ಯುಗಾದಿ ಎಂದ ಕೂಡಲೇ ಮೊದಲಿಗೆ ನೆನೆಸುವುದು ‘ಬೇವು–ಬೆಲ್ಲ‘. ‘ಯುಗಾದಿ‘ ಕಾರ್ಯಕ್ರಮದ ಮುಖಾಂತರ ನಾನು ಬೇವು ಅನುಭವಿಸಿದೆ ಮತ್ತೆ ಬೆಲ್ಲವೂ ಕೂಡ! ಬೇವು ಅನುಭವಿಸಿದೆ ಎಂದಿದಕ್ಕೆ ಆಶ್ಚರ್ಯವೇ? ನಿಗೂಢತೆಯೇ? ನಿಲ್ಲಿರಿ! ಯಾವುದೇ ‘ಕಲ್ಪನೆಯ ಗೋಪುರ‘ವನ್ನು ಕಟ್ಟದಿರಿ. ವೇದಿಕೆಯ ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಾಗದಕ್ಕೆ ‘ಬೇಸರದ‘ ಬೇವು ತಿಂದು, ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ‘ಸೌಭಾಗ್ಯ‘ ನೂರೂಪಟ್ಟು ಅಧಿಕ ಬೆಲ್ಲದ ರುಚಿ ಸವಿದಂತಾಯಿತು.
‘ಅಭೀಪ್ಸಿತಾರ್ಥಂ ಸಿದ್ಧ್ಯರ್ಥಂ ಪೂಜಿತೋ ಯಃ ಸುರಾಸುರೈಃ | ಸರ್ವ ವಿಘ್ನ ಹರಸ್ತಸ್ಮೈ ಗಣಾಧಿಪತಯೇ ನಮಃ ||’ ಈ ಶ್ಲೋಕದಂತೆ, ಕಾರ್ಯಕ್ರಮವನ್ನುಯಶಸ್ವಿಗೊಳಿಸುವ ಆಕಾಂಕ್ಷೆಗಳನ್ನು ನೆರವೇರಿಸಲು ನಿರ್ವಿಘ್ನನನ್ನು ಆರಾಧಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಸುಸ್ವರ, ಸುಮಧುರ ಪ್ರಾರ್ಥನೆ ಗೀತೆಯು ಸಮಾರಂಭದ ಆರಂಭವನ್ನು ಶುಭವಾಗಿಸಿತು. ಸನ್ಮಾನ್ಯ ಅತಿಥಿಯರೆಲ್ಲ ದೀಪವನ್ನು ಬೆಳಗಿದಾಗ ನನಗೆ ‘ತಮಸೋಮಾ ಜ್ಯೋತಿರ್ಗಮಯ‘ ಶ್ಲೋಕದ ಹೊಸ ಅರ್ಥ ಕಂಡಿತು. ದೀಪ ಪ್ರಜ್ವಲನವು ‘ಯಾಂತ್ರಿಕ‘ ಬೆಳಕಿನಿಂದ ‘ಸಾತ್ವಿಕ‘ ಬೆಳಕಿನೆಡೆ ಸಾಗುವ ಅನುಭವ ನೀಡಿತು.
ಡಾ.ಗಿರಿಧರ ಹಂಪಾಪುರ ಅವರ ನಿರೂಪಣೆ ಮೂಲಕ ಕಾರ್ಯಕ್ರಮವು ಔಪಚಿರಿಕವಾಗಿ ಪ್ರಾರಂಭಗೊಂಡಿತು. ‘ಕನ್ನಡ ಬಳಗ‘ದ ಸನ್ಮಾನ್ಯ ಅಧ್ಯಕ್ಷರಾದ ಡಾ.ಗೌಡಗೆರೆ ಜಯರಾಮ ಅವರು ಸಭಿಕರನ್ನೆಲ್ಲ ಉದ್ದೇಶಿಸಿ ಮಾತನಾಡಿದರು. ನಮ್ಮನ್ನಗಲಿದ ಇಬ್ಬರು ‘ಕನ್ನಡ ಬಳಗ‘ದ ಸದಸ್ಯರು ಹಾಗೂ ನೇಪಾಳ ಮತ್ತು ಭಾರತದಲ್ಲಿ ಆದ ಭಯಂಕರ ಭೂಕಂಪದಲ್ಲಿ ಮೃತಪಟ್ಟವರ ಸ್ಮರಣಾರ್ಥ
