ನನ್ನ ನೆನಪಿನಲ್ಲಿ ತಂದೆ ಜಿ.ಎಸ್.ಎಸ್ – ಶಿವಪ್ರಸಾದ್

ಕನ್ನಡದ ಅನನ್ಯ ಕವಿ

(ನಮ್ಮೆಲ್ಲರ ಪ್ರೀತಿಯ ಜಿ ಎಸ್ ಎಸ್ ನಮ್ಮನಗಲಿ ಇಂದಿಗೆ ಒಂದು ವರ್ಷ. ಕನ್ನಡವನ್ನು ಮತ್ತು ಕನ್ನಡಿಗರನ್ನು ಬೆಳೆಸಿದ ಕವಿವರ್ಯರಿಗೆ ‘ಕಸಾಸವಿವೇ’ ಬಳಗದ ನಮನ).

Nothing is so precious as the memory that lives on…….೨೩ನೆ ಡಿಸೆಂಬರ್ ಸೋಮವಾರ ಬೆಳಗ್ಗೆ ಸುಮಾರು ಏಳು ಗಂಟೆಯ ಸಮಯ ನಾನು ಹಾಸಿಗೆಯಿಂದ ಎದ್ದು ಕೆಲಸಕ್ಕೆ ಹೊರಡುವ ಸಿದ್ಧತೆಯಲ್ಲಿ ತೊಡಗಿರುವಾಗ ನಮ್ಮ ಪರಿವಾರದ ಹಿತೈಷಿಗಳೊಬ್ಬರು ದೂರವಾಣಿಯ ಮೂಲಕ ಬಹಳ ಗಂಭೀರವಾದ ಹಾಗು ಮೃದುವಾದ ದನಿಯಲ್ಲಿ “Prasad your father is no more I am sorry to convey this message” ಎಂದು ತಿಳಿಪಡಿಸಿದಾಗ ನನ್ನ ತಂದೆಯವರು ಹಲವಾರು ತಿಂಗಳಿಂದ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ನಾನು ನಿರೀಕ್ಷಿಸಿದ್ದ ಅನಿವಾರ್ಯ ಸುದ್ದಿಯಾಗಿದ್ದು ನನ್ನಲ್ಲಿ ಆಘಾತವನ್ನಾಗಲಿ ಅಥವ ತೀವ್ರ ಭಾವನೆಗಳನ್ನಾಗಲಿ ಉಂಟುಮಾಡಲಿಲ್ಲ. ವೈದ್ಯನಾಗಿ ದಿನನಿತ್ಯ ಸಾವು-ನೋವುಗಳನ್ನು ಕಾಣುವ ಒಂದು ಮನೋಸ್ಥೈರ್ಯ ನನ್ನ ಭಾವನೆಗಳನ್ನು ಹಿಡಿದಿಟ್ಟಿದ್ದವು.

ನಾವು ಬನಶಂಕರಿಯಲ್ಲಿರುವ ನಮ್ಮ ಮನೆ ತಲುಪುವ ವೇಳೆಗೆ, ಹಲವಾರು ದೂರದರ್ಶನದ ವಾರ್ತಾ-ಮಾಧ್ಯಮದವರು live ಕ್ಯಾಮರ ಹಿಡಿದು ಮುನ್ನುಗ್ಗಿ ನಾನು ಕಾರಿನಿಂದ ಇಳಿಯುತ್ತಿದಂತೆ ಚಿತ್ರೀಕರಿಸಲು ಮುಂದಾದರು. ಇದಾವುದನ್ನು ನಿರೀಕ್ಷಿಸದ ನನಗೆ ಸ್ವಲ್ಪ ಕಕ್ಕಾಬಿಕ್ಕಿಯಾಗಿ ಮುಜುಗುರವಾಯಿತು. ಇದುವರೆವಿಗೂ ಅನಾಮಧೇಯ ಜನ-ಸಾಮಾನ್ಯನಾಗಿದ್ದ ನನಗೆ ಧಿಡೀರನೆ ರಾಷ್ಟ್ರಕವಿಗಳ ಒಂದು celebrity status ನಲ್ಲಿ ಹಾಗು ಕೀರ್ತಿಯಲ್ಲಿ ಅನಿವಾರ್ಯವಾಗಿ ಪಾಲುದಾರನಾಗುವ ಅವಕಾಶ ಒದಗಿ ಬಂದು ಆ ದುಃಖ-ತಪ್ತ ಸಂಧರ್ಭದಲ್ಲಿಯೂ ಒಂದು ಹೆಮ್ಮೆ ಮಿಶ್ರಿತ ಭಾವನೆಗಳು ಮೂಡಿ ಬಂದು ನಾನು ಇದನ್ನುನಿಭಾಯಿಸುವುದು ಸ್ವಲ್ಪಕಷ್ಟವಾಯಿತು. ಈ ವಿಚಿತ್ರ ಅನುಭವದಿಂದ ಚೇತರಿಸಿಕೊಂಡು ನನ್ನ ತಂದಯವರ ಕೋಣೆಗೆ ಹೊಕ್ಕು ಅಲ್ಲಿ ಅವರ ಭಾವ ಚಿತ್ರಕ್ಕೆ ನಮಸ್ಕರಿಸುವಾಗ, ಉಕ್ಕಿಬಂದ ತೀವ್ರ ಭಾವನೆಗಳನ್ನು TV ವೀಕ್ಷಕರೊಂದಿಗೆ ಹಂಚಿಕೊಳ್ಳದೆ ಸಂಯಮದಿಂದ ಹಿಡಿದಿಟ್ಟುಕೊಂಡು ಒಳಕೋಣೆಯಲ್ಲಿ ಸೇರಿ ಅಮ್ಮನ್ನನ್ನು ಅಪ್ಪಿಕೊಂಡ ಕೂಡಲೆ ನನ್ನ ಸಂಯಮಗಳು ಮುರಿದುಬಿದ್ದು ಹರಿದ ಕಂಬನಿಗಳ ಪ್ರವಾಹ, ಶ್ರದ್ಧಾಂಜಲಿಯ ಮೊದಲನೆ ಕಂತನ್ನು ಅರ್ಪಿಸಿದವು.

