ಬೇಸಿಗೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ . ಪರೀಕ್ಷೆ ಮುಗಿಸಿದ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷ ಶುರುವಾಗುವ ಮೊದಲು ತಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡುವ ಕಾಲ. ಗೆಳೆಯರೊಂದಿಗೆ ಸಮಯದ ಮಿತಿಯೆಲ್ಲದೇ ಕಲೆತು ಮೈಮರೆಯುವ ಸಂದರ್ಭ. ವರ್ಷವಿಡೀ ಕೆಲಸ , ಟ್ಯಾಕ್ಸಿ ಡ್ರೈವಿಂಗ್ (ಮಕ್ಕಳ) ಹೀಗೆ ನೂರೆಂಟು ಜವಾಬ್ದಾರಿಗಳನ್ನು ಹೊತ್ತ ತಂದೆ – ತಾಯಿಯರಿಗೂ ವಿರಮಿಸಿ ಮತ್ತೆ ಚೇತೋಹಾರಿಯಾಗುವ ಸಮಯ. ಎಲ್ಲ ರಜೆ – ಪ್ರವಾಸಗಳು ಈ ಗುರಿಯನ್ನು ಸಾಧಿಸಲು ಅವಕಾಶ ಮಾಡಿಕೊಡುವ ಖಾತರಿ ಇರುವುದಿಲ್ಲ . ಕಳೆದ ತಿಂಗಳು ನಾವು ಕೈಗೊಂಡ ನಾರ್ವೆ ದೇಶದ ಫ್ಯೋರ್ಡ್ ಗಳ ನೌಕಾ ಯಾನ ನಮಗೆ ವಿಭಿನ್ನ ಅನುಭವ ಕೊಟ್ಟಿದ್ದಲ್ಲದೇ, ಇವೆಲ್ಲ ಗುರಿಗಳನ್ನು ಸಾಧಿಸುವ ಅಪೂರ್ವ ಅವಕಾಶ ಮಾಡಿಕೊಟ್ಟಿತು . ಈ ಪ್ರವಾಸದ ಹೈಲೈಟ್ ಗಳಲ್ಲಿ ಒಂದು ಅನುಭವವನ್ನು ನಿಮ್ಮೊಂದಿಗೆ ಇಲ್ಲಿ ಚಿತ್ರಗಳೊಂದಿಗೆ ಹಂಚಿಕೊಂಡಿದ್ದೇನೆ .
ಪ್ರೇಮಿಕೆಯಾದ ಭೂಮಿಯನ್ನು ಮುಟ್ಟುವ ತವಕದಲ್ಲಿ ಪರ್ವತಗಳ ಸಾಲನ್ನು ಸರಿಸುತ್ತ ಅಲ್ಲಲ್ಲಿ ದ್ವೀಪಗಳನ್ನು ನಿರ್ಮಿಸಿ, ಒಳನುಗ್ಗುವ ಸಾಗರ, ಪ್ರಿಯಕರನಾದ ಸಾಗರವನ್ನು ಭೂಮಿ ತನ್ನ ಅಗಾಧ ಬಾಹುಗಳಿಂದ ಅಪ್ಪಿ ವಿರಮಿಸುವ ಜಾಗವೇ ನಾರ್ವೆ ದೇಶದ ಫ್ಯೋರ್ಡ್ (fjord) ಗಳು. ಇಲ್ಲಿ ಸಾಗರಕ್ಕೆ ರೋಷವಿಲ್ಲ, ಸಾಗರದೊಂದಿಗೆ ಗುದ್ದಾಡಲು ದಡದಲ್ಲಿ ಬಂಡೆಗಳಿಲ್ಲ. ಅಲೆಗಳ ಅಬ್ಬರವಿಲ್ಲದೆ, ಸಾಗರ ಭೂಮಿಗಳೆರಡೂ ಸಂತೃಪ್ತರಾಗಿ ಒಂದರ ತೋಳಲ್ಲೊಂದು ಒರಗಿ ವಿಶ್ರಮಿಸುತ್ತಿವೆಯೋ ಎಂಬ ಭಾವನೆ ಬರುವುದು ಸಹಜ. ಜೋಗುಳ ಹಾಡುವ ಗಾಳಿ, ಹೊದಿಕೆ ಹೊದಿಸಲು ಶ್ರಮಿಸುತ್ತಿರುವ ಮೋಡಗಳು ತಾವೂ ಈ ಸಮಾಗಮದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಕಣ್ಣು , ಕಿವಿಗಳಿಗೆ ವಿಶಿಷ್ಟ ಅನುಭವ (ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ). ಇಂತಹ ಸುಂದರ, ಶುಭ್ರ ನಸುಕಿನಲ್ಲಿ, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹದಾರನೆ ಎರಡೂ ಕಡೆ ಮಲಗಿದ್ದ ಪರ್ವತ ಸಾಲುಗಳ ನಡುವೆ ಬೆರಳಿನಂತೆ ಚಾಚಿದ್ದ ಸಾಗರದಲ್ಲಿ ೧೯ ಅಂತಸ್ತುಗಳಿದ್ದರೂ ಅಲ್ಲಾಡದೇ ಹಂಸದಂತೆ ಗಂಭೀರವಾಗಿ ಭೂಮಿ – ಸಾಗರಗಳ ವಿರಾಮಕ್ಕೆ ಚ್ಯುತಿಯಾದೀತೇನೋ ಎಂಬಂತೆ ಮೆಲ್ಲನೆ ಮುಂದಡಿಯಿಡುತ್ತಿತ್ತು P&O ಸಂಸ್ಥೆಯ ಅಯೋನ ಎಂಬ ಹಡಗು. ಬೆಳಗ್ಗೆ ಎದ್ದಾಗ ನಿಮ್ಮ ಕಣ್ಮುಂದೆ ಈ ದೃಶ್ಯ ಅನಾವರಣಗೊಂಡಾಗ ಉಕ್ಕುವ ಭಾವನೆಗಳನ್ನು ವರ್ಣಿಸಲು ಸಾಧ್ಯವೇ !
ನಮ್ಮ ನಾರ್ವೆ ಫ್ಯೋರ್ಡ್ ಯಾನದ ಒಂದು ವಿಶ್ರಾಮ ಸ್ಥಳ ಓಲ್ಡೆನ್ ಎಂಬ ಗ್ರಾಮ. ಓಲ್ಡೀಲ್ವ ನದಿ ಹಾಗೂ ನೋರ್ಡ್ ಫ್ಯೋರ್ಡ್ ಗಳ ಸಂಗಮ ಸ್ಥಳ ಇದು. ಕೆಲವೇ ನೂರು ಜನರಿರುವ ಈ ಗ್ರಾಮಕ್ಕೆ ಸುಮಾರು ೩ ಲಕ್ಷ ಜನ ಬೇಸಿಗೆಯಲ್ಲಿ ಅಡಿ ಇಡುತ್ತಾರೆ. ಇಲ್ಲಿನ ಮುಖ್ಯ ಆಕರ್ಷಣೆ ಹತ್ತಿರದ ಬರ್ಕ್ಸ್ಡಾಲ್ಸ್ ಬ್ರೀನ್ (Briksdalsbreen) ಎಂಬ ಹಿಮನದಿ. ಓಲ್ಡೆನ್ ಗ್ರಾಮದಿಂದ ಈ ಹಿಮನದಿಯ ತಪ್ಪಲು ಕೇವಲ ೨೫ ಕಿ.