ಪಾಲಿಸಿದ ಮೌನ, ಭೂಕಂಪ ಸಂತ್ರಸ್ತರಿಗೋಸ್ಕರ ಸಂಗ್ರಹಿಸಿದ ಚಂದಾ ಸಂಯೋಜಕರ ‘ಸಾಮಾಜಿಕ ಕಳಕಳಿ‘ಯನ್ನು ಎತ್ತಿ ತೋರಿಸಿದವು. ಎಲೆ ಮರೆಯ ಕಾಯಿಯಂತೆ ಮೂರು ದಶಕಗಳಿಗಿಂದ ಕನ್ನಡ ಬಳಗಕ್ಕೆ ಸೇವೆ ಸಲ್ಲಿಸಿದ ಡಾ.ರಾಜಾರಾಮ ಕಾವಳೆಯವರನ್ನು ಸನ್ಮಾನಿಸಿದ್ದು ಈ ಸಲದ ಕಾರ್ಯಕ್ರಮದ ವಿಶೇಷ. ಸಂಜಯನಂತೆ ನಿಷ್ಪಕ್ಷಪಾತರಾಗಿ, ಅನಾಮಿಕರಾಗಿಯೇ ಸಂಘದ ಸಕ್ರಿಯ ಸದಸ್ಯರಾಗಿದ್ದಲ್ಲದೇ, ತಂತ್ರಜ್ಞಾನ ಬದಲಾದಂತೆ, ಜಾಲ-ಜಗುಲಿಯ ನಿರ್ವಾಹಕರಾಗಿ ಮುಂಚೂಣಿ ವಹಿಸಿದ್ದನ್ನು ಸಭಿಕರಿಗೆ ಡಾ. ಶ್ರೀವತ್ಸ ದೇಸಾಯಿಯವರು ನೆನಪಿಸಿದರು. ‘ಸಾಧಿಸಲು ವಯಸ್ಸಲ್ಲ, ಛಲ ಮುಖ್ಯ‘ ಎಂದು ಸನ್ಮಾನ ಸ್ವೀಕರಿಸಿದ ಕಾವಳೆಯವರು ಒಂದೇ ಮಾತಿನಲ್ಲಿ ಸಮಯೋಚಿತವಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಡಾ.ಹಂಪಾಪುರವರು ಹೇಳಿದ ಹಾಗೆ ‘ಅವರಿಗೆ ಸನ್ಮಾನ ಎಂದರೆ ನಮ್ಮ ವೇದಿಕೆಗೆ / ಕನ್ನಡ ಬಳಗಕ್ಕೆ ಆದ ಸನ್ಮಾನ‘ ಶತಶಃ ಸತ್ಯವೆನಿಸಿತು.
ಶ್ರೀ. ಬಿ. ಆರ್. ಲಕ್ಷ್ಮಣ ರಾವ್ ಅವರ ಅರ್ಥಗರ್ಭಿತ ಕಾವ್ಯಗಳು, ಸುಮಧುರ ಗಾಯನ ಮನಸ್ಸಿಗೆ ತುಂಬಾ ಮುದ ನೀಡಿತು. ‘ಸುಬ್ಬಾ ಭಟ್ಟರ ಮಗಳೇ‘ ಹಾಡು,
ಪ್ರತಿಯೊಂದು ಹಾಡಿನ ಇತಿಹಾಸ, ದಿ. ಸಿ. ಅಶ್ವಥ್ ರ ನೆನಪುಗಳು, ಅವರಿಗೆ ಸಲ್ಲಿಸಿದ ಕೃತಜ್ಞತೆ, ಶ್ರೀ. ಬಿ. ಆರ್. ಲಕ್ಷ್ಮಣ ರಾವ್ ಅವರ ಸಹಜತೆಗೆ ಸಾಕ್ಷಿಯಾಗಿತ್ತು. ಶ್ರೀಮತಿ ಬಿ. ಜಯಶ್ರೀರವರು ವ್ಯಕ್ತಪಡಿಸಿದ ಮನೋಗತವು ಚಿಕ್ಕದಾಗಿ–ಚೊಕ್ಕದಾಗಿ ಹೃದಯಕ್ಕೆ ತುಂಬಾ ಹತ್ತಿರದಾಗಿತ್ತು. ರಂಗಗೀತೆಯ ರಸದೌತಣ, ಧ್ವನಿಯ ಉತ್ತುಂಗತೆ ಅವರ ಘನತೆಗೆ ಎತ್ತಿ ಹಿಡಿದ ಕನ್ನಡಿಯ ಪ್ರತೀಕವಾಗಿತ್ತು. ಪ್ರಖ್ಯಾತ ವ್ಯಕ್ತಿಯಾದರೂ ನಮ್ಮೆಲ್ಲರ ನಡುವೆ ಬೆರೆತಿರುವುದನ್ನು ನೋಡಿದಾಗ ‘ವೃಕ್ಷ ವಿಶಾಲವಾದರೂ, ಬೇರು ಭೂಮಿಯಲ್ಲಿ ಅಮರ‘ವೆಂಬಂತೆ ಅವರ ಸರಳತೆಯನ್ನು, ವಿನಯತೆಯನ್ನು ಸಾರಿ ಹೇಳುತಿತ್ತು.
