ಹೀಗೊಂದು ಸಿನೆಮಾ ವಿಹಾರ, ಹಾಗೊಂದು ಹರಟೆ

ಅನಿವಾಸಿ ಬಳಗಕ್ಕೆ ನಮಸ್ಕಾರ. ಯುಗಾದಿ, ರಾಮನವಮಿ, ಹನುಮಜಯಂತಿ, ಕೋಸಂಬರಿ-ಪಾನಕ, ಮಾವು ಎಂದೆಲ್ಲ ಚೈತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾಯಿತು. ಇದೀಗ ಈಸ್ಟರ್ ನ ರಜೆಯ ದಿನಗಳು. ಬೆಳಗ್ಗೆ ಮಕ್ಕಳ ಶಾಲೆಯ ಅವಸರವಿರದ, ತಡ ರಾತ್ರಿಯ ಟಿ.ವಿ. ವೀಕ್ಷಣೆಗೆ ಸೂಕ್ತ ದಿನಗಳು. ಅದಕ್ಕೆಂದೇ ನಮ್ಮ ಅನಿವಾಸಿಯ ಹೊಸ ಬರಹಗಾರರಾದ ಪ್ರಮೋದ್ ಸಾಲಿಗ್ರಾಮ ಅವರು ನೋಡಿ ವಿಶ್ಲೇಷಿಸಿದ ಸಿನೆಮಾವೊಂದರ ಲೇಖನ ಇಂದಿನ ಸಂಚಿಕೆಯಲ್ಲಿದೆ. ನಮ್ಮಲ್ಲಿರುವ ಬಹು ಮಂದಿ ಸಿನೆಮಾಪ್ರಿಯರಿಗೆ ಇದು ಮೆಚ್ಚುಗೆಯಾದೀತೆಂಬ ಭರವಸೆಯಿದೆ. ಜೊತೆಗೆ ನನ್ನದೊಂದು ಲಘು ಹರಟೆಯೂ ಉಂಟು. ಓದಿ ಲಗೂನೆ ಒಂದೆರಡು ಕಮೆಂಟೂ ಮಾಡ್ರಿ. ಹಂಗೇ ಪ್ರಮೋದ್ ಅವರು ಹೇಳಿದ ಸಿನೆಮಾನೂ ನೋಡ್ರಿ..ಅವರ ಅನಿಸಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನೂ ಹಂಚಗೊಳ್ರಿ. – ಸಂಪಾದಕಿ

ನಾ ಕಂಡ ವಿಡುದಲೈ – ೧

ಬರಹಗಾರ ಜೆಯಮೋಹನ್ ರವರ ಸಣ್ಣಕಥೆ ಆಧಾರಿತ ಸಿನಿಮಾ. ಮೈನಿಂಗ್ ಹೆಸರಲ್ಲಿ ಸರ್ಕಾರವೊಂದು  ಜನರಿಗೆ ಮಣ್ಣೆರಚುತ್ತಾ : ಕ್ರಾಂತಿಕಾರಿಯೋರ್ವನನ್ನು ದೇಶದ್ರೋಹಿಯಾಗಿಸಿ ; ಪೊಲೀಸ್ ಪಡೆಯೊಂದು ಅವನ ಬೆನ್ನಟ್ಟಿರುವ ಹಿನ್ನಲೆಯಲ್ಲಿ ಈ ಚಿತ್ರ . 

ಪೊಲೀಸ್ ದೌರ್ಜನ್ಯದ ಮುನ್ನಲೆಯಲ್ಲಿ ಡ್ರಾಮಾ ರಚಿಸಿ , ಕಥಾಪಾತ್ರಗಳೆಲ್ಲ ಬಂದು ಕಥೆಗೆ ನಟಿಸಿ ಹೋಗುತ್ತಾರೆ ಅಷ್ಟೇ. ಕಥೆಯೇ ಸಿನಿಮಾದ ಜೀವಾಳ . ಇದು ನಿರ್ದೇಶಕ ವೆಟ್ರಿಮಾರನ್ ಗೆ ಹೊಸದಲ್ಲ- ಅವರ ಹಿಂದಿನ ಸಿನಿಮಾ : ವಿಸಾರಣೈ ಒಂದೊಮ್ಮೆ ನೋಡಿ ಬನ್ನಿ . ಇವರು ಪಾತ್ರಗಳ ನಿಟ್ಟಿನಲ್ಲಿ ಕಥೆ ಹೇಳುವ ಕಲೆಯನ್ನ ,ಹೇಗೆ ಕರಗತ ಮಾಡಿಕೊಂಡ್ದಿದಾರೆ ಅನ್ನೋ ಆಶ್ಚರ್ಯ ನಿಮ್ಮನ್ನ ಪಕ್ಕಾ ಕಾಡುತ್ತದೆ .  ಗುಡ್ಡುಗಾಡಿನ ಗ್ರಾಮಸ್ಥರು , ಪೋಲಿಸಿನವರು , ರಾಜಕಾರಣಿ , ಮಾಧ್ಯಮದವರು, ನಾಯಕ -ನಾಯಕಿ ಎಲ್ಲರ ಮಧ್ಯದಲ್ಲೊಂದು balancing act ನಿರ್ದೇಶಕನ ಕೈಚಳಕ . ಮೊದಲ ಹತ್ತು ನಿಮಿಷದ ರೈಲು ಆಕ್ಸಿಡೆಂಟ್ ದೃಶ್ಯದಲ್ಲೇ ದೊಡ್ಡ Long -Shot  ಮುಖಾಂತರ ಕ್ಯಾಮೆರಾ ಕಣ್ಣಲ್ಲಿ ಟ್ರೈನ್ ಕಿಟಕಿಯೊ ಳಗೆ ಹೊಕ್ಕು ಗಾಯಗಳು , ಸಾವು ನೋವು , ವೇದನೆ , ಅನುಕಂಪ , ಮನುಷ್ಯತ್ವ ಎಲ್ಲವನ್ನುತೋರಿಸುತ್ತ ಕಥೆಯಲ್ಲಿ ಮುಳಿಗಿಸಿಬಿಡುತ್ತಾರೆ . ನಂತರ ಬರುವುದೆಲ್ಲಾ Bonus.  

ದಮನಿತರ ರಕ್ಷಣೆಗೆ ನಿಂತಂತೆ ಇರುವ ಕ್ರಾಂತಿಕಾರಿ ಪೆರುಮಾಳ್ ವಾದಿಯಾರ್ (ವಿಜಯ್ ಸೇತುಪತಿ)ಗೆ ಭಾಗ ಒಂದರಲ್ಲಿ ಕಡಿಮೆ ಪಾತ್ರ ಆದರೂ ಮನಸ್ಸಿಗೆ ಹತ್ತಿರವಾಗುತ್ತಾರೆ . Climax ನಲ್ಲಿ ಬರುವ ಅವರ ಭಾಗ -೨ರ ತುಣುಕುಗಳಲ್ಲಿ powerful Dialogue ನಿಂದ ಮುಂದೇನಾಗಬಹುದು ಅನ್ನೋ ಕುತೂಹಲ.  

ಪೊಲೀಸ್ ಇಲಾಖೆಯ ಸಾಮಾನ್ಯ ಪೇದೆ ಕುಮರೇಸನ್(ಸೂರಿ) ಈ ಕಥೆಯ ಮುಖ್ಯ ಪಾತ್ರಧಾರಿ .ಈ ಮುನ್ನ ಬರೀ comedian ಆಗೇ ನಟಿಸಿದಂತ ಸೂರಿ ಅವರನ್ನ ಸಿನಿಮಾದ ಹೀರೋವನ್ನಾಗಿಸಿರುವ ನಿರ್ದೇಶಕರ ಗಟ್ಟಿ ನಿರ್ಧಾರ ಮೆಚ್ಚಬೇಕಾದಂತದ್ದು . ಕಾರಣ ಪಾತ್ರಕ್ಕೆ ಬೇಕಾದ ಮುಗ್ಧತೆ , ಅಸಹಾಯಕತೆ , ಹತಾಶೆ ಇವೆಲ್ಲದರ ಮಧ್ಯೆ ನೈತಿಕತೆಯ ಮೂರ್ತರೂಪ ಸೂರಿ . ತಾನು ತಪ್ಪು ಮಾಡದೆ ಇದ್ದಾಗ ಕ್ಷಮೆ ಕೇಳಲಿಚ್ಛಿಸದ ಛಲವಾದಿ -  ಮನಸ್ಸಿಗೆ ಹತ್ತಿರವಾಗುತ್ತಾರೆ . ನಮ್ಮ - ನಿಮ್ಮಂತೆ ವ್ಯವಸ್ಥೆಯ ಮೇಲೆ ಭರವಸೆ ಇಟ್ಟಿರುವ ಕುಮರೇಸ ವಿನಾಕಾರಣ ಪನಿಶ್ಮೆಂಟ್ ತಿನ್ನುವಾಗ ಕರುಳು ಚುರುಕ್ ಅನ್ನತ್ತೆ.  ಕುಮರೇಸ- ನಾವೇ ಏನೋ ಅನ್ನಿಸೋ ಅಷ್ಟು ಆಕ್ರಮಿಸುತ್ತಾರೆ , ಪ್ರಭಾವ ಬೀರುತ್ತಾರೆ. 

