ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರು 1. ಪಲ್ಸಾರ್ ಅನ್ವೇಷಕಿ, ಖಭೌತಶಾಸ್ತ್ರಜ್ಞೆ–ಜೋಸಲೀನ್ ಬೆಲ್ ಬರ್ನೆಲ್ (Jocelyn Bell Burnell) ಡಾ ಉಮಾ ವೆಂಕಟೇಶ್

ವಿಜ್ಞಾನಕ್ಕೆ ಸಂಬಂಧಿಸಿದ  ಲೇಖನಗಳನ್ನು ಬರೆಯುವದರಲ್ಲಿ ಅತ್ಯಂತ ಆಸಕ್ತಿ ಮತ್ತು ವಿಶೇಷ ಪರಿಣತಿ ಹೊಂದಿರುವ ಬರಹಗಾರರಾದ ಡಾ ಉಮಾ ವೆಂಕಟೇಶ್ ಈಗಾಗಲೇ ಈ ವೇದಿಕೆಯ ಓದುಗರಿಗೆ ಚಿರ ಪರಿಚಿತರು. ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರನ್ನು ಕುರಿತಾದ  ಈ ಹೊಸ ಸರಣಿಯಲ್ಲಿ ಅವರ ಮೊದಲ ಲೇಖನ  ಇದು.

 ಹೆಂಗಸರು ಕೇವಲ ಮದುವೆಯಾಗಿ, ಮಕ್ಕಳನ್ನು ಹೆತ್ತು……..?

ವೃತ್ತಿಪರ ರಂಗವನ್ನು ಪ್ರವೇಶಿಸಿ ಅಲ್ಲಿ ಯಶಸ್ಸನ್ನು ಗಳಿಸುವುದು ಮಹಿಳೆಯರಿಗೆ ಸದಾಕಾಲ ಒಂದು ಸವಾಲಿನ ಪ್ರಶ್ನೆಯಾಗೇ ಉಳಿದಿದೆ. ಇದಕ್ಕೆ ಕಾರಣ ಮಹಿಳೆ ತನ್ನ ಬುದ್ಧಿಶಕ್ತಿಯಲ್ಲಾಗಲಿ, ಅಥವಾ ಕಾರ್ಯನಿರ್ವಹಣೆಯ ಸಾಮರ್ಥ್ಯದಲ್ಲಾಗಲಿ ಗಂಡಿಗಿಂತ ಕಡಿಮೆ ಎನ್ನುವ ಕಾರಣದಿಂದಲ್ಲ. ಕೇವಲ ಅವಳು ಪುರುಷಳಲ್ಲ ಎನ್ನುವುದೊಂದೇ ಅದಕ್ಕೆ ಕಾರಣ. ನಮ್ಮ ಸಮಾಜವೆಷ್ಟೇ ಆಧುನಿಕಗೊಂಡು ಮುನ್ನಡೆದಿದೆ ಎಂದುಕೊಂಡರೂ, ಮಹಿಳೆಯರ ಬಗ್ಗೆ ಇರುವ ಕೆಲವು ಕೀಳು ಭಾವನೆಗಳು ಮತ್ತು ಪೂರ್ವಾಗ್ರಹಗಳು ಇನ್ನೂ ಆಳವಾಗಿ ಬೇರೂರಿಯೇ ಇವೆ.  ಇಷ್ಟಾದರೂ, ಈ ಪುರುಷ ಪ್ರಧಾನ ಸಮಾಜದ ವಿವಿಧ ವೃತ್ತಿಪರ ರಂಗಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು, ಅಂತಹ ಸಮಯವನ್ನು ಹಿಂದಕ್ಕೆ ನೂಕಿ, ಮುನ್ನಡೆದ ಮಹಿಳೆಯರು ಅನೇಕರಿದ್ದಾರೆ. ಅಂತಹ ವನಿತೆಯರಲ್ಲಿ ಒಬ್ಬಳು ಜೋಸಿಲೀನ್ ಬೆಲ್ ಬರ್ನೆಲ್. ಅತ್ಯಂತ ಪುರುಷ-ಪ್ರಧಾನ ರಂಗವೆನಿಸಿದ ವಿಜ್ಞಾನದಲ್ಲಿ, ಅದರಲ್ಲೂ ಭೌತಶಾಸ್ತ್ರದ ಉಪಕ್ಷೇತ್ರವಾದ ರೇಡಿಯೋ ಖಗೋಳಶಾಸ್ತ್ರದಂತಹ ಅಪರೂಪದ ವಿಷಯದಲ್ಲಿ ಸಾಧನೆಗೈದ ಬ್ರಿಟಿಷ್ ಖಭೌತಶಾಸ್ತ್ರಜ್ಞೆ ಜೋಸಿಲೀನ್ ಬೆಲ್, ಮೊಟ್ಟಮೊದಲ ರೇಡಿಯೋ ಪಲ್ಸಾರ್ ಶೋಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮಹಿಳೆಯಾಗಿದ್ದಾಳೆ.Read More »

