ನನ್ನೂರು ಬೆಂಗಳೂರು – ಅನ್ನಪೂರ್ಣಾ ಆನಂದ್

ನನ್ನ ಜೀವನದ ಸುಮಾರು 28 ವಸಂತಗಳನ್ನು ಕಳೆದಿರುವ ಈ ಊರು, ನಿಸ್ಸಂದೇಹವಾಗಿ ನನ್ನೂರೆಂದು ಹೇಳಬಹುದು. ಬೇಸಿಗೆ ರಜೆಯಲ್ಲಿ ಒಮ್ಮೊಮ್ಮೆ ಮೈಸೂರಿಗೆ ಹೋಗಿದ್ದನ್ನು ಬಿಟ್ಟರೆ, ಬೆಂಗಳೂರಿಂದ ಒಂದು ಹೆಜ್ಜೆ ಆ ಕಡೆ ಈ ಕಡೆ ಇಡದೆ ಬೆಳೆದವಳು ನಾನು. ಓದು ಮುಗಿಯುವವರೆಗೂ ಮಲ್ಲೇಶ್ವರ, ಮಜೆಸ್ಟಿಕ್, ಎಮ್.ಜಿ.ರೋಡ್ ಮತ್ತು ಕಮೆರ್ಶಿಯಲ್ ಸ್ಟ್ರೀಟ್ ನನ್ನ ಪ್ರಪಂಚವಾಗಿತ್ತು. ಮದುವೆಯಾದ ನಂತರವೇ ನನಗೆ ದಕ್ಷಿಣ ಬೆಂಗಳೂರಿನ ಪರಿಚಯವಾಗಿದ್ದು! ಈಗಲೂ ಬೆಂಗಳೂರು ಅಂದ ತಕ್ಷಣ ಕಣ್ಮುಂದೆ ಬರುವುದು ನಾನು ಬೆಳೆದ ಮಲ್ಲೇಶ್ವರದ 2ನೇ ಅಡ್ಡರಸ್ತೆ, ಗುಲ್ ಮೊಹರ್ ಮರಗಳಿಂದ ತುಂಬಿದ್ದ ಸಂಪಿಗೆ ಮತ್ತು ಮಾರ್ಗೊಸ ರಸ್ತೆಗಳು. (ಈಗ ಬೆಂಗಳೂರಿನಲ್ಲಿ ಗುಲ್ ಮೊಹರ್ ಕಾಣೋದೇ ಕಡಿಮೆ!)

