ಸಂಕ್ರಮಣ

ಸಹೃದಯ ಅನಿವಾಸಿ ಬಂಧುಗಳೇ,

ತಮಗೆಲ್ಲರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು. ‘ನಿಲವಿಲ್ಲಾ ಜಗದಿ ಕತ್ತಲೆಗೆಂದು ಗೆಲುವನು ಸಾರುವ ಭಾಸವ ತಾ. ಶಾಂತ ಸುಂದರ ಶಿವದ ಸವಿತಾ. ಬಾ ಸವಿತಾ..ಬಾ ಸವಿತಾ’ ಎಂಬ ಮಾಸ್ತಿಯವರ ಆಶಯದಂತೆ, ಸಂಕ್ರಾಂತಿಯ ಪರ್ವ ಕಾಲದಲ್ಲಿ ತನ್ನ ರಾಶಿಯನ್ನು ಬದಲಿಸಿಕೊಳ್ಳುತ್ತಿರುವ ಆ ಸೂರ್ಯದೇವ ನಮ್ಮಲ್ಲೂ ಸಮ್ಯಕ್ ಕ್ರಾಂತಿಯನ್ನುಂಟು ಮಾಡಲಿ. ಮುರಳಿಯವರು ಬರೆದಂತೆ “ಗಗನ ಕರುಣನ ಋಣದ ಕರುಣೆ ನಮ್ಮನ್ನು ಪೊರೆಯುತ್ತಿರಲಿ; ನಮ್ಮ ಧೀ:ಶಕ್ತಿಯನ್ನು ಪ್ರಚೋದಿಸಿ ಅರಿವಿನ ಬದುಕಿಗೆ ಚಾಲನೆ ನೀಡಲಿ. 

ನಳನಳಿಸೋ ಕಡಲೆಗಿಡ, ರಸಭರಿತ ಕಬ್ಬು, ಮಧುರ ಪೇರಲ-ಬೋರೆಹಣ್ಣುಗಳು, ಎಳೆಯ ಬದನೆ-ಗಜ್ಜರಿಗಳು,ತೂಗಿ ತೊನೆಯೋ ತೆಂಗು – ವೀಳ್ಯಗಳು, ಧಾನ್ಯದ ಕಣಜಗಳು.. ಎಲ್ಲೆಲ್ಲೂ ಸುಗ್ಗಿಯ ಸಂಭ್ರಮ. ಆ ಸಂಭ್ರಮವನ್ನೇ ಇಂದಿಲ್ಲಿ ಹಾಡಿನ ಹೊನಲಾಗಿ ಹರಿಸಿದ್ದಾರೆ ಕುಮಾರಿ. ಅನನ್ಯ ಕದಡಿಯವರು.  

ಮೊನ್ನೆಯಷ್ಟೇ ಇಲ್ಲಿ ಕ್ರಿಸಮಸ್ ಸಡಗರ ಹುರಿದ ‘ಬಾತು’ (roasted duck) ಭೋಜನದೊಂದಿಗೆ ಮುಗಿದಿದೆ. ಇಂದು ರಾಧಿಕಾ ಅವರು ಸಂಕ್ರಾಂತಿಗೆಂದು ಮತ್ತೆ ‘ಬಾತು’, ‘ಒಂಟೆ’, ‘ಗಂಡಭೇರುಂಡ’ಗಳ ಭೂರಿ ಭೋಜನವನ್ನೇ ಹೊತ್ತುತಂದಿದ್ದಾರೆ ತಮ್ಮ ಲೇಖನದಲ್ಲಿ.  ಹುಬ್ಬೇರಿಸಬೇಡಿ.  ಓದಿ ನೋಡಿ.. ನೀವೂ ಬಾಯಾಡಿಸಿ.  ಅಡ್ಡಾಗೆದ್ದ ಮೇಲೆ (ವಿಶ್ರಾಂತಿಯ ನಂತರ) ನಿಮ್ಮ ಅನಿಸಿಕೆಗಳನ್ನು ಮರೆಯದೇ ಹಂಚಿಕೊಳ್ಳಿ. ‘ಎಳ್ಳುಬೆಲ್ಲ ತಗೊಂಡು ಒಳ್ಳೊಳ್ಳೆ ಮಾತಾಡೂಣು.’  

***ಸಂಪಾದಕಿ

ಮತ್ತೆ ಮರಳಿದೆ ಮಕರ ಸಂಕ್ರಮಣ

ತೃಣ ಕಣದ ಮಣ
ಗಗನಕರುಣನ ಋಣ
ಅವನಿನ್ನು ನವ ತರುಣ
ಹುರಿದೆಳ್ಳು ಮನ-
ಮನದ ಹೂರಣ
ಅದಕೆ ಬೆಲ್ಲದಂಟಿನ
ಸವಿ ಸಂಕರಣ
ತರುತ ಮರಳಿದೆ
ಮಕರ ಸಂಕ್ರಮಣ,
ಸರಿಸಿ ಸಕ್ರಮದ
ಮತ್ತೊಂದು ಚರಣ 
ಸುರಿಸಿ ಸಂಭ್ರಮದ
ಮುತ್ತಿನಾಭರಣ

ಬಣ ಬಣದ ಗಣ
ದೊಡಲೊಡಲ ರಣ
ದೊಳೊಲವ ತೋರಣ
ಹೊಳೆಸುವ ಆ ಬೆಳಕ ಕಿರಣ
ತರುತ ಮರಳಿದೆ
ಮಕರ ಸಂಕ್ರಮಣ. . . 

ಗುರುತನದ ಗುಣ
ಬೆಳೆಬೆಳೆದು ಕ್ಷಣ
ಧರೆಯುಸಿರ ಕಣ
ಕುಣಿಸುವ ನೀಲಾಭರಣ 
ತರುತ ಮರಳಿದೆ
ಮಕರ ಸಂಕ್ರಮಣ,
ಸರಿಸಿ ಸಕ್ರಮದ
ಮತ್ತೊಂದು ಚರಣ 
ಸುರಿಸಿ ಸಂಭ್ರಮದ
ಮುತ್ತಿನಾಭರಣ

***ಮುರಳಿ ಹತ್ವಾರ್

******************************************************************************************************

ಸುಗ್ಗಿಯ ಹಾಡು

ಅನನ್ಯ ಕದಡಿ ನಮ್ಮ ಅನಿವಾಸಿಯ ಹೆಮ್ಮೆಯ ಸದಸ್ಯೆ  ಸ್ಮಿತಾ ಕದಡಿಯವರ ಸುಪುತ್ರಿ. ತನ್ನ ಆರನೆಯ ವರ್ಷದಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಆರಂಭಿಸಿ ಪ್ರಸ್ತುತ ಬೆಂಗಳೂರಿನ ಬೃಂದಾ ಎನ್. ರಾವ್ ಅವರಿಂದ ಆನ್ಲೈನ್ ಕಲಿಕೆ ಮುಂದುವರೆಸಿದ್ದಾಳೆ. ಈಗ A levels ನಲ್ಲಿ ಅಭ್ಯಸಿಸುತ್ತಿರುವ ಇವಳಿಗೆ ಮುಂದೆ ವೈದ್ಯೆಯಾಗುವ ಕನಸು.

ನಮ್ಮ ತಲೆಗೇ ಕನ್ನಡ ಮುಗಿದು ಹೋಗುತ್ತಾ ಎಂಬ ನಮ್ಮಂಥ  ಅನಿವಾಸಿಗಳ ತಳಮಳವನ್ನು ಅನನ್ಯಾಳಂಥ ಮಕ್ಕಳು ತಕ್ಕ ಮಟ್ಟಿಗಾದರೂ ಕಡಿಮೆ ಮಾಡುತ್ತಾರೆ; ಹೊಸ ಭರವಸೆ ಮೂಡಿಸುತ್ತಾರೆ.  

*********************************************************************************************************

ನಂದು  ಬಾತುಕೋಳಿ .. ನಂದು  ಕುದುರೆ ..ನಾನು ದೊಡ್ಡ   ಗೋಪುರ ತಿಂದೆ ….



