ಒಂದು ಹಳೆಯ ಸವಿನೆನಪು

ಮನೆ ಹಿತ್ತಲಿನಲ್ಲಿ ತಿಂಗಳ ಬೆಳಕಿನ ಹೊಳೆ ಹರಿದಿತ್ತು
ಚಾಮರ ಬೀಸುವ ತೆಂಗಿನ ಗರಿಗಳ ನಡುವೆ
ಸರಸ ಸಂಭಾಷಣೆ ನಡೆದಿತ್ತು
ಹುಣ್ಣಿಮೆ ಚಂದಿರ ಬೆಳ್ಳಿಯ ಬಾನಲಿ ತೇಲಿತ್ತು
ಮೋಡದ ಮೆರವಣಿಗೆಯು ಸಾಗಿತ್ತು
ಅಪ್ಪನ* ಕವಿಮನ ಮುಗಿಯದ ಕವನಕೆ
ಪದಗಳ ಹುಡುಕಲು ಹೊರಟಿತ್ತು
ಹರಡಿದ ಲಂಗದಿ ಮಧ್ಯದಿ ಕುಳಿತ
ಅಕ್ಕನ ಹಾಡಿನ ಇಂಪಿತ್ತು
ಸೋರುವ ನಲ್ಲಿಯ ತಟಪಟ ಶಬ್ದವು
ರಾಗಕೆ ತಾಳವ ಹಿಡಿದಿತ್ತು
ಹಿತ್ತಲ ಗಿಡದಲಿ ಅರಳಿದ ಹೊಗಳ ಕಂಪಿತ್ತು
ತಂಗಾಳಿಯು ಮೆಲ್ಲಗೆ ಸುಳಿದಿತ್ತು
ಬಾವಿಲಿ ಇಣುಕುವ ಅಣ್ಣನ ಚೇಷ್ಟೆಯು
ಅಮ್ಮನಿಗಾಬರಿಗಿಟ್ಟಿತ್ತು, ದನಿ ಎರಿತ್ತು
ಕಥೆ ಕೇಳುವ ರೋಮಾಂಚನದಲಿ
ನನ್ನಯ ಕಿವಿಮನ ಹಿಗ್ಗಿತ್ತು
ಕಥೆಗಳ ನಡುವೆ ಅಮ್ಮನ ತುತ್ತಿನ ಸವಿಯಿತ್ತು
ದುಡಿಮೆಯ ಶ್ರಮದಲಿ ಬಳಲಿದ
ಅಮ್ಮನ ತೋಳದು ಸೋತಿತ್ತು
ಮುದ್ದಿನ ಮಕ್ಕಳ ಆರೈಸುವ ಬಯಕೆಯು
ಆ ನೋವನೆ ನುಂಗಿತ್ತು
ಪ್ರೀತಿ ವಾತ್ಸಲ್ಯದ ಹೊಳೆ ಹರಿದಿತ್ತು
ಸಂತೃಪ್ತಿಯ ಮುಖವದು ಅರಳಿತ್ತು
* ಡಾ. ಜಿ ಎಸ್ ಶಿವರುದ್ರಪ್ಪ