ಸುದರ್ಶನ್ ಹರಟೆ ಕಟ್ಟೆ: ಓಬಿರಾಯನಿಂದ ಓಬಾಮವರೆಗೆ

Village House

ಓಬಿರಾಯನಿಂದ ಓಬಾಮವರೆಗೆ (ಲಘು ಹರಟೆ)

ಏನ್ ಮಾಮ ಯಾವಾಗ್ಬಂದೆ, ಶಾಲೆಯಿಂದ ಬಂದ ಮೂರೂ ಮಕ್ಕಳು ತಮ್ಮ ಪಾಟೀ ಚೀಲವನ್ನು ರೋಂಯ್ಯನೆ ಎಸೆದು ಕಣ್ಣಗಲಿಸಿ, ಮುಖ ಅರಳಿಸಿಕೊಂಡು ಕೇಳಿದವು. ಕುಂಟ್ನಳ್ಳಿಯಿಂದ ಮೊದ್ಲು ಬಂಡೀಲಿ ಆಮೇಲೆ ರೈಲಲ್ಲಿ ಕೂತು ಬೆಂಗ್ಳೂರೆಂಬೋ ಬೆಂಗ್ಳೂರ್ಗೆ ಬಂದಿದ್ದ ವಿಜಿಮಾಮ ತಲೆಯೆತ್ತಿ ತನ್ನ ಅಕ್ಕನ ಮೂರೂ ಮಕ್ಳನ್ನ ನೋಡ್ದ. ಸುಧೀರ, ಸಮೀರ ಮತ್ತೆ ಸುಮಿ ನೋಡಿ ಅವನ್ಗೂ ಖುಶಿ ಆಯ್ತು. ಅವರ ಬಟ್ಟೆಗಳೇನು, ಕಟ್ಟಿದ್ದ ಕುತ್ತಿಗೆ ಕೌಪೀನವೇನು (ಟೈ), ಕಾಲ್ಗೆ ಹಾಕಿದ್ದ ಬೂಟುಗಳೇನು, ತಿದ್ದಿ ತೀಡಿದ್ದ ಕ್ರಾಪೇನು,ಆನಂದ ತುಂದಿಲನಾದ.ಹೆಣ್ಮಗು ಸುಮಿ ಬಾಬ್ಕಟ್ ಮಾಡಿಸ್ಕೊಂಡು ತಲೆ ಮೇಲೆ ಇದ್ದಿದ್ ಕೂದ್ಳಿಗೆ ಅವ್ರಮ್ಮ ರಬ್ಬರ್ ಬ್ಯಾಂಡ್ ಹಾಕಿ ಜುಟ್ಟು ಕಟ್ಟಿದ್ಲು. ಅದು ಪುಟಿಯೋ ಕಾರಂಜಿ ಥರ ತಲೆ ಮೇಲೆ ನಿಂತಿತ್ತು! ಅದನ್ ಕಂಡು ವಿಜಿ ಮಾಮನಿಗೆ ನಗು ತಡ್ಯೋಕಾಗ್ಲಿಲ್ಲ. ನಗುತ್ತಾ, ಏನೇ ಸುಮಿ, ನಿನ್ ತಲೇಲಿರೋ ಬುದ್ಧಿಯೆಲ್ಲಾ ಕಾರಂಜಿ ಥರ ಹೊರಗಡೆಗೆ ಜುಟ್ನಲ್ಲಿ ನುಗ್ತಾ ಇದ್ಯಲ್ಲೇ ಅಂದ. ಅದಕ್ಕೆ ಕರಟಕ ದಮನಕರಂತಿದ್ದ ಅವಳ ಅಣ್ಣಂದಿರು ಅದನ್ನು ಹಿಡಿದೆಳೆದು ತಮಾಷೆ ಮಾಡಿದ್ರು.ಸುಮಿ ಕೊಂಯ್ಯ್ ಅಂತ ರಾಗ ತೆಗೆದ್ಲು. ಏನ್ರೋ ಎಲ್ಲ ಎಷ್ಟೊಂದು ಬೆಳೆದ್ಬಿಟ್ಟಿದೀರಾ ಅಂತ ಕೇಳಿದ್ದಕ್ಕೆ, ವಿಜಿಮಾಮಾ ನಿನ್ ಜುಟ್ಟು ಮಾತ್ರಾ ಬೆಳೀಭೌದು ನಾವ್ ಮಾತ್ರಾ ಬೆಳೀ ಬಾರ್ದಾ ಅಂತ ಅವನ್ ಜುಟ್ಟು ಹಿಡಿದು ಅಲ್ಲಾಡಿಸಿದ್ವು. ಅಷ್ಟ್ರಲ್ಲೆ ವಿಜಯನ ಅಕ್ಕ ಬಂದು ಮಕ್ಕಳನ್ನು ಗದರಿಸಿ ಬಟ್ಟೆ ಬದಲಾಯ್ಸಿ ಹಾಲು ಕುಡಿ ಬರ್ರೋ ಅಂತ ಎಳೆಕೊಂಡು ಹೋದ್ಲು.