ಲಂಡನ್ನಿನಲ್ಲಿ ಜಿ ಎಸ್ ಎಸ್

ಡಿಸಂಬರ್ ೨೬ನೆ ತಾರೀಖು ೭.೩೦ರ ವೇಳೆಗೆ ನೂರಾರು ಜನ ಮನೆಯಲ್ಲಿ ನೆರೆದಿದ್ದರು. ಚನ್ನವೀರ ಕಣವಿ,ನಿಸ್ಸಾರ್ ಅಹಮದ್, ಜೆ.ಎಸ್.ಎಸ್ ಸ್ವಾಮಿಗಳು ಹೀಗೆ ಅನೇಕ ಗಣ್ಯವ್ಯಕ್ತಿಗಳು ಅಲ್ಲಿ ನೆರೆದಿದ್ದು ತಂದೆಯವರ ಪಾರ್ಥಿವ ಶರೀರವನ್ನು ಹೂಗಳ ಹಾಗು ಗಂಧದ ಹಾರದೊಂದಿಗೆ ಅಲಂಕರಿಸಿ ತಂದಿದ್ದರು. ನಾನು ಬಹಳ ಆತಂಕದಿಂದ ಶರೀರವನ್ನು ಅಡಿಯಿಂದ ಮುಡಿಯವರೆಗೂ ಗಮನಿಸಿದೆ. ಆದೇ ಪ್ರಶಾಂತವಾದ ಗಂಭೀರ ಚಹರೆ, GSS trade mark ಆಗಿರುವ ಅವರ ಹಿತ್ತಾಳೆ ಅಂಚಿನ ದುಂಡನೆಯ ಕನ್ನಡಕ, ಹಣೆಗೆ ವಿಭೂತಿ ಕುಂಕುಮಗಳಿಲ್ಲ. ಆವರ ಇಚ್ಛೆಯಂತೆ ಯಾವ ಧಾರ್ಮಿಕ ಕ್ರಿಯೆಗಳು ಮನೆಯಲ್ಲಿ ಜರುಗಲಿಲ್ಲ. ಜೆ.ಎಸ್.ಎಸ್ ಸ್ವಾಮಿಗಳು ಅಂದು ಮಠಾಧಿಪತಿಗಳಾಗಿ, ಧಾರ್ಮಿಕ ಕಾರ್ಯವನ್ನು ಆಚರಿಸಲು ಬಂದಿರಲಿಲ್ಲ. ಬದಲಿಗೆ, ಅವರು ಜಿ ಎಸ್ ಎಸ್ ಸಾಹಿತ್ಯಾಭಿಮಾನಿಗಳಾಗಿ ಬಂದಿದ್ದು, ಸುಗಮ-ಸಂಗೀತ ಕಲಾವಿದರು ನೀಡಿದ ಕಾವ್ಯನಮನದಲ್ಲಿ ಪಾಲ್ಗೊಂಡು ತೆರಳಿದರು.