cc-Wiki
ಸ್ಯಾಂಕಿ ಟ್ಯಾಂಕು

ಮಲ್ಲೇಶ್ವರ – ಸಂಪಿಗೆ ರೋಡಿನ ಇಕ್ಕೆಲಗಳಲ್ಲೂ, ಲಿಂಕ್ ರೋಡಿಂದ ಮಾರ್ಗೋಸಾ ರೋಡಿನವರೆಗೂ, ೧ನೇ ಅಡ್ಡರಸ್ತೆಯಿಂದ ೧೮ನೇ ಅಡ್ಡರಸ್ತೆಯವರೆಗೆ ಬೆಳೆದ ಒಂದು ಬಡಾವಣೆ. ವಿಶಾಲ ಮನೆಗಳಿದ್ದ ಈ ಬಡಾವಣೆ ಒಂದು ರೀತಿಯಲ್ಲಿ self-contained ಆಗಿತ್ತು. ೮ನೇ ಮತ್ತು ೧೫ನೆ ಅಡ್ಡರಸ್ತೆಯಲ್ಲಿದ್ದ ತರಕಾರಿ ಮಾರ್ಕೆಟ್ಗಳು, ಗಣಪತಿ, ಕನ್ಯಕಾಪರಮೇಶ್ವರಿ, ಕೃಷ್ಣ ಮತ್ತು ಕಾಡುಮಲ್ಲೇಶ್ವರ ದೇವಾಲಯಗಳು, ರಾಮಮಂದಿರದಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳು, ಉಪನ್ಯಾಸಗಳು, gymkhana (ಪ್ರಕಾಶ್ ಪಡುಕೋಣೆ ಇಲ್ಲಿ ಬ್ಯಾಡ್ಮಿಂಟನ್ ಆಡಲು ಬರುತ್ತಿದ್ದರು), ಸಂಪಿಗೆ, ಸವಿತಾ, ಗೀತಾಂಜಲಿ ಸಿನಿಮಾ ಮಂದಿರಗಳು, ಹಲವಾರು ಮದುವೆ ಮಂಟಪಗಳು, ಉತ್ತಮ ಶಾಲಾ ಕಾಲೇಜುಗಳು, IISc ಯಂಥಾ ಪ್ರತಿಷ್ಟಿತ ಸಂಸ್ಥೆ , NKB , CTR , ಜನತಾ ಹೋಟೆಲ್ ಗಳು, ಆಸ್ಪತ್ರೆಗಳು, ಪಾರ್ಕುಗಳು, Sankey ಟ್ಯಾಂಕ್ ನ ಪ್ರಶಾಂತ ಕೆರೆ… ಇಲ್ಲಿದ್ದವರು ಬೆಂಗಳೂರಿನ  ಬೇರೆ ಕಡೆಗಳಿಗೆ ಏನಕ್ಕೂ ಹೋಗೋ ಪ್ರಮೇಯವೇ ಇರಲಿಲ್ಲ!  ಹಬ್ಬ ಹರಿದಿನಗಳಲ್ಲಂತೂ ಇಲ್ಲಿಯ ಸಂಭ್ರಮ ನೂರ್ಮಡಿಸುತ್ತಿತ್ತು. ೧ನೇ ಅಡ್ಡರಸ್ತೆಯಿಂದ ೧೮ನೇ ಅಡ್ಡರಸ್ತೆಯವರೆಗೆ ಒಂದು ಸಾರಿ ನಡೆದು ಹೋದರೆ ಸಾಕು, ಮಲ್ಲೇಶ್ವರದ ಆ ವೈವಿಧ್ಯಮಯ ಬೆಡಗಿನ ಅನುಭವವಾಗಲು! ಮಲ್ಲೇಶ್ವರ ಈಗ ಬಹಳ ಬದಲಾಯಿಸಿದೆ ಆದರೂ ಅದರ ವೈವಿಧ್ಯತೆಯನ್ನ ಉಳಿಸಿಕೊಂಡಿದೆ. ಈಗಲೂ ಮಲ್ಲೇಶ್ವರ ಅಂದರೆ ಸಾಕು ನನ್ನ ಎದೆ ಹಕ್ಕಿಯಂತೆ ಹಾರಿ ಒಂದು ಸುತ್ತುಹೊಡೆದು ಬರತ್ತೆ.

ಬಾಲ್ಯದಲ್ಲಿ ಕಬ್ಬನ್ ಪಾರ್ಕಿಗೆ ಬಹಳ ಹೋಗುತ್ತಿದ್ದೆವು (ನಾನು, ನನ್ನ ತಮ್ಮ ಮತ್ತು ತಂಗಿ).. ಪುಟಾಣಿ ರೈಲ್ ನಲ್ಲಿ ಒಂದು ಸುತ್ತು ಹಾಕಿ,

cc-Wiki
ಕಬ್ಬನ್ ಪಾರ್ಕ್

ಕಾಟನ್ ಕ್ಯಾಂಡಿ ತಿಂದು ಕೈಬಾಯ್ ಅಂಟು ಮಾಡಿಕೊಂಡು, ಐಸ್ ಕ್ಯಾಂಡಿ ಚೀಪುತ್ತಾ, ವಿಧಾನಸೌಧದ ಬೆಳಕಿನ ಬೆಡಗಿಗೆ ಮಾರುಹೋಗುತ್ತಾ ಆಟೋ ಹತ್ತಿ ಮನೆ ಸೇರುತ್ತಿದ್ದೆವು. ಬಾಲಭವನದಲ್ಲಿ ನನ್ನ ನೃತ್ಯಶಾಲೆಯಿಂದ ಪ್ರದರ್ಶಿಸಿದ ‘ತಿರುಕನ ಕನಸು’ ‘ಕರಿಭಂಟನ ಕಾಳಗ’ ‘ಲವ ಕುಶ’ ಇನ್ನೂ ಜ್ನಾಪಕದಲ್ಲಿದೆ.