ವಿಜಯನ ಅಕ್ಕ ಭಾವ ಮುಂಚೆ ಮೈಸೂರಲ್ಲಿ ಇದ್ರು. ಅಲ್ಲಿಂದ ಎರೆಡು ವರ್ಷದ ಹಿಂದೆ ಅಮೇರಿಕಾಗೆ ಹೋಗಿದ್ರು. ಆಮೇಲೆ ಬಂದು ಬೆಂಗ್ಳೂರನಲ್ಲೇ ಮನೆ ಮಾಡಿ ಅಲ್ಲೇ ಸ್ಕೂಲಿಗೆ ಹಾಕಿದ್ರು.
ಚಿಕ್ಕಂದಿನಲ್ಲೇ ಶಾಲೆ ಬಿಟ್ಟ ವಿಜಯ ಅವನೂರಲ್ಲೇ ಜಮೀನು ನೋಡ್ಕೊಂಡು, ದೇವಸ್ಥಾನದ ಪೂಜೆ ಮಾಡ್ಕೊಂಡು ತಣ್ಣಗೆ ಇದ್ದ್ಬುಟ್ತಿದ್ದ. ಬೆಂಗ್ಳೂರ್ ನೋಡಿ ದಂಗ್ ಹೊಡ್ದೊಗಿದ್ದ!! ಮೂರು ವರ್ಷದಿಂದ ಅಕ್ಕನ ಮಕ್ಕಳನ್ನು ನೋಡೆ ಇರ್ಲಿಲ್ಲ. ಅವು ಬೆಳೆದಿದ್ವು ಆದ್ರೂ ಇವನ್ ಕಣ್ಣಿಗೆ ಇನ್ನು ಚಿಕ್ಕೋರ್ ಥರನೇ ಕಾಣ್ತಿದ್ವು.

