ಎಳ್ಳೆಣ್ಣೆಯ ಎರಡು ದೀಪ.
_ ಡಾ. ದಾಕ್ಷಾಯಿಣಿ ಗೌಡ
ಈ ಬಾರಿ,ಹೊಸ ಪರಿಯ ಕಳಕಳಿ
ನಮ್ಮ ನಿಮ್ಮೆಲ್ಲರ ಈ ದೀಪಾವಳಿ
ನಮ್ಮೂರಲ್ಲಿ, ಗೃಹಜ್ಯೋತಿಯ ಆಗಮನ,
ಆದರೇನು, ಯೂನಿಟ್ನ ಮಿತಿಮೀರದೆಡೆ ಗಮನ
ಸಾಮಾನ್ಯರಿಗೆ ಎಣ್ಣೆ ಬಲು ದುಬಾರಿ,
ಸರ್ಕಾರದ ಖರ್ಚಿನಲ್ಲಿ ಕೋಟಿ ದೀಪಗಳ ಅದ್ದೂರಿ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.
ಈ ಊರಲ್ಲೂ ಬಗ್ಗುತ್ತಿಲ್ಲ ಹಣದುಬ್ಬರ
ಕೈಗೆಟುಕದು ಬಡತನಕೆ ವಿದ್ಯುತ್ ದರ.
ಬಿಸಿ ಊಟ, ಬಿಸಿಗಾಳಿ ಆಶಿಸುವ ಎದೆ, ಉದರ,
ಎಚ್ಚರಿಕೆ, ಕೂಗುತಿದೆ, ಹಿಮಗಾಳಿಯ ಅಬ್ಬರ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.
ಕಾಂಚಾಣ ಕುಣಿಸಿದಂತೆ ಆಡುವ, ತೂಗುವ ಬೆಳಕು,
ಗಗನ ಕುಸುಮ, ಬಡತನಕೆ, ಬಹುದೀಪಗಳ ಥಳುಕು.
ಲಕ್ಷದೀಪವಿರಲಿ, ಕಗ್ಗತ್ತಿನ ಕತ್ತಲಿರಲಿ ಹೊರಗೆ,
ಮಿನುಗಲಿ ನಿಮ್ಮ ನಮ್ಮೊಳಗೆ ಆನಂದದ ದೀಪ,
ಹೊಸಬಗೆಯ ಬೆಳಕಲಿ, ಬೆಳಗಲಿ ನಮ್ಮ ಸೃಷ್ಟಿಯ ದ್ವೀಪ.
ಅನಬೆಲ್ಲ ಹೇಳಿದ ಅಮರಾಂತೆ ಕಥೆ - ಡಾ.ಮುರಳಿ ಹತ್ವಾರ್
ಅಮರಾಂತೆ ಪೋರ್ಚುಗಲ್ಲಿನ ಒಂದು ಸಣ್ಣ ಊರು. ಅದರ ಮಧ್ಯದಲ್ಲೊಂದು ನದಿ, ಅದರ ಹೆಸರು ತಮೆಗಾ. ಡ್ಯುರೋ ನದಿಯ ಉಪನದಿಯಾದ ಇದರ ಒಂದು ಕಡೆ ಈಗ ಹೊಟೇಲಾಗಿರುವ ಹಳೇ ಕಾಲದ ಶ್ರೀಮಂತನ ಬಂಗಲೆ ಮತ್ತದರ ಸುತ್ತ ಬೆಳೆದ ಮನೆಗಳು, ಅಂಗಡಿಗಳು ಇತ್ಯಾದಿ. ಇನ್ನೊಂದು ಕಡೆ, ಸಂತ ಗೋನ್ಸಾಲನ ಇಗರ್ಜಿ ಮತ್ತದರ ಹಿಂದೆ ಯಾವತ್ತೋ ಇದ್ದ ಕಾಡನ್ನು ಮರೆಸಿ ಬೆಳೆದ ಊರು. ಮಧ್ಯದಲ್ಲೊಂದು ಅವೆರಡನ್ನೂ ಸೇರಿಸುವ ಹಳೆಯ ಬ್ರಿಡ್ಜ್ . ಸುಮಾರು ೭೦೦ ವರ್ಷದ ಹಿಂದೆ ಇದ್ದ, ಮೊದಲು ಪಾದ್ರಿಯಾಗಿ, ಆಗಾಗ ಪವಾಡ ಮಾಡಿ, ದೊಡ್ಡ ಮೊನಾಸ್ಟರಿಯೊಂದನ್ನು ಕಟ್ಟಿ, ಕಡೆಗೆ ಸಂತರಾದ ಗೋನ್ಸಾಲರ ಇಗರ್ಜಿಯ ಅಮರಾಂತೆ ಈಗ ಪೊರ್ಟೊ ನಗರದಿಂದ ಡ್ಯುರೋ ಕಣಿವೆಗೆ ಮುಂಜಾನೆ ಹೊರಟು ಸಂಜೆಗೆ ಮರಳುವ ಪ್ಯಾಕೇಜ್ ಟೂರಿಗರಿಗೆ ಮೊದಲು ಸಿಗುವ ಸ್ಟಾಪ್.
