ಸಾಕ್ಷಾತ್ಕಾರ (ಭಾಗ-೨) – ಶಿವಶಂಕರ ಮೇಟಿ
ಈ ವಾರ ಡಬಲ್ ಧಮಾಕಾ. ವತ್ಸಲಾ ಅವರು ತಾವು ಓದಿದ ಪುಸ್ತಕದ ಪರಿಚಯ ಹಾಗೂ ತಮ್ಮ ಅನಿಸಿಕೆಗಳನ್ನು ತಮ್ಮ ಮುಂದಿಟ್ಟಿದ್ದಾರೆ. ಕಳೆದ ವಾರ ಜಿ.ಎಸ್. ಜಯದೇವ ಅವರು ಸೋಲಿಗರ ಜೊತೆ ಕಳೆದ ದಿನಗಳು, ದೀನಬಂಧು ಸಂಸ್ಥೆ ಹುಟ್ಟಿ ಬೆಳೆದ ಕಥೆಯನ್ನು ಹೃದಯಂಗಮವಾಗಿ ಆಹ್ವಾನಿತರೊಂದಿಗೆ ಹಂಚಿಕೊಂಡರು. ಅವರು ದೀನಬಂಧು ಸಂಸ್ಥೆಯನ್ನು ಕಟ್ಟುವ ಮೊದಲು ಸೋಲಿಗರ ಜೀವನವನ್ನು ಅಧ್ಯಯಿಸಿ, ಅವರ ಒಳಿತಿಗಾಗಿ ಡಾ.ಸುದರ್ಶನ್ ಅವರೊಡನೆ ಪಟ್ಟ ಶ್ರಮದ ಅನುಭವವೇ ವತ್ಸಲಾ ಅವರು ಪರಿಚಯಿಸುತ್ತಿರುವ ಪುಸ್ತಕದ ವಸ್ತು. ಅನಿವಾಸಿಯ ಓದುಗರೆಲ್ಲ ಕಾತುರದಿಂದ ಕಾಯುತ್ತಿರುವ ಮೇಟಿಯವರ "ಸಾಕ್ಷತ್ಕಾರ" ಕಥೆಯ ಕೊನೆಯ ಕಂತು ನಿಮ್ಮೆದುರು ಅನಾವರಣವಾಗುತ್ತಿದೆ. ರಾಯರು ಎಲ್ಲಿ ಹೋದರು, ಸಿಕ್ಕಿದರೇ, ರಾಯರ ಮಗನ ಪ್ರತಿಕ್ರಿಯೆಯೇನು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತೆ? ಪುಸ್ತಕ: ಸೋಲಿಗರ ಚಿತ್ರಗಳು. ಲೇಖಕರು: ಜಿ. ಎಸ್. ಜಯದೇವ. ಲೇಖಕರ ಪರಿಚಯ ನಾನು ಮಾಡಿಕೊಡಬೇಕಾಗಿಲ್ಲ. ಈಗಾಗಲೆ ಅವರೇ ಬರೆದ ಲೇಖನದಿಂದ ಅನಿವಾಸಿ ಬಳಗಕ್ಕೆ ಪರಿಚಯವಾಗಿದ್ದಾರೆ. “ಸೋಲಿಗರ ಚಿತ್ರಗಳು” ಪುಸ್ತಕವನ್ನು ದಯವಿಟ್ಟು ಓದಿ. ನಾನು ಓದಿರುವ ಪುಸ್ತಕಗಳಲ್ಲಿ ಒಂದು ಅತ್ಯುತ್ತಮ ಪುಸ್ತಕವೆಂದೇ ಹೇಳುವೆ. ಇತ್ತೀಚೆಗೆ ನಾನು ಈ ಪುಸ್ತಕವನ್ನು ಆಸಕ್ತಿಯಿಂದ ಓದಿದೆ. ಸೋಲಿಗರ ಜೀವನವೃತ್ತಾಂತ ಮತ್ತು ಅವರ ಪರಿಸರದೊಂದಿಗೆ ನಿಕಟ ಬಾಂಧವ್ಯ, ಬದುಕನ್ನು ಎದುರುಸುವ ಚಾಣಾಕ್ಷತೆ, ಮನೊಭಾವಗಳು ಅವರನ್ನು ಕಾಡುವ ನಾನಾ ತರಹದ ಜೀವನದ ಘಟನೆಗಳು, ಎಲ್ಲವನ್ನು ನಿಭಾಯಿಸುವ ಅವರ ಜನಾಂಗದ ನಿರಂತರ ಹೋರಾಟ, ಎಲ್ಲವನ್ನು ವ್ಯಕ್ತಿಚಿತ್ರದೊಡನೆ ವಿವರಿಸಿದ್ದಾರೆ. ಇದರೊಳಗೆ ೧೯ ವ್ಯಕ್ತಿಚಿತ್ರಗಳು ಇವೆ. ಪ್ರತಿಯೊಂದು ಪ್ರಕರಣದಲ್ಲೂ ಒಬ್ಬ ವ್ಯಕ್ತಿಯ ಜೀವನಚಿತ್ರ. ವಿಶಿಷ್ಟವಾದ ವ್ಯಕ್ತಿಚಿತ್ರವನ್ನು ಕಣ್ಣಮುಂದೆ ಕಟ್ಟಿದಂತೆ ವಿವರಿಸಿದ್ದಾರೆ. ಅದರೊಳಗೆ ನನಗೆ champion in their own way ಅನ್ನಿಸಿದವರು – ಬೆರೆಸಿ ೧. ಮಸಣಮ್ಮ ಬಿಚ್ಚಿಟ್ಟ ಮಹಾರಾಜರ ನೆನೆಪುಗಳು. ಮೈಸೂರು ಮಹಾರಾಜರು ಬೇಟೆಗೆ ಬರುತ್ತಿದ್ದ ಕತೆ. ಮಸಣಮ್ಮನ ಗಂಡ ಮಹಾರಾಜರಿಗೆ ಅಡುಗೆ ಮಾಡಿ ಬಡಿಸುತ್ತಿದ್ದ. ಮಹಾರಾಜರು “ಕಾಡಿಗೆ ಬೇಟೆಗೆ ಪ್ರಾಣಿ ಹಿಂಸೆ ಮಾಡಲು ಬರುತ್ತಿರಲ್ಲಿಲ್ಲ ಸಾರ್. ಅವರು ಕಾಡೆಮ್ಮೆ, ಜಿಂಕೆ , ಆನೆಗಳನ್ನು ನೋಡಲು ಬರುತ್ತಿದ್ದರು. ಪ್ರಕೃತಿ ಸೌಂದರ್ಯ ಆನಂದಿಸಲು ಬರುತ್ತಿದ್ದರು. ಅವರು ಪ್ರಾಣೆಹಿಂಸೆ ಮಾಡಲ್ಲಿಲ್ಲ ಸಾರ್”. ಮಹಾರಾಜರಿಗೆ ಪರಿಸರದ ಬಗ್ಗೆಯಿದ್ದ ಕಳಕಳಿಯನ್ನು ಹೊಗಳಿದ್ದಾಳೆ ಸುಮಾರು ೮೫ರ ಮುದಿಕಿ. ಅವಳ ಮನಸ್ಸು೧೯೫೦ರಲ್ಲೆ ನಿಂತಿದೆ. ಅವಳಿಗೆ ಮಹಾರಾಜರನ್ನು ಕಂಡರೆ ಇರುವ ಅಪಾರ ಗೌರವ, ವಾತ್ಯಲ್ಯವನ್ನು ಬಹಳ ಲಘು ಹಾಸ್ಯ ಬೆರೆಸಿ ಓದುಗರ ಮನಮುಟ್ಟುವಂತೆ ವರ್ಣಿಸಿದ್ದಾರೆ. ಮಹಾರಾಜರಿಗಾಗಿ ಸೋಲಿಗರ ರಂಗಣ್ಣ ಮಾಡಿದ ತಿಳಿಸಾರಿನ ಕತೆ ಓದಲೇಬೇಕು. ಪ್ರೊ. ಜಯದೇವ ಅವರ ಭಾಷೆ ತುಂಬ ಸುಲಲಿತವಾಗಿ, ಸರಳವಾಗಿ, ಅನುಕಂಪದಿಂದ ಕೂಡಿದೆ. ೨. ಸಾರಿ ಮಾದಮ್ಮ ಅವಳು ಒಬ್ಬ ಅಮಾಯಕ “ಕಾಡು ಸೋಲಿಗ ಹೆಂಗಸು”. ಅವಳಿಗೆ ಈಗಿನ ವೈದ್ಯರು ಮತ್ತು ಆಧುನಿಕ ಪದ್ಧತಿಯಲ್ಲಿ ನಂಬಿಕೆಯಿಲ್ಲ. ಅವಳು ಎಂತಹ ಅಮಾಯಕಳು ಅಂದ್ರೆ ತನ್ನ ಮನಸ್ಸಿಗೆ ಬಂದದ್ದನ್ನು ಪಟಪಟನೆ ಮುಲಾಜಿಲ್ಲದೆ ಹೇಳಿಬಿಡುತ್ತಿದ್ದಳು. ಯಾರಿಗೂ ಸೊಪ್ಪು ಹಾಕುವವಳಲ್ಲ. ಅವಳು ಅಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದು, ಗಂಟೆ ನೋಡಲು ಬರದಿದ್ದರೂ ಕೈಗಡಿಯಾರ ಕೊಂಡಿದ್ದು, ಸಂಬಳವೆಂದರೆ ಏನು ಅಂತ ಗೊತ್ತಿರದವಳು, ಅದೂ ಈ ಕಾಲದಲ್ಲಿ! ಅವಳು ಬಸ್ಸಿನಲ್ಲಿ ಮಾಡಿದ ಮೈಸೂರು ಝೂ ಯಾತ್ರೆ, ಅವಳ ಹಾಸ್ಯಮಯ ಮಾತು, ಜೋರಾದ ವ್ಯಕ್ತಿತ್ವ ಮತ್ತು ಆತ್ಮಸ್ಥೈರ್ಯವನ್ನು ಮನೋಹರವಾಗಿ ವಿವರಿಸಿದ್ದಾರೆ. ೩. ಪುಟ್ಟರಂಗನ ಸಸ್ಯರಂಗ. ಮೊದಲನೆಯ ಪುಟದಲ್ಲಿ ನಮ್ಮ ಪುಟ್ಟರಂಗನ ಪರಿಚಯ ಹೀಗಿದೆ - “ಕಾಡಿನಲ್ಲಿ ಯಾವ ಮರವನ್ನಾದರೂ ತೋರಿಸಿ, ಅವನು ಆ ಮರದ ಜಾತಕವನ್ನು ಹೇಳಿಬಿಡುತ್ತಾನೆ”. ಸೋಲಿಗರು ಹೇಳುವ ಹೆಸರು, ನಗರದ ಜನರಿಗೆ ಗೊತ್ತಿರುವ ಹೆಸರು, ಅವುಗಳ ವೈಜ್ಞಾನಿಕ ಹೆಸರು, ಯಾವ ಕುಟುಂಬಕ್ಕೆ ಸೇರಿದೆ ಮತ್ತು ಅದನ್ನೇ ಹೋಲುವ ಮರಗಳು ಎಲ್ಲ ವಿವರವನ್ನೂ ಸಾಂಗೋಪಾಂಗವಾಗಿ ಒಪ್ಪಿಸಿ ಬಿಡುತ್ತಾನೆ. ಹಾಗೆ ನೋಡಿದರೆ ಅವನಿಗೆ ಯಾವ ಸಸ್ಯಶಾಸ್ತ್ರದ ಪದವಿಯೂ ಇಲ್ಲ. ಸಂಶೋಧಕರು ಮರ, ಗಿಡಗಳನ್ನು ಗುರುತಿಸಲು ಇವನ ಸಹಾಯ ಕೇಳುತ್ತಾರೆ. ಅವನಿಗೆ ಅಗಾಧವಾದ ನೆನಪಿನ ಶಕ್ತಿಯಿದೆ. ಸಸ್ಯಶಾಸ್ತ್ರದ ಪ್ರವೀಣ. ಅವನಿಗೆ ಪರಿಸರದ ಬಗ್ಗೆ ತುಂಬಾ ಕಳಕಳಿ. ಇತ್ತೀಚಿಗೆ ಕಾಡು ಕಡಿತದಿಂದ ಕಾಡುಪ್ರಾಣಿಗಳ ಮತ್ತು ಕಾಡಿನ ಸಸ್ಯಗಳ ಮೇಲೆ ಆಗುತ್ತಿರುವ ವ್ಯತಿರಿಕ್ತ ಪ್ರಭಾವದ ಬಗ್ಗೆ ಬೇಸರ ಪಟ್ಟುಕೊಂಡಿದ್ದಾನೆ. ಪುಟ್ಟರಂಗನ ಕಳವಳದ ಮೂಲಕ ಲೇಖಕರು ನಾಗರೀಕರು ಪ್ರಕೃತಿಯನ್ನು ಆರಾಧಿಸುವ ಬದಲು ನಮ್ಮ ಮನಸ್ಸಿಗೆ ಬಂದಹಾಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ ಅನ್ನುವ ಭಾವನೆ ಹೇಳುತ್ತಿದ್ದಾರೆ. (ನನ್ನ ಅನಿಸಿಕೆ) ಹೀಗೆ ನಾನಾ ಪಾತ್ರಗಳ ಮೂಲಕ ಬುಡಕಟ್ಟಿನ ಜನಾಂಗದ ಮತ್ತು ಪರಿಸರದ ಮೇಲೆ ಆಗುತ್ತಿರುವ ಪರಿಣಾಮ; ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಪರಿಸರಗಳ ನಾಶದ ಬಗೆಗಿನ ನಾಗರೀಕರ ಉದಾಸೀನತೆಗಳನ್ನು ಬಿತ್ತರಿಸಿದ್ದಾರೆ. ಕಡೆಯದಾಗಿ, ಸಾಮಾನ್ಯವಾಗಿ ಸೋಲಿಗರು ಸ್ವಾತಂತ್ರ್ಯಪ್ರಿಯರು; ಮತ್ತೊಬ್ಬರನ್ನು ಸರಿ-ತಪ್ಪು ತಕ್ಕಡಿಯಲ್ಲಿ ತೂಗುವುದಿಲ್ಲ. ಅವರ ಜೀವನದ ನದಿ ಕೊನೆಯಿಲ್ಲದ ಈ ಕಾಲಪ್ರವಾಹದಲ್ಲಿ ಹರಿಯುತ್ತಿದೆ. ಹರಿಯುವ ನದಿಗೆ ದೋಷವಿಲ್ಲವಂತೆ. - ವತ್ಸಲಾ ರಾಮಮೂರ್ತಿ
ಸಾಕ್ಷಾತ್ಕಾರ (ಭಾಗ-೨)
ಛತ್ರಿಯು ಮಾಯವಾಗಿತ್ತು, ಮೂಲೆಯಲ್ಲಿ ಇದ್ದ ಚಪ್ಪಲಿಗಳು ಮಾತ್ರ ಹಾಗೆಯೇ ಬಿದ್ದಿದ್ದವು. ಬರಿಗಾಲಿನಲ್ಲೆಯೇ ಮನೆಯನ್ನು ಬಿಟ್ಟಿದ್ದರು ರಾಯರು. ಫೋನು ಮಾಡಿದರೆ ರಾಯರಿಂದ ಉತ್ತರವೇ ಇಲ್ಲ .