ನಾಯಕಿ ತಮಿಳರಸಿಯಾಗಿ (ಭವಾನಿ ಶ್ರೀ) ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತಾರೆ. ಪರದೆಯ ಮೇಲಿನ ಲವ್ ಟ್ರ್ಯಾಕ್ ನಮ್ಮನ್ನು ಎಲ್ಲೂ ಬೋರ್ ಹೊಡಿಸದಂತೆ ಸಮಗ್ರವಾಗಿ ಮತ್ತು ಅದ್ಭುತವಾಗಿ ಬರೆಯಲಾಗಿದೆ.ಅದಕ್ಕೆ ಕಾರಣ ನಾಯಕಿಯ ಭಾವನಾತ್ಮಕ ಆಘಾತಗಳು , ಜನಾಂಗದ ಹಿನ್ನೆಲೆ, ಫ್ಲ್ಯಾಷ್‌ಬ್ಯಾಕ್ ಎಲ್ಲವೂ ಕಥೆಗೆ ಪೂರಕವಾಗಿರೊದು. ತುಂಬಾ ಹಿಡಿಸುವ scene ಒಂದು ನೆನಪಿಗೆ  ಬರುತ್ತಿದೆ : ಸರಿಯಾಗಿ ಸ್ಪಂದಿಸದ ಕಾರಣ ನಾಯಕಿಯ ಎದುರು ಕುಮರೇಸ ಬಂದು ಬೇಷರತ್ ಕ್ಷಮೆಯಾಚಿಸಿ , ತಪ್ಪನ್ನು ಸಮರ್ಥಿಸಿಕೊಳ್ಳದೆ , ಏನನ್ನೂ ವೈಭವೀಕರಿಸದಿರುವ scene - ತುಂಬಾ Beautiful ಹಾಗೂ Rare ಕೂಡ . 

ಕುಮರೇಸನಿಗೆ ನರಕ ತೋರಿಸುವ ವ್ಯವಸ್ಥೆಯ ರೂವಾರಿಯಾಗಿ ಪೊಲೀಸ್ ಅಧಿಕಾರಿ ಓ.ಸಿ (ಚೇತನ್). ಈತ ಚಿತ್ರದ ದೊಡ್ಡ ಅಚ್ಚರಿ. ಪೋಲೀಸರ ದೌರ್ಜನ್ಯದ ಮುಖವಾಗಿ ಮತ್ತು ಕ್ರೂರಿಯಾಗಿ ಪಾತ್ರವನ್ನು ನೆನಪಿನಲ್ಲಿರುವಂತೆ ನಟಿಸಿದ್ದಾರೆ. DSP ಯಾಗಿ ಗೌತಮ್ ವಾಸುದೇವ್ ಮೆನನ್ , Chief Secretary ಆಗಿ ರಾಜೀವ್ ಮೆನನ್ Perfect . ಸಣ್ಣ ಪೋಷಕ ಪಾತ್ರಗಳು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.   

ಹೊರಗಿನವನು ಹೇಗೆ ಒಳಗಿನವನಾಗುತ್ತಾನೆ ? ನಿರಪರಾಧಿ ಹೇಗೆ ನಿಜಾಯಿತಿ ಅರಿಯುತ್ತಾನೆ ? ಸತ್ಯದಿಂದ ದೂರವಾದ ಮಾಧ್ಯಮಗಳ ಪ್ರಚಾರ , ವ್ಯವಸ್ಥಿತ ರಾಜಕೀಯ, ಮೇಲ್ದರ್ಜೆಯವರ ದರ್ಪ - ಪೊಲೀಸರನ್ನು ಹೊಕ್ಕಿದಾಗ ಜನರಿಗಾಗುವ ಸಂಕಷ್ಟಗಳು ,ಒಳ್ಳೆಯದಾವುದು - ಕೆಟ್ಟದಾವುದು ಎಂಬ ಸಂಘರ್ಷ. ಯಾರ ಪರವಾಗಿ ಹೋರಾಡುವುದು ? ಹೀಗೆ ನಾನಾ ವಿಷಯಗಳನ್ನು ಅವರವರ ದೃಷ್ಟಿಕೋನದಲ್ಲಿ ಹೇಳಿರುವ ಕಥೆ ತೆರೆಯ ಮೇಲೆ ಸ್ಪಷ್ಠವಾಗಿ ಕಾಣಸಿಗುತ್ತದೆ . ಹಾಗಾಗಿ ನಾವು ಕೂಡ ಬರೀ ಪ್ರೇಕ್ಷಕರೆನ್ನುವುದು ಮರೆತು ಹೋಗಿ ಪಾತ್ರಗಳಾಗಿರುತ್ತೇವೆ . 

ಪೊಲೀಸ್ ದೌರ್ಜನ್ಯ, Raw ಅಂಡ್ Rustic ಆಗಿ ಮೂಡಿಬರಬೇಕು ಅಂತ ಚಿತ್ರದಲ್ಲಿ ಸಾಕಷ್ಟು Aggression, Nudity, Vulgarity ಎಲ್ಲವೂ ಇದ್ದು disturb ಆಗಿಬಿಡಬಹುದು . ಹಾಗೂ ಚಿತ್ರದಲ್ಲಿ  ಅಲ್ಲಲ್ಲಿ ಡಬ್ಬಿಂಗ್ lip Sync issues ಅನ್ನಿಸ್ತು.  

ಕ್ಯಾಮೆರಾ ವರ್ಕ್ ವೇಲರಾಜ್ , ಕಲಾ ನಿರ್ದೇಶನ  Jackie, ಎಡಿಟರ್ ರಾಮರ್  ನಿಮಗೆ ದೊಡ್ಡ ಸಲಾಂ .ಇಳಯರಾಜರ ಇಂಪಾದ ಸಂಗೀತವಿದೆ. ಹಾಡೊಂದಕ್ಕೆ ಕನ್ನಡತಿ ಅನನ್ಯ ಭಟ್ ದನಿಯಿದೆ. ಸಿನಿಮಾದ geography  - locations ಎಲ್ಲವೂ ಕಥೆಗೆ ಪೂರಕ .  ಸಿನಿಮಾನೇ ಜೀವನ ಅಂತ ಇಷ್ಟಪಡುವ ಹಲವು ಜನರ ಕೈಂಕರ್ಯದ ಫಲ ವಿಡುದಲೈ  . ಪೊಲೀಸ್ ದೌರ್ಜನ್ಯದ ದೃಶ್ಯಗಳು ಬಲು ಹಿಂಸಾತ್ಮಕ - ಸ್ವತಃ ಪೊಲೀಸ್ ಒಬ್ಬಾತನಿಗೂ ತನ್ನ ಕೆಲಸದ ಮೇಲೆ ವಿಷಾದ ಮೂಡಬಹುದು . ಆದರೂ ಸಹ ಸಮುದಾಯದ ತಳವರ್ಗ / ಬುಡಕಟ್ಟು ಜನರ ಕಷ್ಟ-ಕಾರ್ಪಣ್ಯ ಗಳಿಗೆ ಕನ್ನಡಿ . ಮನಸ್ಸು ಕರಗಿ , ನಮ್ಮನು ನಾವೇ ಅರ್ಥೈಸಿಕೊಳ್ಳಬಹುದಾದ ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಏನೋ  ಈ ಸಿನೆಮಾಗೆ ವಿಡುದಲೈ ಅಂದರೆ ಬಿಡುಗಡೆ/ಸ್ವಾತಂತ್ರ್ಯ ಅನ್ನೋ ಹೆಸರು. 

Rating: ೮೫/೧೦೦

-ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ

ಪಂಜಾದ ಮ್ಯಾಲೊಂದು ಪ್ರಬಂಧ

ಸ್ನೇಹಿತರೇ ನಮಸ್ಕಾರ.’ಪಂಜಾನs' ಅಂತ ಒಮ್ಮಿಗಲೇ ಆವಾಕ್ಕಾಗಬ್ಯಾಡ್ರಿ.ಈ ಪಂಜಾ ಹುಲಿ-ಸಿಂಹದ ಪಂಜಾ ಅಲ್ರಿ .  ಮತ್ತ ನಮ್ಮ ಬೆಂಗಳೂರು -ಮೈಸೂರಿನ
ಪಂಚೆನೂ ಅಲ್ರಿ.ಯಾಕಂದ್ರ ಆ ಪಂಚೆಯ ಠೀವಿ  ಬ್ಯಾರೆನೇ ಇರತದ.ಕೆಂಪು-ಹಸಿರು ಬಣ್ಣದ ಎರಡು  ಬಟ್ಟಿನ ಜರದ ಅಂಚೇನು? ಬೆಳ್ಳಗ ಶುಭ್ರ ಕೊಕ್ಕರೆಯಂಥ ಅದರ ಮಿನುಗೇನು?......ಅದಲ್ಲ ತಗೀರಿ,ಇದು ನಮ್ಮ ಉತ್ತರ ಕನಾ೯ಟಕದ ಪಂಜಾsರೀ..

