ಚಿತ್ರ – ಬರಹ: ಒಸಗೆ

ಲಾಕಾರರಿಗೆ ಸ್ಫೂರ್ತಿ ಬೇಕೆ? ಚಿತ್ರಗಳು ಪಾಶ್ಚಿಮಾತ್ಯ ಸಂಗೀತಗಾರರಿಗೆ ಪ್ರೇರಣೆ ಕೊಟ್ಟ ಉದಾಹರಣೆಗಳೆಷ್ಟೋ. ಮಸ್ಗೋರ್ಸ್ಕಿ, ರಾಕ್ಮಾನಿಕೋವ್, ಬೇಥೋವನ್ ಇವರ ಇಂಥ ಕೃತಿಗಳು ಪ್ರಸಿದ್ಧವಾಗಿವೆ. ಇದೊಂದು ಪ್ರೇಮಲತಾ. ಬಿ ಅವರ ಹೊಸ ಪ್ರಯೋಗ. ನಮ್ಮ ವೇದಿಕೆಯ ಸದಸ್ಯರಿಗೆ  ಒಂದು ಚಿತ್ರವನ್ನು ಕೋಟ್ಟು ಅವರ ಮನದಲ್ಲೆಬ್ಬಿಸಿದ ಭಾವನೆಗಳನ್ನು ಬರಹದಲ್ಲಿ ಮೂಡಿಸಲು ಹೇಳಿದರು. ಪದ್ಯ-ಗದ್ಯ ಯಾವುದೂ ಸರಿ ಎಂದರು. ಅವೆರಡರಲ್ಲಿ ಎರಡನ್ನು ಇಲ್ಲಿಗೆ ಕೊಟ್ಟಿದೆ. ಮುಂದಿನ ‘ತರಂಗ’ದಲ್ಲಿ ಇನ್ನೆರಡು.           Photo: Shrivatsa Desai                                                                         

                ೧)   ಒಸಗೆBoat on the lake

ನೀಲಿ ಆಗಸ, ನೀಲಿ ನೀರು

ಕೈಯಲಿ ಪದ್ಯ, ಪಾನ; ಜೊತೆಗೆ

ಒಲಿದ-ಬೆಸೆದ ಜೀವಗಳು

ತೇಲಿದೆ ಉಮರನ ಸ್ವರ್ಗವೇ ಇಲ್ಲಿ!

 

ವಿಹಾರವೋ ಪಯಣವೋ, ಇದು ಚಂದವೇ ಇಂದು

ವಿಚಾರಾರ್ಹ ಇದೆಲ್ಲ ಶಾಶ್ವತವೇ ಎಂದು

ಅಲ್ಲಿ ಕಾದಿದೆ ನಿಮ್ಮ ಸ್ಥಾನ, ಮೇಲೆ

ಸಲ್ಲಬೇಕು; ಏರಬೇಕು, ಅದೇ ಮುಕ್ತಿ!