ಎಂದಾದರು ಬೇರೆ ಊರಿಗೆ ಹೋಗಬೇಕಾದರೆ ತನಗೊಂದು ಮಾತು ತಿಳಿಸಿಯೇ ಹೋಗುತ್ತಿದ್ದವರು, ಇಂದೇಕೆ ಹೀಗೆ ಮಾಡಿರಬಹುದು? ಎಂದು ಚಿಂತಿಸತೊಡಗಿದ. ಗುಬ್ಬಿಯ ಗೂಡನ್ನೊಮ್ಮೆ ನೋಡಬೇಕೆನಿಸಿ ತೋಟದೊಳಗೆ ಹೋದ. ಮುದಿ ಗುಬ್ಬಿ ತನ್ನನ್ನೇ ದಿಟ್ಟಿಸಿ ನೋಡುತ್ತಿರುವಂತೆ, ರಾಯರು ಕುಳಿತಿರುತ್ತಿದ್ದ ಕುರ್ಚಿ ಅವರ ಬರುವಿಕೆಗಾಗಿ ಕಾಯುತ್ತಿರುವಂತೆ ಅನಿಸಿತು. ‘ಗುಬ್ಬಿಯು ಹಾರಿಹೋಗುವದಕಿಂತ ಮೊದಲು, ರಾಯರೇ ಹಾರಿಹೋದರಲ್ಲ’ ಎಂದು ಬೇಜಾರಾಯಿತು. ಮನೆಯ ಒಳಗೆ ಬಂದು ಇನ್ನೊಮ್ಮೆ ರಾಯರಿಗೆ ಫೋನು ಮಾಡಿದ. ಸೂಕ್ಷ್ಮವಾಗಿ ಆಲಿಸಿದಾಗ ಮೊಬೈಲ್ ಫೋನಿನ ಸಪ್ಪಳ ಅವರ ಕೋಣೆಯೊಳಗಿಂದಲೇ ಬರತೊಡಗಿತ್ತು. ‘ಅಯ್ಯೋ ಪಾಪ! ಫೋನನ್ನು ಕೂಡ ಇಲ್ಲೇ ಮರೆತು ಹೋಗಿದ್ದಾರಲ್ಲ, ಮೊದಲು ಸಲ ಫೋನು ಮಾಡಿದಾಗ ನನಗೇಕೆ ಕೇಳಲಿಲ್ಲ?‘ ಎಂದು ಅವರ ಕೋಣೆಯ ಬಾಗಿಲನ್ನು ತೆರೆದ. ರಾಯರು ಓದಲು ಬರೆಯಲು ಉಪಯೋಗಿಸುತ್ತಿದ್ದ ಸಣ್ಣ ಟೇಬಲ್ಲಿನ ಮೇಲೆ ಅವರ ಮೊಬೈಲ್ ಫೋನು ಗುಯ್ಯ್ ಗುಡುತಿತ್ತು. ಪಕ್ಕದಲ್ಲಿಯೇ ಒಂದಿಷ್ಟು ನೋಟಿನ ಕಂತೆಗಳು ಮತ್ತು ಅವುಗಳ ಕೆಳಗೊಂದು ಸಣ್ಣ ಚೀಟಿ ಕಾಣಿಸಿಕೊಂಡಿತು. ಆತುರದಿಂದ ಚೀಟಿಯನ್ನು ಕೈಗೆತ್ತಿಕೊಂಡ ಸೋಮಣ್ಣ.
‘ ನನ್ನನ್ನು ಹುಡುಕುವ ಪ್ರಯತ್ನ ಬೇಡ. ಮನದ ಇಚ್ಛೆಯಂತೆ ವಾರಣಾಸಿಯ ಮುಕ್ತಿ ಭವನಕ್ಕೆ ಹೊರಟಿದ್ದೇನೆ. ಮರಳಿ ಬರುತ್ತೀನೋ ಇಲ್ಲೋ ಗೊತ್ತಿಲ್ಲ. ನಿನಗೆ ಅವಶ್ಯಕತೆ ಬೀಳುವಷ್ಟು ಹಣವನ್ನು ಇಟ್ಟಿರುವೆ, ಮುಗಿದಾಗ ರಾಘುನ್ನ ಕೇಳು. ಅವನಂತೂ ಈ ದೇಶಕ್ಕೆ ವಾಪಸ್ಸು ಬರುದಿಲ್ಲ, ಇದ್ದ ಆಸ್ತಿಯನ್ನು ನೀನಿರುವವರೆಗೆ ನೋಡಿಕೊಂಡು ಹೋಗು’ ಎಂದು ಮೂರ್ನಾಲ್ಕು ಸಾಲುಗಳನ್ನು ಚೀಟಿಯಲ್ಲಿ ಗೀಚಿದ್ದರು ರಾಯರು.
ಚೀಟಿಯನ್ನು ಓದಿ ಸೋಮಣ್ಣನಿಗೆ ಆತಂಕ ಮತ್ತು ದುಃಖವಾಯಿತು. ಆಗಲೇ ರಾತ್ರಿ ಅವರಿಸತೊಡಗಿತ್ತು. ತನಗೊಬ್ಬನಿಗೇ ಏನು ಮಾಡಲೂ ಧೈರ್ಯವಿಲ್ಲ. ಇನ್ನೊಬ್ಬರ ಜೊತೆ ಬೇಕೆನಿಸಿತು. ಹತ್ತಿರದಲ್ಲಿ ಇದ್ದ ರಾಯರ ರಕ್ತ ಸಂಬಂಧಿಗಳೆಂದರೆ ಅಣ್ಣನ ಮಗ ವೆಂಕಟೇಶ ಮತ್ತು ತಂಗಿ ಸಾವಿತ್ರಮ್ಮ. ಅವರಿಬ್ಬರ ಒಡನಾಟ ರಾಯರ ಜೊತೆಗೆ ಅಷ್ಟಕ್ಕಷ್ಟೆ ಎಂದು ಸೋಮಣ್ಣನಿಗೆ ಅರಿವಿತ್ತು. ಮುಂದೇನಾದರೂ ಮಾಡಲು ತನಗೆ ಜೊತೆಯಾಗಬಹುದೆಂದು ಅವರಿಬ್ಬರಿಗೂ ಕರೆ ಮಾಡಿದಾಗ, ನಿರೀಕ್ಷೆಯಂತೆ ಕುಂಟು ನೆಪ ಮತ್ತು ಕುಹಕದ ಮಾತುಗಳು ಕೇಳಿಬಂದಿದ್ದವು. ‘ಬರಿ ಸಹಾಯಕ್ಕೆ ಮಾತ್ರ ಸಂಬಂಧಗಳೇ?’ ಎಂದು ಸೋಮಣ್ಣನಿಗೆ ಬೇಜಾರಾಯಿತು. ಅನಿವಾರ್ಯ ಇಲ್ಲದೆ ರಾಘುನಿಗೆ ಕರೆ ಮಾಡಬೇಕೆಂದುಕೊಂಡ. ಎರಡು ಮೂರು ಕರೆಗಳಿಗೂ ಅವನಿಂದ ಉತ್ತರ ಬರದೇ ಇದ್ದಾಗ ಇನ್ನೂ ಬೇಜಾರವಾಯಿತು. ಯಾವಾಗಲೂ ಜೀವನವನ್ನು ಪ್ರೀತಿಸುತ್ತಿದ್ದ ರಾಯರು ಈ ನಿರ್ಧಾರಕ್ಕೆ ಏಕೆ ಬಂದಿರಬಹುದು? ಜಿಗುಪ್ಸೆಯೇ? ಮಗನ ಮೇಲಿನ ಸಿಟ್ಟೇ? ಮಾನಸಿಕ ಕಾಯಿಲೆಯ ಪ್ರಭಾವವೇ? ಉತ್ತರ ಸಿಗಲಿಲ್ಲ. ಕಟ್ಟು ನಿಟ್ಟಿನ ಕಟ್ಟಳೆಗಳಲ್ಲಿ ಬರೆದಿದ್ದ ರಾಯರ ಜೀವನದ ಕಾದಂಬರಿಯ ಪುಟಗಳೆಲ್ಲ ಖಾಲಿ ಖಾಲಿ ಎಂದೆನಿಸಿತು.