“ಇದೇನಪ್ಪ ಕುದುರೆ ಬಾತುಕೋಳಿ ಯಾರು ತಿಂತಾರೆ ?!” ಅನ್ಕೋತಿರ್ಬೇಕು ನೀವು.ಇದು ಸಂಕ್ರಾಂತಿಯ ಸಂಭ್ರಮ.. ಮಕ್ಕಳು ಬಿಳಿ ಮತ್ತು ಬಣ್ಣ ಬಣ್ಣದ ವಿವಿಧ ಆಕಾರಗಳ ಸಕ್ಕರೆ ಅಚ್ಚು ಸವಿಯುತ್ತಾ ಮಾತಾಡುವ ರೀತಿ..
ಉತ್ತರ  ಕರ್ನಾಟಕದ ಸಂಕ್ರಮಣ ಹಾಗು ದಕ್ಷಿಣ ಕರ್ನಾಟಕದ  ಸಂಕ್ರಾಂತಿಯ ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ.
ಪ್ರತೀ ವರ್ಷ ನಾವು ಸುಮಾರು ೧೦-೧೨  ವರ್ಷದವರಾಗುವ ತನಕ ಮನೆ ಮನೆಗೆ ಹೋಗಿ ಎಳ್ಳು ಸಕ್ಕರೆ ಅಚ್ಚಿನ  ಪ್ಯಾಕೆಟ್, ಒಂದು ಕಬ್ಬು ಹಾಗು ಯಾವುದಾದರು ಹಣ್ಣು ಒಂದು ತಟ್ಟೆಯಲ್ಲಿ ಜೋಡಿಸಿಕೊಂಡು ಸುಮಾರು ೨೦-೨೫ ಮನೆಗಳಿಗೆ ಬೀರುವ ಪದ್ಧತಿ ನಾವೂ ಪಾಲಿಸುತ್ತಿದ್ವಿ. ”ಎಳ್ಳು ಬೆಲ್ಲ ತಿಂದು ಒಳ್ಳೆ ಒಳ್ಳೆ ಮಾತಾಡೋಣ” ಅನ್ನೋದು.
ನಮ್ಮದು ಮಹಡಿ ಮನೆ. ಕೆಳಗಿನ ಮನೆಯಲ್ಲಿ ಐಯಂಗಾರ್ ಪಾಟಿ.. ಅವರು ತಿಂಗಳ ಮುಂಚಿತವಾಗಿಯೇ ಕೊಬ್ಬರಿ ಹಾಗು ಬೆಲ್ಲದ ಅಚ್ಚನ್ನು ಅಡಕೋತ್ ನಿಂದ ಬಹಳ ನಾಜೂಕಾಗಿ ಪ್ರತಿಯೊಂದು ತುಂಡು ಸಮ ಆಕಾರ ಗಾತ್ರಕ್ಕೆ ಅಚ್ಚುಕಟ್ಟಾಗಿ ಕತ್ತರಿಸಿ, ಕೊಬ್ಬರಿಯನ್ನು ಬಿಸಿಲಿಗೆ ಒಣಗಿಸಲು ಅಂಗಳದಲ್ಲಿ ಬೆತ್ತದ ಮೊರಗಳಲ್ಲಿ ಇಟ್ಟಾಗ  ಸಂಕ್ರಾಂತಿ ಬರುವ ಸೂಚನೆ ಸಿಗುತ್ತಿತ್ತು. ಆದರೆ ನಮ್ಮ ಮನೆಯಲ್ಲಿ ಆ ಪದ್ಧತಿ ಇಲ್ಲದ ಕಾರಣ ದೇವರ ನೈವೇದ್ಯಕಷ್ಟೇ ಅಮ್ಮ ಎಳ್ಳು ಬೆಲ್ಲ ಮಾಡುತ್ತಿದ್ದಳು. ನಮ್ಮ ತಂದೆಗೆ  ಹಬ್ಬ ಅಂದ್ರೆ ಹುರುಪು. ೨-೩ ಅಂಗಡಿಗಳಲ್ಲಿ  ತಿರುಗಾಡಿ ಶೇಂಗಾ,ಬೆಲ್ಲದ ತುಂಡುಗಳು,ಕುಸುರೆಳ್ಳು ಎಲ್ಲಾ ತಂದು ಅಂಗೈ ಅಗಲದ ಪ್ಲಾಸ್ಟಿಕ್ ಪೊಟ್ಟಣದಲ್ಲಿ  ಇವೆಲ್ಲ ಸಾಮಾನಿನ ಮಿಶ್ರಣ ಮಾಡಿ ಅದನ್ನು ತುಂಬಿ ಸ್ಟೇಪ್ಲರ್ ಹೊಡೆದು ಹಿಂದಿನದಿನವೇ ತಯ್ಯಾರಿ ಮಾಡುತ್ತಿದ್ದರು.
ಸಕ್ಕರೆ ಅಚ್ಚಿನ ಕಥೆಯೇ ಬೇರೆ.. ಮೊದಮೊದಲು ನಾವೂ ಅಂಗಡಿಯಿಂದ ಅಚ್ಚನ್ನು ತಂದು ಬೀರುತ್ತಿದ್ವಿ. ನಂತರ ಅಮ್ಮ ಹಾಗು ಅವಳ ಫ್ರೆಂಡ್ಸ್ ಎಲ್ಲಾ ಸೇರಿ ಮನೆಯಲ್ಲೇ ಸಕ್ಕರೆ ಅಚ್ಚು ಮಾಡುವ ವಿಧಾನ ಕಲಿತು ಅದೊಂದು ಸಂಭ್ರಮವೇ ಆಯಿತು. ಮನೆಯಲ್ಲಿ ಮಾಡಿದ ಅಚ್ಚಿನ ರುಚಿನೇ ಬೇರೆ.. ಬಣ್ಣ ನೋಡೀನೇ ಹೇಳಬಹುದು.ಬಾಯಿಯಲ್ಲಿ ಇಟ್ಟ ತಕ್ಷಣ ಕರಗಿ..ಆಹಾ … ಮರೆಯಲಸಾಧ್ಯ ಆ ದಿನಗಳು .. ಕೆಲವೊಬ್ಬರು ಹಳೇ ಮೈಸೂರಿನವರು ಪ್ರತಿಯೊಬ್ಬರಿಗೂ ಸ್ಟೀಲಿನ ಪುಟ್ಟ ಡಬ್ಬಿ, ತಟ್ಟೆಯಲ್ಲಿ ಎಳ್ಳು ಬೀರುತ್ತಿದ್ದರು. ನಂತರ ಬಣ್ಣ ಬಣ್ಣದ ಪ್ಲಾಸ್ಟಿಕ್ ಡಬ್ಬಿಯ ಹಾವಳಿ.
ಹೀಗೆ ನಾವು ಬೀದಿಯ ಸಮ ವಯಸ್ಸಿನ ಹೆಣ್ಣು ಮಕ್ಕಳೆಲ್ಲಾ ಗುಂಪು ಮಾಡಿಕೊಂಡು ಮನೆಯಿಂದ ಮನೆಗೆ ಎಳ್ಳು ಕಬ್ಬು ಬೀರುತ್ತಿರುವಾಗ ಯಾರ ಮನೆಯ ಸಕ್ಕರೆ ಅಚ್ಚು ಅದ್ಭುತವಾಗಿರುತ್ತದೆ ಅಂತ ನಮಗೆ ಮೊದಲೇ ತಿಳಿದ ಕಾರಣ ಅವರ ಮನೆಯಿಂದ ಹೊರಬರುತ್ತಿವಾಗಲೇ ರಸ್ತೆಯಲ್ಲಿ ಸವಿಯುತ್ತಾ ನಾನು ಅದೆಷ್ಟೋ ಬಾತುಕೋಳಿ, ಕುದುರೆ, ಗಂಡಭೇರುಂಡ, ಆನೆ ಹಾಗು ಗೋಪುರಗನ್ನು ಗುಳುಂ ಎನಿಸಿದ್ದೇನೆ..