ಪೊರ್ಟೊ ದಲ್ಲಿ ಮುಂಜಾನೆ ಎಂಟಕ್ಕೆ ಟೂರಿನ ಮಿನಿ ಬಸ್ ಆಫೀಸಿಗೆ ವಿಧೇಯ ವಿದ್ಯಾರ್ಥಿಗಳಂತೆ ಅರ್ಧ ಗಂಟೆ ಮುಂಚೆಯೇ ತಲುಪಿದ್ದ ನಮಗೆ, ಅಲ್ಲಿನ ಏಜೇಂಟ್ ಒಬ್ಬ ನಮ್ಮ ಬಸ್ ನಂಬ್ರ ೧೯ ಮತ್ತು ಗೈಡ್ ಅನಬೆಲ್ಲ ಎಂದು ಪ್ರಿಂಟಾದ ಚೀಟಿ ಕೊಟ್ಟ. ಅದಾಗಿ ಸ್ವಲ್ಪ ಹೊತ್ತಿಗೆ ಆ ಬಸ್ಸು ಮತ್ತದರೊಟ್ಟಿಗೆ ಬಂದಿಳಿದ ಮಧ್ಯ ವಯಸ್ಸಿನ ಸ್ಥೂಲ ಕಾಯದ ಅನಬೆಲ್ಲ, ಗಟ್ಟಿ ದನಿಯಲ್ಲಿ ಬಸ್ಸಿನ ನಂಬ್ರ ಮತ್ತೆ ಹೊರಡುವ ಟೈಮನ್ನು ಮೊದಲು ಇಂಗ್ಲಿಷಿನಲ್ಲೂ ನಂತರ ಫ್ರೆಂಚಿನಲ್ಲೂ ಕೂಗಿ, ಆ ಕರೆಗೆ ಕಾದವರಂತೆ ಗಡಿಬಿಡಿಯಲ್ಲಿ ಅನಬೆಲ್ಲ ಸುತ್ತ ಸೇರಿದ ಜನರನ್ನ ಬಸ್ಸೇರಿಸಿ, ಕಡೆಗೆ ತಾನೂ ಹತ್ತಿ ಮುಂದಿನ ಸೀಟಿನಲ್ಲಿ ಕುಳಿತು, ಕೈಗೊಂದು ವಯರಿನ ಮೈಕೆಳೆದುಕೊಂಡು ಮಾತು ಶುರುಮಾಡಿದಳು.
ಅವಳ ಮಾತುಗಳು ರೆಕಾರ್ಡೆಡ್ ಟೇಪಿನಂತೆ ಇಂಗ್ಲಿಷ್-ಫ್ರೆಂಚ್ ತಾಳದಲ್ಲಿ ಬಸ್ಸಿನ ಕಿಟಕಿಯಾಚೆ ಕಾಣುವ ಐತಿಹಾಸಿಕ ಕಟ್ಟಡಗಳು, ಬ್ರಿಡ್ಜುಗಳು, ಸುರಂಗಳು ಅವನ್ನೆಲ್ಲ ಆದಷ್ಟು ಕಡಿಮೆ ಶಬ್ದಗಳಲ್ಲಿ ಹೇಳುತ್ತಾ, ಮಧ್ಯೆ ಮಧ್ಯೆ ನಗೆ ತಾರದ ಜೋಕುಗಳನ್ನು ಉರುಳಿಸುತ್ತಾ, ಆದಷ್ಟು ಮೊಬೈಲ್ ಫೋನಿನಲ್ಲಿ ಅದ್ದಿದ ಮುಖಗಳನ್ನು ಹೊರ ತೆರೆಯಲು ಪ್ರಯತ್ನಿಸುತ್ತಿದ್ದಳು. ಕಡೆಗೊಮ್ಮೆ ಬಸ್ಸು ನಿಧಾನಿಸಿ ನಿಂತಾಗ, ಎಲ್ಲರನ್ನು ಕೆಳಗಿಳಿಸಿ, ಪಕ್ಕದ ಕಟ್ಟೆಯ ಮೇಲೆ ನಿಂತು, ಕೆಳಗೆ ಹರಿಯುತ್ತಿದ್ದ ತಮೆಗಾ ನದಿಯ ಪರಿಚಯವನ್ನೂ, ಗೋನ್ಸಾಲರ ಇಗರ್ಜಿಯನ್ನೂ ತೋರಿಸಿ, ಮುಕ್ಕಾಲು ಘಂಟೆಯೊಳಗೆ ಎಲ್ಲ ಸುತ್ತಿ, ಫೋಟೋದಲ್ಲಿ ಕಟ್ಟುವಷ್ಟು ಕಟ್ಟಿ, ಮತ್ತೆ ಬಸ್ಸಿನಲ್ಲಿರಬೇಕೆಂದು ಅಪ್ಪಣಿಸಿದಳು. ಅಷ್ಟಕ್ಕೇ ನಿಲ್ಲಿಸದೆ, ತನ್ನ ಮೊಬೈಲಿನಲ್ಲಿದ್ದ ಫೋಟೋವೊಂದನ್ನು ಗುಂಪಿನ ಎಲ್ಲ ಅಡಲ್ಟಿಗರಿಗೆ ತೋರಿಸುತ್ತ, ಅವರ ನಾಚಿಕೆಯ, ಆಶರ್ಯದ ನಗುವಿಗೆ ತಾನು ನಗುತ್ತ, ಅದೊಂದು ಜೋಕು ಎಂದಳು. ಅವಳು ತೋರಿಸಿದ ಆ ಫೋಟೋದ ಮರ್ಮ ಮತ್ತು ಅದರ ಹಿಂದಿನ ಜೋಕು ಆಗ ಅರ್ಥವಾಗಿರಲಿಲ್ಲ. ಸುಮ್ಮನೆ ನಕ್ಕೆವು.
ಅನಬೆಲ್ಲ ಹೇಳಿದಂತೆ, ಆ ಹಳೆಯ ಬ್ರಿಡ್ಜಿನತ್ತ ನಡೆದು, ಅದರ ಮೇಲೆ ನಿಂತು ಆಚೆ ಈಚೆಯ ಕಟ್ಟಡಗಳನ್ನು, ಕೆಳಗೆ ಹರಿಯುತ್ತಿರುವ ನದಿಯ ಹರಿವನ್ನೂ ನೋಡುತ್ತಾ, ಗೊನ್ಸಾಲರು ತಮ್ಮ ಪವಾಡದಲ್ಲಿ ಮೊದಲು ಕಟ್ಟಿದ, ಆನಂತರ ೧೭-೧೮ ಶತಮಾನದಲ್ಲಿ ಮತ್ತೆ ಹೊಸದಾಗಿ ಕಟ್ಟಿದ, ನೆಪೋಲಿಯನ್ನಿನ ಕಾಲದಲ್ಲಿ ನಡೆದ ಹೋರಾಟದಲ್ಲಿ ಸಿಡಿದ ಗುಂಡುಗಳ ಕಲೆಯನ್ನ ಇನ್ನೂ ಸಾಕಿರುವ ಆ ಬ್ರಿಡ್ಜನ್ನು ದಾಟಿ, ಅಮರಾಂತೆಯ ಸಂತರ ಇಗರ್ಜಿಯತ್ತ ನಡೆದ ನಮಗೆ, ಮೊದಲು ಕರೆದದ್ದು ಅಲ್ಲಿನ ಕಾರ್ ಪಾರ್ಕಿನ ಪಕ್ಕದ ಸಣ್ಣ ತೋಟದಲ್ಲಿ ದೊಡ್ಡದಾಗಿ ಇಂಗ್ಲಿಷ್ ಅಕ್ಷರಗಳಲ್ಲಿ ನಿಲ್ಲಿಸಿಟ್ಟ AMARANTE. ಬಣ್ಣ ಬಣ್ಣದ ಆ ದೊಡ್ಡ ಅಕ್ಷರಗಳ ಮುಂದೆ ನಿಂತು ಫೋಟೋದಲ್ಲಿ ನಮ್ಮ ಜೊತೆ ಅದನ್ನು ಸೇರಿಸಿ ಹೊರನಡೆಯುವಾಗ, ಪಕ್ಕದಲ್ಲೇ ಚಪ್ಪರವೊಂದರ ಕೆಳಗೆ ಒಂದಿಷ್ಟು ಸಾಮಾನುಗಳನ್ನು ಮಾರುತ್ತಿದ್ದ, ಆ ಕಾರ್ ಪಾರ್ಕಿನ ಒಂದೇ ಅಂಗಡಿಯತ್ತ, ಅಲ್ಲಿನ 'ವಿಶಿಷ್ಣ' ಆಕಾರದ, ಪ್ಲಾಸ್ಟಿಕಿನಲ್ಲಿ ಸುತ್ತಿಟ್ಟ ವಸ್ತುಗಳನ್ನ ಏನೆಂಬ ಕುತೂಹಲದಲ್ಲಿ ನೋಡಲು ಹತ್ತಿರ ಹೋದೆವು. ಅಲ್ಲಿದ್ದದ್ದು, ಅನಬೆಲ್ಲ ಫೋನಿನಲ್ಲಿ ಜೋಕೆಂದು ತೋರಿಸಿದ ಆಕಾರದ ಸಣ್ಣ, ದೊಡ್ಡ, ಗಟ್ಟಿ, ಮತ್ತು ಮೆತ್ತನೆಯ ವೆರೈಟಿಯ ಕೇಕುಗಳು.
