ವಿನ್ಸೆಂಟ್ ವ್ಯಾನ್ ಗೊಘ್ ೧೯ನೇ ಶತಮಾನದ ಪ್ರಭಾವಶಾಲಿ ಕಲಾವಿದ. ಈತ ಜೀವನದ ಎರಡನೇ ದಶಕದವರೆಗೂ ಚಿತ್ರ ಬರೆಯಲು ತೊಡಗಲಿಲ್ಲ. ಚಿತ್ತಕ್ಷೋಭೆಗೊಳಗಾಗಿ ತನ್ನ ೩೭ನೇ ವಯಸ್ಸಿನಲ್ಲಿ ವ್ಯಾನ್ ಗೊಘ್ ಆತ್ಮಹತ್ಯೆ ಮಾಡಿಕೊಂಡು ಓಗೊಡದ ನಾಡಿಗೆ ತೆರಳಿದ. ಅಷ್ಟರಲ್ಲಿ ಈ ಮಹಾನ್ ಪ್ರತಿಭಾವಂತ ಎರಡು ಸಾವಿರಕ್ಕೂ ಮಿಕ್ಕಿ ಚಿತ್ರಗಳನ್ನು ರಚಿಸಿದ್ದ. ಆಮ್ಸ್ಟರ್ಡ್ಯಾಂನ ವ್ಯಾನ್ ಗೊಘ್ ಚಿತ್ರ ಪ್ರದರ್ಶನಾಲಯವನ್ನು ನೋಡಿ ಬಂದ ಸ್ಫೂರ್ತಿಯಲ್ಲಿ ನಾನು ಬರೆದ ಕವನ…

ಎಲ್ಲಿತ್ತು ಆ ಪ್ರತಿಭೆ ಅಷ್ಟೊಂದು ಕಾಲ?
ಭುಗಿಲೆದ್ದಿತೇ ಭಾವನೆಗಳ ಪೂರ?
ಮುದುಡಿದ ಮನಸಿನ ಒಳಗಿಂದ
ಉಕ್ಕಿತೇ ಉಸಿರಂತೆ ಬಣ್ಣಗಳ ಜಾಲ?
ಎಷ್ಟು ಪ್ರಜ್ವಲ! ಎಷ್ಟು ವೈವಿಧ್ಯ!!
ಅಷ್ಟೇ ಪ್ರಾಂಜಲ ಭಾವ ಆ ಚಿತ್ರಗಳಲ್ಲಿ
ಸೂರ್ಯಕಾಂತಿಯ ಬೆಡಗು, ಬಾದಾಮಿ ಹೂವಿನ ಮೊಗ್ಗು;
ಆದರೆ ಹುದುಗಿತ್ತು ಮನದಲ್ಲಿ ಕಾರ್ಮೋಡದ ಬಳ್ಳಿ
ಇದ್ದನಲ್ಲ ಪ್ರೀತಿಯ ತಮ್ಮ?
ತೋಡಿಕೊಳ್ಳಲಿಲ್ಲೇಕೆ ಮನದ ಮರ್ಮ?
ತಿಳಿಯಾಗುತಿತ್ತಲ್ಲ ಕೊಳ, ದೂರಾಗುತಿತ್ತಲ್ಲ ಕಾಲ
ಸಿಗುತಿತ್ತಲ್ಲ ಜಗಕೆ ಇನ್ನೂ ನಿನ್ನ ಮಾಯಾಜಾಲ!
- ರಾಂ