ಈ 'ಅನಿವಾಸಿ' ಎಂಬ ಪದ, ಕನ್ನಡ ಬಲ್ಲ ಸರ್ವರಿಗೂ ಅರ್ಥವಾಗುವ ರೀತಿ ಒಂದು ತೆರನಾದರೆ, ನನಗೆ ಅರ್ಥವಾಗುವ ರೀತಿಯೇ ಬೇರೆ. ಅನಿವಾಸಿ ಎಂಬುದು ದೇಶದಿಂದ ದೂರವಿರುವ ಅಥವಾ ಪ್ರಸ್ತುತ ತಾಯಿನೆಲದಲಿ, ಸ್ವದೇಶದಲ್ಲಿ ನೆಲೆಸದ ಅನ್ನುವ ಅರ್ಥವಿದ್ಯಾಗ್ಯೂ ನನಗೆ ಅನಿವಾಸಿ ಎಂಬ ಪದ ಕೇಳಿದೊಡನೆ ಆತ್ಮೀಯ, ಹತ್ತಿರದ, ಪ್ರೀತಿಯ, ಅಕ್ಕರೆಯ ಅಂತಃಕರಣದ, ನಾಡು ನುಡಿಗಳ ಕುರಿತು ಸದಾ ತುಡಿಯುವ ಮಿಡಿಯುವ ಮನಸುಗಳ, ನನ್ನದಲ್ಲದ ನೆಲದಲ್ಲಿ ನನ್ನ ತವರಿನಂತಿರುವ ಒಂದು ಸಹೃದಯಿ ಗುಂಪು ಎಂಬ ಚಿತ್ರ ಮನಃಪಟಲದಲ್ಲಿ ಮೂಡುತ್ತದೆ. ಸಾಹಿತ್ಯ ಸಂಗೀತಗಳಿಂದ ಆಂತರ್ಯವನ್ನು ಚೊಕ್ಕಟವಾಗಿಡಲು, ಸೃಜನಶೀಲತೆಯ ಸ್ಪುರಣದಂತಿರುವ ಅನಿವಾಸಿ ಬಳಗಕ್ಕೆ ಏಳುವರ್ಷಗಳ ಹಿಂದೆ ನನ್ನ ಪರಿಚಯಿಸಿದ್ದು ನಮ್ಮ ಕಥೆಗಾರ್ತಿ ಕವಯಿತ್ರಿ ಅದಮ್ಯ ಉತ್ಸಾಹದ ಚಿಲುಮೆಯಂತಿರುವ ಡಾ ಪ್ರೇಮಲತಾ.
ಅನಿವಾಸಿಯ ಪ್ರತಿಯೊಬ್ಬ ಸದಸ್ಯರ ಕುರಿತು ನನಗೆ ಗೌರವ, ಅಚ್ಚರಿ! ಎಲ್ಲರೂ ಒಂದಲ್ಲ ಕ್ಷೇತ್ರದಲ್ಲಿ ಸಾಧನೆಗೈದವರು, ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಹವ್ಯಾಸ ಆಸಕ್ತಿಗಳನ್ನು ಅಷ್ಟೇ ಆಸ್ಥೆಯಿಂದ ಬೆಳೆಸಿಕೊಂಡು ಅದರ ನಿರಂತರತೆಯನ್ನು ಕಾಪಾಡಿಕೊಂಡು ಬಂದವರು. ಇಲ್ಲಿ ಬರೆಯುವ ಎಲ್ಲರ ಘನವಾದ ಬರವಣಿಗೆಯ ಮುಂದೆ ನನಗೆ ನನ್ನ ಬರಹಗಳು ಆವತ್ತಿಗೂ, ಇವತ್ತಿಗೂ, ಯಾವತ್ತಿಗೂ ತರಗೆಲೆಯಂತೆ ಅನಿಸುತ್ತದೆ. ನನ್ನ ಜೀವನದಲ್ಲಿ ಅನಿವಾಸಿ ಈಗ ಬರೀ ಒಂದು ವಾಟ್ಸಾಪ್ ಗುಂಪು ಅಥವಾ ಬ್ಲಾಗ್ ಬರಹಗಳ ವೇದಿಕೆಗಿಂತ ಹೆಚ್ಚಿನದ್ದು. ನನಗೆ ಶಿಸ್ತು, ಬದ್ಧತೆಯನ್ನು ಮತ್ತೆ ಮತ್ತೆ ಕಲಿಸುವ ತಿಳಿಸುವ ಅನಿವಾಸಿ ಬಳಗವನ್ನು ಒಮ್ಮೆಯಾದರೂ ಭೇಟಿ ಮಾಡಬೇಕು ಅನ್ನುವುದು ನನ್ನ ಬಹುಕಾಲದ ಕನಸಾಗಿತ್ತು.