ಜೀವನದಾಗ ಒಂದು ಗುರಿ ಇರಬೇಕು ;ಕೆಲವೊಂದು ರೂಲ್ಸ್ ,ಕಂಡೀಷನ್ಸ ಇರಬೇಕು  ಅನ್ನೋದು ಬಲ್ಲವರ ಮಾತು.ನಮ್ಮ ಡಿ.ವಿ.ಜಿ.ಯವರಂತೂ”ಜೀವಗತಿಗೊಂದು ರೇಖಾಲೇಖವಿರಬೇಕು  ನಾವಿಕನಿಗೆ ಇರುವಂತೆ  ದಿಕ್ಕು  ದಿನವೆಣಿಸೆ’ ಅಂತ ಖಡಾಖಂಡಿತವಾಗೇ ಹೇಳಿಬಿಟ್ಟಾರ.ಆದ್ರ ನಮ್ಮ ಈ ಕೈಮಗ್ಗದ , ಖಾದಿಭಂಡಾರದ ಪಂಜಾಕ್ಕ ಇವು ಯಾವ ಮಾತೂ ಅಪ್ಲೈ
ಆಗಂಗಿಲ್ಲ.ಅದಕ್ಯಾವ ಘನಂದಾರಿ ಗೊತ್ತು ಗುರಿ ಏನೂ ಇಲ್ಲ.ಅದರಲೆ ತಲಿ ಅರೆ  ಒರಸಕೋರಿ, ಮಾರಿ ಅರೆ ಒರಸಕೋರಿ ,ಮುಸುರಿಗೈ ಅರೆ ಒರಸಕೋರಿ, ಅಳ್ಳಕ ಆಗಿದ್ದ ಹೂರಣ ಅರೆ ಸೋಸರಿ,ಅನ್ನದ ಗಂಜಿ ಬಸೀರಿ,ಶ್ರೀಖಂಡಕ್ಕ ಮಸರರೆ ಕಟ್ರಿ, ಮೊಳಕಿ ಬರಸಲಿಕ್ಕೆ ಕಾಳ ಅರೆ ಕಟ್ಟಿಡ್ರಿ, ದೇವರ ಒರಸೂ ವಸ್ತ್ರ ಮಾಡ್ರಿ,ಮಡೀಲೆ ಒಣಗಹಾಕಿ ದೇವರ ಪೂಜಾ ಅರೇ ಮಾಡ್ರಿ ..ಇಲ್ಲಾ  ಶ್ರಾದ್ಧ-ಪಕ್ಷ -ತಿಥಿ ಮಾಡ್ರಿ..  ಎಲ್ಲಾ ನಡೀತದ.ಫಲಾಫಲದ ಚಿಂತೆಯಿಲ್ಲದ ಕಮ೯ಯೋಗಿಯಂತೆ ಯಾವ ಕೆಲಸವನ್ನಾದರೂ ನಿಷ್ಠೆಯಿಂದ  ಮಾಡುವ ಹಿರಿಮೆ ಇದರದು.ನಾ ಮೊದಲೇ ಹೇಳಿದ್ಹಂಗ ಇದು ಯಾವ ನಿಯಮಗಳ ಮುಲಾಜಿಲ್ಲದ ಸವ೯ತಂತ್ರ ಸ್ವತಂತ್ರ ವಾದದ್ದು.ಅದಕ್ಕ ಯಾವದೇ ಪಂಜಾದ ಮ್ಯಾಲೂ ‘ವಾಶಿಂಗ್ ಇನ್ ಸ್ಟ್ರಕ್ಶನ್ಸ’ ಇರಂಗಿಲ್ಲ ನೋಡ್ರಿ.”only hand wash,only dry clean ,keep away from the fire,only machine wash in 40 degree ,do not iron ..ಇಂಥ ಯಾವ  ರಗಳೇನೂ ಇಲ್ಲ.ಕೈಲೇರೆ ಒಗೀರಿ,ಮಶೀನ್ ನಾಗರೆ ಹಾಕ್ರಿ,ಅಗಸರವನಿಗೇ ಕೊಡ್ರಿ...ಎಲ್ಲಾನೂ ನಡೀತದ.ಇದ್ರ ಒಂಚೂರು ನಿರಮಾನೋ,ನೀಲಿಪಾಲಿನೋ ಹಾಕಿದರೂ ನಡದೀತು! ಇಲ್ಲಂದ್ರ ಬರೀ ನೀರಲ್ಲಿ ಕೈಯಿಂದ ಕುಕ್ಕಿ ಹಾಕಿದರೂ ಆಯಿತು.ಬಿಚ್ಚಿ ಹರವಿದ್ರ ಐದು ನಿಮಿಷದಾಗ ಒಣಗೇ ಬಿಡತದ. ಇಸ್ತ್ರಿ ಪಸ್ತ್ರಿ ಮಾಡೂ ತಂಟೆನೂ  ಇಲ್ಲ.
ಇನ್ನು ಇವುಗಳ ಸೈಜೋ? ದಶಾವತಾರದ ವಾಮನನಿಂದ ಹಿಡಿದು ತ್ರಿವಿಕ್ರಮನವರೆಗೆ..ಅಂಗೈ ಅಗಲದಿಂದ ಹಿಡಿದು ನವ್ವಾರಿ ಸೀರಿಯಷ್ಟು ದೊಡ್ಡದೂ ಸಿಗತಾವ.ಕನಾ೯ಟಕ ಬಿಟ್ಟು ಸುಮಾರು ೨೫ ವಷ೯ಗಳಿಂದ ದೆಹಲಿ – ಲಂಡನ್ ಅಂತ ಎಲ್ಲೇ ಅಡ್ಡಾಡಿದರೂ ನಮ್ಮ ಮನೆಯ  ಕಪಾಟಿನಾಗ ಪಂಜಾಕ್ಕೊಂದು ಜಾಗ ರಿಸವ್೯ ಇರೂದಂತೂ ಗ್ಯಾರಂಟಿ .ನಾನು ಪ್ರತಿಸಲ ಸೂಟಿಗೆ  ಅಂತ ನನ್ನ ತವರು  ಮನಿಗೆ ಹೋದ್ರ  ಏನು ಬಿಟ್ಟರೂ ,ಬ್ಯಾರೆ ಬ್ಯಾರೆ ಸೈಜಿನ  ನಾಲ್ಕು ಪಂಜಾ ತರೂದಂತೂ ತಪ್ಪಸಂಗಿಲ್ರಿ.ಎರಕೊಂಡ ಮ್ಯಾಲೆ ಪಂಜಾದಲೆ ತಲಿ ಒರಸಿಕೊಳ್ಳುದರ ಮಜಾನೇ ಬ್ಯಾರೆ.soft ಆದ  cotton ಬಟ್ಟಿ...ಸಂಪೂಣ೯ವಾಗಿ ನೀರು ಹೀರಿಕೊಳ್ಳುವ  ಅದರ ವೈಶಿಷ್ಟ್ಯ.. ಈ  ಟರ್ಕಿ - ಪರ್ಕಿ ಒಳಗ ಆ ಮಜಾ ಇಲ್ಲ ಬಿಡ್ರಿ.
 ನಾವು ಸಣ್ಣವರಿದ್ದಾಗ ನಮ್ಮ ಸೋದರಮಾವ  ಚ್ಯಾಷ್ಟಿ ಮಾಡತಿದ್ರು...”ನೈನಂ ಛಿಂದಂತಿ ಶಸ್ತ್ರಾಣಿ  ನೈನಂ ದಹತಿ ಪಾವಕ: “ ಅಂತ ಶ್ರೀಕೃಷ್ಣಗ ಭಗವದ್ಗೀತಾ ಒಳಗ ಆತ್ಮದ ಲಕ್ಷಣ ಹೇಳೂ ಐಡಿಯಾ ನಮ್ಮ ಸುಬ್ಬಣ್ಣಾಚಾರ್ಯರ ಪಂಜಾ ನೋಡಿನೇ ಬಂದಿರಬೇಕು ಅಂತ.ಹಂಗs  ಅವಾಗಿನ ಅಂದ್ರ 60- 70 ರ ದಶಕದ ಸುಬ್ಬಣಾಚಾಯ೯ರಿಂದ ಈಗ  2022-23 ರ ನಮ್ಮ ಪವಮಾನಚಾರ್ಯರತನಕ ಇದರ ಜಾಗ ಏನೂ ಬದಲಾಗಿಲ್ಲ. ನಮ್ಮ ಪವಮಾನಾಚಾರ್ಯರು  face-book,WhatsApp  ಎಲ್ಲಾದರಾಗೂ ಇದ್ದಾರ.ಕಂಪ್ಯೂಟರ್ ನಾಗ ಕುಂಡಲಿ  ತಗೀತಾರ.ವಿಮಾನದಾಗ ಓಡಾಡತಾರ.ಆದ್ರ ಪಂಜಾದ ಜಾಗಾದಾಗ ಮಾತ್ರ ಇನ್ನೊಂದು  ಸಾಮಾನು ಬಂದಿಲ್ಲ ನೋಡ್ರಿ.ಇವುಗಳದು ತಲೆ-ತಲಾಂತರದಿಂದ ಒಂಥರಾ ‘ಏಕಮೇವ ಚಕ್ರಾಧಿಪತ್ಯ’.  ‘ಸೂಯ೯ನ ಕಾಂತಿಗೆ ಸೂಯ೯ನೇ ಸಾಟಿ  .ಹೋಲಿಸಲಾರಿಲ್ಲ.’ ಅಂದ್ಹಂಗ ಪಂಜಾದ ಹಿರಿಮೆಗೆ ಪಂಜಾನೇ ಸಾಟಿ .ಹೋಲಿಸಲಾರಿಲ್ಲ.’ಮಡಿವಾಳರ ಶತ್ರು ,ಮಠದಯ್ಯಗಳ ಮಿತ್ರ....ಲಂಗೋಟಿ ಬಲು ಒಳ್ಳೇದಣ್ಣ  - ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣ ‘ ಅಂತ ಪುರಂದರದಾಸರು ಹಾಡಿದರಲ್ಲ.....ನಾವು ಬೇಕಾದರ ಲಂಗೋಟಿಗೆ ಪಯಾ೯ಯವಾಗಿ ಪಂಜಾ ಬಳಸಿಕೊಂಡ್ರ ಏನೂ ತಪ್ಪಿಲ್ಲವೇನೋ?! ಈ ಪಂಜಾಗಳಿಗೆ ರೇಶ್ಮೆಯಂಥಾ ರೇಶ್ಮೆಯಿಂದನೂ ಕಾಂಪಿಟೇಶನ್ ಇಲ್ಲ ಬಿಡ್ರಿ.

