
(ಕನ್ನಗಡಿಗರು ಹೊರದೇಶಕ್ಕೆ ಹೋಗುವಾಗ ತಮ್ಮ ಜೊತೆ ಹೊತ್ತೊಯ್ಯಲು ಸಾಧ್ಯವಾಗುವುದು ಕೆಲವೇ ವಸ್ತುಗಳನ್ನು. ಆದರೆ ವಲಸೆ ಹೋದ ದೇಶಗಳಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳುವಾಗ ಅವರಿಗೆ ಅಂದುಕೊಂಡದ್ದಕ್ಕಿಂತ ಹೆಚ್ಚನ್ನು ಹೊತ್ತು ತಂದಿರುವುದು ಅರಿವಾಗುತ್ತದೆ. ಅರಿವಿಲ್ಲದಂತೆಯೇ ಅವರೊಡನೆ ಬಂದ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ ಎಲ್ಲ ಅವರ ಗುರುತುಗಳಾಗುತ್ತವೆ. ವಿದೇಶಿ ನೆಲದಲ್ಲಿ ಈ ಮೌಲ್ಯಗಳು ಸ್ವದೇಶೀ ತುಣುಕುಗಳನ್ನು ಸೃಷ್ಟಿಸುತ್ತವೆ. ಈ ನೆಲದಲ್ಲಿ ಬೆರೆಯಲು ಸಮಾನ ಆಸಕ್ತಿಯಿರುವ ಮನಗಳು ತುಡಿಯುತ್ತವೆ. ಸಮುದಾಯಗಳು ಕಲೆಯುತ್ತವೆ. ಕನ್ನಡದ ಬದುಕು ಮತ್ತೆ ಜೊತೆಯಾಗಿ ಮುಂದುವರೆಯುತ್ತದೆ.
ಆದರೆ ಹಲವು ದಶಕಗಳ ಕಾಲ ಇಲ್ಲಿ ಸಾಹಿತ್ಯಕ್ಕಾಗಿ ಯಾವುದೇ ನಿಗಧಿತ ಗುಂಪಿರಲಿಲ್ಲ. ಆದರೆ ಸಾಹಿತ್ಯದಲ್ಲಿ ಆಸಕ್ತಿಯಿರುವ ಕೆಲವರು ಒತ್ತಟ್ಟಿಗೆ ಬಂದದ್ದು 2014 ರಲ್ಲಿ. ಕೇವಲ ನಾಲ್ಕು ತಿಂಗಳ ನಂತರ ಗುಂಪಿನ ಮೊದಲ ಅಧಿಕೃತ ಸಭೆ ನಡೆಯುವ ಹೊತ್ತಿಗೆ ಈ ಸಂಖ್ಯೆ ದ್ವಿಗುಣಗೊಂಡಿತ್ತು.ಇವರಲ್ಲಿ ಯಾರೂ ಕನ್ನಡವನ್ನೇ ಓದಿದವರಿರಲಿಲ್ಲ. ಪ್ರತಿಯೊಬ್ಬರೂ ಅತ್ಯಂತ ಬ್ಯುಸಿ ಎನ್ನುವ ಜೀವನ ಶೈಲಿಯ ವೃತ್ತಿಗಳಲ್ಲಿ ಇದ್ದವರೇ.
ಯಾವುದೇ ಸಂಘ-ಸಂಸ್ಥೆಗಳ ಹಣಕಾಸಿನ ಸಹಾಯದ ಹಂಗಿಲ್ಲದಂತೆ ಅನಿವಾಸಿಯ ಕೆಲವರು ಸದಸ್ಯರು ಸ್ವಯಂ ಪ್ರೇರಿತರಾಗಿ ದೇಣಿಗೆಯ ಮೂಲಕ ಅಂತರ್ಜಾಲದ ಸಾಹಿತ್ಯ ಜಗಲಿಯನ್ನು ನಿಭಾಯಿಸುತ್ತಿದ್ದಾರೆ. ಈ ಜಾಲ ತಾಣ ಐದು ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರತಿ ಶುಕ್ರವಾರ ಈ ದೇಶದಲ್ಲಿರುವ ಕನ್ನಡ ಬರಹಗಾರರ ಒಂದು ಬರಹವನ್ನು ತಪ್ಪದೆ ಪ್ರಕಟಿಸುತ್ತ ಬಂದಿದೆ.
ಕನ್ನಡ ನಾಡಿನ ಸಮಸ್ತ ಜನಸ್ತೋಮಕ್ಕೆ ತೆರದ ಬಾಗಿಲಿನ ಪಾಲಿಸಿಯನ್ನು ಅನುಸರಿಸುವ ಹಲವು ಅಂತರ್ಜಾಲ ಸಾಹಿತ್ಯಕ ತಾಣಗಳು ಕೂಡ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಲು ಶ್ರಮಪಡುತ್ತವೆ. ಹಲವಾರು ತಾಣಗಳು ಮುಂದುವರೆಯಲಾಗದೆ ಮುಚ್ಚಿಹೋಗಿವೆ.ಅಂಥದ್ದರಲ್ಲಿ ದೂರದ್ದೊಂದು ಪುಟ್ಟ ದ್ವೀಪದ ಬಹಳ ಕಡಿಮೆ ಎನ್ನುವಷ್ಟು ಕನ್ನಡಿಗರಿರುವ ಯುನೈಟೆಡ್ ಕಿಂಗ್ಡಂ ನಲ್ಲಿ ಬೆರಳೆಣಿಕೆಯಷ್ಟು ಕನ್ನಡದಲ್ಲಿ ಸಾಹಿತ್ಯ ಬರೆಯುವ ಮತ್ತು ಓದುವ ಜನರು ನಡೆಸುತ್ತಿರುವ ಅನಿವಾಸಿ ಸಾಹಿತ್ಯ ಜಗಲಿಯ ಸಾಧನೆ ದೊಡ್ಡದೇ. ಸಾಹಿತ್ಯದಲ್ಲಿ ತೊಡಗಿಕೊಂಡ ಈ ಗುಂಪಿನಲ್ಲಿ ಯಾರೂ ಮುಖಂಡರಲ್ಲ. ಯಾವುದೇ ಪದವಿಗಳಿಲ್ಲ. ಈ ಅನುಕ್ರಮದಲ್ಲಿ ಅನಿವಾಸಿ ಐದು ಮುಗಿಸಿ ಆರು ವರ್ಷಗಳನ್ನು ಸಮೀಪಿಸುತ್ತಿದೆ. ಈ ಸಮಯದಲ್ಲಿ ಅನಿವಾಸಿ ನಡೆದು ಬಂದ ಹಾದಿಯ ಹಿನ್ನೋಟವೇ ಈ ಸರಣಿ ಮಾಲೆ.