ಊರು ಸುಟ್ಟರೂ ಹಣಮಪ್ಪ ಹೊರಗೆ ಅನ್ನುವ ಗಾದೆ ಮಾತಿನಂತೆ, UK ಯಲ್ಲಿ ಇದ್ದಾಗ್ಯೂ ಈ ತನಕ ನನಗೆ ಕನ್ನಡ ಬಳಗ ಅಥವಾ ಅನಿವಾಸಿಯ ಯಾವ ಕಾರ್ಯಕ್ರಮದಲ್ಲೂ ಭಾಗಹಿಸಲು ಆಗಿಲ್ಲ, ಕಾರಣ ವಿಮಾನಯಾನ ಅಥವಾ ಜಲಯಾನ ಮಾಡಿ ಬರಬೇಕಾದ ಅನಿವಾರ್ಯತೆ ಒಂದುಕಡೆಯಾದರೆ, ಪುಟ್ಟ ಮಕ್ಕಳು ಇರುವ ಮನೆಯಲ್ಲಿ ಎಲ್ಲ ಜವಾಬ್ದಾರಿಗಳು ಜಯಮಾಲೆಯಂತೆ ಕೊರಳಿಗೆ ಬಂದು ತಾನೇ ತೂಗು ಹಾಕಿಕೊಂಡಿರುವ ಬಿಡಿಸಿಕೊಳ್ಳಲಾರದ ಜವಾಬ್ದಾರಿಗಳು ಮತ್ತೊಂದೆಡೆ. ಅದು ಹೇಗೋ ಎಲ್ಲಾ ಗ್ರಹ ನಕ್ಷತ್ರ ಬಲ ಕೂಡಿ ಬಂತು; ನಾನೂ ಈ ಸಲದ ಕನ್ನಡ ಬಳಗ ಯುಕೆ ಮತ್ತು ಲೆಸ್ಟರ್ ಕನ್ನಡ ಬಳಗದ ಯುಗಾದಿ ಸಂಭ್ರಮದಲ್ಲಿ ಭಾಗವಹಿಸುವ ಯೋಗಾಯೋಗ ಒದಗಿ ಬಂತು. ಈ ಯುಗಾದಿ ನಿಜಕ್ಕೂ, ನಾಡಿನಲ್ಲಿದ್ದು ಯುಗಾದಿ ಹಬ್ಬ ಆಚರಿಸಿದ್ದಕ್ಕಿಂತ ಹೆಚ್ಚು ಸಂಭ್ರಮದಲ್ಲಿ ಜರುಗಿತು. ಪ್ರತಿಬಾರಿ ಅನಿವಾಸಿ ಬ್ಲಾಗ್ ಮತ್ತು ಗ್ರೂಪ್ ಫೋಟೋಗಳಲ್ಲಿ ನೋಡಿ ಖುಷಿ ಪಡುತ್ತಿದ್ದ ಅನಿವಾಸಿ ಸಾಹಿತಿಕ ಕಾರ್ಯಕ್ರಮದಲ್ಲಿ ನಾನೂ ಈ ಬಾರಿ ಭಾಗವಹಿಸಿದ್ದು ನನಗೆ ಹೆಮ್ಮೆಯ ಸಂಗತಿ.