ಬ್ರಾಹ್ಮಣರ  ಮನ್ಯಾಗ ಏನು ಇಲ್ಲಂದ್ರೂ ನಡೀತದ.ಆದ್ರ ಈ ಪಂಜಾ ಇಲ್ಲಂದ್ರ ನಡ್ಯಂಗಿಲ್ಲ ನೋಡ್ರಿ.ದೇವರ  ಪೂಜಾದ ಸಮಯಕ್ಕ ಉಪಯೋಗಿಸಿದಂಥ ಪಂಜಾನ್ನ ಆಮ್ಯಾಲೆ ಬಿಚ್ಚಿ ನೋಡಬೇಕ್ರಿ..ಅದರ ಮ್ಯಾಲೆ ಒಂದು  ಸುಂದರ ವಣ೯ಚಿತ್ರ , ಒಂದು  modern art ಆಗಿಬಿಟ್ಟಿರತದ.ಅಕ್ಷಂತಿ,ಗಂಧ,ಅರಿಶಿನ,ಕುಂಕುಮ ಎಲ್ಲದರ ಸುಂದರ ಚಿತ್ತಾರ...ಇನ್ನ ದೊಡ್ಡ  ದೊಡ್ಡ  ಸಮಾರಾಧನಿ ಅಡಿಗಿಗೆ ಪಂಜಾ ಬೇಕೇ ಬೇಕ್ರಿ.ದೊಡ್ಡ  ದೊಡ್ಡ ಪಾತೇಲಿ ಒಲಿ ಮ್ಯಾಲಿಂದ ಇಳಸಲಿಕ್ಕೆ ಒದ್ದಿ ಪಂಜಾನೇ ಬೇಕ್ರಿ.ಹಾಂ,ಮಸಾಲಿಪುಡಿ,ಖಾರಪುಡಿ ,ಅರಿಶಿನ ಪುಡಿ ಎಲ್ಲಾ ಮೆತ್ತಿದ ಅದರ ಸೌಂದರ್ಯನೇ ಬ್ಯಾರೆ. ಇಷ್ಟ ಯಾಕ್ರಿ ಸ್ವಾಮಿಗೋಳು ಮುದ್ರಾ ಹಾಕಬೇಕಂದ್ರೂ ಈ ಪಂಜಾ ಜೋಡಿಗೆ ಬರಬೇಕ್ರಿ.ಒದ್ದಿ ಪಂಜಾದ ಮ್ಯಾಲೆ ಮುದ್ರಿ ಒತ್ತಿದ ಮ್ಯಾಲೆನೇ ಅದು ನಮ್ಮ ಮೈ ಮ್ಯಾಲೆ ಮೂಡೂದರಿ.
ನಮ್ಮ ಗದಗಿನ ಕುಮಾರ ವ್ಯಾಸನ ಭಾರತಕ್ಕೂ ಇದು ತನ್ನ ಕೊಡುಗೆ ಸಲ್ಲಿಸಿದ್ದ ಗೊತ್ತಿರಬೇಕ ನಿಮಗ. ಬಾವಿ ನೀರಿನ ಸ್ನಾನಮಾಡಿ ಉಟಗೊಂಡಿದ್ದ ಒದ್ದಿ ಪಂಜಾ ಆರೂತನಾ ಕುಮಾರವ್ಯಾಸಗ ಕಾವ್ಯ ಸ್ಫೂರ್ತಿ ಇರತಿತ್ತು ಅಂತಲೂ, ಕಂಬಕ್ಕೆ ಆರಲೆಂದು ಕಟ್ಟಿದ ಪಂಜಾದ ಮ್ಯಾಲ ನಾರಾಣಪ್ಪಗ ಮಹಾಭಾರತ ಸಚಿತ್ರವಾಗಿ ಕಾಣಿಸುತ್ತಿತ್ತು ಅಂತಲೂ ದಂತಕಥೆಗಳು ಪ್ರಚಲಿತದಾಗ ಅವ. 
ಹಂಗಂತ ಇದರ ಜಾಗಾ ಬರೇ ಬಡ ಬ್ರಾಹ್ಮಣರ ಮನ್ಯಾಗ ಮತ್ತ ಮಠದಾಗಷ್ಟೇ ಅಂತ ತಿಳಕೋಬ್ಯಾಡ್ರಪಾ.ಇದು ರಗಡ ಸಲ ಬಾಲಿವುಡ್ ಸವಾರಿನೂ ಮಾಡಿ  ಬಂದದ.ನಮ್ಮ ರಾಜಕಪೂರ್ ಫ್ಯಾಮಿಲಿಯವರಿಗಂತೂ ಇದು ಫೇವರಿಟ್. ‘ ತುಝೆ ಬುಲಾಯೆ ಯೆ ಮೇರಿ ಬಾಹೇಂ...ಗಂಗಾ  ಯೆ ತೇರಿ ಹೈ ಫಿರ್ ಕೈಸಿ ದೇರಿ ಹೈ’ಅಂತಲೂ, ‘ಸತ್ಯಂ ಶಿವಂ ಸುಂದರಂ ‘ ಅಂತಲೂ ಹಾಡಿ ತಾನೂ ಕುಣಿಯೂದಲ್ಲದ ಎಲ್ಲಾರ ಮೈ-ಮನಸ್ಸನ್ನೂ ಕುಣಿಸಿ -ತಣಿಸೇದ ಅನ್ನೂದನ್ನ ಮರೀಬ್ಯಾಡ್ರಿ.
ಇಷ್ಟೆಲ್ಲಾ  ಆದ್ರೂ ಸೊಕ್ಕಿಲ್ಲ ನೋಡ್ರಿ ಅದಕ್ಕ.”ತುಂಬಿದ ಕೊಡ ತುಳಕಂಗಿಲ್ಲ “ಅನ್ನೂಹಂಗ ಸದ್ದಿರದೇ ತನ್ನ ಕತ೯ವ್ಯದಲ್ಲಿ ನಿರತವಾಗಿರತದ.ಫಲಾಫಲಾಪೇಕ್ಷೆಯಿಲ್ಲದೇ ,ಮೇಲು -ಕೀಳು ಎನ್ನದೇ ಕಮ೯ಯೋಗಿಯಂತೆ ತಾನಾಯಿತು ತನ್ನ ಕಾಯಕವಾಯಿತು ಎಂಬಂತಿರತದ.

ಮತ್ತ ಇಂಥ ಪಂಜಾಕ್ಕ  ಒಂದು ಮೆಚ್ಚುಗಿ ಮಾತ ಬರಲೆಲಾ ನಿಮ್ಮ ಕಡೆಯಿಂದ.

- ಗೌರಿ ಪ್ರಸನ್ನ

ಒಂದೋ ಎರಡೋ ಬಾಳೆಲೆ ಹರಡೋ ಮತ್ತು ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

ಆತ್ಮೀಯ  ಓದುಗರಿಗೆ ನಮಸ್ಕಾರ

ರುಚಿಯಾದ ಅಡಿಗೆ ಮಾಡುವದು ಕಷ್ಟವೆಂದರೆ ಮಾಡಿದ್ದನ್ನು ತಿನ್ನುವುದೂ ಕೂಡ  ಕಷ್ಟವೆಂಬುವುದು  ಬಹು ಜನರಿಗೆ ಗೊತ್ತಿರಿಲರಾರದ ಸಂಗತಿ ಇರಬಹುದು . ಪ್ರಪಂಚದ ಬೇರೆ ಬೇರೆ ದೇಶಗಲ್ಲಿ ತಿನ್ನುವ ಆಹಾರ ವಿಭಿನ್ನವಾಗಿದ್ದರೆ, ತಿನ್ನುವ ಪದ್ಧತಿ ಕೂಡ ಅಷ್ಟೇ ವಿಭಿನ್ನವಾಗಿದೆ. ನಾನು ಮೊದಲು ಸಲ ಈ ದೇಶಕ್ಕೆ ಬಂದಾಗ ಫೋರ್ಕ್ ಮತ್ತು ಚಮಚ ಹಿಡಿದು ತಿನ್ನಲು ಹೋಗಿ ಹಾಗು ಜಪನೀಸ ನೂಡಲ್ಸನ್ನು ಕಡ್ಡಿಯಿಂದ ಎತ್ತಲು ಹೋಗಿ ನಗೆಪಾಡಾಗಿದ್ದು ಇನ್ನೂ ನೆನಪು. ಡೈನಿಂಗ್ ಟೇಬಲ್ ಮೇಲೆ ಕುಳಿತು ಆರಾಮವಾಗಿ ತಿನ್ನುವವರಿಗೆ ನಮ್ಮ ಹಳ್ಳಿಗೆ ಕರೆದೊಯ್ದು ಹಾಸಿದ ಚಾಪೆಯ ಮೇಲೆ ಕುಳಿತು ತಿನ್ನಲು ಹೇಳಿದರೆ ಎಂಥ ಕಷ್ಟವಾದೀತು? ಇಂಥ ವಿಷಯದ ಮೇಲೆ ಸರಾಳವಾಗಿ ಜುಳು ಜುಳು ನೀರಿನಂತೆ ಹರಿಯುವ ‘ ಹರಟೆ ‘ ಓದಲು ಸಿಕ್ಕರೆ ಮನಸಿಗೆ ಎಷ್ಟೊಂದು ಖುಷಿ ! ಇಷ್ಟು ಸಲೀಸಾಗಿ  ಹರಟೆಯನ್ನು ಬರೆಯಲು ಗೌರಿ ಪ್ರಸನ್ನನವರನ್ನು ಬಿಟ್ಟರೆ ಇನ್ನ್ಯಾರಿಗೆ ಸಾಧ್ಯ? ಬನ್ನಿ, ತಪ್ಪದೆ ಅವರ ಹರಟೆಯನ್ನು ಓದಿ ಆನಂದಿಸಿ .

ಒಬ್ಬೊಬ್ಬರ ಜೀವನದಲ್ಲೂ ಇನ್ನೊಬ್ಬ ಪ್ರಭಾವಿತ ವ್ಯಕ್ತಿಯ ಪ್ರಭಾವ ಇರುವದು ಸಹಜ. ನನ್ನ ಚಿಕ್ಕ ವಯಸಿನಲ್ಲಿ ಕನ್ನಡ ಸಾಹಿತ್ಯದತ್ತ ಅಭಿರುಚಿ ಬೆಳೆಯಲು ಕಾರಣರಾದವರು ನನ್ನ ನೆಚ್ಚಿನ ಕಾದಂಬರಿಕಾರ್ತಿ ‘ತ್ರಿವೇಣಿ’ ಯವರು . ಸೆಪ್ಟೆಂಬರ್ ೧ ಅವರ ಹುಟ್ಟುದಿನ . ಈ ಸಮಯದಲ್ಲಿ ನಾನು ಅವರಿಗೊಂದು ಹೃತ್ಪೂರ್ವಕ ನಮನ ಸಲ್ಲಿಸಲು ಸಣ್ಣ ಬರಹವನ್ನು ಬರೆದಿರುವೆ , ತಾವೆಲ್ಲಾ ಓದುವಿರೆಂದು ಭಾವಿಸಿರುವೆ 

ದಯವಿಟ್ಟು ಎರಡೂ ಬರಹಗಳನ್ನು ಸಮಯ ಸಿಕ್ಕಾಗ ಓದಿ , ಹಾಗೆಯೇ ಎರಡಕ್ಷರದ ಅನಿಸಿಕೆಯನ್ನು ಬರೆಯಲು ಮರೆಯಬೇಡಿ 