ಮೊದಲಿಗೆ ಈ ಗುಂಪಿನ ಹಿರಿಯರಾದ ಶ್ರೀವತ್ಸ ದೇಸಾಯಿಯವರ ಬರಹ. ಹುಟ್ಟಿನಿಂದ ಈವರೆಗೆ ಅನಿವಾಸಿಯ ಬಹುತೇಕ ಪ್ರತಿ ಸಭೆಯ ನಿಮಿಷಗಳನ್ನು ದಾಖಲಿಸಿ, ಎಲ್ಲ ಬರಹಗಳ ಕಡತವನ್ನು ಕಾದಿರಿಸಿ, ಫೋಟೋಗಳ ಸಮೇತ ಜೋಪಾನವಾಗಿಟ್ಟು ಈ ಗುಂಪನ್ನು ಕಾದಿರುವ ದೇಸಾಯಿಯವರು ಅತ್ಯಂತ ಉತ್ಸಾಹದಿಂದ ಅನಿವಾಸಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಪ್ರತಿ ಬರಹಕ್ಕೆ ಸ್ಪಂದಿಸಿ ಉತ್ತೇಜನದ ಮಾತುಗಳನ್ನು ಆಡಿ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡಿದವರು. ಈ ಗುಂಪಿನಲ್ಲಿ ಒಂದು ವ್ಯವಸ್ಥೆಗೆ ಮಾರ್ಗದರ್ಶನವನ್ನು ನೀಡಿದವರು. ಹೀಗಾಗಿ ಅನಿವಾಸಿಯ ಇದುವರೆಗಿನ ಪಯಣದ ಬಗ್ಗೆ ಗುರುತರವಾದ ದಾಖಲೆಗಳ ಸಮೇತ ಲೇಖನವನ್ನು ಬರೆದುಕೊಡಿ ಎಂದು ಕೋರಿದಾಗ ತಮ್ಮೆಲ್ಲ ಕಡತಗಳ ಮೇಲೆ ಕಣ್ಣು ಹಾಯಿಸಿ ಅನಿವಾಸಿಗಾಗಿ ಯಾವತ್ತಿಗೂ ಬೆಲೆಯುಳ್ಳ ಲೇಖನವನ್ನು ಬರೆದುಕೊಟ್ಟಿದ್ದಾರೆ. ಅನಿವಾಸಿ ನಡೆದು ಬಂದ ದಾರಿಯ ಕಡೆ ಒಂದು ಸಮಗ್ರ ನೋಟವನ್ನು ಹರಿಸಿದ್ದಾರೆ. ಅನಿವಾಸಿಯ ಜೊತೆಗಿನ ತಮ್ಮ ವಯಕ್ತಿಕ ಹಾದಿಯನ್ನೂ ಮೆಲುಕು ಹಾಕಿದ್ದಾರೆ.ಅದರ ಮೊದಲ ಕಂತಿದು.
ಸಮಸ್ತರಿಗೂ ದೀಪಾವಳಿಯ ಶುಭಾಶಗಳೊಂದಿಗೆ ಈ ಸರಣಿಯ ಆರಂಭ –ಡಾ.ಪ್ರೇಮಲತ ಬಿ. )
’ಅನಿವಾಸಿ’ಯ ಹುಟ್ಟು:
ಅದೊಂದು ಅಮೃತ ಘಳಿಗೆ!
(1) 19-10-2013, ಯೂಟೋಕ್ಸಿಟರ್ ಮೋಟರ್ವೇ ಸರ್ವಿಸ್ ಸ್ಟೇಷನ್ (A 50 Uttoxeter)
ಎಲ್ಲಿದೆ ಯೂಟೋಕ್ಸಿಟರ್? ’ಏನ ಕೇನ ಪ್ರಕಾರೇಣ…’ ಕೆಲವು ಊರುಗಳು ಪ್ರಸಿದ್ಧವಾಗುತ್ತವೆಯಲ್ಲವೆ? ಭೌಗೋಳಿಕವಾಗಿ ಇಂಗ್ಲೆಂಡಿನ ಮಧ್ಯವರ್ತಿ ಸ್ಥಳ ಈ ಊರು. ಕೆಲವು ಯು.ಕೆ. ವಾಸಿ ಸಾಹಿತ್ಯಾಸಕ್ತರು ಆ ದಿನ ಅಲ್ಲಿ ಕೂಡಿದಾಗ ಕ ಸಾ ಸಾಂ ವಿ ವೇ(KSSVV) ದ ಹುಟ್ಟು ಆಯಿತೆಂದು ಹೇಳಬಹುದು. ಆಗ ಕಾರ್ಡಿಫ್ ನಲ್ಲಿ ವಾಸಿಸುತ್ತಿದ್ದ ಡಾ.ಉಮಾ ವೆಂಕಟೇಶ್, ಮ್ಯಾಂಚಸ್ಟರ್ ಕಡೆಯಿಂದ ಡಾ ವತ್ಸಲಾ ರಾಮಮೂರ್ತಿ, ಡಾರ್ಬಿಯಿಂದ ಡಾ ಕೇಶವ ಕುಲಕರ್ಣಿ, ಸೌತ್ ಯಾರ್ಕ್ಶೈರ್ ನಿಂದ ಡಾ ಜಿ .ಎಸ್. ಶಿವಪ್ರಸಾದ್ ಮತ್ತು ಡೋಂಕಾಸ್ಟರಿನಿಂದ ಡಾ. ಶ್ರೀವತ್ಸ ದೇಸಾಯಿ ಆ ದಿನ ಬೆಳಿಗ್ಗೆ ಅಲ್ಲಿ ಕೂಡಿದ್ದರು.
