ಭಕ್ತಿಪಂಥ ಮತ್ತು ಹರಿದಾಸರು; ಸಾಹಿತ್ಯ ಮತ್ತು ಸಂಗೀತ – ಲಕ್ಷ್ಮೀನಾರಾಯಣ ಗುಡೂರ್

ಸಂಪಾದಕೀಯ - ರಾಧಿಕಾ ಜೋಶಿ

ಶತಮಾನಗಳ ಹಿಂದೆ ಶರಣರ ದಾಸರ ಸಾಹಿತ್ಯದ ಚಳುವಳಿ ಪ್ರಾರಂಭವಾಗಿ ಸಮಾಜದ ಸಾಹಿತ್ಯದ ಸುಧಾರಣೆಯಾಯಿತು. ಅನಿವಾಸಿಯಲ್ಲಿ ಯುಗಾದಿಯ ಸಂಭ್ರಮದ ಜೊತೆ ಶುರುವಾದ ಸಂತರ ಸಾಹಿತ್ಯದ ಗೋಷ್ಠಿ ಅಲೆಯಾಗಿ ಸೆಲೆಯಾಗಿ ವಾರಾಂತ್ಯವಾರ ನಮ್ಮ ಮನೆಗಳಲ್ಲಿ ಹರಿಯುತ್ತಾ ಕುತೂಹಲದ ಚಳುವಳಿ ಶುರುವಾಗಿದೆ.
ಈ ವಾರ ಡಾ.ಗುಡೂರ್ ಅವರ ಲೇಖನ ದಾಸ ಸಾಹಿತ್ಯದ ಕೇವಲ ಒಂದು ಪರಿಚಯವಲ್ಲ ಒಂದು ಪ್ರಬಂಧ ಅಥವಾ ಸಂಶೋಧನಾ ಬರಹ ಎಂದರೆ ತಪ್ಪಾಗಲಾರದು.
ಓದುಗರಲ್ಲಿ ಕುತೂಹಲ, ಆಶ್ಚರ್ಯ ಎಲ್ಲಾ ನವರಸ ಭಾವನೆಗಳನ್ನು ಮೂಡಿಸುವ ಒಂದು ವಿವರವಾದ ವರದಿ.
ಸಾಹಿತ್ಯಕ್ಕೆ ತಕ್ಕಂತೆ ಸುಂದರ ಚಿತ್ರವನ್ನು ಒದಗಿಸಿದ ಡಾ. ಗುಡೂರ್ ಅವರಿಗೆ ಶರಣು

ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ. ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು.
*********************************************************************************
ಉತ್ಪನ್ನಾ ದ್ರಾವಿಡೇ ಸಾಹಂ ವೃದ್ಧಿಂ ಕರ್ನಾಟಕೇ ಗತಾ |  
ಭಕ್ತಿಪಂಥವು ದ್ರಾವಿಡದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆಯಿತು
(ಪದ್ಮಪುರಾಣ ೧-೧೮)

೧೨ನೆಯ ಶತಮಾನದಲ್ಲಿ ಉಡುಪಿಯ ಹತ್ತಿರದ ಪಾಜಕ ಕ್ಷೇತ್ರದಲ್ಲಿ ಹುಟ್ಟಿ, ಅಖಂಡ ಅಧ್ಯಯನ ಮಾಡಿ, ದೇಶಾದ್ಯಂತ ಪರ್ಯಟನ ಮಾಡಿ ಉಡುಪಿಯಲ್ಲಿ ನೆಲೆಸಿದ ಆಚಾರ್ಯ ಮಧ್ವರು ಪ್ರತಿಪಾದಿಸಿದ ದ್ವೈತ ವೈಷ್ಣವ ತತ್ತ್ವ ಒಂದು ಹೊಸ ಪಂಥಕ್ಕೆ ಕಾರಣವಾಯಿತು. ಭಕ್ತಿಪಂಥ ಹೊಸದೇನಲ್ಲ, ಅದಾಗಲೇ ತಮಿಳುನಾಡು ಕರ್ನಾಟಕಗಳಲ್ಲಿ ಸಾಕಷ್ಟು ಪ್ರಚಲಿತವಾಗಿತ್ತು. ಆ ಸುತ್ತಮುತ್ತಲಿನ ಆರು ಶತಮಾನಗಳು ಭಕ್ತಿಪಂಥದ ಸುವರ್ಣಯುಗವೆಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ, ಸಂಸ್ಕೃತದಲ್ಲಿ ಆಗಲೇ ಬರೆದು ಪ್ರಚಲಿತವಿದ್ದ ಅನೇಕ ಗ್ರಂಥಗಳನ್ನು, ತತ್ತ್ವಗಳನ್ನು ಸಾಮಾನ್ಯ ಮನುಷ್ಯನ ದಿನಬಳಕೆಯ ಭಾಷೆಗೆ ತಂದವರು ಈ ಕಾಲದಲ್ಲಿ ಕಂಡುಬರುತ್ತಾರೆ.

ಭಾರತದ ವಿವಿಧ ಭಾಗಗಳ ಭಕ್ತಿಪಂಥದ ಪ್ರಮುಖರು:
ತಮಿಳುನಾಡಿನ – ನಾಯನಾರರು ಮತ್ತು ಆಳ್ವಾರರು
ಕರ್ನಾಟಕದಲ್ಲಿ – ಶರಣರು ಮತ್ತು ಹರಿದಾಸರು
ಆಂಧ್ರಪ್ರದೇಶ – ತ್ಯಾಗರಾಜರು, ಅಣ್ಣಮಾಚಾರ್ಯ, ಭದ್ರಗಿರಿ ರಾಮದಾಸರು, ಪೋತನ,
ಮಹಾರಾಷ್ಟ್ರದಲ್ಲಿ – ಜ್ಞಾನದೇವ, ಮುಕ್ತಾಬಾಯಿ, ನಾಮದೇವ ಇತರ ಅಭಂಗ ಕೀರ್ತನಕಾರರು
ಗುಜರಾತಿನಲ್ಲಿ – ನರಸಿಂಹ ಮೆಹತಾ ಮತ್ತಿತರರು
ರಾಜಸ್ಥಾನ – ಮೀರಾಬಾಯಿ
ಉತ್ತರ ಪ್ರದೇಶ – ಕಬೀರ, ಸೂರದಾಸ, ತುಲಸಿದಾಸ
ಬಂಗಾಲದಲ್ಲಿ – ಕೃಷ್ಣ ಚೈತನ್ಯ, ಚಂಡೀದಾಸ, ಜಯದೇವಕವಿ

ಕರ್ನಾಟಕದ ಹರಿದಾಸ ಪಂಥ:
ಈ ಪಂಥದಲ್ಲಿ ಎರಡು ಮುಖ್ಯ ಬಣಗಳಿವೆ –
೧) ವ್ಯಾಸಕೂಟ: ಇದರಲ್ಲಿ ಇರುವವರು ಸನ್ಯಾಸಿಗಳು, ಸಂಸ್ಕೃತ ಪಾಂಡಿತ್ಯವುಳ್ಳವರು. ಕನ್ನಡದಲ್ಲಿ ದಾಸಸಾಹಿತ್ಯದ ರಚನೆಗೆ ಮೊದಲ ಹೆಜ್ಜೆಯಿಟ್ಟವರು.
೨) ದಾಸಕೂಟ: ಇವರು ಸಂಸಾರಿಗಳು; ಈ ಜಗತ್ತಿನಲ್ಲಿ ಇದ್ದುಕೊಂಡೇ ದಾಸಪಂಥದ ಜೀವನಕ್ಕೆ ಒಪ್ಪಿಸಿಕೊಂಡವರು.
ಹರಿದಾಸ ಎಂದರೆ ಮೊದಲು ಮನಸ್ಸಿಗೆ ಬರುವವರು ಎರಡನೆಯ ಗುಂಪಿಗೆ ಸೇರಿದವರು. ಪ್ರತಿದಿನ ಬೆಳಗ್ಗೆ ಶುಚಿರ್ಭೂತರಾಗಿ, ಸರಳ ಉಡುಗೆಯನ್ನುಟ್ಟು, ತಾಳ-ತಂಬೂರಿಗಳನ್ನು ಹಿಡಿದು ಹೊರಟು, ದೇವರ ನಾಮ ಸಂಕೀರ್ತನೆಗಳನ್ನು ಹಾಡಿ-ಕುಣಿದು ಬಂದರೆಂದರೆ ಆಯಿತು.

ಹರಿದಾಸರೆಲ್ಲರಲ್ಲೂ ಕಂಡುಬರುವ ಸಾಮಾನ್ಯ ಅಂಶಗಳು (common factors):
೧) ಭಕ್ತ ಮತ್ತು ದೇವರುಗಳ ಮಧ್ಯದ ಸಂಬಂಧ – ನಿರ್ವ್ಯಾಜ ಪ್ರೀತಿ / ಭಕ್ತಿ / ಸಮರ್ಪಣಗಳ ಮಿಶ್ರಣ
೨) ವೈಷ್ಣವ ಅದರಲ್ಲೂ ಮಾಧ್ವ ಸಂಪ್ರದಾಯ – ದ್ವೈತ ಪದ್ಧತಿ ಮುಖ್ಯ (ಬೇರೆಯವರೂ ಇದ್ದರು)
೩) ಹರಿದಾಸ ವೃತ್ತಿ / ಜೀವನ ಶೈಲಿ – ಮಧುಕರ ವೃತ್ತಿಯಿಂದ ಬಂದದ್ದು ಅಂದಿನದು ಅಂದಿಗೆ; ನಾಳೆಗಿಡದೆ, ಸಾಲ ಮಾಡದೆ, ಆಸೆಯಿಲ್ಲದೆ ಇರುವ ಬದುಕು. (ಮಧುಕರ ವೃತ್ತಿ ಎನ್ನದು ಬಲು ಚೆನ್ನದು.)
೪) ಜೀವನ ತತ್ತ್ವಗಳು, ವೈರಾಗ್ಯ, ವಿಷ್ಣುವಿನ ಅವತಾರಗಳು, ಮೋಕ್ಷದ ಗುರಿ – ಈ ವಿಷಯಗಳ ಕುರಿತು ರಚಿಸಿದ ಪದಗಳನ್ನು ಕನ್ನಡದಲ್ಲಿ ಹಾಡಿ ಹಂಚುವುದು.
೫) ಹರಿದಾಸ ದೀಕ್ಷೆ, ಅಂಕಿತಗಳ ಬಳಕೆ: ಉದಾಹರಣೆಗೆ – ಪುರಂದರವಿಟ್ಠಲ (ಪುರಂದರ ದಾಸರು), ವಿಜಯವಿಟ್ಠಲ (ವಿಜಯದಾಸರು) ಇತ್ಯಾದಿ ವಿಟ್ಠಲ ನಾಮಾಂಕಿತಗಳು; ಕಾಗಿನೆಲೆಯಾದಿಕೇಶವ (ಕನಕ ದಾಸರು), ಕೃಷ್ಣ (ವ್ಯಾಸರಾಜರು), ಹಯವದನ (ವಾದಿರಾಜರು), ವೇಣುಗೋಪಾಲ (ರಾಘವೇಂದ್ರರು).
೬) ಹೆಚ್ಚನವರು ಬ್ರಾಹ್ಮಣರು, ಆದರೆ ಎಲ್ಲರೂ ಅಲ್ಲ.
ಧನಿಕರು (ಪುರಂದರ ದಾಸರು), ಕಡು ಬಡವರು (ವಿಜಯ / ಗೋಪಾಲ ದಾಸರು)
ಉದ್ದಾಮ ಪಂಡಿತರು (ಜಗನ್ನಾಥ ದಾಸರು) ಅಥವಾ ವಿದ್ಯೆಯಿಲ್ಲದವರು (ಪ್ರಸನ್ನ ವೇಂಕಟ ದಾಸರು) ರೋಗಿ (ಮೋಹನ ದಾಸರು),

ಕಾಲಮಾನ:
ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ ಮುಖ್ಯವಾದುವು.