–  ಸಂಪಾದಕ 

ಒಂದೋ ಎರಡೋ ಬಾಳೆಲೆ ಹರಡೋ

ಗೌರಿ ಪ್ರಸನ್ನ

‘ಒಂದೋ ಎರಡೋ ಬಾಳೆಲೆ ಹರಡೋ’ ಅನ್ನುವ ಹಾಡಿನಿಂದಲೇ ನಮ್ಮ ಒನ್ನೆತ್ತಾ ಶುರುವಾಗಿ ನಾವು ರಾಕ್ಷಸ ಗಣದಿಂದ ಸಾಕ್ಷರರಾಗುವತ್ತ ಮೊದಲ ಹೆಜ್ಜೆಯಿಟ್ಟದ್ದು. ನಮಗೆ ಆಗಲೂ, ಈಗಲೂ ಊಟದ ಆಟ ಕೊಟ್ಟಷ್ಟು ಖುಷಿ ಬೇರಾವುದೂ ಕೊಟ್ಟಿಲ್ಲ ಅನಬಹುದು. ನಾ ಎಷ್ಟೋ ಸಲ ವಿಚಾರ ಮಾಡತಿರತೀನಿ. ಈ ‘ಊಟ’ ಅನ್ನೂದು ಇರಲಿಲ್ಲಂದ್ರ ಕೆಲಸನs ಇರತಿರಲಿಲ್ಲ ಅಂತ. ನಾವೂ ಗಿಡಮರಬಳ್ಳಿಗಳ ಗತೆ ಅಥವಾ ಕೋಯಿಮಿಲ್ ಗಯಾದ ‘ಜಾದೂ’ ನ ಗತೆ ಬರೀ ಸೂರ್ಯನ ಬಿಸಿಲೋ, ನೀರೋ ಇವುಗಳಿಂದನೇ ಬದುಕೂ ಹಂಗಿದ್ರ ಯಾವ ಕೆಲಸದ ರಗಳೆನೇ ಇರತಿರಲಿಲ್ಲ. ಕನಿಷ್ಠ ಪಕ್ಷ ಪಶುಪಕ್ಷಿಗಳ ಗತೆ ಸೊಪ್ಪು, ಹುಲ್ಲು, ಹಣ್ಣುಹಂಪಲ, ಹಸಿಮಾಂಸಗಳನ್ನು ಹಂಗೇ ನೇರವಾಗಿ ತಿನ್ನೂ ಹಂಗಿದ್ರ ಹೆಂಗಿರತಿತ್ತು..?! ಆವಾಗ ಈ ಭಾಂಡಿ ತೊಳಿ, ಕಟ್ಟಿ ಒರಸು, ಕಿರಾಣಿ ತಗೊಂಬಾ, ಕಾಸು, ಕಟ್ಟು, ಕುದಿಸು, ಬೇಯಿಸು, ಹೆಚ್ಚು, ಕೊಚ್ಚು, ತೊಳಿ, ಬಳಿ ಅನ್ನೋ ಯಾವ ಉಸಾಬರಿನೂ ಇರತಿರಲಿಲ್ಲ. ಹಂಗಂದ್ರ ಈ ಊಟನೇ ಎಲ್ಲಾದಕ್ಕೂ ಮೂಲ ಅಂದ್ಹಂಗಾತು. ದಾಸರೂ ಸಹಿತ ಅದಕ್ಕಾಗೇ ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅಂತ ಇನ್ ಡೈರೆಕ್ಟ್ ಆಗಿ ಈ ಊಟದ ಬಗ್ಗೆನೇ ಹೇಳ್ಯಾರ ಅನಸತದ.  ‘ತಂಡುಲದ ಹಿಡಿಯೊಂದು, ತುಂಡು ಬಟ್ಟೆಯದೊಂದು ಅಂಡಲೆತವಿದಕೇನೋ ಮಂಕುತಿಮ್ಮ’ ಅಂತಾರ ನಮ್ಮ ತಿಮ್ಮ ಗುರು.

 ಊಟಾ ಏನೋ ಎಲ್ಲಾರೂ ಮಾಡತಾರ. ಮಾಡಿದ್ದಣ್ಣೋ ಮಹರಾಯ ಅಂತ ಕೆಲವರು ತಾವೇ ಕೈ ಸುಟಗೊಂಡು ಬಾಯಿನೂ ಸುಟಗೋತಾರ. ಇನ್ನ ಕೆಲವರು ಏನೂ ಬಿಸಿಯಿಲ್ಲದೇ ಖಮ್ಮಗ ಮತ್ತೊಬ್ಬರು ಮಾಡಿ ಹಾಕಿದ್ದನ್ನ ಸುಮ್ಮ ತಿಂದು ಬಿಮ್ಮಗಿರತಾರ. ಮತ್ತೂ ಕೆಲವರು ತಿನ್ನೂತನಾ ತಿಂದು ಆಮ್ಯಾಲೆ “ಹೋಳ ಭಾಳ ಹಣ್ಣ ಬೆಂದಾವ ಅಂತಲೋ, ಬ್ಯಾಳಿ ಬೆಂದೇ ಇಲ್ಲ” ಅಂತನೋ ಕಿಟಿಪಿಟಿ ನಡಸಿರತಾರ. ಅಂತೂ ಊಟ ಅಂಬೋ ಆಟ ಅವರವರದೇ ರೀತಿಯೊಳಗ ಎಲ್ಲಾರೂ ಆಡತಿರತಾರ. ಈ ಊಟ ಮಾಡೂ ರೀತಿ, ಅದರ ವಿಧಿ -ವಿಧಾನಗಳು ಎಷ್ಟೊಂದ ನಮೂನೀರಿ?! ಜಾಗಾದಿಂದ ಜಾಗಾಕ್ಕ ಈ ಊಟದ ರೀತಿ-ನೀತಿಗಳು ಬ್ಯಾರೆ ಬ್ಯಾರೆ ಆಗತಾವ ಅನ್ರಿ. ನಮ್ಮ ಕಡೆ ಅಂದ್ರ ದಕ್ಷಿಣ ಭಾರತದಾಗ ಬಾಳೆ ಎಲೆಗಳ ಸಂಭ್ರಮ. ಏನರೇ ಹಬ್ಬ-ಹುಣ್ಣಿಮಿ, ಮದುವಿ-ಮುಂಜಿವಿ, ಆರಾಧನಿ-ಸಮಾರಾಧನಿ ಅಂತೆಲ್ಲ ಇದ್ರ  ಬಾಳೆಎಲೆ ಊಟ ಗ್ಯಾರಂಟೀರಿ. ನಾವು ಸಣ್ಣವರಿದ್ದಾಗ ರವಿವಾರಕ್ಕೊಮ್ಮೆ ಸಂತ್ಯಾಗ ಬಾಳಿ ಎಲಿ ತಂದು, ದಿಂಡ ತಗದು, ಅವನ್ನ ಹೆಚ್ಚಿ ಸಣ್ಣಸಣ್ಣ ಎಲೆಗಳನ್ನಾಗಿ ಮಾಡಿ ಒಂದು ತಟ್ಟಿನ ಚೀಲ ‘ನಮ್’ ಅನ್ನೂ ಅಷ್ಟು ಒದ್ದಿ ಮಾಡಿ ಅದರಾಗ ಸುತ್ತಿ ಇಡತಿದ್ರು ನಮ್ಮ ಮುದ್ದಣ್ಣ ಮಾಮಾ. 15-20 ದಿನಗಟ್ಟಲೇ ಛಲೋ ಇರತಿದ್ವು. ಸ್ವಲ್ಪ ಹಳದಿ ಒಡದ್ರೂ ನಮಗೇನ ಫರಕ ಬೀಳತಿರಲಿಲ್ಲ.( ಯಾಕಂದ್ರ ನಮ್ಮ ಕಣ್ಣೆಲ್ಲ ಎಲೆಯ ಮೇಲಿನ ಖಾದ್ಯಗಳ ಬಣ್ಣದೆಡೆ ನೆಟ್ಟಿರುತ್ತಿದ್ದವೆನ್ನಿ) ಊಟಾ ಆದಮ್ಯಾಲೆ ಅವೇ ಎಲೆಗಳು ಸಾಳುಂಕೆ ಅವರ ಮನೆಯ ಎಮ್ಮೆ-ಆಕಳುಗಳಿಗೆ  ಸುಗ್ರಾಸ ಭೋಜನವಾಗುತ್ತಿದ್ದವು. 