ನಾನು ತಂದೆಯವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಕೊಂಡೊಯ್ಯುವ ವಾಹನದಲ್ಲಿ ಕುಳಿತೆ. ಪ್ರಯಾಣದ ಸಮಯದಲ್ಲಿ ಇತ್ತೀಚಿನ ದಿನಗಳ ನೆನಪುಗಳು ನನ್ನನ್ನು ಕಾಡತೊಡಗಿದವು. ಅವರ ಮಕ್ಕಳಾದ ನಾವು ಬಾಲ್ಯದಿಂದ ತಂದೆಯವರನ್ನು ’ಅಣ್ಣ’ ಎಂದು ಕರೆಯುತ್ತಿದ್ದೆವು. ನಾನು ಹಲವು ತಿಂಗಳ ಹಿಂದೆ ಗಣೇಶ ಹಬ್ಬಕ್ಕೆ ಬಂದಾಗ ಹಿಂದಿರುಗುವ ಸಮಯದಲ್ಲಿ ಎಂದಿನಂತೆ ಕಾಲಿಗೆ ನಮಸ್ಕರಿಸಿ “ಅಣ್ಣ ಹೋಗಿಬರುತ್ತೇನೆ ನಿಮ್ಮ ಮಂದಿನ ಬರ್ತ್ ಡೇಗೆ ಬರುತ್ತೇನೆ” ಎಂದಾಗ ಅವರು ಕಿರುನಕ್ಕು “ನಾನು ಅಲ್ಲಿಯತನಕ ಇದ್ದರೆ ನೋಡೊಣ, ನಾನು ಹೊರಡಲು ರೆಡಿಯಾಗಿದ್ದೇನೆ” ಎಂದರು. ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ practical ಆಗಿ ಯೋಚನೆ ಮಾಡುವ ತಂದೆಯವರಿಂದ ಆ ಮಾತುಗಳು ಬಂದದ್ದು ಆಶ್ಚರ್ಯವೇನಲ್ಲ. ಅವರು ನರರೋಗ ಮತ್ತು ಹೃದ್ರೋಗದಿಂದ ಬಳಲುತ್ತಿದ್ದು ಇತ್ತೀಚಿನ ಕೆಲವು ವರ್ಷಗಳಲ್ಲಿ ದಿನನಿತ್ಯ ಕಾರ್ಯಾಕಲಾಪಗಳಿಗೆ ಇತರರ ನೆರವು ಪಡೆಯುವುದು ಅನಿವಾರ್ಯವಾಗಿತ್ತು. ನಾ ಕಂಡಂತೆ ತಂದೆಯವರು ಬಹಳ ಸ್ವಾವಲಂಬಿ ಹಾಗು ಸ್ವಾಭಿಮಾನಿಗಳಾಗಿದ್ದು ಅವರಿಗೆ ಬೇರೆಯವರನ್ನು ಅವಲಂಬಿಸುವುದು ಮುಜುಗರ ಹಾಗು ಅಸಮಾಧಾನಗಳನ್ನು ತಂದಿತ್ತು. ಒಮ್ಮೆ ನನ್ನ ಹಾಗು ಪೂರ್ಣಿಮಾಳ ಬಳಿ ಮಾತನಾಡುತ್ತ ” ನನಗೆ ಮುಪ್ಪುಬರುವ ಬಗ್ಗೆ ಕಲ್ಪನೆಗಳಿದ್ದವು ಆದರೆ ಅದು ಹೀಗಿರುತ್ತದೆ ಎಂಬುದನ್ನು ನಾನು ನಿರೀಕ್ಷಿಸಿರಲ್ಲಿಲ್ಲ” ಎಂದರು. ತಂದೆಯವರ ಸ್ವಾಭಿಮಾನ ಎಷ್ಟರಮಟ್ಟಿಗೆ ಎಂದರೆ ಅವರು ಪ್ರತಿಸಾರಿ ಇಂಗ್ಲೇಡಿಗೆ ಬಂದಾಗ ನಾನು ಅವರ ವಿಮಾನ ಪ್ರಯಾಣದ ಖರ್ಚನ್ನು ವಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರು ಒಪ್ಪುತ್ತಿರಲಿಲ್ಲ.

ನಾವು ರವೀಂದ್ರ ಕಲಾಕ್ಷೇತ್ರದ ಆವರಣವನ್ನು ತಲುಪಿದಾಗ ತಂದೆಯವರ ಪಾರ್ಥಿವ ಶರೀರವನ್ನು ವಿಶೇಷವಾಗಿ ಅಲಂಕೃತವಾದ ಸ್ಥಳದಲ್ಲಿ ಇರಿಸಿ ಜನಸಾಮಾನ್ಯರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ಅಲಂಕೃತವಾದ ಸಜ್ಜಿಗೆ, ಹೂವಿನ ರಾಶಿ ಹಾಗು ಹಾರಗಳ ನಡುವಿನಲ್ಲಿ ಜಿ ಎಸ್ ಎಸ್ ಪಾರ್ಥಿವ ಶರೀರ, ಹಿನ್ನೆಲೆಯಲ್ಲಿ ಸುಗಮ-ಸಂಗೀತದವರಿಂದ ಸುಶ್ರಾವ್ಯವಾದ ಸಂಗೀತ, ಗೌರವ ಸಲ್ಲಿಸಲು ಕ್ಯೂನಲ್ಲಿ ನಿಂತಿದ್ದ ಸಾಹಿತಿಗಳು, ಮಂತ್ರಿಗಳು, ಎಡೆಬಿಡದೆ ಕ್ಲಿಕ್ಕಿಸುತ್ತಿರುವ ಕ್ಯಾಮರಗಳು, ಮಾಧ್ಯಮದವರ ವೀಡಿಯೊ ಮಾಡುವ ಮುತುವರ್ಜಿ ಇವನ್ನೆಲ್ಲ ಗಮನಿಸಿದಾಗ ನೆರೆದವರಿಗೆ ಈ ಸಂಧರ್ಭ ಶೋಕಕ್ಕಿಂತ ಹೆಚ್ಚಾಗಿ ಒಂದು ಹಬ್ಬದ ಅಥವಾ ಸಂಭ್ರಮದ ಕಾರ್ಯವೆಂಬಂತೆ ತೋರುತ್ತಿತ್ತು. ಪರಿಪೂರ್ಣವಾದ ಬದುಕನ್ನು ಮುಗಿಸಿದ ಒಬ್ಬ ರಾಷ್ಟ್ರಕವಿಗೆ ವಿದಾಯ ಹೇಳುವ ಪರಿ ಸೂಕ್ತವಾಗಿದ್ದು ಈ ಹಬ್ಬದ ಸಂಭ್ರಮ ವಾತಾವರಣ ಅನುಚಿತವೆಂಬಂತೆ ತೋರಲಿಲ್ಲ.

ನಾನು ಪ್ರತಿಬಾರಿ ರಜಕ್ಕೆ ಬೆಂಗಳೂರಿಗೆ ಬರುವ ಮುನ್ನ ತಂದೆಯವರಿಗೆ ಫೋನ್ ಮಾಡಿ ಅವರಿಗೆ ಇಂಗ್ಲೇಂಡಿನಿಂದ ಎನಾದರು ಬೇಕೆ ಎಂದು ವಿಚಾರಿಸಿವುದು ನನ್ನ ವಾಡಿಕೆ. ಅದಕ್ಕೆ ಅವರು “ನನಗೆ ಏನೂ ಬೇಡ ನೀನು ಸುಮ್ಮನೆ ಬಾ” ಎಂಬ ನೀರೀಕ್ಷಿತ ಉತ್ತರವನ್ನೆ ಕೊಡುತ್ತಿದ್ದರು. ತೀರ ಬಲವಂತ ಮಾಡಿದಾಗ “ಸರಿ ಒಂದಿಷ್ಟು salted ಗೋಡಂಬಿಯನ್ನು ತೆಗೆದುಕೊಂಡು ಬಾ” ಎಂದು ಹೇಳುತ್ತಿದ್ದರು. ಪ್ರತಿಸಾರಿ ಅವರು ಕೇಳದಿದ್ದರು ನಾನು ಏರ್-ಪೋರ್ಟಿನ duty free shop ನಲ್ಲಿ ಗೋಡಂಬಿಯ ಜೊತೆಯಲ್ಲಿ ಒಂದು Scotch whisky ಯನ್ನು ಅಣ್ಣನಿಗೆ ಅಂತ ತೆಗೆದು ಕೊಂಡಿರುತ್ತಿದ್ದೆ. ಬೆಂಗಳೂರು ತಲುಪಿದ ಒಂದೆರಡು ದಿನದಲ್ಲಿ ಮನೆಯಲ್ಲಿ ಒಂದು ಪಾರ್ಟಿ ನಡೆಯುತ್ತಿದ್ದು ಜಿ ಎಸ್ ಎಸ್ ಅವರ ಆಪ್ತಮಿತ್ರರು, ನಾನು, ನನ್ನ ಭಾವನವರಾದ ಡಾ. ಮರುಳಸಿದ್ದಪ್ಪನವರು ಸೇರಿಕೊಂಡು ಅಣ್ಣನ ನೆಪದಲ್ಲಿ ವಿಸ್ಕಿ ಶೀಶೆಯ ತಳಕಾಣಿಸುತ್ತಿದ್ದೆವು! ಅಣ್ಣನಿಗೋ ವಿಸ್ಕಿಗಿಂತ ಅಲ್ಲಿರುವ ಗೋಡಂಬಿ ಮತ್ತು ಚಿಪ್ಸ್ ಮೆಲ್ಲುವಲ್ಲಿ ಆಸಕ್ತಿ! ಅಣ್ಣ ಪಾರ್ಟಿ ವಾತಾವರಣದಲ್ಲಿ ಬಹಳ ಮಿತಭಾಷಿಗಳು. ಸಾಹಿತ್ಯ ವಿಚಾರ ಬಂದಾಗ ಮಾತ್ರ ಹರಟೆಗೆ ಸೇರುತ್ತಿದರು. ಒಂದೆರಡು ಪೆಗ್ ಒಳಗೆ ಹೋದ ಮೇಲಾದರೂ ಅವರು ಹರಟುತ್ತಾರೆಂದು ಎಲ್ಲರು ನಿರೀಕ್ಷಿಸಿದರೆ ಮೊದಲೇ ಅಂತರ್ಮುಖಿಗಳಾದ ಅಣ್ಣ, ವಿಸ್ಕಿ ಒಳ ಸೇರಿದ ಬಳಿಕ ಇನ್ನೂ ಅಂತರ್ಮುಖಿಯಾಗಿ ಮೌನ-ವ್ರತವನ್ನಾಚರಿಸುವ ಸನ್ಯಾಸಿಯಂತಾಗಿ ಬಿಡುತ್ತಿದ್ದರು! ನಮ್ಮ ವಿಸ್ಕಿ ಪಾರ್ಟಿಗಳಿಗೆ ನನ್ನ ಅಮ್ಮನ ಸಂಪೂರ್ಣ ಸಮ್ಮತಿ ಇಲ್ಲದ್ದಿದ್ದರೂ, ನನ್ನ ಅಕ್ಕ ಜಯಂತಿಯ ಸಹಕಾರದಿಂದ ಪಕೋಡ ಮತ್ತು ಬಜ್ಜಿಗಳ ಸರಬರಾಜಿಗೆ ಎನೂ ತೊಂದರೆ ಇರಲಿಲ್ಲ.

ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಅಂತಿಮಕಾರ್ಯವು ಬಹಳ ಸುವ್ಯವಸ್ಥಿತವಾಗಿ ನಿಗದಿಯಾದ ಸಮಯಕ್ಕೆ ರಾಜ್ಯ-ಗೌರವಗಳೊಂದಿಗೆ ಜರುಗಿತು. ರಾಷ್ಟ್ರ ಹಾಗು ನಾಡ ಗೀತೆಯನಂತರ ಸಂಜೆ ಐದರ ಸಮಯದಲ್ಲಿ ಮಾಗಿಯ ಸೂರ್ಯನ ಹಿತವಾದ ಕೆಂಪಿನಲ್ಲಿ ನನ್ನ ಅಣ್ಣ ಜಯದೇವನಿಂದ ಚಿತೆಗೆ ಅಗ್ನಿಸ್ಪರ್ಶವಾಗುವುದರಲ್ಲಿದ್ದಾಗ, ಸುಗಮ ಸಂಗೀತದವರು ಒಕ್ಕೊರಳಿನಲ್ಲಿ ”ಕಾಣದ ಕಡಲಿಗೆ ಹಂಬಲಿಸಿದೆ ಮನ’’ ಕವನವನ್ನು ಹಾಡಿದ್ದು ಬಹಳ ಅರ್ಥಪೂರ್ಣವೆನಿಸಿತು. ಅಲ್ಲಿ ನೆರೆದಿದ್ದ ಸಹಸ್ರಾರು ಜನರ ಮೌನ, ಸಂಯಮ ಹಾಗು ಗಂಭೀರ ನಡತೆ ಆ ಕಾರ್ಯಕ್ಕೆ ಒಂದು ಘನತೆಯನ್ನು ತಂದುಕೊಟ್ಟಿತ್ತು. ಆಲ್ಲಿ ಕೆಲವು ಯುವಕರು “ಜಾತೀಯತೆ ತೊಲಗಿಸಿ ಮಾನವೀಯತೆ ಉಳಿಸಿ” ಎಂಬ ಘೊಷಣೆಗಳನ್ನು ಕೂಗಿದ್ದು ಜಿ ಎಸ್ ಎಸ್ ಅವರ ಜಾತ್ಯಾತೀತ ನಿಲುವಿಗೆ ಸಾಕ್ಷಿಯಾಗಿತ್ತು. ಈ ಒಂದು ಸಂಧರ್ಭ ನನಗೂ ನನ್ನ ಪರಿವಾರದವರಿಗೂ ಅತ್ಯಂತ ದುಃಖ ತಪ್ತವಾದ ಘಳಿಗೆಯಾದರೂ ಸಹಾ, ಒಂದು ಸ್ಮರಣೀಯ ಅನುಭವವಾಗಿ ನನ್ನ ನೆನಪಿನಲ್ಲಿ ದಾಖಲೆಯಾಗಿರುವುದು ಒಂದು ವಿಚಿತ್ರ ಸಂಗತಿ.