ಅನಿವಾಸಿ ಕಾರ್ಯಕ್ರಮ
ಪ್ರತಿಬಾರಿಯಂತೆ, ಈ ಸಲವೂ ಕಾರ್ಯಕ್ರಮಕ್ಕೆ ಬರುವ ಅಥಿತಿಗಳ ವೈಶಿಷ್ಟತೆಗೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪುಗೊಳಿಸುವುದು ಎಂಬ ನಿರ್ಧಾರವಾದ ಕೆಲ ದಿನಗಳಲ್ಲೇ ರಂಗಭೂಮಿ, ನಟ ನಿರ್ದೇಶಕ, ಕಿರುತೆರೆ, ಬೆಳ್ಳಿತೆರೆಯ ಮೇಲೆ ತಮ್ಮ ವಿಶಿಷ್ಟ ಛಾಪು ಮೂಡಿಸಿ ನೆನಪಿನಲ್ಲಿ ಉಳಿಯುವಂಥ ಹಲವಾರು ಕ್ರೀಯಾಶೀಲ ಪ್ರಸ್ತುತಿಗಳನ್ನು ರಂಗದಮೇಲೆ ನಟಿಸಿ ನಿರ್ದೇಶಿಸಿದ ಅದ್ಭುತ ಕಲಾವಿದ ಶ್ರೀ ಶ್ರೀನಿವಾಸ ಪ್ರಭು ಅವರು ಅತಿಥಿಯಾಗಿ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಮರುಗಳಿಗೆಯಿಂದ ಅನಿವಾಸಿ ಅಂಗಳ ಮತ್ತಷ್ಟು ಕ್ರಿಯಾಶೀಲವಾಯಿತು . ಎಲ್ಲ ಚರ್ಚೆಗಳು, zoom, ಗೂಗಲ್ ಮೀಟ್ ಗಳಲ್ಲಿ ವಿಚಾರ ವಿನಿಮಯದ ನಂತರ, ಅನಿವಾಸಿ ಬಳಗದ ಉತ್ಸಾಹಿ ದಂಪತಿಗಳಾದ ಅನ್ನಪೂರ್ಣ ಮತ್ತು ಆನಂದ ಅವರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತು, ಎಲ್ಲರ ಸಲಹಾ ಸೂಚನೆಗಳನ್ನು ಪರಾಂಬರಿಸಿ ರಂಗಭೂಮಿ ನಾಟಕ ಕುರಿತಾದ ಕಾರ್ಯಾಗಾರವನ್ನುಏರ್ಪಡಿಸುವ ಕುರಿತು ಅತಿಥಿಗಳೊಂದಿಗೆ ಮಾತನಾಡಿ ಕಾರ್ಯಕ್ರಮದ ರೂಪರೇಶೆ ತಯಾರಿಸಿದರು. ಜೊತೆಗೆ ಆಸಕ್ತರು ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಬೇಕು ಅಂತಿದ್ದರೆ ಮೊದಲೇ ಕಳುಹಿಸಬೇಕಾಗಿ ವಿನಂತಿಸಲಾಯಿತು.
ಕಾರ್ಯಕ್ರಮದ ದಿನಕ್ಕಿಂತ ಅದರ ಸಿದ್ಧತೆಗಳನ್ನು, ಪೂರ್ವ ತಯಾರಿಗಳನ್ನು ನೋಡುವುದು ಮತ್ತು ಆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದೇ ಒಂದು ಮಜಾ ಅನುಭವ. ನಾನು, ಡಾ ಶ್ರೀವತ್ಸ ದೇಸಾಯಿ ಅವರೊಂದಿಗೆ ಕಾರ್ಯಕ್ರಮದ ಮುನ್ನಾದಿನ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿ ಮತ್ತಿಬ್ಬರು volunteers ಜೊತೆಗೂಡಿ ಖುರ್ಚಿ, ಮೇಜು ಜೋಡಿಸಿ ಬ್ಯಾನರ್ ಹಾಕಿ, ಎಲ್ಲವನ್ನು ಸಿದ್ಧಮಾಡಿ ಬಂದೆವು. ಆದರೆ ಮರುದಿನ ಅನಿವಾರ್ಯ ಕಾರಣಗಳಿಂದಾಗಿ ಆ ಜಾಗದಲ್ಲಿ ಅನಿವಾಸಿ ಕಾರ್ಯಕ್ರಮ ನಿಗದಿತ ಸಮಯಕ್ಕೆ ನಡೆಯದೆ ಸ್ವಲ್ಪ ನಿರಾಸೆ ಉಂಟುಮಾಡಿತು. ಆದರೆ ಇತ್ತ ಹಬ್ಬದಡಿಗೆಯ ಅದ್ಭುತ ರುಚಿಯ ಬಾಳೆಎಲೆ ಊಟ ಉಂಡು ಸಾಂಸ್ಕೃತಿಕ ಕಾರ್ಯಕ್ರಮ ನೋಡುತ್ತಾ ಕುಳಿತಿರುವಾಗ ಅನಿವಾಸಿ ಕಾರ್ಯಕ್ರಮ ನಾಲ್ಕು ಘಂಟೆಗೆ ನಿಗದಿಯಾಗಿದೆ ಎಂದು ಸಂಘಟಕರು ತಿಳಿಸಿದ್ದು ನಿಜಕ್ಕೂ ಮನಸನ್ನು ಪ್ರಫುಲ್ಲ ಗೊಳಿಸಿತು.