“ನಾನು ಹೊರಡುವೆ ಇನ್ನಿಸ್ ಫ್ರೀಗೆ!”

William Butler Yeats (1869 -1935)

ಇಪ್ಪತ್ತನೆಯ ಶತಮಾನದ ಆಂಗ್ಲ ಸಾಹಿತ್ಯದ ದಿಗ್ಗಜಗಳಲ್ಲೊಂದಾದ ಯೇಟ್ಸ್, ಐರಿಷ್ ಸಾಹಿತ್ಯಕ್ಷೇತ್ರದ ಪುನರುತ್ಥಾನದ ಹರಿಕಾರ. ಕಳೆದ ವಾರ (ಜೂನ್ 13) ಐರಿಷ್ ಕವಿ ವಿಲ್ಲಿಯಮ್ ಬಟ್ಲರ್ ಯೇಟ್ಸನ 150 ನೆಯ ಜನ್ಮ ಶತಾಬ್ದಿ. ಭಾರತೀಯರ ಮನಕ್ಕೆ ಟಾಗೋರರ “ಗೀತಾಂಜಲಿ”ಗೆ ಮುನ್ನುಡಿ ಬರೆದು ಹತ್ತಿರವಾಗುತ್ತಾನೆ ಯೇಟ್ಸ್.

ನಮ್ಮ ಬಳಗದಲ್ಲಿ ಆಂಗ್ಲ ಕವಿತೆಗಳನ್ನೋದಿ, ಅರ್ಥೈಸಿ, ಆಸ್ವಾಸಿಸುವ ದೇಸಾಯಿಯವರು ಸಮಯೋಚಿತವಾಗಿ ಯೇಟ್ಸ್ ನ ಕವನ; ಅವನು ಹುಟ್ಟಿದ, ಇಷ್ಟಪಟ್ಟ ಸ್ಥಳಗಳನ್ನು ಭೇಟಿ ಮಾಡಿದ ಅನುಭವದೊಂದಿಗೆ ನೇಯ್ದ ಲೇಖನವಿದು.

ನಾನು ಹೊರಡುವೆ ಇನ್ನಿಸ್ ಫ್ರೀಗೆ!