ಮಕ್ಕಳು ಹಾಲು ಕುಡಿದು ಬಂದ್ವು. ಅಷ್ಟ್ರಲ್ಲಿ ಆ ಮಕ್ಕಳನ್ನು ಆಟಕ್ಕೆ ಕರ್ಯೋಕೆ ಇನ್ನೊಂದ್ ಕಪಿ ಸೈನ್ಯ ಬಂತು. ಅವ್ರೆಲ್ಲ ಠಸ್ಸ್-ಪುಸ್ಸ್ ಅಂತ ಇಂಗ್ಲೀಷಿನಲ್ಲೇ ಮಾತಾಡ್ಕೊಂಡ್ರು. ಜುಟ್ಟು ಬಿಟ್ಟಿದ್ದ ವಿಜಿ ಮಾಮಾನ ಯಾವ್ದೋ ’ಝೂ’ ಯಿಂದ ಬಂದ ಪ್ರಾಣಿ ಅನ್ನೋಹಂಗೆ ತಿರ್ಗಿ ತಿರ್ಗಿ ನೋಡ್ಕೊಂಡ್ ಹೋದ್ವು.
ಇವ್ನು ಅಕ್ಕನ ಜೊತೆಗೆ ಮಾತಾಡ್ತಾ ಕನ್ನಡ ಪ್ರಭ ಪತ್ರಿಕೆ ಓದ್ತ ಕೂತ. ಏನೇ ಅಕ್ಕ ಮಕ್ಳು ಚೆನ್ನಾಗಿ ಕನ್ನಡ ಮಾತಾಡ್ತವೆ ಇಲ್ದಿದ್ರೆ ನಂಗೆ ಅವರ್ಜೊತೆ ಮಾತಾಡಕ್ಕೆ ಆಗ್ತಿರ್ಲಿಲ್ಲ ನೋಡು ಅಂತ ಮೆಚ್ಚುಗೆ ಸೂಚಿಸಿದ. ಹೂಂ ಅವಕ್ಕೇನು ಮಾತು ಹುರೀತವೆ ಅಂದ್ಲು ಅವರ್ಗಳ ಅಮ್ಮ.
ಆಡಕ್ಕೆ ಹೋಗಿದ್ದ ಮಕ್ಳು ವಾಪಸ್ ಬಂದ್ವು. ಕೈಕಾಲು ತೊಳ್ಕೊಂಡು ದೇವ್ರಿಗೆ ನಮಸ್ಕಾರ ಮಾಡಿದ್ವು. ವಿಜಯನಿಗೆ ಮಕ್ಕಳ ಮೇಲೆ ಅಭಿಮಾನ ಇನ್ನೂ ಜಾಸ್ತಿ ಆಯ್ತು.”ಎಲ್ಲ ಮುಂಚಿನ್ ಥರಾನೆ ಇವೆ. ಅಮೇರಿಕಾಗೆ ಹೋಗಿದ್ರು ಬದ್ಲಾಯ್ಸಿಲ್ಲ ಭಲೆ’ ಅಂದ್ಕೊಂಡ. ಮಕ್ಳಿಗೂ ವಿಜಿಮಾಮ ಅಂದ್ರೆ ಭಾಳಾ ಅಚ್ಚು ಮೆಚ್ಚು.
ಇವನ್ ಹತ್ರ ಬಂದ ಮಕ್ಕಳು ಇವನ್ಮುಂದೆ ಕೂತ್ವು. “ಯಾಕ್ರೋ ಓದೋದ್ ಬರ್ಯೋದ್ ಇಲ್ಲ್ವಾ ” ಅಂದ. ’ಮಾಮಾ ನಾಳೆ ಶನಿವಾರ. ಹಾಲಿಡೇ’ ಅಂದ್ವು ಮಕ್ಕಳು.
“ಯಾಕ್ರೋ ಶನಿವಾರ ಹಾಲಿಡ್ತೀರಾ. ದಿವ್ಸಾ ದೇವ್ರಿಗೆ ಹಾಲಿಡಲ್ವಾ!!??.ಸೋಮವಾರ ಆದ್ರೆ ನಾಗಪ್ಪಂಗೆ ಹಾಲಿಟ್ಟು ಪೂಜೆ ಮಾಡ್ಬೇಕು” ಅಂದ. ಮಕ್ಕಳೆಲ್ಲ ಗೊಳ್ ಅಮ್ತ ನಕ್ವು. ಮಾಮ ಹಾಲಿಡೆ ಅಂದ್ರೆ ಹಾಲಿಡದಲ್ಲ. ರಜಾ ಅಂತ ಅಂದ್ವು. ನಮ್ಮೂರಲ್ಲಿ ಶನಿವಾರನೂ ಶಾಲೆ ಇರುತ್ತಲ್ರೋ ಅಂದಿದ್ದಕ್ಕೆ, ಮಾಮಾ ಇದು ಬೆಂಗ್ಳೂರು ಅದು ನಿಮ್ಮೂರು ಅಂತ ಅಂದ್ವು.