 ಈ ಬಾಳೆ ಎಲಿ ಹೆಂಗ ಹಾಕಬೇಕು ಅನ್ನೂದೇ ಒಂದು ಸಮಸ್ಯೆ ಹಲವರಿಗೆ. ಉದ್ದ ಹಾಕಬೇಕೋ, ಅಡ್ಡ ಹಾಕಬೇಕೋ, ಅದರ ಮಾರಿ ಯಾವ ಕಡೆ ಇರಬೇಕು, ಕುಡಿ ಬಾಳೆ ಎಲಿ ಹಾಕಬೇಕೋ ಬ್ಯಾಡೋ ..ಹೀಂಗ ನೂರಾ ಎಂಟು ಪ್ರಶ್ನೆ ಇರತಾವರೀ ( ಯಾಕಂದ್ರ ಚೊಚ್ಚಲ ಗಂಡಸ ಮಕ್ಕಳಿದ್ದವರು ಕುಡಿ ಬಾಳಿ ಎಲ್ಯಾಗ ಉಣಬಾರದಂತ ಶಾಸ್ತ್ರ ಅದ ಅಂತರಿ).  ಎಲಿ ಹಾಕಿದ ಮ್ಯಾಲೆ ಇನ್ನ ಸಾಲಕ ಉಪ್ಪಿನ ಹಿಡಕೊಂಡು ಚಟ್ಟಿ, ಕೋಸಂಬ್ರಿ, ಪಲ್ಯಾ, ಕಾರೇಸಾ, ಬುರಬುರಿ, ಪಾಯಸ, ಅನ್ನ, ತೊವ್ವೆಗಳಿಗಲ್ಲ ಅದರದರದೇ ನಿರ್ದಿಷ್ಟ ಜಾಗ ಇರತಾವರೀ. ಉಪ್ಪು ಎಡಕ್ಕ, ಪಾಯಸ ಬಲಕ್ಕ, ಅನ್ನದ ಬಲಬದಿಗೆ ತೊವ್ವೆ, ಅದರ ಮೇಲೆ ತುಪ್ಪ … ಹೀಂಗ ಏನೇನೋ. ಅವೆಲ್ಲ ಅದಲು ಬದಲು ಆಗೂ ಹಂಗಿಲ್ರೀ. ನೀವೇನರೇ ಪಾಯಸ ಎಡಕ್ಕ ಬಡಸಿದಿರೋ ‘ಹುಚ್ಚ ಖೋಡಿ’ ಅಂತ ಗ್ಯಾರಂಟಿ ಬಯ್ಯಿಸಿಕೋತಿರಿ. ಕೆಲವು ಮಂದಿ ಅಂತೂ ವಾಗತ್ಯ ಮಾಡಿಕೋತಾರ. ಹಂಗಂತ ಇದೇ ಸರಿ ಅಂತ ಅಲ್ರಿ. ಕೆಲವರಲ್ಲಿ ಉಪ್ಪಿಲ್ಲದೇ ಊಟ ಬಡಿಸುವಂತಿಲ್ಲ. ಇನ್ನ ಕೆಲವರಲ್ಲಿ ಮೊದಲು ಉಪ್ಪು ಹಾಕುವಂತಿಲ್ಲ. ಕೆಲವರಲ್ಲಿ ಪಾಯಸ- ಪರಮಾನ್ನದಿಂದ ಊಟ ಆರಂಭ ಆದ್ರ, ಇನ್ನ ಕೆಲವರಲ್ಲಿ ‘ಡೆಸರ್ಟ್’ಅಂತ ಊಟ ಆದಮ್ಯಾಲೆ ತಿಂತಾರ. ಕೆಲವೆಡೆ ಶುಭ ಸಂದರ್ಭಗಳಲ್ಲಿ ಮುದ್ದಿಪಲ್ಯ ನಿಷಿದ್ಧ. ಇನ್ನು ಕೆಲವೆಡೆ ಅದು ಕಂಪಲ್ಸರಿ ಇರಲೇಬೇಕು. ಕೆಲವರಿಗೆ ಭಕ್ರಿ-ಬದನೆಕಾಯಿ ಹಬ್ಬಹರಿದಿನಗಳಲ್ಲಿ ನಿಷಿದ್ಧ.  ಇನ್ನು ಕೆಲವರಲ್ಲಿ ಮದುವೆ ಊಟಕ್ಕೂ ಅವು ಬೇಕು. ಹೀಂಗ ದೇಶ-ಕಾಲ ಭೇದಗಳು ಭಾಳ ಇರತಾವ್ರಿ ಈ ಊಟದಾಗ.

ಈ ಬಾಳಿ ಎಲಿ ಊಟದ ಮಜಾನೇ ಬ್ಯಾರೆ ಇರತದ್ರಿ. ಮದುವಿ ಭೂಮದಾಗಂತೂ ಇಷ್ಟುದ್ದ ಏಕ ಎಲಿ ಮ್ಯಾಲೆ ಬಡಿಸಿದ ನಾನಾ ನಮೂನಿ ಸಂಡಿಗಿ-ಹಪ್ಪಳ-ಮಂಡಿಗೆಗಳು, ಶ್ಯಾವಿಗೆ-ಬಟವಿ ಪಾಯಸಗಳು, ಎಲೆ ಮುಂದೆ ಹಾಕಿದ ಬಣ್ಣಬಣ್ಣದ ಮನಸೆಳೆವ ರಂಗೋಲಿಗಳು, ಬೆಳಗುತ್ತಿರುವ ಸಮೆಗಳು… ನೋಡೂ ಹಂಗ ಇರತದ. ಆದ್ರ ಮಣೆ ಮ್ಯಾಲೆ ಕೂತು ಎಲೆ ತುದಿಯ ಖಾದ್ಯಗಳನ್ನೆಲ್ಲ ಬಗ್ಗಿ ಬಗ್ಗಿ ಹೆಕ್ಕಿ ತಿನ್ನೂದರಾಗ ದೊಡ್ಡ ಸರ್ಕಸ್ಸೇ ಆಗತದ. ಮೊನ್ನೆ ಇಲ್ಲೊಬ್ಬರ ಮನ್ಯಾಗ ವಾಸ್ತುಶಾಂತಿಗಂತ ಊಟಕ್ಕ ಕರದಿದ್ರು. ತಾಜಾ ಹಸರ ದೊಡ್ಡದೊಡ್ಡ ಬಾಳಿಎಲಿ ಮ್ಯಾಲೆ ಛಂದಾಗಿ ಬಡಸಿದ್ರು. ಆದ್ರ ಆ ಭಾರೀ ಜರದ ರೇಶ್ಮೆ ಸೀರೆ ಉಟಗೊಂಡು , ನಮ್ಮ ಗಜಗಾತ್ರದ ದೇಹ ಹೊತಗೊಂಡು , ಕೆಳಗ ನೆಲದ ಮ್ಯಾಲೆ ಕೂತು ಊಟಾ ಮಾಡೂದರಾಗ ‘ಊಟಾನೂ ಇಷ್ಟ ತ್ರಾಸಿಂದs’ ಅಂತ ಅನ್ನಿಸಿಬಿಡತರೀ. ಯಾಕಂದ್ರ ಕೋಸಂಬ್ರಿ, ಅಂಬೊಡೆ, ಮೈಸೂರ ಪಾಕು ಎಲ್ಲಾ ಮುಂದ ಹಾಕಿಬಿಟ್ಟಾರ್ರೀ. ಬಗ್ಗಬೇಕಂದ್ರ ನಮ್ಮ ಹೊಟ್ಟಿ ಅಡ್ಡ. ಕಡೀಕೆ ನಾ ಬಡಸಲಿಕ್ಕೆ ಬಂದವರಿಗೆ ಹೇಳೇಬಿಟ್ಟೆ. ’ಇಲ್ಲೇ ಇತ್ತತ್ತೇ ಹಾಕಿಬಿಡ್ರಿ. ಬಗ್ಗಲಿಕ್ಕೆ ಆಗಂಗಿಲ್ಲ’ ಅಂತ. ಅವರೂ ನನ್ನ ಮಾರಿ ನೋಡಿ ನಕ್ಕೋತ ಹಾಕಿ ಹೋದ್ರ ಬಿಡ್ರಿ. ಮತ್ತೇನ ಮಾಡೂದ್ರಿ? ಊಟದ ವಿಷಯ ನಾಚಿಕೊಂಡ ಕೂತರ ಹೆಂಗ ನಡೀತದ್ರೀ? 

ಈ ಬಾಳಿ ಎಲಿ ಆವಾಂತರ ಒಂದೊಂದ ಅಲ್ರೀ. ಒಂದ ಸಲ ಶಿರಸಿಗೆ ನನ್ನ ಗೆಳತಿ ಊರಿಗೆ ಹೋಗಿದ್ದೆ. ಅಕಿ ಎಲ್ಲೋ ತಮ್ಮ ನೆಂಟರ ಮನಿಗೆ ನಮ್ಮನ್ನ ಕರಕೊಂಡು ಹೋಗಿದ್ಲು. ಅವರು ನಾವು ಬಯಲುಸೀಮಿಯಿಂದ ಬಂದವರು, ತಮ್ಮೂರಿನ ಸ್ಪೆಷಲ್  ತಿನಸಬೇಕೆಂದು ತೋಟದಿಂದ ತಾಜಾ ಬಾಳಿ ಎಲಿ ಕತ್ತರಿಸಿಕೊಂಡು ಬಂದು ಮನೆಯ ತೋಟದ ರುಚಿರುಚಿಯಾದ ಘಮಗುಡುವ ಮಾವಿನಹಣ್ಣಿನ ಸೀಕರಣೆಯನ್ನು ಹಲಸಿನ ಹಪ್ಪಳದ ಜೋಡಿಗೆ ಅದರಾಗ ಬಡಿಸಿದರು. ನಾ ಕಕ್ಕಾಬಿಕ್ಕಿ. ಬಾಳಿಎಲ್ಯಾಗ ಸೀಕರಣಿ ಹೆಂಗ ತಿನ್ನೂದ್ರಿ?! ಅದು ಹರಕೊಂಡು ಹೊಂಟದ. ಕೈಯಾಗ ತಗೊಂಡು ನೆಕ್ಕಲಿಕ್ಕ ಹೋದ್ರ ಮೊಣಕೈತನಾ ಸೋರಿ ಸೀರಿ ಮ್ಯಾಲೆ ಬೀಳಲಿಕ್ಹತ್ತೇದ. ಅವರು ಆದರ ಮಾಡಿ ಬಲವಂತ ಮಾಡಿದರೂ ಹಾಕಿಸಿಕೊಳ್ಳಲಾರದಂಥ ಪರಿಸ್ಥಿತಿ. ಒಂದ ಬಟ್ಟಲದಾಗೋ, ದೊನ್ನ್ಯಾಗೋ ಹಾಕಿಕೊಡಬಾರದs ಅಂತ ಮನಸಿನಾಗ ಬಯ್ಯಕೋತ ಅಂಥ ರುಚಿಯಾದ ಸೀಕರಣೀನ್ನ ಸುಡ್ಲಿ ಈ ಬಾಳಿ ಎಲ್ಯಾಗ ಬಡಿಸಿದ್ರು ಅಂತ ತಿನ್ನಲಾರದ ಬಿಡೂದಾತು.

ಈ ಬಾಳಿ ಎಲಿ ಊಟೇನೋ ಛಂದ. ಆದ್ರ ಆಮ್ಯಾಲೇನರೇ ಎಂಜಲಾಗ್ವಾಮಾ ಮಾಡೂ ಪಾಳಿ ಬಂತೋ .. ಭಾರೀ ತ್ರಾಸರೀ. 