ಇವೆಲ್ಲಾ ಕಥೆ ಮನೆಗೆ ಬಂತಕ್ಷಣ ಹೇಳುತ್ತಿರುವಾಗ ಅಮ್ಮ ತಮ್ಮ ಬಾಲ್ಯದ ನೆನಪು ತೆಗೆಯುತ್ತಿದ್ದರು. ಈ ಉತ್ತರ ಕರ್ನಾಟಕದವರು ಒಂದೇ ದಿನ ಹಬ್ಬ ಮಾಡೋದಿಲ್ಲ! ಯಾಕೋ ಏನೋ ಎಲ್ಲಾ ದಿನಗಟ್ಟಲೆ!! ಸಂಕ್ರಮಣದ ಹಿಂದಿನ ದಿನ ಭೋಗಿ .. ಅದರ ಊಟಾ.. ಭಾರಿ ಜೋರ್ ! ಎಳ್ಳು ಹಚ್ಚಿದ  ಸಜ್ಜಿ ರೊಟ್ಟಿ, ಖಾರ್ ಹುಗ್ಗಿ ಸೀ ಗೊಜ್ಜು, ಶೇಂಗಾ ಹೋಳಗಿ.. ಅಮ್ಮನ ಕಾಲದಾಗ ಸಂಕ್ರಮಣದ  ದಿನ ಗಾಜಿನ ಛಂದಾಛಂದ ಬಾಟಲಿ ಯೊಳಗ ಕುಸುರೆಳ್ಳು ತುಂಬಿಕೊಂಡು ಹಿರಿಯರ ಕೈಯಾಗ್ ಕೊಟ್ಟು ”ಎಳ್ಳು ಬೆಲ್ಲ ಕೊಟ್ಟ ಎಳ್ಳು ಬೆಲ್ಲದ್ಹಂಗ ಇರೋಣು” ಅಂದು ನಮಸ್ಕಾರ ಮಾಡೋದು.

