ವಿಚಾರಿ-ವಿದೇಶಿ
‘’ದೀನಗೊಂದು ವಿಶ್ವ ಸಾಲದಾಸೆ ತಣಿಸಲು’’ ಎಂಬುದು ಕವಿಯ ಮಾತು. ಜೀವನದಲ್ಲಿ ಸುಖ ಸಮೃದ್ಧಿಯ ಅಭಿಲಾಷೆಯಿಂದಲೋ, ಮಹತ್ತರವಾದದ್ದನ್ನು ಸಾಧಿಸುವ ಆಕಾಂಕ್ಷೆಯಿಂದಲೋ, ಸಾಮರ್ಥ್ಯದ ಸಾಧ್ಯತೆಗಳನ್ನು ವಿಸ್ತರಿಸುವ ಹೆಬ್ಬಯಕೆಯಿಂದಲೋ, ಇಲ್ಲಾ ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವ ಕುತೂಹಲದ ’ ಕೆರೆತ’ದಿಂದಲೋ , ಹುಟ್ಟಿ ಬೆಳೆದ ನಾಡನ್ನು ಬಿಟ್ಟು ಹೊರದೇಶದಲ್ಲಿ ಬಂದಿಳಿದು ಜೀವನವನ್ನು ಕಟ್ಟಿಕೊಂಡು, ತಮ್ಮದೇ ಚಕ್ರವ್ಯೂಹದಲ್ಲಿ ತಾವೇ ಬಂದಿಗಳಾಗುವ ಪರಿಯನ್ನೂ ವಿವರಿಸುವ ಈ ಕವನ ಆಸಕ್ತಿಕರವಾಗಿದೆ. ದೇಸಾಯಿಯವರ ‘ಅಭಿಮನ್ಯುಗಳು’, ಕೇಶವ ಕುಲಕರ್ಣಿಯವರ ‘ಇಂಗ್ಲೆಂಡಿನಲ್ಲಿ ಮಾವಿನಹಣ್ಣು’ ಎಂಬ ಕವನಗಳು, ಇದೇ ಮನಸ್ಥಿತಿಯನ್ನು ಬಿಂಬಿಸುತ್ತವೆ ಎಂಬುದು ಕಾಕತಾಳೀಯವೇನಲ್ಲ ‘ಜನನಿ ಜನ್ಮ ಭೂಮಿಶ್ಚ ,ಸ್ವರ್ಗಾದಪಿ ಗರೀಯಸಿ’ ಎಂಬುದು ನಮ್ಮೆಲ್ಲರ ಮನದ ಮಾತು,ಸರಿ. ಆದರೆ ತ್ರಿಶಂಕು ಸ್ವರ್ಗದಲ್ಲಿ ತೇಲಾಡುವ ಅನಿವಾರ್ಯತೆ ಇರುವಲ್ಲಿ ಕೊರಗುವುದನ್ನು ತೊರೆದು, ಸಾರ್ಥಕ್ಯ ಪಡೆಯುವುದು ಸಾಧ್ಯವಿದೆ ಎಂದು ಕವಿಯತ್ರಿಯ ಅನಿಸಿಕೆ;ಅದು ನಮ್ಮದೂ ಹೌದಾದರೆ ಅತಿಶಯೋಕ್ತಿಯೇನಲ್ಲ. ಹತಾಶೆಯನ್ನು ಮೆಟ್ಟಿ, ತಾವಿದ್ದಲ್ಲಿಯೇ’ ಸ್ವರ್ಗ’ ಸೃಷ್ಟಿಸುವ ಸಾಧ್ಯತೆಗಳನ್ನು ತೋರಿಸುತ್ತಾ ಮುಗಿಯುವ ಈ ಕವನದ ಕರ್ತೃ ಡಾ. ಪ್ರೇಮಲತಾ ಅವರು. ಇಂಗ್ಲೆಂಡಿನ ಗ್ರಾಂಥಂ (Grantham),ಎಂಬಲ್ಲಿ ದಂತ-ವೈದ್ಯೆಯಾಗಿರುವ ಇವರು ಬಾಲ್ಯದಿಂದಲೂ ಸಾಹಿತ್ಯದ ಆಸಕ್ತಿಯನ್ನು ಪೋಷಿಸಿಕೊಂಡು ಬಂದವರು. ತುಮಕೂರಿನಲ್ಲಿ ವಿದ್ಯಾಭ್ಯಾಸ. ಶಾಲಾ ಕಾಲೇಜು ದಿನದಿಂದಲೂ ಹಲವಾರು ಕಾರ್ಯಕ್ರಮ -ಸ್ಪರ್ಧೆ ಇತ್ಯಾದಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿದ ಪ್ರತಿಭಾನ್ವಿತೆ. ಇತ್ತೀಚೆಗೆ ಕನ್ನಡ ಬಳಗದ ಕಾರ್ಯಕ್ರಮವೊಂದರಲ್ಲಿ, ನಿರೂಪಣೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು ಇವರ ಬಹುಮುಖ ಪ್ರತಿಭೆಗೆ ಹಿಡಿದ ಕನ್ನಡಿ ಎಂದೆನ್ನಬಹುದು. ನಮ್ಮ ಜಾಲ ಜಗುಲಿಯಲ್ಲೂ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.
