ಮೋನಲೀಸಾ 
(ಕಲಾಭಿಮಾನಿಯ ಸ್ವಗತ) 

ಫೋಟೋ ಕೃಪೆ ಗೂಗಲ್

೧೬ನೇ ಶತಮಾನದಲ್ಲಿ  ಪ್ರಖ್ಯಾತ ಚಿಂತಕ, ವಿಜ್ಞಾನಿ, ಕಲೆಗಾರ ಲಿಯೋನಾರ್ಡೊ ಡಾವಿಂಚಿ ರಚಿಸಿದ ಅದ್ಭುತ ಅದ್ವಿತೀಯ ವರ್ಣಚಿತ್ರ"ಮೋನಲೀಸ" ಈ ವರ್ಣಚಿತ್ರವನ್ನು ಡಾವಿಂಚಿ ಉತ್ತರ ಇಟಲಿಯಲ್ಲಿ ಸೃಷ್ಟಿಸಿದ್ದು ನಂತರ ಅದನ್ನು ಫ್ರಾನ್ಸ್ ದೇಶ ಪಡೆದುಕೊಂಡು ನೂರಾರು ವರುಷಗಳಿಂದ ಅದು ಪ್ಯಾರಿಸ್ಸಿನ ಲುವ್ರ ಅರಮನೆ ಎಂಬ ಮ್ಯೂಸಿಯಂನಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಇದು ಕಲಾ ಪ್ರಪಂಚದಲ್ಲಿ ಅತ್ಯಂತ ಬೆಲೆಯುಳ್ಳ ಕಲಾಕೃತಿಯಾಗಿದೆ. ಈ ಚಿತ್ರದಲ್ಲಿ ಮೋನಾಲೀಸಳಾ ಒಂದು ಕಿರು ನಗೆ (Half smile) ವಿಶೇಷವಾದದ್ದು ಮತ್ತು ಯಾವ ದಿಕ್ಕಿನಿಂದ ನೋಡಿದರೂ ಮೋನಲೀಸಾ ನೋಡುಗರ ಕಡೆ ಕಣ್ಣು ಹಾಯಿಸುವಂತೆ ಭಾಸವಾಗುತ್ತದೆ. ಅವಳ ಈ ನಿಗೂಢ ಚಹರೆಯನ್ನು ಹಲವಾರು ತಜ್ಞರು ವಿಶ್ಲೇಷಿಸಿ ಪಾಂಡಿತ್ಯಪೂರ್ಣ ಅಭಿಪ್ರಾಯವನ್ನು ಒದಗಿಸಿದ್ದಾರೆ. ನಾನು ಹಲವಾರು ಬಾರಿ ಪ್ಯಾರಿಸ್ಸಿನ ಲುವ್ರ್ ಮ್ಯೂಸಿಯಂಗೆ ತೆರಳಿ ಮೋನಲೀಸಾ ಕಲಾಕೃತಿಯನ್ನು ವೀಕ್ಷಿಸಿದ್ದೇನೆ. ನಾನು ಭಾವನಾತ್ಮಕ ನೆಲೆಯಲ್ಲಿ ಈ ಚಿತ್ರವನ್ನು ವಿಶ್ಲೇಷಿಸಿ ನನ್ನ ಕೆಲವು ಅನಿಸಿಕೆಗಳನ್ನು ಒಂದು ಸ್ವಗತ ಕಾವ್ಯ ರೂಪದಲ್ಲಿ ವ್ಯಕ್ತಪಡಿಸಿದ್ದೇನೆ.ಮೋನಲೀಸಾ ನಮ್ಮ- ನಿಮ್ಮ ನಡುವಿನ ಸ್ತ್ರೀಯಾಗಿ, ರೂಪಕವಾಗಿ ನನ್ನ ಆಲೋಚನೆಗಳನ್ನು ಕೆದಕಿದ್ದಾಳೆ. ದಯವಿಟ್ಟು ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಮೋನಲೀಸಾ (ಕಲಾಭಿಮಾನಿಯ ಸ್ವಗತ) 

ಡಾ. ಜಿ. ಎಸ್. ಶಿವಪ್ರಸಾದ್


ಖುಷಿಯಾಗಿ ಮನಬಿಚ್ಚಿ ನಗಲೇಕೆ? 
ಈ ಹುಸಿ ನಗೆಯೇಕೆ? ನಗಲೂ ಚೌಕಾಶಿಯೇ, 
ಭಾವನೆಗಳಿಗೂ ಕಡಿವಾಣವೇ? 
ಮೊಗ್ಗು ಹೂವಾಗಿ ಅರಳಿದಾಗ
ಚೆಲುವಲ್ಲವೇ
? ಹೇಳು ಮೋನಲೀಸಾ 

ನಿನ್ನ ಈ ಮಾರ್ಮಿಕ ಚಹರೆ 
ಅದೆಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ 
ಕಲಾವಿದರು, ಪಂಡಿತರು, ಸಾಮಾನ್ಯರು  
ನಿನ್ನ ನಿಲುವನ್ನು ವಿಮರ್ಶಿಸಿದ್ದಾರೆ 
ಉತ್ತರ ನಿನಗಷ್ಟೇ ಗೊತ್ತು  

ನೂರಾರು ವರ್ಷಗಳು ಪ್ಯಾರಿಸ್ಸಿನ 
ಅರಮನೆಯಂಬ ಸೆರೆಮನೆಯಲ್ಲಿ 
ಕೂತು, ಎಲ್ಲರ ಕಣ್ಣಲ್ಲಿ ಕಣ್ಣಿಟ್ಟು 
ಒಂದೇ ಸಮನೆ ನಕ್ಕು ಸಾಕಾಯಿತೇ 
ಮೋನಲೀಸಾ ?

