ಮಕರ ಸಂಕ್ರಾಂತಿ – ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಇದು ಮಕರ ಸಂಕ್ರಮಣವೆಂದೂ , ದೇವತೆಗಳಿಗೆ ಬೆಳಗು ಆರಂಭವಾಗುವುದರಿಂದ ಉತ್ತರಾಯಣ ಪುಣ್ಯಕಾಲವೆಂದೂ ಪ್ರಸಿದ್ದವಾದ ಈ ದಿನದಂದು, ಗಂಗೆಯ ಪೂಜೆ ಮಾಡಿ, ಪಿತೃಗಳಿಗೆ ತರ್ಪಣ ಬಿಟ್ಟು, ಎಳ್ಳು ಬೆಲ್ಲ ದಾನ ಮಾಡಿ, ಸಿಹಿ ಮತ್ತು ಖಾರದ ಪೊಂಗಲ್ ಸೇವಿಸಿ ಹಬ್ಬ ಆಚರಿಸುವುದು ಪ್ರತೀತಿ.

ನಮ್ಮ ಹಬ್ಬಗಳ ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇರತ್ತೆ. ಹಾಗಾಗಿ ನಾನು ಅದರ ವಿಷಯವಾಗಿ ಬರೆಯುವುದನ್ನು ಬಿಟ್ಟು ನಾನು ನನ್ನ ಬಾಲ್ಯದಲ್ಲಿ ಹೇಗೆ ಆಚರಿಸುತ್ತಿದ್ದೆ ಮತ್ತು ಈಗ ಹೇಗೆ ಆಚರಿಸುತ್ತೇನೆ ಅಂತ ಬರೆಯಲು ಪ್ರಯತ್ನಿಸಿದ್ದೇನೆ. ಇದು ನಿಮ್ಮ ನೆನಪಿನಂಗಳವನ್ನ ಕೆದಕಿದರೆ ನನ್ನ ಈ ಪ್ರಯತ್ನ ಸಫಲ! ಹಾಗೇ ನೀವೂ ನಿಮ್ಮ ಆಚರಣೆಯನ್ನ ಹಂಚಿಕೊಂಡರೆ ಸಂತೋಷ 🙂
ಜನವರಿ ಬಂತೆಂದರೆ ಮನೆಯಲ್ಲಿ ಹಬ್ಬದ ಸಂಭ್ರಮ! ಎಳ್ಳು-ಬೆಲ್ಲದ ತಯಾರಿ ಶುರು.. ಎಲ್ಲರಿಗೂ ತಿಳಿದಂತೆ ಇದಕ್ಕೆ ಬೇಕಿರುವ ಪದಾರ್ಥಗಳು – ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಕಡ್ಲೇಬೀಜ. ನಾನು ಚಿಕ್ಕವಳಿದ್ದಾಗ ಬಿಳಿ ಎಳ್ಳು ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ. ಹಾಗಾಗಿ ಕರಿ ಎಳ್ಳನ್ನು ತಂದು, ನೆನೆಸಿ, ಕೈಯಲ್ಲಿ ಉಜ್ಜಿ ಅದರ ಕರೀ ಹೊಟ್ಟನ್ನುತೆಗೆದು ಬಿಳಿ ಮಾಡಿ ಒಣಗಸಬೇಕಿತ್ತು. ಕೊಬ್ಬರಿಯ ಹೊರಗಿನ ಕಂದು ಪದರವನ್ನು ನಾಜೂಕಾಗಿ ತುರಿಯುವ ಮಣೆಯಲ್ಲಿ ತುರಿದು ಅದನ್ನೂ ಬಿಳಿ ಮಾಡಬೇಕು. ಆದಷ್ಟೂ ಬೆಳ್ಳಗಿರುವ ಬೆಲ್ಲದ ಅಚ್ಚನ್ನು ಆರಿಸಿ ತರಬೇಕು. ಕೊಬ್ಬರಿ ಮತ್ತು