ಅಂತೂ ಊಟಾ ಮಾಡೂದು (ಅದೂ ಬಾಳೆ ಎಲಿದು)  ಆಟಾ ಆಡೂದರಷ್ಟ ಸರಳ ಅಲ್ಲಾ ಅನ್ನೂದು ನನ್ನ ಅಂಬೋಣ. ನೀವೇನಂತೀರಿ? 

ವಿ.ಸೂ. ಇನ್ನ ನನ್ನ ಕೊರೆತ ಮುಗದಿಲ್ಲಾ. ಈಗ ಒಂದೋ, ಎರಡೋ.. ಆಗೇದ. ಇನ್ನ ಮೂರೋ, ನಾಕೋ, ಐದೋ, ಆರೋ ಎಲ್ಲಾ ಬಾಕಿ ಅವ. ಮಾನಸಿಕವಾಗಿ ಸಿದ್ಧವಾಗಿರಿ ಕೊರೆಸಿಕೊಳ್ಳಲು..

ಮೂಲ ಕವಿಯ ಕ್ಷಮೆ ಯಾಚಿಸಿ..

ಒಂದೋ, ಎರಡೋ ..ಬಾಳೆಲೆ ಹರಡೋ

( ನೀರ ತಗೋರಿ..ಎರಡೆಳಿ ರಂಗೋಲಿ ಹಾಕ್ರಿ)

ಮೂರೋ, ನಾಕೋ ಅನ್ನವ ಹಾಕೋ

(ಚಟ್ನಿ,ಕೋಸಂಬ್ರಿ, ಪರಮಾನ್ನ??!!)

ಐದೋ, ಆರೋ ಬೇಳೆಯ ಸಾರೋ

(ತವ್ವಿ, ತುಪ್ಪ ತಗೋರಿ ಮದಲs)

ಏಳೋ, ಎಂಟೋ ಪಲ್ಯಕೆ ದಂಟೋ

(ಪಲ್ಯಾ ಮದಲs ಬರಬೇಕಿತ್ತಲ್ರೀ .)

ಒಂಬತ್ತೋ, ಹತ್ತೋ ಎಲೆ ಮುದುರೆತ್ತು

(ಸ್ವೀಟು, ಚಿತ್ರಾನ್ನ, ಮೊಸರನ್ನ ಎಲ್ರಿ?)

ಒಂದರಿಂದ ಹತ್ತು ಹೀಗಿತ್ತು..

(ಒಂದರಿಂದ ನೂರಿದ್ರೂ ನಡೀತಿತ್ರೀ..

ಯಾವುದೂ ಐಟಂ ಬಿಡಬಾರದಿತ್ರಿ)

ಊಟದ ಆಟವು ಮುಗಿದಿತ್ತು

(ಉಸಿರಿನ ಓಟವೂ  ನಿಂತಿತ್ತು..)

ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

ಶಿವಶಂಕರ ಮೇಟಿ

(ಚಿತ್ರ: ಗೂಗಲ್ ಕೃಪೆ)

ಸೆಪ್ಟೆಂಬರ್ ೧ ಕನ್ನಡದ  ಕಾದಂಬರಿಗಾರ್ತಿಯರ ಇತಿಹಾಸದಲ್ಲಿ ನೆನಪಿಡುವ ದಿನ . ಏನಿದರ ವಿಶೇಷತೆ ಎನ್ನುತ್ತೀರಾ ?

ಇದು ಕನ್ನಡದ  ಕಾದಂಬರಿ ಲೋಕ ಕಂಡ ಅಪರೂಪದ ಲೇಖಕಿ ತ್ರಿವೇಣಿಯವರ ಜನುಮ ದಿನ . ಬಾಲ್ಯದಿಂದಲೂ ನನಗೆ ಅವರ ಮೇಲಿರುವ ಅಪಾರ ಗೌರವದ ಋಣಿಯಾಗಿ,  ಇದೊಂದು ಸಣ್ಣ ಲೇಖನದ ಮೂಲಕ ಅವರಿಗೊಂದು ನಮನ .

ಕನ್ನಡದ ‘ಜೇನ್ ಆಸ್ಟಿನ್ ‘ ಎಂದೇ ಹೆಸರಾಗಿದ್ದ ತ್ರಿವೇಣಿಯವರು ಹುಟ್ಟಿದ್ದು ಸೆಪ್ಟೆಂಬರ್ ೧ , ೧೯೨೮ ರಲ್ಲಿ . ಮೈಸೂರಿನ ಚಾಮರಾಜಪುರದಲ್ಲಿ ಜನನ . ಭಾಗೀರಥಿ ಜನ್ಮನಾಮವಾದರೂ ‘ಅನಸೂಯಾ’ ಆಗಿ ಶಾಲೆಗೆ ಸೇರಿ, ‘ತ್ರಿವೇಣಿ ‘ಎಂಬ  ಲೇಖನಿ ಹೆಸರಿನಿಂದ ಕನ್ನಡ ಸಾಹಿತ್ಯಕ್ಕೆ ಚಿರ ಪರಿಚಿತರಾದವರು. ಸಾಹಿತ್ಯ ಸಂಸ್ಕೃತಿಯ ಮನೆಯ ವಾತಾವರಣದಲ್ಲಿ ಬೆಳೆದ ಅವರಿಗೆ ಬಾಲ್ಯದಿಂದಲೂ ಓದುವ ಹುಚ್ಚು ಸಹಜವಾಗಿತ್ತು ( ಬಿ ಎಂ ಶ್ರೀ  ಚಿಕ್ಕಪ್ಪ ಮತ್ತು ವಾಣಿ ಸೋದರ ಸಂಬಂಧಿ ). ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಂಗಾರದ ಪದಕದೊಂದಿಗೆ ಬಿ. ಎ ಮುಗಿಸಿದ  ಅವರಿಗೆ  ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದ ಬಗ್ಗೆ ತುಂಬ ಆಸಕ್ತಿ ಇತ್ತು. 

ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರೂ ಅಂತರಾಳದಲ್ಲಿ ಅಡಗಿದ್ದ ಸಾಹಿತ್ಯದ ಒಲವು ಅವರನ್ನು ಕಾದಂಬರಿ ಲೋಕಕ್ಕೆ ಕರೆದುಕೊಂಡು ಹೋಗಿತ್ತು. ಹೆಣ್ಣಿನ ಆಸೆಗಳಿಗೆ ಪುರುಷ ಪ್ರಧಾನವಾದ ಸಮಾಜದಲ್ಲಿ ಬೆಲೆಯೇ ಇಲ್ಲವೆಂದು ಪ್ರತಿಪಾದಿಸುವ ಅವರ ಮೊದಲು ಕಾದಂಬರಿ ‘ ಅಪಸ್ವರ ‘ ೧೯೫೩ ರಲ್ಲಿ ಪ್ರಕಟವಾಯಿತು. ಹೆಣ್ಣಿನ ಮಾನಸಿಕ ತುಮುಲ, ಶೋಷಣೆ, ಸಮಾಜದಲ್ಲಿ ಅವಳೆದಿರಿಸುವ ಸಮಸ್ಯೆಗಳು ಅವರ ಕಾದಂಬರಿಯ ಜೀವಾಳವಾಗಿದ್ದವು . ಮಾನಸಿಕ ರೋಗಿ ಗುಣಮುಖವಾದರೂ ಸಮಾಜ ಅವರನ್ನು ನೋಡುವ ಪರಿಯನ್ನು ‘ ಶರಪಂಜರದಲ್ಲಿ ‘ ಬಿಂಬಿಸಿದ್ದರೆ, ಯೌವ್ವನದ  ಹೊಳೆಯಲ್ಲಿ ಉಕ್ಕುವ ಕಾಮದಾಸೆ ಮತ್ತು ತಪ್ಪು ಪುರುಷನಿಗೆ ಮಾತ್ರ ಸೀಮಿತವಲ್ಲ ಹೆಣ್ಣಿಗೂ ಅನ್ವಯವಾಗುತ್ತದೆ  ಹಾಗು ಒಬ್ಬರನೊಬ್ಬರು  ಕ್ಷಮಿಸಿ ನಡೆದರೆ ಜೀವನ ಸಾರ್ಥಕವೆಂಬುವದನ್ನು ‘ಸೋತು ಗೆದ್ದವಳು’ ಎಂಬ ಕಾದಂಬರಿಯಲ್ಲಿ  ಚಿತ್ರಿಸಿದ್ದಾರೆ. ‘ಹಣ್ಣೆಲೆ ಚಿಗುರಿದಾಗ’ ದಲ್ಲಿ ವಿಧವಾ ವಿವಾಹದ ವಿಷಯವಿದ್ದರೆ ‘ಹೂವು ಹಣ್ಣು’ ನಲ್ಲಿ ಅಸಹಾಯಕ ಹೆಣ್ಣು ವೇಶ್ಯಾ ವೃತ್ತಿಯ  ಜಾಲದಲ್ಲಿ ಸಿಲುಕುವ ವ್ಯಥೆಯಿದೆ. ಅವರ ಒಂದೊಂದು ಕಾದಂಬರಿಗಳನ್ನು ವಿಮರ್ಶಿಸಲು ನೂರಾರು ಪುಟಗಳೇ ಬೇಕಾಗಬಹುದು . ಅವರು ಬರೆದ ೨೧ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ೨೧ ಮುತ್ತುಗಳು ಎಂದರೆ ತಪ್ಪಾಗಲಾರದು.