ಅದಕ್ಕೂ ಮೊದಲು ಒಬ್ಬೊರಿಗೊಬ್ಬರು ಸಮಕ್ಷಮ ಭೇಟಿಯಾಗಿ ಕೆಲವರಷ್ಟೇ ಸ್ವಲ್ಪ ಪರಿಚಿತರಾಗಿದ್ದರೂ ಎಲ್ಲರೂ ಒಬ್ಬೊರನ್ನೊಬ್ಬರು ನೋಡಿರಲಿಲ್ಲ. ಉಮಾ ಅವರು ಪ್ರತ್ಯೇಕವಾಗಿ ಎಲ್ಲ್ರನ್ನು ಈ-ಮೇಲಿನ ಮುಖಾಂತರ ಈ ಮೊದಲೇ ಸಂಪರ್ಕಿಸಿದ್ದರು. ಕೆಲವರೊಡನೆ ಫೋನಿನಲ್ಲಿ ಮಾತಾಡಿದ್ದರು. ಯು ಕೆ ಕನ್ನಡಿಗರಲ್ಲಿ ಕನ್ನಡದ ”ವಿಚಾರ ವೇದಿಕೆ”ಯನ್ನು ಶುರು ಮಾಡಬೇಕೆಂಬ ಅದಮ್ಯ ಆಸೆ ಉಮಾ ಅವರಲ್ಲಿ ಬಹುದಿನಗಳಿಂದಲೂ ಜ್ವಲಂತವಾಗಿತ್ತು. ಹೇಗೆ ಪ್ರಾರಂಭ ಮಾಡಬೇಕು? ಯಾರನ್ನೆಲ್ಲ ಕೂಡಿಸಬೇಕು? ಯಾವ ಸ್ಥಳದಲ್ಲಿ? ಈ ಪ್ರಶ್ನೆಗಳು ಈಗ ಬಹು ಸುಲಭ ಅನಿಸಿದರೂ, ಆಗ ಅದೊಂದು ಕಠಿಣ ಸಮಸ್ಯೆಯೇ ಆಗಿತ್ತು.

ಹಾಗೆ ನೋಡಿದರೆ ಯು.ಕೆ. ದಲ್ಲಿಯ ಕನ್ನಡಿಗರಲ್ಲಿ ಒಂದು ಕನ್ನಡದ ’ಪತ್ರಿಕೆ-ವೇದಿಕೆ’ ಪ್ರಾರಂಭ ಮಾಡುವ ವಿಚಾರ ಹೊಸದೇನೂ ಆಗಿರಲಿಲ್ಲ. ಕನ್ನಡವನ್ನು ಹೊರದೇಶದಲ್ಲಿ ವಾಸಿಸುವ ಕನ್ನಡಿಗರಲ್ಲಿ ಮತ್ತು ಅವರ ಮುಂದಿನ ಪೀಳಿಗೆಯಲ್ಲಿ

ಜೀವಂತ ಉಳಿಸಿ ಕೊಳ್ಳಬೇಕಾದರೆ ಇಂಥದೊಂದು ಮಾಧ್ಯಮದ ಅವಶ್ಯಕತೆಯಿದೆಯೆಂದಲೇ ಯು .ಕೆ. ಕನ್ನಡ ಬಳಗ ಆರಂಭದ ವರ್ಷಗಳಲ್ಲಿ ’ಸಂದೇಶ” ಎನ್ನುವ ’ಕೈಬರಹ”ದ ಪತ್ರಿಕೆಯನ್ನು 1984ರಲ್ಲಿ ಆರಂಭ ಮಾಡಿತ್ತು. ವತ್ಸಲಾ ಅವರಿಗೆ ಅದರ ಪ್ರತ್ಯಕ್ಷ ವೈಯಕ್ತಿಕ ಅನುಭವವಿತ್ತು ಸಹ.