ಚಿಣ್ಣರ ಕಾರ್ಯಕ್ರಮಗಳು, ತಬಲಾ–ವಾಯಲಿನ್ ಸಮಾಗಮವಾಗಿದ್ದ ಬಾಲಕಲಾವಿದರು ‘ಮೂಗಿನ ಮೇಲೆ ಬೊಟ್ಟಿಡುವಂತೆ‘ ಕಲೆಯ
ಪ್ರದರ್ಶನಗೈದರು. ಶ್ಲೋಕವಾಗಲಿ, ಭಾವಗೀತೆಯಾಗಲಿ, ಹಣ್ಣು ಮಾರುವವನಾಗಲಿ ಅಥವಾ ವಿಷಸರ್ಪದ ನೃತ್ಯವಾಗಿರಲಿ ಎಲ್ಲವೂ ಕೂಡ ‘ಪ್ರತಿಭೆಯ ದಾರದಲ್ಲಿ ಪೋಣಿಸಿದ ಸುಂದರ ಸಣ್ಣ ಮಣಿಗಳಂತಿದ್ದವು‘. ಈ ಮಣಿಗಳು ಮುಂದೆ ಮುತ್ತುಗಳಾಗಿ ಹೊರಹೊಮ್ಮಲಿ ಎಂಬುದು ನನ್ನ ಅಭಿಲಾಷೆ ಹಾಗೂ ಶುಭ ಹಾರೈಕೆ. ಸುಗಮ ಸಂಗೀತ, ಚಲನಚಿತ್ರ ಗೀತೆಗಳು, ‘ಪುಣ್ಯಕೋಟಿ‘ ನಾಟಕ ಕಾರ್ಯಕ್ರಮದ ರೂಪುರೇಷೆಯಲ್ಲಿ ತನ್ನ ವಿಶೇಷ ಛಾಪನ್ನು ಮೂಡಿಸಿದವು.
‘ಕಾವ್ಯ ಅನುಸಂಧಾನ‘ ಕಾರ್ಯಕ್ರಮ ಸಾಹಿತ್ಯಾಸಕ್ತರನ್ನು ಒಟ್ಟಿಗೆ ಸೇರಿಸಿದ ಒಂದು ವೇದಿಕೆ ಎಂದರೆ ಅತಿಶಯೋಕ್ತಿ ಆಗಲಾರದು. ಡಾ.ಶ್ರೀವತ್ಸ ದೇಸಾಯಿ ಹಾಗೂ ಡಾ.ಶಿವಪ್ರಸಾದರವರು ಇದರ ಹಿಂದೆ ಪಟ್ಟ ಶ್ರಮ ಸಾರ್ಥಕವಾಯಿತೆಂದು ನನ್ನ ಅನಿಸಿಕೆ.
ಡಾ.ಮಮತಾ ಸಾಗರ ಅವರ ಕಾವ್ಯ ವಿಮರ್ಶನೆ, ಪ್ರವಾಹದವಿರುದ್ಧವಾಗಿ ಯೋಚಿಸಿ ಕಾವ್ಯ ಬರೆಯುವ ಕಲ್ಪನೆ ನವ ಕವಿಗಳಿಗೊಂದು ವಿಭಿನ್ನ ದೃಷ್ಟಿಯನ್ನುನೀಡಿತು. ಈ ಜಾಲ ಜಗುಲಿಯ ಆಶ್ರಯದಲ್ಲಿ ನಡೆದ ಕವಿ ಗೋಷ್ಟಿಯ ವಿಶೇಷ ವರದಿ ಬರುವ ವಾರ ಪ್ರಕಟಿಸಲಿದ್ದೇವೆ.
ಇಡೀ ಕಾರ್ಯಕ್ರಮದ ಬಗ್ಗೆ ಹೇಳಿ ಭೋಜನದ ಬಗ್ಗೆ ಹೇಳದಿದ್ದರೆ, ಸುಂದರ ಯುವತಿಯನ್ನು ಮೈತುಂಬ ಶೃಂಗರಿಸಿ ಕುಂಕುಮ ಇಡಲು ಮರೆತಂತೆ ಎಂದರೆ ತಪ್ಪಾಗಲಾರದು. ಅಚ್ಚುಕಟ್ಟಾದ ಸಂಯೋಜನೆ, ಯಶಸ್ಸಿಗೋಸ್ಕರ ಪಟ್ಟ ಸಂಯೋಜಕರ ಹಾಗೂ ಸ್ವಯಂ–ಸೇವಕರ ಶ್ರಮ ಅರಸನಿಗೆ ಮುಕುಟವಿಟ್ಟಂತಿತ್ತು.
-ಸುಹಾಸ್ ಪುರುಷೋತ್ತಮ ಕರ್ವೆ
