ಸುದರ್ಶನ್ ಹರಟೆ ಕಟ್ಟೆ: ಓಬಿರಾಯನಿಂದ ಓಬಾಮವರೆಗೆ

Village House

ಓಬಿರಾಯನಿಂದ ಓಬಾಮವರೆಗೆ (ಲಘು ಹರಟೆ)

ಏನ್ ಮಾಮ ಯಾವಾಗ್ಬಂದೆ, ಶಾಲೆಯಿಂದ ಬಂದ ಮೂರೂ ಮಕ್ಕಳು ತಮ್ಮ ಪಾಟೀ ಚೀಲವನ್ನು ರೋಂಯ್ಯನೆ ಎಸೆದು ಕಣ್ಣಗಲಿಸಿ, ಮುಖ ಅರಳಿಸಿಕೊಂಡು ಕೇಳಿದವು. ಕುಂಟ್ನಳ್ಳಿಯಿಂದ ಮೊದ್ಲು ಬಂಡೀಲಿ ಆಮೇಲೆ ರೈಲಲ್ಲಿ ಕೂತು ಬೆಂಗ್ಳೂರೆಂಬೋ ಬೆಂಗ್ಳೂರ್ಗೆ ಬಂದಿದ್ದ ವಿಜಿಮಾಮ ತಲೆಯೆತ್ತಿ ತನ್ನ ಅಕ್ಕನ ಮೂರೂ ಮಕ್ಳನ್ನ ನೋಡ್ದ. ಸುಧೀರ, ಸಮೀರ ಮತ್ತೆ ಸುಮಿ ನೋಡಿ ಅವನ್ಗೂ ಖುಶಿ ಆಯ್ತು. ಅವರ ಬಟ್ಟೆಗಳೇನು, ಕಟ್ಟಿದ್ದ ಕುತ್ತಿಗೆ ಕೌಪೀನವೇನು (ಟೈ), ಕಾಲ್ಗೆ ಹಾಕಿದ್ದ ಬೂಟುಗಳೇನು, ತಿದ್ದಿ ತೀಡಿದ್ದ ಕ್ರಾಪೇನು,ಆನಂದ ತುಂದಿಲನಾದ.ಹೆಣ್ಮಗು ಸುಮಿ ಬಾಬ್ಕಟ್ ಮಾಡಿಸ್ಕೊಂಡು ತಲೆ ಮೇಲೆ ಇದ್ದಿದ್ ಕೂದ್ಳಿಗೆ ಅವ್ರಮ್ಮ ರಬ್ಬರ್ ಬ್ಯಾಂಡ್ ಹಾಕಿ ಜುಟ್ಟು ಕಟ್ಟಿದ್ಲು. ಅದು ಪುಟಿಯೋ ಕಾರಂಜಿ ಥರ ತಲೆ ಮೇಲೆ ನಿಂತಿತ್ತು! ಅದನ್ ಕಂಡು ವಿಜಿ ಮಾಮನಿಗೆ ನಗು ತಡ್ಯೋಕಾಗ್ಲಿಲ್ಲ. ನಗುತ್ತಾ, ಏನೇ ಸುಮಿ, ನಿನ್ ತಲೇಲಿರೋ ಬುದ್ಧಿಯೆಲ್ಲಾ ಕಾರಂಜಿ ಥರ ಹೊರಗಡೆಗೆ ಜುಟ್ನಲ್ಲಿ ನುಗ್ತಾ ಇದ್ಯಲ್ಲೇ ಅಂದ. ಅದಕ್ಕೆ ಕರಟಕ ದಮನಕರಂತಿದ್ದ ಅವಳ ಅಣ್ಣಂದಿರು ಅದನ್ನು ಹಿಡಿದೆಳೆದು ತಮಾಷೆ ಮಾಡಿದ್ರು.ಸುಮಿ ಕೊಂಯ್ಯ್ ಅಂತ ರಾಗ ತೆಗೆದ್ಲು. ಏನ್ರೋ ಎಲ್ಲ ಎಷ್ಟೊಂದು ಬೆಳೆದ್ಬಿಟ್ಟಿದೀರಾ ಅಂತ ಕೇಳಿದ್ದಕ್ಕೆ, ವಿಜಿಮಾಮಾ ನಿನ್ ಜುಟ್ಟು ಮಾತ್ರಾ ಬೆಳೀಭೌದು ನಾವ್ ಮಾತ್ರಾ ಬೆಳೀ ಬಾರ್ದಾ ಅಂತ ಅವನ್ ಜುಟ್ಟು ಹಿಡಿದು ಅಲ್ಲಾಡಿಸಿದ್ವು. ಅಷ್ಟ್ರಲ್ಲೆ ವಿಜಯನ ಅಕ್ಕ ಬಂದು ಮಕ್ಕಳನ್ನು ಗದರಿಸಿ ಬಟ್ಟೆ ಬದಲಾಯ್ಸಿ ಹಾಲು ಕುಡಿ ಬರ್ರೋ ಅಂತ ಎಳೆಕೊಂಡು ಹೋದ್ಲು.

