‘ಕನ್ನಡದ ಬೆಳವಣಿಗೆಗೆ ಎಷ್ಟು ದುಡಿದರೂ ಕಡಿಮೆಯೇ’ – ಶಿವರಾಂ ಸಂದರ್ಶನ: ಉಮಾ ವೆಂಕಟೇಶ್

ಉಮಾ ವೆಂಕಟೇಶ್: ಶಿವರಾಮ್ ಅವರೆ, ನೀವು ಕನ್ನಡ ಚಲನಚಿತ್ರ ರಂಗದಲ್ಲಿ ಮತ್ತು ರಂಗಭೂಮಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ, ನಟ, ನಿರ್ಮಾಪಕ, ನಿರ್ದೇಶಕನಾಗಿ ಬಹಳ ಒಳ್ಳೆಯ ಕಾರ್ಯಗಳನ್ನು ಈಗಾಗಲೇ ಮಾಡಿದ್ದೀರಿ. ಈ ರಂಗಗಳಲ್ಲಿ ಇನ್ನೂ ನಿಮಗೆ ಮಾಡಬೇಕು ಎಂದು ಅನಿಸಿರುವ ಕಾರ್ಯಗಳು ಇವೆಯೇ?

ಶಿವರಾಂ ಸಂದರ್ಶನದಲ್ಲಿ ಉಮಾ ವೆಂಕಟೇಶ್
ಶಿವರಾಂ ಸಂದರ್ಶನದಲ್ಲಿ ಉಮಾ ವೆಂಕಟೇಶ್

ಶಿವರಾಮ್: ಇನ್ನೂ ಬೇಕಾದಷ್ಟು ಕಾರ್ಯಗಳಿವೆ. ಇನ್ನೂ ಅಪೂರ್ಣವಾಗಿರುವ ಕಾರ್ಯಗಳು ಬೇಕಾದಷ್ಟಿವೆ. ನಮ್ಮ ಜೀವನವೇ ಒಂದು ರೀತಿಯಲ್ಲಿ ಅಪೂರ್ಣ.  ಇನ್ನೂ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಬೇಕು ಎಂಬ ಆಸೆಯಿದೆ, ನಾನು ಮೂಲತಹ ರಂಗಭೂಮಿಯಿಂದ ಬಂದವನು. ರಂಗಭೂಮಿಯಲ್ಲಿ ನಟಿಸುವ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ನಾನು ಸಿನಿಮಾರಂಗಕ್ಕೆ ಹೋದೆ. ನನಗೆ ಇನ್ನೂ ಬಹಳ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿ, ಆ ನಾಟಕಗಳನ್ನು ರಾಜ್ಯದಾದ್ಯಂತ ಕೊಂಡೊಯ್ದು, ಅದರಿಂದ ಕಡೆಯ ಪಕ್ಷ ಒಂದು ಕೋಟಿ ರೂಪಾಯಿಗಳನ್ನಾದರೂ ಸಂಪಾದಿಸಿ, ಆ ಹಣವನ್ನು ರಂಗಭೂಮಿಯ ಕಲಾವಿದರ ಕ್ಷೇಮ ನಿಧಿಗಾಗಿ ಉಪಯೋಗಿಸ ಬೇಕು ಎನ್ನುವ ಒಂದು ಮಹದಾಸೆಯಿದೆ.  ನಾನು ಒಂದು ಕೋಟಿ ಸಂಪಾದಿಸಿದ ಮೇಲೆ, ನಮ್ಮ ಸರ್ಕಾರವನ್ನು ಕೇಳಿ ಅವರಿಂದ ಒಂದು ಕೋಟಿ ರೂಪಾಯಿಗಳ ಹಣವನ್ನು ಅದಕ್ಕೆ ಸೇರಿಸಿ, ರಂಗ ಭೂಮಿಯ ಕಲಾವಿದರು ಯಾರನ್ನೂ ಹಣ ಬೇಡದಿರುವಂತೆ ಅವರ ಕ್ಷೇಮನಿಧಿಯನ್ನು ಪ್ರಾರಂಭಿಸುವ ಯೋಜನೆ ನನಗಿದೆ.  ನನ್ನ ಜೊತೆಯ ಅನೇಕ ಕಲಾವಿದರು ಅನುಭವಿಸುವ ನೋವನ್ನು IMG_6247ದೂರ ಮಾಡಬೇಕು. ಇತ್ತೀಚೆಗೆ ನಿಧನರಾದ ಗಾಂಧಿ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ ಪ್ರಖ್ಯಾತ ಹಾಲಿವುಡ್ ನಿರ್ದೇಶಕ, ಸರ್ ರಿಚರ್ಡ್ ಅಟೆನ್ಬರೋ, ಭಾರತ ಸರ್ಕಾರಕ್ಕೆ ಒಂದು ಕೋಟಿ ರೂಪಾಯಿಗಳನ್ನು ಕಲಾವಿದರ ನಿಧಿಗೆಂದು ಕೊಟ್ಟರು. ಅದನ್ನು Senior artistes welfare fund of India ಎಂದು ಪ್ರಾರಂಭಿಸಿ, ಅದರಲ್ಲಿ ವಿನಿಯೋಗಿಸಿದ್ದಾರೆ. ಅದಕ್ಕೆ ಕರ್ನಾಟಕದಿಂದ ನನ್ನನ್ನು ಟ್ರಸ್ಟಿಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ ನಾನು ಕರ್ನಾಟಕದ ಸುಮಾರು ೨೫ ಅತ್ಯಂತ ಬಡ ಕಲಾವಿದರನ್ನು ಆರಿಸಿದೆ. ಈ ೨೫ ಮಂದಿಯಲ್ಲಿ, ಈಗ ಸುಮಾರು ೧೫ ಕಲಾವಿದರಿಗೆ ಪ್ರತಿ ತಿಂಗಳಿಗೆ ೧೦೦೦ ರೂಪಾಯಿಗಳ ಪಿಂಚಣಿ ಸಿಗುತ್ತಿದೆ.  ಇದರ ಜೊತೆಗೆ ರಂಗಭೂಮಿಯಲ್ಲಿ ಇನ್ನೂ ಅನೇಕ ಪ್ರಯೋಗಗಳನ್ನು ಮಾಡುವ ಆಸೆಯಿದೆ.