ಅನಿವಾಸಿಯ ಈ ಕಾರ್ಯಾಗಾರಕ್ಕೆಂದೇ ಕಟ್ಟಿದ್ದರೇನೋ ಅನ್ನುವಷ್ಟು ಅಚ್ಚುಕಟ್ಟಿನ ಪುಟ್ಟ ಸುಂದರ ಕೋಣೆಯಲ್ಲಿ ಆಸಕ್ತರು ಸೇರಿದ ಮೇಲೆ, ಕಾರ್ಯಕ್ರಮದ ಆರಂಭಕ್ಕೆ ಒಂದು ನಾಂದಿ ಗೀತೆ ಹಾಡುವ ಅವಕಾಶ ನನಗೆ ಒದಗಿ ಬಂತು. ಕಾರ್ಯಕ್ರಮವನ್ನು ಅನ್ನಪೂರ್ಣ ಅವರು ಈ ಮೊದಲೇ ಕಳಿಸಲಾಗಿದ್ದ ಪ್ರಶ್ನೆಗಳನ್ನು ಒಂದೊಂದಾಗಿ ಸ್ಪಷ್ಟತೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀನಿವಾಸ ಪ್ರಭು ಅವರಿಗೆ ಕೇಳುತ್ತ ಹೊದರು. ಶ್ರೀನಿವಾಸ ಪ್ರಭುಗಳು ಕೂಡ ಪ್ರತಿ ಪ್ರಶ್ನೆಗೂ ತಮ್ಮ ಅನುಭವದ ಬುತ್ತಿಯಿಂದ ರುಚಿಯಾದ ತುತ್ತುಗಳನ್ನೇ ನಮಗೆ ಉಣಬಡಿಸಿದರು. ಒಂದು ನಾಟಕವನ್ನು ಪುಸ್ತಕದಿಂದ ರಂಗದ ಮೇಲೆ ತರುವಾಗ ಎದುರಾಗುವ ಸವಾಲುಗಳು, ಎಲ್ಲಿ ನಿಯಮಗಳನ್ನು ಸಡಿಲಿಸಬಹುದು , ಯಾವುದನ್ನು ಸಡಲಿಸಬಾರದು? ಹವ್ಯಾಸಿ ರಂಗಭೂಮಿ ನಟರಿಗೆ ಎದುರಾಗುವ ಸಮಸ್ಯೆಗಳು. ಕ್ರಿಯಾಶೀಲ ಜಗತ್ತಿನ ವಿಪರ್ಯಾಸಗಳ ಕುರಿತು ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು. ಅವರ ಮಾತುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಳುಗರನ್ನು ಅದೆಷ್ಟು ತಾಕಿದವೆಂದರೆ, ಒಂದು ನಾಟಕದ ತಂಡವನ್ನೇ ಕಟ್ಟುವ ಹುರುಪಿನಲ್ಲಿ ಆಸಕ್ತರ ಪಟ್ಟಿಕೂಡಾ ಸಿದ್ಧವಾಯಿತು. ಇವೆಲ್ಲ ಖುಷಿಯ ವಿಷಯಗಳು ಜರುಗುವಾಗ ದೇಸಾಯಿಯವರು ಕಾರ್ಯಕ್ರಮಕ್ಕೆ ನಿಗದಿಯಾದ ಒಂದು ಘಂಟೆಯ ಕಾಲಾವಕಾಶ ಮುಗಿಯುತ್ತ ಬಂದಿದ್ದನ್ನು ನಿರ್ವಾಹಕ ಗಮನಕ್ಕೆ ತಂದು ನಮ್ಮನ್ನೆಲ್ಲ ಮತ್ತೆ ವಾಸ್ತವಕ್ಕೆ ಕರೆತಂದರು. ಛೇ ಇಷ್ಟು ಬೇಗ ಮುಗಿದೇ ಹೋಯಿತೇ ಅನ್ನುವಂಥ ಭಾವ ದಟ್ಟವಾಗುವ ಮುನ್ನವೇ, ಆನಂದ ಅವರು ವಂದನಾರ್ಪಣೆ ನಡೆಸಿಕೊಟ್ಟರು. ಅತಿಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅನಿವಾಸಿ ಸದಸ್ಯರು ಗ್ರೂಪ್ ಫೋಟೋ ತೆಗೆಸಿಕೊಂಡ ನಂತರವೂ ಶ್ರೀನಿವಾಸ ಪ್ರಭುಗಳೊಂದಿಗೆ ಹಲವರು ನಾಟಕದ ಬಗ್ಗೆ ಚರ್ಚೆ ನಡೆಸುತ್ತಿದ್ದುದು ಕಾರ್ಯಕ್ರಮ ಸಾರ್ಥಕ್ಯ ಎಂದರೂ ಅತಿಶಯೋಕ್ತಿ ಅಲ್ಲ.
