ಚಿತ್ರ-ಬರಹ: ‘ಸೂರ್ಯಾಸ್ತ’ – ಪ್ರೇಮಲತ ಬಿ. ಅವರ ಕವನ

            ಸೂರ್ಯಾಸ್ತ

Image

Phot: © Shrivatsa Desai

ಪಡುವಣ  ಬಾನಲಿ  ಮೂಡಿದೆ ನಸುಗೆಂಪು

ಧರೆಯಂಗಳಕಿದೊ ದುಮ್ಮಿ ಕ್ಕಿದೆ ಇರುಳ ಕಪ್ಪು

ಆವರಿಸಿದೆ ಆಗಸಕೆ ಕೌತುಕಗಳ ಬೆಡಗು

ಮುಸುಕಿದ ಮಸುಕಿನಲು ಕಾಡು ಸೊಬಗು

ಬಲೆಯೊಡ್ಡಿದೆ, ಕರೆನೀಡಿದೆ, ಬನ್ನಿರೋ ಬೇಗ

ಕಾದೊಡಲಿನ ಕಾತುರಕೆ  ಉಣಿಸಿರೆ, ಎಲೆ ಮೇಘ

ಹೆಪ್ಪಿಟ್ಟಿಹ ಕತ್ತಲಲಿ ಸೆಲೆಯೊಡೆಯಲಿ ಜೀವ

ಬರಡು ರೆಂಬೆ  ಕೊಂಬೆಯಲಿ ಹರಡಲಿ  ಕೊರಳ ರವ

 

ಕಪ್ಪಿನಲ್ಲಿ  ಅಚ್ಚಾಗಿಹ  ಹಚ್ಚ ಹಸಿರು

ಒಣಮೈಯ  ಕಾಷ್ಟದಲು ಬಸಿರಾಗಲು ಬಿಸಿಯುಸಿರು

ಅಸ್ತಮದ ಕಣ್ಣಂಚಿನಲಿ ಒಪ್ಪಿಗೆಯ  ಶುಭ

ಬೆಳಗಾಗುವ ಮುನ್ನ, ಹೊಸತಾಗಲು ಭವ!

 

ಕರೆಯುಲಿಯ ಬಟ್ಟಲ ಮೇಲ್ಚಾಚಿ ನೀಡಿ

ಮುಳುಗುತಿಹ ಸೂರ್ಯನಿಗೆ ವಿದಾಯ ಹಾಡಿ

ಧರೆಯಾಗಿ ತಟಸ್ಥ ಚಿತ್ರ, ಕೋಡಿ

ಹರಿಸಿದೆ ನಸುಗೆಂಪು, ಬಾನ ವೈಚಿತ್ರ್ಯ !

 

ಸಂಜೆಗೆಂಪು  ತುಂಬಲು ಬಾನೊಡಲು

ಅಸ್ತಮಿಪ ರವಿಗೆ ಕಾಡು, ನಾಡಾದರೇನು

ಮೂಡಿದರು ಇರುಳು, ರವಿ  ಕಾಣದ್ದೇನು?

ಕಣ್ತೆರೆದಿದ್ದರು, ದಿಗಂತದಲಿ  ಮರೆಯಾಗುವನವನು!

ಪ್ರೇಮಲತ  ಬಿ.

5 thoughts on “ಚಿತ್ರ-ಬರಹ: ‘ಸೂರ್ಯಾಸ್ತ’ – ಪ್ರೇಮಲತ ಬಿ. ಅವರ ಕವನ

  1. ‘ ಹೆಪ್ಪಿಟಿಹ ಕತ್ತಲೆಯಲಿ ಸೆಳೆಯೊಡೆಯಲಿ ಜೀವ ‘ ಸೂರ್ಯಾಸ್ತ ಕೆ ಜೀವ ತಂದಿದೆ ಈ ಕವನ. ಸೊಗಸಾದ ಬರವಣಿಗೆ

    ದಾಕ್ಷಾಯಣಿ

    Like

  2. ಪ್ರೇಮಲತಾ ಕಡೆಯ ಎರಡು ಸಾಲುಗಳು ನನಗೆ ಹಿದಿಸಿದವು. ನಮಗೆ ಸೂರ್ಯ ಅಸ್ತಂಗತನಾದರೇನು? ಅವನ ಕಣ್ಣಿಂದ ಈ ಸೌರವ್ಯೂಹದಲ್ಲಿ ನಡೆಯುವ ವಿದ್ಯಮಾನಗಳು ತಪ್ಪಿಸಿಕೊಳ್ಳವು ಅಲ್ಲವೇ? ನಿಮ್ಮ ಕವನದಲ್ಲಿ ಸೂರ್ಯಾಸ್ತದ ವರ್ಣನೆ ಸುಂದರವಾಗಿ ಮೂಡಿ ಬಂದಿದೆ.
    ಉಮಾ