Yeatsನಾನು ‘ಅನಿವಾಸಿ’ಯಲ್ಲಿ ಡಾಫೋಡಿಲ್ ಬಗ್ಗೆ ಬರೆದ ಲೇಖನದಲ್ಲಿ (http://wp.me/p4jn5J-lT) ನನ್ನ ಮೆಚ್ಚಿನ ಇನ್ನೊಂದು ಕವನದ ಬಗ್ಗೆ ಉಲ್ಲೇಖಿಸಿದ್ದೆ. ಅದು ವಿಲ್ಲಿಯಂ ಬಟ್ಲರ್ ಯೇಟ್ಸ್ ಎಂಬ ಐರಿಷ್ ಕವಿಯ ಅತ್ಯಂತ ಸುಂದರವಾದ ಮತ್ತು ಜನಪ್ರಿಯ ಕವಿತೆ: The Lake Isle of Innisfree. ನಾನು ”ಅನಿವಾಸಿ’ಯಾಗಿ ನಾಲ್ಕು ದಶಕಗಳನ್ನು ಇಂಗ್ಲಂಡಿನಲ್ಲಿ ಕಳೆದಿದ್ದರೂ ಆ ಪುಟ್ಟ ನಡುಗಡ್ಡೆಯನ್ನು ನೋಡುವ ನನ್ನ ಇಚ್ಛೆ ಪೂರೈಸಿದ್ದು ನಾಲ್ಕು ವರ್ಷಗಳ ಕೆಳಗೆ ಐರ್ಲೆಂಡಿಗೆ ಹೋದಾಗಲೇ. ನಮ್ಮ ಟೂರ್ ಕೋಚು (ಬಸ್) ಡೋನೆಗಲ್ಲಿನ ಹೋಟೆಲಿನಲ್ಲಿ ನಮ್ಮನ್ನು ಇಳಿಸಿತ್ತು. ಮರುದಿನ ಯೇಟ್ಸನ ಪ್ರೀತಿಯ ಊರಾದ ಸ್ಲೈಗೋ ಮತ್ತು ಗಿಲ್ ಸರೋವರಕ್ಕೆ ಪಯಣ. ಅಂದು ರಾತ್ರಿಯಲ್ಲೇ ಮಳೆ ಶುರುವಾಗಿತ್ತು. ಈ ದೇಶದಲ್ಲಿ ಯಾವಾಗಲೂ ಮಳೆ ಎಂದು ಕೇಳಿದ್ದೆ. ಅದಕ್ಕೇ ಅಲ್ಲವೆ ಅದನ್ನು (Eire) ಎಮರಲ್ಡ್ ಐಲ್ (ಪಚ್ಛ ದ್ವೀಪ) ಎಂದು ಕರೆಯುತ್ತಾರೆ? ಆ ರಾತ್ರಿ ಮಲಗುವಾಗ ಮರುದಿನದ ಇನ್ನಿಸ್ ಫ್ರೀ ಪಯಣಕ್ಕೆ ಮನ ಕಾತೊರೆಯುತ್ತಿತ್ತು. ಆ ಪದ್ಯದ ಮೊದಲ ಸಾಲನ್ನು ಮೆಲಕುತ್ತಾ ನಾಳೆ “I will arise and go and go to Innisfree” ಎನ್ನುತ್ತ ಮಲಗಿದೆ. The Lake Isle of Innisfree(1890) ಬರೀ 12 ಸಾಲುಗಳ ಈ ಸುಂದರವಾದ ಕವನ ಪ್ರಾಸ ಲಯಗಳಿಂದ ಕೂಡಿದೆ. ಸರಳ ಭಾಷೆ, ಅನುಪಮ ಕಲ್ಪನೆಗಳಿಂದ ಅದು ಸಾಮಾನ್ಯ ಓದುಗನ ಮನ ಸೆಳೆಯುತ್ತದೆ. ಎಂತಲೇ ಆಂಗ್ಲ ಭಾಷೆಯ ಅತ್ಯಂತ ಜನಪ್ರಿಯ 50 ಕವನಗಳ ಪಟ್ಟಿಯಲ್ಲಿ ಅದು ಪದೇ ಪದೇ ಸೇರ್ಪಡೆಯಾಗುತ್ತಿರುತ್ತದೆ. ಕವನವನ್ನು ಪೂರ್ತಿಯಾಗಿ ಈ ಲೇಖನದ ಕೊನೆಯಲ್ಲಿ ಕೊಟ್ಟಿದೆ. ಅದರ ಮೊದಲ ಚರಣವನ್ನು ಹೀಗೆ ಅನುವಾದ ಮಾಡ ಬಹುದು: ಇಲ್ಲಿಂದೆದ್ದು ಹೊರಡುವೆ, ಹೋಗುವೆ ಕನ್ನೀಲೆ ಹೂಗಂಟಿಗಳ ( heather) ದ್ವೀಪಕ್ಕೆ, ಅಲ್ಲೊಂದು ಗುಡಿಸಲು ಕಟ್ಟಿಕೊಳ್ಳುವೆ, ಹುದಲು, ತಡಿಕೆಗಳಿಂದ ಆರೇಳು ಅವರೆಯ ಸಾಲುಗಳಿಡುವೆ, ಜೇನಿಗೊಂದು ಗೂಡು ಸಹ ಅವುಗಳ ಝೇಂಕಾರದ ಮಧ್ಯೆ ಒಬ್ಬನೇ ವಿಶ್ರಮಿಸುವೆ