ಬೆಲ್ಲವನ್ನ ಒಂದೇ ಸಮನಾದ ಸಣ್ಣ ಚೌಕಾಕಾರದ ತುಂಡುಗಳಾಗಿ ಅಡಿಕೆ ಕತ್ತರಿಯಲ್ಲಿ ಕತ್ತರಿಸಿಟ್ಟುಕೊಳ್ಳಬೇಕು. ಕಡ್ಲೇಬೀಜವನ್ನ ಹುರಿದು, ಅದರ ಹೊಟ್ಟನ್ನುತೆಗೆದು ಅದನ್ನೂ ಬಿಳಿಯಾಗಿಸಬೇಕು. ಹೀಗೆ ಸಿದ್ಧಪಡಿಸಿಕೊಂಡ ಪದಾರ್ಥಗಳನ್ನ ಸೇರಿಸಿದಾಗ ತಯಾರಾಗುತ್ತಿತ್ತು ಎಳ್ಳು-ಬೆಲ್ಲ! ಹೀಗೆ ಸೇರುಗಟ್ಟಲೆ ಎಳ್ಳು-ಬೆಲ್ಲ ತಯಾರಾಗುತ್ತಿತ್ತು! ಮಕ್ಕಳಾಗಿದ್ದ ನಾವು ಬಹಳ ಆಸ್ಥೆಯಿಂದ ಎಳ್ಳು ಮತ್ತು ಕಡ್ಲೇಬೀಜದ ಹೊಟ್ಟನ್ನು, ಕೊಬ್ಬರಿಯ ಹೊರಪದರವನ್ನು ತೆಗೆಯುವಲ್ಲಿ ನಮ್ಮ ಅಳಿಲುಸೇವೆಯನ್ನು ಮಾಡುತ್ತಿದ್ದೆವು 🙂 ಏನೇ ಸಹಾಯ ಮಾಡಿದರೂ ಒಂದು ಚೂರೂ ರುಚಿಗೆ ಸಿಗುತ್ತಿರಲಿಲ್ಲ! ಹಬ್ಬದ ದಿನ ನೈವೇದ್ಯವಾಗದೆ ಯಾರಿಗೂ ಇಲ್ಲ.. ತಯಾರಾದ ಪದಾರ್ಥ ದೊಡ್ದ ಅಲ್ಯೂಮಿನಿಯಂ ಡಬ್ಬದಲ್ಲಿ ಸುರಕ್ಷಿತವಾಗಿ ಅಟ್ಟಸೇರುತ್ತಿತ್ತು!
ಮಲ್ಲೇಶ್ವರಂ 8th ಕ್ರಾಸ್ ಗೆ ಹೋಗಿ ಹೊಸ ಬಟ್ಟೆ ವ್ಯಾಪಾರ! ಹಬ್ಬಕ್ಕೆ ನಮಗೆ ಇಷ್ಟವಾದ ಝರಿ ಲಂಗವೋ, ಬಣ್ಣದ frock ಮನೆಗೆ ಬರುತ್ತಿತ್ತು. ಅದನ್ನೂ ಹಬ್ಬದ ದಿನದವರೆಗೂ ಮುಟ್ಟುವಂತಿಲ್ಲ 🙂

ಹಬ್ಬ ಇನ್ನೆರಡು ದಿನವಿದೆಯೆಂದಾಗ ಅಟ್ಟದಿಂದ ಮರದ ಸಕ್ಕರೆ ಅಚ್ಚುಗಳು ಕೆಳಗಿಳಿಯುತ್ತಿದ್ದವು. ಕೆಲಸದವಳು ಅವನ್ನೆಲ್ಲ ತೊಳೆದು ಒಣಗಿಸಿ ಶುಚಿಯಾಗಿಸುತ್ತಿದ್ದಳು. ನನ್ನ ಅಮ್ಮಾಮಿ (ಸೋದರಮಾವನ ಹೆಂಡತಿ) ನಮ್ಮ ಮನೆಗೆ ಸಕ್ಕರೆ ಅಚ್ಚು ಮಾಡಲು ಬರುತ್ತಿದ್ದರು. ಮಧ್ಯಾಹ್ನ ಸುಮಾರು ೨ ಘಂಟೆಯಿಂದ ೬ ಘಂಟೆಯವರೆಗೂ ನಡೆಯುತ್ತಿತ್ತು ಅಚ್ಚು ಮಾಡುವ ಕಾರ್ಯಕ್ರಮ. ತುಳಸಿ ಕಟ್ಟೆ, ಗೋಪುರ, ಗಂಡಭೇರುಂಡ, ಬಾಳೆಚಿಪ್ಪು, ಹೂಜಿ, ಆನೆ, ಕುದುರೆ, ಬಾತು, ಚಿಟ್ಟಚ್ಚು ಹೀಗೆ ನಾನಾ ವಿಧದ ಅಚ್ಚುಗಳಲ್ಲಿ ಸಕ್ಕರೆಪಾಕ ಇಳಿದು ಆ ಆ ಆಕಾರದ ಸಕ್ಕರೆ ಅಚ್ಚು ಸೃಷ್ಟಿ ಆಗುತ್ತಿತ್ತು! ಅಚ್ಚುಗಳನ್ನ ತೊಳೆಯೋದು, ಅದನ್ನ ಸರಿಯಾಗಿ ಜೋಡಿಸಿ ದಾರ/rubber band ಕಟ್ಟೋದು, ಸಕ್ಕರೆ ಪಾಕ ವನ್ನ ಅಚ್ಚೊಳಗೆ ಸುರಿಯುವಾಗ ಅಚ್ಚನ್ನ ಹಿಡಿದು ನೆಲದಮೇಲೆ ಕುಟ್ಟೋದು (ಹೀಗೆ ಮಾಡದಿದ್ದರೆ ಪಾಕ ಅಚ್ಚಿನೋಳಕ್ಕೆ ಸರಿಯಾಗಿ ಹೋಗದೆ ಸಕ್ಕರೆ ಅಚ್ಚಿನ ಆಕಾರ ವಿಕಾರವಾಗುತ್ತಿತ್ತು!), ಪಾಕ ಘಟ್ಟಿಯಾದ ಮೇಲೆ ಅಚ್ಚನ್ನ ಜೋಪಾನವಾಗಿ ಬಿಡಿಸಿ, ಸಕ್ಕರೆ ಅಚ್ಚನ್ನ ತೆಗೆದಿಡುವ ಕೆಲಸಗಳೆಲ್ಲ ಮಕ್ಕಳಾದ ನಮ್ಮದು! ಅದೆಂಥ ಆಸಕ್ತಿ ಮಾತು ಹುಮ್ಮಸ್ಸಿನಿಂದ ಮಡುತ್ತಿದ್ದೆವೆಂಬುದನ್ನ ಬಣ್ಣಿಸಲಸಾಧ್ಯ!
ಹಬ್ಬದ ಹಿಂದಿನ ದಿನ, ಎಳ್ಳು ಬೀರಲು ಬೇಕಾದ ಪದಾರ್ಥಗಳನ್ನು ತರಲು ಮತ್ತೆ 8th ಕ್ರಾಸ್ ಗೆ ಪ್ರಯಾಣ 🙂 ಕುಸರಿ ಕಾಳು, ಜೀರಿಗೆ ಪೆಪ್ಪೆರ್ಮೆಂಟ್ ಇಡಲು ಬಣ್ಣ ಬಣ್ಣದ ಸಣ್ಣ ಡಬ್ಬಗಳು, ಹಲವಾರು ಕಬ್ಬಿನ ಜಲ್ಲೆಗಳು, ಸೇಬು, ಕಿತ್ತಳೆ ಹಣ್ಣುಗಳು, ಎಳ್ಳು-ಬೆಲ್ಲ ಹಾಕಿಡಲು cover ಗಳು, ಅರಿಶಿನ/ಕುಂಕುಮದ ಪೊಟ್ಟಣಗಳು, ವಿಳ್ಳೆದೆಲೆ, ಅಡಿಕೆ ಎಲ್ಲ ಮನೆಗೆ ಬರುತ್ತಿದ್ದವು. ಈ ಸಾಮಗ್ರೀಗಳನ್ನ ಓರಣ ಮಾಡುವ ಕೆಲಸ ನಮ್ಮದು. ಬಹಳ ಸಂಭ್ರಮದಿಂದ ನಡೆಯುತ್ತಿತ್ತು 🙂
ಹಬ್ಬದ ದಿನ ಬೆಳಿಗ್ಗೆ ತಲೆಗೆ ಅಭ್ಯಂಜನ ಮಾಡಿ ಹೊಸ ಬಟ್ಟೆತೊಟ್ಟು ready ಆಗುತ್ತಿದ್ದೆವು. ದೇವರ ಪೂಜೆ, ಗಂಗೆ ಪೂಜೆ ಮತ್ತು ತರ್ಪಣಗಳು ಸಾಂಗವಾಗಿ ನಡೆದು ಎಳ್ಳು-ಬೆಲ್ಲ, ಸಿಹಿ ಮತ್ತು ಖಾರ ಪೊಂಗಲ್ ಗಳ ನೈವೇದ್ಯ ಮುಗಿದಮೇಲೆ , ಬೀದಿಯ ಎಲ್ಲ ಮನೆಗಳಿಗೂ ಎಳ್ಳು ಬೀರಲು ನಾನು ನನ್ನ ತಂಗಿ ಹೋಗುತ್ತಿದ್ದೆವು. ಹಾಗೆ ಮನೆಗೆ ಬಂದವರಿಗೆ ಅರಿಶಿನ ಕುಂಕುಮ ಎಲೆಅಡಿಕೆ ಕೊಡುವ ಸಂಭ್ರಮ ಬೇರೆ!