Read More »

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (ಯು.ಕೆ) ಉದ್ಘಾಟನಾ ಸಮಾರಂಭ – ಸುದರ್ಶನ ಗುರುರಾಜರಾವ್

ಎಚ್. ಎಸ್.ವಿ ಯವರಿಂದ ಉದ್ಘಾಟನೆ

ಯುನೈಟೆಡ್ ಕಿಂಗ್ಡಮ್ ನ “ಅನಿವಾಸಿ” ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ದೀಪಾವಳಿಯನ್ನು ಅಧಿಕೃತವಾಗಿ ಆಚರಿಸಲು ಪ್ರಾರಂಭಿಸಿ ಮೂವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ದೊಡ್ಡ ಸಂಭ್ರಮಾಚರಣೆ ೨೦೧೩ ರ ನವೆಂಬರಿನಲ್ಲಿ ನಡೆದಿತ್ತು. ಹಾಡು-ಕುಣಿತ- ನಲಿವು- ಮಿಲನ- ಊಟ- ಹರಟೆಗೆ ಮೀಸಲಾದ ಈ ಸಮಾರಂಭಗಳಲ್ಲಿ ಭಾಷೆ, ಅದರ ಬೆಳವಣಿಗೆ, ಸಂಸ್ಕೃತಿ ಮತ್ತದರ ಸ್ವರೂಪಗಳ ಕುರಿತ ಕಾರ್ಯ ಚಟುವಟಿಕೆಗಳು ಕೇವಲ ಸಾಹಿತಿಯೊಬ್ಬರ ಭಾಷಣಕ್ಕೆ ಸೀಮಿತವಾಗಿ ಬಿಡುತ್ತಿತ್ತು. ಇದನ್ನು ಮೀರಿ ಕನ್ನಡಿಗರ ವೈರುಧ್ಯಮಯ ಜೀವನ ಹಿಂದಿ ಭಾಷೆಯ ಹಾಡು ಕುಣಿತ ಮಾಡುವಲ್ಲಿ , ಕನ್ನಡಿಗರು ಕನ್ನಡಿಗರೊಂದಿಗೆ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸುವಲ್ಲಿ ಪರ್ಯಾವಸಾನವಾಗುತ್ತಿತ್ತು. ಈ ಕೊರತೆ ಕೆಲವರ ಮನಸ್ಸಿಗೆ ಬಂದದ್ದು ಕಾಕತಾಳೀಯವೇನಲ್ಲ.