ತಾವು ಯಾವ ಧರ್ಮಕ್ಕೂ ಅಥವಾ ಮತಕ್ಕೂ ಸೇರಿದವರಲ್ಲ, ತಮ್ಮನ್ನು ಕೇವಲ ಒಬ್ಬ ಕನ್ನಡಿಗನೆಂದು ಪರಿಗಣಿಸಬೇಕು ಹಾಗು ಅವರ ಅಂತಿಮ ಕಾರ್ಯದಲ್ಲಿ ಯಾವುದೇ ಧಾರ್ಮಿಕ ಸೋಂಕು ಇರಬಾರದೆಂದು ನನ್ನ ಅಣ್ಣ ಜಯದೇವನಿಗೆ ಕೆಲವು ತಿಂಗಳ ಹಿಂದೆ ತಿಳಿಸಿದ್ದರು. ಬದುಕಿನಲ್ಲಿ ಮೂಢನಂಬಿಕೆ, ಧರ್ಮ ಮತ್ತು ಜಾತಿ ಹೆಸರಿನಲ್ಲಿ ನಡೆಯುವ ಶೋಷಣೆ ಇವುಗಳ ಬಗ್ಗೆ ತಿರಸ್ಕಾರ ಭಾವನೆಗಳಿದ್ದು, ಬದುಕಿನಲ್ಲಷ್ಟೆ ಅಲ್ಲದೆ ಸಾವಿನಲ್ಲೂ ಅವರು ತಮ್ಮ ವೈಚಾರಿಕ ಪ್ರಜ್ಞೆಗಳನ್ನು ಉಳಿಸಿಕೊಂಡರು. ಜಿ ಎಸ್ ಎಸ್ ಅವರು ಬದುಕಿನಲ್ಲಿ ಮಾಡುವ ಯಾವುದೇ ಕಾರ್ಯಗಳಲ್ಲಿ ಒಂದು ಮುಂದಾಲೋಚನೆ, ಶಿಸ್ತು ಹಾಗು ಪೂರ್ವನಿಯೋಜಿತ ಸಿದ್ಧತೆ ಕಂಡುಬರುತ್ತಿತ್ತು. ಅವರ ಅಂತ್ಯಕ್ರಿಯೆಯು ಇದೇ ಮೌಲ್ಯಗಳನ್ನಾಧರಿಸಿ ವ್ಯವಸ್ಥಿತವಾಗಿ ಜರುಗಿತು, ಇದಕ್ಕಿಂತ ಹೆಚ್ಚಿನ ಪ್ರೀತಿ, ವಿಶ್ವಾಸ ಮತ್ತು ಗೌರವಗಳನ್ನು ಕನ್ನಡ ಜನತೆಯಿಂದ ಹಾಗು ಸರ್ಕಾರದಿಂದ ಜಿ ಎಸ್ ಎಸ್ ಪರಿವಾರದವರು ನಿರೀಕ್ಷಿಸಿರಲ್ಲಿಲ್ಲ.

’’ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ” ವೆಂಬ ನಿರ್ಲಿಪ್ತ ನಿಲುವನ್ನು ತಳೆದಿದ್ದ ತಂದೆಯವರಿಗೆ ಗೌರವ, ಸನ್ಮಾನ, ಪುರಸ್ಕಾರ ಕೊನೆಗೆ ರಾಷ್ಟ್ರಕವಿ ಪಟ್ಟ ತಾನೆ ಅರಸಿ ಬಂದಿದ್ದು, ಅವರು ಈ ಪುರಸ್ಕಾರಗಳನ್ನು ಧನ್ಯತೆಯ ಭಾವನೆಯಿಂದ ಸ್ವೀಕರಿಸಿದ್ದರು. ’’To love life is to live life” ಎಂಬ ತತ್ವವನ್ನು ನಂಬಿ ಬದುಕನ್ನು ಪ್ರೀತಿಸಿದ್ದವರು ಜಿ ಎಸ್ ಎಸ್. ’’ಪ್ರೀತಿ ಇಲ್ಲದಮೇಲೆ ಹೂವು ಅರಳಿತು ಹೇಗೆ” ಎಂದು ಪ್ರಶ್ನಿಸುತ್ತ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಂಡು ’’ಸ್ನೇಹ ಪ್ರೀತಿ ಕರುಣೆ ಮರುಕ ಇವೇ ನಮ್ಮ ದೇವರು’’ ಎಂದು ಬರೆಯುತ್ತಾ ತುಂಬು ಬಾಳ್ವೆಯನ್ನು ನಡೆಸಿದ ಕವಿ ಡಾ. ಜಿ ಎಸ್ ಎಸ್.