ಮಧ್ಯಾಹ್ನದ ಹಬ್ಬದ ಊಟದ ನಂತರ ಎಳ್ಳು ಬೀರಲು ಆಟೋ ಹತ್ತಿ ಶಂಕರಪುರ, ವಿಶ್ವೇಶ್ವರಪುರಗಳಿಗೆ ಅಮ್ಮ ಮತ್ತು ದೊಡ್ಡಮ್ಮನ ಜೊತೆ ನಮ್ಮ ಸವಾರಿ ಹೊರಟರೆ ಮನೆ ಸೇರುತ್ತಿದ್ದಿದ್ದು ರಾತ್ರಿಗೇ! ಬಂದನಂತರ, ಮಕ್ಕಳಾದ ನಮ್ಮನ್ನು ಹಸೆಮಣೆಯ ಮೇಲೆ ಕೂರಿಸಿ ಆರತಿ ಎತ್ತಿ, ಎಳ್ಳು ಬೆಲ್ಲ ಕಬ್ಬು ಎಲಚಿಹಣ್ಣು ಒಣ ಖರ್ಜೂರ ಮತ್ತು ಚಿಲ್ಲರೆ ಕಾಸಿ ನ ಮಿಶ್ರಣವನ್ನ ಸೇರಿನಲ್ಲಿ ಹಾಕಿ ನಮ್ಮ ತಲೆಯ ಮೇಲೆ ಹಾಕುತ್ತಿದ್ದರು. ಚಿಲ್ಲರೆ ಕಾಸನ್ನು ಆರಿಸಿಕೊಳ್ಳಲು ನಾವು ಮುಂದಾಗುತ್ತಿದ್ದೆವು 🙂
ಹೀಗೆ ನಡೆಯುತ್ತಿತ್ತು ನಮ್ಮ ಸಂಕ್ರಾಂತಿ!
ವರುಷಗಳು ಕಳೆದಂತೆ ಮತ್ತು ನಾವು ಬೆಳೆದಂತೆ ನಮ್ಮ ಸಂಭ್ರಮ ಸಡಗರ ಸ್ವಲ್ಪ ಕಮ್ಮಿ ಆಯಿತೇವಿನಹ ಹಬ್ಬದ ಆಚರಣೆಯಲ್ಲಿ ಯಾವ ಬದಲಾವಣೆಯೂ ಇರಲಿಲ್ಲ… ನಾನು ಮದುವೆಯಾಗಿ ಅಮ್ಮನ ಮನೆ ಬಿಡುವವರೆಗೂ ಎಳ್ಳು ಬೀರುತ್ತಿದ್ದೆ. ಬೀರುವ ಮನೆಗಳು ಸ್ವಲ್ಪ ಕಮ್ಮಿಯಾಗಿದ್ದವು ಅಷ್ಟೇ! ನಂತರ ನನ್ನ ತಂಗಿ ಅವಳ ಮದುವೆವರೆಗೂ ಈ ಸಂಪ್ರದಾಯವನ್ನ ಮುಂದುವರೆಸಿದಳು. ಆಮೇಲೆ ಅಮ್ಮ ದೊಡ್ದಮ್ಮನಿಗೂ ವಯಸ್ಸಾಗಿದ್ದರಿಂದ ಮನೆಗೆ ಬಂದವರಿಗೆ ಎಳ್ಳು ಕೊಡೋದಕ್ಕೆ ಶುರು ಮಾಡಿದರು…
ಮದುವೆಯಾದ ಮೊದಲ ವರ್ಷ ಎಲ್ಲ ಹಬ್ಬಗಳ ಆಚರಣೆಯಲ್ಲೂ ವಿಶೇಷ! ನಾನು ಆನಂದ್ ನಮ್ಮಹೀರೋ ಹೋಂಡಾ ದಲ್ಲಿ ಹೋಗಿ ಎಳ್ಳುಬೀರಿದ ಜ್ಞಾಪಕ ಇನ್ನೂ ಇದೆ 🙂 ಮುಂದೆ ಮನೆಗೆ ಬಂದವರಿಗೆ ಎಳ್ಳು ಕೊಡುತ್ತಿದ್ದೆವೇ ಹೊರತು, ಮನೆ ಮನೆಗೆ ಹೋಗಿ ಬೀರಲಿಲ್ಲ..
