ಸುಮಾರು ೧೮ ವರ್ಷಗಳ ಹಿಂದೆ,ಕ್ಯಾಲಿಫೋರ್ನಿಯಾದ ಮಹಾನಗರ ಲಾಸ್ ಏಂಜಲೀಸ್ ಪಟ್ಟಣದ ಹೊರವಲಯದ ಪಸಡೀನಾದಲ್ಲಿರುವ, ಜಗತ್ಪ್ರಸಿದ್ಧ ಕ್ಯಾಲಿಫೋರ್ನಿಯಾದ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ (California Institute of Technology, CALTECH) ಸಂದರ್ಶಕ ವಿಜ್ಞಾನಿಯಾಗಿದ್ದ ನನ್ನ ಪತಿಯ ಜೊತೆಯಲ್ಲಿ ಸಹಭಾಗಿತ್ವ ಸಂಶೋಧನೆ ನಡೆಸಿದ್ದ ಅಲ್ಲಿನ ಪ್ರಸಿದ್ಧ ಸೈದ್ಧಾಂತಿಕ ಖಭೌತವಿಜ್ಞಾನಿ, ಪ್ರೋಫೆಸ್ಸರ್ ಕಿಪ್ ಥಾರ್ನ್, ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಸಿದ್ಧಿಯಾದವರು.

1991ರಿಂದಲೇ, ಈ ವಿಜ್ಞಾನಿಯ ಹೆಸರು ನನಗೆ ಪರಿಚಿತವಿದ್ದು, 1996ರಲ್ಲಿ ಕಿಪ್ ಥಾರ್ನ್ ಅವರನ್ನು ಮುಖತಃ ಭೇಟಿಯಾಗುವ ಸೌಭಾಗ್ಯ ದೊರೆತಿತ್ತು. ಸಾಮಾನ್ಯ ಸಾಪೇಕ್ಷತೆ (General relativity), ಗುರುತ್ವದ ಅಲೆಗಳು (Gravitational waves), ಹಾಗೂ ಕಪ್ಪು-ಕುಳಿಗಳ (Black holes) ಬಗ್ಗೆ ಅತ್ಯುನ್ನತ ಮಟ್ಟದ ಸಂಶೋಧನೆಯಲ್ಲಿ, ಸುಮಾರು ೪೦ ವರ್ಷಗಳಿಂದ ಕಾರ್ಯನಿರತರಾಗಿರುವ, ಈ ಖಭೌತವಿಜ್ಞಾನಿ, 2006 ರ ಸಮಯದಲ್ಲಿ ಹಾಲಿವುಡ್ಡಿನ ಚಲನಚಿತ್ರವೊಂದರಲ್ಲಿ, ವೈಜ್ಞಾನಿಕ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಭೌತಶಾಸ್ತ್ರ ವಲಯದಲ್ಲಿ ಕಲರವವನ್ನೆಬ್ಬಿಸಿತ್ತು. ಈಗ ೮ ವರ್ಷಗಳಿಂದ ಆ ಚಿತ್ರದ ತಯಾರಿಕೆಯ ಬಗ್ಗೆ ನಮ್ಮ ಕುತೂಹಲ ಬಹಳವಾಗಿದ್ದು, ಇದರ ಬಿಡುಗಡೆಗಾಗಿ ನಾವೆಲ್ಲಾ ಕಾಯುತ್ತಿದ್ದೆವು. “Interstellar” ಅಂದರೆ, ಅಂತರತಾರಾ, ಅಥವಾ ಅಂತರನಕ್ಷತ್ರೀಯ, ಎಂಬ ಅರ್ಥವನ್ನು ಕೊಡುವ ಹೆಸರಿನ ಈ ಚಲನಚಿತ್ರ, ಕಳೆದ ನವೆಂಬರ್ ೫ನೆಯ ತಾರೀಖು,ಕ್ಯಾಲಿಫೋರ್ನಿಯಾ ಮತ್ತು ನವೆಂಬರ್ ೭ರಂದು ಜಗತ್ತಿನ ಎಲ್ಲೆಡೆ ಬಿಡುಗಡೆಯಾಯಿತು.
Read More »