ಈ 'ಅನಿವಾಸಿ' ಎಂಬ ಪದ, ಕನ್ನಡ ಬಲ್ಲ ಸರ್ವರಿಗೂ ಅರ್ಥವಾಗುವ ರೀತಿ ಒಂದು ತೆರನಾದರೆ, ನನಗೆ ಅರ್ಥವಾಗುವ ರೀತಿಯೇ ಬೇರೆ. ಅನಿವಾಸಿ ಎಂಬುದು ದೇಶದಿಂದ ದೂರವಿರುವ ಅಥವಾ ಪ್ರಸ್ತುತ ತಾಯಿನೆಲದಲಿ, ಸ್ವದೇಶದಲ್ಲಿ ನೆಲೆಸದ ಅನ್ನುವ ಅರ್ಥವಿದ್ಯಾಗ್ಯೂ ನನಗೆ ಅನಿವಾಸಿ ಎಂಬ ಪದ ಕೇಳಿದೊಡನೆ ಆತ್ಮೀಯ, ಹತ್ತಿರದ, ಪ್ರೀತಿಯ, ಅಕ್ಕರೆಯ ಅಂತಃಕರಣದ, ನಾಡು ನುಡಿಗಳ ಕುರಿತು ಸದಾ ತುಡಿಯುವ ಮಿಡಿಯುವ ಮನಸುಗಳ, ನನ್ನದಲ್ಲದ ನೆಲದಲ್ಲಿ ನನ್ನ ತವರಿನಂತಿರುವ ಒಂದು ಸಹೃದಯಿ ಗುಂಪು ಎಂಬ ಚಿತ್ರ ಮನಃಪಟಲದಲ್ಲಿ ಮೂಡುತ್ತದೆ. ಸಾಹಿತ್ಯ ಸಂಗೀತಗಳಿಂದ ಆಂತರ್ಯವನ್ನು ಚೊಕ್ಕಟವಾಗಿಡಲು, ಸೃಜನಶೀಲತೆಯ ಸ್ಪುರಣದಂತಿರುವ ಅನಿವಾಸಿ ಬಳಗಕ್ಕೆ ಏಳುವರ್ಷಗಳ ಹಿಂದೆ ನನ್ನ ಪರಿಚಯಿಸಿದ್ದು ನಮ್ಮ ಕಥೆಗಾರ್ತಿ ಕವಯಿತ್ರಿ ಅದಮ್ಯ ಉತ್ಸಾಹದ ಚಿಲುಮೆಯಂತಿರುವ ಡಾ ಪ್ರೇಮಲತಾ.
ಅನಿವಾಸಿಯ ಪ್ರತಿಯೊಬ್ಬ ಸದಸ್ಯರ ಕುರಿತು ನನಗೆ ಗೌರವ, ಅಚ್ಚರಿ! ಎಲ್ಲರೂ ಒಂದಲ್ಲ ಕ್ಷೇತ್ರದಲ್ಲಿ ಸಾಧನೆಗೈದವರು, ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಹವ್ಯಾಸ ಆಸಕ್ತಿಗಳನ್ನು ಅಷ್ಟೇ ಆಸ್ಥೆಯಿಂದ ಬೆಳೆಸಿಕೊಂಡು ಅದರ ನಿರಂತರತೆಯನ್ನು ಕಾಪಾಡಿಕೊಂಡು ಬಂದವರು. ಇಲ್ಲಿ ಬರೆಯುವ ಎಲ್ಲರ ಘನವಾದ ಬರವಣಿಗೆಯ ಮುಂದೆ ನನಗೆ ನನ್ನ ಬರಹಗಳು ಆವತ್ತಿಗೂ, ಇವತ್ತಿಗೂ, ಯಾವತ್ತಿಗೂ ತರಗೆಲೆಯಂತೆ ಅನಿಸುತ್ತದೆ. ನನ್ನ ಜೀವನದಲ್ಲಿ ಅನಿವಾಸಿ ಈಗ ಬರೀ ಒಂದು ವಾಟ್ಸಾಪ್ ಗುಂಪು ಅಥವಾ ಬ್ಲಾಗ್ ಬರಹಗಳ ವೇದಿಕೆಗಿಂತ ಹೆಚ್ಚಿನದ್ದು. ನನಗೆ ಶಿಸ್ತು, ಬದ್ಧತೆಯನ್ನು ಮತ್ತೆ ಮತ್ತೆ ಕಲಿಸುವ ತಿಳಿಸುವ ಅನಿವಾಸಿ ಬಳಗವನ್ನು ಒಮ್ಮೆಯಾದರೂ ಭೇಟಿ ಮಾಡಬೇಕು ಅನ್ನುವುದು ನನ್ನ ಬಹುಕಾಲದ ಕನಸಾಗಿತ್ತು.