೧೩ ರಿಂದ ೧೫ನೆಯ ಶತಮಾನ:
ಅಚಲಾನಂದ ದಾಸರು ಮತ್ತು ನರಹರಿ ತೀರ್ಥರು ಮೊದಲ ಕನ್ನಡ ದಾಸಸಾಹಿತ್ಯದ ಹೆಸರುಗಳು.
ಶ್ರೀಪಾದರಾಜರು (ರಂಗವಿಠಲ) – ಕನ್ನಡ ಹಾಡುಗಳು ರಚನೆ ಮತ್ತು ದಿನನಿತ್ಯದ ಪೂಜೆಯಲ್ಲಿ ನೃತ್ಯ - ಸಂಗೀತ ಸಹಿತ ಹಾಡುಗಳ ಬಳಕೆಯನ್ನು ಆರಂಭಿಸಿದವರು.
ವ್ಯಾಸರಾಜರು (ಶ್ರೀಕೃಷ್ಣ): ವಿಜಯನಗರದ ಅರಸ ಕೃಷ್ಣದೇವರಾಯನ ಸಮಕಾಲೀನರು.
ವಾದಿರಾಜರು (ಹಯವದನ), ಪುರಂದರ ದಾಸರು, ಕನಕ ದಾಸರು (ಕಾಗಿನೆಲೆ ಆದಿಕೇಶವ), ವೈಕುಂಠ ದಾಸರು ಮುಂತಾದವರು.
೧೬ - ೧೭ನೆಯ ಶತಮಾನ:
ರಾಘವೇಂದ್ರ ತೀರ್ಥರು (ಧೀರವೇಣುಗೋಪಾಲ): ಪುರಂದರದಾಸರ ಕಾಲದ ನಂತರ ಸ್ವಲ್ಪ ಕಡಿಮೆಯಾಗಿದ್ದ ದಾಸಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು.
ವಿಜಯ ದಾಸರು (ವಿಜಯವಿಟ್ಠಲ), ಪ್ರಸನ್ನವೇಂಕಟ ದಾಸರು, ಹೆಳವನಕಟ್ಟೆ ಗಿರಿಯಮ್ಮ, ನರಸಿಂಹ ದಾಸರು, ಜಗನ್ನಾಥ ದಾಸರು, ಪಂಗನಾಮದ ತಿಮ್ಮಣ್ಣದಾಸರು, ಗೋಪಾಲದಾಸರು, ಮೋಹನದಾಸರು, ಮುಂತಾದವರು.
೧೮ ನೆಯ ಶತಮಾನದಿಂದ ಮುಂದೆ:
ಹಲವಾರು ದಾಸರುಗಳು – ಲಿಂಗಸೂಗೂರು ಯೋಗೇಂದ್ರ (ಪ್ರಾಣೇಶವಿಟ್ಠಲ), ಕರ್ಜಗಿ ದಾಸಪ್ಪ (ಶ್ರೀದವಿಟ್ಠಲ), ಗದ್ವಾಲ ಸುಬ್ಬಣ್ಣದಾಸರು (ಕೇಶವವಿಟ್ಠಲ), ಹುಂಡೇಕಾರದಾಸರು (ಶ್ರೀಶವಿಟ್ಠಲ), ಸುರಪುರದ ಭೀಮದಾಸರು (ಶ್ರೀಶಕೇಶವವಿಟ್ಠಲ), ಸಂತೆಬೆನ್ನೂರು ರಾಮಾಚಾರ್ಯರು (ಕಮಲಾಪತಿವಿಠಲ), ಗರ್ಗೆಶ್ವರಿ ಕೇಶವರಾಯರು (ಮಧ್ವೇಶವಿಠಲ), ಇನ್ನೂ ಹಲವಾರು ದಾಸರುಗಳು ಈ ಪರಂಪರೆಯನ್ನು ಮುಂದುವರೆಸಿದರು.

ಹರಿದಾಸ ಸಾಹಿತ್ಯ:
ಸಾಹಿತ್ಯ ರೂಪಗಳು – ವಚನ, ರಗಳೆ, ಚಂಪೂ, ಷಟ್ಪದಿ ಇತ್ಯಾದಿ ಛಂದೋಬದ್ಧ ರಚನೆಗಳು ಇದ್ದರೂ, ಸಂಗೀತವನ್ನು ಮುಖ್ಯವಾಗಿ ಇಟ್ಟುಕೊಂಡು ರಚಿಸಿದ ಸಾಹಿತ್ಯ ಕನ್ನಡದಲ್ಲಿ ಹರಿದಾಸ ಸಾಹಿತ್ಯ ಮೊದಲು.
ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ಭಕ್ತಿಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತಗೊಳಿಸುವುದು. ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.

ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ.

ದಾಸ ಸಾಹಿತ್ಯದ ಮೂಲ ತತ್ವ – ಧರ್ಮ – ಮೋಕ್ಷಗಳ ಪ್ರಚಾರ ನೆಲದ ಭಾಷೆಯಲ್ಲಿ ತಂದ ಕೆಲಸದಲ್ಲಿ ದಾಸರು ಮೊದಲಿನವರಲ್ಲ – ಬೌದ್ಧರು ಪಾಲಿಯಲ್ಲೂ, ಜೈನರು ಪ್ರಾಕೃತದಲ್ಲೂ, ಶರಣರು ಕನ್ನಡದಲ್ಲೂ ಆಗಲೇ ಶುರು ಮಾಡಿದ್ದ ಕಾರ್ಯವನ್ನೇ ಮುಂದುವರೆಸಿದವರು ಹರಿದಾಸರು. ಇವರಲ್ಲಿ ಅನೇಕರು ಸಂಸ್ಕೃತ ಪಂಡಿತರಾಗಿದ್ದೂ, ಗ್ರಂಥಗಳನ್ನು ರಚಿಸಿದ್ದೂ ಜನಸಾಮಾನ್ಯರಿಗೆ ತಲುಪಿಸುವುದಕ್ಕೋಸ್ಕರ ಕನ್ನಡವನ್ನು ಮಾಧ್ಯಮವಾಗಿಸಿಕೊಂಡು ರಚನೆಗಳನ್ನು ಮಾಡಿದರು.

ಈ ಮುಂಚೆ ಹೇಳಿದಂತೆ, ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆ ಇರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ. ಇದಲ್ಲದೇ ಕನಕದಾಸರ ಹರಿಭಕ್ತಿಸಾರ, ಮೋಹನತರಂಗಿಣಿ ಮತ್ತು ಜಗನ್ನಾಥದಾಸರ ಹರಿಕಥಾಮೃತಸಾರದಂತಹ ದೊಡ್ಡ ಕೃತಿಗಳೂ ಇವೆ. ಸುವ್ವಿಪದ, ಕೋಲಾಟದ ಪದ, ಜೋ ಜೋ ಕೊರವಂಜಿ ಪದಗಳಂತಹ ಜಾನಪದ ಸಾಹಿತ್ಯಿಕ ರಚನೆಗಳೂ ಇವೆ.

ಹರಿದಾಸ ಸಾಹಿತ್ಯ ಮತ್ತು ಕನ್ನಡ: (ಆರ್ ರಾಮಕೃಷ್ಣ – ದಾಸಸಾಹಿತ್ಯ ದರ್ಶನ – ed. ಎಚ್ಚೆಸ್ಕೆ)
ಹರಿದಾಸರ ಸಾಹಿತ್ಯದ ಮಾಧ್ಯಮ ಕನ್ನಡವಾಯಿತು, ಅದರಲ್ಲೂ ನಡುಗನ್ನಡವೇ ಮುಖ್ಯವಾದರೂ, ಹೊಸಗನ್ನಡದ ಬಳಕೆಯಿದೆ.

ಸಂಸ್ಕೃತವಿದಲ್ಲೆಂದು ಕುಹಕ ತಿ-
ರಸ್ಕರಿಸಲೇನಹುದು ಭಕ್ತಿಪು-
ರಸ್ಕರದಿ ಕೇಳ್ವರಿಗೆ ಒಲಿವನು ಪುಷ್ಕರಾಕ್ಷ ಸದಾ ||
ಅಂದಿದ್ದಾರೆ ಜಗನ್ನಾಥ ದಾಸರು.

ಶರಣರಂತೆ ದಾಸರೂ ಕನ್ನಡವನ್ನು ಬಳಸಿ ಬೆಳೆಸಿದರು. ಹಲವಾರು ತರಹದ ಪ್ರಯೋಗಗಳನ್ನು ದಾಸ ಸಾಹಿತ್ಯದಲ್ಲಿ ಕಾಣಬಹುದು:
೧) ಕನ್ನಡದ ಕುರುಹಾದ ವ್ಯಂಜನಾಂತ ಪದಗಳಿಗೆ ಸ್ವರಾಂತ್ಯದ ಬಳಕೆ – ನಾನ್ – ನಾನು, ಪೆಣ್ – ಹೆಣ್ಣು, ಪಾಲ್ – ಪಾಲು, ಕೇಳ್ – ಕೇಳು,

೨) ಪಕಾರ ಶಬ್ದಗಳು ಹಕಾರಗಳಾಗಿ ಬದಲಾವಣೆ: ಪಕ್ಕಿ – ಹಕ್ಕಿ, ಪೆಣ್ಣು – ಹೆಣ್ಣು

೩) ಹೆಚ್ಚಿನವರು ಉತ್ತರ ಕರ್ನಾಟಕದವರಾಗಿದ್ದರಿಂದ, ಉತ್ತರ ಕರ್ನಾಟಕದ ಭಾಷಾವೈಶಿಷ್ಟ್ಯ (dialect) ದಾಸರ ರಚನೆಗಳಲ್ಲಿ ಬಳಕೆಯಾಗುತ್ತದೆ. ಉದಾ. ಕಂಡೀರ್ಯಾ, ತಂದೀರ್ಯಾ ಇತ್ಯಾದಿ

೪) ಛಂದಸ್ಸಿಗನುಗುಣವಾಗಿ ಪದಗಳ ಬದಲಾವಣೆ – ಘನ್ನ, ವಿಟ್ಠಲನ್ನ ಇತ್ಯಾದಿ ಸಜಾತೀಯ ಒತ್ತಕ್ಷರಗಳ ಬಳಕೆ.

೫) ಇನ್ನು ಮುದ್ದುಕೃಷ್ಣನ ಬಾಲಲೀಲೆಗಳನ್ನು ಹೇಳುವಾಗ ಮುದ್ದು ಮಾತಿನ ಬಳಕೆ ಬೇಕೇಬೇಕಲ್ಲ? ಗುಮ್ಮ, ಬೂಚಿ, ಮಮ್ಮು, ಅಮ್ಮಿ, ತಾಚಿ, ಪಾಚಿಕೊ ಇತ್ಯಾದಿ ಪದಗಳ ಬಳಕೆ ಹೇರಳವಾಗಿ ಕಾಣುತ್ತವೆ.

೬) ಸಂಸ್ಕೃತ ಪದಗಳ ಬಳಕೆ ಹರಿದಾಸರ ಸಂಸ್ಕೃತ ಪಾಂಡಿತ್ಯವನ್ನು ತೋರುತ್ತವೆ. ಅಲ್ಲದೇ ಸಾಕಷ್ಟು ಪದಗಳ ತದ್ಭವಗಳ ಉಪಯೋಗವನ್ನೂ ಕಾಣುತ್ತೇವೆ: ಉದಾ – ಬ್ರಹ್ಮ – ಬೊಮ್ಮ, ಸರಸ್ವತಿ – ಸರಸತಿ, ಮುಖ – ಮೊಗ, ವಿನಾಯಕ – ಬೆನಕ ಇತ್ಯಾದಿ.

೭) ಗಡಿಪ್ರದೇಶದಲ್ಲಿ ಸಹಜವಾಗಿಯೇ ಕಂಡುಬರುವ ಬೇರೆ ಭಾಷೆಯ ಪದಗಳ ಬಳಕೆ: ಮರಾಠಿ – ಛಪ್ಪನ್ನ ದೇಶಗಳು, ಬತ್ತೀಸು ರಾಗಗಳು ಮತ್ತು ಉರ್ದು – ಫಕೀರ, ಭಂಗಿ (ಭಾಂಗ್), ಲುಂಗಿ ಇತ್ಯಾದಿ.

ಕನ್ನಡವು ಎಳೆದಂತೆ ಬೆಳೆವ, ಸುಲಲಿತ ಭಾಷೆಯೆಂಬುದನ್ನು ದಾಸ ಸಾಹಿತ್ಯ ಸಾಧಿಸಿ ತೋರಿಸಿಕೊಟ್ಟಿದೆ. ಛಂದೋಬದ್ಧವಾದ, ಮಧುರ ಶಬ್ದಗಳ ಜೋಡಣೆಯಿಂದ, ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಹರಿದಾಸ ಸಾಹಿತ್ಯದ ಶೈಲಿ:
ಭಾಷೆ – ಭಾವಗಳ ಸಮರಸ ಸಂಯೋಜನೆಯೇ ಶೈಲಿ, ಕಾವ್ಯಕ್ಕೆ ರಸವನ್ನು ತುಂಬುತ್ತದೆ. ಚಲುವಾದ ಭಾವನೆಗೆ ಚಲುವಾದ ಭಾಷೆಯೇ ಜೊತೆಯಾಗಬೇಕು. ಬರೆಯುವವರಿಗೆ ಭಾಷೆಯ ಮೇಲೆ ಸಮರ್ಪಕ ಹಿಡಿತ ಬೇಕು, ಇಲ್ಲದಿದ್ದರೆ ಮನದ ಆಲೋಚನೆಯನ್ನು ಅಂದುಕೊಂಡಂತೆ ಹಂಚಲಾಗದು. ಎಲ್ಲ ದಾಸರೂ ಈ ವಿಷಯದಲ್ಲಿ ಪಾಂಡಿತ್ಯ ಇದ್ದವರೆಂದೇ ಹೇಳಬಹುದು. ಆದಿಪ್ರಾಸ (ಎರಡನೆಯ ಅಕ್ಷರ ಪ್ರಾಸ), ಅಂತ್ಯಪ್ರಾಸ, ಮತ್ತೂ ಮಧ್ಯಪ್ರಾಸಗಳು ರಚನೆಯ ಅಂದವನ್ನು ಹೆಚ್ಚಿಸುತ್ತವೆ. ಸಂಗೀತದ ಸಹಕಾರವೂ ಸೇರಿ ರಸಮಯವಾಗುತ್ತವೆ.

