ್ಮನ್ನು ಆಗಾಗ್ಗೆ ಈ ಬರಡು ಎನ್ನುವ ಮನೋಭಾವನೆಗೆ ತಳ್ಳುತ್ತದೇನೋ.
  ಅಡಿಗರ ”ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿವುದೆ ಜೀವನ’ ಮಾತೊಮ್ಮೆ ನೆನಪಾಗುತ್ತಿದೆ!! ಈ ತುಡಿತದಿಂದ ಇಂಥ ಸುಂದರ ಪದ್ಯ ಹುಟ್ಟಿದರೆ ಯಾಕಾಗಬಾರದು?
  ಸುದರ್ಶನ

  Like

 3. ನಾವೆಲ್ಲ ಜಮುನೆಯ ದರ್ಶನ ಪಡೆದವರೇ!
  ಅಲ್ಲಿರಲಿ, ಇಲ್ಲಿರಲಿ, ಜಮುನೆಯರ ಅವಸ್ಥೆ ಈಗ ಎಲ್ಲೆಡೆ ಒಂದೇ
  ಕವನ ತುಂಬಾ ಸೊಗಸಾಗಿದೆ. ನನ್ಙ್ನ
  ನನ್ನ ಕೊರಗೊಂದೇ: ಹೊರ ನಾಡಲ್ಲಿ ನೆಲೆಸಿರುವವರು ಇಲ್ಲಿಯ ಜೀವನ ಬರಡು ಎಂದೇ ಬರೆಯುವುದೇಕೆ?

  Like

 4. Kavana oodide, baree odalilla jooraagi kavana ooduva haage oodide. Nannalli jamunaLannu kandukonde. Giridhara.

  Like

 5. ಪಕ್ಷಿ ನೋಟ: ಇದರಲ್ಲಿ ಜಮುನಳ ಜಂಬದ ಕೋಳಿಯ ಒಯ್ಯಾರವಷ್ಟೇ ಅಲ್ಲ, ನವಿಲಿನ ನರ್ತನ, ಚಾತಕದ ಹಂಬಲು, ಗೂಬೆಯ ವಿವೇಕ, skylarkನ ಉಡ್ಡಾಣ, humming birdನ ಸಮತೋಲನ ಎಲ್ಲ ಇವೆ! ಭೇಷ್!
  ಶ್ರೀವತ್ಸ

  Like

 6. ಅಮ್ಮಮ್ಮ, ಜಮುನಳ ಗತ್ತು, ಗಮ್ಮತ್ತಿಗಿಲ್ಲ ಒಂದು ಮಿತಿ. ಈ ರೀತಿ ಮುಗಿಯಿತೆ ಅದರ ಗತಿ. ಎಷ್ಟು ವರ್ಷಗಳು ಕಳೆದರೂ ಬಾಲ್ಯ ಸವೆಸಿದ ಜಾಗವನ್ನು ಬಿಟ್ಟುಬಂದ ನೋವು ಅರಿಯದಾಯಿತೆ ಮನಸು, ತಿಳಿಯದಾಯಿತೆ ನಿಜಕ್ಕೂ ಅದರ ಪರಿಮಿತಿ. ಬಹಳ ಚೆನ್ನಾಗಿದೆ ನಿಮ್ಮ ಈ ಕವಿತೆ.