ಆ ಕೇಕುಗಳ ದರ್ಶನದಿಂದ ಮನಸ್ಸಿನಲ್ಲಿ ಕುಣಿಯುತ್ತ ಮುಖದಲ್ಲಿ ಹೊರಬರಲು ಯತ್ನಿಸುತ್ತಿದ್ದ ಚೇಷ್ಟೆಯ ಹುಡುಗುತನವನ್ನ ಸ್ವಲ್ಪ ಬದಿಗಿಟ್ಟು, ಆ ಅಂಗಡಿಯ ಒಡತಿಗೆ, ಆ ಕೇಕುಗಳ ಆಕಾರದ ಹಿಂದಿನ ಕಥೆ ಏನೆಂದು ಕೇಳಿದೆವು. ನಮ್ಮ ಇಂಗ್ಲೀಷು ಆಕೆಯ ಪೋರ್ಚುಗೀಸು ನಡುವೆ ಯಾವುದೇ ಸೇತುವೆ ಇಲ್ಲದ ಕಾರಣ, ಕೈ ಸನ್ನೆಯಲ್ಲಿ ಒಂದು ಕೇಕಿನ ದುಡ್ಡು ಕೇಳಿ, ಕೊಂಡು, ಸಕ್ಕರೆಯ ಐಸಿಂಗಿನ ಆ ಕೇಕಿನ ಪ್ಲಾಸ್ಟಿಕಿನ ಬಂಧನದಿಂದ ಹೊರ ತಂದು, ತರತರದಲ್ಲಿ ಕೈಯಲ್ಲಿ ಹಿಡಿದು, ಫೋಟೋ ಮತ್ತು ವಿಡಿಯೋಗಳಲ್ಲಿ ಅದನ್ನು ವರ್ಣಿಸಿ, ಆಪ್ತ ಗೆಳೆಯರ ವಾಟ್ಸಪ್ಪ್ ಗುಂಪಿಗೆ ಆ ಕೇಕನ್ನು ವಿಡಿಯೋದ ಮೂಲಕ ಅರ್ಪಿಸಿ, ಮುನ್ನಡೆದೆವು. ಆಗ ಮಾತೆಲ್ಲ ಆ ಕೇಕು ಹುಟ್ಟಿದ, ಮತ್ತೆ ಹೀಗೆ ದಿನ ದಿನ ಅಮರಾಂತೆಯ ಹಲವು ಓವನ್ನು ಗಳಲ್ಲಿ ಬೇಯುತ್ತಿರುವ ಅದರ ಅವತಾರಗಳ ಹಿಂದಿನ ಕಾರಣಕ್ಕೆ ನಮ್ಮ ಊಹೆಯ ಪಟ್ಟಿ.