ಈಶ ನಿನ್ನ ಚರಣಭಜನೆ ಆಶೆಯಿಂದ ಮಾಡುವೇನು
ದೋಷರಾಶಿ ನಾಶ ಮಾಡೊ ಶ್ರೀಶ ಕೇಶವ ||

ಇನ್ನು ಭಾವಗಳು:
ಈಶ್ವರನನ್ನು ಬರಿಯ ಬುದ್ಧಿಗಮ್ಯನೆಂದು ದಾಸರು ತಿಳಿಯದೇ, ಅನುಭಾವದ ಮಾರ್ಗವನ್ನು ಹಿಡಿದರು. ಹೃದಯದಲ್ಲಿ ಉಕ್ಕಿಬಂದ ಭಾವನೆಗಳನ್ನು ನಿಸ್ಸಂಕೋಚವಾಗಿ ಹಾಡಿದರು. ಇದು ದಾಸರ ಹಾಡುಗಳ ವಿಶಿಷ್ಟವಾದ ಲಕ್ಷಣ. ಇಲ್ಲಿ ಭಕ್ತ - ಭಗವಂತನ ಅನಿರ್ವಚನೀಯ ಸಂಬಂಧ ವ್ಯಕ್ತವಾಗುತ್ತದೆ. ದೇವರು ದಾಸರಿಗೆ ತಾಯಿ-ತಂದೆಯೂ ಹೌದು, ಮಿತ್ರನೂ ಹೌದು, ಒಂದು ರೀತಿಯಲ್ಲಿ ಒಡೆಯನೂ ಹೌದು. ಅವನನ್ನು ಗೌರವಿಸಲು, ಮುದ್ದು ಮಾಡಲು, ಹೊಗಳಲು ಅಷ್ಟೇ ಅಲ್ಲ ಬೈಯಲೂ ಹಿಂಜರಿಯಲಾರರು.

ಕೃಷ್ಣನ ಬಾಲಲೀಲೆಗಳು, ಜೀವನ, ಉಪದೇಶ, ತಾಯಿಯ ಮಮತೆ, ಮಗುವಿನ ಆಟ (ಸ್ವಭಾವೋಕ್ತಿ) – ತಾನೇ ತಾಯಾಗಿ, ಮಗುವಾಗಿ, ಪ್ರಿಯೆಯಾಗಿ, ಕಾಡಿಸಿಕೊಂಡ ಗೋಪಿಯಾಗಿ, ದಾಸನಾಗಿ ನಿಂತು ಬರೆದ ಪದ್ಯಗಳು.
ಶೃಂಗಾರ – ಕೃಷ್ಣನ ರಾಸಲೀಲೆಗಳ ವಿವರವುಳ್ಳ ಗೀತೆಗಳಲ್ಲಿ ಇದು ಮುಖ್ಯ. ಮೆಲ್ಲ ಮೆಲ್ಲನೇ ಬಂದನೇ ಗೋಪೆಮ್ಮ ಕೇಳೇ.. ಗಲ್ಲಕೆ ಮುದ್ದು ಕೊಟ್ಟು ನಿಲ್ಲದೆ ಓಡಿಪೋದ
ದೇವರ ಅವತಾರ ಕ್ರಿಯೆಗಳು- ಬಾರೆ ಗೋಪಿ ಬಾಲಯ್ಯ ಅಳುತಾನೆ ಅನ್ನುವ ಅನೇಕ ಕೃತಿಗಳಲ್ಲಿ ದಶಾವತಾರದ ವರ್ಣನೆ ಕಂಡುಬರುತ್ತದೆ.
ಆಶ್ಚರ್ಯ, ಪ್ರಶ್ನೆ: ಏಕೆ ಮನವಿತ್ತೆ ಲಲಿತಾಂಗಿ ಎಂದು ಲಕ್ಷ್ಮಿಯನ್ನು ಕಾರಣ ಕೇಳುತ್ತಾರೆ.
ದೈನ್ಯತೆ, ಸಮರ್ಪಣಾ ಭಾವಗಳು – ದಾಸ ಎಂದರೇ ಸಂಪೂರ್ಣ ಸಮರ್ಪಣೆಯನ್ನು ನಂಬಿದವನು, ಶರಣಾಗತ ಅನ್ನುವುದನ್ನು ಪ್ರತಿಬಿಂಬಿಸುವ ಪದಗಳು. ಉದಾ: ನಿನ್ನನ್ನೆ ನಂಬಿದೆ ಕೃಷ್ಣಾ, ಕಂಡು ಕಂಡು ನೀ ಎನ್ನ ಕೈಬಿಡುವರೇ ಕೃಷ್ಣಾ (ವಾದಿರಾಜರು); ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವೈರಾಗ್ಯ – ನೀರೊಳಗಿನ ಕಮಲದೆಲೆಯಂತೆ ಬದುಕಬೇಕೆಂಬುವ ಆಶಯ ಕಾಣುತ್ತದೆ. ಉದಾ: ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ (ಪುರಂದರ ದಾಸರು); ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ
ಸಾಮಾಜಿಕ ಅನ್ಯಾಯಗಳ / ಕಂದಾಚಾರಗಳ ವಿರುದ್ಧ ಎತ್ತಿದ ಧ್ವನಿ; ಇದರಲ್ಲಿ ಸುತ್ತಲೂ ಸಮಾಜದಲ್ಲಿ ಕಂಡುಬಂದ ಢಂಬಾಚಾರಗಳ ಬಗ್ಗೆ ದಾಸರಿಗಿದ್ದ ದೃಷ್ಟಿಯನ್ನು ಕಾಣಬಹುದು – ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ …; ಉದರ ವೈರಾಗ್ಯವಿದು; ನಿಂದಕರಿರಬೇಕು ಊರೊಳಗೆ
ನಿಂದಾ ಸ್ತುತಿ – ದಾಸರು ತಮ್ಮ frustration ಅನ್ನು ದೇವರಿಗೆ ಬೈದು ತೀರಿಸಿಕೊಂಡರು ಅನ್ನುವಂತೆ ಮೇಲುನೋಟಕ್ಕೆ ಕಂಡರೂ, ಈ ಪದಗಳು ಸ್ತುತಿಗಳೇ. ಉದಾ: ಆರು ಬದುಕಿದರಯ್ಯ ಹರಿ ನಿನ್ನ ನಂಬಿ, ಕರುಣಾಕರ ನೀನೆಂಬುವದ್ಯಾತಕೋ ಭರವಸೆಯಿಲ್ಲೆನಗೆ
ಹಾಸ್ಯ / ವಿಡಂಬನೆ: ಹಾಸ್ಯದ ಮೂಲಕ ದೇವರ ಸ್ತುತಿ ಮಾಡುವ ಪದಗಳು. ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ, ಶೃಂಗಾರ ಪುರುಷರು ಬಹು ಮಂದಿಯಿರಲು; ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ
ಚಿತ್ರಕವಿತೆ – descriptive poetry – ಆಗಿಹೋದ ಘಟನೆಗಳನ್ನು ಕಣ್ಣಮುಂದೆ ಕಟ್ಟುವಂತೆ ಬಣ್ಣಿಸುವುದು ಅದು ದಾಸರ ಪದಗಳ ಒಂದು ಸ್ಟ್ರಾಂಗ್ ಪಾಯಿಂಟ್ ಅನ್ನುವುದರಲ್ಲಿ ಅನುಮಾನವೇ ಇಲ್ಲ.
ಗ್ರಾಮ್ಯ, ಬಳಕೆಯ ಭಾಷೆಯ ಬಳಕೆ – ಕನಕ ದಾಸರ ದೇವಿ ನಮ್ಮ ದ್ಯಾವರು ಬಂದಾನ ಬನ್ನೀರೆ ನೋಡ ಬನ್ನೀರೆ (ಡೊಳ್ಳಿನ ಪದದ ಧಾಟಿಯಲ್ಲಿ)
ಗಾದೆಮಾತು / ನುಡಿಗಟ್ಟುಗಳ ಬಳಕೆ: ರೊಕ್ಕ ಎರಡಕ್ಕೂ ದುಃಖ ಕಾಣಕ್ಕ; ಕುನ್ನಿ ಕಚ್ಚಿದರಾನೆ ಅಳುಕುವುದೇ
ತತ್ತ್ವಪದಗಳು – ಮುಖ್ಯವಾಗಿ ಕನಕದಾಸರ ಮುಂಡಿಗೆಗಳು ಮತ್ತು ಕೃತಿಗಳು ಜಟಿಲವಾದುವು – ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಇತ್ಯಾದಿ.

ಈಗಲೂ ಖಂಡಿತ ಒಪ್ಪುವ ಮಾತುಗಳನ್ನು ಹೇಳಿದ್ದಾರೆ –
ಪಿತ ಮಾತೆ ಸತಿಸುತರ ಅಗಲಿ ಇರಬೇಡ
ಯತಿಯಾಗಿ ಆ..ರಣ್ಯ ಚರಿಸಲು ಬೇಡ
ವ್ರತನೇಮವ.. ಮಾಡಿ ದಣಿಯಲೂ ಬೇಡ
ಸತಿಯಿಲ್ಲದವಗೆ ಸದ್ಗತಿಯಿಲ್ಲವೋ ಮೂಢ (ಪುರಂದರ ದಾಸರು)

ಒಳ್ಳೆಯ ಕೆಲಸಕ್ಕೆ ಕಾರಣವಾದದ್ದಕ್ಕೆ “ಹೆಂಡತಿ ಸಂತತಿ ಸಾವಿರವಾಗಲಿ” ಎಂದು ಹೊಗಳಿದ್ದಾರೆ.

ಹರಿದಾಸ ಸಾಹಿತ್ಯ ಮತ್ತು ಸಂಗೀತ:
ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ,
ಕುಳಿತು ಪಾಡಲು ನಿಲುವ, ನಿಂತರೆ ನಲಿವ,
ನಲಿದರೆ ಒಲಿವೆ ನಾ ನಿಮಗೆಂಬ | (ಹರಿಕಥಾಮೃತಸಾರ - ಜಗನ್ನಾಥ ದಾಸರು)

ಕೀರ್ತನೆಗಳು ಸಂಗೀತಪ್ರಧಾನವಾದ ರಚನೆಗಳು, ದೇವರು ಸಂಗೀತ – ನೃತ್ಯಗಳಿಗೆ ಒಲಿಯುವನೆಂಬ ನಂಬುಗೆಯಿಂದ ಬೆಳೆದು ಬಂದ ಸಾಹಿತ್ಯ. ಹರಿದಾಸರ ಜೀವನಶೈಲಿಯೂ ಇದಕ್ಕೆ ಅನುಗುಣವಾಗಿಯೇ ಇತ್ತು (ಮಧುಕರ ವೃತ್ತಿ ಎನ್ನದು – ಪುರಂದರ ದಾಸರು).

ಇಲ್ಲಿ ನೆನಪಿಸಿಕೊಳ್ಳಬೇಕಾದ ಹೆಸರು ಶ್ರೀಪಾದರಾಜರದ್ದು. ಇವರು ಕನ್ನಡದಲ್ಲಿ ಸರಳ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಸಂಗೀತಕ್ಕೆ ಅಳವಡಿಸಿ ದಿನನಿತ್ಯದ ಪೂಜೆಯ ವೇಳೆಯಲ್ಲಿ ಬಳಕೆಯಲ್ಲಿ ತಂದರು ಸಹ.

ತತ್ತ್ವೋಪದೇಶ, ನೈತಿಕ ಉಪದೇಶಗಳಿಗೆ ಮಾಧ್ಯಮವಾಗಿ ಸಂಗೀತವನ್ನು ಹೊರತಂದ ಶ್ರೇಯ ಪುರಂದರ ದಾಸರದ್ದು. ಕಾವ್ಯವಾದರೆ ಪಂಡಿತರಲ್ಲಿ ಮಾತ್ರ ಉಳಿದು ಹೋಗಬಹುದು ಅನ್ನುವ ಯೋಚನೆಯಿಂದ ಸಂಗೀತವನ್ನು ಆರಿಸಿಕೊಂಡರು ಅನ್ನವುದು ಸರಿಯೇ. ಹಾಡುಗಳು ಬಾಯಿಂದ ಬಾಯಿಗೆ ಕಲಿತು ಬೆಳೆಯುತ್ತವೆ, ಉಳಿಯುತ್ತವೆ ಅನ್ನುವುದೇ ಅವರ ವಿಚಾರವಾಗಿತ್ತು. ದಾಸರ ಗೆಜ್ಜೆಕಟ್ಟಿಕೊಂಡು ಕುಣಿಯುವ ಜೀವನ ಶೈಲಿಗೆ, ಪ್ರಾಸಬದ್ಧ ಸಂಗೀತಮಯ ಹಾಡುಗಳು ಸಮರ್ಪಕ ಜೊತೆಯಾದವು.