ಲಾಲ್ ಬಾಗ್ ನಮ್ಮ ಇನ್ನೊಂದು ನೆಚ್ಚಿನ ತಾಣ! ಪ್ರತಿವರುಷ ಹೂವಿನ ಪ್ರದರ್ಶನಕ್ಕೆ ತಪ್ಪದೆ ಹೋಗುತ್ತಿದ್ದೆವು. ಬಣ್ಣ ಬಣ್ಣ ದ ಗುಲಾಬಿ, ಡೇರ, ಕ್ಯಾನ, ಚೆಂಡುಹೂವು ಹೀಗೆ ಮುಂತಾದ ಹೂವುಗಳ ವಿನ್ಯಾಸದೊಂದಿಗೆ ಭೂತಾಕಾರದ ಕ್ಯಾಕ್ಟಸ್ ಗಿಡಗಳು ಮನ ಸೆಳೆಯುತ್ತಿದ್ದವು. ಜೊತೆಗೆ

cc-Wiki
ಲಾಲ್ ಬಾಗ್

ವಿವಿಧ ತರಕಾರಿ ಗಿಡಗಳು, ತರಹಾವರಿಯ ವಿನ್ಯಾಸಗಳು ವಿಸ್ಮಯಗೊಳಿಸುತ್ತಿದ್ದವು! ಇದರೂಂದಿಗೆ ಅಲ್ಲಿದ್ದ ಜಿಂಕೆ ಹಿಂಡಿಗೆ ಕಡ್ಲೇಕಾಯಿ ತಿನ್ನಿಸುವ ಸಂಭ್ರಮಬೇರೆ! ನನ್ನ ತಾಯಿ ಚಿಕ್ಕವರಿದ್ದಾಗ ಹುಲಿ ಸಿಂಹ ಕೂಡ ಇತ್ತಂತೆ! ನಮ್ಮ ಕಾಲಕ್ಕೆ ಬರೀ ಜಿಂಕೆ ಗಿಣಿಗಳಿದ್ದವು, ಈಗ ಅದೂ ಇಲ್ಲ !

ಕ್ರಿಸ್ ಮಸ್ ಸಮಯದಲ್ಲಿ ನೀಲಗಿರೀಸ್ ಬೇಕರಿಯವರು ನಡೆಸುತ್ತಿದ್ದ ಕೇಕ್ ಶೋ ನಮ್ಮಗೆಲ್ಲಾ ಅಚ್ಚುಮೆಚ್ಚು! ಮೈಸೂರು ಅರಮನೆ, ವಿಧಾನಸೌಧ ಮತ್ತಿತರ ವಿನ್ಯಾಸಗಳನ್ನ ಕೇಕ್ ನಲ್ಲಿ ಬಹಳ ನಾಜೂಕಾಗಿ ಮಾಡುತ್ತಿದ್ದರು. ಪ್ರದರ್ಶನ ನೋಡಿದಮೇಲೆ ಸಿಗುವ ಕೇಕ್ ಮೇಲೆ ನಮ್ಮ ಆಸಕ್ತಿ ಜಾಸ್ತಿ ಅಂತ ಬೇರೆಯಾಗಿ ಹೇಳೋ ಅವಶ್ಯಕತೆ ಇಲ್ಲ.

ಬಾಲ್ಯದ ನಮ್ಮ ಮತ್ತೊಂದು ಆಕರ್ಷಣೆ “ಸರ್ಕಸ್”! animal rights, animal cruelty ಎಲ್ಲ ಗೊತ್ತಾಗದ ಆ ಮುಗ್ಧ ವಯಸ್ಸಿನಲ್ಲಿ ಆನೆ ಚೆಂಡು ಒದೆಯುವುದು, ಸಿಂಹ ಚಂಗನೆಗರಿ ಸ್ಟೂಲ್ ಮೇಲೆ ನಿಲ್ಲುವುದು, ನೀರಾನೆ ಪೌಂಡ್ಗಟ್ಟಲೆ ಬ್ರೆಡ್ ತಿನ್ನೋದನ್ನ ಬಿಟ್ಟ ಬಾಯಿ ಬಿಟ್ಟ ಕಣ್ಣಿನಿಂದ ನೋಡುತಿದ್ದೆವು. ದುರಾದೃಷ್ಟವಶಾತ್ ಒಮ್ಮೆ ಬೆಂಕಿಯ ಅನಾಹುತವಾದಮೇಲೆ ಮತ್ತೆ ಸರ್ಕಸ್ ಬೆಂಗಳೂರಿಗೆ ಬರಲೇಯಿಲ್ಲ!