ಆಮೇಲೆ ಸುಮಿ ಮಾಮಾನ್ ತೊಡೆ ಮೇಲೆ ಕೂತ್ಕೊಂಡು ಮಾಮಾ ಒಂದು ಕಥೆ ಹೇಳು ಅಂದ್ಲು. ಸರಿ ಅಂತ ವಿಜಯ ತನ್ಗೆ ಗೊತ್ತಿದ್ದನ್ನ ಹೇಳಕ್ಕೆ ಶುರು ಮಾಡ್ದ.
ಜರ್ಗನ್ ಹಳ್ಳಿ ಅಂತ ಊರ್ನಲ್ಲಿ ಬಸ್ಯಾ ಅಂತ ಒಬ್ಬ ಇದ್ದ. ಅವ್ನಿಗೆ ಬೀರ ಮತ್ತೆ ಚಿಕ್ಕ ಅಂತ ಗೆಳೆಯರಿದ್ರು. ಅವ್ರು ದಿನಾ ಬಂಡಿ ಹೊಡ್ಕೊಂಡು ಅವರ ಹೊಲಕ್ಕೆ ಹೋಗ್ತಾ ಯಿದ್ರು. ಹೆಗಲ್ ಮೇಲೆ ನೇಗ್ಲು ಹಿಡ್ಕೊಂಡ್ ಹೋಗ್ತಿದ್ರು. ಅಲ್ಲಿ ಕೆಲ್ಸ ಮುಗಿದ್ಮೇಲೆ ಚಿನ್ನಿ ದಾಂಡು ಆಡ್ತಿದ್ರು ಆಮೇಲೆ ದೇವ್ರುಗಳ್ನ ,ಹಿರಿಯರನ್ನ ನೆನೆಸ್ಕೊಂಡು, ರೊಟ್ಟಿ ಚಟ್ನಿ….. …. ಅಂತ ಇನ್ನೂ ಹೇಳ್ತಾ ಇದ್ದ. ಅಷ್ಟ್ರಲ್ಲಿ ಗಂಡು ಹುಡುಗ್ರು ಆಕಳ್ಸಿ ಹೊಸ್ಕಾಡಕ್ಕೆ ಶುರು ಮಾಡಿದ್ರು. ಸರಿ ಇವ್ರಿಗ್ಯಾಕೋ ಸರಿ ಹೋಗ್ಲಿಲ್ಲ ಅಂತ ಅನ್ಸಿ “ಯಾಕ್ರೋ ಇಷ್ಟ ಆಗ್ಲಿಲ್ಲ್ವಾ?” ಅಂದ. ಅದಕ್ಕೆ ಮಕ್ಳು, ಅಲ್ಲಾ ಮಾಮಾ, ಯಾವ್ದೋ ಓಬಿರಾಯನ್ ಕಾಲದ್ ಕಥೆ ಹೇಳ್ತೀಯಾ ನೀನು. ಓಬೀರಾಯ ಹೋಗಿ ಈಗ ಬರಾಕ ಓಬಾಮ ಬಂದಿದಾನೆ….. ರಾಗ ಎಳೆದ್ವು. ಅವರು ಬರಾಕ್ ಓಬಾಮ ಅಂದಿದ್ದು ವಿಜಯನ ಕಿವಿಗೆ “ಪರಕೆ ಓಬಮ್ಮ” ಅಂದಹಾಗೆ ಕೇಳಿಸಿತು ” ಲೋ ಅದು ’ಪರಕೆ ಓಬಮ್ಮ ’ ಅಲ್ಲ ಕಣ್ರೋ,,, ಓಬವ್ವ, ಒನಕೆ ಓಬವ್ವ” ಅಮ್ತ ಅವರನ್ನೇ ತಿದ್ದಲು ಹೋದ. ಮಕ್ಳು ಹೋ… ಅಂತ ಕಿರ್ಚಿ ನೆಗಾಡಿದ್ವು. ಪರಕೆ ಓಬವ್ವ ಅಲ್ಲ ಮಾಮಾ, ಓಬಾಮಾ, ಅಮೇರಿಕಾದ ಮುಖ್ಯಸ್ತ ಬರಾಕ್ ಓಬಾಮ ಅಂದ್ವು. ಓಬವ್ವನ್ ಮಾಮ ಓಬಾಮ ಚಿತ್ರದುರ್ಗ ಬಿಟ್ಟು ಅಮೆರಿಕಾಗ್ ಯಾಕ್ ಹೋದ. ವಾಪಸ್ ’ಬರಾಕೆ’ ಅವ್ನಿಗೆ ಇಷ್ಟ ಇಲ್ಲ್ವಾ…. ಸರಿ ನೀವೇ ಹೇಳ್ರೋ ಅದೇನ್ ಓಬಾಮನ್ ಕಾಲದ್ದು… ವಿಜಯ ಸವಾಲೆಸೆದ.