ಊರು ಸುಟ್ಟರೂ ಹಣಮಪ್ಪ ಹೊರಗೆ ಅನ್ನುವ ಗಾದೆ ಮಾತಿನಂತೆ, UK ಯಲ್ಲಿ ಇದ್ದಾಗ್ಯೂ ಈ ತನಕ ನನಗೆ ಕನ್ನಡ ಬಳಗ ಅಥವಾ ಅನಿವಾಸಿಯ ಯಾವ ಕಾರ್ಯಕ್ರಮದಲ್ಲೂ ಭಾಗಹಿಸಲು ಆಗಿಲ್ಲ, ಕಾರಣ ವಿಮಾನಯಾನ ಅಥವಾ ಜಲಯಾನ ಮಾಡಿ ಬರಬೇಕಾದ ಅನಿವಾರ್ಯತೆ ಒಂದುಕಡೆಯಾದರೆ, ಪುಟ್ಟ ಮಕ್ಕಳು ಇರುವ ಮನೆಯಲ್ಲಿ ಎಲ್ಲ ಜವಾಬ್ದಾರಿಗಳು ಜಯಮಾಲೆಯಂತೆ ಕೊರಳಿಗೆ ಬಂದು ತಾನೇ ತೂಗು ಹಾಕಿಕೊಂಡಿರುವ ಬಿಡಿಸಿಕೊಳ್ಳಲಾರದ ಜವಾಬ್ದಾರಿಗಳು ಮತ್ತೊಂದೆಡೆ. ಅದು ಹೇಗೋ ಎಲ್ಲಾ ಗ್ರಹ ನಕ್ಷತ್ರ ಬಲ ಕೂಡಿ ಬಂತು; ನಾನೂ ಈ ಸಲದ ಕನ್ನಡ ಬಳಗ ಯುಕೆ ಮತ್ತು ಲೆಸ್ಟರ್ ಕನ್ನಡ ಬಳಗದ ಯುಗಾದಿ ಸಂಭ್ರಮದಲ್ಲಿ ಭಾಗವಹಿಸುವ ಯೋಗಾಯೋಗ ಒದಗಿ ಬಂತು. ಈ ಯುಗಾದಿ ನಿಜಕ್ಕೂ, ನಾಡಿನಲ್ಲಿದ್ದು ಯುಗಾದಿ ಹಬ್ಬ ಆಚರಿಸಿದ್ದಕ್ಕಿಂತ ಹೆಚ್ಚು ಸಂಭ್ರಮದಲ್ಲಿ ಜರುಗಿತು. ಪ್ರತಿಬಾರಿ ಅನಿವಾಸಿ ಬ್ಲಾಗ್ ಮತ್ತು ಗ್ರೂಪ್ ಫೋಟೋಗಳಲ್ಲಿ ನೋಡಿ ಖುಷಿ ಪಡುತ್ತಿದ್ದ ಅನಿವಾಸಿ ಸಾಹಿತಿಕ ಕಾರ್ಯಕ್ರಮದಲ್ಲಿ ನಾನೂ ಈ ಬಾರಿ ಭಾಗವಹಿಸಿದ್ದು ನನಗೆ ಹೆಮ್ಮೆಯ ಸಂಗತಿ.
ಅನಿವಾಸಿ ಕಾರ್ಯಕ್ರಮ
ಪ್ರತಿಬಾರಿಯಂತೆ, ಈ ಸಲವೂ ಕಾರ್ಯಕ್ರಮಕ್ಕೆ ಬರುವ ಅಥಿತಿಗಳ ವೈಶಿಷ್ಟತೆಗೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪುಗೊಳಿಸುವುದು ಎಂಬ ನಿರ್ಧಾರವಾದ ಕೆಲ ದಿನಗಳಲ್ಲೇ ರಂಗಭೂಮಿ, ನಟ ನಿರ್ದೇಶಕ, ಕಿರುತೆರೆ, ಬೆಳ್ಳಿತೆರೆಯ ಮೇಲೆ ತಮ್ಮ ವಿಶಿಷ್ಟ ಛಾಪು ಮೂಡಿಸಿ ನೆನಪಿನಲ್ಲಿ ಉಳಿಯುವಂಥ ಹಲವಾರು ಕ್ರೀಯಾಶೀಲ ಪ್ರಸ್ತುತಿಗಳನ್ನು ರಂಗದಮೇಲೆ ನಟಿಸಿ ನಿರ್ದೇಶಿಸಿದ ಅದ್ಭುತ ಕಲಾವಿದ ಶ್ರೀ ಶ್ರೀನಿವಾಸ ಪ್ರಭು ಅವರು ಅತಿಥಿಯಾಗಿ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಮರುಗಳಿಗೆಯಿಂದ ಅನಿವಾಸಿ ಅಂಗಳ ಮತ್ತಷ್ಟು ಕ್ರಿಯಾಶೀಲವಾಯಿತು . ಎಲ್ಲ ಚರ್ಚೆಗಳು, zoom, ಗೂಗಲ್ ಮೀಟ್ ಗಳಲ್ಲಿ ವಿಚಾರ ವಿನಿಮಯದ ನಂತರ, ಅನಿವಾಸಿ ಬಳಗದ ಉತ್ಸಾಹಿ ದಂಪತಿಗಳಾದ ಅನ್ನಪೂರ್ಣ ಮತ್ತು ಆನಂದ ಅವರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತು, ಎಲ್ಲರ ಸಲಹಾ ಸೂಚನೆಗಳನ್ನು ಪರಾಂಬರಿಸಿ ರಂಗಭೂಮಿ ನಾಟಕ ಕುರಿತಾದ ಕಾರ್ಯಾಗಾರವನ್ನುಏರ್ಪಡಿಸುವ ಕುರಿತು ಅತಿಥಿಗಳೊಂದಿಗೆ ಮಾತನಾಡಿ ಕಾರ್ಯಕ್ರಮದ ರೂಪರೇಶೆ ತಯಾರಿಸಿದರು. ಜೊತೆಗೆ ಆಸಕ್ತರು ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಬೇಕು ಅಂತಿದ್ದರೆ ಮೊದಲೇ ಕಳುಹಿಸಬೇಕಾಗಿ ವಿನಂತಿಸಲಾಯಿತು.