ವಿಚಾರಿ-ವಿದೇಶಿ
(ವಿಚಾರವಂತ ವಿದೇಶಿಗನಿಗೆ ಮನಸ್ಸಲ್ಲಿ ನಾನಾ ತಾಕಲಾಟ. ಅವನ ’ವೈಚಾರಿಕ ಚಿಟ್ಟ”ಯ ಜೀವನ ಯಾನ –ಈ ಕವನದ ಪ್ರತೀಕ)
ವಿದೇಶ ಪ್ರಯಾಣ, ಕೈ ತುಂಬ ಕಾಂಚಾಣ
ಆಕಾಶ ಭೇದಿಸಿ ಹೊರಟೈತೆ, ’ಆಸೆ ವಿಮಾನ’!
ಮಲಗಿದ್ರೆ ಕನ್ಸಲ್ಲಿ ಒಂತರಾ……. ಕಚಗುಳಿ
ವಿದೇಶದಲ್ಲಿ ಬಿಟ್ಟೋಯ್ತು, ಸ್ವದೇಶದ ಮೈಚಳಿ!
ಗಮ್ಮತ್ತೆ ಗಮ್ಮತ್ತು,ವಿದೇಶದ ಈ ಮತ್ತು
ಕುಡಿದಂಗೆ ಮೈಯೆಲ್ಲ ಬಿಸಿಯೇರಿ ಕಾವ್ಕಿತ್ತು
’ಡರ್..’ ಅಂತ ತೇಗಿದ್ರೆ ಬುರುಗೆಲ್ಲ ಮೇಲೆದ್ದು
ಮರ್ತೋಯ್ತು ಸ್ವದೇಶದೆಲ್ಲ ಬಾಬತ್ತು!
ಇಳ್ದಂಗೆ ನಶೆ, ಕಳೆದಂಗೆ ಕಾಲ
ಅರಿವಾಯ್ತು ಇದು, ತ್ರಿಶಂಕು ಸ್ವರ್ಗ!
’ಕಾಲಾಯ ತಸ್ಮೈ ನಮ’, ಬದಲಾಯ್ತು ಎಲ್ಲ
ಮೆಟ್ಟೆದ್ದು ನಿಂತು, ಕಳೆದೆಲ್ಲ ಗರ್ವ!
ಮನೆ, ಬಟ್ಟೆ, ಕಾರೆಲ್ಲವಾದ್ರು ವಿದೇಶ
ಮುನಿಯುತ್ತೆ ಮನಸು,ಇಲ್ದಿದ್ರೆ ಮನೆಯೂಟ!
ಗಂಟೆಗಟ್ಟಳೆ ವದರಿದ್ರು ಬರಿ ಇಂಗ್ಲೀಷ
ತಹತಹಿಸುತ್ತೆ ಬಾಯ್ಬಿಡೋಕೆ, ನಾಲ್ಗೆ ಕರ್ನಾಟ!
ಅದ್ಬೇಕು, ಇದೂ ಬೇಕು, ಬೇಡ್ಕಣೋ
ಮನಸ್ಸಲ್ಲೆ ಅಪ್ಕೊ, ಏನಾದ್ರು ಒಂದನ್ನ!
ಕಲೀತು ಮಿದುಳು, ಮಾಗಿತ್ತು ಹೃದಯ
ಪರದೇಶದಲ್ಲಿದ್ದೆ ಪೋಶಿಸಿ ತಾಯಿ ಬೇರನ್ನ!
-ಪ್ರೇಮಲತ ಬಿ.