ಅಷ್ಟರಲ್ಲಿಯೇ ಅವನ ಫೋನು ಗುಯ್ಯ ಗುಡತೊಡಗಿತು. “ಸೋಮಣ್ಣ, ಆಸ್ಪತ್ರೆಲಿದ್ದೆ ಅದಕ ನಿನ್ನ ಫೋನ್ ಎತ್ತಾಕ್ ಆಗಲಿಲ್ಲ. ಎಲ್ಲಾ ಆರಾಮ್ ಐತಿ ಅಲ್ಲ? ” ಅಂದ ರಾಘಪ್ಪ. ಸೋಮಣ್ಣನಿಗೆ ಇದನ್ನೆಲ್ಲ ಹೇಗೆ ಹೇಳಬೇಕೆಂದು ತಕ್ಷಣವೇ ಹೊಳೆಯಲಿಲ್ಲವಾದರೂ, ” ರಾಘಪ್ಪ , ರಾಯರು ಹೇಳದ ಕೇಳದ ನಾಪತ್ತೆ ಆಗಿ ಬಿಟ್ಟಾರ. ಏನೇನೋ ಚೀಟಿ ಬರೆದಿಟ್ಟ ಹೋಗ್ಯಾರ. ಎಲ್ಲಾ ಓದಿದರ ಅವರು ವಾರಣಾಸಿಗೆ ಹೋಗಿರಬೇಕೆಂದ ಅನಸತೈತಿ, ಅದರಲ್ಲೂ ಅದೇನೋ ಮುಕ್ತಿ ಭವನ ಅಂತ “ ಎಂದು ಒಂದೇ ಉಸುರಿನಲ್ಲಿ ಒದರಿ ಬಿಟ್ಟ. ಸುದ್ದಿಯನ್ನು ಕೇಳಿ ರಾಘುನಿಗೆ ಆಕಾಶವೇ ಕಳಚಿದಂತಾಯಿತು. ಸಾವಿರಾರು ಮೈಲು ದೂರದಲ್ಲಿರುವ ತಾನು ಈಗ ಏನು ಮಾಡಬಹುದೆಂದು ಯೋಚಿಸತೊಡಗಿದ. ಏನೋ ಉಪಾಯ ಹೊಳೆದಂತಾಯಿತು. ” ಸೋಮಣ್ಣ, ಬೆಂಗಳೂರಿನಲ್ಲಿ ನನ್ನೊಬ್ಬ ಖಾಸಾ ಗೆಳೆಯ ಡಾ. ರವಿ ಅದಾನ. ನೀನು ಬೆಂಗಳೂರಿಗೆ ಬಂದು ಬಿಡು, ಅವನು ನಿನ್ನನ್ನ ವಾರಣಾಸಿ ರೈಲಿಗೆ ಹತ್ತಸತಾನ. ನಾನೂ ನಾಳೇನೇ ಇಲ್ಲಿಂದ ಬಿಡತೀನಿ, ನಿನ್ನನ್ನ ವಾರಣಾಸಿ ರೈಲ್ ನಿಲ್ದಾಣದಾಗ ಭೇಟಿ ಆಗ್ತೀನಿ” ಎಂದು ಫೋನು ಇಟ್ಟು ಮುಂದಿನ ತಯಾರಿ ನಡೆಸಿದ.
ಸೋಮಣ್ಣನನ್ನು ಹೊತ್ತ ರೈಲು ವಾರಣಾಸಿಯನ್ನು ತಲುಪಿದಾಗ ಬೆಳಗಿನ ಎಂಟು ಗಂಟೆಯಾಗಿತ್ತು. ಬೋಗಿಯ ಎದುರೇ ನಿಂತಿದ್ದ ರಾಘುನನ್ನು ಕಂಡು ಸೋಮಣ್ಣನ ಮನಸಿಗೆ ಹಗುರು ಎನಿಸಿತು. ರೈಲು ನಿಲ್ದಾಣದಲ್ಲಿ ಏರಿದ ಟ್ಯಾಕ್ಸಿಯು, ಸುಮಾರು ಹದಿನೈದು ನಿಮಿಷಗಳಲ್ಲಿ ಅವರಿಬ್ಬರನ್ನು ಎರಡು ಅಂತಸ್ತಿನ ಹಳೆಯ ಮನೆಯ ಮುಂದೆ ಬಂದು ತಲುಪಿಸಿತ್ತು. ಟ್ಯಾಕ್ಸಿಯವನಿಗೆ ದುಡ್ಡು ಕೊಟ್ಟು ರಾಘು ಹೇಳಿದ ” ಸೋಮಣ್ಣ! ಇದೇ ಮುಕ್ತಿ ಭವನ ” ಎಂದು. ಒಳಗಡೆ ಹೋದಾಗ ಟೇಬಲ್ಲಿನ ಮುಂದೆ ಕುಳಿತಿದ್ದ ಇಳಿ ವಯಸ್ಸಿನ ಮನುಷ್ಯ ಹಿಂದಿ ಭಾಷೆಯಲ್ಲಿ ಮಾತನಾಡತೊಡಗಿದ
” ನನ್ನ ಹೆಸರು ಶುಕ್ಲಾ, ಈ ಭವನದ ಮ್ಯಾನೇಜರು. ತಮಗೇನು ಆಗ ಬೇಕಾಗಿದೆ ?”
ರಾಯರ ಫೋಟೋ ತೋರಿಸಿ ರಾಘು ಹೇಳಿದ, ” ಇವರು ನಮ್ಮ ತಂದೆ. ಹೆಸರು ರಘೋತ್ತಮ ರಾವ್ ಅಂತ , ವಯಸು ಎಪ್ಪತ್ತು. ಈ ಭವನವನ್ನು ಸೇರಬೇಕೆಂಬ ಇಚ್ಛೆಯಿಂದ ಬೆಂಗಳೂರಿನಿಂದ ಬಂದಿದ್ದಾರೆ. ಅವರನ್ನು ಭೇಟಿಯಾಗಬೇಕಿತ್ತು ” ಎಂದು ಮಾತು ಮುಗಿಸಿದ.
