ಅದೆಷ್ಟು ಹೆಸರುಗಳು!

ವಿಜಯನರಸಿಂಹ ಅನಿವಾಸಿಗೆ ಹೊಸಬರಲ್ಲ. ವ್ಯಾಸಂಗದಲ್ಲಿ ವ್ಯಸ್ತರಾಗಿರುವುದರಿಂದ ಅಪರೂಪವಾಗಿದ್ದಾರೆ. ನಾನು ಹೆಚ್ಚಾಗಿ ಅವರ ಪ್ರೇಮ ಕವನಗಳನ್ನೇ ಓದಿದ್ದೇನೆ. ಅವರ ಕವನಗಳಲ್ಲಿ ಭಾವ ನವಿರಾಗಿ ಹರಿಯುತ್ತದೆ. ಅವರ ಭಾವುಕತೆಗೆ ಈ ಕವನಗಳು ಸಾಕ್ಷಿ. ಈ ವಾರದ ಕವನವೂ ಇದಕ್ಕೆ ಹೊರತಲ್ಲ. ಬೇಂದ್ರೆಯವರ ‘ನಾನು ಬಡವಿ ಆತ ಬಡವ’ ದ ಛಾಯೆ ಇಲ್ಲಿದೆ. ಈ ಸಾನೆಟ್ ನಲ್ಲಿ ವಿಜಯ್ ಅವರು ಗಂಡು ಹೆಣ್ಣಿನ ಸಂಬಂಧಕಿರುವ ನಾಮಧೇಯಗಳನ್ನು ಅನ್ವೇಷಿಸುತ್ತ, ಆ ಸಂಬಂಧದ ಸಾರವನ್ನು ಭಟ್ಟಿ ಇಳಿಸಿದ್ದಾರೆ.

–ಸಂ

ನನ್ನ ನಿನ್ನ ಸಂಬಂಧಕೆ ಅದೆಷ್ಟು ಹೆಸರುಗಳು!

ಮೊದಲ ಸಲ ನಿನ್ನ ನೋಡಲು ಬಂದಾಗ ನಾವು ‘ಅಪರಿಚಿತರು’

ಮೊದಲ ಸಲ ನಿನ್ನ ಮಾತನಾಡಿಸಿದಾಗ ‘ನವ ಪರಿಚಿತರು’

ಪದೇ ಪದೇ ನಿನ್ನ ಮಾತನಾಡಿಸಲು ಮನಸಾದಾಗ ‘ಚಿರಪರಿಚಿತರು’

ದಿನೇ ದಿನೇ ತಾಸುಗಟ್ಟಲೆ ಹರಟೆ ಹೊಡೆಯುವಾಗ ‘ಗೆಳೆಯ-ಗೆಳತಿ’

ಒಬ್ಬರನ್ನೊಬ್ಬರು ಒಪ್ಪಿಕೊಂಡಾಗ ‘ವಿವಾಹ ನಿಶ್ಚಿತರು’

ಮದುವೆಯ ಹಸೆಮಣೆಯಲ್ಲಿ ‘ನವ ಜೋಡಿಗಳು’

ಮೊದಲ ರಾತ್ರಿಯಲ್ಲಿ ‘ಪ್ರಣಯ ಪಕ್ಷಿಗಳು’

ಮದುವೆಯ ಮಧುರ ದಿನದ ನಂತರ ‘ನವ ವಿವಾಹಿತರು’

ಸಂಸಾರ ರಥವನ್ನು ಎಳೆಯಲು ಮುಂದಾದಾಗ ‘ಜೋಡೆತ್ತುಗಳು’

ಕಾಲದ ಗತಿಯಲ್ಲಿ, ಜೀವನ ಪ್ರಗತಿಯಲ್ಲಿ ‘ಜೀವನ ಸಂಗಾತಿಗಳು’