ಮೈಸೂರ್ ನ್ಯಾಗ ಸೀ ಪೊಂಗಲ್ ಖಾರ ಪೊಂಗಲ್ ಅದ್ರ ಮುಗಿತು ಹಬ್ಬ, ಅನ್ನೋರು. ನಂಕಡೆ ಭಕ್ರಿ, ಹೋಳಗಿ ಎಷ್ಟು ಥರಾವರಿ ಅಡಗಿ. ಆದರೆ ನಮಗೆ ಮೈಸೂರೆಂದ್ರೆ ಎಲ್ಲಿಲ್ಲದ  ಅಭಿಮಾನ.. ಆಗ ಏನು ಅoತಿರಲಿಲ್ಲ.. ಈಗ ನೋಡಿದರೆ ಯಾವ ಪ್ರದೇಶದಲ್ಲಿ ಏನು ಬೆಳೆಯುತ್ತಾರೋ ಅದನ್ನೇ ಅಲ್ಲವೇ ತಿನ್ನೋದು ಅಂತ ನಾನು ನನ್ನ ಅಕ್ಕ ಸಮರ್ಥಿಸಿಕೊಳ್ಳುತ್ತೇವೆ .. ಒಂದೇ ರಾಜ್ಯವಾದರೂ ಎಷ್ಟೆಲ್ಲಾ ವಿವಿಧತೆ.  ನಲವತ್ತು ವರ್ಷಗಳ ಹಿಂದೆ ಜೋಳ ಸಜ್ಜೆ ಮೈಸೂರಿನಲ್ಲಿ ಜನಪ್ರಿಯವಿರಲಿಲ್ಲ. ಹಬ್ಬಕ್ಕೆ ಜೋಳದ ರೊಟ್ಟಿ ಅಂದ್ರೆ ಆಶ್ಚರ್ಯ ಪಡುತ್ತಿದ್ದರು. ಬಹುಷಃ ಇಂಗ್ಲೆಂಡಿನಲ್ಲಿ ಸಂಕ್ರಾಂತಿಯ ಪದ್ಧತಿ ಇದ್ದಿದ್ದ್ರೆ ಆಲೂಗಡ್ಡೆಯ ವಿಧವಿಧವಾಗಿ ಅಡಿಗೆ ಜಾಕೆಟ್ ಪೊಟಾಟೋ, ಮ್ಯಾಶ್ಡ್ ಪೊಟಾಟೋ, ಪೊಟಾಟೋ ಪೈ ಅಂತ ಮಾಡ್ತಿದ್ರೋ ಏನೋ? ನಾವು ಹೇಗೆ ಮನೆ ಮನೆಗೆ ಹೋಗಿ ಎಳ್ಳು ಕೊಟ್ಟಂತೆ ನಮ್ಮ ಮನೆಗೂ ಅಕ್ಕ ಪಕ್ಕದವರು ಎಳ್ಳು ಕೊಡುತ್ತಿದ್ದರು. ಮನೆಯಲ್ಲಿ ಎಲ್ಲಿ ನೋಡಿ ಎಳ್ಳಿನ ಪ್ಯಾಕೆಟ್. ಕಿಲೋಗಟ್ಟಲೆ ಈ ಎಳ್ಳಿನ ಮಿಶ್ರಣ.. ಸರಿ! ಈಗ ಏನ್ ಮಾಡಬೇಕು ಈ ಮಿಶ್ರಣ ಇಟ್ಕೊಂಡು? ಅಮ್ಮನ ಐಡಿಯಾ! ಅಪ್ಪನಿಗೆ ಆರ್ಡರ್ ಕೊಟ್ರು! ಈ ಮಿಶ್ರಣದಿಂದ ಕುಸುರೆಳ್ಳು, ಬೆಲ್ಲ ಬೇರೆ ಮಾಡಿ ಅಂತ. ಪಾಪ! ಅಪ್ಪ .. ಬೇಸರವಿಲ್ದೆ ಅದನ್ನು ಬೇರೆ ಮಾಡಿ ಕೊಟ್ರು .. ಅಮ್ಮ ಅದರಿಂದ ಚಟ್ನಿ ಪುಡಿ, ಆ ಪುಡಿ ಈ ಪುಡಿ ಮಾಡಿ.. ಸಂಕ್ರಮಣದ ಕಥೆ ಮುಗಿಸಿದರು. ಒಟ್ಟಿನಲ್ಲಿ ಹೀಗೆ ವರ್ಷಾರಂಭದಿಂದ ಕಡೆಯತನ ಬರುವ ಎಲ್ಲಾ ಹಬ್ಬಗಳನ್ನು ನಾನು ನನ್ನ ಅಕ್ಕ ನಾರ್ತ್ ಸೌತ್ ನ ಹೋಲಿಕೆ ಹುಡುಕಲಾಗದೆ ಅಲ್ಲೂ ಇಲ್ಲ ಇಲ್ಲೂ ಅಂತ ಹಬ್ಬದ ಎಲ್ಲಾ ಪದ್ಧತಿ ಅನುಸರಿಸಲು (ಅನುಕರಣೆ) ಪ್ರಯತ್ನಿಸುತ್ತಾ ಸುಸ್ತಾಗುತ್ತಿದ್ದೇವೆ. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು. ***ರಾಧಿಕಾ ಜೋಶಿ.