ತಾಳ ಬೇಕು ತಕ್ಕ ಮೇಳ ಬೇಕು…
ಯತಿಪ್ರಾಸವಿರಬೇಕು, ಗತಿಗೆ ನಿಲ್ಲಿಸಬೇಕು,
ರತಿಪತಿಯ ಪಿತನೊಳು ಅತಿಪ್ರೇಮವಿರಬೇಕು.. (ಗುರುಮಧ್ವಪತಿ)

ಸಂಗೀತಕ್ಕೆ ಅಳವಡಿಸಬೇಕೆಂದರೆ, ಛಂದಸ್ಸುಗಳ ಬದ್ಧತೆ ಬೇಕು. ಆದಿ, ಅಂತ್ಯ ಅಥವಾ ಮಧ್ಯ ಪ್ರಾಸಗಳ ಬಳಕೆಯಿರಬೇಕು. ದ್ವಿಪದಿ, ಚೌಪದಿಗಳ, ಷಟ್ಪದಿಯ ಬಳಕೆ ಕಾವ್ಯದ ಅಂದವನ್ನು ಹೆಚ್ಚಿಸುತ್ತವೆ. ದಾಸರ ರಚನೆಗಳು ಪಲ್ಲವಿ, ಅನುಪಲ್ಲವಿ ಹಾಗೂ ಚರಣಗಳು ಈ ಕ್ರಮದಲ್ಲಿದ್ದು, ಪಲ್ಲವಿ ತತ್ತ್ವವನ್ನೂ, ಅನುಪಲ್ಲವಿ ವಿವರಣೆಯನ್ನೂ ಕೊಟ್ಟರೆ, ಚರಣಗಳು ಉದಾಹರಣೆಗಳೊಂದಿಗೆ ಮೇಲಿನದನ್ನು ಸಮರ್ಥಿಸುತ್ತವೆ ಅನ್ನಬಹುದು.

ಸಂಗೀತಾಭ್ಯಾಸಿಗಳಿಗೆ ಅನುಕೂಲವಾಗುವಂತೆ ಗೀತೆಗಳನ್ನು ರೂಢಿಗೆ ತಂದ ಶ್ರೇಯಸ್ಸು ಪುರಂದರ ದಾಸರಿಗೆ ಸಲ್ಲುತ್ತದೆ. ಲಂಬೋದರ ಲಕುಮಿಕರ ಅನ್ನುವ ರಚನೆಯಿಂದಲೇ ಅಲ್ಲವೆ ಪ್ರತಿಯೊಬ್ಬ ಸಂಗೀತಾಭ್ಯಾಸಿ ಆರಂಭಿಸುವುದು?
ಜೊತೆಯಲ್ಲಿ ಪುರಂದರ ದಾಸರು ಆಗ ಬಳಕೆಯಲ್ಲಿದ್ದ ತಾಳಗಳನ್ನು ಸರಳೀಕರಿಸಿ, ಸಪ್ತತಾಳಗಳನ್ನು ಬಳಕೆಗೆ ತಂದರು. ಖಂಡಛಾಪು, ಮಿಶ್ರಛಾಪು ಈ ಎರಡು ಛಾಪುತಾಳದ ವಿಧಗಳಲ್ಲಿ ಅನೇಕ ಕೀರ್ತನೆಗಳು ಇವೆ. ಮಾಯಾಮಾಳವ ಗೌಳ ರಾಗವನ್ನು ಆಧರಿಸಿ ಸರಳೀ ಸ್ವರಗಳು ಮತ್ತು ಜಂಟಿ ಸ್ವರಗಳನ್ನು ಹಾಕಿಕೊಟ್ಟು, ಹೊಸತಾಗಿ ಕಲಿಯುವವರಿಗೆ ಸುಲಭವಾಗಿಸಿದ ಶ್ರೇಯವೂ ಪುರಂದರ ದಾಸರದ್ದೇ ಅನ್ನಲಾಗಿದೆ. ಪುರಂದರ ದಾಸರ ಈ ಕಾರ್ಯದಿಂದಲೇ, ಅವರನ್ನು "ಕರ್ನಾಟಕ ಸಂಗೀತದ ಪಿತಾಮಹ" ಅನ್ನುವುದು ಸಹಜವೇ.

ಅನೇಕ ರಾಗಗಳು ಆಗ ಪ್ರಚಲಿತವಾಗಿ ಇದ್ದಿರಬಹುದಾದರೂ, ದಾಸರು ಜಾನಪದ ಮೂಲವಾದ ರಾಗಗಳನ್ನು ತಮ್ಮ ಕೀರ್ತನೆಗಳಿಗೆ ಬಳಸಿಕೊಂಡರು. ಅಲ್ಲಿ ಹೆಸರಿಸಿದ ಈ ರಾಗಗಳ ಸಂಖ್ಯೆ ೧೦೦ನ್ನು ಮೀರಲಿಕ್ಕಿಲ್ಲ; ಇದಕ್ಕೆ ಕಾರಣ ರಾಗ ಕ್ಲಿಷ್ಟವಾದರೆ ಜನಸಾಮಾನ್ಯರ ಬಾಯಲ್ಲಿ ಹಾಡು ಉಳಿಯಲಿಕ್ಕಿಲ್ಲ ಅನ್ನುವುದಿರಬಹುದು. ಈಗೀಗ ವಿದ್ವಾಂಸರು ಹತ್ತು ರಾಗಗಳಲ್ಲಿ ಒಂದೇ ಕೃತಿಯನ್ನು ಹಾಡುವುದು ಕಂಡುಬರುತ್ತದೆ. ಅವು ಮೆಚ್ಚುಗೆಯನ್ನೂ ಗಳಿಸುತ್ತವೆ.

ಗೀತ – ವಾದ್ಯಗಳೊಂದಿಗೆ, ನೃತ್ಯವೂ ಸಂಗೀತದ ಒಂದು ಅಂಗವಾಗಿಯೇ ಬೆಳೆದುಬಂದಿತ್ತಾದರೂ, ಮುಂದೆ ನೃತ್ಯ – ಸಂಗೀತಗಳು ಬೇರೆಯಾದವು ಅನ್ನುವುದು ವಿದ್ವಾಂಸರ ಅಭಿಪ್ರಾಯ. ದಾಸರ ರಚನೆಗಳಲ್ಲಿ ಇರುವ ಬಾಲಕೃಷ್ಣನ ಲೀಲೆಗಳು ಮುಖ್ಯವಾಗಿ ನೃತ್ಯಕ್ಕೆ ತಕ್ಕ ಸಾಮಗ್ರಿಯನ್ನು ಒದಗಿಸುತ್ತವೆ. ದಾಸರುಗಳೇ ಗೆಜ್ಜೆಕಟ್ಟಿಕೊಂಡು, ಕುಣಿದು ಹಾಡಿ ಹಂಚಿದರು. ಹಾಗಾಗಿ ನೃತ್ಯ ಆ ಕೀರ್ತನೆಗಳ ಮೂಲ ಉದ್ದೇಶವಲ್ಲದಿದ್ದರೂ, ಗೀತ – ವಾದ್ಯಗಳ ಜೊತೆಗೂಡಿದಾಗ ಕೀರ್ತನೆಗಳ ಭಾವ ಸಶಕ್ತವಾಗಿ ತೋರಿ, ಪರಿಣಾಮಕಾರಿಯಾಯಿತು.

ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ . ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು

- ಲಕ್ಷ್ಮೀನಾರಾಯಣ ಗುಡೂರ್

***************

(ಈ ಲೇಖನ ಸ್ವಲ್ಪ ಉದ್ದವಾಯಿತೇನೊ ಅನ್ನಿಸಿದರೆ, ಕ್ಷಮೆಯಿರಲಿ. ವಿಷಯದ ಕಾರಣದಿಂದ ಅಷ್ಟು ಸಾಲುಗಳು ಬೇಕಾದವು; ಅದರಲ್ಲೂ ನಾನು ಬರಿಯ ಸಾಹಿತ್ಯ-ಸಂಗೀತಗಳ ಬಗ್ಗೆ ಮಾತ್ರ ಬರೆದಿರುವುದು – ಲಕ್ಷ್ಮೀನಾರಾಯಣ)

ಹೆಚ್ಚಿನ ಓದಿಗೆ:
ಈ ಕೆಳಗಿನ ಗ್ರಂಥಗಳೆಲ್ಲವೂ ಉಚಿತವಾಗಿ archive.org ಯಲ್ಲಿ ಲಭ್ಯವಿವೆ.
೧. ದಾಸ ಸಾಹಿತ್ಯ - ಸಂ: ದಿ. ವಿ ಸೀತಾರಾಮಯ್ಯ ಮತ್ತು ಪ್ರೊ. ಜಿ ವೆಂಕಟಸುಬ್ಬಯ್ಯ
೨. ದಾಸ ಸಾಹಿತ್ಯ ದರ್ಶನ - ಸಂ: ಎಚ್ಚೆಸ್ಕೆ
೩. ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು - ಡಾ. ಆರ್ ಸುನಂದಮ್ಮ
೪. ದಾಸ ಸಾಹಿತ್ಯ ಸೌರಭ - ಸಂ: ಶ್ರೀನಿವಾಸ ಸು ಮಠದ
೫. ದಾಸ ಸಾಹಿತ್ಯ ಸುಧೆ - ಸಂ: ಟಿ ಎನ್ ನಾಗರತ್ನ
೬. ಕರ್ನಾಟಕದ ಹರಿದಾಸರು - ಡಾ. ಹೆಚ್ ಕೆ ವೇದವ್ಯಾಸಾಚಾರ್ಯ
*********************************************************************************

ಅನಿವಾಸಿಗೆ ಐದು ವರ್ಷ ; ಹೊಸ ಚಿಗುರು ಹೊಸ ಬೇರು-ಡಾ. ಜಿ. ಎಸ್. ಶಿವಪ್ರಸಾದ್

ಅನಿವಾಸಿ ಶುರುವಾದ್ದು ಬರೀ 2 ಆಯಾಮಗಳಲ್ಲಿ. ಕಪ್ಪು-ಬಿಳುಪು ಆವೃತ್ತಿಯ ಬರಹದ ರೂಪದಲ್ಲಿ.ಆದರೆ ಅದಕ್ಕೆ ತಟ್ಟನೆ ಸಾಂಸ್ಕೃತಿಕತೆಯ 4 ಡಿ ಆಯಾಮ ದೊರೆತದ್ದು  ದೊಡ್ಡಗುಣಗಳ ಒಬ್ಬ ವ್ಯಕ್ತಿಯಿಂದ. ಸಜ್ಜನಿಕೆ, ಸರಳತೆ, ಸಂಭಾವಿತ ನಡವಳಿಕೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಬದ್ದತೆ, ಅತ್ಯಂತ ಉದಾತ್ತ ರೀತಿಯಲ್ಲಿ ವಿಚಾರಗಳನ್ನು ಸಂಬಾಳಿಸುವಿಕೆ, ನಿರಾಯಾಸವಾಗಿ ಕೆಲಸ ಮಾಡವ ಸ್ವಭಾವ ಈ ಎಲ್ಲ ಗುಣಗಳೂ ಇರುವ ವ್ಯಕ್ತಿಯಾದ ಡಾ. ಜಿ.ಎಸ್.ಶಿವಪ್ರಸಾದ್ ರಿಂದ.ಇವರಿಲ್ಲದ ಅನಿವಾಸಿ ಹಲವಾರು ರೀತಿಯಲ್ಲಿ ಲಘುವಾಗಿಬಿಡುತ್ತದೆ.

              ಡಾ. ಜಿ.ಎಸ್.ಶಿವಪ್ರಸಾದ್

ನಮ್ಮ ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರ ಸುಪುತ್ರರಾದ ಇವರು ಶೆಫೀಲ್ಡ್ ನಲ್ಲಿ ಮಕ್ಕಳ ತಘ್ನರು. ಕನ್ನಡ ಮತ್ತು ಇಂಗ್ಲೀಷು ಭಾಷೆಗಳಲ್ಲಿ ಒತ್ತಟ್ಟಿಗೆ ಬರೆಯಬಲ್ಲವರು. ಸಾಹಿತ್ಯದ ವಾತಾವರಣದಲ್ಲಿಯೇ ಬೆಳದ ಇವರ ಸಂಪರ್ಕಗಳ ಫಲವಾಗಿ ಕನ್ನಡ ಬಳಗದ ವೇದಿಕೆಯಲ್ಲಿ ಸಾಹಿತ್ಯ ಹಾಸು ಹೊಕ್ಕಿತು. ಅನಿವಾಸಿ ಸಾಹಿತ್ಯ ಕಮ್ಮಟಗಳು ನಿಯಮಿತವಾಗಿ ನಡೆದವು.ಕಳೆದ ಐದು ವರ್ಷಗಳ ಕಾಲ ಇವರು ಕನ್ನಡ ಬಳಗದ ಸೆಕ್ರೆಟರಿಯಾಗಿದ್ದ ಕಾರಣ ಅನಿವಾಸಿಗೆ ಕನ್ನಡ ಬಳಗದ ವೇದಿಕೆ ದೊರೆಯಿತು. ಕನ್ನಡ ಬಳಗಕ್ಕೆ ಅನಿವಾಸಿಯ ಪ್ರಬುದ್ಧ  ಸಾಂಗತ್ಯ ಸಿಕ್ಕಿತು.ಇದನ್ನು ತಕರಾರಿಲ್ಲದೆ ಒಪ್ಪಿಕೊಂಡ  ಕಳೆದ ಐದು ವರ್ಷಗಳ KBUK ಯ ಅಧ್ಯಕ್ಷರಿಗೆ ಮಿಕ್ಕೆಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರುಗಳಿಗೆ ಮತ್ತು ಇತರೆ ಎಲ್ಲ ಸಾಹತ್ಯಾಸಕ್ತರಿಗೆ ಕೂಡ ಅನಿವಾಸಿ ಚಿರಋಣಿ.ಈ ಬೆಂಬಲ ಮುಂದುವರೆಯಲೆಂದು ಆಶಿಸೋಣ.