ಈ ವೈರುಧ್ಯಮಯ  ಬೆಳವಣಿಗೆಗಳ ಮಧ್ಯೆ ಕನ್ನಡಕ್ಕಾಗಿ ಮಿಡಿಯುವ ಹೃದಯಗಳ ಕನಸಿನ ಕೂಸು ಭಗೀರಥ ತಪಸ್ಸಿನ ಫಲದಂತೆ ಗಂಗೆಯ ರೂಪದಲ್ಲಿ ಅಂತರ್ಜಾಲದಲ್ಲಿ ಸಾಕಾರಗೊಂಡಿದ್ದು ಈ ವಿಚಾರ ವೇದಿಕೆಯ ಮೂಲಕ ಎಂದರೆ ತಪ್ಪಾಗಲಾರದು. ಮನಸಿನ ಮರುಭೂಮಿಯಲ್ಲಿ ಕಳೆದು ಹೋಗಲು ಬಿಡದೆ ಉಮಾ, ಶ್ರೀವತ್ಸ , ಶಿವಪ್ರಸಾದ್, ಸುದರ್ಶನ, ಕೇಶವ, ವತ್ಸಲಾ, ಮತ್ತಿತರರು ತಮ್ಮ ತನು ಮನ ಧನಗಳಿಂದ ಬಿತ್ತಿದ ಬೀಜ ಗಿಡವಾಗಿ, ಉಳಿದ ಕನ್ನಡಿಗರು ನೀರೆರೆದು ಬೆಳೆಸಿದ ಪುಟ್ಟ ವೃಕ್ಷವಾಗಿ ಇದೇ ಅಕ್ಟೋಬರ್ ತಿಂಗಳ ೧೮ ರಂದು ಕನ್ನಡದ ಹೆಮ್ಮೆಯ ಕವಿ ಶ್ರೀ ಹೆಚ್.ಎಸ್. ವೆಂಕಟೇಶ ಮೂರ್ತಿಯವರಿಂದ ಅನಾವರಣಗೊಂಡಿದ್ದು ಈ ದೇಶದ, ಅನಿವಾಸಿ ಕನ್ನಡಿಗರ ಪಾಲಿಗೆ ಒಂದು ಮೈಲುಗಲ್ಲು ಎಂದು ಹೇಳಿದರೆ ಉತ್ಪ್ರೇಕ್ಷೆ ಅಲ್ಲ.

ಅನಿವಾಸಿ ಕನ್ನಡಿಗರ ಮನದ ಮಾತುಗಳನ್ನು ಬರವಣಿಗೆಯ ಮೂಲಕ ಪ್ರಕಟಪಡಿಸುವ ಈ ಜಾಲ ಜಗುಲಿಯ ವೇದಿಕೆಯನ್ನು ”ಅನಿವಾಸಿ” ಎಂದೇ ಇಡಲಾಗಿದೆ.