ಆ ಮಾತಿಗೆ ಈಗ ಮೂವತ್ತೈದು ವರ್ಷಗಳು ಸಂದಿವೆ. ಎಲ್ಲರಿಗೂ ’ಬರಹ’ ಎಂಬ ಕನ್ನಡದ ಗಣಕಯಂತ್ರ ತಂತ್ರಾಂಶವಾದ ಪರಿಚಯವಾಗಲು ಪ್ರಾರಂಭವಾಗಿತ್ತು. ಆಗ ತಾನೆ ಇಂಟರ್ನೆಟ್ ತುಂಬ ’ಬ್ಲಾಗ್’ ಗಳು ದಿನೇ ದಿನೇ ಹುಟ್ಟುತ್ತಿದ್ದವು. ಇತ್ತಿತ್ತಲಾಗಿ ಕೆಲವು ತಿಂಗಳುಗಳಿಂದಲೇ ಇಂಟರ್ನೆಟ್ಟಿನಲ್ಲಿ ಕನ್ನಡ ಬ್ಲಾಗ್ ಅಥವಾ ಮ್ಯಾಗಝಿನ್ ತೆಗೆಯ ಬೇಕು, ಯು .ಕೆ. ಕನ್ನಡಿಗರು ಅದರಲ್ಲಿ ಬರೆಯಲು ಅವಕಾಶವಿರಬೇಕೆಂದು ಉಮಾ ವೆಂಕಟೇಶ್ ಮತ್ತು ಡಾ ಜಿ ಎಸ್ ಎಸ್ ಪ್ರಸಾದರು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಮಾತಾಡುತ್ತಿದ್ದರೆಂದು ತಿಳಿದು ಬಂದಿತ್ತು. ಅವರಿಬ್ಬರು ಕನ್ನಡ ಬಳಗದಲ್ಲಿ ಕಮಿಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದಲ್ಲದೆ ಅವರು ಕನ್ನಡ ಬಳಗದಿಂದ ಹೊರಡುತ್ತಿದ್ದ ’ಸಂದೇಶ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲೂ ಇದ್ದರು.(ಈಗಲೂ ಅದರ ಹಳೆಯ ಸಂಚಿಕೆಗಳು KBUK ವೆಬ್ ಸೈಟಿನಲ್ಲಿ ಓದಲು ಸಿಗುತ್ತವೆ). 1980ರ ದಶಕದಲ್ಲಿ ಈ ದೇಶದಲ್ಲಿ ವಾಸಿಸುತ್ತಿದ್ದ ಕನ್ನಡಿಗರೆಲ್ಲರೂ ಕನ್ನಡ ಬಳಗದ ಸದಸ್ಯರಾಗಿದ್ದಿಲ್ಲ, ಯು ಕೆ ದಲ್ಲಿ ದೂರದೂರದ ಊರುಗಳಲ್ಲಿ ಚದುರಿ ಹೋಗಿದ್ದ ಕನ್ನಡಿಗರಿಗೆ ಬಳಗದ ಎಲ್ಲ ಕಾರ್ಯಕ್ರಮಗಳಲ್ಲಿ ಸೇರುವ ಅವಕಾಶ ಕಾರಣಂತರಗಳಿಂದ ಒದಗಿ ಬರುತ್ತಿರಲಿಲ್ಲ. ಅಂದ ಮೇಲೆ ಕಥೆ, ಕವಿತೆ, ಬರೆಯುವದರಲ್ಲಿ ಪಳಗಿದ, ಬರೆಯುವ ಉತ್ಸಾಹವಿದ್ದವರನ್ನು ಹೇಗೆ ಪತ್ತೆ ಹಚ್ಚಿ ಅವರಿಂದ ಇಂಥ ಒಂದು ದಿಜಿಟಲ್ ಮೀಡಿಯಾದ ಮುಖಾಂತರ ಇದನ್ನು ಮುಂದುವರೆಸಬೇಕು ಅಂತ ತಮ್ಮತಮ್ಮೊಳಗೆ ಚರ್ಚೆ ನಡೆಸುತ್ತಿದ್ದರೇ ಹೊರತು ಅದು ಕನಸಾಗಿಯೇ ಉಳಿದಿತ್ತು. ಒಂದು ದಿನ ಹೇಗೋ ಯಾರೋ ಹೇಳಿದಂತೆ ಟೆಕ್ನಿಕಲ್ ವಿಷಯಗಳಲ್ಲಿ ಉಳಿದವರಿಗಿಂತ ಹೆಚ್ಚು ಪರಿಣಿತಿಯಿದ್ದ ಕೇಶವ ಕುಲಕರ್ಣಿಯವರನ್ನು ಸಂಪರ್ಕಿಸಿ ಆಸಕ್ತರೆಲ್ಲ ಕೂಡಿ ಚರ್ಚೆ ಮಾಡೋಣವೇ ಅಂತ ಕೇಳಿದಾಗ ಕೇಶವ ಅವರ ಪ್ರವಾದಿಯ ನ್ಯೂನೋಕ್ತಿಯಂಥ ಉತ್ತರ: ”ಯಾಕೆ ಕಣಿ ಕೇಳುತ್ತೀರಿ? ಶುರು ಮಾಡಿಬಿಡಿ!” ಹಾಗಾದರೆ ಕೂಡುವಾ ಅಂತ ನಿರ್ಧರಿಸಿದಾಗ ದೇಶದ ಮಧ್ಯದಲ್ಲಿಯ ಕೇಶವ ಅವರೇ ಹುಡುಕಿದ ’ವೆನ್ಯೂ’ ಆ ಯುಟೋಕ್ಸಿಟರ್! ನಮ್ಮವರಲ್ಲಿ ಯಾರೂ ಹೆಸರೇ ಕೇಳಿರದ ಆ ಊರು ಈಗ ಅನಿವಾಸಿಯ ಐತಿಹಾಸಿಕ ದಾಖಲೆಯಲ್ಲಿ ಚಿರಸ್ಮರಣೀಯ ಸ್ಥಾನ ಪಡೆದಿದೆ!
ಅಂದು ಕೂಡಿದ ಐವರು:
ಕೇಶವ ಕುಲಕರ್ಣಿ, ಉಮಾ ವೆಂಕಟೇಶ್, (ಜಿ ಎಸ್ ಎಸ್) ಗುಗ್ಗರಿ ಪ್ರಸಾದ, ವತ್ಸಲಾ ರಾಮಮೂರ್ತಿ, ಶ್ರೀವತ್ಸ ದೇಸಾಯಿ.
ಸಭೆಯ ಪೂರ್ವದಲ್ಲಿ ನಾನು ಮಾಡಿಟ್ಟುಕೊಂಡು ಒಯ್ದ ಟಿಪ್ಪಣಿಗಳು ಹೀಗಿವೆ:

To discuss;
- Mission statement
- Constitution:
Who will be members? How to admit? What is our commitment?
3, Communication; How, where to meet?