ಹಾಗಿದ್ದು ಅನಿವಾಸಿಗೆ ತನ್ನದೇ ಆದ  ಸ್ವತಂತ್ರ ಇರುವಿದೆ. ಅಕಸ್ಮಿಕ ಒಂದು ಸಂಸ್ಥೆಯ ವೇದಿಕೆ ದೊರೆಯದಿದ್ದರೂ ತನ್ನ ಆಸಕ್ತಿಗಳನ್ನು ಮುಂದುವರೆಸಲು ತನ್ನದೇ ಜಾಲಜಗುಲಿಯಿದೆ. ಹಣಕಾಸಿನ ಸಂಬಂಧ ಎಂದಿಗೂ ಇಲ್ಲದ ಕಾರಣ ತಾನಾಗಿ ಮುಂದುವರೆಯಬಲ್ಲ ದ್ರವ್ಯಾತ್ಮಕ ಗುಣಗಳವೆ.  ಆದರೆ, ಯಾರಾದರೂ ಆಯೋಜಿಸಲಿ,ನಾವು ಅತಿಥಿಗಳಂತೆ ಹೋಗೋಣ ಎನ್ನುವ ಜಡತ್ವವನ್ನು ಬಿಟ್ಟು  ಸಾಹಿತ್ಯ ಕಮ್ಮಟಗಳನ್ನು ಆಯೋಜಿಸಲು ನಾವೆಲ್ಲ ನೆರವಾಗೋಣ.ಅನಿವಾಸಿಯನ್ನು ಮುಂದುವರಸಿಕೊಂಡು ಹೋಗಬಲ್ಲ ಮತ್ತು ಅದಕ್ಕಾಗಿ ಪ್ರಯತ್ನಪಡುವ ಆತ್ಮಗಳಿರುವುದು ಮುಖ್ಯ. ಕಳೆದ ಐದು ವರ್ಷಗಳಲ್ಲಿ ಪ್ರಸಾದರು ಆಯೋಜಿಸಿದ 10 ಕ್ಕೂ ಹೆಚ್ಚು ಸಾಹಿತ್ಯ ಕಮ್ಮಟಗಳ ಬಗ್ಗೆ ಕೆಳಗಿನ ಲೇಖನದಲ್ಲಿ ಅವರು ಬರೆದಿದ್ದಾರೆ.ಅನಿವಾಸಿಯ ಐದು ವರ್ಷಗಳ ಪೂರ್ವಾವಲೋಕನದ ಐದು ಲೇಖನಗಳ ಸರಣಿಯಲ್ಲಿ ಇದು ಕೊನೆಯದು.

ತಾನಿರುವ ಕಡೆಯೆಲ್ಲ ಸಾಹಿತ್ಯವನ್ನ ಸಿಂಪಡಿಸಬಲ್ಲ ಮನಸ್ಸು, ಧ್ಯೇಯ ಇರುವ ಪ್ರಸಾದರ ಕಾರಣ ಅನಿವಾಸಿಯ ಎಲ್ಲ ಬಣ್ಣಗಳಿಗೂ ಅರ್ಥ ಬಂದಿದೆ. ಹೆಮ್ಮೆ ಮತ್ತು ಆತ್ಮ ವಿಶ್ವಾಸ ಮೈ ದುಂಬಿದೆ.  ಅನಿವಾಸಿಯ ಎಲ್ಲ ಹಂತಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಉನ್ನತ ಆಶಯಗಳನ್ನು ಉಳ್ಳ ಶಿವಪ್ರಸಾದರು ”ಇಂಗ್ಲೆಂಡಿನಲ್ಲಿ ಕನ್ನಡಿಗ’ ಎನ್ನುವ ಕವನ ಸಂಕಲನ,  ’ದಕ್ಷಿಣ ಅಮೆರಿಕಾ-ಒಂದು ಸುತ್ತು ’ ಎನ್ನುವ ಪ್ರವಾಸ ಕಥನವನ್ನು ಬರೆದಿದ್ದಾರೆ.ಮೂರನೇ ಪುಸ್ತಕದ ತಯಾರಿಯಲ್ಲಿರುವ ಪ್ರಸಾದರ  ಮುಂದಿನ ಎಲ್ಲ ಯೋಜನೆಗಳಿಗೆ ಶುಭ ಹಾರೈಸೋಣ- ಡಾ.ಪ್ರೇಮಲತ ಬಿ.

ಅನಿವಾಸಿಗೆ ಐದು ವರ್ಷ ; ಹೊಸ ಚಿಗುರು ಹೊಸ ಬೇರು

ನಮ್ಮ ನೆಚ್ಚಿನ ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ಐದು ವಸಂತ ಋತುಗಳನ್ನ ಕಂಡಿದೆ. ನಾವು ನೆಟ್ಟ ಈ ‘ಸಾಂಸ್ಕೃತಿಕ ಸಸಿ’ ಹೆಮ್ಮರವಾಗಿ ಬೆಳೆಯದಿದ್ದರೂ ನಾಲ್ಕಾರು ಹೊಸ ಚಿಗುರುಗಳು ಮೂಡಿ ಕೆಲವು ಹೂಗಳನ್ನು ನೀಡಬಹುದೆಂಬ ಭರವಸೆಯಲ್ಲಿ ನೀರೆರೆದಿದ್ದೇವೆ. ನಮ್ಮ ಹೊಸ ಬೇರುಗಳು ಇನ್ನೂ ಆಳಕ್ಕೆ ಇಳಿಯಬೇಕಾಗಿದೆ. ಯು. ಕೆ. ಕನ್ನಡ ಬಳಗದ ಆಶ್ರಯದಲ್ಲಿ ನಮ್ಮ ವೇದಿಕೆಯನ್ನು ಪ್ರಾರಂಭಿಸಿದ್ದು, ನಮ್ಮ ಸಾಂಸ್ಕೃತಿಕ  ಮತ್ತು ಸಾಹಿತ್ಯ ಕಾರ್ಯಕ್ರಮಗಳನ್ನು ಕನ್ನಡ ಬಳಗದ ಯುಗಾದಿ ಮತ್ತು ದೀಪಾವಳಿ ಹಬ್ಬದಾಚರಣೆಯ ಸಮಾರಂಭಗಳಲ್ಲಿ ನಡೆಸಿಕೊಂಡು ಬಂದಿದ್ದೇವೆ.  ಈ ಸಾಹಿತ್ಯ ಕಾರ್ಯಕ್ರಮಗಳು ಕನ್ನಡ ಬಳಗಕ್ಕೆ ಬೇರೊಂದು ಆಯಾಮವನ್ನು ತಂದುಕೊಟ್ಟಿದೆ ಎಂಬುದು ಕೆಲವು ಹಿರಿಯ ಸದಸ್ಯರ ಅಭಿಪ್ರಾಯ.  ಮನೋರಂಜನೆ ಮತ್ತು ಸಾಂಸ್ಕ್ಕತಿಕ ಕಾರ್ಯಕ್ರಮಗಳು ಪ್ರಧಾನವಾಗಿದ್ದ ಕನ್ನಡ ಬಳಗದ ಸಮಾರಂಭದಲ್ಲಿ  ಸಾಹಿತ್ಯ ವಿಚಾರ ಸಂಕಿರಣಗಳನ್ನು ತಂದು ಭಾಷೆ ಮತ್ತು ಸಾಹಿತ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು  ಈ ವಿಚಾರ ವೇದಿಕೆಯ ಉದ್ದೇಶವಾಗಿತ್ತು. ಅದು ಇಲ್ಲಿಯವರೆಗೂ ಯಶಸ್ವಿಯಾಗಿದೆ ಎನ್ನಬಹುದು.

‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ನಡೆದು ಬಂದ ದಾರಿಯನ್ನು ಶ್ರೀವತ್ಸ ದೇಸಾಯಿಯವರು ಈಗಾಗಲೇ ತಿಳಿಸಿದ್ದಾರೆ. ಇನ್ನೊಂದು ಮುಖ್ಯವಾದ ಹಿನ್ನೆಲೆ ಸಂಗತಿಯಂದರೆ, ಕನ್ನಡ ಬಳಗ ಯು.ಕೆ ಯ ಮೂವತ್ತನೇ ವಾರ್ಷಿಕೋತ್ಸವದ  ಸಮಯದಲ್ಲಿ (ಯುಗಾದಿ ೨೦೧೨) ಒಂದು ಸ್ಮರಣ ಸಂಚಿಕೆಯನ್ನು ತರಲಾಯಿತು. ಅಲ್ಲಿ ಹಲವಾರು ಉತ್ಸಾಹಿ ಕನ್ನಡದ ಲೇಖಕ ಮತ್ತು ಲೇಖಕಿಯರು ಭಾಗವಹಿಸಿದ್ದು ಈ ಸ್ಥಳೀಯ ಸಾಹಿತ್ಯಾಸಕ್ತರು ಪರಿಚಯವಾದರು.  ಇವರನ್ನೆಲ್ಲಾ ಒಂದುಗೂಡಿಸಿ ವೇದಿಕೆ ಕಟ್ಟುವ ಕನಸು ಹುಟ್ಟಿದು ಬಹುಶಃ ಅಲ್ಲಿಂದ ಎಂಬ ವಿಚಾರವನ್ನು ನಾನು ನೆನೆಯುತ್ತೇನೆ.

ಒಂದು ಹಿನ್ನೋಟದಲ್ಲಿ ‘ಅನಿವಾಸಿ’ಯು  ಸುಮಾರು ಹತ್ತು ಕಾರ್ಯಕ್ರಮಗಳನ್ನು ಕಂಡಿದೆ.  ಇದರಲ್ಲಿ ಗಮನಾರ್ಹವಾದ ಕೆಲವು ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ. ನಮ್ಮೆಲ್ಲರ ನೆಚ್ಚಿನ ಖ್ಯಾತ ಕವಿ ಎಚೆಸ್ವಿ ಅವರು ೨೦೧೪ ದೀಪಾವಳಿ ಕಾರ್ಯಕ್ರಮದಲ್ಲಿ ‘ಅನಿವಾಸಿ’ ವೇದಿಕೆಯನ್ನು ಉದ್ಘಾಟಿಸಿದರು. ಆ ಸಂದರ್ಭದಲ್ಲಿ ನಮ್ಮ ಅನಿವಾಸಿ ಕಾರ್ಯಕರ್ತರು ತಂತ್ರಜ್ಞಾನವನ್ನು ಬಳಸಿಕೊಂಡು ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಗಳಲ್ಲಿ ಕನ್ನಡವನ್ನು ಬರೆಯುವ ಕಮ್ಮಟವನ್ನಿಟ್ಟುಕೊಂಡು ನೆರೆದಿದ್ದ ಸದಸ್ಯರಿಗೆ ಸಲಹೆ ಮತ್ತು ತರಬೇತಿಯನ್ನು ನೀಡಿದರು.  ಎಚೆಸ್ವಿ ಅವರ ಸಮ್ಮುಖದಲ್ಲಿ ಕವಿಸಮ್ಮೇಳನ ಜರುಗಿದ್ದು ಅಲ್ಲಿ ನಮ್ಮ೭-೮ ಅನಿವಾಸಿ ಸದಸ್ಯರು ತಮ್ಮ ಕವನಗಳನ್ನು ಮಂಡಿಸಿದರು.

ಎಚೆಸ್ವಿಯವರು ಕನ್ನಡ ನಾಡಿನಾಚೆ ಅದೂ ಇಂಗ್ಲೆಂಡಿನಲ್ಲಿ ಎರಡು ದಿನಗಳ ಮಟ್ಟಿಗೆ ಇಷ್ಟೊಂದು ಕನ್ನಡ ಪರ ಚಟುವಟಿಕೆಗಳನ್ನು ಆಯೋಜಿಸಿದ ಯು.ಕೆ ಕನ್ನಡ ಬಳಗ ಮತ್ತು ಅನಿವಾಸಿ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು. ಹಾಗೆ ಆ ಸಮಯದಲ್ಲಿ ಪ್ರೇಮಲತಾ ಅವರು ನಡೆಸಿಕೊಟ್ಟ ಸಂದರ್ಶನದಲ್ಲಿ ಕನ್ನಡ ಭಾಷೆಯ ಉಳಿವಿನ ಬಗ್ಗೆ ಮತ್ತು ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ನಡೆಯಬೇಕೆಂಬ ವಿಚಾರವನ್ನು ಕುರಿತು ” ಆರಂಭದಲ್ಲಿ ನಾವು ಯಾವುದನ್ನು ಅನುಕರಣೆಯಿಂದ ಕಲಿಯುತ್ತೇವೋ ಅದು ನಮ್ಮ ಭಾಷೆಯಾಗುತ್ತದೆ ಮತ್ತು ನಮ್ಮ ಅಂತರಂಗದ ದ್ರವ್ಯವೂ ಆಗುತ್ತದೆ. ಪರಿಸರದಲ್ಲಿ ಯಾವ ಭಾಷೆ ಇರುತ್ತದೆಯೋ  ಅದೇ ನಮ್ಮ ಭಾಷೆಯಾಗುತ್ತದೆ. ಅದೇ ಭಾಷೆಯಲ್ಲಿ ನಾವು ಚಿಂತಿಸುವುದು ಮತ್ತು ಕನಸುಕಾಣುವುದು” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಅಂದು ನಡೆದ ವಿಚಾರಗೋಷ್ಠಿಯಲ್ಲಿ ಸುಗಮಸಂಗೀತ ನಡೆದುಬಂದ ದಾರಿಯನ್ನು ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ವೈ ಕೆ ಮುದ್ದು ಕೃಷ್ಣ ವಿವರಿಸಿದರು. ಖ್ಯಾತ ಹಾಸ್ಯ ಪಟು ಡಾ. ಪುತ್ತೂರಾಯರು ಮತ್ತು ಚಿತ್ರರಂಗದ ಹಿರಿಯ ನಟ ಶಿವರಾಂ ಅವರು ಕೂಡ ಈ ಗೋಷ್ಠಿಯಲ್ಲಿ  ಭಾಗವಹಿಸಿದ್ದರು.

