ಮಗಳಿಗೆ – ಮುರಳಿ ಹತ್ವಾರರ ಕವನ

ಹೊಸ ಜೀವವ ಬರಮಾಡಿಕೊಳ್ಳುವ ಘಳಿಗೆ ಹೆತ್ತವರಿಗೆ ಅವಿಸ್ಮರಣೀಯ. ಮಕ್ಕಳ ಭವಿಷ್ಯ ಉಜ್ವಲವಾಗಲೆಂಬುದೇ ತಾಯಿ-ತಂದೆಯರ ಅವಿರತ ಹಂಬಲ. ಆದರೆ, ಜಗತ್ತು ಎಂದಿನಂತಿಲ್ಲ. ಜನಾಂಗೀಯ ದ್ವೇಷ, ಒಡೆದಾಳುವ ಪ್ರವೃತ್ತಿ, ಪರಿಸರ ವಿಷಮತೆ ಮನುಕುಲವನ್ನು ಎಲ್ಲಿಗೊಯ್ಯುತ್ತಿದೆ ಎಂಬರಿವಿಲ್ಲದ ಗೊಂದಲ  ನಮ್ಮನ್ನಾವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮುರಳಿ ಹತ್ವಾರರು ತಮ್ಮ ನವಜಾತ ಶಿಶುವಿಗೆ ಕೋರುವ ಹಾರೈಕೆ……..
ಮುದ್ದು ಮಗಳಿಗೆ,
ದಿನ ತುಂಬಿ ಒಂದಾಗಿತ್ತು,
ನಿನ್ನಮ್ಮನಿಗೆ ತಲೆಸುತ್ತು!
ಬರುವ ಅವಸರ ನಿನಗೆ, ಕಳಿಸುವ
ಆತುರ ಅವಳಿಗಿರಲಿಲ್ಲ!
ಬಗೆದು ಬರಮಾಡಿಕೊಂಡದ್ದಾಯಿತು.
ನಿನ್ನಳುವಿನ ನಗೆ, ನಿನ್ನಮ್ಮನ ನಗೆಯಳು
ನನ್ನ ಭಾವದ ಭಾಷೆಗೆ ನಿಲುಕದ್ದು; ಅರ್ಥ
ಹುಡುಕುವ ಧೈರ್ಯ ನನಗಿಲ್ಲ!
ಕಿಟಕಿಯಾಚೆ, ತೆಮ್ಸ್ ತಣ್ಣಗೆ ಹರಿಯುತಿತ್ತು.
ದಡದಾಚೆಯ ಪಾರ್ಲಿಮೆಂಟಿನೊಳಗೆ ಬ್ರೆಕ್ಸಿಟ್ಟಿನ
ಬೆಂಕಿ ಆರಿಸಲು ನೀರು ಹುಡುಕುತಿ್ತರಬೇಕು
ಮೇ ಮತ್ತವಳ ಬಿಳಿ ಹಿಂಡು! ಸೂರ್ಯ ಮುಳುಗುತ್ತಿದ್ದ
ಪಾರ್ಲಿಮೆಂಟಿನ ಹಿಂದೆ, ಎಂದಿನಂತೆ.
ರಿಪೇರಿಯ ಮೌನದಲಿತ್ತು ಬಿಗ್ ಬೆನ್ ಘಂಟೆ.
ತನ್ನ ಏರಿಳಿತದಾಟಕ್ಕೆ  ತೆಮ್ಸ್ ನೆಚ್ಚುವುದು
ಸೂರ್ಯ-ಚಂದ್ರರ ಮಾತ್ರ!
ನಿನ್ನಮ್ಮ-ಅಪ್ಪನ ತವರಿನಲ್ಲಿ, ಚಹಾ ಮಾರಿ ಬೆಳೆದು
ದೇಶದ ಚುಕ್ಕಾಣಿ ಹಿಡಿದ ಜನನಾಯಕನ
ಹುಟ್ಟು ದಿನದ ಸಂಭ್ರಮ! ನರ್ಮದೆಯ ಹರಿವು
ಬದಲಿಸುವ ಅಡ್ಡಗೋಡೆಯ ಮೇಲೆ ದೀಪ
ಬೆಳಗಿದ್ದು ಅವನಾಚರಣೆ. ಆ ಗೋಡೆಯ ಮೇಲೆ
ಅವನ ನಾಯಕನ ನೂರಾಳೆತ್ತರದ ಕಬ್ಬಿಣದ
ಗೊಂಬೆಯ ನಿಲ್ಲಿಸುವ ಆಸೆ ಅವನಿಗೆ.
ನರ್ಮದೆ ಕಿಲಕಿಲನೆ ನಕ್ಕಿರಬೇಕು!
ನಿನ್ನ ನಾಳಿನ ನೆಲೆ ಎಲ್ಲೋ? ಬಸವಳಿದ
ಧರೆಯೋ? ಬೆಳದಿಂಗಳ ದೊರೆಯೋ?
ಮಂಗಳನ ಅಂಗಳದ ಪೊರೆಯೋ?
ನಿನ್ನ ಹರಿವಿನ ಲಹರಿ, ಹಾರುವ ದಿಕ್ಕು ಬದಲಿಸುವ
ಹುಂಬತನ ನಮಗಿಲ್ಲ. ದಾರಿಯ ಒಪ್ಪ
ಗೊಳಿಸಿ, ದಡವ ಕಟ್ಟುತ ಸಂಕಲ್ಪಿಸವುದಿಷ್ಟೇ:
ನಡೆಸುವೆವು ಕೈ ಹಿಡಿದು ನೀ ನಡೆವೆಡೆಗೆ;
ನಿನ್ನರಿವಿನ ಗುರಿಯ ಸಾಗರ ನಿನಗೆ ಸಿಗುವರೆಗೆ.
–ಮುರಳಿ ಹತ್ವಾರ