”ಕವನದ ಕತೆ” ಇತ್ತೀಚೆಗೆ ನಮ್ಮ ಕನ್ನಡ ಬಳಗ ಯು ಕೆಯ ಯುಗಾದಿ ಸಮಾರಂಭಕ್ಕೆ ಬಂದಿದ್ದ ಬಿ ಆರ್ ಲಕ್ಷ್ಮಣರಾಯರು ತಮ್ಮ ಕವನಗಳು ಹುಟ್ಟಿದ ಬಗ್ಗೆ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಎಲ್ಲ ಪ್ರಸಿದ್ಧ ಕವನಗಳ ಮೂಲದ ಬಗ್ಗೆಯ ಮಾಹಿತಿ ಅಷ್ಟು ಸುಲಭವಾಗಿ ಖಚಿತವಾಗಿ ಲಭ್ಯವಿರುವದಿಲ್ಲ. ಯೇಟ್ಸ್ ಕವಿ ಐರಿಷ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಮೊದಲು ಬರೆದ ಕವನ ಇದು. ಬಾಲ್ಯದಲ್ಲಿ ಅವನ ಕುಟುಂಬ ವಾಸಿಸಲು ಲಂಡನ್ನಿಗೆ ಬಂದಿತ್ತು. ಬರೀ 23 ವಯಸ್ಸಿನ ವಿಲ್ಲಿಯಂ ಲಂಡನ್ನಿನಲ್ಲಿ ಕಲಾಕಾರರಿಂದ ಕೂಡಿದ ತನ್ನ ಕುಟುಂಬದವರೊಡನೆ ವಾಸಿಸುತ್ತಿದ್ದರೂ ಅವನ ಮನಸ್ಸು ನಮ್ಮ ಹಾಗೆಯೇ ವಲಸಿಗ ಸಹಜವಾದ ತಾಯ್ನಾಡಿನ ಹಂಬಲದಿಂದ ಆಗಾಗ ಚಡಪಡಿಸುತ್ತಿತ್ತು. ಪ್ರತಿವರ್ಷ ಬೇಸಿಗೆಯ ರಜದಲ್ಲಿ ತವರೂರಾದ ಮತ್ತು ಸ್ವಚ್ಛಂದದ ಚಿಕ್ಕಂದಿನಲ್ಲಿ ರಮ್ಯ ದಿನಗಳನ್ನು ಕಳೆದ ಸ್ಲೈಗೋಕ್ಕೆ ಭೆಟ್ಟಿಕೊಟ್ಟರೂ ಮತ್ತೆ ಮಹಾನಗರಕ್ಕೆ ಮರಳುತ್ತಿದ್ದ. ಒಂದು ದಿನ ಲಂಡನ್ನಿನ ಸ್ಟ್ರಾಂಡ್ ನಲ್ಲಿ ಹೋಗುತ್ತಿದ್ದಾಗ ಒಂದು ಅಂಗಡಿಯ ಕಿಡಕಿಯಲ್ಲಿ ಪುಟ್ಟ ಕಾರಂಜಿ ಮತ್ತು ಅದು ಎತ್ತಿ ಹಿಡಿದ ಚೆಂಡನ್ನುಕಂಡ. ನೀರು ಕೆಳಗೆ ಬೀಳುವಾಗ ಹೊರಹೊಮ್ಮಿದ ಜುಳು ಜುಳು ನಾದ ಅವನಿಗೆ ತಾನು ಆಟವಾಡುತ್ತಿದ್ದ ”ಇನ್ನಿಸ್ ಫ್ರೀ ನಡುಗಡ್ಡೆಯ ನೆನಪಾಗಿ ಈ ಕವನವನ್ನು ಬರೆದೆ’’ ಎಂದು ಸ್ವತಃ ದಾಖಲಿಸಿದ್ದಾನೆ. ಅವನದೇ ದನಿಯಲ್ಲಿ ಆ ಕವನ ವಾಚನವನ್ನು ಇಲ್ಲಿ ಕೇಳ ಬಹುದು (https://youtu.be/u2FT4_UUa4I).