ಸುದರ್ಶನ ಅವರ ಭಾಷಣ

ಬನ್ನಿ ಈ ತೆರೆಮರೆಯ ಭಗೀರಥರ ಪರಿಚಯ ಮಾಡಿಕೊಳ್ಳೋಣ. ಉಮಾ ಅವರು ಜೀವಶಾಸ್ತ್ರ ಪ್ರವೀಣರು, ಶ್ರೀವತ್ಸ ದೇಸಾಯಿ ನೇತ್ರ ತಘ್ನ್ಯರು, ಕೇಶವ್ ಕುಲಕರ್ಣಿ ವಿಕಿರಣ ಶಾಸ್ತ್ರ ಪ್ರವೀಣರು, ಶಿವಪ್ರಸಾದ್ ನಮ್ಮ ಹೆಮ್ಮೆಯ ರಾಷ್ಟಕವಿ ಜಿ.ಎಸ್.ಶಿವರುದ್ರಪ್ಪ ಅವರ ಚಿರಂಜೀವ ಮತ್ತು ಮಕ್ಕಳ ತಜ್ಞ. ವತ್ಸಲಾ, ಅರವಿಂದ ಕುಲಕರ್ಣಿ, ರಾಜಾರಾಮ ಕಾವಳೆ ಎಲ್ಲರೂ ನಿವೃತ್ತ ವೈದ್ಯರುಗಳು. ಇವರು ನೆಟ್ಟ ಗಿಡಕ್ಕೆ ನೀರೆರೆದು ನೆರವಾದವರು ಹಲವರು, ಇಳಿಸಿದ ಗಂಗೆ ಹರಿಯುವ ಜಾಡನ್ನು ತಿದ್ದಿದವರು ಕೆಲವರು. ಪ್ರೇಮಲತಾ, ದಾಕ್ಷಾಯಿಣಿ,ರಾಮ್ ಶರಣ್, ಗಿರಿಧರ, ಆನಂದ್ ಕೇಶವಮೂರ್ತಿ, ಅನ್ನಪೂರ್ಣಾ, ಬಸವರಾಜ್, ಸುದರ್ಶನ , ಶಶಿಧರ ಮತ್ತು ಇತರರು.

ಉದ್ಘಾಟನೆಗೆ ಮೊದಲು ಮೂರು ಬಾರಿ ವಿವಿಧ ಜಾಗಗಳಲ್ಲಿ ಸೇರಿ ಸಭೆ ನಡೆಸಿದ್ದು ಈ ಯೋಜನೆಗೆ ರೂಪುರೇಷೆ ನೀಡುವಲ್ಲಿ ಸಹಕಾರಿಯಾಯಿತು.

ಈ ಸಾರಿ ಸಾಹಿತ್ಯ ವೇದಿಕೆಯ ಉದ್ಘಾಟನೆಯ ಜೊತೆಯಾಗಿ ಕನ್ನಡವನ್ನು ವಿದ್ಯುನ್ಮಾನ(electronic) ಮಾಧ್ಯಮಗಳಲ್ಲಿ ಬಳಸುವ ಮಾಹಿತಿ ಮತ್ತು ತರಬೇತಿಯನ್ನು ಜನಸಾಮಾನ್ಯರಿಗೆ ಕೊಡುವುದು, ಕನ್ನಡ ಭಾಷೆಯ ಇಂದಿನ ಸ್ಥಿತಿಗತಿಗಳನ್ನು ಪರಿಚಯಿಸಿ ಭಾಷೆಯ ಬಳಕೆಯ ಸಾಧ್ಯತೆಗಳನ್ನು ಉತ್ತೇಜಿಸುವುದು, ನಮ್ಮ ಈ ಜಾಲಜಗುಲಿಯ ಕಾರ್ಯ ವ್ಯಾಪ್ತಿಯನ್ನು ಪ್ರಚಾರಗೊಳಿಸಿ ಸುಪ್ತ ಲೇಖಕರನ್ನು ಮತ್ತವರ ಪ್ರತಿಭೆಯನ್ನು ಆಹ್ವಾನಿಸುವ ಕಾರ್ಯ ಕಲಾಪಗಳನ್ನು ಹಮ್ಮಿಕೊಂಡಿದ್ದೆವು.

  • ಉದ್ಘಾಟನೆ ಸಾಂಕೇತಿಕವಾಗಿ ಕಂಪ್ಯೂಟರಿನ ಕೀಲಿಗುಂಡಿಯನ್ನು ಒತ್ತುವುದರ ಮೂಲಕ ಶ್ರೀ ವೆಂಕಟೇಶಮೂರ್ತಿ ಉದ್ಘಾಟಿಸಿದರು.