ಶ್ರೀವತ್ಸ ದೇಸಾಯಿ

೨) ದೋಣಿ ಸಾಗಲಿ,,,,,,,,,,,,

ಕಣ್ಣು ತುಂಬುವಷ್ಟು ನೀರು, ದೂರದಲ್ಲೊಂದು ದೋಣಿ, ಮತ್ತದೇ ಖಾಲಿ ಬೆಂಚು. ತುಸು ದೂರ ನಿಂತು ನೋಡಿಯೇ ನೋಡಿದೆ. ನನ್ನ ಮನಸ್ಸಿನಷ್ಟೇ ದೂರ ಸಾಗುತ್ತಿರುವ ದೋಣಿ. ತಡೆದು ನಿಲ್ಲಿಸಬಲ್ಲನೆ ಆ ಘಳಿಗೆ? ಎಷ್ಟು ಬಾರಿ ಯೋಚಿಸಿದರೂ ಹೊಳೆಯದ ಉತ್ತರ. ಕೊಳದಲ್ಲಿ ಏರುತ್ತಿವೆ ಕಿರುತೆರೆಗಳು, ಅದ ನೋಡಿ ಮೂಡುತ್ತಿದೆ ಮನದಲ್ಲಿ ನೆನಪಿನ ಅಲೆಗಳು. ಆ ಕಿಲಕಿಲ ನಗು ಮತ್ತೊಮ್ಮೆ ಕೇಳಬೇಕೆನಿಸುವ ಅದಮ್ಯ ಬಯಕೆ. ಎಲ್ಲಿ ಹೋದವು ಆ ಹದಿಹರೆಯದ ದಿನಗಳು. ಗೆಳೆಯರೊಡನೆ ಈ ಬೆಂಚಿನಲ್ಲಿ ಕುಳಿತು ಅಂಗೈಯಲ್ಲೇ ಅರಮನೆ ಕಟ್ಟಿ ಆಳಿದ ಆ ಹುರುಪು. ನಮ್ಮ ಕನಸುಗಳ ಸಾಗರದ ಮುಂದೆ ಈ ಕೊಳ ನಿಕೃಷ್ಟವಾಗಿ ಕಂಡಿತ್ತು. ಹರಕೆಗಳು, ಬಯಕೆಗಳಿಗೆ ವೇಗದ ಮಿತಿಯಿಲ್ಲದೆ ಸಾಕಗಿತ್ತು ಬದುಕು. ಬಹಳ ವರ್ಷಗಳ ನಂತರ ಈ ಕೊಳದ ಬಳಿ ನಿಂತು ಆ ನೆನಪಿನ ದೋಣಿಯಲ್ಲಿ ಸಾಗೋಣವೆಂದು ಬಂದು ನಿಂತಿಹೆನಾದರು ಮನಸ್ಸು ಈ ಕಬ್ಬಿಣದ ಬೆಂಚಿನಷ್ಟೇ ಕಲ್ಲಾಗಿದೆ, ಬರಿದಾಗಿದೆ. ಬದುಕಿನ ದೋಣಿ ಮತ್ತೆ ಈ ತೀರಕ್ಕೆ ಬರುವುದಿಲ್ಲವೆಂದು ಅರಿವಾಗಿದೆ. ಆ ದಿನಗಳ ಮರೆತು, ಈ ದಿನಗಳ ಸವಿ ಸವಿಯೋಣವೆನ್ನುವ ನಿರ್ಧಾರ ಒಂದು ಕಡೆಯಾದರೆ, ಕಳೆದ ದಿನಗಳಲ್ಲಿ ಬದುಕಲಾರದ ನಿರಾಸೆ ಇನ್ನೊಂದೆಡೆ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.” ಅರೆ, ಎಲ್ಲಿಂದ ಕೇಳಿ ಬರುತಿದೆ ಈ ಪರಿಚಿತ ಕಲರವ. ಜೋತೆಜೋತೆಯಾಗಿ ನಡೆದು ಬೆಂಚಿನತ್ತ ಸಾಗುತ್ತಿರುವ ಹರೆಯದ ಗುಂಪು. ತಕ್ಷಣ ಮನಕ್ಕೆ ಅರಿವಾಯಿತು. ಇಲ್ಲಿ ಏಕಾಂತದ ವಿಷಾದವಿಲ್ಲ, ಹೊಸ ಚೈತನ್ಯದ ವಿನೋದ ತುಂಬಿದೆ. ಈ ಕೊಳ, ಸುಂದರವಾದ ಈ ಪ್ರಕೃತಿ, ಹೊಸ ವಿಚಾರಗಳನ್ನು ಕೇಳಲು, ಅವರ ಕನಸುಗಳಲ್ಲಿ ಭಾಗಿಯಾಗಲು ತವಕದಿಂದ ಕಾದಿವೆ. ದೂರ ಸಾಗಿದ ದೋಣಿ ಮತ್ತೆ ಇದೇ ದಡಕ್ಕೆ ಬಂದೆ ಬರುವುದೆನ್ನುವ ಪ್ರಮಾಣವಿಲ್ಲಿದೆ. ಸುತ್ತಲ ಸಂತೋಷ ಮನದಲ್ಲಿ ಹೆಜ್ಜೆ ಇಡತೊಡಗಿರಲು, ಕಾಲುಗಳು ಮನೆಯ ಕಡೆಗೆ ನಡೆಯ ತೊಡಗಿದವು.

                                                                                                  ಡಾ. ದಾಕ್ಷಾಯಣಿ ಗೌಡ

 

 

One thought on “ಚಿತ್ರ – ಬರಹ: ಒಸಗೆ

  1. ಒಂದೇ ಚಿತ್ರಕ್ಕೆ ಎರಡು ವಿಭಿನ್ನ ವಿವರಣೆಗಳು. ಇದೊಂದು ನಿಜಕ್ಕೂ ಆಸಕ್ತಿಪೂರ್ಣವಾದ ಪ್ರಯೋಗ! ನಮ್ಮೆಲ್ಲರ ಮನಗಳೂ ಒಂದೇ ದೃಶ್ಯವನ್ನು ವಿವಿಧ ಕೋನಗಳಲ್ಲಿ ವಿಷ್ಲೇಷಿಸುತ್ತವೆ ಅಲ್ಲವೇ? ಕಣ್ಣುಗಳು ನೋಡುವುದು ಒಂದೇ ಚಿತ್ರವನ್ನಾದರೂ, ಆ ಚಿತ್ರ ನಮ್ಮ ಮನಗಳಲ್ಲಿ ಏಳಿಸುವ ಭಾವನೆಗಳು, ಕಲ್ಪನೆಗಳು ವಿಭಿನ್ನವಾಗಿದೆ. ಒಬ್ಬರು ಜ್ಸೀವನ ಸಂಗಾತಿಯನ್ನು ನೆನೆದರೆ, ಮತ್ತೊಬ್ಬರು ಬಾಲ್ಯದ ಕನಸುಗಳನ್ನು ಮೆಲಕು ಹಾಕುವರು. ಸೊಗಸಾಗಿದೆ ಎರಡೂ ವಿವರಣೆಗಳು.
    ಉಮಾ ವೆಂಕಟೇಶ್

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.