” ನಮ್ಮಲ್ಲಿ ಇರುವುದು ಕೇವಲ ಹನ್ನೆರಡು ಕೋಣೆಗಳು ಆದರೆ ಈ ಹೆಸರಿನವರು ಯಾರೂ ಅವುಗಳಲ್ಲಿ ಇಲ್ಲ. ಆದರೆ ನಿನ್ನೆ ಬೆಳಿಗ್ಗೆ ಇದೇ ತರಹದ ವ್ಯಕ್ತಿಯೊಬ್ಬರು ಬಂದಿದ್ದರು, ನಮ್ಮ ಭವನದ ನಿಯಮಗಳಿಗೆ ಅರ್ಹರಿರಲಿಲ್ಲವಾದ್ದರಿಂದ ಅವರಿಗೆ ಕೋಣೆಯನ್ನು ಕೊಡಲಾಗಲಿಲ್ಲ. ಪಕ್ಕದಲ್ಲಿ ಇರುವ ಮುಮುಕ್ಷು ಭವನಕ್ಕೆ ಹೋಗಿ ಎಂದು ಹೇಳಿದೆ ” ಎಂತಂದ.
ಭವನದ ನಿಯಮಗಳು ಏನಿರಬಹುದೆಂದು ರಾಘು ಯೋಚಿಸುತ್ತಿರುವಾಗಲೇ ಶುಕ್ಲಾ ಮಾತು ಮುಂದುವರೆಸಿದ್ದ. ” ಭವನದಲ್ಲಿ ಇರಲು ಕೇವಲ ಎರಡೇ ವಾರ ಅವಕಾಶ. ಅಷ್ಟರಲ್ಲಿಯೇ ಅವರು ಜೀವ ತೊರೆದು ಮುಕ್ತಿ ಹೊಂದಬೇಕು, ಇಲ್ಲವಾದರೆ ಮರಳಿ ಮನೆಗೆ ಹೋಗಬೇಕು. ಪ್ರತಿ ದಿನದ ಬಾಡಿಗೆ ಇಪ್ಪತ್ತು ರೂಪಾಯಿ ಮಾತ್ರ —–” ಎಂದು ಇನ್ನೂ ಮಾತನ್ನು ಮುಂದುವರೆಸಿದ್ದ. ಕೌತುಕದಿಂದ ಅವನ ಮಾತುಗಳನ್ನೇ ಆಲಿಸುತ್ತಿದ್ದ ಸೋಮಣ್ಣನಿಗೆ ಭವನದ ಒಳಗಡೆ ನೋಡಬೇಕು ಎಂಬ ಕುತೂಹಲ ಉಂಟಾಗಿ ಅವನನ್ನು ಕೇಳಿದ, ” ನಾವು ಭವನದ ಒಳಗಡೆ ಒಮ್ಮೆ ಸುತ್ತಾಡಬಹುದೆ ?” ” ಏನೂ ತೊಂದರೆಯಿಲ್ಲ ” ಎಂದು ಶುಕ್ಲಾ ಅವರನ್ನು ಒಳಗಡೆ ಕರೆದುಕೊಂಡು ಹೋದ. ಭವನದ ಮಧ್ಯದಲ್ಲಿ ಒಂದು ಸಣ್ಣ ದೇವಸ್ಥಾನವಿತ್ತು. ಬೆಳಗುತ್ತಿದ್ದ ಆರತಿಯ ಜೊತೆಗೆ ಜೋರಾಗಿ ಘಂಟೆ ಬಾರಿಸುತಲಿತ್ತು. ಅಷ್ಟೇ ಜೋರಾಗಿ ಅರ್ಚಕನು ಮಂತ್ರವನ್ನು ಪಠಿಸುತ್ತಿದ್ದನು. ತೆರೆದಿದ್ದ ಬಾಗಿಲಿನ ಕೋಣೆಗಳಿಂದ, ಕೊನೆಯ ಉಸುರಿನಲ್ಲಿ ಮುಕ್ತಿಯನ್ನು ಕಾಣುವ ಸಲುವಾಗಿ ಕಾಯುತಲಿದ್ದ ಜೀವಿಗಳು, ಸಣಕಲು ಕಣ್ಣುಗಳಿಂದ ಪೂಜೆಯನ್ನು ವೀಕ್ಷಿಸುತಲಿದ್ದವು. ಇನ್ನೊಬ್ಬ ಅರ್ಚಕನು ಆ ಜೀವಿಗಳ ಬಾಯಲ್ಲಿ ಗಂಗಾ ಜಲವನ್ನು ಸುರಿದು ಬಿಲಪತ್ರಿಯನ್ನು ತಿನ್ನುಸಿತಲಿದ್ದನು. ಕೆಳಗಿನ ಕೋಣೆಯಲ್ಲಿ ಇಹಲೋಕ ತೊರೆದಿದ್ದ ದೇಹವೊಂದಕ್ಕೆ ಅಂತಿಮ ಸಂಸ್ಕಾರದ ಸಿದ್ಧತೆಗಳು ನಡೆದಿದ್ದವು. ಮೃತ ದೇಹದ ಜೊತೆಗಿದ್ದ ಸಂಬಂಧಿಯೊಬ್ಬ, ಹೊರಬರಲು ಹಾತೊರೆಯುತ್ತಿದ್ದ ಕಣ್ಣೀರನ್ನು ತಡೆದು, ಕೊನೆಗೂ ದೇಹಕ್ಕೆ ಮುಕ್ತಿ ಸಿಕ್ಕಿತಲ್ಲ ಎಂಬ ನೆಮ್ಮದಿಯ ಉಸಿರನ್ನು ಹಾಕಲು ಪ್ರಯತ್ನಿಸುತ್ತಿದ್ದನು. ಶುಕ್ಲಾ ಇನ್ನೂ ಏನನ್ನೋ ಹೇಳುತ್ತಲೇ ಇದ್ದನು ಆದರೆ, ಬಾಯಿ ತೆರೆದು ವಿಚಿತ್ರ ದೃಷ್ಟಿಯಿಂದ ಇದನ್ನೆಲ್ಲಾ ನೋಡುತ್ತಿದ್ದ ಸೋಮಣ್ಣ ಮತ್ತು ರಾಘುವಿಗೆ ಅವನ ಮಾತಿನ ಕಡೆಗೆ ಲಕ್ಷ್ಯ ಇರಲಿಲ್ಲ. ಕೊನೆಗೂ ಮೌನ ಮುರಿದು ಸೋಮಣ್ಣ ಕೇಳಿದ, ” ರಾಘಪ್ಪ ಇವರಿಗೆಲ್ಲ ಮುಕ್ತಿ ಸಿಗತೈತಾ ?” ” ನನಗೇನು ಗೊತ್ತು? ಅವರವರ ನಂಬಿಕೆ, ಅದರ ವಿರುದ್ಧವಾಗಿ ಮಾತಾಡೋಕೆ ನಾವ್ಯಾರು?” ಎಂದ ರಾಘು. ಶುಕ್ಲಾನಿಗೆ ಧನ್ಯವಾದವನ್ನು ಹೇಳಿ ಇಬ್ಬರೂ ಮುಮುಕ್ಷು ಭವನದತ್ತ ನಡೆದರು.