ಪ್ರಿಯರೇ, ನಮಸ್ಕಾರ. ಹೊಸವರ್ಷದ ಶುಭಾಶಯಗಳು (ನನ್ನಿಂದ). ಹೋದ ವಾರ ಭಾರತೀಯ ವೈದ್ಯ ಸಂಘದ ಕರ್ನಾಟಕ ಶಾಖೆಯ ವತಿಯಿಂದ ಆಯೋಜಿತವಾದ ಅನಿವಾಸಿ ಭಾರತೀಯ ಕವಿಗೋಷ್ಠಿ ನಡೆಯಿತು. ಇದರಲ್ಲಿ ಹಲವಾರು ಭಾರತೀಯ ಮೂಲದ ಕವಿ-ಕವಯತ್ರಿಯರು ತಮ್ಮ ಕವನಗಳನ್ನು ಓದಿದರು. ಅಮೇರಿಕಾ, ಇಂಗ್ಲಂಡ್ ಮತ್ತು ಕತಾರ್ ದೇಶವಾಸಿಗಳಾಗಿರುವ ಕವಿಗಳ ಕವನಗಳು ವಿವಿಧ ವಿಷಯಗಳ ಮೇಲಿದ್ದು, ಅವುಗಳ ಕನ್ಸ್ಟ್ರಕ್ಷನ್, ಭಾಷೆ, ಪದಲಾಲಿತ್ಯ ಆಕರ್ಷಕವಾಗಿದ್ದವು. ಇಂಗ್ಲಂಡಿನ ಕವಿಗಳ ಪರಿಚಯ ಅನಿವಾಸಿ ಗುಂಪಿನ ಮೂಲಕ ನನಗೆ ಇದೆ, ಡಾ. ಜಯಕೀರ್ತಿ ರಂಗಯ್ಯ ಅವರನ್ನು ಹೊರತುಪಡಿಸಿ. ಕೊನೆಯಲ್ಲಿ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಅಮೆರಿಕದ ಡಾ. ತ್ರಿವೇಣಿ ಶ್ರೀನಿವಾಸರಾವ್ ಅವರು, ಪ್ರತಿ ಕವನದ ವಿಮರ್ಶೆ ಮಾಡಿದರು. ಡಾ. ಗಡ್ಡಿ ದಿವಾಕರ್ ಅವರು ಕಾರ್ಯಕ್ರಮವನ್ನು ಸಮಯ ತಪ್ಪದಂತೆ, ಇನ್ನೊಬ್ಬ ವೈದ್ಯಕವಯಿತ್ರಿ ಡಾ. ವೀಣಾ ಎನ್ ಸುಳ್ಯ ಅವರ ಸಹಯೋಗದಲ್ಲಿ ನಡೆಸಿಕೊಟ್ಟರು. ಅದರಲ್ಲಿನ ಆಯ್ದ ಕವನಗಳನ್ನು ಇಂದಿನ ಬ್ಲಾಗಿನಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ, ಆಯಾ ಕವಿಗಳ ಪರಿಚಯದೊಂದಿಗೆ. ಈ ಕಾರ್ಯಕ್ರಮದ ಹಿನ್ನೆಲೆಯನ್ನು ಬರೆದು ಕೊಟ್ಟ ಮಿತ್ರ ರಾಮಶರಣರಿಗೆ ವಂದನೆಗಳು. ಕವನಗಳನ್ನು ಎರಡು ಆವೃತ್ತಿಗಳಲ್ಲಿ ಭಾಗ ಮಾಡಿ ಹಾಕುತ್ತಿದ್ದೇನೆ. ಎಂದಿನಂತೆ ಓದಿ ನಿಮ್ಮ ಅನಿಸಿಕೆ ಬರೆಯುವುದು. ಧನ್ಯವಾದಗಳೊಂದಿಗೆ – ಲಕ್ಷ್ಮಿನಾರಾಯಣ ಗುಡೂರ, ವಾರದ ಸಂಪಾದಕ.