  Like

 7. ಈ ಕವನವನ್ನು ಈಗಾಗಲೇ ಒಮ್ಮೆ ಓದಿ ಪ್ರೇಮಲತಾ ಅವರಿಗೆ ನನ್ನ ಪ್ರತಿಕ್ರಿಯೆ ಕಳಿಸಿದ್ದೇನೆ. ಆದರೂ ಮತ್ತೊಮ್ಮೆ ಹೇಳ ಬೇಕೆಂದರೆ ಜಮುನಾಳ ಕಥೆ, ಬಾಲಿವುಡ್ ಪ್ರಪಂಚದ ಅಭಿನೇತ್ರಿ, ಮಾಧುರಿ ದೀಕ್ಷಿತಳನ್ನು ನೆನಪಿಸುತ್ತದೆ. ಆಕೆ ಮದುವೆಯಾಗಿ ಅಮೆರಿಕೆಯಲ್ಲಿದ್ದಾಗ, ಆಕೆಯನ್ನು ಸೂಪರ್ ಮಾರ್ಕೆಟ್ಟಿನಲ್ಲಿ ಕಂಡವರು, (ನಮ್ಮ ದೇಶದ ಜನ) ಸುಮ್ಮನೆ ಹೋಗುತ್ತಿದ್ದರಂತೆ. ಭಾರತದಲ್ಲಿ ಚಿತ್ರ ಪ್ರಪಂಚದಲ್ಲಿದ್ದಾಗ ಆಕೆಗಿದ್ದ ಅನಭಿಶಿಕ್ತ ಸ್ಥಾನ ಅಲ್ಲಿರಲಿಲ್ಲ. ಹಾಗೇಯೇ ಈ ಕವನದ ನಾಯಕಿ ಜಮುನಾಳ ಪರಿಸ್ಥಿತಿಯೂ, ಊರಿನಲ್ಲಿದ್ದಾಗ ಹುಡುಗರ ಗಮನವನ್ನು ನಿರಾಯಾಸವಾಗಿ ಸೆಳೆಯುತ್ತಿದ್ದ ಆಕೆಗೆ, ಪರದೇಶದಲ್ಲಿ ಯಾವ ಅಟೆಂಷನ್ನೂ ಸಿಗದೆ ನಿರಾಶಳಾದದ್ದನ್ನು ಪ್ರೇಮಲತಾ ಸೊಗಸಾಗಿ ತಮ್ಮ ಕವನದಲ್ಲಿ ವಿವರಿಸಿದ್ದಾರೆ. ಭೇಷ್ ಪ್ರೇಮಲತಾ.
  ಉಮಾ ವೆಂಕಟೇಶ್

  Like

 8. ತಲೆದೂಗುವುದು ಬಿಟ್ಟು ಬೇರೆ ಏನು ಬರೆಯಬಹುದು? ಅದ್ಭುತ ಕವನ ಪ್ರೇಮಲತಾ ಅವರೆ. ಒಳ್ಳೆಯ ಲಹರಿ, ಓಟ, ಪ್ರಾಸ, ಹಾಗೂ ಭಾವ. ವಿಡಂಬನೆಯ ಜೊತೆ ಜೊತೆಗೆ ಹೆಣ್ಣಿನ ಹೃದಯದ ತವಕ ತಲ್ಲಣಗಳನ್ನು ಚೆನ್ನಾಗಿ ಬರೆದಿದ್ದೀರಿ. ಪದ್ಯದ ಮೊದಲಿಗೂ ಮತ್ತು ಕೊನೆಗೂ ಇರುವ ಬಂಧವನ್ನು ಕಾಯ್ದುಕೊಂಡಿದ್ದು ನಿಮ್ಮ ಜಾಣ್ಮೆಯನ್ನು ತೋರಿಸುತ್ತದೆ.

  ಒಂದೆರೆಡು ಸಲಹೆ- ಅತಿ ಅವಶ್ಯವಲ್ಲ- ಶೀರ್ಷಿಕೆ ಇನ್ನೂ ಚಿಕ್ಕ ಚೊಕ್ಕ ಹಾಗೂ ಆಕರ್ಷಕವಾಗಬಲ್ಲುದೇ ಯೋಚಿಸಿ. ನನಗೆ ಹೊಳೆದರೆ ನಿಮಗೆ ಬರೆಯುವೆ. ಒಂದೆರೆಡೆ ಕಡೆ ಪ್ರಾಸ ಲಯವಾಗಿದೆ; ಅದನ್ನು ಸುಲಭವಾಗಿ ಸರಿ ಪಡಿಸಬಹುದು. ಇದು ಯಾವುದಾದರು ಚಿತ್ರಗೀತೆಗೂ ಲಾಯಕ್ಖಾಗಿದೆ. ಪ್ರಯತ್ನಿಸುವ.
  ಈ ಪದ್ಯದ ಬರಹದ ಅಚ್ಚನ್ನು ಕಳಿಸಿ. ’ಸಖಿ’ ಗೆ ಕಳಿಸುತ್ತೇನೆ.
  ಇನ್ನೂ ಬರಲಿ ನಿಮ್ಮಿಂದ.
  ಸುದರ್ಶನ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.