ಹಾಗೆ ಪಕ್ಕದ ಇಗರ್ಜಿಯ ಮುಂದಿಷ್ಟು ಭಂಗಿಗಳಲ್ಲಿ ನಮ್ಮನ್ನು ಫ್ರೇಮಿಸಿಕೊಂಡು, ಬ್ರಿಡ್ಜಿನ ಮೊದಲ ಬದಿಗೆ ಮರಳಿ, ಪಕ್ಕದ ಬೀದಿಯಲ್ಲಿ ಕಾಪಿಯ ಬಾಯಾರಿಕೆಗೆ ಹೊರಟ ನಮಗೆ ಮತ್ತೆ ಅಲ್ಲಿನ ಟೂರಿಸ್ಟ್ ಅಂಗಡಿಗಳ ಮ್ಯಾಗ್ನೆಟ್ಟುಗಳಲ್ಲಿ, ಹಾಗೆಯೇ ಆ ಬೀದಿಯ ಕೆಲವು ಬೇಕರಿಗಳಲ್ಲಿ ಮತ್ತದೇ ಕೇಕಿನ ದರ್ಶನ. ಬೇಕರಿಯ ಕೇಕುಗಳಿಗೆ ಸಕ್ಕರೆಯ ಕವಚವಿದ್ದರೆ, ಮ್ಯಾಗ್ನೆಟಿನ ಚಿತ್ರಗಳ ಕೇಕಿನ ಮೇಲೆ ಒಂದು ಹಲ್ಲಿ. ಆ ಮ್ಯಾಗ್ನೆಟ್ಟನ್ನು ಕೊಂಡುಕೊಳ್ಳುವಷ್ಟು ಧೈರ್ಯ ಬರಲಿಲ್ಲ. ಯಾವತ್ತಿನಂತೆ ಮೊಬೈಲಿನ ಕ್ಯಾಮರಾಕ್ಕೆ ಸೇರಿಸಿಕೊಂಡೆವಷ್ಟೇ. ಅಷ್ಟರಲ್ಲಿ ಸಮಯದ ಮುಳ್ಳು ಅನಬೆಲ್ಲ ಹಾಕಿದ ಗೆರೆ ಮುಟ್ತುತ್ತಿದ್ದರಿಂದ, ಅವಸರದಲ್ಲಿ ಕಾಪಿ ಕಪ್ಪು ಹಿಡಿದು ಬಸ್ಸಿನತ್ತ ಓಡಿದಂತೆ ನಡೆದೆವು.
ಬಸ್ಸಿನ ಬಾಗಿಲಿನ ಪಕ್ಕ ನಿಂತಿದ್ದ ಅನಬೆಲ್ಲಳ ಹತ್ತಿರ ಅಮರಾಂತೆಯ ಕೇಕಿನ ಕಥೆ ಮತ್ತೆ ಕೇಳಲು, ಅವಳು ಅದರ ಹೆಸರು ಸಂತ ಗೊನ್ಸಾಲಿನ್ಹೋ ಎಂದೂ, ಹಾಗೆಂದರೆ 'ದಿ ಲಿಟಲ್ ಗೋನ್ಸಾಲ್' ಎಂದರ್ಥವೆಂದೂ, ಮತ್ತೆ ಒಂದು ಕಾಲದಲ್ಲಿ ಅತಿ ಪ್ರಬಲವಾಗಿದ್ದ ಚರ್ಚಿನ ಹಿಡಿತದ ವಿರುದ್ಧ ಯಾವಾಗಲೋ ಸಿಡಿದೆದ್ದ ರೆಬೆಲಿಗರು, ಅವರ ಕೋಪ ಮತ್ತೆ ವ್ಯಂಗ್ಯವನ್ನು ವ್ಯಕ್ತಪಡಿಸಲು ಮೊದಮೊದಲು ಈ ಕೇಕನ್ನು ಬೇಯಿಸಿದರೆಂದೂ, ಹಾಗೆ ಬರುಬರುತ್ತ ಅದು ಅಮರಾಂತೆಯ ಜೋಕಿನ ಕೇಕಾಗಿ ಬಿಟ್ಟಿದೆ ಎಂದೆಲ್ಲ ವಿವರಿಸಿದಳು. ಅಷ್ಟಕ್ಕೇ ನಿಲ್ಲದೆ, ಆ ಕೇಕನ್ನು ತಿಂದವರಿಗೆ ಅವರಿಷ್ಟದ 'ಲವ್' ಸಿಗುತ್ತದೆ ಎಂದು ಜೋರಾದ ನಗುವಿನಲ್ಲಿ ಹೇಳುತ್ತಾ ಬಸ್ಸು ಹೊರಡಿಸಿದಳು.