ಕಾರ್ಯಕ್ರಮದ ದಿನಕ್ಕಿಂತ ಅದರ ಸಿದ್ಧತೆಗಳನ್ನು, ಪೂರ್ವ ತಯಾರಿಗಳನ್ನು ನೋಡುವುದು ಮತ್ತು ಆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದೇ ಒಂದು ಮಜಾ ಅನುಭವ. ನಾನು, ಡಾ ಶ್ರೀವತ್ಸ ದೇಸಾಯಿ ಅವರೊಂದಿಗೆ ಕಾರ್ಯಕ್ರಮದ ಮುನ್ನಾದಿನ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿ ಮತ್ತಿಬ್ಬರು volunteers ಜೊತೆಗೂಡಿ ಖುರ್ಚಿ, ಮೇಜು ಜೋಡಿಸಿ ಬ್ಯಾನರ್ ಹಾಕಿ, ಎಲ್ಲವನ್ನು ಸಿದ್ಧಮಾಡಿ ಬಂದೆವು. ಆದರೆ ಮರುದಿನ ಅನಿವಾರ್ಯ ಕಾರಣಗಳಿಂದಾಗಿ ಆ ಜಾಗದಲ್ಲಿ ಅನಿವಾಸಿ ಕಾರ್ಯಕ್ರಮ ನಿಗದಿತ ಸಮಯಕ್ಕೆ ನಡೆಯದೆ ಸ್ವಲ್ಪ ನಿರಾಸೆ ಉಂಟುಮಾಡಿತು. ಆದರೆ ಇತ್ತ ಹಬ್ಬದಡಿಗೆಯ ಅದ್ಭುತ ರುಚಿಯ ಬಾಳೆಎಲೆ ಊಟ ಉಂಡು ಸಾಂಸ್ಕೃತಿಕ ಕಾರ್ಯಕ್ರಮ ನೋಡುತ್ತಾ ಕುಳಿತಿರುವಾಗ ಅನಿವಾಸಿ ಕಾರ್ಯಕ್ರಮ ನಾಲ್ಕು ಘಂಟೆಗೆ ನಿಗದಿಯಾಗಿದೆ ಎಂದು ಸಂಘಟಕರು ತಿಳಿಸಿದ್ದು ನಿಜಕ್ಕೂ ಮನಸನ್ನು ಪ್ರಫುಲ್ಲ ಗೊಳಿಸಿತು.
ಅನಿವಾಸಿಯ ಈ ಕಾರ್ಯಾಗಾರಕ್ಕೆಂದೇ ಕಟ್ಟಿದ್ದರೇನೋ ಅನ್ನುವಷ್ಟು ಅಚ್ಚುಕಟ್ಟಿನ ಪುಟ್ಟ ಸುಂದರ ಕೋಣೆಯಲ್ಲಿ ಆಸಕ್ತರು ಸೇರಿದ ಮೇಲೆ, ಕಾರ್ಯಕ್ರಮದ ಆರಂಭಕ್ಕೆ ಒಂದು ನಾಂದಿ ಗೀತೆ ಹಾಡುವ ಅವಕಾಶ ನನಗೆ ಒದಗಿ ಬಂತು. ಕಾರ್ಯಕ್ರಮವನ್ನು ಅನ್ನಪೂರ್ಣ ಅವರು ಈ ಮೊದಲೇ ಕಳಿಸಲಾಗಿದ್ದ ಪ್ರಶ್ನೆಗಳನ್ನು ಒಂದೊಂದಾಗಿ ಸ್ಪಷ್ಟತೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀನಿವಾಸ ಪ್ರಭು ಅವರಿಗೆ ಕೇಳುತ್ತ ಹೊದರು. ಶ್ರೀನಿವಾಸ ಪ್ರಭುಗಳು ಕೂಡ ಪ್ರತಿ ಪ್ರಶ್ನೆಗೂ ತಮ್ಮ ಅನುಭವದ ಬುತ್ತಿಯಿಂದ ರುಚಿಯಾದ ತುತ್ತುಗಳನ್ನೇ ನಮಗೆ ಉಣಬಡಿಸಿದರು. ಒಂದು ನಾಟಕವನ್ನು ಪುಸ್ತಕದಿಂದ ರಂಗದ ಮೇಲೆ ತರುವಾಗ ಎದುರಾಗುವ ಸವಾಲುಗಳು, ಎಲ್ಲಿ ನಿಯಮಗಳನ್ನು ಸಡಿಲಿಸಬಹುದು , ಯಾವುದನ್ನು ಸಡಲಿಸಬಾರದು? ಹವ್ಯಾಸಿ ರಂಗಭೂಮಿ ನಟರಿಗೆ ಎದುರಾಗುವ ಸಮಸ್ಯೆಗಳು. ಕ್ರಿಯಾಶೀಲ ಜಗತ್ತಿನ ವಿಪರ್ಯಾಸಗಳ ಕುರಿತು ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು. ಅವರ ಮಾತುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಳುಗರನ್ನು ಅದೆಷ್ಟು ತಾಕಿದವೆಂದರೆ, ಒಂದು ನಾಟಕದ ತಂಡವನ್ನೇ ಕಟ್ಟುವ ಹುರುಪಿನಲ್ಲಿ ಆಸಕ್ತರ ಪಟ್ಟಿಕೂಡಾ ಸಿದ್ಧವಾಯಿತು. ಇವೆಲ್ಲ ಖುಷಿಯ ವಿಷಯಗಳು ಜರುಗುವಾಗ ದೇಸಾಯಿಯವರು ಕಾರ್ಯಕ್ರಮಕ್ಕೆ ನಿಗದಿಯಾದ ಒಂದು ಘಂಟೆಯ ಕಾಲಾವಕಾಶ ಮುಗಿಯುತ್ತ ಬಂದಿದ್ದನ್ನು ನಿರ್ವಾಹಕ ಗಮನಕ್ಕೆ ತಂದು ನಮ್ಮನ್ನೆಲ್ಲ ಮತ್ತೆ ವಾಸ್ತವಕ್ಕೆ ಕರೆತಂದರು. ಛೇ ಇಷ್ಟು ಬೇಗ ಮುಗಿದೇ ಹೋಯಿತೇ ಅನ್ನುವಂಥ ಭಾವ ದಟ್ಟವಾಗುವ ಮುನ್ನವೇ, ಆನಂದ ಅವರು ವಂದನಾರ್ಪಣೆ ನಡೆಸಿಕೊಟ್ಟರು. ಅತಿಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅನಿವಾಸಿ ಸದಸ್ಯರು ಗ್ರೂಪ್ ಫೋಟೋ ತೆಗೆಸಿಕೊಂಡ ನಂತರವೂ ಶ್ರೀನಿವಾಸ ಪ್ರಭುಗಳೊಂದಿಗೆ ಹಲವರು ನಾಟಕದ ಬಗ್ಗೆ ಚರ್ಚೆ ನಡೆಸುತ್ತಿದ್ದುದು ಕಾರ್ಯಕ್ರಮ ಸಾರ್ಥಕ್ಯ ಎಂದರೂ ಅತಿಶಯೋಕ್ತಿ ಅಲ್ಲ.
ಎಳ್ಳೆಣ್ಣೆಯ ಎರಡು ದೀಪ.
_ ಡಾ. ದಾಕ್ಷಾಯಿಣಿ ಗೌಡ
ಈ ಬಾರಿ,ಹೊಸ ಪರಿಯ ಕಳಕಳಿ
ನಮ್ಮ ನಿಮ್ಮೆಲ್ಲರ ಈ ದೀಪಾವಳಿ
ನಮ್ಮೂರಲ್ಲಿ, ಗೃಹಜ್ಯೋತಿಯ ಆಗಮನ,
ಆದರೇನು, ಯೂನಿಟ್ನ ಮಿತಿಮೀರದೆಡೆ ಗಮನ
ಸಾಮಾನ್ಯರಿಗೆ ಎಣ್ಣೆ ಬಲು ದುಬಾರಿ,
ಸರ್ಕಾರದ ಖರ್ಚಿನಲ್ಲಿ ಕೋಟಿ ದೀಪಗಳ ಅದ್ದೂರಿ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.
ಈ ಊರಲ್ಲೂ ಬಗ್ಗುತ್ತಿಲ್ಲ ಹಣದುಬ್ಬರ
ಕೈಗೆಟುಕದು ಬಡತನಕೆ ವಿದ್ಯುತ್ ದರ.
ಬಿಸಿ ಊಟ, ಬಿಸಿಗಾಳಿ ಆಶಿಸುವ ಎದೆ, ಉದರ,
ಎಚ್ಚರಿಕೆ, ಕೂಗುತಿದೆ, ಹಿಮಗಾಳಿಯ ಅಬ್ಬರ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.
ಕಾಂಚಾಣ ಕುಣಿಸಿದಂತೆ ಆಡುವ, ತೂಗುವ ಬೆಳಕು,
ಗಗನ ಕುಸುಮ, ಬಡತನಕೆ, ಬಹುದೀಪಗಳ ಥಳುಕು.
ಲಕ್ಷದೀಪವಿರಲಿ, ಕಗ್ಗತ್ತಿನ ಕತ್ತಲಿರಲಿ ಹೊರಗೆ,
ಮಿನುಗಲಿ ನಿಮ್ಮ ನಮ್ಮೊಳಗೆ ಆನಂದದ ದೀಪ,
ಹೊಸಬಗೆಯ ಬೆಳಕಲಿ, ಬೆಳಗಲಿ ನಮ್ಮ ಸೃಷ್ಟಿಯ ದ್ವೀಪ.