ಇಂತಹ ಕವಿಗೆ ಹಲವಾರು ಸಂಘ-ಸಂಸ್ಥೆಗಳು ಈಗಾಗಲೆ ತಮ್ಮ ಶ್ರದ್ಧಾಂಜಲಿಗಳನ್ನು ಅರ್ಪಿಸಿವೆ. ಒಬ್ಬ ಹಿರಿಯ ಕವಿ, ವಿಮರ್ಶಕ, ಪ್ರಾಧ್ಯಾಪಕ ಹಾಗು ಚಿಂತಕರಾದ ಜಿ ಎಸ್ ಎಸ್ ಅವರಿಗೆ ಅವರ ಶಿಷ್ಯರು ಹಾಗು ಸಾಹಿತಿಗಳು ವಿಚಾರ ಗೋಷ್ಟಿಗಳ ಮೂಲಕ, ಸುಗಮ ಸಂಗೀತದವರು ಗೀತ ನಮನದ ಮೂಲಕ, ಸರ್ಕಾರದವರು ಸ್ಮಾರಕವನ್ನು ಕಟ್ಟುವುದರ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಬಹುದು. ಆದರೆ ಎಲ್ಲ ಕನ್ನಡಿಗರು ಜಿ ಎಸ್ ಎಸ್ ಅವರ ಕವಿತೆಗಳನ್ನು, ಸಾಹಿತ್ಯವನ್ನು ಓದಿ ಅವರ ಬದುಕಿನ ಸಂದೇಶವನ್ನು ಅರ್ಥಮಾಡಿಕೊಳ್ಳುವುದೇ, ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ಬೆಳಕಿನರಮನೆಯಿಂದ ಎದೆ ತುಂಬಿ ಹಾಡಿ ಕಾಣದ ಕಡಲಿಗೆ ತೆರಳಿದ ರಾಷ್ಟ್ರಕವಿಗೆ ನಮನ – ಗಿರಿಧರ ಎಸ್ ಹಂಪಾಪುರ

CC- Wiki

ದಾರಿ ನೂರಾರಿವೆ ಬೆಳಕಿನರಮನೆಗೆ’! ‘ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ’! ‘ಒಂದೊಂದು ಹಂತ,ನೂರಾರು ಭಾವದ ಭಾವಿ ಎತ್ತಿಕೋ!ನಿನಗೆ ಬೇಕಾದಷ್ಟು ಸಿಹಿನೀರ,ಪಾತ್ರೆಯಾಕಾರಗಳ ಕುರಿತ ಏತಕೆ ಜಗಳ?ನಮಗೆ ಬೇಕಾದದ್ದು ದಾಹ ಪರಿಹಾರ’ ಆಹಾ! ಎಂಥ ಮಾತುಗಳು. ಇದನ್ನು ಬರೆದವರಾರು ಎಂದು ಚಿಂತಿಸುದ್ದೀರಾ ? ಇವರೇ ರಾಷ್ಟ್ರಕವಿ ಡಾ ಜಿ.ಎಸ್.ಶಿವರುದ್ರಪ್ಪ.ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಶಿಕ್ಷಕ ಹಾಗೂ ಒಳ್ಳೆಯ ಆಡಳಿತಗಾರ.

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ- ಶಾಂತವೀರಪ್ಪ ಹಾಗು ವೀರಮ್ಮನವರಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ,ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು,ದಾವಣಗೆರೆ,ತುಮಕೂರುಗಳಲ್ಲಿ ಪ್ರೌಢಶಾಲಾ,ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು.ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ಆನರ್ಸ್ ಪದವಿ ಪಡೆದ ನಂತರ, ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ನಂತರ ಎಮ್.ಎ.ಮುಗಿಸಿದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯವೇತನದ ಸಹಾಯದಿಂದ ಕುವೆಂಪುರವರ ನೇತೃತ್ವದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿಕೊಟ್ಟ ಇವರ ಪ್ರೌಢ ಪ್ರಬಂಧದ ವಿಷಯ – ಸೌಂದರ್ಯ ಸಮೀಕ್ಷೆ.

ಡಾ. ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು, ಮೈಸೂರು ಮಹಾರಾಜಾ ಕಾಲೇಜಿನಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಸ್ತಪ್ರತಿಗಳ ಸಂಗ್ರಹಣೆ,ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಹಸ್ತಪ್ರತಿ ವಿಭಾಗ’ವನ್ನು ಪ್ರಾರಂಭಿಸಿದರು.ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತಪ್ರತಿಗಳ ಸಂಗ್ರಹಣೆಯಾಯಿತು.ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷ, ಮದರಾಸಿನ ಕನ್ನಡ ಸಮ್ಮೇಳನದ ಅಧ್ಯಕ್ಷ ಹಾಗೂ ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.