4, E- magazine? Blog (ಆಗ ತಾನೆ ನಮಗೆ ಬ್ಲಾಗ್ ದ ಕಲ್ಪನೆ ಬರುತ್ತಲಿತ್ತು) How to publish? ನಮಗಾರಿಗೂ ಅನುಭವವಿರಲಿಲ್ಲ. ಬಹುತೇಕ ಎಲ್ಲರಿಗೂ Baraha software ಉಪಯೋಗಿಸಿ ಗೊತ್ತಿತ್ತು. ಆದರೆ ಹೇಗೆ ಪ್ರಕಟಿಸುವದು, ಯಾರಿಗೂ ಗೊತ್ತಿರಲಿಲ್ಲ. (ಶಿಶುವಿನ ಅಂಬೆಗಾಲಿನ ಕ್ಷಣಗಳಿವು. ಈಗ ಇದೆಲ್ಲ ಅತಿ ಸುಲಭ ಅಥವಾ ಹಾಸ್ಯಾಸ್ಪದ ಅನಿಸಿದರೂ ಆಗ ಪ್ರತಿಯೊಂದು ಸಣ್ಣ mole hill ಸಹ ಮೇರುಪರ್ವತವಾಗಿ ಕಾಣುತ್ತಿತ್ತು!)
- Money?
- Membership: Who all can join? Resignation/termination (this was a very far sighted thought, or premonition because it was to haunt us 5 years later!) ಯಾಕಂದರೆ ನಾನು 20 ವರ್ಷಗಳಿಂದಲೂ ನಮ್ಮೂರಿನ ಒಂದು ವಿಡಿಯೋ ಕ್ಲಬ್ಬಿನ ಸದಸ್ಯನಾಗಿದ್ದೆ. ಅದರ Constitution ದಲ್ಲಿಯೂ ಆ ವಿಷಯದ ಪ್ರಸ್ತಾಪವಿತ್ತು!).
ಚೊಚ್ಚಲು ’ಸಭೆ’
ನಾವು ಕೂಡಿದ ಸ್ಥಳ ಒಂದು ಸಾಮಾನ್ಯ ಮೋಟರ್ವೇ ಸರ್ವಿಸಸ್ ಆಗಿತ್ತು. ನಿಗದಿತ ಸಮಯದಲ್ಲಿ ನಾವೆಲ್ಲ ಬಂದು ಕೂಡಿದೆವು. ಅದು ನಮ್ಮ ಮೊದಲ ಭೇಟಿ. ನಾವು ಒಂದು ರೂಮು ಸಹ ತೆಗೆದುಕೊಡಿರಲಿಲ್ಲ. ಲಭ್ಯವಿತ್ತೋ ಇಲ್ಲವೋ ಗೊತ್ತಿಲ್ಲ. ಒಂದು ಮೂಲೆಯ ಟೇಬಲ್ ಸುತ್ತ ಕುಳಿತು ಶುರುಮಾಡಿದೆವು. ಉಮಾ ಅವರು ತಮ್ಮ ಪೀಠಿಕೆಯಲ್ಲಿ ಮೇಲಿನ ವಿಚಾರಗಳ ಹಿನ್ನೆಲೆ ಕೊಟ್ಟಂತೆ ನೆನಪು.
ನಾಮಕರಣ: ನಮ್ಮ ವಿಚಾರ ವೇದಿಕೆಯನ್ನು ಏನೆಂದು ಕರೆಯುವದು? ಅದರಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಎರಡೂ ಪ್ರಮುಖವಾಗಿರಬೇಕು. ಉದ್ದವಾದರೂ, ಬಾಯಿ ತುಂಬಿದರೂ, ದೀರ್ಘ ಚರ್ಚೆಯಾದ ನಂತರ ಕೊನೆಗೆ ಎಲ್ಲರೂ ಒಪ್ಪಿದ್ದು: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ! ನಂತರ Mission statement ಮತ್ತು ಉದ್ದೇಶಗಳ ಬಗ್ಗೆ ಚರ್ಚೆಯಾಗಿತು. (ಅವನ್ನು ಕನ್ನಡದ ”ಅನಿವಾಸಿ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೇವೆ).
ಪ್ರಕಟಣೆ:
ತಾಂತ್ರಿಕ ಪಟು ಕೇಶವ ಅವರ ಸಲಹೆ ಇಲ್ಲಿ ಅಮೂಲ್ಯವಾಗಿತ್ತು. ಅವರಿಗೆ ತಮ್ಮದೇ ಒಂದು ಬ್ಲಾಗ್ ಕೆಲಕಾಲದಿಂದಲೂ ಸಂಭಾಳಿಸಿದ ಅನುಭವವಿತ್ತು. ನಮ್ಮ ಕಿಸೆಯಲ್ಲಿ ಮುಂಗಡ ಹಣ ಇಲ್ಲ. ಇಂಟರ್ನೆಟ್ ನಲ್ಲಿ ಫ್ರೀ ಪೋರ್ಟಲ್ ಗಳು ಬಹಳ ಇವೆ, ಉದಾ: ವರ್ಡ್ ಪ್ರೆಸ್. ಎಂದರು ಕೇಶವ. ಅವಧಿ ಇತ್ಯಾದಿ ಟೈಟಲ್ ಗಳ ಪರಿಚಯ ಮಾಡಿಸಿದರು. ಬರಹಗಳನ್ನು ಮೊದಲು ತಿಂಗಳಿಗೊಮ್ಮೆ ಪ್ರಕಟಿಸುವ ವಿಚಾರವಿತ್ತು. ಮ್ಯಾಗಝಿನ್ ”ಕಸಾಸಾಂವಿವೇ” KSSVV ಎನ್ನುವ ಹೆಸರಿನಲ್ಲೇ ಪ್ರಾರಂಭವಾಯಿತು.. ಮುಂದಿನ ಘಟ್ಟದಲ್ಲಿ ಬುಕ್ ಕ್ಲಬ್ ಸ್ಥಾಪಿಸುವ ವಿಚಾರ ಅಂದೇ ಸುಳಿದಿದ್ದರೂ ಆ ಯೋಜನೆ ಬಹುಸಮಯದ ವರೆಗೆ ಕೈಗೂಡಲಿಲ್ಲ.