ಅನಬೆಲ್ಲ ಹೇಳಿದ ಅಮರಾಂತೆ ಕಥೆ - ಡಾ.ಮುರಳಿ ಹತ್ವಾರ್
ಅಮರಾಂತೆ ಪೋರ್ಚುಗಲ್ಲಿನ ಒಂದು ಸಣ್ಣ ಊರು. ಅದರ ಮಧ್ಯದಲ್ಲೊಂದು ನದಿ, ಅದರ ಹೆಸರು ತಮೆಗಾ. ಡ್ಯುರೋ ನದಿಯ ಉಪನದಿಯಾದ ಇದರ ಒಂದು ಕಡೆ ಈಗ ಹೊಟೇಲಾಗಿರುವ ಹಳೇ ಕಾಲದ ಶ್ರೀಮಂತನ ಬಂಗಲೆ ಮತ್ತದರ ಸುತ್ತ ಬೆಳೆದ ಮನೆಗಳು, ಅಂಗಡಿಗಳು ಇತ್ಯಾದಿ. ಇನ್ನೊಂದು ಕಡೆ, ಸಂತ ಗೋನ್ಸಾಲನ ಇಗರ್ಜಿ ಮತ್ತದರ ಹಿಂದೆ ಯಾವತ್ತೋ ಇದ್ದ ಕಾಡನ್ನು ಮರೆಸಿ ಬೆಳೆದ ಊರು. ಮಧ್ಯದಲ್ಲೊಂದು ಅವೆರಡನ್ನೂ ಸೇರಿಸುವ ಹಳೆಯ ಬ್ರಿಡ್ಜ್ . ಸುಮಾರು ೭೦೦ ವರ್ಷದ ಹಿಂದೆ ಇದ್ದ, ಮೊದಲು ಪಾದ್ರಿಯಾಗಿ, ಆಗಾಗ ಪವಾಡ ಮಾಡಿ, ದೊಡ್ಡ ಮೊನಾಸ್ಟರಿಯೊಂದನ್ನು ಕಟ್ಟಿ, ಕಡೆಗೆ ಸಂತರಾದ ಗೋನ್ಸಾಲರ ಇಗರ್ಜಿಯ ಅಮರಾಂತೆ ಈಗ ಪೊರ್ಟೊ ನಗರದಿಂದ ಡ್ಯುರೋ ಕಣಿವೆಗೆ ಮುಂಜಾನೆ ಹೊರಟು ಸಂಜೆಗೆ ಮರಳುವ ಪ್ಯಾಕೇಜ್ ಟೂರಿಗರಿಗೆ ಮೊದಲು ಸಿಗುವ ಸ್ಟಾಪ್.
ಪೊರ್ಟೊ ದಲ್ಲಿ ಮುಂಜಾನೆ ಎಂಟಕ್ಕೆ ಟೂರಿನ ಮಿನಿ ಬಸ್ ಆಫೀಸಿಗೆ ವಿಧೇಯ ವಿದ್ಯಾರ್ಥಿಗಳಂತೆ ಅರ್ಧ ಗಂಟೆ ಮುಂಚೆಯೇ ತಲುಪಿದ್ದ ನಮಗೆ, ಅಲ್ಲಿನ ಏಜೇಂಟ್ ಒಬ್ಬ ನಮ್ಮ ಬಸ್ ನಂಬ್ರ ೧೯ ಮತ್ತು ಗೈಡ್ ಅನಬೆಲ್ಲ ಎಂದು ಪ್ರಿಂಟಾದ ಚೀಟಿ ಕೊಟ್ಟ. ಅದಾಗಿ ಸ್ವಲ್ಪ ಹೊತ್ತಿಗೆ ಆ ಬಸ್ಸು ಮತ್ತದರೊಟ್ಟಿಗೆ ಬಂದಿಳಿದ ಮಧ್ಯ ವಯಸ್ಸಿನ ಸ್ಥೂಲ ಕಾಯದ ಅನಬೆಲ್ಲ, ಗಟ್ಟಿ ದನಿಯಲ್ಲಿ ಬಸ್ಸಿನ ನಂಬ್ರ ಮತ್ತೆ ಹೊರಡುವ ಟೈಮನ್ನು ಮೊದಲು ಇಂಗ್ಲಿಷಿನಲ್ಲೂ ನಂತರ ಫ್ರೆಂಚಿನಲ್ಲೂ ಕೂಗಿ, ಆ ಕರೆಗೆ ಕಾದವರಂತೆ ಗಡಿಬಿಡಿಯಲ್ಲಿ ಅನಬೆಲ್ಲ ಸುತ್ತ ಸೇರಿದ ಜನರನ್ನ ಬಸ್ಸೇರಿಸಿ, ಕಡೆಗೆ ತಾನೂ ಹತ್ತಿ ಮುಂದಿನ ಸೀಟಿನಲ್ಲಿ ಕುಳಿತು, ಕೈಗೊಂದು ವಯರಿನ ಮೈಕೆಳೆದುಕೊಂಡು ಮಾತು ಶುರುಮಾಡಿದಳು.
