ಚಿತ್ರ-ಬರಹ: ದೋಣಿ ಸಾಗಲಿ

’ದೋಣಿ ಸಾಗಲಿ …’ ಮಂದ ಗತಿಯಲ್ಲಿ ಮುಂದೆ ಸಾಗಿದ ದೋಣಿ ಎಬ್ಬಿಸಿದ ತರಂಗಗಳ ಎರಡನೆಯ ಭಾಗ ಇಲ್ಲಿದೆ.

ದೋಣಿ  ಸಾಗಲಿ ,ಮುಂದೆ ಹೋಗಲಿ ,…………

Boat on the lake1)  ನಿನಗ್ಯಾರು ಸಾಟಿ?

ದೂರತೀರದ  ದಟ್ಟ ಕಾಡದು ಹಚ್ಚ ಹಸಿರು

ಈ ತೀರದಿಂದ ನೋಡಲದು ಕಳೆವುದು ಉಸಿರು

ಅತ್ತಲಿಹದೇನು, ನೋಡಬೇಕೆಂಬ ಆತುರ

ನೋಡಿ, ತಿಳಿದು, ಅನುಭವಿಸುವ  ಕಾತುರ

 

ನೆಲ, ಜಲ, ವಾಯುವಿನ ಪರಿಮಿತಿಯ ದಾಟಿ

ಅಡೆತಡೆಗಳ ನೀವಾಳಿಸಿ, ಒಡಲಾಳವ ಮೀಟಿ

ಕುತೂಹಲದ ಆರಂಭ ಕರೆ,ಹೊಸತಿನ ಆಕರ್ಷಣೆ

ಮನುಕುಲದ ಉಳಿವಿನಾದಿ, ಈ ಅನ್ವೇಷಣೆ

 

ಆದಿ – ಅಂತ್ಯವಿಲ್ಲದ ಬಾಳ ಪಯಣವಿದು

ನಿಲ್ಲು ಪಯಣಿಗ, ಹಿಂತಿರುಗಿ ನೋಡು

ಬಾಳ ಧಾವಂತಕೆ ಅಲ್ಪ ವಿರಾಮ ಕೊಟ್ಟು

ಖಾಲಿಯಾಗಿ ಅಣಕಿಸುವುದೆ, ನೀ ಬಿಟ್ಟ ಸೀಟು?

 

ಅವಿರತ  ಪ್ರಯತ್ನದ ಸ್ಪರ್ದೆಯಿದು, ಬಾಳ ದಾರಿ

ಮರೆಯದಿರು ಆನಂದಿಸಲಿವೆ, ನಾನಾ ಪರಿ

ಬಾಳ  ಆಯಾಮಗಳನೆಲ್ಲ ಸಮನಾಗಿ  ತೂಗಿ

ಗೆಲ್ಲಬಲ್ಲೆಯಾದರೆ , ನಿನಗ್ಯಾರು  ಸಾಟಿ?

–    ಪ್ರೇಮಲತಾ ಬಿ.

2) ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರಕೆ

ಮೇಲಿನ ಹಾಡಿನ ಸಾಲುಗಳ ಶೀರ್ಷಿಕೆಯನ್ನು ಹೊತ್ತ ಈ ಛಾಯಾಚಿತ್ರ. ನನ್ನ ಬಾಲ್ಯದ ನೆನಪಿನ ಪುಟಗಳಲ್ಲಿ ಸೇರಿ ಹೋದ ಆ ಹಾಡಿನೊಂದಿಗೆ, ಮೈಸೂರಿನ ಕುಕ್ಕರಹಳ್ಳಿ ಕೆರೆ, ಅದರ ಸುತ್ತಲಿನ ಪ್ರಶಾಂತ ವಾತಾವರಣ, ಸಂಜೆಯ ಹಿತವಾದ ಬಿಸಿಲಿನಲ್ಲಿ ಪರಿಸರ ಮಾಲಿನ್ಯದ ಸೋಂಕೆ ಇಲ್ಲದ ಆ ಸ್ವಚ್ಛ ಆಗಸದಲ್ಲಿ ಹಾರಾಡುತ್ತಿದ್ದ ಬಾನಾಡಿಗಳ ಸಾಲು, ಅಲ್ಲಿನ ಲತಾ ಮಂಟಪದಲ್ಲಿ ಕುಳಿತು, ಸುತ್ತಲಿನ ಅರಿವೇ ಇಲ್ಲದಂತೆ ತಮ್ಮದೇ ಪ್ರಪಂಚದಲ್ಲಿ ಮೈಮರೆತು ಸಲ್ಲಾಪದಲ್ಲಿ ನಿರತರಾಗಿರುತ್ತಿದ್ದ ಪ್ರೇಮಿಗಳ ಜೋಡಿಗಳು, ಇವರೊಂದಿಗೆ, ಜೀವನದ ಸಂಧ್ಯೆಯಲ್ಲಿ, ಸಂಜೆಯ ತಂಪಾದ ಹವೆಯನ್ನು ಸೇವಿಸಲು ಹೊರಟ ಶಾಲು ಹೊದ್ದ ವೃದ್ಧ ಜೋಡಿಗಳೂ, ಮಕ್ಕಳೊಂದಿಗೆ ಸಂಜೆಯ ರಸಾನುಭವವನ್ನು ಪಡೆಯುವ ಆಸೆಯಿಂದ ಹೊರಬಿದ್ದ ತರುಣ ಕುಟುಂಬಗಳು, ಕೆರೆಯ ಎರಡೂ ಬದಿಯಲ್ಲಿ ಗಂಭೀರವಾಗಿ ನಿಂತಿದ್ದ ಮೈಸೂರು ವಿಶ್ವವಿದ್ಯಾಲಯದ ಭವ್ಯವಾದ ಕಟ್ಟಡಗಳು, ಅಲ್ಲೇ ಇರುವ ರೈಲಿನ ಹಳಿಯ ಮೇಲೆ ಓಡುವ ಇಂಜಿನ್ನಿನ ಸೀಟಿಯ ಸದ್ದು, ಹೀಗೆ ಹಲವು ಹತ್ತು ಚಿತ್ರಗಳು ಕಣ್ಮುಂದೆ ಹಾಯುತ್ತದೆ.