ಮೀ ದೂರದಲ್ಲಿದೆ. ಹಿಮನದಿಗೆ ಹೋಗಲು ಓಲ್ಡೆನ್ ಬಂದರಿನಿಂದ ಖಾಸಗಿ ಬಸ್ಸುಗಳ ವ್ಯವಸ್ಥೆಯಿದೆ. ಪರ್ವತಗಳ ನಡುವೆ ಹಾಸಿದ ಹಚ್ಚ ಹಸಿರಿನ ಶಾಲಿನ ನಡುವೆ ಹಾದಿ ಸುತ್ತು ಬಳಸುತ್ತ ಸಾಗುತ್ತದೆ. ಎಡಕ್ಕೊಮ್ಮೆ, ಬಲಕ್ಕೊಮ್ಮೆ ಕಾಡಿನ ಮಧ್ಯೆ ರಭಸದಿಂದ ಹರಿಯುವ ನೊರೆ ನೊರೆಯಾದ ಓಲ್ಡೀಲ್ವ ನದಿ ಕಣ್ಣ ಮುಚ್ಚಾಲೆ ಆಡುತ್ತ ಜೊತೆ ನೀಡುತ್ತದೆ. ಸಾಹಸ ಪ್ರಿಯರಿಗೆ ಈ ನದಿಯಲ್ಲಿ ರಾಫ್ಟಿಂಗ್ ಮಾಡಬಹುದು. ನಡು ದಾರಿಯಲ್ಲಿ ನೀಲ ಹಸಿರು (turquoise) ಬಣ್ಣದ ಕಣ್ಣಿಗೆ ಕಟ್ಟುವ ಓಲ್ಡೆವಾಟ್ನೆಟ್ ಎಂಬ ಸರೋವರ ಸಿಗುತ್ತದೆ. ಇದರ ಸೌಂದರ್ಯವನ್ನು ಕಟ್ಟಿಹಾಕಲು ನನ್ನ ಬತ್ತಳಿಕೆಯಲ್ಲಿ ಸೂಕ್ತ ಶಬ್ದಗಳಿಲ್ಲ, ಕ್ಯಾಮರಾ ಕೂಡ ಇದರ ಸೌಂದರ್ಯಕ್ಕೆ ನ್ಯಾಯ ದೊರಕಿಸಿಲ್ಲ. ಈ ಸರೋವರವನ್ನು ಬಳಸಿ ಬಸ್ಸು ಬರ್ಕ್ಸ್ಡಾಲ್ಸ್ ಬ್ರೀನ್ ತಪ್ಪಲಿಗೆ ಬಂದಿಳಿದಾಗ ಎದುರು ಧುತ್ತನೆ ಎದುರಾಗುವುದು ನೂರಾರು ಮೀಟರ್ ಎತ್ತರದ ಅನಾಮಧೇಯ ಜಲಪಾತ. ನಾರ್ವೆಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಜಲಪಾತಗಳು. ಪರ್ವತಗಳ ತುದಿಯಲ್ಲಿ ಮಡುಗಟ್ಟಿರುವ ಹಿಮಕ್ಕೆ ಮೇಲಿನಿಂದ ಹಾರುವುದನ್ನು ಬಿಟ್ಟರೆ ಬೇರೆ ಹಾದಿಯೇ ಇಲ್ಲವೇನೋ! ಮೊದಲೇ ಜನಸಂಖ್ಯೆ ವಿರಳ, ಕಾಣುವ ಜಲಪಾತಗಳಿಗೆಲ್ಲ ಹೆಸರಿಡುವಷ್ಟು ವ್ಯವಧಾನ ಯಾರಿಗಿದ್ದೀತು? ಈ ದೇಶದಲ್ಲಿ ಜನರಿಗಿಂತಲೂ ಜಲಪಾತಗಳ ಸಂಖ್ಯೆಯೇ ಜಾಸ್ತಿ ಇದೆಯೇನೋ ಎಂಬ ಅನುಮಾನ ನನಗಿದೆ.