ಅವಳ ಮಾತುಗಳು ರೆಕಾರ್ಡೆಡ್ ಟೇಪಿನಂತೆ ಇಂಗ್ಲಿಷ್-ಫ್ರೆಂಚ್ ತಾಳದಲ್ಲಿ ಬಸ್ಸಿನ ಕಿಟಕಿಯಾಚೆ ಕಾಣುವ ಐತಿಹಾಸಿಕ ಕಟ್ಟಡಗಳು, ಬ್ರಿಡ್ಜುಗಳು, ಸುರಂಗಳು ಅವನ್ನೆಲ್ಲ ಆದಷ್ಟು ಕಡಿಮೆ ಶಬ್ದಗಳಲ್ಲಿ ಹೇಳುತ್ತಾ, ಮಧ್ಯೆ ಮಧ್ಯೆ ನಗೆ ತಾರದ ಜೋಕುಗಳನ್ನು ಉರುಳಿಸುತ್ತಾ, ಆದಷ್ಟು ಮೊಬೈಲ್ ಫೋನಿನಲ್ಲಿ ಅದ್ದಿದ ಮುಖಗಳನ್ನು ಹೊರ ತೆರೆಯಲು ಪ್ರಯತ್ನಿಸುತ್ತಿದ್ದಳು. ಕಡೆಗೊಮ್ಮೆ ಬಸ್ಸು ನಿಧಾನಿಸಿ ನಿಂತಾಗ, ಎಲ್ಲರನ್ನು ಕೆಳಗಿಳಿಸಿ, ಪಕ್ಕದ ಕಟ್ಟೆಯ ಮೇಲೆ ನಿಂತು, ಕೆಳಗೆ ಹರಿಯುತ್ತಿದ್ದ ತಮೆಗಾ ನದಿಯ ಪರಿಚಯವನ್ನೂ, ಗೋನ್ಸಾಲರ ಇಗರ್ಜಿಯನ್ನೂ ತೋರಿಸಿ, ಮುಕ್ಕಾಲು ಘಂಟೆಯೊಳಗೆ ಎಲ್ಲ ಸುತ್ತಿ, ಫೋಟೋದಲ್ಲಿ ಕಟ್ಟುವಷ್ಟು ಕಟ್ಟಿ, ಮತ್ತೆ ಬಸ್ಸಿನಲ್ಲಿರಬೇಕೆಂದು ಅಪ್ಪಣಿಸಿದಳು. ಅಷ್ಟಕ್ಕೇ ನಿಲ್ಲಿಸದೆ, ತನ್ನ ಮೊಬೈಲಿನಲ್ಲಿದ್ದ ಫೋಟೋವೊಂದನ್ನು ಗುಂಪಿನ ಎಲ್ಲ ಅಡಲ್ಟಿಗರಿಗೆ ತೋರಿಸುತ್ತ, ಅವರ ನಾಚಿಕೆಯ, ಆಶರ್ಯದ ನಗುವಿಗೆ ತಾನು ನಗುತ್ತ, ಅದೊಂದು ಜೋಕು ಎಂದಳು. ಅವಳು ತೋರಿಸಿದ ಆ ಫೋಟೋದ ಮರ್ಮ ಮತ್ತು ಅದರ ಹಿಂದಿನ ಜೋಕು ಆಗ ಅರ್ಥವಾಗಿರಲಿಲ್ಲ. ಸುಮ್ಮನೆ ನಕ್ಕೆವು.
ಅನಬೆಲ್ಲ ಹೇಳಿದಂತೆ, ಆ ಹಳೆಯ ಬ್ರಿಡ್ಜಿನತ್ತ ನಡೆದು, ಅದರ ಮೇಲೆ ನಿಂತು ಆಚೆ ಈಚೆಯ ಕಟ್ಟಡಗಳನ್ನು, ಕೆಳಗೆ ಹರಿಯುತ್ತಿರುವ ನದಿಯ ಹರಿವನ್ನೂ ನೋಡುತ್ತಾ, ಗೊನ್ಸಾಲರು ತಮ್ಮ ಪವಾಡದಲ್ಲಿ ಮೊದಲು ಕಟ್ಟಿದ, ಆನಂತರ ೧೭-೧೮ ಶತಮಾನದಲ್ಲಿ ಮತ್ತೆ ಹೊಸದಾಗಿ ಕಟ್ಟಿದ, ನೆಪೋಲಿಯನ್ನಿನ ಕಾಲದಲ್ಲಿ ನಡೆದ ಹೋರಾಟದಲ್ಲಿ ಸಿಡಿದ ಗುಂಡುಗಳ ಕಲೆಯನ್ನ ಇನ್ನೂ ಸಾಕಿರುವ ಆ ಬ್ರಿಡ್ಜನ್ನು ದಾಟಿ, ಅಮರಾಂತೆಯ ಸಂತರ ಇಗರ್ಜಿಯತ್ತ ನಡೆದ ನಮಗೆ, ಮೊದಲು ಕರೆದದ್ದು ಅಲ್ಲಿನ ಕಾರ್ ಪಾರ್ಕಿನ ಪಕ್ಕದ ಸಣ್ಣ ತೋಟದಲ್ಲಿ ದೊಡ್ಡದಾಗಿ ಇಂಗ್ಲಿಷ್ ಅಕ್ಷರಗಳಲ್ಲಿ ನಿಲ್ಲಿಸಿಟ್ಟ AMARANTE. ಬಣ್ಣ ಬಣ್ಣದ ಆ ದೊಡ್ಡ ಅಕ್ಷರಗಳ ಮುಂದೆ ನಿಂತು ಫೋಟೋದಲ್ಲಿ ನಮ್ಮ ಜೊತೆ ಅದನ್ನು ಸೇರಿಸಿ ಹೊರನಡೆಯುವಾಗ, ಪಕ್ಕದಲ್ಲೇ ಚಪ್ಪರವೊಂದರ ಕೆಳಗೆ ಒಂದಿಷ್ಟು ಸಾಮಾನುಗಳನ್ನು ಮಾರುತ್ತಿದ್ದ, ಆ ಕಾರ್ ಪಾರ್ಕಿನ ಒಂದೇ ಅಂಗಡಿಯತ್ತ, ಅಲ್ಲಿನ 'ವಿಶಿಷ್ಣ' ಆಕಾರದ, ಪ್ಲಾಸ್ಟಿಕಿನಲ್ಲಿ ಸುತ್ತಿಟ್ಟ ವಸ್ತುಗಳನ್ನ ಏನೆಂಬ ಕುತೂಹಲದಲ್ಲಿ ನೋಡಲು ಹತ್ತಿರ ಹೋದೆವು. ಅಲ್ಲಿದ್ದದ್ದು, ಅನಬೆಲ್ಲ ಫೋನಿನಲ್ಲಿ ಜೋಕೆಂದು ತೋರಿಸಿದ ಆಕಾರದ ಸಣ್ಣ, ದೊಡ್ಡ, ಗಟ್ಟಿ, ಮತ್ತು ಮೆತ್ತನೆಯ ವೆರೈಟಿಯ ಕೇಕುಗಳು.