ಹರೆಯದ ದಿನಗಳಲ್ಲಿ ಬೆಂಗಳೂರು ನನಗೆ ಮತ್ತೊಂದು ಬಾಗಿಲು ತೆಗೆಯಿತು. ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಅವಕಾಶ. ಪ್ರತಿ ವರ್ಷ ರಾಮನವಮಿ ಪ್ರಯುಕ್ತ, ಶೇಷಾದ್ರಿಪುರಂ ಸ್ಕೂಲ್ ನಲ್ಲಿ ಹತ್ತು ದಿನ ಸಂಗೀತ ಕಚೇರಿ ನಡೆಯುತ್ತಿತ್ತು. ತಪ್ಪದೆ ನಾನು ಹೋಗುತ್ತಿದ್ದೆ. ಪಟ್ಟಮ್ಮಾಳ್, ಎಮ್.ಎಲ್.ವಿ, ಬಾಲಮುರಳಿ, ಯೇಸುದಾಸ್, ಕುನ್ನಕ್ಕುಡಿ, ಲಾಲ್ಗುಡಿ, ಚಿಟ್ಟಿಬಾಬು ಹೀಗೆ ಹಲವು ಹತ್ತಾರು ಘಟಾನುಘಟಿ ಸಂಗೀತಗಾರರ ಕಚೇರಿಗಳನ್ನ ನಿರಾಯಾಸವಾಗಿ ಕೇಳುವ ಅವಕಾಶ! ಮನೆಗೆ ಬರುತ್ತಿದ್ದ ಸುಧಾ/ಪ್ರಜಾಮತ ನನ್ನ ಸಾಹಿತ್ಯದ ಒಲವಿಗೆ ಕಾರಣವಾಯಿತು. ಮನೆಯ ಹತ್ತಿರದಲ್ಲೇ ಇದ್ದ Shankar’s ವಾಚನಾಲಯ ಈ ಒಲವನ್ನು ಹೆಮ್ಮರವಾಗಿ ಬೆಳೆಸಿತು. ಕಾಲೇಜ್ ಗೆ ಬಂದಮೇಲಂತೂ, ನಾನು ನನ್ನ ಗೆಳತಿ ರೇಖಾ ಅಲ್ಲಿದ್ದ ಮುಕ್ಕಾಲು ಭಾಗ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನ ಓದಿ ಮುಗಿಸಿದ್ದೆವು!. ಪ್ರತಿದಿನ ಸಾಯಂಕಾಲ 8th ಕ್ರಾಸ್ ವರೆಗೂ ಹರಟೆ ಹೊಡೆದುಕೊಂಡು ಹೋಗಿ ವಾಪಸ್ ಬರ್ತಿದ್ವಿ. “ದೇವರ ಮೇಲೆ ಹೂ ತಪ್ಪಿದರೂ ನೀವಿಬ್ಬರು 8th ಕ್ರಾಸ್ ಗೆ ಹೋಗೋದು ತಪ್ಪಲ್ಲ!” ಅಂತ ನಮ್ಮ ಮನೆಗಳಲ್ಲಿ ತಮಾಷೆ ಮಾಡ್ತಿದ್ದರು.  ದಾರಿಯಲ್ಲಿ ಕಾಲಕಾಲಕ್ಕೆ ಸಿಗುವ ಸೀಬೇಕಾಯಿ, ಹಲಸಿನ ಹಣ್ಣು, ಮಾವಿನಕಾಯಿ, ನಲ್ಲಿಕಾಯಿ, ನೇರಳೆ ನಮ್ಮ ಹೊಟ್ಟೆಸೇರುತ್ತಿತ್ತು.  ಹೀಗೆ ಹೋದಾಗ ಮನೆಗೆ ತರಕಾರಿ ಮತ್ತು ಬೇರೆ ಪದಾರ್ಥಗಳನ್ನು ತರುವ, ಲೈಬ್ರರಿಯಲ್ಲಿ ಪುಸ್ತಕ ಬದಲಾಯಿಸುವ ಕೆಲಸಗಳನ್ನೂ ಪೂರೈಸುತ್ತಿದ್ದೆವು. Exams ಇದ್ದರಂತೂ ಗಣಪತಿಗೆ pressure ಹಾಕಿ ಬರೋದಂತೂ ಗ್ಯಾರಂಟಿ.