    ಕನ್ನಡವನ್ನು ಬಳಸುವ ತರಬೇತಿ
    ಕನ್ನಡವನ್ನು ಬಳಸುವ ತರಬೇತಿ
  • ಕೇಶವ ಅವರು ದೃಶ್ಯ ಶ್ರಾವ್ಯ ಮಾಧ್ಯಮದ ಮೂಲಕ ವೇದಿಕೆಯ ಪರಿಚಯ ಸ್ಥೂಲವಾಗಿ ವಿವರಿಸಿದರು.
  • ಸುದರ್ಶನ ಕನ್ನಡದ ಸ್ಥಿತಿ ಗತಿಗಳು, ಸವಾಲುಗಳು ಮತ್ತು ಅವಕಾಶಗಳನ್ನು ಕುರಿತಾಗಿ ಮಾತನಾಡಿದರು. ಕನ್ನಡವನ್ನು ಉಳಿಸುವಲ್ಲಿ ಯುವಪೀಳಿಗೆಯ ಮಹತ್ವ ಕುರಿತಾಗಿ ಇಲ್ಲಿ ವಿವರಿಸಲಾಯಿತು.
  • ಪ್ರೇಮಲತಾ ಹಾಗೂ ಗಿರಿಧರ ಅವರು ಸಾಂಸ್ಕೃತಿಕ ಕಾರ್ಯ ಕಲಾಪಗಳ ನಿರೂಪಣೆಯನ್ನು ನಿಭಾಯಿಸಿದರು.
  • ಉಮಾ, ಶ್ರೀವತ್ಸ ದೇಸಾಯಿ, ದಾಕ್ಷಾಯಣಿ, ರಾಮ್ ಶರಣ್, ಕೇಶವ್ ಹಾಗೂ ಸುದರ್ಶನ ಅವರುಗಳು ಕನ್ನಡ ಕಮ್ಮಟಗಳನ್ನು ನಡೆಸಿದರು.

ಕರಪತ್ರಗಳನ್ನು ಮುದ್ರಿಸಿ ಹಂಚಲಾಗಿತ್ತು, ಸಲಹೆ ಸೂಚನೆಗಳನ್ನೂ, ಕನ್ನಡ ಬೆರಳಚ್ಚಿನ ಮಾಹಿತಿಯನ್ನು ಜಾಲಜಗುಲಿಯಲ್ಲಿಯೂ ಕೊಡಮಾಡಲಾಗಿತ್ತು. ಸುಮಾರು ಹತ್ತಕ್ಕೂ ಹೆಚ್ಚು ಜನ ಬಂದು ಈ ಬಗೆಗೆ ತಮ್ಮ ಸಂಶಯ ನಿವಾರಣೆ ಮಾಡಿಕೊಂಡರು ಮತ್ತು ತರಬೇತಿಯನ್ನೂ ಪಡೆದರು.

ಮರುದಿನ ಅಂದರೆ ಭಾನುವಾರ ಬೆಳಗಿನ ಉಪಹಾರದ ನಂತರ, ಕನ್ನಡದ ಆಹ್ವಾನಿತ ಅತಿಥಿಗಳ ಸಂದರ್ಶನವನ್ನು ತೆಗೆದುಕೊಳ್ಳಲಾಯಿತು. ಉಮಾ ಅವರು ನಟ ಶಿವರಾಂ ಅವರದ್ದು, ದಾಕ್ಷಾಯಿಣಿಯವರು ಮುದ್ದುಕೃಷ್ಣ ಅವರದ್ದು ಹಾಗೂ ಪ್ರೇಮಲತಾ ಅವರು ಎಚ್ ಎಸ್ ವಿ ಅವರ ಸಂದರ್ಶನ ಕೈಗೊಂಡು ಕನ್ನಡವನ್ನು ಬೆಳೆಸುವಲ್ಲಿ ನಾವು ಮಾಡಬಹುದಾದ ಕಾರ್ಯಸಾಧ್ಯತೆಗಳ ಮಾಹಿತಿ ಪಡೆದರು.