ಐವತ್ತರಿಂದ  ಅರವತ್ತರ ದಶಕದಲ್ಲಿ ಬರೆದ ಅವರ ಕಾದಂಬರಿಗಳು ಹಳೆಯದಾದರೂ , ಕಾದಂಬರಿಯ ಕಥೆಗಳಲ್ಲಿ ಇರುವ ವಿಚಾರಧಾರೆ ಮತ್ತು ಪಾತ್ರಗಳು ಇಂದಿನ ಆಧುನಿಕ ಸಮಾಜದಲ್ಲೂ ನವ್ಯವೆಂದು ಅನಿಸುತ್ತವೆ. ಅವರ ಹಲವಾರು ಕಾದಂಬರಿಗಳು ಬೇರೆ  ಭಾಷೆಗಳಲ್ಲಿ ಅನುವಾದಗೊಂಡಿವೆ. ಅವರ ಕಾದಂಬರಿಗಳು ಸಾಮಾನ್ಯ ಓದುಗರನ್ನು ಮಾತ್ರವಲ್ಲ ಪ್ರಸಿದ್ಧ ಚಿತ್ರ ನಿರ್ದೇಶಕರನ್ನು ಕೂಡಾ ಆಕರ್ಷಿಸಿದ್ದವು . ಇಪ್ಪತ್ತೊಂದರಲ್ಲಿ ಏಳು ಕಾದಂಬರಿಗಳು ಸುಪ್ರಸಿದ್ದ ಕನ್ನಡ ಚಿತ್ರಗಳಾಗಿ ಬೆಳ್ಳಿ ತೆರೆಯನ್ನು ಕಂಡಿವೆ. ಶರಪಂಜರ , ಬೆಕ್ಕಿನ ಕಣ್ಣು ಮತ್ತು ಬೆಳ್ಳಿಮೋಡ  ಚಿತ್ರಗಳನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರೆ , ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು, ಕಂಕಣ ಮತ್ತು ಮುಕ್ತಿ  ಬೇರೆ ಪ್ರಸಿದ್ಧ ನಿರ್ದೇಶಕರಿಂದ  ತೆರೆಯನ್ನು ಕಂಡಿವೆ.

ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು . ‘ಅವಳ ಮನೆ’ ಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದರೆ , ‘ಕಂಕಣ’ ದ ಕಥೆಗೆ ಕರ್ನಾಟಕ ಮೋಶನ್ ಪಿಕ್ಚರ್ ಪ್ರಶಸ್ತಿ ಬಂದಿತ್ತು . 

ಸಾಹಿತ್ಯ ಜೀವನದಲ್ಲಿ ಸವಿಯಿದ್ದರೂ ಅವರ ಸ್ವಂತ ಜೀವನದಲ್ಲಿ ನೋವಿನ ಅಲೆಯಿತ್ತು. ಮೆಚ್ಚಿ ಕೈ  ಹಿಡಿದ ಪ್ರೋತ್ಸಾಹಕ ಪತಿಯಿದ್ದರೂ (ಪ್ರೊಫೆಸ್ಸರ್ ಶಂಕರ್), ಹನ್ನೆರಡು ವರ್ಷದ ದಾಂಪತ್ಯ ಜೀವನದಲ್ಲಿ ಮಕ್ಕಳಾಗಲಿಲ್ಲ ಎಂಬ ಕೊರಗು ಸದಾ ಅವರನ್ನು ಕೊರೆಯುತಲಿತ್ತು . ಎರಡು ಸಲ ಗರ್ಭಪಾತವಾದಾಗ ಅವರು ಕುಸಿದು ಹೋಗಿದ್ದರು. ತಮ್ಮ ಮಾನಸಿಕ ವೇದನೆಯನ್ನು ‘ಅತಿಥಿ ಬರಲೇ ಇಲ್ಲ’ ಎಂಬ ಕಥೆಯಲ್ಲಿ ತೋಡಿಕೊಂಡಿದ್ದಾರೆ.

ಆದರೆ  ಕೊನೆಗೂ ಅತಿಥಿ ಬಂದಾಗ ವಿಧಿ ಅವರ ಅದೃಷ್ಟದ ಪುಟವನ್ನು ಬೇರೆ ರೀತಿಯಲ್ಲಿ ಬರೆದಿತ್ತು ಜುಲೈ ೧೯ , ೧೯೬೩ ರಲ್ಲಿ ಅವರು ಹೆಣ್ಣು ಮಗುವಿಗೆ  ಜನ್ಮವಿತ್ತಿದ್ದರು. ಹತ್ತು ದಿನಗಳ ನಂತರ ಪಲ್ಮನರಿ ಎಂಬೋಲಿಸಂ (ಶ್ವಾಸಕೋಶದಲ್ಲಿ ಸಿಲುಕಿದ ರಕ್ತದ ಹೆಪ್ಪು) ಗೆ ಬಲಿಯಾಗಿ  ಕೊನೆಯ ಉಸಿರನ್ನು ಎಳೆದರು . ಮೂವತ್ತೈದರ ಹರೆಯದಲ್ಲಿ ಇನ್ನೂ ಬಾಳಿ , ಬದುಕಿ ಹೆಮ್ಮರವಾಗಬೇಕಿದ್ದ ಪ್ರತಿಭೆಯ ಸಸಿ ಕಮರಿ ಹೋಯಿತು. ಕನ್ನಡದ  ಕಾದಂಬರಿ ಲೋಕ ಒಬ್ಬ ಮಹಾನ್  ಲೇಖಕಿಯನ್ನು ಕಳೆದುಕೊಂಡಿತು. ಅವರು ಇನ್ನು ಹೆಚ್ಚಿಗೆ ಬಾಳಿ  ಬದುಕಿದ್ದರೆ  ಅದೆಷ್ಟು ಪ್ರಸಿದ್ಧ ಕಾದಂಬರಿಗಳು  ಕನ್ನಡ ಸಾಹಿತ್ಯವನ್ನು ಸೇರುತ್ತಿದ್ದವೋ? ಇನ್ನೆಷ್ಟೋ ರಂಜಿತ ಚಲನ ಚಿತ್ರಗಳು ತೆರೆ ಕಾಣುತಿದ್ದವೋ ಎಂಬುದು ಕಲ್ಪನೆ ಮಾತ್ರ ಅವರು ಬದುಕಿರುವಾಗ ಅವರ ಯಾವುದೇ ಕಾದಂಬರಿಗಳು ಚಲನ ಚಿತ್ರಗಳಾಗಿರಲಿಲ್ಲ ಎಂಬುದು ವಿಷಾದನೀಯ .

ಅವರ ಮಗಳು  ಮೀರಾ ಶಂಕರ್ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ. ಚಾಮರಾಜಪುರದಲ್ಲಿ ಸುಮಾರು ಇನ್ನೂರು ವರ್ಷದಷ್ಟು ಹಳೆಯದಾದ ಅವರ ಮನೆಯನ್ನು ‘ತ್ರಿವೇಣಿ ಮ್ಯೂಸಿಯಂ’ ಆಗಿ ಪರಿವರ್ತಿಸಲಿದ್ದಾರೆ. ಮ್ಯೂಸಿಯಂನ ಜೊತೆಗೆ ಅವರ ಹೆಸರು ನವ ಪೀಳಿಗೆಗೆ ಗೊತ್ತಾಗಲಿ ಮತ್ತು ಅಮರವಾಗಿ ಉಳಿಯಲಿ ಎಂಬುವದು ನನ್ನ ಆಸೆ.

ತ್ರಿವೇಣಿಯವರು ಇಂದಿಗೂ ನನ್ನ ನೆಚ್ಚಿನ ಲೇಖಕಿ . ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ದೊರೆತ ಅವರ ಎರಡು ಕಾದಂಬರಿಗಳು ನನಗೆ ಕನ್ನಡ ಸಾಹಿತ್ಯ ಲೋಕಕ್ಕೆ ದಾರಿಯನ್ನು ತೋರಿಸಿದ್ದವು . ಪುಸ್ತಕಗಳನ್ನು ಓದುವ ಹುಮ್ಮಸ್ಸವನ್ನು ಹುಟ್ಟಿಸಿದ್ದವು. ಅವರ  ಉಳಿದ  ಕಾದಂಬರಿಗಳನ್ನು ಓದುವ ತವಕ ಮನಸಿನಲ್ಲಿ ಸದಾ ಇತ್ತು ಆದರೆ  ಅವಕಾಶ ಸಿಕ್ಕಿರಲಿಲ್ಲ . ಹೈಸ್ಕೂಲಿಗೆಂದು ಪಕ್ಕದ ಬೈಲಹೊಂಗಲಕ್ಕೆ ಸೇರಿದಾಗ ನಾನು ಮೊದಲು ಮಾಡಿದ ಕೆಲಸ ಗ್ರಂಥಾಲಯದ ಸದಸ್ಯನಾಗಿದ್ದು (ಸುಳ್ಳು ವಯಸ್ಸು ಹೇಳಿ ). ಅವರ  ಎಲ್ಲ  ಕಾದಂಬರಿಗಳು ಗ್ರಂಥಾಲಯದಲ್ಲಿ ಸಿಗದೇ ಇದ್ದರೂ ಸುಮಾರು ಪುಸ್ತಕಗಳು ಸಿಕ್ಕಿದ್ದು ಮನಸಿಗೆ ಖುಷಿ ತಂದಿತ್ತು. ತನ್ಮಯನಾಗಿ ಅವರ ಕಾದಂಬರಿಯನ್ನು ಓದುತ್ತಿದ್ದರೆ ನನಗೆ  ಆ ಕಥೆ ಎಲ್ಲೋ ನಮ್ನ ಪಕ್ಕದ ಮನೆಯಲ್ಲಿಯೇ ನಡೆದಿದೆ ಎಂದು ಅನಿಸುತಿತ್ತು. ಕಾದಂಬರಿಯ ಕಥೆ ಅಷ್ಟೊಂದು ಸರಳ  ಮತ್ತು ಸಹಜವಾಗಿರುತಿತ್ತು . 

ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಸೇರಿದಾಗ , ಅವರ ಉಳಿದ ಕಥೆಗಳನ್ನು ಓದಲು ಅವಕಾಶ  ಸಿಕ್ಕಿದ್ದು ನನ್ನ ಜೀವನದ ಸಂತೋಷದ ಘಟನೆಗಳಲ್ಲಿ ಒಂದು ಎಂದು ಹೇಳಬಲ್ಲೆ . ಅವರ ಎಲ್ಲಾ ಪುಸ್ತಕದ ಕಿಟ್ಟು ಇಂದಿಗೂ  ‘ಅಮೆಜಾನ್  ‘ ಮಾರುಕಟ್ಟೆಯಲ್ಲಿ ಐದು ಸ್ಟಾರ್ ರಿವ್ಯೂನೊಂದಿಗೆ ಮಾರಾಟವಾಗುತ್ತಿದೆ ಎಂಬುದು ಹೆಮ್ಮೆಯ ಸಂಗತಿ .