ಹಿನ್ನೆಲೆ: (ಕೃಪೆ: ಡಾ. ರಾಮಶರಣ ಲಕ್ಷ್ಮೀನಾರಾಯಣ) ಭಾರತೀಯ ವೈದ್ಯ ಸಂಘದ ಕರ್ನಾಟಕ ಘಟಕ ವೈದ್ಯ ಬರಹಗಾರರ ಸಮಿತಿಯನ್ನು ಸುಮಾರು ೫ ವರ್ಷಗಳ ಹಿಂದೆ ಪ್ರಾರಂಭಿಸಿತು. ಈ ಸಮಿತಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಕೋವಿಡ್ ಸಮಯದಲ್ಲಿ ವೈದ್ಯ ಕವಿ ಸಮ್ಮೇಳನವನ್ನೂ ನಡೆಸಿತ್ತು. ಎರಡು ವರ್ಷಗಳ ಹಿಂದೆ ವೈದ್ಯ ಸಂಪದ ಎಂಬ ದ್ವೈ ಮಾಸಿಕ ಪತ್ರಿಕೆಯನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದೆ. ಅನಿವಾಸಿಯಾ ಸದಸ್ಯರಾದ ಡಾ. ಕೇಶವ ಕುಲಕರ್ಣಿ ಈ ಸಂಚಿಕೆಯ ಮೊತ್ತ ಮೊದಲ ಅನಿವಾಸಿ ಭಾರತೀಯ ವಿಭಾಗದ ಸಂಪಾದಕರಾಗಿ ೨೦೨೨ರಲ್ಲಿ ಕಾರ್ಯನಿರ್ವಹಿಸಿದರು. ಆಗ ಅವರು ಈ ಪತ್ರಿಕೆಯ ಸಂಚಿಕೆಗಳನ್ನು ವಾಟ್ಸ್ಯಾಪ್ ಮೂಲಕ ನಮ್ಮೊಡನೆ ಹಂಚಿಕೊಂಡಿದ್ದು ನೆನಪಿರಬಹುದು. ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷೆ ಡಾ. ವೀಣಾ ಸುಳ್ಯ ಅನಿವಾಸಿ ವೈದ್ಯರನ್ನು ಒಟ್ಟುಗೂಡಿಸಿ ಕವಿ ಸಮ್ಮೇಳನವನ್ನು ಜಾಲ ತಾಣದಲ್ಲಿ ನಡೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರೇ, ಡಾ. ಗಡ್ಡಿ ದಿವಾಕರ್ ಅವರನ್ನು ನಿರ್ವಾಹಕರನ್ನಾಗಿ ನಿಯೋಜಿಸಿದರು. ಈಗಿನ ವೈದ್ಯ ಸಂಪದದ ಅನಿವಾಸಿ ವಿಭಾಗದ ಸಂಪಾದಕರ ಹಾಗೂ ತಮ್ಮ ಸಂಪರ್ಕ ಜಾಲದ ಮೂಲಕ ವೈದ್ಯ ಬರಹಗಾರರನ್ನು ಕಲೆ ಹಾಕಿದರು. ಒಪ್ಪಿಕೊಂಡ ಕವಿಗಳಿಂದ ಕವನಗಳನ್ನು ಪಡೆದುಕೊಂಡು, ಅಧ್ಯಕ್ಷರಾದ ಅಮೆರಿಕೆಯಲ್ಲಿ ನೆಲೆಸಿರುವ ತ್ರಿವೇಣಿ ರಾವ್ ಅವರಿಗೆ ಅವನ್ನು ತಲುಪಿಸಲಾಗಿತ್ತು. ಮೊದಲೇ ನಿಗದಿ ಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರವಿವಾರ ಮಧ್ಯಾಹ್ನ ೨:೩೦ಕ್ಕೆ ಪ್ರಾರಂಭವಾಯಿತು.
****************************
ಡಾ.ಮುರಳಿ ಹತ್ವಾರ ಅವರ ಮೂಲ ಕೋಟೇಶ್ವರ. ಬೆಳೆದ ಊರು ಬಳ್ಳಾರಿ. ಬೆಂಗಳೂರು, ಬಳ್ಳಾರಿಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಮುರಳಿ, ಈಗ ಲಂಡನ್ನಿನಲ್ಲಿ ಹಾರ್ಮೋನು ವೈದ್ಯರಾಗಿ ಕಾರ್ಯನಿರತರಾಗಿದ್ದಾರೆ. ಮುರಳಿ ನಮ್ಮ ಅನಿವಾಸಿ ಬ್ಲಾಗಿನ ಓದುಗರಿಗೆ, ತಮ್ಮ ಕವನ, ಹೈಕುಗಳ ಮೂಲಕ ಈಗಾಗಲೇ ಚಿರಪರಿಚಿತರಾಗಿದ್ದಾರೆ.