ಅವಳ ವಿವರಣೆ, ಸಮಾಜದ ಪ್ರಬುದ್ಧತೆಗೆ ಅನುಗುಣವಾಗಿ ಹೋರಾಟದ ಮಜಲುಗಳು ವ್ಯಕ್ತವಾಗುವ ರೀತಿ, ಅವುಗಳ ಹಿಂದಿನ ಪ್ರೇರಣೆ ಮತ್ತು ಧೈರ್ಯವನ್ನು ಮೆಚ್ಚುತ್ತ, ವಿಮರ್ಶಿಸುತ್ತಾ, ನೆನಪಿನ ಕೊಟ್ಟೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಮರಾಂತೆಯನ್ನ ಮಡಿಚಿಡುತ್ತಿದ್ದವು. ಅಮರಾಂತೆಯನ್ನು ದಾಟಿದ ಮೇಲೂ ತಣಿಯದ ಕುತೂಹಲದಲ್ಲಿ ಹುಡುಕಿದ ವಿಕಿಪಿಡಿಯಾದಲ್ಲೂ ಅನಬೆಲ್ಲ ಕಥೆಯಷ್ಟು ವಿವರಗಳಿರಲಿಲ್ಲ. ಆದರೆ, 'ಸಂತ ಗೊನ್ಸಾಲಿನ್ಹೋ' ಚಿತ್ರವಿದೆ ಅಲ್ಲಿ, ಬೇಕಾದರೆ, ಸಣ್ಣ ಮಕ್ಕಳು ಪಕ್ಕ ಇಲ್ಲದಿದ್ದಾಗ ಸೈಲೆಂಟಾಗಿ ನೋಡಿ ನಮಸ್ಕರಿಸಿಬಿಡಿ.
ಐನೂರು ಆವೃತ್ತಿ ದಾಟಿದ ಅನಿವಾಸಿಯ ಬ್ಲಾಗಿಗೆ ಮತ್ತೊಮ್ಮೆ ನಿಮಗೆಲ್ಲ ಸ್ವಾಗತ, ನಮಸ್ಕಾರಗಳೊಂದಿಗೆ. ಇವತ್ತಿನ ಅಂಚೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಬರೆದ “ಶ್ರೀಮತಿ ಮೈದಾಸ” ಅನ್ನುವ ಕವನವಿದೆ. ಅವರೇ ಹೇಳಿರುವಂತೆ, ಇದು ಇಂಗ್ಲೀಷಿನ “Carol Ann Duffy ಯವರ Mrs Maidas ನಿಂದ ಪ್ರೇರಿತ. ಅದರ ಭಾಷಾಂತರವೋ, ಭಾವಾನುವಾದವೋ ಖಂಡಿತ ಅಲ್ಲ. A level ನಲ್ಲಿ English literature ಕಲಿಯುತ್ತಿರುವ ಮಗಳು ಅಕ್ಷತಾ ಕೆಲ ದಿನಗಳ ಹಿಂದೆ ತನ್ನ syllabus ನಲ್ಲಿರುವ ಈ ಹಾಡಿನ ಬಗ್ಗೆ ಮಾತಾಡಿದ್ದೇ ತಡ. Mrs.Maidas ಮನದಲ್ಲಿ ಗಟ್ಟಿಯಾಗಿ ನಿಂದು ತಲೆ ತಿನ್ನಲಾರಂಭಿಸಿದ್ದೇ ಈ ಪ್ರಯತ್ನದ ನಾಂದಿ.” ವ್ಯಾಲೆಂಟೈನ್ ದಿವಸ ಹತ್ತಿರ ಬಂದಂತೆ, ಸ್ವಲ್ಪ ಪ್ರೇಮಿಗಳ / ಪ್ರೇಮಕಾವ್ಯಗಳ ಹಾವಳಿ ಸಹಜವಾಗಿಯೇ ಹೆಚ್ಚಾಗುತ್ತದೆ. ಆದರೆ ಇಲ್ಲಿ, ಮುಟ್ಟಿದ್ದೆಲ್ಲ ಬಂಗಾರ ಮಾಡುವ ಇನಿಯನ ಪ್ರಿಯೆಯ ಕಷ್ಟಗಳ ಅಳಲಿದೆ, ಹತ್ತಿರವಿದ್ದೂ ಕೈಹಿಡಿಯಲಾಗದ ಪರಿಸ್ಥಿತಿಯ ಸಂಕಟವಿದೆ. ಬನ್ನಿ, ಓದೋಣ, ಓದಿ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).