ವಿಜಯನ ಅಕ್ಕ ಭಾವ ಮುಂಚೆ ಮೈಸೂರಲ್ಲಿ ಇದ್ರು. ಅಲ್ಲಿಂದ ಎರೆಡು ವರ್ಷದ ಹಿಂದೆ ಅಮೇರಿಕಾಗೆ ಹೋಗಿದ್ರು. ಆಮೇಲೆ ಬಂದು ಬೆಂಗ್ಳೂರನಲ್ಲೇ ಮನೆ ಮಾಡಿ ಅಲ್ಲೇ ಸ್ಕೂಲಿಗೆ ಹಾಕಿದ್ರು.
ಚಿಕ್ಕಂದಿನಲ್ಲೇ ಶಾಲೆ ಬಿಟ್ಟ ವಿಜಯ ಅವನೂರಲ್ಲೇ ಜಮೀನು ನೋಡ್ಕೊಂಡು, ದೇವಸ್ಥಾನದ ಪೂಜೆ ಮಾಡ್ಕೊಂಡು ತಣ್ಣಗೆ ಇದ್ದ್ಬುಟ್ತಿದ್ದ. ಬೆಂಗ್ಳೂರ್ ನೋಡಿ ದಂಗ್ ಹೊಡ್ದೊಗಿದ್ದ!! ಮೂರು ವರ್ಷದಿಂದ ಅಕ್ಕನ ಮಕ್ಕಳನ್ನು ನೋಡೆ ಇರ್ಲಿಲ್ಲ. ಅವು ಬೆಳೆದಿದ್ವು ಆದ್ರೂ ಇವನ್ ಕಣ್ಣಿಗೆ ಇನ್ನು ಚಿಕ್ಕೋರ್ ಥರನೇ ಕಾಣ್ತಿದ್ವು.

ಮಕ್ಕಳು ಹಾಲು ಕುಡಿದು ಬಂದ್ವು. ಅಷ್ಟ್ರಲ್ಲಿ ಆ ಮಕ್ಕಳನ್ನು ಆಟಕ್ಕೆ ಕರ್ಯೋಕೆ ಇನ್ನೊಂದ್ ಕಪಿ ಸೈನ್ಯ ಬಂತು. ಅವ್ರೆಲ್ಲ ಠಸ್ಸ್-ಪುಸ್ಸ್ ಅಂತ ಇಂಗ್ಲೀಷಿನಲ್ಲೇ ಮಾತಾಡ್ಕೊಂಡ್ರು. ಜುಟ್ಟು ಬಿಟ್ಟಿದ್ದ ವಿಜಿ ಮಾಮಾನ ಯಾವ್ದೋ ’ಝೂ’ ಯಿಂದ ಬಂದ ಪ್ರಾಣಿ ಅನ್ನೋಹಂಗೆ ತಿರ್ಗಿ ತಿರ್ಗಿ ನೋಡ್ಕೊಂಡ್ ಹೋದ್ವು.
ಇವ್ನು ಅಕ್ಕನ ಜೊತೆಗೆ ಮಾತಾಡ್ತಾ ಕನ್ನಡ ಪ್ರಭ ಪತ್ರಿಕೆ ಓದ್ತ ಕೂತ. ಏನೇ ಅಕ್ಕ ಮಕ್ಳು ಚೆನ್ನಾಗಿ ಕನ್ನಡ ಮಾತಾಡ್ತವೆ ಇಲ್ದಿದ್ರೆ ನಂಗೆ ಅವರ್ಜೊತೆ ಮಾತಾಡಕ್ಕೆ ಆಗ್ತಿರ್ಲಿಲ್ಲ ನೋಡು ಅಂತ ಮೆಚ್ಚುಗೆ ಸೂಚಿಸಿದ. ಹೂಂ ಅವಕ್ಕೇನು ಮಾತು ಹುರೀತವೆ ಅಂದ್ಲು ಅವರ್ಗಳ ಅಮ್ಮ.
ಆಡಕ್ಕೆ ಹೋಗಿದ್ದ ಮಕ್ಳು ವಾಪಸ್ ಬಂದ್ವು. ಕೈಕಾಲು ತೊಳ್ಕೊಂಡು ದೇವ್ರಿಗೆ ನಮಸ್ಕಾರ ಮಾಡಿದ್ವು. ವಿಜಯನಿಗೆ ಮಕ್ಕಳ ಮೇಲೆ ಅಭಿಮಾನ ಇನ್ನೂ ಜಾಸ್ತಿ ಆಯ್ತು.”ಎಲ್ಲ ಮುಂಚಿನ್ ಥರಾನೆ ಇವೆ. ಅಮೇರಿಕಾಗೆ ಹೋಗಿದ್ರು ಬದ್ಲಾಯ್ಸಿಲ್ಲ ಭಲೆ’ ಅಂದ್ಕೊಂಡ. ಮಕ್ಳಿಗೂ ವಿಜಿಮಾಮ ಅಂದ್ರೆ ಭಾಳಾ ಅಚ್ಚು ಮೆಚ್ಚು.Read More »