ಸಿನಿಮಾ ಮಂದಿರಗಳ ಮಧ್ಯದಲ್ಲಿದ್ದ ನಾವು ಬಹಳಷ್ಟು ಕನ್ನಡ ಸಿನಿಮಾ ನೋಡಿದೀವಿ. “ಅಣ್ಣಾವ್ರ” ಸಿನಿಮಾ ಅಂತೂ ಖಂಡಿತ ತಪ್ಪಿಸುತ್ತಿರಲಿಲ್ಲ.. ವಿಷ್ಣುವರ್ಧನ, ಅನಂತ್ ನಾಗ್, ಶಂಕರ್ ನಾಗರಿಗೂ ಮೋಸ ಮಾಡ್ತಿರಲಿಲ್ಲ. ಬೆಂಗಳೂರಿಗೆ ಟಿ.ವಿ. ಬಂದು, ಹಿಂದಿಯ ಪ್ರಭಾವ ಬೀರಿದಮೇಲೆ, ಹಿಂದಿ ಸಿನಿಮಾಗಳು ನಮ್ಮ ಲಿಸ್ಟ್ ಗೆ ಸೇರಿದವು!

“woody’s” ಬೆಂಗಳೂರಿನ ಮೊಟ್ಟಮೊದಲ fastfood joint. American chopsey ಮೊಟ್ಟಮೊದಲ ದಿನ ತಿಂದಾಗ ಚಂದ್ರನನ್ನು ಮುಟ್ಟಿದ ಖುಷಿ! Chinese ಗೆ Rice Bowl, Ice Cream ಗೆ Lake View, rasmalai ಗೆ Anand sweets, Cake ಗೆ Sweet Chariot … ಬೆಂಗಳೂರಿನ eating joints ಮೇಲೇ, ಒಂದು ಲೇಖನ ಬರೀಬೇಕಾಗತ್ತೆ!   

ಮದುವೆಯ ನಂತರವೇ ನನಗೆ  ಗಿರಿನಗರ, ಗಾಂಧಿಬಜಾರ್, ಜಯನಗರದ ಪರಿಚಯವಾಗಿದ್ದು. ನವೆಂಬರ್, ಡಿಸೆಂಬರಿನ ಚುಮು ಚುಮು ಚಳಿಯಲ್ಲಿ ನಡೆಯುವ ಕಡ್ಲೆಕಾಯಿ ಪರಿಷೆ ಬಲ್ಲು ಚೆನ್ನ. ಹೊಸದಾಗಿ ಬೆಳೆದ ಕಡ್ಲೇಕಾಯಿ ಗುಡ್ಡೆಗಳು ಬುಲ್ ಟೆಂಪಲ್ ರೋಡಿನ ಇಕ್ಕೆಲದಲ್ಲಿ ರಾಶಿ ರಾಶಿ! ಬೆಂಡು, ಬತ್ತಾಸು, ಬಳೆ ಟೇಪು ಜಾತ್ರೆಯ ಒಂದು ವಾತಾವರಣವನ್ನ ಸೃಷ್ಟಿಸುತ್ತದೆ! ಬೆಂಗಳೂರು ಮಹಾನಗರದಲ್ಲಿ ಬೆಳೆದ ನನಗೆ ಇದೊಂದು ಮರೆಯಲಾಗದ ಅನುಭವ

ರಾಮಕೃಷ್ಣ ಆಶ್ರಮ ನನ್ನ ಮತ್ತೊಂದು ಫೇವರಿಟ್ ಜಾಗ!  ಗಾಂಧಿಬಜಾರಿನ ಆ ಜನಜಂಗುಳಿ, ಗಿಜಿ ಗಿಜಿಯಲ್ಲಿ ಇಂಥಾ ಒಂದು  ಪ್ರಶಾಂತ ಸ್ಥಳ ಇದೆಯೆಂದರೆ ನಂಬಲಸಾಧ್ಯ! ಅಲ್ಲಿ ನಡೆಯುವ ಭಜನೆ, discourse ಗಳು ಮನಸ್ಸಿಗೆ ಬಲುಹಿತ!