ಇಕ್ಕಟ್ಟಾದ ಬೀದಿಗಳೆಲ್ಲ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ಅಲ್ಲಲ್ಲಿ ಹೂವಿನ ಅಂಗಡಿಗಳು, ಶಿವನಾಮ ಜಪಿಸುತ್ತ ಸಾಗುತ್ತಿದ್ದ ಸಾಧುಗಳು, ಶಿವ ಸ್ತೋತ್ರ ಹಾಡುತ್ತಿದ್ದ ಧ್ವನಿವರ್ಧಕಗಳು ಮತ್ತು ಇದನ್ನೆಲ್ಲಾ ತುಂಬು ಕಣ್ಣುಗಳಿಂದ ಸವಿಯುತ್ತಿದ್ದ ಸಾವಿರಾರು ಯಾತ್ರಿಕರು. ಮುಕ್ತಿ ಭವನದಿಂದ ಹೊರ ಬಂದ ಸೋಮಣ್ಣನಿಗೆ ಇದೊಂದು ಬೇರೆ ಲೋಕವೆ ಅನಿಸಿತು. ಈ ಜನ ಜಂಗುಳಿಯಲ್ಲಿ ರಾಯರೂ ಕೂಡ ಒಬ್ಬರಿರಬಹುದೆ ? ಎಂದು ಇಬ್ಬರ ಕಣ್ಣುಗಳು ಹದ್ದಿನಂತೆ ವೀಕ್ಷಿಸುತ್ತಿದ್ದವು. ಅರ್ಧ ಗಂಟೆಯ ನಡುಗೆಯ ನಂತರ ಮುಮುಕ್ಷು ಭವನಕ್ಕೆ ಬಂದು ಸೇರಿದ್ದರು.
ಅದೊಂದು ವಿಶಾಲವಾದ ಕಟ್ಟಡ, ಬಾಗಿಲ ಬಳಿಯಲ್ಲಿಯೇ ಸ್ವಾಗತಕಾರನೊಬ್ಬ ಕುಳಿತ್ತಿದ್ದನು. ರಾಘು ರಾಯರ ಫೋಟೋ ತೋರಿಸಿ ವಿವರಗಳನ್ನು ಕೊಟ್ಟಾಗ ಅವನು ರಜಿಸ್ಟ್ರಿ ಪುಸ್ತಕವನ್ನು ಹುಡುಕಿ, ” ಹೌದು ನಿನ್ನೆ ಮಧ್ಯಾಹ್ನ ೨೦೦ ನಂಬರಿನ ಕೋಣೆಯನ್ನು ತೆಗೆದುಕೊಂಡಿದ್ದಾರೆ. ಆದರೆ ಬೆಳಿಗ್ಗೆ ಬೀಗವನ್ನು ಕೊಟ್ಟು ಎಲ್ಲೋ ಹೋಗಿದ್ದಾರೆ ಆಮೇಲೆ ಬರಬಹುದು” ಎಂದ. ಅವರಿಬ್ಬರಿಗೂ ಅತೀವ ಸಂತೋಷವಾಯಿತು ಆದರೆ ಹೋದವರು ಮರಳಿ ಬರದಿದ್ದರೆ ಏನು ಗತಿ ? ಎಂಬ ಭಯದಲ್ಲಿ, ತಮ್ಮ ಶೋಧನೆಯನ್ನು ಮುಂದುವರೆಸುವದೇ ಒಳ್ಳೆಯದೆನಿಸಿ, ಗಂಗೆಯ ತಟದೆಡೆ ಸಾಗಿದರು.
ಗಂಗಾ ಮಾತೆಯು ಶಾಂತವಾಗಿ ಹರಿಯುತ್ತಿದ್ದಳು. ಆದರೆ ದಡದ ತುಂಬೆಲ್ಲ ಜನರೇ ಜನರು. ರಾಯರು ಇಲ್ಲೇ ಎಲ್ಲಾದರೂ ಸಿಗಬಹುದೆಂಬ ಆಸೆಯಿಂದ ಸಾಗುತ್ತಿದ್ದ ಅವರು ಕೆಲವೇ ನಿಮಿಷಗಳಲ್ಲಿ ಮಣಿಕರ್ಣಿಕಾ ಮಹಾ ಸ್ಮಶಾನವನ್ನು ತಲುಪಿದ್ದರು. ಅದೊಂದು ಸಾವಿನ ಸಂತೆ ಎನಿಸಿತು. ಸಾಲು ಸಾಲುಗಳಲ್ಲಿ ಮೃತದೇಹಗಳು ಉರಿಯುತ್ತಿದ್ದವು. ಚಿತೆಗಳಿಂದ ಉಕ್ಕುತ್ತಿದ್ದ ಅಗ್ನಿಯು ಆಕಾಶವನ್ನೇ ನುಂಗಲು ಹೊರಟಿದೆ ಎಂದು ಭಾಸವಾಗುತ್ತಿತ್ತು. ತಲೆಬುರುಡೆಗಳನ್ನೇ ಹಾರವನ್ನಾಗಿ ಕೊರಳಲ್ಲಿ ಹಾಕಿಕೊಂಡು, ತುಂಡು ಬಟ್ಟೆಯ ಲಂಗೋಟಿಯನ್ನು ಸುತ್ತಿಕೊಂಡು, ಸುಟ್ಟು ಹೋದ ಹೆಣದ ಬೂದಿಯನ್ನು ಮೈ ತುಂಬಾ ಭಸ್ಮದಂತೆ ಬಡಿದುಕೊಂಡು, ಸಾವಿನಲ್ಲೂ ಸಂತೋಷದ ಕೇಕೆಯನ್ನು ಹಾಕುತಲಿದ್ದರು ಅಘೋರಿಗಳು. ಇಂಥ ಕಂಡರಿಯದ ದೃಶ್ಯವನ್ನು ನೋಡಲು ಜನರು ಗುಂಪು ಗುಂಪಾಗಿ ಸೇರಿದ್ದರು ತಾವೂ ಒಂದು ದಿನ ಈ ಅಘೋರಿಗಳ ಮೈಮೇಲಿನ ಭಸ್ಮವಾಗಬಹುದು ಎಂಬುವದನ್ನು ಮರೆತು. ಸೋಮಣ್ಣನಂತೂ ಮೂಕ ಶಿಲೆಯಾಗಿ ನಿಂತು ಬಿಟ್ಟಿದ್ದನು. ರಾಘು ವಾಸ್ತವಕ್ಕೆ ಬಂದು ಸೋಮಣ್ಣನನ್ನು ಎಚ್ಚರಿಸಿದ “ಸೋಮಣ್ಣ! ಗುಂಪಿನಲ್ಲಿ ಅಪ್ಪಾ ಏನಾದರು ಕಂಡ್ರ ?” ಮಾತು ಬರದೆ ಸೋಮಣ್ಣ ಇಲ್ಲವೆಂದು ತಲೆಯಾಡಿಸಿದನು. ಇಷ್ಟು ವಿಶಾಲವಾದ ಜನ ಸಾಗರದಲ್ಲಿ ರಾಯರನ್ನು ಹೇಗೆ ಹುಡುಕುವದು ಎಂಬ ಪ್ರಶ್ನೆ ಇದ್ದರೂ, ಎದೆಗುಂದದೆ ಮತ್ತೆ ಮುಂದೆ ಸಾಗಿದರು. ಅನತಿ ದೂರದಲ್ಲಿ ಛತ್ರಿ ಹಿಡಿದು ಕುಳಿತಿದ್ದ ವ್ಯಕ್ತಿಯೊಬ್ಬ ಕಾಣಿಸಿದ. ಸೋಮಣ್ಣ ಹಿಗ್ಗಿನ ಬುಗ್ಗೆಯಲ್ಲಿ ಚೀರತೊಡಗಿದ ” ಸಿಕ್ಕರು , ರಾಯರು ಸಿಕ್ಕರು ” ಎಂದು.