ಜೂನ್ ತಿಂಗಳ ಮೊದಲ ಮುಂಗಾರು ಮಳೆ.. ಬಿದ್ದ ತಟಪಟ ಹನಿಗೆ ತೊಯ್ದು ತುಟಿದೆರೆದ ಇಳೆ.. ಬೆಳ್ಳನೆ ತಟ್ಟೆ ಇಡ್ಲಿಯ ನಸು ಬೆಚ್ಚನೆಯ ಹಬೆ, ಚಟ್ನಿಗೆಂದು ಕಾಸಿದ ಇಂಗು-ಕರಿಬೇವಿನೊಗ್ಗರಣೆಯ ಘಮ,ಕುದಿಯುತ್ತಿರುವ ಚಹಾದ ತುಸು ಕಹಿ ಒಗರು..ತಾಟು, ಬಟ್ಟಲು, ಚಮಚೆ,ಲೋಟ,ಕಪ್ ಗಳ, ಹೆಚ್ಚಿಟ್ಟ ಅರ್ಧ ನಿಂಬೆ, ಕರಿಬೇವ ಕಡ್ಡಿಗಳ.. ಸಂತೆಯ ಮಾಳ ನನ್ನ ಅಡುಗೆ ಕಟ್ಟೆ.. ತುಂಬು ಸಜೀವತೆಯ ಪ್ರತೀಕ.. ಪ್ರೀತಿ - ರೀತಿಗಳ ನಿತ್ಯಸತ್ಯ ಲೋಕ
ಅಡರಿದ್ದ ಮಿಶ್ರ ಘಮಟು ಹೊರಹೋಗಲನುವಾಗಲೆಂದು ತುಸುದೆರೆದ ಕಿಟಕಿಯ ಇನ್ನಷ್ಟು ತೆರೆದೆ.. ನಮ್ಮನೆ ಪುಟ್ಟ ಕೈ ತೋಟದಲಿ .. ಅದೋ .ನನ್ನ ಮೈದಾಸ,ಜೀವದ ಜೀವ.. ನನ್ನೊಲವು.. ನಾವೇ ನೆಟ್ಟ ಮಲ್ಲಿಗೆಯ ಬಳ್ಳಿಗೀಗ ಮೈತುಂಬ ಹೂವು.. ಟೊಂಗೆ ಟೊಂಗೆಯಲಿ ತೂಗುತಿದೆ ಗಿಣಿ ಕಡಿದ ಗಿಣಿಮೂತಿ ಮಾವು ಗಿಡಗಂಟೆಗಳ ಕೊರಳಲ್ಲಿ ಗುಬ್ಬಚ್ಚಿ ಮರಿಯ ಚೀಂವ್ ಚೀಂವು.. ಅರೇ! ಇದೇನಿದು!!..
ಮಾವು ಕೀಳಲೆಂದು ಅವ ಬಗ್ಗಿಸಿದ ಟೊಂಗೆಯ ಎಲೆಯ ಹಸಿರೊಮ್ಮೆಗೇ ಪೀತ ವರ್ಣ.ಕಿತ್ತ ಬಿಳಿಯ ಮಲ್ಲಿಗೆಗೆ ಬಂಗಾರ ಬಣ್ಣ ‘ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ’ ಮಂತ್ರದನುರಣ
ಅರೇ,ಇದೇನಿದು ಅಂಗೈಲ್ಹಿಡಿದ ಮಾವಿಗೂ ನೂರು ಕ್ಯಾಂಡಲ್ ಬಲ್ಬ್ ಪ್ರಭೆ.. ಅನತಿ ದೂರದಿಂದಲೂ ಕಂಡ ಅವನ ವಿಜಯದ ನಗೆಗೆ ನಾನು ಅಪ್ರತಿಭ ಪುಟ್ಟ ತೋಟದ ಕಟ್ಟಿಗೆಯ ಗೇಟು ದೂಡಿದನಷ್ಟೇ..ಅದೂ ಚಿನ್ನದಂತೆ ಥಳಥಳ..
ದಣಿದ ದೇಹ ಚೆಲ್ಲಿ ಅವ ಕೂತ ಹಾಲ್ ನ ಹಳೆಯ ಕಂದು ಈಸಿ ಚೇರ್ ಬಟ್ಟೆ .. ಕ್ಷಣ ಮಾತ್ರದಲಿ ಹೊಂಬಣ್ಣದ ಪಟ್ಟೆ.
ಮೆತ್ತಗಿನ ಮೃದು ಇಡ್ಲಿಗೆ ಅವನ ಕೈ ಸೋಕಿತಷ್ಟೇ..ಅದುವೂ ಇದೀಗ ಹಳದಿ ಲೋಹದ ಮುದ್ದೆ.