ಮಕ್ಕಳನ್ನು ಹಡೆದು ಶುಶ್ರೂಷೆಯಲ್ಲಿ ನೀನು ತಾಯಿ, ಪೋಷಣೆಯಲ್ಲಿ ನಾನು ತಂದೆ

ನನ್ನ ನಿನ್ನ ಸಂಬಂಧಕೆ ಇನ್ನೆಷ್ಟು ಹೆಸರುಗಳನ್ನು ಹುಡುಕಿದರೂ

‘ನಿನಗೆ ನಾನು, ನನಗೆ ನೀನು’ ಅನ್ನುವ ಸಂಬಂಧವೇ ಅಂತಿಮವಲ್ಲವೇ ಗೆಳತಿ?

  • ವಿಜಯನರಸಿಂಹ

ಭಾವ

ಸುಂದರ ಬದುಕಿನ ಹಲವು ಮುಖಗಳಲ್ಲಿ ಒಸರುವ ಸ್ವಾರಸ್ಯಗಳನ್ನು ಎಂದಿನಂತೆ ತಮ್ಮ ಲೇಖನಿಯಿಂದ ಹರಿಸಿದ್ದಾರೆ ಸುದರ್ಶನ್:

 

ಮಗುವಿನ ಜೊಚ್ಚಿಲ ಅಳುವನು ಕೇಳುತ

ತಾಯಿಯು ಹರಿಸಿದ ಬಾಷ್ಪ೦ಗಳಲ್ಲಿ

ಹಸಿವನು ಅಳಿಸುತ ನೋವನು ಮರೆಸುತ

ಸಲಹುವ ತಾಯಿಯ ವಾತ್ಸಲ್ಯದಲಿ

 

ತಾಯಿಯ ಪ್ರೀತಿಯ ಸಾರವ ಸವಿಯುತ

ಬೆಳೆಯುವ ಕಂದನ ಮನದಾಳದಲಿ

ಮಕ್ಕಳ ಕನಸನು ನನಸನು ಮಾಡಲು

ದುಡಿಯುವ ತಂದೆಯ ಕೈ ಕಸುವಿನಲಿ

 

ವಿದ್ಯೆಯ ಕಲಿಸಿದ ಗುರುವನು ನೆನೆಯುತ

ಬೆಳೆಯುವ ಶಿಷ್ಯನ ಗುರು ಭಕುತಿಯಲಿ

ತನ್ನನೆ ಮೀರಿಪ ಶಿಷ್ಯನ ಏಳಿಗೆ

ಕಾಣುವ ಗುರುವಿನ ಸಾರ್ಥಕ್ಯದಲಿ

 

ಮನವನು ಮನೆಯನು ಅನುದಿನ ಬೆಳಗುವ

ಮಡದಿಯ ಕೈಬಳೆ ನಿನಾದದಲಿ

ಪ್ರತಿಫಲ ಬಯಸದೆ ಪ್ರೀತಿಯ ತೋರುವ

ನಿಜರೂಪದ ಸಿಹಿ ಗೆಳೆತನದಲ್ಲಿ

 

ವಿಧ ವಿಧ ಬಗೆಯಲಿ ವಿಧ ವಿಧ ರೂಪದಿ

ಒಳಗೂ ಹೊರಗೂ ತೋರುತಲಿರುವ

ಜೀವರ ನಡುವಿನ ಬೆಸುಗೆಯ ಬೆಸೆಯುತ

ತನ್ಮಯ ಲೋಕಕೆ ತಳ್ಳುತಲಿರುವ

 

ಕಾಣುವೆ ಅನುದಿನ ಕಾಣುವೆ ಪ್ರತಿಕ್ಷಣ

ಇರದಿರಲದು ಬರಿ ಬರಡೇ ಜೀವನ

ಏನಿದು,ಏನಿದು, ಏನಿದು ಜೀವ?

ಬಾಳನು ಸುಂದರ ಮಾಡಿದ ಭಾವ!

 

                                            .ಸುದರ್ಶನ ಗುರುರಾಜರಾವ್