    Like

  3. ಬಹಳ ಸುಂದರ ನಿರೂಪಣೆ.
    ಪ್ರಬುದ್ಧ ಪದ ಸಂಯೋಜನೆ ಹಾಗೂ ಮನಸ್ಸನ್ನು ಸಂಜೆಗತ್ತಲಂತೆ ಆವರಿಸಿ , ವಿಶಾದ, ಸಂತೋಷ, ನಿರೀಕ್ಷೆ ಮುಂತಾದ ನಾನಾ ವಿಧದ ಭಾವತೀವ್ರತೆಗಳಿಂದ ತುಂಬಿದ ಕವನ. ಬಹಳ ಇಷ್ಟವಾಯಿತು.
    ಪ್ರಾಸಬಧ್ಹವಾಗಿಯೂ ಇದೆ. ಇದನ್ನು ಬರೆಯುವಲ್ಲಿ ಯಾವುದಾದರೂ ಶೃತಿ ಹಿಡಿದಿದ್ದಿದರೆ, ಹಾಡಬಹುದು ಕೂಡಾ.

    sudarshana

    Like

  4. ಈ ಪದ್ಯ, ರಾಷ್ಟ್ರಕವಿ ಜಿ ಎಸ್ ಎಸ್ ಅವರಿಗೆ ಸ್ಪೂರ್ತಿಕೊಟ್ಟ ಥಾಮಸ್‍ ಗ್ರೇ ಬರೆದ ‘An Eligy written in a country church yard’ ಎಂಬ ಪದ್ಯವನ್ನು ಜ್ಞಾಪಕಕ್ಕೆ ತರುತ್ತದೆ. ಅದು ಹೀಗಿದೆ:

    The curfew tolls the knell of parting day,
    The lowing herd wind slowly o’er the lea,
    The ploughman homeward plods his weary way,
    And leaves the world to darkness and to me.

    Now fades the glimmering landscape on the sight,
    And all the air a solemn stillness holds,
    Save where the beetle wheels his droning flight,
    And drowsy tinklings lull the distant folds; …………..

    ಈ ಪದ್ಯವನ್ನು ಪೂರ್ತಿಯಾಗಿ ನೋಡಲು ಈ ಕೊಂಡಿಯನ್ನು ಕ್ಲಿಕ್ಕಿಸಿ:
    http://www.thomasgray.org/cgi-bin/display.cgi?text=elcc

    Like

  5. ಪ್ರೇಮಲತ ಅವರೆ,
    ಅಸ್ತಮಿಸುವ ಸೂರ್ಯ ಪ್ರತಿದಿನ ಜಗತ್ತಿನಲ್ಲಿ ಒಂದಿಲ್ಲೊಂದು ಕಡೆ ಆಗಸದ ಕ್ಯಾನ್ವಸ್ಸಿನ ಮೇಲೆ ತನ್ನ ವರ್ಣವಿನ್ಯಾಸ ತೋರಿಸಿದರೆ, ನೀವು ಅದಕ್ಕೆ ಸರಿಸಾಟಿಯಾಗಿ ವರ್ಣಿಸಿದ್ದೀರಿ (ನನಗೆ ಗೊತ್ತು, ಚಿತ್ರ ನೋಡುವ ಮೊದಲೇ!). ಜೊತೆಗೆ ಹಸಿರಾಗಿ ಬಸಿರಾಗಲು ಹಂಬಲಿಸುವ ಒಣ ಕಾಷ್ಟದ ಕೊರಳರವಕ್ಕೆ ಒಲಿದು, ಕಣ್ಣಂಚಿನಲ್ಲೆ ಒಪ್ಪಿಗೆಯ ಕೊಟ್ಟ ಸೂರ್ಯ, ಈ ಸುಂದರ ನಾಟಕವನ್ನೂ ಕಂಡಿದ್ದೀರಿ. ಈ ಕವಿಯತ್ರಿ ಕಂಡದ್ದನ್ನು ಆ ರವಿ ಕಂಡನೋ ಗೊತ್ತಿಲ್ಲ! ಬಹಳ ಚೆನ್ನಾಗಿದೆ ನಿಮ್ಮ ಕವನ.
    ಮಿಕ್ಕ ಕವಿಗಳಿಗೂ ಮುಂಬರುವ ಚಿತ್ರಗಳು ಇಂಥದೇ ಸ್ಫೂರ್ತಿ ಹುಟ್ಟಿಸಲಿ.
    ಶ್ರೀವತ್ಸ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.