ಆ ಕೇಕುಗಳ ದರ್ಶನದಿಂದ ಮನಸ್ಸಿನಲ್ಲಿ ಕುಣಿಯುತ್ತ ಮುಖದಲ್ಲಿ ಹೊರಬರಲು ಯತ್ನಿಸುತ್ತಿದ್ದ ಚೇಷ್ಟೆಯ ಹುಡುಗುತನವನ್ನ ಸ್ವಲ್ಪ ಬದಿಗಿಟ್ಟು, ಆ ಅಂಗಡಿಯ ಒಡತಿಗೆ, ಆ ಕೇಕುಗಳ ಆಕಾರದ ಹಿಂದಿನ ಕಥೆ ಏನೆಂದು ಕೇಳಿದೆವು. ನಮ್ಮ ಇಂಗ್ಲೀಷು ಆಕೆಯ ಪೋರ್ಚುಗೀಸು ನಡುವೆ ಯಾವುದೇ ಸೇತುವೆ ಇಲ್ಲದ ಕಾರಣ, ಕೈ ಸನ್ನೆಯಲ್ಲಿ ಒಂದು ಕೇಕಿನ ದುಡ್ಡು ಕೇಳಿ, ಕೊಂಡು, ಸಕ್ಕರೆಯ ಐಸಿಂಗಿನ ಆ ಕೇಕಿನ ಪ್ಲಾಸ್ಟಿಕಿನ ಬಂಧನದಿಂದ ಹೊರ ತಂದು, ತರತರದಲ್ಲಿ ಕೈಯಲ್ಲಿ ಹಿಡಿದು, ಫೋಟೋ ಮತ್ತು ವಿಡಿಯೋಗಳಲ್ಲಿ ಅದನ್ನು ವರ್ಣಿಸಿ, ಆಪ್ತ ಗೆಳೆಯರ ವಾಟ್ಸಪ್ಪ್ ಗುಂಪಿಗೆ ಆ ಕೇಕನ್ನು ವಿಡಿಯೋದ ಮೂಲಕ ಅರ್ಪಿಸಿ, ಮುನ್ನಡೆದೆವು. ಆಗ ಮಾತೆಲ್ಲ ಆ ಕೇಕು ಹುಟ್ಟಿದ, ಮತ್ತೆ ಹೀಗೆ ದಿನ ದಿನ ಅಮರಾಂತೆಯ ಹಲವು ಓವನ್ನು ಗಳಲ್ಲಿ ಬೇಯುತ್ತಿರುವ ಅದರ ಅವತಾರಗಳ ಹಿಂದಿನ ಕಾರಣಕ್ಕೆ ನಮ್ಮ ಊಹೆಯ ಪಟ್ಟಿ.