ಶಾಂತವಾಗಿ ಗಂಗಾ ಮಾತೆಯ ಮಡಿಲನ್ನು ವೀಕ್ಷಿಸುತ್ತ ಕುಳಿತಿದ್ದರು ರಾಯರು. ಇವರನ್ನು ಕಂಡು ” ಅರೆ! ನೀವು ಯಾವಾಗ ಬಂದ್ರಿ? ನೀವೂ ಬರುವಂಗ ಇದ್ದಿದ್ದರ ಎಲ್ಲಾರೂ ಒಟ್ಟಿಗೇನೇ ಬರಬಹುದಾಗಿತ್ತಲ್ಲಾ” ಅಂತ ಅಂದರು. ಇವರಿಗೇನು ಹೇಳುವುದು ಎಂಬುವದು ಅರಿಯದೆ ಸೋಮಣ್ಣನೆಂದ “ರಾಯರೇ, ನೀವು ಇಲ್ಲಿಗೆ ಬರೂದನ್ನ ನಮಗ ಹೇಳಿದರ ತಾನೇ?” ಬರೆದಿಟ್ಟ ಚೀಟಿಯ ಅರಿವಿಲ್ಲದೆ ರಾಯರೆಂದರು, “ಹಾಂಗೇನು! ನನಗ ಗೊತ್ತ ಆಗಿಲ್ಲ ನೋಡ. ರೈಲಿನಾಗ ಕುಳತ ಮ್ಯಾಲ ಫೋನು ಮಾಡಬೇಕಂದರ ಫೋನ ಸಿಗಲಿಲ್ಲ ”
” ರಾಯರೇ, ಫೋನನ್ನ ಮನ್ಯಾಗ ಬಿಟ್ಟ ಬಂದ ಮ್ಯಾಲ ರೈಲಿನಾಗ ಹ್ಯಾಂಗ ಸಿಗತೈತಿ ?” ಅಂತ ಅಂದ ಸೋಮಣ್ಣ. ಏನೂ ಆಗಿಲ್ಲ ಅನ್ನುವಂತೆ ರಾಯರು ಅಂದರು, “ಇರಲಿ ಬಿಡ, ಊಟ ಮಾಡೀರಿಲ್ಲೋ? ಆ ಮುಮುಕ್ಷು ಭವನದಾಗ ಸಾತ್ವಿಕ ಊಟ ಭಾಳ ಚಲೋ ಐತಿ.” ಇವರ ನಡೆಗೆ ನಗಬೇಕೋ ಅಥವಾ ಅಳಬೇಕೊ ಎಂದು ತೋರಲಿಲ್ಲ ರಾಘುನಿಗೆ. ” ಅಪ್ಪಾ! ಎಲ್ಲ ಆಗೈತಿ ಬಿಡು. ನೀ ಹ್ಯಾಂಗದಿ?” ನದಿಯಲ್ಲಿ ಏನೋ ನೋಡುತ್ತಿದ್ದ ರಾಯರೆಂದರು, ” ನನಗೇನ ಆಗೈತಿ ಎಲ್ಲಾ ಆರಾಮನ ಅದಿನಲ್ಲಾ” ಎಂದು ಹೇಳಿ ಮಾತನ್ನು ಬದಲಿ ಮಾಡಿದರು. “ಸೋಮಣ್ಣ ಅಲ್ಲಿ ನೋಡಿದ್ಯೇನ?” ಎಂದರು. ಸೋಮಣ್ಣನಿಗೆ ರಾಯರು ಏನು ನೋಡುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಕೆಲವರು ನದಿಯಲ್ಲಿ ಭಸ್ಮದ ಕುಂಡಿಯನ್ನು ಬಿಡುತ್ತಿದ್ದರು, ಕೆಲವರು ಚಿತೆಗೆ ಅರ್ಪಿಸುವ ಮುನ್ನ ಹೆಣದ ಮೈಯನ್ನು ತೊಳೆಯುತ್ತಿದ್ದರು, ಇನ್ನೂ ಕೆಲವರು ನದಿಯಲ್ಲಿ ಮುಳುಗಿ ಏಳುತ್ತಿದ್ದರು. ” ಏನೂ ನೋಡಿಲ್ಲ ರಾಯರೇ” ಅಂತ ಮಾತು ಮುಗಿಸಿದ. “ಮಾಡಿದ ಪಾಪ ಎಲ್ಲಾ ಹೋಗಲಿ ಅಂತ ನೀರಾಗ ಹ್ಯಾಂಗ ಮುಳಗಿ ಎಳತಾರು ನೋಡು. ಗಂಗಮ್ಮನ ಮಡಿಲು ಇವರ ಪಾಪದಿಂದ ತುಂಬಿ ಹೋಗಿರಬಹುದು. ಅದಕ ನಾನು ಸ್ನಾನ ಮಾಡಿಲ್ಲ. ಇಲ್ಲಿಯವೆರೆಗೂ ಏನು ಮಾಡೀನಿ ಅಂತ ಗೊತ್ತಿಲ್ಲ. ಆದರ ಇನ್ನ ಮ್ಯಾಲಾದರೂ ಒಳ್ಳೆಯ ಕೆಲಸಾ ಮಾಡಿ ಮರಳಿ ಬಂದು, ಸ್ವಲ್ಪ ಪುಣ್ಯವನ್ನು ಗಂಗಮ್ಮನ ಮಡಿಲಾಗ ಹಾಕಬೇಕು ಅಂತ ನಿರ್ಧಾರ ಮಾಡಿದೀನಿ. ನೀವು ಹೇಳಿದಾಂಗ ನನಗ ಮರುವಿನ ಖಾಯಿಲೆ ಇದ್ದರೂ ಇರಬಹುದು ಆದರ ಇನ್ನೂ ಮನಸು ದೇಹ ಗಟ್ಟಿ ಐತಿ. ನಡೀರಿ ಊರಿಗೆ ಮರಳಿ ಹೋಗುನು ” ಅಂತ ಅಂದರು. ರಾಯರು ಅಷ್ಟು ಸುಲಭವಾಗಿ ಮರಳಿ ಬರುವ ವಿಚಾರವನ್ನು ಕೇಳಿ ಅವರಿಬ್ಬರಿಗೂ ವಿಪರೀತ ಖುಷಿ ಆಯಿತು. ಅಪ್ಪನಿಗೇನೋ ಜ್ನಾನೋದಯ ಆದ ಹಾಗೆ ಇದೆ, ಅದಕ್ಕೂ ಒಂದು ಕಾರಣವಿರಬಹುದೆಂದು ರಾಘು ಅಂದುಕೊಂಡನು. ಕಳಿಂಗ ಯುದ್ಧದಲ್ಲಿ ಅಸ್ತ್ರ ತ್ಯಾಗವನ್ನು ಮಾಡಲು ಸಾಮ್ರಾಟ ಅಶೋಕನಿಗೂ ಒಂದು ಕಾರಣವಿತ್ತು. ಸಿದ್ಧಾರ್ಥ ನಡು ರಾತ್ರಿಯಲ್ಲಿ ಅರಮನೆಯನ್ನು ಬಿಟ್ಟು ಕಾಡನ್ನು ಸೇರಿ ಬುದ್ಧನಾಗಲೂ ಒಂದು ಕಾರಣವಿತ್ತಲ್ಲವೇ? ಎಂದು ಸಮಾಧಾನಮಾಡಿಕೊಂಡನು.