ಸಮೀರ ಹೇಳ್ದ ” ಮಾಮಾ,,, ನಿಮ್ ಜರ್ಗನ್ ಹಳ್ಳಿ ಬಸ್ಯಾನ ”ಜಾರ್ಜ್ ಬುಶ್’ ಮಾಡು, ಅವನ್ ಸ್ನೇಹಿತ ಬೋರನ್ನ ’ಬ್ಲೇರ” ಮಾಡು, ಚಿಕ್ಕ ಅನ್ನೊನ್ ’ಚಿರಾಕ” ಆಗ್ಲಿ. ಅವ್ರೆಲ್ಲಾ ಎತ್ತಿನ್ ಬಂಡೀಲಿ ಹೋಗೋಲ್ಲ; ಬಗ್ಗಿ ಅನ್ನೋ ಮೋಟಾರ್ನಲ್ಲಿ ಹೋಗೋದು ಎಲ್ಗೇ ಅಂತೀಯಾ, ಹೊಲಕ್ಕಲ್ಲ ಗಾಲ್ಫ್ ಕೋರ್ಸ್ ಅಂತ ಮೈದಾನಕ್ಕೆ. ದುಡ್ಯೋದ್ ಗಿಡ್ಯೋದ್ ಎಲ್ಲಾ ಸುಳ್ಳು. ಅವ್ರ ಕೈಲಿ ನೇಗ್ಲು ಪಾಗ್ಲು ಅಂತ ಇರಲ್ಲ ;ಚಿನ್ನಿ ದಾಂಡೂ ಆಡಲ್ಲ. ಗಾಲ್ಫ್ ಆಡೋ ಕಡ್ಡಿ ಇರುತ್ತೆ. ಅದನ್ನ ಎತ್ಕೊಂಡು ಓಡಾಡ್ತಾ ಇರ್ತಾರೆ. ಅಂತ ಅಂದ. ಅದನ್ನ ಕೇಳಿದ್ ವಿಜಯ ಮಧ್ಯೆ ಬಾಯಿ ಹಾಕಿ, ’ಅಲ್ಲಾ,,, ಆಟ ಆಡಕ್ಕೆ ಗಲ್ಫ್ ದೇಶಕ್ಕೇ ಹೋಗ್ಬೇಕಾ?? ಅವ್ರೂರಲ್ಲಿ ಜಾಗ ಇರಲ್ವಾ?? ಅಂತ ವಿಜಯ ಕೇಳ್ದ. ಅಯ್ಯೋ ಮಾಮ, ಗಲ್ಫ್ ದೇಶ ಅಲ್ಲ, ಗಾಲ್ಫ್ ಅಂತ ಆಟ. ಅದನ್ನ ದೋಡ್ಡ ಮೈದಾನದಲ್ಲಿ ಆಡಾದು. ಆ ಆಟದಲ್ಲಿ ಒಂದು ಚೆಂಡಿರುತ್ತೆ. ಅದ್ನ ನಮ್ಮ ಬಚ್ಚಲ್ ಮನೇಲಿ ಟಾಯ್ಲೆಟ್ ಸೀಟ್ ಇದ್ಯಲ್ಲ ಅಂಥದ್ದೇ ಚಿಕ್ಕುದ್ ಪೀಠದ್ ಮೇಲೆ ಕೂಡ್ಸಿ ಗಾಲ್ಫ್ ಆಡೋ ದಾಂಡಿನಿಂದ ಆ ಚೆಂಡಿನ ಕುಂಡಿಗೆ ಬಲವಾಗಿ ಬಾರಿಸ್ತಾರೆ. ಅದು ಯೆಲ್ಲೋ ಹೋಗಿ ಬೀಳುತ್ತೆ. ಅದುನ್ನ ಹುಡ್ಕೊಂಡು ಎಲ್ಲಾ ನಡ್ಕೊಂಡು, ಹೋಗ್ತಾ ,ಯಾರ್ಯಾರ್ ಮನೆ ಹೆಂಗ್ ಹೆಂಗೆ ಹಾಳ್ಮಾಡ್ಬೇಕೂ ಅಂತ ಮಾತಾಡ್ತಾರೆ. ಆ ಕುಂಡೀಗ್ ಗುದ್ದಿಸ್ಕೊಂಡ ಚಂಡು ಇವರ್ಗೆ ಸಿಕ್ಕೊ ಹೊತ್ಗೆ ಇವ್ರುಗಳಿಗೆ ಮನೆ ಹಾಳ್ಮಾಡೋ ಉಪಾಯನೂ ಹೊಳೆದಿರುತ್ತೆ. ಈಗ ಎಲ್ಲಾರೂ ಇಂಥಾ ಆಟನೇ ಆಡೋದು ಅಂತ ಅಂದ್ವು.
ಎಲ್ಲಾ ಮನೆಹಾಳ್ ಕಥೆ ಹೇಳ್ತೀರಲ್ಲೊ. ಅಂತ ವಿಜಯ ಗಾಂಪನಂತೆ ಅವನ ಅಕ್ಕನ ಕಡೆ ನೋಡ್ದ. ಅವಳು, ’ಎಲ್ಲಾ ಆ ಮನೆ ಹಾಳ್ ಟೀವಿ ನೋಡಿ ತಿಳ್ಕೊಂಡಿವೆ’ ಅಂತಂದ್ಲು.