ಹಾಗೆ ಪಕ್ಕದ ಇಗರ್ಜಿಯ ಮುಂದಿಷ್ಟು ಭಂಗಿಗಳಲ್ಲಿ ನಮ್ಮನ್ನು ಫ್ರೇಮಿಸಿಕೊಂಡು, ಬ್ರಿಡ್ಜಿನ ಮೊದಲ ಬದಿಗೆ ಮರಳಿ, ಪಕ್ಕದ ಬೀದಿಯಲ್ಲಿ ಕಾಪಿಯ ಬಾಯಾರಿಕೆಗೆ ಹೊರಟ ನಮಗೆ ಮತ್ತೆ ಅಲ್ಲಿನ ಟೂರಿಸ್ಟ್ ಅಂಗಡಿಗಳ ಮ್ಯಾಗ್ನೆಟ್ಟುಗಳಲ್ಲಿ, ಹಾಗೆಯೇ ಆ ಬೀದಿಯ ಕೆಲವು ಬೇಕರಿಗಳಲ್ಲಿ ಮತ್ತದೇ ಕೇಕಿನ ದರ್ಶನ. ಬೇಕರಿಯ ಕೇಕುಗಳಿಗೆ ಸಕ್ಕರೆಯ ಕವಚವಿದ್ದರೆ, ಮ್ಯಾಗ್ನೆಟಿನ ಚಿತ್ರಗಳ ಕೇಕಿನ ಮೇಲೆ ಒಂದು ಹಲ್ಲಿ. ಆ ಮ್ಯಾಗ್ನೆಟ್ಟನ್ನು ಕೊಂಡುಕೊಳ್ಳುವಷ್ಟು ಧೈರ್ಯ ಬರಲಿಲ್ಲ. ಯಾವತ್ತಿನಂತೆ ಮೊಬೈಲಿನ ಕ್ಯಾಮರಾಕ್ಕೆ ಸೇರಿಸಿಕೊಂಡೆವಷ್ಟೇ. ಅಷ್ಟರಲ್ಲಿ ಸಮಯದ ಮುಳ್ಳು ಅನಬೆಲ್ಲ ಹಾಕಿದ ಗೆರೆ ಮುಟ್ತುತ್ತಿದ್ದರಿಂದ, ಅವಸರದಲ್ಲಿ ಕಾಪಿ ಕಪ್ಪು ಹಿಡಿದು ಬಸ್ಸಿನತ್ತ ಓಡಿದಂತೆ ನಡೆದೆವು.
ಬಸ್ಸಿನ ಬಾಗಿಲಿನ ಪಕ್ಕ ನಿಂತಿದ್ದ ಅನಬೆಲ್ಲಳ ಹತ್ತಿರ ಅಮರಾಂತೆಯ ಕೇಕಿನ ಕಥೆ ಮತ್ತೆ ಕೇಳಲು, ಅವಳು ಅದರ ಹೆಸರು ಸಂತ ಗೊನ್ಸಾಲಿನ್ಹೋ ಎಂದೂ, ಹಾಗೆಂದರೆ 'ದಿ ಲಿಟಲ್ ಗೋನ್ಸಾಲ್' ಎಂದರ್ಥವೆಂದೂ, ಮತ್ತೆ ಒಂದು ಕಾಲದಲ್ಲಿ ಅತಿ ಪ್ರಬಲವಾಗಿದ್ದ ಚರ್ಚಿನ ಹಿಡಿತದ ವಿರುದ್ಧ ಯಾವಾಗಲೋ ಸಿಡಿದೆದ್ದ ರೆಬೆಲಿಗರು, ಅವರ ಕೋಪ ಮತ್ತೆ ವ್ಯಂಗ್ಯವನ್ನು ವ್ಯಕ್ತಪಡಿಸಲು ಮೊದಮೊದಲು ಈ ಕೇಕನ್ನು ಬೇಯಿಸಿದರೆಂದೂ, ಹಾಗೆ ಬರುಬರುತ್ತ ಅದು ಅಮರಾಂತೆಯ ಜೋಕಿನ ಕೇಕಾಗಿ ಬಿಟ್ಟಿದೆ ಎಂದೆಲ್ಲ ವಿವರಿಸಿದಳು. ಅಷ್ಟಕ್ಕೇ ನಿಲ್ಲದೆ, ಆ ಕೇಕನ್ನು ತಿಂದವರಿಗೆ ಅವರಿಷ್ಟದ 'ಲವ್' ಸಿಗುತ್ತದೆ ಎಂದು ಜೋರಾದ ನಗುವಿನಲ್ಲಿ ಹೇಳುತ್ತಾ ಬಸ್ಸು ಹೊರಡಿಸಿದಳು.
ಅವಳ ವಿವರಣೆ, ಸಮಾಜದ ಪ್ರಬುದ್ಧತೆಗೆ ಅನುಗುಣವಾಗಿ ಹೋರಾಟದ ಮಜಲುಗಳು ವ್ಯಕ್ತವಾಗುವ ರೀತಿ, ಅವುಗಳ ಹಿಂದಿನ ಪ್ರೇರಣೆ ಮತ್ತು ಧೈರ್ಯವನ್ನು ಮೆಚ್ಚುತ್ತ, ವಿಮರ್ಶಿಸುತ್ತಾ, ನೆನಪಿನ ಕೊಟ್ಟೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಮರಾಂತೆಯನ್ನ ಮಡಿಚಿಡುತ್ತಿದ್ದವು. ಅಮರಾಂತೆಯನ್ನು ದಾಟಿದ ಮೇಲೂ ತಣಿಯದ ಕುತೂಹಲದಲ್ಲಿ ಹುಡುಕಿದ ವಿಕಿಪಿಡಿಯಾದಲ್ಲೂ ಅನಬೆಲ್ಲ ಕಥೆಯಷ್ಟು ವಿವರಗಳಿರಲಿಲ್ಲ. ಆದರೆ, 'ಸಂತ ಗೊನ್ಸಾಲಿನ್ಹೋ' ಚಿತ್ರವಿದೆ ಅಲ್ಲಿ, ಬೇಕಾದರೆ, ಸಣ್ಣ ಮಕ್ಕಳು ಪಕ್ಕ ಇಲ್ಲದಿದ್ದಾಗ ಸೈಲೆಂಟಾಗಿ ನೋಡಿ ನಮಸ್ಕರಿಸಿಬಿಡಿ.