೧೧ ಘಂಟೆ ರಾತ್ರಿಯಲ್ಲಿ ವಿಶ್ವೇಶ್ವರಪುರಂ ಸರ್ಕಲ್ ನಲ್ಲಿ ಅಕ್ಕಿರೊಟ್ಟಿ ತಿಂದವರಿಗೆ ಗೊತ್ತು ಅದರ ಅನುಭವ! ನಾನು ಆನಂದ್ ನಮ್ಮ ಹೀರೋ ಹೋಂಡಾದಲ್ಲಿ ತಿರುಗದ ಬೀದಿಗಳಿಲ್ಲ, ತಿನ್ನದ ಜಾಗಗಳಿಲ್ಲ! “ತೆಂಗಿನ ಮರದ ಮೇಲೆ ಊಟ ಅಂದ್ರೆ ಕಟ್ಟು ಜನಿವಾರಕ್ಕೆ ಲೋಟ” ಅನ್ನೋಹಾಗೆ ಯಾರು ಎಲ್ಲಿ ಏನು ಚೆನ್ನಾಗಿದೆ ಅಂತಾರೋ next day ನಾವಲ್ಲಿ ಹಾಜರ್ J

ಹೀಗೆ, ಬೆಂಗಳೂರಿನ ಬಗ್ಗೆ ಹೇಳ್ತಾ ಹೋದ್ರೆ ಲಿಸ್ಟ್ ಮುಗಿಯಲ್ಲ! ಕರಗ, ವಿಶ್ವೇಶ್ವರಯ್ಯ museum, ಬುಗಲ್ ರಾಕ್, ISKON ಟೆಂಪಲ್, ಅಶೋಕ ಪಿಲ್ಲರ್, ರಾಗಿ ಗುಡ್ಡ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಜಯನಗರ ಕಾಂಪ್ಲೆಕ್ಸ್, ಡಿ.ವಿ.ಜಿ. ರೋಡ್, ರೆಸಾರ್ಟ್ಗಳು, ಮಾಲ್ ಗಳು, ಪಬ್ ಮತ್ತು ಕ್ಲಬ್ಗಳು, ಹೀಗೆ ಜನರ ಅಭಿರುಚಿಗೆ ತಕ್ಕಂತೆ ಜೀವನ ನಡೆಸುವ ಎಲ್ಲ ಸೌಕರ್ಯ ಇರೋ ವೈವಿಧ್ಯಮಯ ಬೆಡಗಿನ ನಗರ ಬೆಂಗಳೂರು.

cc-wiki
ಯು ಬಿ ಮಾಲ್

ಅಲ್ಲಿದ್ದ ನನ್ನ ಜೀವನದ ಪ್ರತಿ ಘಳಿಗೆಯಲ್ಲೂ ಬೆಂಗಳೂರು ಹಾಸುಹೊಕ್ಕಿದೆ. ನಿಜ, ಈಗ ಬೆಂಗಳೂರು ಬಹಳ  ಬದಲಾಗಿದೆ, ಮೊದಲಿನಂತಿಲ್ಲ… ಆದರೆ ಅದು ನಾ ಬೆಳೆದ ಊರು, ಹೇಗಿದ್ದರೂ ಅದು ನನ್ನೂರು. ಹೆತ್ತ ತಾಯಿಯಂತೆ ಸದಾ ನಾನು ಪ್ರೀತಿಸುವ ಊರು.

“ಅನಿವಾಸಿ” ಯಾಗಿರುವ ನಾನು ಮತ್ತೆ ಅಲ್ಲಿಯ ನಿವಾಸಿಯಾಗುವ ಹಂಬಲ ಸದಾ ನನ್ನ ಮನಸ್ಸಿನಲ್ಲಿದೆ

ನನ್ನ ಊರು ಬೆಂಗಳೂರು, ಆನಂದದ ತವರೂರು …:)

ಮನೆಯ ಉಪ್ಪಿನಕಾಯಿ – ರಾಜಾರಾಮ ಕಾವಳೆಯವರ ಅನುಭವಗಳು

[ಉಪ್ಪಿನಕಾಯಿಯ ನೆಪದಲ್ಲಿ ರಾಜಾರಾಮ ಕಾವಳೆಯವರು ಅನಿವಾಸಿ ಕನ್ನಡಿಗರನ್ನು ಸದಾ ಸತಾಯಿಸುವ ಪ್ರಶ್ನೆಗಳಾದ ’’ನಮ್ಮ ಮನೆ ಯಾವುದು?ನಮ್ಮ ಊರು ಎಲ್ಲಿದೆ?” ಇದರ ಬಗ್ಗೆ ಸೀರಿಯಸ್ಸಾಗಿ ವಿಚಾರ ಲಹರಿ ಹರಿಸಿದ್ದಾರೆ.-ಸಂ]