ಸುಮಿ ಪಾಪ ಇನ್ನು ಚಿಕ್ಕವಳು; ಅದುಕ್ಕೆ ಈ ಓಬಾಮ ಕಾಲದ್ ಕಥೆ ತಿಳೀಲಿಲ್ಲ. ಮಾಮ ಒಂದು ಹಾಡ್ ಹೇಳ್ಕೊಡು ಅಂದ್ಲು. ’ ಕನ್ನಡ ನಾಡಿನ ವೀರ ರಮಣಿಯ’ ಹೇಳೋಣ ಅಂತ ಮನಸ್ಸಿಗೆ ಬಂದ್ರೂ, ಈ ಫಟಿಂಗರ ಪರಿಹಾಸಕ್ಕೆ ಬೀಳೋದು ಬ್ಯಾಡಾ ಅಂತ ಸಿಂಪಲ್ಲಗಿರೋ ಮಕ್ಕಳ ಪದ್ಯ ಆರಿಸ್ಕೊಂಡ ವಿಜಯ. ಸರಿ ತಾನು ಎರಡ್ನೇ ತರಗತೀಲಿ ಕಲಿತಿದ್ದ ’ ಒಂದು ಎರಡು ’ ಹಾಡು ಗೊತ್ತೇನಮ್ಮ ಅಂದ. ಅದು ಇಲ್ಲ ಅಂತ ತಲೆ ಆಡಿಸ್ತು. ಸರಿ ಹೇಳಾಣಾ ಅಂತ ಶುರು ಮಾಡಿ
ಒಂದು ಎರಡು ಬಾಳೆಲೆ ಹರಡು
ಮೂರು ನಾಕು ಅನ್ನಾ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕೆ ದಂಟು
ಒಂಭತ್ತು ಹತ್ತು ಎಲೆ ಮುದುರೆತ್ತು
ಊಟದ ಆಟಾ ಮುಗಿದಿತ್ತು. ಇದು ರಾಜರತ್ನಂ ಅವರು ಬರೆದಿರೋದು ಅಂತ…..
ಅಂದು ಆ ಇಬ್ರೂ ಫಟಿಂಗರ ಕಡೆ ನೋಡ್ದ. ಅವು ಬಿದ್ದೂ-ಬಿದ್ದೂ ನಕ್ವು. ಮತ್ತೆ ಓಬಿರಾಯನ್ ಹಾಡೇ ಹೇಳ್ತೀಯಲ್ಲ ಮಾವ ಅಂತ ಹಾಸ್ಯ ಮಾಡಿದ್ವು. ಯಾಕ್ರೋ ಇದು ತುಂಬಾ ಹೆಸ್ರುವಾಸಿ ಹಾಡು ಕಣ್ರೋ ಅಂದ. ಅಯ್ಯೋ ಮಾವ ಈಗ ಹರಡಕ್ಕೆ ಬಾಳೆ ಎಲೆ ಎಲ್ಲಾ ಸಿಗಲ್ಲ. ಎಲ್ಲಾ ಪ್ಲಾಸ್ಟಿಕ್ ತಟ್ಟೇನೆ. ಅದ್ರಲ್ಲಿ ಅನ್ನಾ ಸಾರು ಯಾರೂ ಬಡಿಸೋಲ್ಲ. ಎಲ್ಲ್ರಿಗೂ ಅದ್ನ್ನ ಮಾಡಕ್ಕೂ ಬರಲ್ಲ, ತಿನ್ನಕ್ಕೂ ಬರಲ್ಲ. ಮೈಮೇಲೆಲ್ಲಾ ಕೈಮೇಲೆಲ್ಲಾ ಸೋರಿಸ್ಕೋತಾರೆ. ಸಾರು ಅಂದ್ರೆ ಭಾಳಾ ಬೋರು ಅಂದ್ವು. ಮತ್ತೇನ್ ತಿಂತಾರೆ ಹೊಟ್ಟೇಗೆ ವಿಜಯ ಪ್ರಶ್ನೆ ಮಾಡ್ದ.
ಈಗೆಲ್ಲಾ ಓಬಾಮಾ ದೇಶದ್ ಮೇಕ್ ಡೊನಾಲ್ಡ್ ತಿನ್ನೊದು ಅಂದ್ವು. ಏನ್ರೋ ಮೇಕೆ ಡೋಕೆ ಅಂತೀರಾ. ನಿಮ್ಮಪ್ಪ ಅಮ್ಮ ನಿಮ್ಗೆ ಮೇಕೆ ಮಾಂಸ ಮಡ್ದಿ ತಿನ್ನಿಸ್ಬಿಟ್ರೇನೋ ?ಏನೇ ಅಕ್ಕಾ ಈ ಮಕ್ಳು ಕುಲಾ ಎಲ್ಲಾ ಕೆಡಿಸ್ಬಿಟ್ಟಿದ್ದೀಯಲ್ಲೇ ಅಂದ.ಅದಕ್ಕೆ ಮಕ್ಳು ಇನ್ನೂ ಬಿದ್ದು ಬಿದ್ದು ನಕ್ವು. ಅವರಕ್ಕನೂ ನಕ್ಳು.