ಹೆಜ್ಜೆಗಳು:
ನಿನ್ನೆ ನಡೆದ ಹೆಜ್ಜೆಗಳ ಗುರುತು ಹಿಡಿಯಲು ಮತ್ತೆ ಮರಳುವಾಸೆ ಅಳಿಸಿದ ಅಲೆಗಳಲ್ಲಿ ಅದನ್ನು ಹುಡುಕುವದು ಹೇಗೆ?
ಹೆಜ್ಜೆಗಳ ದಾರಿ ಎಳೆದ ಮೋಡಗಳೆಲ್ಲ ಮಳೆಯಾಗಿ ಮರೆಯಾಗಿವೆ ಸುಡುವ ಬಿಸಿಲಿನ ಸೂರ್ಯ ಸರಿದಂತೆ ಹೊರಳುವ ನೆರಳಿನ ದಿಕ್ಕು, ನಕ್ಷತ್ರಗಳ ಬೆಳಕು ಹೇಳುವ ದಾರಿ ತಿಳಿಯುವುದು ಹೇಗೆ?
ಎಷ್ಟು ಸದ್ದಿನ ಹೆಜ್ಜೆಗಳು! ಒಂದು ಊರುವದರಲ್ಲಿ ಮತ್ತೊಂದು ಬೇಗ! ಬೇಗ! ಬೇಗ! ಮುಂದೆ ಹೋದಷ್ಟೂ ಅವಸರ, ದಾರಿಯ ಹೂಗಳ ಪರಿಮಳವೂ ತಿಳಿಯದಷ್ಟು. ಬೇಲಿಯ ಮುಳ್ಳುಗಳ ಕಲೆ ಮೈತುಂಬಾ.
ಯಾವ ಹೆಜ್ಜೆಯ ಜಾಡು, ಯಾವ ನೆರಳಿನ ಛಾಯೆ? ನಿನ್ನೆಯೋ? ನಾಳೆಯೋ? ನಂಬಿಕೆಯ ದೀವಿಗೆಯೊ? ಕಲ್ಪನೆಯ ಮಾಯೆಯೋ? ಎಲ್ಲ ಬೆಳಕೀಗ ಶೂನ್ಯ; ಮನಸು ಮುಳುಗಿದ ಗುಡ್ಡೆ. ಹೊಸ ಉಸಿರಿನ ಹುಡುಕಾಟ ನೀರ ದಾಟಿಸುವ ಸೇತುವೆಯ ಕಟ್ಟ ಬೇಕಿನ್ನೂ
ಕಾಲಿನಡಿ ಸರಿದ ನೀರು, ತೊಯ್ದ ಮಣ್ಣಿನ ಸ್ಪರ್ಶ ಮೈ ಸೋಕಿದ ತಂಗಾಳಿ, ಕಣ್ತೆರೆಯೆ ಆಗಸದ ಕೆಂಪು ಸುತ್ತ ತರತರದ ಕಂಪಿನ ಹೂಗಳು ಉಸಿರೆಳೆದು ನಿಂತ ಮನದೊಳಗೆ ಹೊಸ ರೆಕ್ಕೆಗಳು
ಕಾಲು ಮುಟ್ಟಿದ ಅಲೆ ಕರೆದು ಹೇಳಿತು: ಈ ಹೆಜ್ಜೆಯ ಗುರುತು ನೀನೆ ಇಟ್ಟುಕೋ.