ಲಿವರ್ಪೂಲ್ ನಲ್ಲಿ ನಡೆದ ಕನ್ನಡ ಬಳಗದ  ೨೦೧೫ ರ  ಕಾರ್ಯಕ್ರಮಕ್ಕೆ ಜನಪ್ರಿಯ ಕವಿ ಬಿ. ಆರ್. ಲಕ್ಷ್ಮಣ ರಾವ್ ಮತ್ತು ಸ್ತ್ರೀವಾದಿ, ಕವಿಯಿತ್ರಿ ಮಮತಾ ಸಾಗರ್ ಅವರು ಅತಿಥಿಗಳಾಗಿ, ಖ್ಯಾತ ರಂಗಕಲಾವಿದೆ  ಶ್ರೀಮತಿ ಬಿ.ಜಯಶ್ರೀ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಅಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅನಿವಾಸಿ ಸದಸ್ಯರು ಮಂಡಿಸಿದ ಕವಿತೆಗಳ ಬಗ್ಗೆ ಲಕ್ಷ್ಮಣ ರಾವ್ ತಮ್ಮ ವೈಯುಕ್ತಿಕ ಅಭಿಪ್ರಾಯಗಳನ್ನು ಸೂಚಿಸಿ ಕಾವ್ಯದ ಸ್ವರೂಪಗಳನ್ನು ಪರಿಚಯಿಸಿದರು. ಮಮತಾ ಅವರು ಕಾವ್ಯ ಲಹರಿಯ ಶಬ್ದ ನಿನಾದ ಮತ್ತು ಲಯಗಳ ಹೇಗೆ ಕಾವ್ಯದ ಸೊಬಗನ್ನು ಹೆಚ್ಚಿಸುತ್ತದೆ ಎಂಬ ವಿಚಾರದ ಬಗ್ಗೆ ತಿಳಿಪಡಿಸಿ ತಮ್ಮ ಕೆಲವು ಕವನಗಳನ್ನು ಓದಿದರು. ಕೇಶವ್ ಕುಲಕರ್ಣಿ ಜಯಶ್ರೀ ಅವರನ್ನು ಸಂದರ್ಶಿಸಿದಾಗ ಅವರು ತಮ್ಮ   ತಾತ ಗುಬ್ಬಿ ವೀರಣ್ಣ ಅವರ ಸಾಧನೆಗಳ ಬಗ್ಗೆ ಹೆಮ್ಮೆಯ ವಿಚಾರಗಳನ್ನು ತಿಳಿಸಿದರು. ಗುಬ್ಬಿ ನಾಟಕ ಕಂಪನಿಯ  ಆಶ್ರಯದಲ್ಲಿ ಕನ್ನಡದ ಖ್ಯಾತ ನಟರುಗಳಾದ ರಾಜ್ ಕುಮಾರ್, ಬಾಲಣ್ಣ ನರಸಿಂಹರಾಜುಗಳು ಬೆಳಕಿಗೆ ಬಂದದ್ದನ್ನು ಸ್ಮರಿಸಿದರು . ರಂಗ ಭೂಮಿಯ ಬಗ್ಗೆ ಮಾತನಾಡುತ್ತ “ಮನುಷ್ಯನನ್ನು ಮನುಷ್ಯನ ಹಾಗೆ ಕಾಣಿಸುವಂಥ ಮಾಧ್ಯಮ ನಾಟಕ ಒಂದೇ . ಮನುಷ್ಯನನ್ನು ತುಂಬಾ ಚಿಕ್ಕವನಾಗಿ ಮಾಡುವುದು ಕಿರು ತೆರೆ (ಟಿವಿ ) ಹಾಗೆ ಅಗಾಧವಾಗಿ ತೋರಿಸಿವುದು ಬೆಳ್ಳಿಯ ತೆರೆ ಎಂದು ನುಡಿದರು”  ಅಂದು ಸಂಜೆ ನಡೆದ ಸಂಗೀತ ಕಾರ್ಯಕ್ರಮ ವನ್ನು ನಡೆಸಿಕೊಟ್ಟ ಖ್ಯಾತ ಗಾಯಕಿ ಅಮಿತ ರವಿಕಿರಣ್ ಈಗ ನಮ್ಮ ಅನಿವಾಸಿ ಬಳಗದ  ಲೇಖಕಿ ಮತ್ತು ಸಕ್ರಿಯ ಕವಿಯಿತ್ರಿ !

  ಚಿತ್ರ ಕಲೆ- ಲಕ್ಶ್ಮೀನಾರಾಯಣ ಗೂಡೂರು

ಕನ್ನಡ ಬಳಗದ ೨೦೧೬ ಮ್ಯಾಂಚೆಸ್ಟರ್ ಯುಗಾದಿ ಕಾರ್ಯಕ್ರಮದಲ್ಲಿ ಖ್ಯಾತ ಕಾಮಿಡಿಯನ್ ಪ್ರಾಣೇಶ್ ಗಂಗಾವತಿ ಅವರ ಸಮ್ಮುಖದಲ್ಲಿ  ಹಾಸ್ಯ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅಂದು ಪ್ರಸ್ತುತ ಪಡಿಸಿದ ಕವನಗಳನ್ನು ವಿಮರ್ಶಿಸುತ್ತಾ ಅದಕ್ಕೆ ತಮ್ಮದೇ ಆದ ತಿಳಿ ಹಾಸ್ಯವನ್ನು ಸೇರಿಸಿ ಎಲ್ಲರನ್ನು ರಂಜಿಸಿದರು. ಇದೇ  ಸಂದರ್ಭದಲ್ಲಿ ಅನಿವಾಸಿ ಜಾಲ ಜಗುಲಿಯಲ್ಲಿ ಪ್ರಕಟವಾದ ಕಥೆ ಕಾವ್ಯ ವಿಡಂಬನೆಗಳನ್ನು ಒಳಗೊಂಡಂತೆ “ಅನಿವಾಸಿಗಳ  ಅಂಗಳದಿಂದ” ಎಂಬ ಹೊತ್ತಿಗೆಯನ್ನು ಪ್ರಾಣೇಶ್  ಬಿಡುಗಡೆಮಾಡಿದರು. ಈ ಒಂದು ಹೊತ್ತಿಗೆಗೆ ಎಚೆಸ್ವಿ ಮುನ್ನುಡಿಯನ್ನು ಮತ್ತು   ಅಮೇರಿಕಾದ ಲೇಖಕ ಶ್ರೀವತ್ಸ ಜೋಶಿ ಅವರು ಬೆನ್ನುಡಿಯನ್ನು ಬರೆದುಕೊಟ್ಟಿದ್ದಾರೆ.

೨೦೧೬ದೀಪಾವಳಿ ಕಾರ್ಯಕ್ರಮ ಡಾರ್ಬಿ ನಗರದಲ್ಲಿ ಜರುಗಿತ್ತು. ಆ ಸಮಾರಂಭದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಕವಿತೆ ಮತ್ತು ಸಾಹಿತ್ಯ ಸಂಬಂಧಗಳನ್ನು (Interface) ಅನಿವಾಸಿ ಅತಿಥಿಗಳಾದ ಡಾರ್ಬಿ ಶೈರ್ ನ ಇಂಗ್ಲಿಷ್ ಕವಿಯಿತ್ರಿ ಕ್ಯಾತಿ  ಗ್ರಿನ್ಡ್ ರಾಡ್ ಅವರ ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ “ಪೂರ್ವ ಪಶ್ಚಿಮಗಳ ಸಮ್ಮಿಲನ” ಎಂದು ಹೆಸರಿಸಿದ್ದು   ಇಲ್ಲಿ ಸದಸ್ಯರುಗಳು ಬರೆದ ಇಂಗ್ಲಿಷ್ ಕವನವನ್ನು ಮತ್ತು ಅದರ ಕನ್ನಡ ಭಾಷಾಂತರವನ್ನು ಪ್ರಸ್ತುತ ಪಡಿಸಲಾಯಿತು. ಕ್ಯಾತಿ ಅವರಿಗೆ ನಮ್ಮ ಕನ್ನಡ ಭಾಷೆಯ ಅಸ್ತಿತ್ವವನ್ನು ಮತ್ತು ಭಾರತದ ಸಾಹಿತ್ಯ ಕ್ಷೇತ್ರದಲ್ಲಿ  ಅದು ತಂದಿರುವ  ಸಮೃಧ್ಧತೆಯನ್ನು ಪರಿಚಯಿಸಿಕೊಡಲಾಯಿತು. ಇಂಗ್ಲಿಷ್ ಭಾಷೆ ಹೇಗೆ ನಮ್ಮ ಹಿರಿಯ ಕವಿಗಳಿಗೆ ಸ್ಫೂರ್ತಿ ಮತ್ತು  ಕನ್ನಡ ಸಾಹಿತ್ಯದ ಮೇಲೆ ಪರಿಣಾಮ  ಬೀರಿದೆ ಎಂಬ ವಿಚಾರವನ್ನು ನಾನು ನನ್ನ ಸ್ವಾಗತ ಭಾಷಣದಲ್ಲಿ ತಿಳಿಸಿದೆ.  ಕನ್ನಡ ಭಾಷೆಯ ಸ್ಥಾನ ಮಾನಗಳ ಬಗ್ಗೆ ಕ್ಯಾತಿ ಅವರು ಆಶ್ಚರ್ಯ ಮತ್ತು ಮೆಚ್ಚುಗಳನ್ನು ವ್ಯಕ್ತಪಡಿಸಿದರು. ಅವರು ಡಾರ್ಬಿ ಶೈರ್ ಕಾರ್ಖಾನೆಯನ್ನು ಕುರಿತು ಬರೆದ ಒಂದು ಜನಪ್ರಿಯ ನೀಳ್ಗವಿತೆಯನ್ನು ಪ್ರಸ್ತುತ ಪಡಿಸಿದರು.

೨೦೧೭ ನ ಬ್ರಾಡ್ ಫೋರ್ಡ್  ಯುಗಾದಿ ಕಾರ್ಯಕ್ರಮಕ್ಕೆ ನಮ್ಮಂತೆ ಅನಿವಾಸಿಗಳಾದ ಅಮೆರಿಕನ್ನಡಿಗ , ಖ್ಯಾತ ಲೇಖಕ ಕವಿ ಮೈ ಶ್ರೀ ನಟರಾಜ್ ಅತಿಥಿಗಳಾಗಿ ಆಗಮಿಸಿದ್ದರು. ಆ ಕಾರ್ಯಕ್ರಮಕ್ಕೆ ‘ಕನ್ನಡ ಪ್ರಜ್ಞೆ’ ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು. ನಟರಾಜ್ ಅವರು ಈ ವಿಚಾರದ  ಬಗ್ಗೆ ಮಾತನಾಡುತ್ತಾ ” ಬಾಲ್ಯದಲ್ಲಿ ಕಲಿತ ನಮ್ಮ ಮೌಲ್ಯಗಳು ಮತ್ತು ಆಧ್ಯಾತ್ಮಿಕ ಬುನಾದಿ ಭದ್ರವಾಗಿದ್ದರೆ ನಾವು ಹೊರದೇಶದಲ್ಲಿದ್ದುಕೊಂಡೂ ನಮ್ಮ ತನವನ್ನು ಉಳಿಸಿಕೊಳ್ಳಬಹುದು ” ಎಂದು ಅಭಿಪ್ರಾಯಪಟ್ಟರು. ” ಬಹಳಷ್ಟು  ಐರೋಪ್ಯ ಭಾಷೆಗಳು ಶೈಶಾವಸ್ಥೆಯಲ್ಲಿದ್ದ ಕಾಲಕ್ಕೆ ಸಕಲ ಆಧ್ಯಾತ್ಮ ಸಾರವನ್ನು ಒಳಗೊಂಡ ವಚನ ಸಾಹಿತ್ಯದಂತಹ  ಅದ್ವಿತೀಯ ಸಾಹಿತ್ಯಕ್ಕೆ ಜನ್ಮ ಕೊಟ್ಟಂತಹ ಭಾಷೆ ಕನ್ನಡವಾಗಿದ್ದರೂ ಇಂಥ ಮಹಾನ್ ಭಾಷೆಯ ಮೇಲೆ ಕನ್ನಡಿಗರಿಗೆ ಅಭಿಮಾನವಿಲ್ಲದಿರುವುದು ಒಂದು ದುರಂತ” ಎಂಬ ವಿಚಾರದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ನಮ್ಮ ಅನಿವಾಸಿ ಸದಸ್ಯರು ಕನ್ನಡ ಪ್ರಜ್ಞೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

೨೦೧೭ರ ದೀಪಾವಳಿ ಕಾರ್ಯಕ್ರಮ ಬೆಡ್ ಫೋರ್ಡ್ ನಲ್ಲಿ ನಡೆಯಿತು. ಖ್ಯಾತ ಕವಿ  ಡುಂಡಿರಾಜ್ ಅತಿಥಿಗಳಾಗಿ ಆಗಮಿಸಿದ್ದರು.