McDonald's logo
ವಿಜಯ ಕಣ್ ಕಣ್ ಬಿಟ್ಕೊಂಡು ನೋಡ್ತಿದ್ದಾಗ ಮಕ್ಳು ಮಕ್ ಡೊನಾಲ್ಡ್ ಚಿನ್ಹೆ ತೋರ್ಸಿ ಇದೇ ಮ್ಯಕ್ ಡೊನಾಲ್ಡ್ ಅನ್ನೋ ಅಂಗಡಿ ಅಂದ್ವು. ಇದೇನ್ರೋ ಬರೀ ಲ ಅಕ್ಷರದ್ (ಲ್ಲ) ಒತ್ತಕ್ಷರ ಮಾತ್ರ ಇದೆ. ಮುಖ್ಯ ಅಕ್ಷರನೇ ಇಲ್ಲಾ ಅಂದ. ಹೇ ಮಾಮ, ಇದು ಇಂಗ್ಲೀಷಿನ ’ಎಂ’ ಅನ್ನೋ ಅಕ್ಷರ. ಈಗೆಲ್ಲಾ ಜನ ಇಲ್ಲೇ ತಿನ್ನೋದ್ರಿಂದ ಇದ್ರ ಹಾಡೇ ಎಲ್ಲಾ ಹೇಳೋದು ಅಂತ ಅಂದ್ವು.
ಸರಿ ಓಬಾಮಾ ಕಾಲದ್ ಹಾಡು ನೀವೇ ಹೇಳ್ರಪ್ಪ ಕೇಳಾಣ ಅಂದ. ಶುರು ಮಾಡಿದ್ವು.
ಒಂದು ಎರಡು ಮ್ಯಾಕ್ ಡೊನಾಲ್ಡ್ ಗೆ ಹೊರಡು
ಮೂರು ನಾಕು ಕೋಕು, ಮಿಲ್ಕ್ ಶೇಕು
ಐದು ಆರು ಚೀಸ್ ಬರ್ಗರ್ರು
ಏಳು ಎಂಟು ಫ಼್ರೆಂಚ್ ಫ಼್ರೈಸ್ ಉಂಟು
ಒಂಭತ್ತು ಹತ್ತು ಹೊಟ್ಟೆ ತುಂಬ್ತು
ಕುತ್ಗೇ ತಂಕ ತಿಂದಾಯ್ತು
ಢರ್ರನೆ ತೇಗು ಬಂದ್ಹೋಯ್ತು.
ಅಂತ ಹೇಳಿದ್ವು. ಯಾಕೇ… ಎಲೆ ಮುದುರಿ ಎತ್ತಲ್ವಾ ಅಂದಿದ್ದಕ್ಕೆ, ಮಕ್ಳು ನಕ್ಕು ಅಲ್ಲಾ ಮಾಮಾ ಅಷ್ಟೆಲ್ಲಾ ತಿಂದ್ ಮೇಲೆ ಅಲ್ಲಾಡೋದಿರ್ಲಿ, ಉಸಿರೆಳೇಯಕ್ಕೇ ಸಾಹಸ ಮಾಡ್ಬೇಕು. ಎಲೇ ಮುದ್ರೋದೆಲ್ಲಿಂದ ಬಂತು. ಯಾರಾದ್ರೂ ಬಂದು ಎಲ್ಲಾ ಎತ್ಕೊಂಡ್ ಹೋಗ್ತಾರೆ ಅಂದ್ವು. ಯಾರ್ನಾ??? ತಟ್ಟೇನಾ ಇಲ್ಲಾ ತಿಂದೋರ್ನಾ? ಅಂತ ಕೇಳಿದ್ ವಿಜಯ ಸುಸ್ತೋ ಸುಸ್ತು. ಅಷ್ಟ್ ಹೊತ್ಗೆ ಆ ಮಕ್ಕಳ ಅಪ್ಪ ಬಂದ್ರು. ಏನ್ ಭಾವಾ ಚನ್ನಾಗಿದ್ದೀರಾ ಅಂತ ವಿಜಯ ಕೇಳೋದ್ರೊಳ್ಗೆ ಮಕ್ಳು ಬೆಕ್ಕಿನ್ ಕಂಡ್ ಇಲೀ ಥರ ಬಿಲದಲ್ಲಿ ಸೇರ್ಕೊಳ್ಳಕ್ಕೆ ಓಡ್ಹೋದ್ವು.