ತಪ್ಪಲಿನ ತಂಗುದಾಣದಿಂದ ಹಿಮನದಿಯ ಬುಡಕ್ಕೆ ಸುಮಾರು ೨೦೦ ಮೀಟರ್ ಏರನ್ನು ಏರಲು ೨.೫-೩ ಕಿ.ಮೀ ದೂರದ ದಾರಿ ಮಾಡಿದ್ದಾರೆ. ಹತ್ತಲು ತೊಂದರೆಯಿದ್ದವರಿಗೆ ವಿದ್ಯುಚ್ಚಾಲಿತ ಗಾಡಿಗಳ ವ್ಯವಸ್ಥೆಯಿದೆ. ದಾರಿಯುದ್ದಕ್ಕೂ ಬರ್ಚ್ ನಂತಹ ಮರಗಳ ಲಘು ಕಾಡು, ಬಣ್ಣಬಣ್ಣದ ಹೂವುಗಳನ್ನು ತೊಟ್ಟ ಗಿಡಗಳು ಮನಸ್ಸನ್ನು ಮುದಗೊಳಿಸುತ್ತ ಹಾದಿಯ ದೂರವನ್ನು ಕುಗ್ಗಿಸುತ್ತವೆ. ಸುಮಾರು ಅರ್ಧ ಕಿ.ಮೀ ದೂರ ಕ್ರಮಿಸಿದಾಗ ಎದುರಾಗುವುದು ಹಿಮನದಿಯಿಂದ ಕರಗಿ ಬರುವ ನದಿ ನಿರ್ಮಿಸಿದ ಕ್ಲೇಯ್ವಫಾಸ್ಸೇನ್ (Kleivafossen) ಎಂಬ ಭರ್ಜರಿ ಜಲಪಾತ. ಮೈತುಂಬಿ ಭೋರ್ಗರೆಯುತ್ತ ಧುಮುಕುವ ಜಲಪಾತ ಸೃಷ್ಟಿಸುವ ಆಹ್ಲಾದಕರ ತುಂತುರು ವೃಷ್ಟಿ ಬಿರು ಬಿಸಿಲಿದ್ದ ದಿನ ಮೈ-ಮನಗಳನ್ನು ತಂಪಾಗಿಸುತ್ತದೆ. ಅಲ್ಲಿ ಮೂಡಿ ಮರೆಯಾಗುವ ಕಾಮನಬಿಲ್ಲನ್ನು ನೋಡುತ್ತಾ ಇಡೀ ದಿನ ಕುಳಿತಿರಬಹುದು.
ಗಡಿಬಿಡಿಯಲ್ಲಿ ಕೆಳಮುಖವಾಗಿ ಓಡುವ ನದಿಯ ಪಕ್ಕ ಊರ್ಧ್ವಮುಖವಾಗಿ ಸಾಗುವ ಕಾಲುಹಾದಿಯುದ್ದ ಅಲ್ಲಲ್ಲಿ ಹಿಮನದಿ ಹಾಗೂ ಅಲ್ಲಿನ ಭೂಭಾಗದ ಬಗ್ಗೆ ಉಪಯುಕ್ತ ಮಾಹಿತಿ ಕೊಡುವ ಫಲಕಗಳನ್ನು ನಿಲ್ಲಿಸಿದ್ದಾರೆ. ಬರ್ಕ್ಸ್ಡಾಲ್ಸ್ ಬ್ರೀನ್, ಯೂರೋಪಿನಲ್ಲೆ ಅತಿ ದೊಡ್ಡದಾದ ಜೋಸ್ಟೆಡಾಲ್ಸ್ ಬ್ರೀನ್ ಎಂಬ ಅಗಾಧ ಹಿಮನದಿಯ ೫೦ ಬಾಹುಗಳಲ್ಲೊಂದು. ಇತರ ಹಿಮನದಿಗಳಿಗಿಂತ ಅತಿ ಸುಲಭವಾಗಿ ಬರ್ಕ್ಸ್ಡಾಲ್ಸ್ ಬ್ರೀನ್ ನ್ನು ತಲುಪಬಹುದು ಎಂಬುದೇ ಇದರ ಮುಖ್ಯ ಆಕರ್ಷಣೆ. ಭೂಮಿಯ ಒಡಲಿನಿಂದ ಉಕ್ಕಿ, ಪದರ ಪದರವಾಗಿ ಹೆಪ್ಪುಗಟ್ಟಿರುವ ಪಾರದರ್ಶಕ ಬಿಳಿ-ನೀಲ ಬಣ್ಣದ ನೀರ್ಗಲ್ಲು, ಹನಿ-ಹನಿಯಾಗಿ ತೊಟ್ಟಿಕ್ಕುತ್ತ ಶಿಲೆಗಳನ್ನು ಕೊರೆದು ಹರಿದುಬರುವಾಗ ಖನಿಜಗಳ ಮಿಲನದಿಂದ ವಿಚಿತ್ರ ನೀಲಿ ಬಣ್ಣದ ಮಡುವಾಗಿ ಬುಡದಲ್ಲಿ ವಿಶ್ರಮಿಸಿದೆ. ಇದೇ ಕಾರಣಕ್ಕಾಗಿ ಈ ನೀರು ಕುಡಿಯಲು ಯೋಗ್ಯವಲ್ಲ! ಕಳೆದ ಎರಡು ದಶಕಗಳಲ್ಲಿ ಬರ್ಕ್ಸ್ಡಾಲ್ಸ್ ಬ್ರೀನ್ ಸುಮಾರು ಅರ್ಧ ಕಿ.ಮೀ ನಷ್ಟು ಹಿಮ್ಮೆಟ್ಟಿದೆಯಂತೆ. ಚಳಿಗಾಲದ ಹಿಮಪಾತ ಇದರ ಗಾತ್ರವನ್ನು ನಿರ್ಧರಿಸಿದರೂ, ಹಿನ್ನಲೆಯಲ್ಲಿ ೨೦-೨೧ನೇ ಶತಮಾನದಲ್ಲಿ ಏರಿರುವ ಉಷ್ಣತೆ ಮುಖ್ಯ ಕಾರಣವೆಂಬುದುದು ಕಟು ಸತ್ಯ. ಇಂಗ್ಲೆಂಡಿನಿಂದ ಸಾವಿರಾರು ಕಿ.ಮೀ ದೂರವನ್ನು ಡೀಸೆಲ್ ಎಣ್ಣೆಯಿಂದ ಚಲಿಸುವ ಬ್ರಹತ್ ಹಡಗಿನಲ್ಲಿ ವಾಯು ಮಾಲಿನ್ಯ ಮಾಡುತ್ತ, ಜಗತ್ತಿನ ಉಷ್ಣತೆಯನ್ನು ಹೆಚ್ಚಿಸುತ್ತ ಅದರ ಪ್ರಭಾವವನ್ನು ನೋಡುತ್ತಾ ನಿಂತಿದ್ದೇನಲ್ಲ, ಇದೆಂತಹ ವಿಪರ್ಯಾಸ! ಅದರೊಟ್ಟಿಗೆ ಪ್ರಕೃತಿಯ ಅಗಾಧತೆ, ಅಲ್ಲಿ ಅಡಗಿರುವ ಅದಮ್ಯ ಚೈತನ್ಯ, ಬೆಡಗು ಇವನ್ನೆಲ್ಲ ಅನುಭವಿಸುತ್ತ ಉಕ್ಕಿದ ಭಾವನೆಗಳೂ ಬಣ್ಣಿಸಲಸದಳ. ಶತಮಾನಗಳಿಂದ ಉದುರಿದ ಹಿಮವನ್ನು ಒಡಲಲ್ಲಿ ಒತ್ತಿಟ್ಟುಕೊಂಡು, ಹನಿಹನಿಯಾಗಿ ತೊಟ್ಟಿಕ್ಕಿಸಿ ಬೆಳೆಸಿದ ಮಡುವಿನಿಂದ ಹೊಮ್ಮುವ ನದಿ, ಇನ್ನಿಲ್ಲದ ಗಡಿಬಿಡಿಯಿಂದ ಗುಡ್ಡವನ್ನು ಜಾರಿ ಅನತಿ ದೂರದಲ್ಲಿರುವ ಸಾಗರವನ್ನು ಸೇರುವ ಪ್ರಯಾಣಕ್ಕೆ ನನ್ನನ್ನು ಸಾಕ್ಷಿಯಾಗಿಸಿದ ಈ ಯಾನ ಮರೆಯಲಾಗದ್ದು.
- ರಾಂ