ಚರ್ಚೆ ಮತ್ತು ಕವನ ವಾಚನ
ಚರ್ಚೆ ಮತ್ತು ಕವನ ವಾಚನ

ಅದಾದ ನಂತರದಲ್ಲಿ ಸಾಹಿತ್ಯ ಗೋಷ್ಠಿ ಅಧಿಕೃತವಾಗಿ ಆರಂಭವಾಯಿತು. ಶ್ರೀಕೃಷ್ಣ ಎಂಬ ಬಾಲಕನ ಪ್ರಾರ್ಥನೆಯೊಂದಿಗೆ ಶುರುವಾದ ಈ ಕಾರ್ಯಕ್ರಮವನ್ನು ಪ್ರೇಮಲತಾ, ಉಮಾ ಅವರು ನಿರೂಪಿಸಿದರು, ಕೇಶವ ಅವರು ಧ್ಯೇಯೋದ್ದೇಶಗಳ ಮತ್ತು ಈ ಜಗುಲಿಯ ವ್ಯಾಪ್ತಿಗಳ ಪರಿಚಯ ಮಾಡಿದರು. ಎಚ್ ಎಸ್ ವಿ ಸಾಹಿತ್ಯ ಚಾರಿತ್ರಿಕ ಅವಲೋಕನ ಮಾಡಿದರು, ಮುದ್ದು ಕೃಷ್ಣ ಸುಗಮ-ಸಂಗೀತ ಬೆಳೆದು ಬಂದ ಬಗೆ ತಿಳಿಸಿದರು. ಪುತ್ತೂರಾಯರ ಭಾಷಣ ಸಾಹಿತ್ಯದಲ್ಲಿ ಹಾಸ್ಯ ಎಂದಿದ್ದರೂ ಅವರು ಕೇವಲ ಹಾಸ್ಯವನ್ನಷ್ಟೇ ಮಾತನಾಡಿ ಇತಿಹಾಸವನ್ನು ಕೈ ಬಿಟ್ಟದ್ದು ಸ್ವಲ್ಪ ಅನಿರೀಕ್ಷಿತವಾದರೂ, ಸಭಿಕರನ್ನು ನಗಿಸುವಲ್ಲಿ ಯಶಸ್ವಿಯಾದರು. ೫೦-೬೦ ಸಂಖ್ಯೆಯಲ್ಲಿದ್ದ ಸಭಿಕರು ಎರಡು ಗಂಟೆಗಳ ಕಾಲ ನಿಶ್ಯಬ್ಧ ವಾಗಿ  ಕುಳಿತಿದ್ದು ಕಾರ್ಯಕ್ರಮದ ಸವಿ ಉಂಡರೆಂದು ನಮ್ಮ ಭಾವನೆ.

ಇದರ ನಂತರ ಕವನ ವಾಚನ ಇದ್ದು ಹಲವಾರು ಕವಿಗಳು ತಮ್ಮ ತಮ್ಮ ಕವನಗಳನ್ನೂ ವಾಚಿಸಿದರು. ಕವನ ವಾಚನವನ್ನು ಕೂಡಾ ಸಭಿಕರು ಆದರ ಅಸಕ್ತಿಗಳಿಂದ ಕೇಳಿ ಮೆಚ್ಚುಗೆ ವ್ಯಕ್ತ ಪಡಿಸಿದರೆಂದು ನನಗೆ ಅನಿಸಿತು.

ಸಮಾರೋಪ ಮಾತುಗಳನ್ನು ಎಚ್ ಎಸ್ ವಿ ಅವರು ಹೇಳಿ” ಹೊರಮುಖವಾದ ಮಾತುಗಳು ಒಳ ಮುಖವಾದಾಗ” ಕವಿತೆ

ಕಸಾಸಾಂವಿವೇ ಬಳಗ
ಕಸಾಸಾಂವಿವೇ ಬಳಗ

ಮೂಡುವುದೆಂಬ ಕಿವಿ ಮಾತಿನ ಮೂಲಕ ತಮ್ಮ ಮಾತುಗಳನ್ನು ಮುಗಿಸಿದರು. ಡಾ. ಶ್ರೀವತ್ಸ ದೇಸಾಯಿ ವಂದನಾರ್ಪಣೆ ಅರ್ಪಿಸಿದರು.

ಸಣ್ಣ ತೊರೆಯೊಂದು ಒರತೆಯಿಂದ ಮುಂದೆ ಹರಿದು ನದಿಯಾಗುವ ಮುನ್ನ ತೊರೆಯಾಗಿರುವ ನಮ್ಮ ಈ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಗೆ ಕೃಷಿಯ, ಉದ್ಯಮಶೀಲತೆಯ ಅವಶ್ಯಕತೆ ಇದೆ. “ಕನ್ನಡಕ್ಕಾಗಿ ಕೈ ಎತ್ತಿ, ಅದು ಕಲ್ಪವೃಕ್ಷವಾಗುತ್ತದೆ,” ಎಂಬ ಕುವೆಂಪು ಅವರ ಕರೆಯಂತೆ ಬನ್ನಿ ಎಲ್ಲರೂ ಕೈ ಎತ್ತಿ !