ಸುದರ್ಶನ ಗುರುರಾಜರಾವ್.

Pictures: courtesy Google images.

 

5 thoughts on “ಸುದರ್ಶನ್ ಹರಟೆ ಕಟ್ಟೆ: ಓಬಿರಾಯನಿಂದ ಓಬಾಮವರೆಗೆ

 1. ಸುದರ್ಶನರವರೆ, ಹಾಸ್ಯಮಯವಾದ ಲೇಖನ. ” ಬೋರೆಗೌಡ ಬೆಂಗಳೊರಿಗೆ ಬಂದ ” ಅನ್ನುವ ಕಥೆ ನೆನಪಾಯಿತು. ವಿಜಿಮಾಮಗಳು ನಮ್ಮ ಹಳ್ಳಿಗಳಲ್ಲಿ ಈಗಲೂ ಇದ್ದಾರೆಯೇ ಅಂತ ನನೆಗೆ ಅನುಮಾನ. ನಿಮ್ಮ macdonald’s ಕವನ ಮತ್ತು ಲೇಖನದ ಭಾಷೆ ಬಹಳ ಚೆನ್ನಾಗಿದೆ.
  ದಾಕ್ಷಾಯಣಿ

  Like

 2. ಅಲ್ಲರೀ, ಸುದರ್ಶನ ಅವರೇ, ಒಂದಲ್ಲ ಎರಡಲ್ಲ, ಲೆಕ್ಕವಿಲ್ಲದಷ್ಟು ಸಲ M ನಲ್ಲಿ ಬರ್ಗರ ಅಲ್ಲ, ಹುಲ್ಲು (veg food ) ತಿಂದಿದ್ದರೂ ಲ ದ ಒತ್ತಕ್ಷರಕ್ಕೂ ಮಾಕ್ಡೋನಾಲ್ಡ್ ಗೂ ಇರುವ ಹೋಲಿಕೆ ನೋಡದವನು ನಾನುನಿಮ್ಮ ಲಘು ಹರಟೆಯಲ್ಲಿಯ ಹಳೆಯ ತರಹದ ಶೈಲಿಯಲ್ಲಿ ವಸ್ತುವಿನ ನಾವೀನ್ಯ, ಸೋದರಮಾವ-ಅಳಿಯಂದಿರ ಮುಗ್ಢ ಸಂಬಂಧ, ಸವಿಯಾದ ಸಂವಾದ ಇವೆಲ್ಲವನ್ನು ಕಂಡು ಸವಿದೆ. ಜುಟ್ಟಿನ ವಿಜಯರು ಇನ್ನು ಕಡಿಮೆಯಾಗಿ ಕಾಣಿಸಿಯಾರು. ಠಸ್-ಪುಸ್ ಮಾತಾಡುವ ಜೆಟ್-ಸೆಟ್ ಯುಗದ ಅಳಿಯಂದಿರ ಸಂಖ್ಯೆಯೇನೋ ಹೆಚ್ಚುತ್ತಲಿರುತ್ತದೆಯೇನೋ. ನಿಮ್ಮ ಬಹುಮುಖ ಪ್ರತಿಭೆಗೊಂದು ಸಾಕ್ಷಿ. (ಸಾಕಷ್ಟು ಲ ದ ಒತ್ತಕ್ಷರಸೇರಿಸಿಯಾಯ್ತು! )

  Like

 3. ನಿಮ್ಮ ಲೇಖನ ಓದಿದ ಮೇಲೆ, ನನ್ನ ಮಗಳ ತಲೆ ಮೇಲಿರೋ ಜುಟ್ಟು ಯಾಕೋ ಪುಟಿವ ಕಾರಂಜಿ ಥರಾನೆ ಕಾಣಿಸಕ್ಕೆ ಹತ್ತಿದೆ!!!
  ನಿಮ್ಮ ಲೇಖನದಲ್ಲಿ ಪದೇ ಪದೇ ಬರೋ ವಿಜಯ ಯಾರೋ ಗೊತ್ತಿಲ್ಲ. ಆದ್ರೆ ಭಲೇ ಮೋಜು ಬಂತು ಬಿಡಿ.
  ಹೀಗೆ ಉಕ್ಕಿ ಹರಿಯಲಿ ನಿಮ್ಮ ಬರಹದ ಬುಗ್ಗೆ.

  Like

 4. ಸುದರ್ಶನ್ ಅವರೆ, ನಿಮ್ಮ ಲಘು ಹರಟೆ ಚೆನ್ನಾಗಿದೆ. ಬಹಳ ಖುಷಿ ಆಯ್ತು. ಬೆಂಗಳೂರಿನ ಮಕ್ಕಳು ಹಳ್ಳಿಯ ವಿಜಿ ಮಾಮನ್ನ ಬೇಸ್ತು ಬೀಳಿಸಿದ ರೀತಿಯನ್ನು ಕನ್ನಡದ ರೈಮ್ಯ್ ಜೊತೆ ಸೇರಿಸಿ ಸೊಗಸಾಗಿ ವರ್ಣಿಸಿದ್ದೀರಿ. ಇಂದಿನ ಮಕ್ಕಳ ಸಾಮಾನ್ಯ ಘ್ಯಾನ ನಿಜಕ್ಕೂ ಪ್ರಶಂಸನೀಯ!

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.