ಆ ಸರಸ್ವತಿಪುರಂ ಬಡಾವಣೆಯ ಅಂಚಿನಲ್ಲಿದ್ದ ಈ ಕೆರೆಯ ಹಿನ್ನೆಲೆಯಲ್ಲಿ ಕಂಗೊಳಿಸುವ, ಚಾಮುಂಡಿ ಬೆಟ್ಟದ ಸಾಲು ನನ್ನೂರಿನ ಬೆನ್ನೆಲುಬಿನಂತಿತ್ತು. ಸೂರ್ಯನ ಆಗಮನ ಮತ್ತು ನಿರ್ಗಮನದ ಸಮಯಗಳಲ್ಲಿ, ಮೈಸೂರಿನ ಆಕಾಶವನ್ನು ತನ್ನ ಬೆಳಕಿನ ನೂರು ವರ್ಣಗಳ ಕುಂಚದಲ್ಲಿ ಲೇಪಿಸಿ, ನಮ್ಮ ಕಂಗಳನ್ನು ಸಾರ್ಥಕಗೊಳಿಸುತ್ತಿದ್ದ ಆ ದೃಶ್ಯವನ್ನು ಮರೆಯಲಾಗದು. ಕೆರೆಯಲ್ಲಿದ್ದ ತಾವರೆ, ನೈದಿಲೆಗಳ ಮರೆಯಲ್ಲಿ ಚಿನ್ನಾಟವಾಡುತ್ತಿದ್ದ ಪಕ್ಷಿಗಳ ಸಂಕುಲದ ಚಿಲಿಪಿಲಿ ಗಾನವನ್ನು ಮರೆಯಲು ಸಾಧ್ಯವಿಲ್ಲ. ಕೆರೆಯ ಅಂಚಿನಲ್ಲಿ ಸಮೃದ್ಧವಾಗಿ ಬೆಳೆದಿದ್ದ, ಅಶೋಕ ವೃಕ್ಷಗಳ ಎಲೆಗಳ ಮರೆಯಲ್ಲಿ ಕುಹೂ ಕುಹೂ ಎಂದು ಸುಸ್ವರದಲ್ಲಿ ಹಾಡುತ್ತಿದ್ದ ಕೋಗಿಲೆಯ ಇಂಚರ, ಸಂಜೆಯಾಯಿತೆಂದರೆ ಅಲ್ಲಿದ್ದ ಆಲದ ಮರಕ್ಕೆ ಮರಳಿ ಹಾರಿ ಬರುವ ಗಿಳಿವಿಂಡಿನ ಕಲರವ ಹೀಗೆ ಹಲವು ಮಧುರ ನಾದಗಳನ್ನು ಸವಿದ ನನ್ನ ಮನದ ಕಿವಿಗಳಲ್ಲಿ, ಆ ಇಂಚರವಿನ್ನೂ ಜೀವಂತವಾಗಿದೆಯೋ ಎನ್ನುವ ಭಾವನೆ ಈ ಚಿತ್ರವನ್ನು ನೋಡಿ ಮರುಕಳಿಸಿತು. ಕೆರೆಯ ಅಂಚಿಗೆ ಹತ್ತಿರವಾಗಿದ್ದ ಮನೆಗಳ ಅಂಗಳದಲ್ಲಿ, ಮುಸ್ಸಂಜೆಯ ಸಮಯದಲ್ಲಿ ಅರಳುತ್ತಿದ್ದ ಸಂಪಿಗೆ ಮರದ ಹೂವುಗಳಿಂದ ಹೊಮ್ಮಿ ಮತ್ತೇರಿಸುವಂತಿದ್ದ ಆ ಸುವಾಸನೆ, ಬೆಟ್ಟದ ಬುಡದಲ್ಲಿದ್ದ ವೀಳ್ಳೆಯದೆಲೆ ತೋಟದಲ್ಲಿ ದುಡಿದು ಮನೆಸೇರುವ ಆತುರದಲ್ಲಿ ಕಾಲೆಳೆದು ಕೊಂಡು ಸಾಗುತ್ತಿದ್ದ ಮಹಿಳೆಯರ ಹರಟೆಯ ಸದ್ದು, ಹೀಗೆ ೬೦ರ ದಶಕದ ಮೈಸೂರಿನ ಆ ಸುವರ್ಣಯುಗದ ಚಿತ್ರವೇ ಮನದ ಪರದೆಯ ಮೇಲೆ ಕಂಗೊಳಿಸಿತು. ಚಿತ್ರದಲ್ಲಿರುವ ದೋಣಿಯ ಪಯಣಿಗರಂತೆ, ನಾನೂ ನನ್ನ ನೆನಪಿನ ದೋಣಿಯಲ್ಲಿ ಕುಳಿತು, ಮತ್ತೊಮ್ಮೆ ಬಾಲ್ಯದ ದಿನಗಳ ಆ ಸುಂದರ ತೀರದತ್ತ ತೇಲುವ ಒಂದು ರಸಾನುಭವವನ್ನು ಮತ್ತೊಮ್ಮೆ ಪಡೆಯುವಲ್ಲಿ ಯಶಸ್ವಿಯಾದೆ.

                                                                                                       –   ಉಮಾ ವೆಂಕಟೇಶ್

 

 

 

 

 

 

 

 

 

One thought on “ಚಿತ್ರ-ಬರಹ: ದೋಣಿ ಸಾಗಲಿ

  1. ಕವಿತೆ ಬಹಳ ಚೆನ್ನಾಗಿದೆ. ಆಳವಾದ ಅರ್ಥವನ್ನು ಕಾವ್ಯಮಯವಾಗಿ ವರ್ಣಿಸಿದ್ದೀರ. ಈ ಚಿತ್ರದಲ್ಲಿ ಹುದುಗಿರುವ ಸೌಂದರ್ಯಕ್ಕೆ ಹೊಸ ಅರ್ಥ ಈ ಪ್ರೇಮಲತನ ಕವಿತೆ ತಂದಿದೆ.
    ಇದೇ ಚಿತ್ರ ಉಮಾರವರನ್ನು ಅರೆಕ್ಷಣದಲ್ಲಿ ಬಾಲ್ಯದ ಮನೆಯಂಗಳಕ್ಕೆ ಕರೆದೊಯ್ದಿದೆ. ಅವರ ಈ ಪ್ರಕೃತಿಯ ವರ್ಣನೆ ಓದುಗರನ್ನು ಕಿನ್ನರ ಲೋಕಕ್ಕೆ ಕರೆದೊಯ್ಯುತ್ತದೆ.
    ಈ ಚಿತ್ರ ಕವನದ ಹೊಸ ತರಂಗ, ಇದೇ ರೀತಿಯ ಹೊಸ ಅಲೆಗಳನ್ನು ಮೂಡಿಸುತ್ತಿರಲಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.