ಹನಿಗವನಗಳ ಚಕ್ರವರ್ತಿಯೆಂದೇ ಹೆಸರಾಗಿರುವ ಅವರ ಹಾಜರಿನಲ್ಲಿ ಅನಿವಾಸಿ ಕವಿಗಳು ತಮ್ಮ ಹನಿಗವನಗಳನ್ನು ಪ್ರಸ್ತುತ ಪಡಿಸಿದರು. ಇಲ್ಲಿ ಓದಿದ ಅನೇಕ ಹನಿಗವನಗಳು ಉತ್ತಮ ಮಟ್ಟದಾಗಿದ್ದವು ಎನ್ನುವುದು ಡುಂಡಿರಾಜ್ ಅವರ ಅಭಿಪ್ರಾಯವಾಗಿತ್ತು. ಅಂದಿನ ಸಭೆಯಲ್ಲಿ ಸುಮಾರು ಒಂದು ತಾಸು ತಮ್ಮ ಹನಿಗವನಗಳ ಸುತ್ತ ಹೆಣೆದ ಅವರ ಭಾಷಣ ಎಲ್ಲರ ಮನ್ನಣೆಗಳಿಸಿತ್ತು. ಅವರ ಒಂದು ಹನಿಗವನದಲ್ಲಿ ನಮ್ಮ ಕನ್ನಡ  ಪ್ರಜ್ಞೆಯನ್ನು ಟೀಕಿಸುದ್ದು ಹೀಗೆ:

ತಮಿಳರ ಜೊತೆ ತಮಿಳಲ್ಲಿ ಮಾತನಾಡಿ

ತೆಲುಗರ ಜೊತೆ ತೆಲುಗಿನಲ್ಲಿ ಮಾತಾಡಿ

ಕನ್ನಡಿಗರ ಜೊತೆ ಇಂಗ್ಲಿಷಿನಲ್ಲಿ ಮಾತನಾಡುವವನೇ ಕನ್ನಡಿಗ !!

೨೦೧೮ ಕೊವೆಂಟ್ರಿ ಯಲ್ಲಿ  ನಡೆದ ಯುಗಾದಿ ಕಾರ್ಯಕ್ರಮದಲ್ಲಿ  ಶಿಕ್ಶಣ ತಜ್ಞ , ಅಂಕಣಕಾರ ಮತ್ತು  ಉತ್ತಮ ವಾಗ್ಮಿ  ಗುರುರಾಜ್ ಕರ್ಜಗಿ ಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು . ಈ ಕಾರ್ಯಕ್ರಮವನ್ನು ಡಿ.ವಿ.ಜಿ. ಸ್ಮರಣೆ ಎಂಬ ಶೀರ್ಷಿಕೆಯಲ್ಲಿ ಆಚರಿಸಲಾಗಿತ್ತು. ಅನಿವಾಸಿ ತಂಡದ ಸದಸ್ಯರು ಡಿ ವಿ ಜಿ ಅವರ ಕಗ್ಗದ ಬಗ್ಗೆ ಮಾತನಾಡಿದ ಬಳಿಕ  ಕರ್ಜಗಿಯವರು ಆ ಕಗ್ಗಕ್ಕೆ ತಮ್ಮ ವ್ಯಾಖ್ಯಾನ ತಂದುಗೂಡಿಸಿ ಕಗ್ಗದಲ್ಲಿರುವ ಲೌಕಿಕ ಮತ್ತು ಪಾರಮಾರ್ಥಿಕ ಮೌಲ್ಯಗಳನ್ನು ವಿವರಿಸಿದರು.

ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ  ಹಿನ್ನೆಲೆಯನ್ನು ಮತ್ತು ಅವರ ವೈಯುಕ್ತಿಕ ಬದುಕಿನ ಏರು ಪೇರುಗಳು, ಅನುಭವಗಳು ಹೇಗೆ ಅವರ ಸಾಹಿತ್ಯದಲ್ಲಿ ಮೂಡಿಬಂದಿದೆ ಎಂಬ ವಿಚಾರವನ್ನು ಶುದ್ಧ ಕನ್ನಡದಲ್ಲಿ ವಿವರಿಸಿದರು. ಅವರ ಭಾಷಣದಲ್ಲಿ ಮಂಕುತಿಮ್ಮನ ಕಗ್ಗ ನಮ್ಮ ದಿನನಿತ್ಯ ಬದುಕಿಗೆ ಕನ್ನಡಿ ಹಿಡಿದಿರುವ ಬಗ್ಗೆ ಉದಾಹರಣೆಗಳೊಂದಿಗೆ ಮನ ಮುಟ್ಟುವಂತೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಅನಿವಾಸಿಗಳು ಹೊರತಂದ “ಪ್ರೀತಿ ಎಂಬ ಚುಂಬಕ ” ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡಿದರು.

೨೦೧೮ ದೀಪಾವಳಿ ಕಾರ್ಯಕ್ರಮ ಕೇಂಬ್ರಿಡ್ಜ್ ನಗರದಲ್ಲಿ ಜರುಗಿತು. ಖ್ಯಾತ ಹಾಸ್ಯ ಚತುರೆ ಶ್ರೀಮತಿ ಸುಧಾ ಬರಗೂರು ಅವರ ಸಮ್ಮುಖದಲ್ಲಿ  ಮತ್ತು ನಮ್ಮ ಹಿರಿಯ ಮಹಿಳಾ ಸದಸ್ಯರಾದ ಡಾ.ವತ್ಸಲಾ ರಾಮಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಚರ್ಚೆನಡೆಯಿತು. ಪುರುಷ ಪ್ರಧಾನವಾದ ಸಮಾಜದಲ್ಲಿ ಹೇಗೆ ಅನೇಕ ಲೇಖಕಿಯರು ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾದರು ಎಂಬ ವಿಚಾರವವನ್ನು ವತ್ಸಲಾ ಅವರು ವಿವರಿಸಿದರು. ಸುಧಾ ಬರಗೂರು ” ನಾನು ಸಾಹಿತ್ಯವನ್ನು ಓದಿಕೊಂಡು ಬೆಳೆದವಳು, ನನಗೆ ಬರವಣಿಗೆಗಿಂತ ಮಾತೆ ನನ್ನ ಬಂಡವಾಳ” ಎಂದು ಹೇಳುತ್ತಾ ತಮ್ಮ ಹಾಸ್ಯ ಮತ್ತು ಸಾಹಿತ್ಯ ಪ್ರಜ್ಞೆಯನ್ನು ಒಳಗೊಂಡ ಭಾಷಣದಲ್ಲಿ ಎಲ್ಲರನ್ನೂ ರಂಜಿಸಿದರು. ಸುಧಾ ಅವರು ಮುಖ್ಯ ಸಭಾಂಗಣದಲ್ಲಿ ಒಂದು ತಾಸಿಗೂ ಮೀರಿ ನೆರದ ಎಲ್ಲರನ್ನು ನಕ್ಕು ನಗಿಸಿದರು. ಕಾರ್ಯಕ್ರಮದ ಮಧ್ಯದಲ್ಲಿ ಅವರಿಗೆ ನೀರು ಸರಬರಾಜು ಮಾಡಿದ ಸ್ಥಳೀಯ ಸಂಯೋಜಕ ತಿಪ್ಪೆಸ್ವಾಮೀ ಅವರಿಗೆ;   ‘ಏನ್ರಿ ಸ್ವಾಮಿ, ನಾನು ಎಷ್ಟೋ ಜನಕ್ಕೆ ನೀರು ಕುಡಿಸಿದ್ದೀನಿ ನೀವು ನಂಗೆ ನೀರು ಕುಡಿಸೋಕೆ ಬರ್ತಿರಾ? ಎಂದುದ್ದು ಸುಧಾ ಬರಗೂರು!  ಒದಗಿದ ಅವಕಾಶವನ್ನು ಬಳೆಸಿಕೊಂಡು  ಹಾಸ್ಯವನ್ನು ಸೃಷ್ಟಿಸುವಲ್ಲಿ  ಸುಧಾ ಪಳಗಿದವರು,  ಅವರ ಹಾಸ್ಯ ಪ್ರಜ್ಞೆ ಅನನ್ಯ ವಾದದ್ದು.

ಅನಿವಾಸಿ ಸದಸ್ಯರು ಕನ್ನಡ ಪ್ರಮುಖ ಲೇಖಕಿಯರಾದ ಅನುಪಮಾ ನಿರಂಜನ, ನೇಮಿ ಚಂದ್ರ, ಭುವನೇಶ್ವರಿ ಹೆಗ್ಗಡೆ,  ಗೌರಿ ಲಂಕೇಶ್,  ಸುಧಾ ಮೂರ್ತಿ, ಸುನಂದಾ ಬೆಳಗಾವ್ಕರ್ ಮತ್ತು ಪ್ರತಿಭಾ ನಂದಕುಮಾರ್  ಅವರನ್ನು ಕುರಿತು ಮಾತನಾಡಿದರು.

೨೦೧೯  ಡೋಂಕಾಸ್ಟರ್ ನಗರದಲ್ಲಿ ನಡೆದ ಯುಗಾದಿ ಕಾರ್ಯಕ್ರಮಕ್ಕೆ ಕನ್ನಡ ಚಲನ ಚಿತ್ರದ ಖ್ಯಾತ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿಯವರು ಆಗಮಿಸಿದ್ದು ಅವರ ಕಲಾತ್ಮಕ ಚಿತ್ರಗಳ ಪರಿಚಯ ಮಾಡಿಕೊಡುವ “ಕಾಫಿ ವಿಥ್ ಕಾಸರವಳ್ಳಿ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಸುಮಾರು ೭೫ ನಿಮಿಷಗಳ ಈ ಕಾರ್ಯಕ್ರಮದಲ್ಲಿ ಅನಿವಾಸಿ ಸದಸ್ಯರು ಕಾಸರವಳ್ಳಿಯವರ ೬ ಚಿತ್ರಗಳ ತುಣುಕುಗಳನ್ನು ತೆರೆಯ ಮೇಲೆ ತೋರಿಸಿ ಆ ಚಿತ್ರದ ಬಗ್ಗೆ ಒಂದು ಕಿರು ವಿಮರ್ಶೆಯನ್ನು ಒದಗಿಸಿದರು. ಕಾಸರವಳ್ಳಿಯವರು ಆಯಾ ಸಿನಿಮಾಗಳ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿ ಅನಿವಾಸಿ ಸದಸ್ಯರು ಕೇಳಿದ ಪ್ರಶ್ನೆಗಳನ್ನು ಉತ್ತರಿಸಿದರು. “ಸಿನಿಮಾ ಸಾಹಿತ್ಯಕ್ಕಿಂತ ಪ್ರಬಲವಾದ ಮಾಧ್ಯಮ, ಸಾಹಿತ್ಯವನ್ನು ಸಿನಿಮಾವಾಗಿ ಪರಿವರ್ತಿಸಬೇಕಾದರೆ ಹಲವಾರು ಬದಲಾವಣೆಗಳನ್ನು ತರುವುದು ಅನಿವಾರ್ಯ, ಆ ಬದಲಾವಣೆಗಳು ಮೂಲ ಕಥೆಯನ್ನು ಸಂವೃದ್ಧಿ ಗೊಳಿಸಬೇಕು ಎಂದು ನುಡಿದರು. ಫಾರ್ಮಸಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಮನ್ನು ಕನ್ನಡ ಸಾಹಿತ್ಯ ಮತ್ತು ಕಲೆಯಲ್ಲಿ ಹಿಂದೆ ನಡೆದ ನವೋದಯ ಕ್ರಾಂತಿ ಮತ್ತು ಹೊಸ ಅಲೆ ಸಿನಿಮಾದೆಡೆಗೆ ಹೇಗೆ ಆಕರ್ಷಿಸಿತು ಎಂದು ವಿವರಿಸಿದರು. ಸತ್ಯಜಿತ್ ರೇ ಕುರುಸೋವಾ ಮುಂತಾದ ಮಹಾನ್ ನಿರ್ದೇಶಕರು ತಮ್ಮ ಮೇಲೆ ಗಾಢವಾದ ಪ್ರಭಾವ ಬಿರಿದುದನ್ನು ಅವರು ಸ್ಮರಿಸಿದರು .