ನನ್ನ ಅತ್ತೆಯವರು (ಆನಂದ್ ತಾಯಿ) ಖಾರದ ಎಳ್ಳು ಮಾಡೋವ್ರು, ಸಕ್ಕತ್ತಾಗಿರೋದು! 🙂 december-january ಟೈಮ್ನಲ್ಲಿ ಬೆಂಗಳೂರಿನಲ್ಲಿ ಹಿಲಕವರೆ ಸಿಗೋ ಕಾಲ. ಅದನ್ನ ತಂದು, ಅದರೊಂದಿಗೆ ಎಳ್ಳು, ಕಡಲೆಬೀಜ, ಹುರಿಗಡಲೆ, ಕೊಬ್ಬರಿ ಎಲ್ಲವನ್ನೂ ಎಣ್ಣೆಯಲ್ಲಿ ಕರಿದು ಉಪ್ಪು-ಖಾರ ಹಾಕೊವ್ರು! ಆಹಾ! ಅದೇನು ರುಚಿ! ಸ್ವರ್ಗ ಎರಡೇ ಗೇಣು 🙂 ನೆನೆಸ್ಕೊಂಡ್ರೆ ಬಾಯಲ್ಲಿ ಈಗ್ಲೂ ನೀರೂರತ್ತೆ!
ಇಂಗ್ಲೆಂಡ್ ಗೆ ಬಂದ ಮೊದಲೆರಡು ವರುಷ ನಾವು lincoln ನಲ್ಲಿದ್ದೆವು. ಅಲ್ಲಿ ಬಹಳಷ್ಟು ಜನ ಭಾರತೀಯರ ಪರಿಚಯವಿದ್ದಿದ್ದರಿಂದ ಮತ್ತು ಮಕ್ಕಳಿಗೂ ನಮ್ಮ ಸಂಪ್ರದಾಯ ಆಚರಣೆಗಳ ಅರಿವು ಮೂಡಿಸುವ ಆಸೆ ಇದ್ದಿದ್ದರಿಂದ ಎಳ್ಳನ್ನು ಮನೆಯಲ್ಲಿ ಮಾಡಿ, leicester ನಿಂದ ಕಬ್ಬು ತಂದು ಎಳ್ಳು ಬೀರಿಸಿದೆ… cheltenham ಗೆ ಬಂದ ನಂತರ ಇಲ್ಲಿ ಅಷ್ಟು ಭಾರತೀಯರ ಪರಿಚಯ ಆಗಲಿಲ್ಲ 😦 ಹಾಗಾಗಿ ಈಗ ಮನೆಯಮಟ್ಟಿಗಿದೆ ಹಬ್ಬದ ಆಚರಣೆ. ಎಳ್ಳು, ಪೊಂಗಲು ಮಾಡಿ, ಹಬ್ಬದ ವಿಶೇಷತೆಯನ್ನ ಮಕ್ಕಳಿಗೆ ನೆನಪಿಸಿ, ಹಬ್ಬದ ದಿನವನ್ನ ಕಳೀತೀವಿ
ಇನ್ನೇನು ಸಂಕ್ರಾಂತಿ ಹತ್ತಿರ ಬರುತ್ತಿದೆ! ನಿಮಗೆಲ್ಲ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡೋಣ…

ಇಗೋ ಇಲ್ಲಿದೆ ಇ-ಎಳ್ಳು ಬೆಲ್ಲ 🙂