ಸುಮಾರು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಚರ್ಚಿಸಿದ್ದಾಯಿತು. ಎಲ್ಲರಲ್ಲಿ ಒಂದು ಹೊಸ ಉತ್ಸಾಹ ತುಂಬಿ ತುಳುಕುತ್ತಿತ್ತು. ಏನೋ ಹೊಸ ದಾರಿಯ ನಾಂದಿ ಹಾಕಿದಂಥ ಅನುಭವ! ಎಲ್ಲರೂ ತಮ್ಮ ತಮ್ಮ ಈ-ಮೇಲ್ ವಿಳಾಸ, ಟೆಲಿಫೋನ್ ನಂಬರು ವಿನಿಮಯ ಮಾಡಿಕೊಂಡು ಆ ಭೇಟಿಯ ನೆನಪಿನಗಾಗಿ ಒಂದು ಗ್ರುಪ್ ಫೋಟೊ (Photo1)ತೆಗೆಸಿಕೊಂಡು ತಿಂಡಿ ತಿಂದು ಒಬ್ಬರನ್ನೊಬ್ಬರು ಬೀಳ್ಕೊಟ್ಟೆವು.
PS: ಆಗ ತಾನೇ ಈ ದೇಶದಲ್ಲಿ ಪಾರ್ಕಿಂಗ್ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮರಾಗಳ ಸ್ಥಾಪನೆಯಾಗಿತ್ತು. ನಮ್ಮ ಕೂಟ ಎರಡು ಗಂಟೆಯ ಗಡವು ದಾಟಿದ್ದರಿಂದ ಒಂದು ವಾರದ ನಂತರ ನನ್ನ ಮನೆಯ ಟಪಾಲಿನಲ್ಲಿ ತೊಂಬತ್ತು ಪೌಂಡಿಗಳ ಫೈನ್ ನೋಟಿಸ್ ಬಂದು ಬಿದ್ದಿತ್ತು. ಜಾಲಜಗುಲಿ ವರ್ರ್ಡ್ ಪ್ರೆಸ್ಸಿನ ಮೂರು ವರ್ಷಗಳ ಚಂದಾ ನಾನೇ ತೆತ್ತ ಲೆಕ್ಕ. ಆದರೂ ಮನಸ್ಸಿಗೆ ಏನೂ ಬೇಜಾರಾಗಲಿಲ್ಲ. ಇಂಥ ಶುಭಾರಂಭವಾದಮೇಲೆ ಅದೊಂದು ಬರೀ ದೃಷ್ಟಿ ಬೊಟ್ಟು ಅಂತ ಸಮಾಧಾನ ಪಟ್ಟುಕೊಂಡೆ!
ಲೇಖನ ಮತ್ತು ಚಿತ್ರಗಳು: ಶ್ರೀವತ್ಸ ದೇಸಾಯಿ
(ಮುಂದಿನ ವಾರ -ಅನಿವಾಸಿ ನದೆದುಬಂದ ಹಾದಿ… ಭಾಗ ೨)
ಯುಗಾದಿ ಎಂದಾಕ್ಷಣ ಕನ್ನಡದ ಬಹುತೇಕ ಎಲ್ಲ ಜನರಿಗೂ ನೆನಪಾಗುವುದು ದ ರಾ ಬೇಂದ್ರೆಯವರ ‘ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ’ ಎಂಬ ಸುಂದರ ರಸವತ್ತಾದ ಕವನ. ಯು ಕೆ ಕನ್ನಡ ಬಳಗದ ದುರ್ಮುಖಿ ನಾಮ ಸಂವತ್ಸರದ ೩೩ನೆಯ ಯುಗಾದಿ ಉತ್ಸವವು ದಿನಾಂಕ ೧೬-೦೪-೨೦೧೬, ಶನಿವಾರದಂದು ಇಂಗ್ಲೆಂಡಿನ ಮ್ಯಾಂಚೆಸ್ಟರನ ಪಾರ್ಸ್ ವುಡ್ ಶಾಲೆಯ ಆವರಣದಲ್ಲಿ ನಡೆಯಿತು. ಹೇಗೆ ಬಳ್ಳಾರಿ ಎಂದರೆ ನೆನಪಾಗುವದು ಬಿಸಿಲು ಮತ್ತು ಕಡು ಬಿಸಿಲೋ, ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮ್ಯಾಂಚೆಸ್ಟರ್ ಎಂದರೆ ಫುಟ್ಬಾಲ್ನ ಹೊರತಾಗಿ ನೆನಪಾಗುವದು ಮಳೆ ಮತ್ತು ವಿಪರೀತ ಮಳೆ! ಆದರೆ ಕಾರ್ಯಕ್ರಮದ ದಿನದಂದು ಶುಭ್ರವಾದ ಆಗಸ ಮತ್ತು ಮೈಯಿಗೆ ಮುದನೀಡುವ ಹದವಾದ ಬಿಸಿಲು ಬಂದಿರುವದು ಕಾರ್ಯಕ್ರಮದ ರುಚಿಯನ್ನು ಸವಿಯಲು ಬಂದ ಸಭಿಕರಿಗೆ ತುಂಬಾ ಸಹಕಾರಿಯಾಯಿತು. ಕಾರ್ ಪಾರ್ಕ್ ಮಾಡಲು, ಬಹು ವಿಶಾಲವಾದ ಸ್ಥಳವಿದ್ದದು ಜನರಿಗೆ ಅನೂಕೂಲವಾಯಿತು.