lough-gill-
Lake Innisfree

Epitaph
The Epitaph

ನನ್ನ ಯಾತ್ರೆ! ಮರುದಿನ ನಮ್ಮ ಕೋಚ್ ಮೊದಲು ಇಪ್ಪತ್ತು ಮೈಲು ದೂರದ ಡ್ರಮ್ ಕ್ಲಿಫ್ಗೆ ಕರೆದೊಯ್ಯಿತು. ಹಿಂದಕ್ಕೆ ವಿಲ್ಲಿಯಂನ ಅಜ್ಜ ಅದರ ರೆಕ್ಟರ್ ಆಗಿದ್ದನಂತೆ. ಬೆನ್ ಬಲ್ಬಿನ್ ಗುಡ್ದದ ಮಡಿಲಲ್ಲಿ ಪವಡಿಸಿದ ಆ ಚರ್ಚಿನ ಆವರಣದಲ್ಲಿಯೇ ಆತನ ಇಚ್ಛೆಯಂತೆ ಯೇಟ್ಸನ ಸಮಾಧಿಯಿದೆ. ಅದರ ಮೇಲಿನ ಗೋರಿಬರಹ (epitaph) ಹೀಗಿದೆ: ”ಸಾವು- ಬದುಕಿನ ಮೇಲೆ ನಿರ್ಲಿಪ್ತ ದೃಷ್ಟಿಯಿರಲಿ. ಯಾತ್ರಿಕನ ಪಯಣ ಮುಂದೆ ಸಾಗಲಿ.” ಗೂಡಾರ್ಥದ ಈ ಬರಹವನ್ನು ತನ್ನ Under Ben Bulben ಕವನದ ಕೊನೆ ಚರಣದಲ್ಲಿ ಆತನೇ ಬರೆದದ್ದು. ಈ ಚರಮ ವಾಕ್ಯದ ಒಳರ್ಥದ ಬಗೆಯೂ ಸಾಕಷ್ಟು ಚರ್ಚೆಯಾಗಿದೆ.  ಆ ಗುಡ್ಡದ ನೆರಳಲ್ಲೇ ತಾನು ಚಿರನಿದ್ರೆಯಲ್ಲಿರಬೇಕೆಂದುಆತನ ಇಚ್ಛೆಯಿತ್ತು. ಆತನಿಗೆ ಅತೀಂದ್ರಿಯವಾದ, ಭೂತ-ಪ್ರೇತಗಳಲ್ಲಿ ನಂಬಿಕೆ ಇತ್ತು. ಆ ಗುಡ್ಡದಲ್ಲಿಯೂ ಅತೀಂದ್ರಿಯ ಚೈತನ್ಯಗಳಡಗಿವೆಯೆಂದು ಪ್ರತೀತಿ. ಆ ಚರ್ಚಿನ ಹೊರಾಂಗಣದಲ್ಲಿ ತುದಿಗಾಲ ಮೇಲೆ ಕುಳಿತ ಅರೆ ನಗ್ನ ಮನುಷ್ಯನ ಶಿಲ್ಪವಿದೆ. ಅವನ ಸುತ್ತಲೂ ಯೇಟ್ಸನ ಇನ್ನೊಂದು ಪ್ರಸಿದ್ಧ ಕವನದ (He wishes for the cloths of Heaven) ಸಾಲುಗಳನ್ನು ಕೆತ್ತಿದ್ದಾರೆ. ಅದನ್ನು ನೋಡಿದ ನಂತರ ನಮ್ಮ ಪಯಣ ಸಾಗಿದ್ದು ಲಾಕ್ (Lake) ಗಿಲ್ ಕಡೆಗೆ. ಇನ್ನಿಸ್ ಫ್ರೀ ನಡುಗಡ್ಡೆ ಇರುವುದು ಅದರ ಮಧ್ಯದಲ್ಲಿ, ಪೂರ್ವದ ಕಡೆಗೆ. ನನ್ನ ಇಷ್ಟುದಿನಗಳ ಉದ್ದಿಷ್ಟ ಸ್ಥಳ! ಆದರೆ ಮಳೆನಿಂತಿಲ್ಲ. ಕೆರೆಯ ಮೇಲೆ ಮಂಜು! ಕೆರೆಯ ದಂಡೆಯ ಮೇಲೆ ನಿಂತಾಗ ಆ ಇನ್ನಿಸ್ ಫ್ರೀ ನಡುಗಡ್ಡೆ ಸರಿಯಾಗಿ ಕಾಣಲೊಲ್ಲದು. ಇಷ್ಟು ದಿನಗಳ ಕನಸು ನಿರಾಶೆಯಲ್ಲೇ ಪರ್ಯವಸಾನವಾಗ ಬೇಕೆ? ಯೇಟ್ಸ್ ತಾನು ವರ್ಣಿಸಿದ್ದ ಪ್ರೀತಿಯ ಜಾಗವನ್ನು ತೋರಿಸಲು ತನ್ನ ನವ ವಧುವನ್ನು ಕರೆದುyeats_under_your_feet_2_66ಕೊಂಡು ದೋಣಿಯಲ್ಲಿ ಕುಳಿತು ಹುಟ್ಟುಹಾಕುತ್ತ ಹೋದಾಗಲೂ ಅವನಿಗೆ ದ್ವೀಪ ಸಿಗದೆ ವಿಫಲನಾಗಿದ್ದ ವಿಷಯ ನೆನಪಾಯಿತು. ಅದರ ದಂಡೆಯಮೇಲೆ ನಿಂತು ಫೋಟೋ ಕ್ಲಿಕ್ಕಿಸಿದ್ದಾಯಿತು. ಕವಿ ತನ್ನ ಬಾಲ್ಯದಲ್ಲಿ ಕೇಳಿದಂತೆಯೇ ಅಲೆಗಳು ಇನ್ನೂ ಮೆಲ್ಲಗೆ ತೇಲಿ ಬಂದು ದಂಡೆಯನ್ನು ಅಪ್ಪಳಿಸಿದ್ದನ್ನು ಅನುಭವಿಸಿದ್ದಾಯಿತು. (‘I hear lake water lapping with low sounds by the shore“ Line 10) ಅಷ್ಟರಲ್ಲಿ ನಮ್ಮನ್ನು ಕರೆದು ಡ್ರೈವರ್ ಬಸ್ಸನ್ನು ಚಲಾಯಿಸಿ 8 ಮೈಲುದ್ದದ ಕೆರೆಯ ಪೂರ್ವ ಬದಿಗೆ ಕೊಂಡೊಯ್ದ. ಈಗ ಮಳೆ ಬಿಟ್ಟಿತ್ತು. ಸ್ವಲ್ಪ ಹೊರಪು. ಈ ದಂಡೆಯಿಂದ ಇನ್ನಿಸ್ ಫ್ರೀ ದ್ವೀಪ ಸ್ಪಷ್ಟವಾಗಿ ಕಂಡಾಗ ರೋಮಾಂಚನ. ಕೆರೆಯ ನಡುವೆ ಗಿಡ ಮರಗಳಿಂದ ತುಂಬಿದ ಪುಟ್ಟ ನಡುಗಡ್ಡೆ. ಅಲ್ಲಿ ಹೆದರ್ ಎಂಬ ನೇರಳೆ ಬಣ್ಣದ ಹೂಗಳನ್ನು ಬಿಡುವ ಪೊದರು ಕಂಡೀತೇನೋ ಎಂದು ನೋಡಿದೆ. ಕಾಣಿಸಲಿಲ್ಲ. ಗೇಲಿಕ್ ಭಾಷೆಯಲ್ಲಿ ಆ ದ್ವೀಪದ ಹೆಸರು Inis Fraoigh (ಇನ್ನಿಷ್ ಫ್ರೇಯಿಕ್) ಎಂದಿದ್ದು, ಅದೇ ಇಂಗ್ಲಿಷ್ನಲ್ಲಿ ಇನ್ನಿಸ್ ಫ್ರೀ ಎಂದು ’ತದ್ಭವ’ಗೊಂಡಿತು. Inis ಅಂದರೆ ದ್ವೀಪ; Fraoigh ಅಂದರೆ ಹೆದರ್. ಒಂದು ಶತಮಾನದಲ್ಲಿ ಏನೆಲ್ಲ ಬದಲಾವಣೆ ಆಗಿದೆಯೇನೋ. ಅಂತೂ ಅದನ್ನು ನೋಡಿದ್ದಕ್ಕೆ ಏನೋ ಸಮಾಧಾನ.