ಶತಮಾನಗಳ ಹಳೆ ನೆನಪುಗಳೆ?
ಒಂಟಿತನದ ಬೇಸರವೇ, ವಿರಹದ ನೋವೇ?
ತವರಿನ ತುಡಿತವೇ? ನಿನ್ನನ್ನು ಹೀಗೆ 
ಚಿತ್ರಿಸಿದ ಡಾವಿಂಚಿಯ ಮೇಲೆ ಕೋಪವೇ? 

ಫ್ರೆಂಚ್ ಕ್ರಾಂತಿಯಲ್ಲಿ ಮುಗ್ಧರ ಬಲಿದಾನ,
ಕರೋನ ಮಹಾಮಾರಿ, ಭಯೋತ್ಪಾದನೆ 
ಇವಲ್ಲೆವನ್ನು ಕಂಡೂ ನಿಸ್ಸಹಾಯಕಳಾಗಿ 
ಕುಳಿತ್ತಿದ್ದೇನೆ ಎಂಬ ಅಪರಾಧ ಪ್ರಜ್ಞೆಯೇ?

ನಿನ್ನನ್ನು ಖುಷಿಯಾಗಿಸಲು  
ನಾನೇನು ಮಾಡಬೇಕು ಹೇಳು?
ಚಾರ್ಲಿ ಚಾಪ್ಲಿನ್ ಸಿನಿಮಾ ತೋರಿಸಲೇ 
ನನ್ನ ಒಂದೆರಡು ಹನಿಗವನಗಳನ್ನು ಓದಲೇ? 

ಇಲ್ಲ ...
ಐಫಿಲ್ ಟವರ್ ತೋರಿಸಲೇ? 
ಶ್ಯಾಂಪೇನ್  ಕುಡಿಸಲೇ? 
ಏನಾದರೂ ಹೇಳು ಮೋನಲೀಸಾ 
ಬೇಡ ಈ ವಿಲಕ್ಷಣ ಮೌನ 

ಓಹ್, ಚಿತ್ರದ ಚೌಕಟ್ಟಿನಿಂದ 
ಹೊರಬರುವ ತವಕವೇ ಮೋನಲೀಸಾ 
ಬೇಡ ಬೇಡ, ನೀನು ಅಲ್ಲೇ ಸುರಕ್ಷಿತವಾಗಿರು 
ಶ್ರೀಮಂತರು ನಿನ್ನನ್ನು ಹರಾಜು ಹಾಕಿಬಿಡುತ್ತಾರೆ 
ಕಳ್ಳರು ನಿನ್ನನು ಮಾರಿಕೊಳ್ಳುತ್ತಾರೆ 

ಪ್ಯಾರಿಸ್ಸಿನ ಫ್ಯಾಷನ್ ಡಿಸೈನರ್ಗಳು 
ನಿನ್ನನ್ನು ಉಪವಾಸ ಕೆಡವಿ, 
ಮೈಭಾರವಿಳಿಸಿ, ಅರೆ ನಗ್ನ ಗೊಳಿಸಿ 
ಕ್ಯಾಟ್ ವಾಕ್ ವೇದಿಕೆಯ ಮೇಲೆ 
ಮೆರವಣಿಗೆ ಮಾಡುತ್ತಾರೆ! 

ಪ್ರಪಂಚ ಬದಲಾಗಿದೆ ಮೋನಲೀಸಾ 
ಹೊರಗೆ ಕಾಲಿಟ್ಟ ಕೂಡಲೇ 
ನಿನ್ನ ಬಣ್ಣ, ಅಂದ, ಚೆಂದ, ಮೈಕಟ್ಟು 
ಸಂಪತ್ತು, ಜಾತಿ, ಧರ್ಮ ಇವುಗಳನ್ನು 
ಮುಂದಿಟ್ಟು ಅಳೆಯುತ್ತಾರೆ 

ಸಮಾಜ ಹಾಕಿರುವ ಫ್ರೆಮಿನೊಳಗೆ 
ಎಲ್ಲ ಸ್ತ್ರೀಯರು ಇರುವಂತೆ, ನೀನೂ
ಫ್ರೆಮಿನೊಳಗೇ ಇರಬೇಕೆಂಬುದು ಎಲ್ಲರ ನಿರೀಕ್ಷೆ 
ಸ್ತ್ರೀವಾದ, ಸ್ತ್ರೀ ಸ್ವಾತಂತ್ರ್ಯ ಉಳಿದಿರುವುದು 
ವಿಚಾರವಂತರ ಭಾಷಣಗಳಲ್ಲಷ್ಟೇ

ಹರುಷವಿರಲಿ ದುಃಖವಿರಲಿ ಹಾಕಿಕೋ 
ನಿನ್ನ ನಸು ನಗೆಯ ಮುಖವಾಡ 
ನಾವು ಹಣ ತೆತ್ತು ಬರುವುದು 
ನಿನ್ನ ಕಿರುನಗೆಯನ್ನು ನೋಡಲಷ್ಟೇ 
ನಿನ್ನ ಕಷ್ಟ ಇಷ್ಟಗಳು ಇರಲಿ ನಿನ್ನೊಳಗೇ  

ಸೆಲ್ಫಿಗಳ ಸುರಿಮಳೆಯು ನಿಂತಮೇಲೆ  
ಕಲಾಭಿಮಾನಿಗಳು ನಿರ್ಗಮಿಸಿದ ಮೇಲೆ 
ಮ್ಯೂಸಿಯಂ ಬಾಗಿಲುಗಳು ಮುಚ್ಚಿದ ಮೇಲೆ 
ಒಬ್ಬಳೇ ಏಕಾಂತದಲ್ಲಿ ಅಳುವುದು 
ಇದ್ದೇ ಇದೆ ಮೋನಲೀಸಾ 

***