ಸಾಮಾಜಿಕ ತಾಣಗಳನ್ನು ಬಳಸಿಕೊಂಡು ದಾಖಲೆಯ ಸಂಖ್ಯೆಯಲ್ಲಿ ಸರಿ ಸುಮಾರು ೬೦೦ಕ್ಕೂ ಅಧಿಕ ಜನರು ಸೇರುವಂತೆ ಮಾಡಿದರು. ಹಣಕಾಸನ್ನು ಆರತಿಯವರ ತಂಡ ಬಹು ಸಮರ್ಥವಾಗಿ ನಿಭಾಯಿಸಿದರು. ಇದೆ ಮೊದಲ ಬಾರಿಗೆ ನೋಂದಣಿಯನ್ನು ೨ ವಾರಗಳ ಮೊದಲೇ ಮುಕ್ತಾಯ ಮಾಡಿದುದರಿಂದ, ಆರಂಭದಲ್ಲಿ ನೋಂದಣಿ ಸಮಯದಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿದರು. ಈ ತಂಡದ ಮಾರ್ಗದರ್ಶನವನ್ನು ಮುಂದಿನ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಂಡರೆ ಭವಿಷ್ಯದಲ್ಲಾಗುವ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲು ಕಾರಣವಾಗುತ್ತದೆ. ಪ್ರವೇಶದ್ವಾರದಲ್ಲಿದ್ದ ಸ್ವಾಗತ ಕಮಿಟಿ ಸದಸ್ಯರು ಸಭಿಕರನ್ನು ಮಂದಹಾಸದಿಂದ ಬರಮಾಡಿಕೊಂಡರೆ, ಅಲ್ಲಲ್ಲಿ ಹಚ್ಚಿದ್ದ ಮಾರ್ಗದರ್ಶಿ ಫಲಕಗಳು ತುಂಬಾ ಉಪಕಾರವಾದವು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ತುಸು ಸಮಯ ತಾಂತ್ರಿಕ ಅಡಚಣೆಯಾದರೂ ಸಹ, ಕಾರ್ಯಕ್ರಮದ ನಿರೂಪಣೆ ನಡೆಸಿದ ಕುಮಾರಿ ದಿಲ್ಲು ಮತ್ತು ನೀತುರವರ ಸಮಯ ಪ್ರಜ್ಞೆ ಮತ್ತು ಮುಖ್ಯ ನಿರೂಪಕರದಾದ ರಮೇಶ್ ಮತ್ತು ರಷ್ಮಿಯವರ ಮಾತನಾಡಿಸುವ ಕಲೆ, ಆಗಬಹುದಾದಂತಹ ಮುಜುಗರವನ್ನು ತಪ್ಪಿಸಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಿಗದಿಯ ಕಾರ್ಯಕ್ರಮದ ಕನಿಷ್ಠ ೧ ವಾರ ಮುಂಚಿತವಾಗಿ ತಮ್ಮ ನೃತ್ಯಕ್ಕೆ ಪೂರಕವಾದ ಗಾಯನವನ್ನು ಸಂಘಟಿಕರಿಗೆ ತಲುಪಿಸಿದರೆ ಇಂತಹ ಅಡಚಣೆಗಳನ್ನು ತಡೆಯಲು ಸಾಧ್ಯ ಮತ್ತು ಕಾರ್ಯಕ್ರಮವೂ ನಿಗದಿಯಾದಂತೆ ಮುಂದುವರಿಯಲು ಸಹಕಾರಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ತದನಂತರರ ವಾರಿಂಗ್ಟನ್, ವೊರ್ಸ್ಲೆ, ನಾಟಿಂಗ್ಹ್ಯಾಮ್, ಸ್ಥಳೀಯ ಮ್ಯಾಂಚೆಸ್ಟರ್ ಮತ್ತು ಹಲವಾರು ಕಡೆಯಿಂದ ಬಂದ ಚಿಣ್ಣರು ಹಾಡು, ನೃತ್ಯಗಳ ಮೂಲಕ ರಂಜಿಸಿದರು.
ಲೇಖಕರ ಲೇಖನಗಳಲ್ಲಿ ಕೆಲವನ್ನು ಆಯ್ದು ಪುಸ್ತಕದ ರೂಪದಲ್ಲಿ ಹೊರತಂದಿದೆ. ಇದಕ್ಕೆ ಜಾಲಜಗುಲಿಯನ್ನು ಎರಡು ವರ್ಷಗಳ ಕೆಳಗೆ ಉದ್ಘಾಟಿಸಿದ ಹೆಚ್ ಎಸ್ ವೆಂಕಟೇಶಮೂರ್ತಿಯವರೇ ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ. ಪುಸ್ತಕವನ್ನು ಅಧಿಕೃತವಾಗಿ ಇತ್ತೀಚೆಗೆ ನಮ್ಮನ್ನಗಲಿದ KBUKಯ ಹಿರಿಯ ಸದಸ್ಯ ಡಾ ರಾಜಾರಾಂ ಕಾವಳೆಯವರ ಪತ್ನಿ ಶ್ರೀಮತಿ ಪದ್ಮಾ ಅವರು ಸಭಿಕರ ಮುಂದೆ ಬಿಡುಗಡೆ ಮಾಡಿದರು. ನಂತರ ಪರ್ಯಾಯ ಕಾರ್ಯಕ್ರಮಗಳಲ್ಲೊಂದಾದ ಬಳಗದ ಸಾಹಿತ್ಯಾಸಕ್ತರು ಕೆಲವರು ತಮ್ಮ ಹಾಸ್ಯ ಕವನಗಳನ್ನು ಶ್ರೀಯುತರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿಯವರ ಉಪಸ್ಥಿತಿಯಲ್ಲಿ ಓದಿದರು. ಇದನ್ನು ನೆರೆದ ಪ್ರೇಕ್ಷಕರು ಮೆಚ್ಚಿಕೊಂಡರು.