Heather
Heather

1923 ರಲ್ಲಿ ಅತನಿಗೆ ನೋಬೆಲ್ ಪಾರಿತೋಷಕ ಸಿಕ್ಕಾಗ ಅದು ಐರಿಷ್ ಸಾಹಿತ್ಯಕ್ಕೆ ದೊstatue-poet-yeatsರಕಿದ ಮನ್ನಣೆಯೆಂದು ಸ್ವೀಕರಿಸಿದ. ಆ ಕವನದ ಏಳನೆಯ ಸಾಲಿನಲ್ಲಿ ಒಂದು ಸಂದಿಗ್ಧತೆಯಿದೆ. ”and noon a purple glow,” ಅದನ್ನು ಟೀಕಿಸಿದವರಿದ್ದರು. ಅದಕ್ಕೆ ಉತ್ತರವಾಗಿ “ಇದನ್ನು ಬರೆಯುವಾಗ ತಾನು ನಡುಹಗಲಿನ ಹೆದರಿನ ನೇರಳೆ ಹೂಗಳ ಕಾಂತಿಯನ್ನು ನೆನೆದಿರಬೇಕು“ ಎಂದು ಎಷ್ಟೋ ಸಮಯದ ನಂತರ 1932ರಲ್ಲಿಅವನ ಸಮರ್ಥನೆ!  (ಇಲ್ಲಿ ಕೇಳಿರಿ: https://youtu.be/u2FT4_UUa4I)  ಕೊನೆಗೆ ಸ್ಲೈಗೋ ಪಟ್ಟಣದ ಮಧ್ಯದಲ್ಲಿ ನಿಂತಿರುವ ಕವಿಯ ಉತ್ತುಂಗ ಕಂಚಿನ ಶಿಲ್ಪವನ್ನು ನೋಡಿ  ಮರಳಿದೆ. ಅದರ ಮೇಲೆಲ್ಲ ಅವನ ಕವನಗಳನ್ನು ಕೆತ್ತಿರುವರು. ನೀವು ಓದಿರದಿದ್ದರೆ ಕೆಳಗೆ ಪೂರ್ತಿಯಾಗಿ ಕೊಟ್ಟ ಆ ಕವನವನ್ನು ಓದಿ ಆನಂದಿಸಿ.

The Lake Isle of Innisfree(1890)

I will arise and go now, and go to Innisfree,

And a small cabin build there, of clay and wattles made;

Nine bean-rows will I have there, a hive for the honey-bee,

And live alone in the bee-loud glade.

And I shall have some peace there, for peace comes dropping slow,

Dropping from the veils of the morning to where the cricket sings;

There midnight’s all a glimmer, and noon a purple glow,

And evening full of the linnet’s wings.

I will arise and go now, for always night and day

I hear lake water lapping with low sounds by the shore;

While I stand on the roadway, or on the pavements grey,

I hear it in the deep heart’s core.

-ಶ್ರೀವತ್ಸ ದೇಸಾಯಿ