ನಾನು ನಡೆಸಿಕೊಟ್ಟ ಸಂದರ್ಶನದಲ್ಲಿ ಒಂದು ಸಿನಿಮಾಗೆ ಸಮಾಜದಲ್ಲಿ ಪರಿವರ್ತನೆಗಳನ್ನು ತರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ, ‘ಸಿನಿಮಾಗೆ ಪ್ರಬಲವಾದ ಶಕ್ತಿಯಿದೆ ಅದು ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರದೆ ಒಳ ಸಂವಾದವನ್ನು ಹುಟ್ಟು ಹಾಕಬೇಕು, ಒಂದು ಕಥೆ ಒಬ್ಬ ವ್ಯಕ್ತಿಯ ಆಲೋಚನಾ ಕ್ರಮವನ್ನು ಅರಳಿಸಬೇಕು ಹೊರತು ಕೆರಳಿಸಬಾರದು.  ಹೀಗಾಗದಿದ್ದಲ್ಲಿ ಅದು ಫ್ಯಾಸಿಸ್ಟ್ ಜೀವನಕ್ರಮದ ಸಿನಿಮಾ ಎಂದು ಗುರುತಿಸಬೇಕಾಗುತ್ತದೆ, ಸಿನಿಮಾ ಅಭಿಪ್ರಾಯಗಳು ನಮ್ಮನ್ನು ಅರಳಿಸಿದಾಗ ನಮ್ಮ ಆಲೋಚನಾ ಕ್ರಮದಿಂದ ಸಿನಿಮಾ ಕೂಡ ಬೆಳೆಯುವ ಸಾಧ್ಯತೆಗಳಿವೆ . ಸಿನಿಮಾ ಒಂದು ಸಂಸ್ಕೃತಿಯ ಕನ್ನಡಿಯಾಗಿರಬೇಕು, ಅದು ವಾಣಿಜ್ಯ ದೃಷ್ಟಿಯಿಂದ ವಾಸ್ತವ ಬದುಕಿಗೆ ದೂರವಾಗಿ ಯಾವುದೋ ಕಾಲ್ಪನಿಕ ಪ್ರಪಂಚವನ್ನು ಕಟ್ಟುವ ಪ್ರಯತ್ನವಾಗಬಾರದು” ಎಂದು ನುಡಿದರು

ಒಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ‘ಅನಿವಾಸಿ’ ಬಳಗವು ಯು.ಕೆ ಕನ್ನಡ ಬಳಗದ ಆಶ್ರಯದಲ್ಲಿ , ಬಳಗದ ದ್ವಿವಾರ್ಷಿಕ  ಸಂಭ್ರಮಗಳಲ್ಲಿ ಪರ್ಯಾಯ ಸಾಹಿತ್ಯ ಗೋಷ್ಠಿಯನ್ನು ಆಯೋಜಿಸುತ್ತಾ ಬಳಗದ ಒಂದು ಅಂಗವಾಗಿ ಬೆಳದು ಬಂದಿದೆ . ಹೀಗಾಗಿ ಕನ್ನಡ ಬಳಗ ಮತ್ತು ‘ಅನಿವಾಸಿ’ ಇವೆರಡನ್ನೂ ಬೇರ್ಪಡಿಸಿ ನೋಡುವುದು ಅಸಮಂಜಸ. ಇವೆರಡರ  ಉದ್ದೇಶ ಧ್ಯೇಯಗಳು ಒಂದೇ ಆಗಿ ಬೆಸೆದುಕೊಂಡು ಒಂದನ್ನೊಂದು ಅವಲಂಬಿಸಿವೆ. ಕನ್ನಡ ಬಳಗವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒದಗಿಸಿದರೆ ಅನಿವಾಸಿ ಬಳಗವು ಸಾಹಿತ್ಯ ಕಾರ್ಯಕ್ರಮಗಳನ್ನು ನೀಡಿದೆ. ‘ಅನಿವಾಸಿ’ ಕಾರ್ಯಕ್ರಮಗಳು ನಮಗೆ ಶೈಕ್ಷಣಿಕ ಮತ್ತು ಬೌದ್ಧಿಕ ಶ್ರೀಮಂತಿಕೆಯನ್ನು ತಂದಿದೆ. ಕಾರ್ಯಕ್ರಮಕ್ಕೆ ಆಹ್ವಾನಿತರಾದ ಗಣ್ಯ ಸಾಹಿತಿ ಮತ್ತು ಕಲಾವಿದರಿಂದ ಸಾಕಷ್ಟು ಕಲಿತಿದ್ದೇವೆ, ಕಲಿತದ್ದನ್ನು ಜಾಲಾ ಜಗುಲಿಯಲ್ಲಿ  ಹಂಚಿಕೊಂಡಿದ್ದೇವೆ. ಈ ಕಾರ್ಯಕ್ರಮದ ಹಿಂದೆ ಅನಿವಾಸಿ ಸದಸ್ಯರು ಮೀಟಿಂಗ್ ಗಳಲ್ಲಿ ಕಾರ್ಯಕ್ರಮದ ಸ್ವರೂಪವನ್ನು ಆಲೋಚಿಸಿದ್ದು, ಸಾಕಷ್ಟು ಪೂರ್ವಸಿದ್ಧತೆ ಮತ್ತು  ಪರಿಶ್ರಮಗಳಿಂದ ಕಾರ್ಯಕ್ರಮಗಳು ಯಶಸ್ಸನ್ನು ಕಂಡು ಜನರ ಪ್ರಶಂಸೆಗಳನ್ನುಗಳಿಸಿದೆ.  ಜನಬಲ ಮತ್ತು ಅವಕಾಶ ಇವುಗಳನ್ನು ಯು.ಕೆ. ಕನ್ನಡ ಬಳಗವು ಒದಗಿಸಿದೆ. ‘ಅನಿವಾಸಿ’ಯಲ್ಲಿ ಹಲವು ಸಂಸ್ಥೆಗಳಿಗಿರುವ ಔಪಚಾರಿಕ ಸ್ವರೂಪ ಅಂದರೆ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಈ ವ್ಯವಸ್ಥೆಯಿಲ್ಲ. ಇಲ್ಲಿ ಎಲ್ಲರೂ ಕಾರ್ಯಪ್ರವೃತ್ತರೇ! ಯಶಸ್ಸಿನಲ್ಲಿ ಎಲ್ಲರೂ ಸಹಭಾಗಿಗಳೇ!

ಈ ಸಂದರ್ಭದಲ್ಲಿ ಇನ್ನೊಂದು ವಿಚಾರವನ್ನು ಪ್ರಸ್ತಾಪ ಮಾಡುವುದು ಅಗತ್ಯ. ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ಯು.ಕೆ.ಕನ್ನಡ ಬಳಗದ ಅಂಗವಾಗಿದ್ದರೂ ಬಳಗದ ಹೊರಗೆ, ‘ಅನಿವಾಸಿ’ ಎಂಬ ಜಾಲ ಜಗುಲಿ ತಾಣದಲ್ಲಿ ತನ್ನದೇ  ಆದ ಅಸ್ತಿತ್ವವನ್ನು ಉಳಿಸಿಕೊಂಡು ಯು.ಕೆ ಯಲ್ಲಿರುವ ಎಲ್ಲ ಕನ್ನಡಿಗರು ಭಾಗವಹಿಸಬಹುದಾದ  ವಿಚಾರ ವೇದಿಕೆಯಾಗಿದೆ. ಈ ತಾಣಕ್ಕೆ ಬೇಕಾದ ಆರ್ಥಿಕ ಮತ್ತು ಆಡಳಿತ ಬೆಂಬಲ ಅನಿವಾಸಿ ಸದಸ್ಯರಿಂದ ಬಂದಿದೆ.

‘ಅನಿವಾಸಿ’ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ  ಕೆಲವು ಮಕ್ಕಳಾದ ಅಮೋಘ ರಾಮಶರಣ್, ದೀಕ್ಷಾ ಬಿಲ್ಲಹಳ್ಳಿ ಹಾಗು ಸಿಯ ಕುಲಕರ್ಣಿ ಹೆಸರನ್ನು ವಿಶೇಷವಾಗಿ ಪ್ರಸ್ತಾಪಿಸುತ್ತಿದ್ದೇನೆ. ಈ ಮಕ್ಕಳು ತಮ್ಮ ಕವಿತೆಗಳನ್ನು ಕಾರ್ಯಕ್ರಮದಲ್ಲಿ ಓದಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ನಮ್ಮ ಎರಡನೇ ಪೀಳಿಗೆಯ ನವ್ಯ ಆನಂದ್, ರಜತ್ ಸತ್ಯ ಪ್ರಕಾಶ್, ಸೂರ್ಯ, ವರುಣ ಹೀಗೆ ಅನೇಕ ಯುವಕರು, ಕಿರಿಯರು ನಮ್ಮ ಜಾಲಜಗುಲಿಯಲ್ಲಿ ಬರೆದಿದ್ದನ್ನು ನೆನೆಯುತ್ತೇನೆ. (ಇನ್ನು ಯಾವುದಾದರೂ ಹೆಸರನ್ನು ನಾನು ಮರೆತಿದ್ದಲ್ಲಿ  ಕ್ಷಮೆ ಇರಲಿ)  ಮುಂದಿನ ಪೀಳಿಗೆಯ ಯುವ ಮತ್ತು ಕಿರಿಯ ಸದಸ್ಯರು ಅನಿವಾಸಿ ಕಾರ್ಯಕ್ರಮದಲ್ಲಿ ಮತ್ತು ಜಲಜಗುಲಿಯಲ್ಲಿ ಭಾಗವಹಿಸಿರುವುದು ಅತ್ಯಂತ ಸಂತೋಷದ ಮತ್ತು ತೃಪ್ತಿನೀಡಿರುವ ವಿಷಯ. ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಲಿ ಎಂದು ಆಶಿಸುತ್ತೇನೆ.

‘ಅನಿವಾಸಿ’ಯ ಮುಂದಿನ ಐದು ವರ್ಷಗಳ ಯೋಜನೆಗಳೇನು? ಎಂಬ ಆಲೋಚನೆ ಈ ಘಳಿಗೆಯಲ್ಲಿ ಮೂಡುವುದು ಸಹಜ. ಮುಂದೆ ನಮ್ಮ ಕಾರ್ಯಕ್ರಮಗಳ ಸ್ವರೂಪ ಹೇಗಿರಬೇಕು ? ನಮ್ಮ ವಿಸ್ತಾರಗಳನ್ನು ಚಾಚುವುದು ಹೇಗೆ ? ಇನ್ನು ಹೆಚ್ಚಿನ ಸಾಹಿತ್ಯಾಸಕ್ತರನ್ನು ಆಕರ್ಷಿಸುವುದು ಹೇಗೆ ? ಈ ವಿಚಾರಗಳ ಬಗ್ಗೆ ಗಾಢವಾಗಿ ಆಲೋಚಿಸಬೇಕಾಗಿದೆ. ಜಾಗತೀಕರಣದ ಈ ಯುಗದಲ್ಲಿ ಸೋಷಿಯಲ್ ಮೀಡಿಯಾಗಳ ಅನುಕೂಲತೆಯಲ್ಲಿ, ನಮ್ಮ ಹಿನ್ನೆಲೆಗಳೇನೇ ಇರಲಿ, ಯು.ಕೆ.ಯಲ್ಲಿ ಎಲ್ಲೇ ಇರಲಿ  ನಾವು ಒಟ್ಟಾಗಿ ಈ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ.

ಪ್ರತ್ಯಕ್ಷವಾಗಿ ನಮಗೆ ಆಶ್ರಯ ಮತ್ತು ಬೆಂಬಲವನ್ನು ನೀಡುತ್ತಿರುವ ಯು.ಕೆ ಕನ್ನಡ ಬಳಗಕ್ಕೆ ಮತ್ತು ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಕನ್ನಡಿಗರು ಯು.ಕೆ ಮತ್ತು ಇತರ  ಸ್ಥಳೀಯ ಕನ್ನಡ ಸಂಘಗಳಿಗೆ ‘ಅನಿವಾಸಿ’ಯ  ಕೃತಜ್ಞತೆಗಳು.

ಕೃಪೆ: ಈ ಬರವಣಿಗೆಗೆ ಬೇಕಾದ ಕೆಲವು ಮಾಹಿತಿಯನ್ನು ‘ಅನಿವಾಸಿ’ ಜಾಲಜಗುಲಿಯಲ್ಲಿ ಪ್ರಕಟವಾಗಿರುವ ವರದಿಗಳಿಂದ ಆಯ್ದುಕೊಳ್ಳಲಾಗಿದೆ.

ಸೂಚನೆ: ಇಲ್ಲಿ ಕೆಲವು ಅನಿವಾಸಿ ಸದಸ್ಯರುಗಳ ಹೆಸರುಗಳನ್ನು ಪ್ರಸ್ತಾಪ ಮಾಡಲಾಗಿದೆ,  ಇದು ಸಂಧರ್ಭ ನಿಮಿತ್ತವಷ್ಟೇ . ನಮ್ಮಲ್ಲಿನ  ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ನೆರವಾಗಿದ್ದಾರೆ. ಈ ಬರವಣಿಗೆಯನ್ನು ಸಂಕ್ಷಿಪ್ತವಾಗಿಡುವ ಸಲುವಾಗಿ ಅನೇಕರ ಹೆಸರುಗಳನ್ನು ಪ್ರಸ್ತಾಪಿಸಿಲ್ಲ. ಕ್ಷಮೆ ಇರಲಿ.

ಡಾ. ಜಿ. ಎಸ್. ಶಿವಪ್ರಸಾದ್

( ಮುಂದಿನ ವಾರ- ಋತು ಗೀತೆಗಳು)