ಹೆಚ್ಚಿನ ಸಂಖ್ಯೆಯಲ್ಲಿ ಸಭಿಕರು ಆಗಮಿಸಿದುದರಿಂದ ಮೊದಲೇ ನಿಗದಿಯಾದಂತೆ, ಭೋಜನ ವ್ಯವಸ್ಥೆಯನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಆಯೊಜಸಲಾಗಿತ್ತು. ಭೋಜನ ಕೊಠಡಿಯಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟಾಲ್ ವಯಸ್ಕರನ್ನು ಆಕರ್ಷಿಸುತ್ತಿದ್ದರೆ, ಟ್ಯಾಂಜೆಂಟಿಕ್ಸ್ ಆಟದ ಸಂಸ್ಥೆಯ (Tangentix GameSession) ಮಕ್ಕಳನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು. ‘ಚೆನ್ನೈ ದೋಸ’ದ ಬೋರ್ಡ್ ತನ್ನತ್ತ ಭೇಟಿ ಕೊಡುವಂತೆ ಕೇಳಿಕೊಳ್ಳುತ್ತಿತ್ತು. ಪ್ರಾಯೋಜಕರನ್ನು ಕರೆತರಲು ಅಶ್ವಿನ್ ಪಟ್ಟ ಶ್ರಮವು ಶ್ಲಾಘನೀಯ. ಮಕ್ಕಳಿಗಾಗಿ ಪ್ರತ್ಯೇಕ ಬಗೆಯ ಆಹಾರಗಳನ್ನು ತಯಾರಿಸಿದುದು ವಿಶೇಷವಾಗಿತ್ತು. ಊಟದ ಸಮಯದಲ್ಲಿ ಜನರು ಟ್ರಾಫಿಕ್ ಜಾಮ್ ನಂತೆ ನಿಲ್ಲುವುದು ಬಹುತೇಕ ಕಾರ್ಯಕ್ರಮದಲ್ಲಿ ಸರ್ವೇ ಸಾಮಾನ್ಯ. ಅದಕ್ಕೆ ಅಪವಾದವೇನೋ ಎಂಬಂತೆ, ಈ ಕಾರ್ಯಕ್ರಮದಲ್ಲಿ ಎಲ್ಲೂ ಸ್ವಲ್ಪವೂ ಅಡಚಣೆಯಾಗದಂತೆ ಸವಿತಾ ಹಳ್ಳಿಕೇರಿ, ರಾಜೀವ್, ಚಿತ್ತರಾಜನ್ ಮತ್ತು ನಟರಾಜರನ್ನು ಒಳಗೊಂಡ ಸುಮಾರು ೩೦ ಜನರ ತಂಡ ತುಂಬಾ ಅಚ್ಚುಕಟ್ಟಾಗಿ ಎಲ್ಲ ಜನರನ್ನು ನಗು ಮುಖದಿಂದ ಮಾತನಾಡಿಸಿ ಪದಾರ್ಥಗಳನ್ನು ಬಡಿಸುತ್ತಿದ್ದರು. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂಬುದು ವಾಡಿಕೆ, ಆದರೆ ಬಿಸಿಬೇಳೆ ಬಾತ್ ತಿಂದವರೆಲ್ಲ ನೀರು ಕುಡಿಯುತ್ತಿದ್ದುದು ಇಲ್ಲಿ ಸಾಮಾನ್ಯವಾಗಿತ್ತು. ಕೆಲವು ಚಲನಚಿತ್ರಗಳಲ್ಲಿ ನಾಯಕ ನಟನಿಗಿಂತ ಖಳ ನಾಯಕನ ಅಬ್ಬರವೇ ಜೋರಾಗಿರುವಂತೆ, ಇಲ್ಲಿ ಬಿಸಿ – ಬೇಳೆ ಬಾತಿನ ಮಾತು ಅಲ್ಲಲ್ಲಿ ಕೆಳಿಬರುತ್ತಿದ್ದುದು ಸಾಮಾನ್ಯವಾಗಿತ್ತು. ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಋಣಾತ್ಮಕ ಟೀಕೆಗಳು ಅಲ್ಲಲ್ಲಿ ಕೇಳಿಬರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಒಬ್ಬ ಆಂಗ್ಲ ಛಾಯಾಗ್ರಾಹಕರು ಅವರಿಗೆ ಖಾರವಾದ ಊಟದ ಬಗ್ಗೆ ಕೊಟ್ಟ ಸೂಚನೆಯನ್ನು ತಳ್ಳಿಹಾಕಿ, ಮಕ್ಕಳ ಊಟ ಮಾಡಲು ನಾನೇನು ಚಿಕ್ಕವನೇ? ನಾನು ದೊಡ್ಡವರ ಊಟವನ್ನೇ ಮಾಡುತ್ತೇನೆ ಎಂದು ಧೈರ್ಯ ತೋರಿದುದು ಮೆಚ್ಚಲೇಬೇಕು! ಸಂಜೆಯ ಮೆಣಸಿನಕಾಯಿ ಬಜ್ಜಿ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ, ರಾತ್ರಿಯ ಊಟ ಸಮಧಾನಕರವಾಗಿತ್ತು. ಸಾಯಿ ಸ್ಪೈಸ್ ರೆಸ್ಟೋರಂಟ್ ನವರು ತಯಾರಿಸಿದ ಅಡುಗೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆದೀತು. ಆದ ಕಾರಣ, ಅಡುಗೆಯ ವಿಷಯವನ್ನು ಪುನಃ ಪುನಃ ಪ್ರಸ್ತಾಪಿಸದೆ ಇಲ್ಲಿಗೆ ಮುಗಿಸುತ್ತಿದೇನೆ.