******************************************************************************************************

 

ಕವಿತೆಗಳು

ಪ್ರಿಯ ಓದುಗರೇ, 
ಈ ವಾರ 'ಅನಿವಾಸಿ'ಯಲ್ಲಿ ನಿಮ್ಮ ಓದಿಗೆ, ಡಾ ಪ್ರೇಮಲತಾ ಅವರು ಬರೆದ ಶರದೃತುವಿನ ಕುರಿತಾದ ಚಂದದ ಕವಿತೆ ''ಶರತ್ಕಾಲ'' ಮತ್ತು ನಮ್ಮ ಬಳಗದ ಹೊಸ ಸದಸ್ಯೆ ವಿಜಯಲಕ್ಷ್ಮಿಶೇಡಬಾಳ್ ಅವರು ಬರೆದಿರುವ  ''ಅಪ್ಪು ಅಣ್ಣನ ನೆನಪು'' ಎಂಬೆರೆಡು ಕವಿತೆಗಳಿವೆ. ಎಂದಿನಂತೆ ತಾವು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ. ಜೊತೆಗೆ ನಿಮ್ಮ ಬರಹಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತ, ಈ ವಾರದ ಓದಿಗೆ ನಿಮಗಿದೋ ಸ್ವಾಗತ. 
- ಸಂಪಾದಕಿ 
ಚಿತ್ರ: ಅಮಿತಾ ರವಿಕಿರಣ್
ಶರತ್ಕಾಲ- ಡಾ ಪ್ರೇಮಲತಾ ಬಿ 