ಲವು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಹಲವು ಸ್ನೇಹಿತರು ಬಂದಿದ್ದರು. ಮಾತುಕತೆ ಉಪಚಾರಗಳ ನಂತರ ನಾವೆಲ್ಲರೂ ಊಟಕ್ಕೆ ಕುಳಿತಿದ್ದೆವು. ನನ್ನಪತ್ನಿ ತಯಾರಿಸಿದ್ದ ರುಚಿಕರವಾದ ಊಟವನ್ನು ಸ್ವಾರಸ್ಯವಾಗಿ ಎಲ್ಲರೂ ಸವಿಯುತ್ತಿದ್ದಾಗ, ಉಪ್ಪಿನಕಾಯಿಯನ್ನು ಇಡುವುದನ್ನು ಮರೆತಿದ್ದನ್ನು ಕಂಡು ಪದ್ಮಳು ನನಗೆ ಹೇಳಿದಳು- ‘ರೀ, ಉಪ್ಪಿನಕಾಯಿಯನ್ನು ತಂದಿಡ್ರೀ’.

ಅದಕ್ಕೆ ಕಬ್ಬೋರ್ಡಿನಲ್ಲಿದ್ದ ಅನೇಕ ಉಪ್ಪಿನಕಾಯಿಗಳನ್ನು ನೋಡಿ ನಾನು ಅವಳನ್ನು ಕೇಳಿದೆ- ‘ಯಾವ ಉಪ್ಪಿನಕಾಯಿ ತರಲಿ?’ ಅದಕ್ಕೆ ಅವಳು, ‘ಅದೇ ಮನೇ ಉಪ್ಪಿನಕಾಯಿ ತನ್ನಿ’ ಎಂದಳು. ಅಲ್ಲಿದ್ದ ಅನೇಕ ಅಂಗಡಿಯಿಂದ ಕೊಂಡ ಉಪ್ಪಿನಕಾಯಿಗಳ ಜತೆಗಿದ್ದ, ನಮ್ಮ ಮನೆಯಲ್ಲೇ ಬೆಳೆದ ಸೇಬಿನಿಂದ, ನಾನೇ Picklesತಯಾರಿಸಿದ ಆ ಉಪ್ಪಿನಕಾಯಿಯ ಬಾಟಲನ್ನು ತಂದು ನಮ್ಮ ಅತಿಥಿಗಳ ಮುಂದಿಟ್ಟೆನು. ಅದಕ್ಕೆ ನನ್ನ ಸತಿ ‘ಏನ್ರಿ, ಎಲ್ಲಾಬಿಟ್ಟು ನೀವು ಮಾಡಿದ ಆ ಹಾಳು ಹುಳುಕಟ್ಟೆಯ ಕೊಳೆತ ಉಪ್ಪಿನ ಕಾಯಿ ತಂದ್ರಲ್ಲ್ರೀ’ ಎಂದಳು. ಎಲ್ಲಾ ಉಪ್ಪಿನಕಾಯಿಗಳು ಅಂಗಡಿಯಿಂದ ತಂದದ್ದಾದರಿಂದ, ಅವಳಿಗೆ ಇನ್ನಾವುದೂ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಇಲ್ಲವೆಂದು ಹೇಳಿದಾಗ ಆಕೆ- ‘ಅದೇರೀ ಬೆಂಗಳೂರಿನಿಂದ ನಮ್ಮಮ್ಮನ ಮನೆಯಿಂದ ತಂದ ಆ ದೊಡ್ಡ ಬಾಟಲು, ಪ್ಲಾಸ್ಟಿಕ್ಕವರಿನಿಂದ ಮುಚ್ಚಿರುವ ಬಾಟಲು ಫ್ರಿಜ್ಜಿನಲ್ಲಿ ಇದೆಯಲ್ಲಾ ಅದೇ ಮನೇ ಉಪ್ಪಿನ ಕಾಯಿ’ ಎಂದಳು.Read More »