‘ಓಹ್! ದೇವರೇ’ ನಿಡುಸುಯ್ದ ಅವನ ಮೊಗದ ತುಂಬ ಕಳವಳ ‘ಇದೇನಾಗುತಿದೆ?’ ನನ್ನೆದೆಯ ಗೂಡಲ್ಲೂ ಭಯ, ಆತಂಕ,ತಳಮಳ ಅಳುಕುತ್ತಲೇ ಮುಟ್ಟಿದ ಚೀನೀಮಣ್ಣಿನ ಕಪ್ ನ ಚಹಾ ತಾನಾಯಿತು ಕ್ಷಣಾರ್ಧದಲೇ ಕನಕ ಭೂಷಿತ ಹಿಡಿಯ ಕಪ್ಪಿನ ಹಳದಿದ್ರವ
‘ನಿಲ್ಲು, ಹಿಂದೆ ಸರಿ. ಮುಟ್ಟದಿರು ನನ್ನ’- ಚೀರಿದ. ನನ್ನ ಕೈಕಾಲೆಲ್ಲ ನಡುಕ, ಕಣ್ಣು ಕತ್ತಲೆ.. ಕುಸಿದೆ ‘ಮ್ಯಾಂವ್ ಎಂದು ಒಡೆಯನ ತೊಡೆಯೇರ ಬಂದ ಟಾಮಿಯ ಕಂಡೆ..ಧಡಕ್ಕನೆದ್ದೆ – ಕೊಠಡಿಯಲಿ ಕೂಡಿ ಕೊಂಡಿ ಜಡಿದೆ.
‘ಅತ್ಯಾಸೆ ಗತಿಗೇಡೆಂದು ದೃಷ್ಟಾಂತ ಕೊಡುತ್ತದೆ ಜಗತ್ತು ಇರಲಿಲ್ಲವೇನು ಹಲಕೆಲವು ಅನಿವಾರ್ಯತೆ – ಜರೂರತ್ತು ಬಣ್ಣ ಬೇಡುವ ಗೋಡೆ, ಬಳಕೆಗೊಂದು ಗಾಡಿ, ದುರಸ್ತಿಗೆ ಬಂದ ಛತ್ತು ‘ನನ್ನದೇನೂ ತಪ್ಪಿಲ್ಲ’ – ಅನ್ನಲಾರೆ ಖಂಡಿತ.ಮದುವೆ ಛತ್ರದಲ್ಲೋ, ಹಬ್ಬ ಸಮಾರಂಭದಲೋ ಕಂಡು ಓರಗೆಯವರ ಸೀರೆ,ಒಡವೆ, ದೌಲತ್ತು.. ನಾನೂ ರಗಳೆ ಮಾಡಿ ಮಾಡಿ ಅವನ ಕಂಗೆಡಿಸಿದ್ದಿದೆ ಕಿಂಚಿತ್ತು
ಅವನಿಗೀಗ ಚಿನ್ನದ್ಹಾಸಿಗೆಯಲಿ ನಿದ್ದೆಯಿಲ್ಲದ ಹೊರಳಾಟ ಇನಿಯನಪ್ಪುಗೆಯಿಲ್ಲದ ಸುಪ್ಪತ್ತಿಗೆಯಲ್ಲಿ ನನ್ನ ಗೋಳಾಟ ನಲ್ಲನಪ್ಪುಗೆಗೆ ಕಾಡುವ ದೇಹ-ಮನ-ಆತ್ಮಗಳ ಸಂಭಾಳಿಸಲಾಗದೇ ಒದ್ದಾಡುತ್ತಿದ್ದೇನೆ. ಶಾಪ, ಅಭಿಶಾಪಗಳಂತಿರಲಿ.. ವರವೂ ಹೀಗೆ ಶಾಪವಾಗುವ ಪರಿಗೆ ಕಂಗಾಲಾಗಿದ್ದೇನೆ.
ಬಲುಬಾರಿ ಅನ್ನಿಸುವುದುಂಟು.. ಏನಾದರಾಗಲಿ, ಒಮ್ಮೆ ಅವನ ಬಿಗಿದಪ್ಪಿ ಪುತ್ಥಳಿಯಾಗಿ ಕುಳಿತುಬಿಡಲೇ ಪಕ್ಕದಲೆ ಎಲ್ಲ ತೊಳಲಾಟ, ನರಳಾಟ, ನೋವು, ಹಿಂಸೆಗಳಿಗೆ ಮಂಗಳ ಹಾಡಿಬಿಡಲೇ?
ಛೇ!ಛೇ!! ಈ ಆಪತ್ತಿನ ಸಮಯದಲಿ ಇಂಥ ಸ್ವಾರ್ಥಿಯಾಗಲಾರೆ. ನಮ್ಮೊಲವ ಸಾಂಗತ್ಯ, ಸಿಹಿಕಹಿ ದಾಂಪತ್ಯ ತೊರೆಯಲಾರೆ ಕಣ್ಣಿನಲೇ ಅವನ ಮುಟ್ಟಿ, ಮೈದಡವಿ ಸಂತೈಸದಿರಲಾರೆ ಧರ್ಮೇಚ-ಅರ್ಥೇಚ-ಕಾಮೇಚ.. ಕೊಟ್ಟ ವಚನ ನಿಭಾಯಿಸದಿರಲಾರೆ.