ಕುವೆಂಪು ಶಿಷ್ಯ ಪರಂಪರೆಯನ್ನು ಉಳಿಸಿಕೊಂಡು ಬಂದವರು ಇವರು. ಯಾವಾಗಲು ಪಂಚೆ-ಶರ್ಟಿನ್ನೇ ಧರಿಸುತ್ತಿದ್ದ ಶಿವರುದ್ರಪ್ಪನವರು, ಮಾಸ್ಕೊ ನಗರಕ್ಕೆ ಹೋಗಬೇಕಾದರೆ ಮೊದಲ ಬಾರಿಗೆ ಪ್ಯಾಂಟ್ ಧರಿಸಿದೆ ಎಂದು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ‘ನೀನು ಮುಗಿಲು ನಾನು ನೆಲ’ ಎಂದು ಮರೀಚಿಕೆಯಲ್ಲಿ ಆಕಾಶ ಹಾಗು ಭೂಮಿ ಸೇರಿದಾಗ ಏನನ್ನು ಯೋಚಿಸಿಬಹುದು ಎಂಬುದನ್ನು ಅದ್ಭುತವಾಗಿ ಬರೆದಿದ್ದಾರೆ. ಸಿ.ಅಶ್ವತ್ ಜತೆ ಇವರ ಸಮ್ಮಿಲನ ಮುಗಿಲು-ನೆಲ ಸೇರಿದ ಉಲ್ಲಾಸಕ್ಕೆ ಸಂಕೇತ.

ಇನ್ನು ಎಲ್ಲ ನಿನ್ನದೇ ಎಂದು ದೇವರಿಗೆ ಹೇಳಿದ ಕವನದಲ್ಲಿ- ‘ನಿನ್ನದೇ ನೆಲ ನಿನ್ನದೇ ಜಲ’ ವೆಂದರು. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಇನ್ನೊಂದು ಅದ್ಭುತ ಗೀತೆ. ಇವರ ಕವನ ಸಂಕಲನಗಳಾದ ಸಾಮಗಾನ, ದೀಪದ ಹೆಜ್ಜೆ, ಪ್ರೀತಿ ಇಲ್ಲದ ಮೇಲೆ, ದೇವಶಿಲ್ಪ, ಕಾಡಿನ ಕತ್ತಲಲ್ಲಿ ಎಲ್ಲವನ್ನೂ ನೆನೆಯ ಬೇಕಾದದ್ದೆ. ಅಷ್ಟೇ ಅಲ್ಲ, ಇವರ ಪ್ರವಾಸವು ಇಂಗ್ಲೆಂಡಿನವರೆಗೂ ಕಾಲಿಟ್ಟಿದ್ದು ‘ಇಂಗ್ಲೆಂಡಿನಲ್ಲಿ ಚತುರ್ಮಾಸ’ ಎಂಬ ಪ್ರವಾಸ ಸಂಕಲನವನ್ನು ಬರೆದಿದ್ದಾರೆ. ಹಾಗೆಯೆ ಇವರ ‘ಎದೆ ತುಂಬಿ ಹಾಡುವೆನು’ ಎಲ್ಲ  ಕನ್ನಡ ಗಾಯಕರಿಗೂ ಒಂದು ಆಂಥಮ್ ತರಹ.

ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು.ಇದಲ್ಲದೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨), ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ. ೨೦೦೬ನೆಯ ಸಾಲಿನಲ್ಲಿ ಜರಗಿದ  ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ. ಇವರು ಗೋವಿಂದ ಪೈ, ಮತ್ತು ಕುವೆಂಪು ನಂತರ ಈ  ಗೌರವಕ್ಕೆ ಪಾತ್ರರಾದ ಮೂರನೆಯ ರಾಷ್ಟ್ರಕವಿ.  ಇವರಿಗೆ ದೊರೆತ  ಇನ್ನಿತರ  ಪುರಸ್ಕಾರಗಳು: ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ.

ಈಗ ಇವರು ಅವರ ಮನ ಹಂಬಲಿಸಿದ ಹಾಗೆ ಕಾಣದ ಕಡಲಿಗೆ ತೆರೆಳಿದ್ದಾರೆ. ಲೌಕಿಕವಾಗಿ  ನಮ್ಮೊಡನೆ ಇರದಿದ್ದರೂ, ಅವರ ಗೀತೆಗಳ ಮುಖಾಂತರ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದ್ದಾರೆ.