ಹಿತಚಳಿ  ಮೈ ನೇವರಿಸಿ
ನಿಂತೂ ನಿಲ್ಲದ ಮಳೆ ನೆನಪು
ಅದುರದುರಿ ಹಾರಾಡುವ ತರಗೆಲೆ
ಗಾಳಿ ಗುಡಿಸಲಾಗದ ಬಯಕೆ ಕಾವು

ಮಂದ್ರ ನದಿಯು ತೂಗಿ
ಅಲೆಗಳೆದ್ದ  ಪರಿಗೆ
ದಂಡೆಗೂ ಅರೆಕ್ಷಣದ ಉದ್ವೇಗ
ಗತಿ ಬದಲಿಸಿ ಸಾಗುವ ಮಂದ ಮಾರುತ

ಮುಗಿಲ ಕಣ್ಣಾಮುಚ್ಚಾಲೆಯಲಿ ತಿಮಿರ
ನುಂಗಿದ  ಸುವರ್ಣವದನ ಸೂರ್ಯ
ಬಾಣ ಹೂಡುತ ಬಾನ ಕತ್ತಲಲಿ
ತುಸು ಹೆಚ್ಚೇ ನಗುವ ಚಂದ್ರ

ಉದ್ದುದ್ದ ರಾತ್ರಿಯಲಿ ಹುಚ್ಚೆದ್ದು
ಕುಣಿವ ನೆರಳುಗಳು
ಬೆಳಕನೇ ಅಡವಿಟ್ಟು ಗೂಡು ಕಟ್ಟುತ
ಸಾಂದ್ರವಾಗುವ ಒಳ ಕೂಗು

ಎಲೆಗೆಲೆಯು ಓಕುಳಿಯಾಟ
ವನವೆಲ್ಲ ವರ್ಣರಂಜಿತ
ಮಂಜುಕಟ್ಟುವ ಬೆಳಗಿಗು
ಕಣಿವೆಯಲೇಳುವ ಮುಗಿಲಿಗು
ಮೈ ತುಂಬಿಕೊಂಡ ಸಂತಸ

ಹಗಲ ತಬ್ಬುತ ಇಳಿವ ಕತ್ತಲೆ
 ಕಡುಕಪ್ಪು ಅಗಾಧ ಈ ಕೌತುಕ
****************************
ಅಣ್ಣ ಅಪ್ಪುವಿನ ನೆನಪುಗಳು  -  ವಿಜಯಲಕ್ಷ್ಮಿ ಶೇಡಬಾಳ್

ಅಣ್ಣ ಆಪ್ಪು, ನೀ ಕೊಂಚ ಕಪ್ಪು।
ನಿನ್ನ ಹೃದಯ  ವಜ್ರಕ್ಕಿಂತಲೂ ಹೊಳಪು।।

ಅಪ್ಪು  ಅಣ್ಣ, ನಿನ್ನ ಅಪ್ಪ ಅಮ್ಮ ಬಿಟ್ಟು ಹೋದರೂ ಸದಾ ಅವರ ನೆನಪು ನಿನಗೆ।
ಈಗ ಹೇಳು ಆ ತರಹದ ನೆನಪುಗಳನ್ನು  ಪೂರ್ತಿ ಮಾಡದೆ ಅರ್ಧದಲ್ಲೆ  ಅವಸರದಲಿ ಏಕೆ  ಬಿಟ್ಟು ಹೋದೆ ನಿನ್ನ ಮಕ್ಕಳನು