ರಾಯರು ಇನ್ನೂ ಏನನ್ನೋ ಹೇಳುತಲಿದ್ದರು “ಮುಕ್ತಿ ಭವನದಲ್ಲಿ ಇರುವ ಆ ಶುಕ್ಲಾನಿಗೆ ಬುದ್ದಿ ಕಡಿಮೆ ಅಂತ ಅಣಿಸತೈತಿ. ಅವನು ಹೇಳಿದಾಂಗ ಎರಡು ವಾರದಲ್ಲಿ ಜೀವ ಬಿಡಾಕ ಹ್ಯಾಂಗ ಸಾಧ್ಯ ಐತಿ ? ಸಾವು ನಮ್ಮ ಕೈಯ್ಯಾಗ ಐತೇನು? ಭವನದ ಬಗ್ಗೆ ಭಾಳ ಓದಿದ್ದೆ, ಒಂದೆರಡು ದಿನ ಅಲ್ಲಿ ಇರಬೇಕಂದರ ಆ ಮನುಷ್ಯ ಇರಾಕ ಬಿಡಲಿಲ್ಲ”. “ಇರಲಿ ಬಿಡಪ್ಪಾ, ಅವನು ತನ್ನ ಭವನದ ನಿಯಮವನ್ನು ಪಾಲಿಸಿದಾನ, ಅವನದೇನು ತಪ್ಪು?” ಎಂದು ರಾಘು ರಾಯರನ್ನು ಸರಿಪಡಿಸಲು ಪ್ರಯತ್ನಿಸಿದ. ವಾರಣಾಸಿಯಿಂದ ಬೆಂಗಳೂರಿಗೆ ಬರುವ ರೈಲು ನಿಧಾನವಾಗಿ ಚಲಿಸತೊಡಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ನಿದ್ದೆಯೇ ಇರದ ಸೋಮಣ್ಣನು ಮಲಗಲು ಯತ್ನಿಸುತ್ತಿದ್ದ. ಆದರೆ ಅವನ ಕಣ್ಣುಗಳ ಮುಂದೆ ಪದೇ ಪದೇ ಅದೇ ಮುಕ್ತಿ ಭವನ, ವಾರಣಾಸಿಯ ಇಕ್ಕಟ್ಟಾದ ಬೀದಿಗಳು, ಮಣಿಕರ್ಣಿಕಾ ಸ್ಮಶಾನದ ಚಿತ್ರಣಗಳು ಮತ್ತು ಗಂಗಾ ನದಿಯಲ್ಲಿ ನಡೆಯುತ್ತಿದ್ದ ವಿವಿಧ ಕಾರ್ಯಗಳು ಸುತ್ತತೊಡಗಿದ್ದವು. ಜೀವನದ ಎಲ್ಲ ಮುಖಗಳನ್ನು ಒಂದೇ ದಿವಸದಲ್ಲಿ ಕಂಡುಕೊಂಡಿದ್ದ ಸೋಮಣ್ಣ, ಮನಸ್ಸಿನಲ್ಲಿಯೇ ಅಂದು ಕೊಂಡ ‘ಇದೆಂತ ಅದ್ಭುತ ನಗರ’ ಎಂದು. ಮೇಲಿನ ಬರ್ತಿನಲ್ಲಿದ್ದ ರಾಘು ರಾಯರಿಗೇನೋ ಹೇಳುತಲಿದ್ದ
” ಅಪ್ಪಾ, ನೀನು ತಂದೆಯಾಗಿ ನನಗೆ ಏನು ಮಾಡಬೇಕಾಗಿತ್ತೋ ಅದನ್ನೆಲ್ಲಾ ಮಾಡಿಬಿಟ್ಟಿದಿ. ಈಗ ಮಗನಾಗಿ ನಾನು ನಿನಗ ಏನು ಮಾಡಬೇಕು ಎಂಬುದಕ್ಕ ಅವಕಾಶ ಕೊಡು. ನನ್ನ ಆಸೆಗೆ ನೀನು ಎಂದೂ ಅಡ್ಡ ಬಂದಿಲ್ಲ. ಹಾಂಗ ನಾನೂ ನೀನು ಮಾಡಬೇಕಿಂದಿರುವ ಕೆಲಸಗಳಿಗೆ ಅಡ್ಡ ಬರುದಿಲ್ಲ. ಮುಂದಿನ ತಿಂಗಳು ಊರಿಗೆ ಬರಾಕತಿನಿ, ನಿನ್ನ ಮೊಮ್ಮಗ ಕ್ರಿಷ್ ( ಕ್ರಿಷ್ಣ ) ನ ಮುಂಜವಿ ಮಾಡಾಕ. ನೀನೂ ನಮ್ಮ ಕೂಡ ಇಂಗ್ಲೆಂಡಿಗೆ ಬಂದು ಬಿಡು. ನಿನ್ನ ಸೊಸಿ ಬಿಳಿಯವಳಾದರೂ ನಮ್ಮ ಸಂಸ್ಕೃತಿ ಎಲ್ಲ ಕಲತಾಳು. ದಿನಾಲೂ ಪೂಜಾ ಮಾಡತಾಳು. ಬೇಜಾರಾದಾಗ ಒಂದಷ್ಟು ದಿನ ಊರಿಗೆ ಬಂದು ಸೋಮಣ್ಣನ ಕೂಡ ಇರು —–“
ಇನ್ನೂ ಏನನ್ನೋ ಹೇಳುತ್ತಲೇ ಇದ್ದನು. ಅವನ ಮಾತುಗಳಿಗೆ ತಿರಿಗುತ್ತರಿಸದೆ ಸುಮ್ಮನೆ ಹೂಂ ಗುಡುತ್ತಿದ್ದ ರಾಯರು ಹಾಗೆಯೇ ನಿದ್ದೆ ಹೋಗಿ, ಜೋರಾಗಿ ಏನನ್ನೋ ಬಡ ಬಡಿಸುತ್ತಿದ್ದರು “ದಾನ ಧರ್ಮ…ಪುಣ್ಯ ಪಾಪ…ಮುಕ್ತಿ ಮೋಕ್ಷ…” ನಗರವನ್ನು ದಾಟಿದ್ದ ರೈಲು, ಆವರಿಸಿದ ಕತ್ತಲೆಯನ್ನು ಸೀಳಿಕೊಂಡು ಜೋರಾಗಿ ಓಡತೊಡಗಿತು, ತನ್ನ ಕೊನೆಯ ನಿಲ್ದಾಣವನ್ನು ಮುಟ್ಟಲು.
– ಶಿವಶಂಕರ ಮೇಟಿ
ಜಗ ಎದುರು ಬಿದ್ದಾಗ ಜಗದೆದುರು ಬಿದ್ದಾಗ
ಹೊಸ ಬದುಕ ನಾಳೆಗಳು, ನಾಳೆಗಳ ಹಾಳೆಗಳು