ಅಪ್ಪು ಅಣ್ಣ, ಸಾವಿರಾರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಪರಿಹಾರ  ಕೊಟ್ಟೆ  
ಕರೋಡಪತಿಯಾದ ನೀನು ನಿನ್ನ ಮಗಳ ಉನ್ನತ ಶಿಕ್ಷಣ ಮಾಡಲು 
ಕಷ್ಟ ಪಟ್ಟು ವಿದ್ಯಾರ್ಥಿವೇತನ ಪಡೆಯುವ ಶೈಲಿಯ ಕಲಿಸಿಕೊಟ್ಟೆ

ಅಪ್ಪು ಅಣ್ಣ,  ಕೋವಿಡ್ ಸಮಯದಲಿ ದುಡ್ಡು ಇರುವವರ ಕೈ ಹಾಗೂ ಮನಸ್ಸು ಚಿಕ್ಕದಾಗಿಬಿಟ್ಟಿತ್ತು  
ಆದರೆ ಆ ಸಮಯದಲಿ ನೀನು ಮಾಡಿದ ಧಾನ ಎಷ್ಟು ದೊಡ್ದದು, ನಿನ್ನ ಕೈ ಹಾಗೂ ಮನಸ್ಸು ಎಷ್ಟು ವಿಷಾಲವಾದದು ಎಂದು ತೋರಿಸಿಬಿಟ್ಟಿತು।।

ಅಪ್ಪು  ಅಣ್ಣ, ನೀನು ನಗು ಬಾರದಿದ್ದವರಿಗೆ ನಿನ್ನ ನಟನೆಯ ಮೂಲಕ ನಗೆಸಿ ಬಿಟ್ಟೆ ।
ನೀನು ಯೋಗ್ಯವಾದ ಕಥೆ ಹಾಗೂ ಅಭಿನಯದ ಮೂಲಕ
 ನಮ್ಮೆಲ್ಲರ ಪರಿವಾರಗಳಲಿ ಪರಸ್ಪರ ಪ್ರೀತಿ ಹುಟ್ಟಿಸಿ ರಾಜಕುಮಾರ ನೀನಾದೆ।।

ಅಪ್ಪು ಅಣ್ಣ, ನೀನು ಮಾಡಿದ ಅತ್ಯಮೂಲ್ಯ ಪರಿಕಲ್ಪನೆಯ ಜಾಹಿರಾತುಗಳಾದ
 ಶಿಕ್ಷಣ, Kmf Nandini ಹಾಲು ಅಥವಾ Pothys Go Green Kannada ಯಾರೂ ಮಾಡಿಲ್ಲಾ ।
ನಿನ್ನನ್ನು POWER STAR ಎಂದು ಸುಮ್ಮನೆ ಕರೆಯಲು ಸಾಧ್ಯವಿಲ್ಲಾ   ।।

ಅಪ್ಪು ಅಣ್ಣ, ನೀನು ಆರಂಭಿಸಿದ ಆಶ್ರಮಗಳಿಗೆ ಮುಂದಾಲೋಚನೆ 
ಮಾಡಿ ಸದಾ ಸುರಕ್ಷಿತವಾಗಿರಲು ಹೆಚ್ಚು ಪರಿಹಾರವ ಕೊಟ್ಟು ಕ್ಷೇಮವಾಗಿಟ್ಟೆ ।
ಆದರೆ, ಈಗ ಹೇಳು ನೀ ಗೆದ್ದಿರುವ ಕೊಟ್ಯಾoತರ ಹೃದಯಗಳಿಗೆ ಹೇಗೆ ಸಮಾಧಾನ ಪಡಿಸುವೆ?

ಅಪ್ಪು ಅಣ್ಣ, ಹೋಗುತ್ತಾ ಅಂಧರಿಗೆ ನಿನ್ನ ಕಣ್ಣು ಕೊಟ್ಟೆ ।
ಇನ್ನು ನಮಗೆ ಬರೀ ನಿನ್ನ ನೆನಪುಗಳು ಮಾತ್ರವೇ?
**************************************