- ಡಾ. ಮುರಳಿ ಹತ್ವಾರ್
**************************************
ಡಾ. ಜಯಕೀರ್ತಿ ರಂಗಯ್ಯ: ಹುಟ್ಟಿದ್ದು, ಬೆಳೆದಿದ್ದು: ಚಿಕ್ಕನಾಯಕನ ಹಳ್ಳಿ, ತುಮಕೂರು ಜಿಲ್ಲೆ. ಓದಿದ್ದು: ಎಂ.ಬಿ.ಬಿ.ಎಸ್ (ಬಿ.ಎಂ.ಸಿ) ಎಂ.ಡಿ. ಮೈಕ್ರೋಬಯಾಲಜಿ (ಜಿಪ್ಮರ್, ಪಾಂಡಿಚೆರಿ), ಎಫ್.ಆರ್.ಸಿ.ಪ್ಯಾಥ್ (ಯು.ಕೆ) ಕರ್ಮಸ್ಥಳ: ಎಪ್ಸಂ & ಸೇಂಟ್ ಹೆಲಿಯರ್ ಆಸ್ಪತ್ರೆ. ಲಂಡನ್
ವೀರಸನ್ಯಾಸಿಗೂಂದು ನುಡಿನಮನ
ಎಂಥ ಕಾಂತಿ, ಏನು ಶಾಂತಿ ನಿಮ್ಮ ಕಣ್ಣ ನೋಟದಲಿ
ಕೋಟಿ ಸೂರ್ಯ ಸಮಪ್ರಭೆ ಸಪ್ತ ಋಷಿಯ ಮೊಗದಲಿ
ಎಂಥ ಕೆಚ್ಚು, ಏನು ಶೌರ್ಯ ನಿಮ್ಮ ಪ್ರತೀ ಮಾತಲಿ
ತಾಯಿ-ತಂದೆ, ಬಂಧ ಹರಿದೆ ಸುಖದ ಬಾಳು, ಸಂಸಾರ ತೂರೆದೆ
ಗುರುವ ಪಡೆದು, ಕಾವಿ ತೂಟ್ಟೆ ಜನರ ಪೂರೆವ, ಶಪಥವಿಟ್ಟೆ
ದೇಶ ಪೂರ ನಿಮ್ಮ ಹೆಜ್ಜೆ ದೇಶದೊರಗೂ ಅದರ ಸದ್ದು
ಲೋಲುಪತೆಯ ಪರದೇಶದಲ್ಲೂ ನಾಡ ಜನರ ಚಿಂತೆ ನಿಮಗೆ
ಅನ್ನ-ನೀರು,ನಿದ್ರೆ-ಭೋಗ ಎಲ್ಲ ತೃಣ ಜೀವಾತ್ಮನ ಸೇವೆಯಲಿ
ಪತಂಜಲಿಯ ಮರೆತ ಮಣ್ಣಿನಲ್ಲಿ ಯೋಗಸೂತ್ರದೊಸಬೆಳೆ
ಭಕ್ತಿ-ಕರ್ಮ, ಜ್ಞಾನಯೋಗ ಶಕ್ತಿಯಿರೆ, ರಾಜಯೋಗ
ತಾಳ್ಮೆ, ತುಡಿತ, ಅಖಂಡ ಪ್ರೀತಿ ನೀವು ಕೊಟ್ಟ ಮಹಾಮಂತ್ರ
ಕೀರ್ತಿ, ಕನಕ ಮೋಹ-ದಾಹ ಜಯಿಸೊ ವಿವೇಕ ನೀಡು ತಂದೆ, ಯುಗಪುರುಷನ ಕಂದನೇ!
- ಡಾ। ಜಯಕೀರ್ತಿ ರಂಗಯ್ಯ , ಯು.ಕೆ.
*************************************
ಡಾ. ಸವಿತಾ ಕಲ್ಯಾ: ಹುಟ್ಟಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ / ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಪದವಿ. ರೈಟ್ ರಾಜ್ಯ ವಿಶ್ವವಿದ್ಯಾಲಯ, ಡೇಟನ್, ಒಹಾಯೊದಲ್ಲಿ ಆಂತರಿಕ ವೈದ್ಯಕೀಯದಲ್ಲಿ ರೆಸಿಡೆನ್ಸಿ: ಸಂಧಿವಾತಶಾಸ್ತ್ರದಲ್ಲಿ ಫೆಲೋಶಿಪ್: ವಿಸ್ಕಾನ್ಸಿನ್ ವೈದ್ಯಕೀಯ ಕಾಲೇಜು, ಮಿಲ್ವಾಕೀ . ಅರಿಜೋನಾದ ಫೀನಿಕ್ಸ್‌ನಲ್ಲಿರುವ ಕ್ರೈಟನ್ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ವ್ಯಾಲಿ ವೈಸ್ ಹೆಲ್ತ್‌ಕೇರ್ ಸೆಂಟರ್‌ನಲ್ಲಿ ಸಿಬ್ಬಂದಿ ಸಂಧಿವಾತಶಾಸ್ತ್ರಜ್ಞರಾಗಿದ್ದಾರೆ. ಹವ್ಯಾಸಗಳಲ್ಲಿ ಪ್ರದರ್ಶನ, ವಿಶೇಷವಾಗಿ ಕನ್ನಡದಲ್ಲಿ ಬರೆಯುವುದು ಸೇರಿವೆ. ಯೂಟ್ಯೂಬ್‌ನಲ್ಲಿ ಇವರು ಬರೆದು,ನಟಿಸಿದ ” NRI, non respected Indian ” ಹಾಗು ಅಕ್ಕ ನಾಟಕ ಹೆಚ್ಚು ಗುರುತಿಸಲ್ಪಟ್ಟಿವೆ.
ಅರ್ಹತೆಗೆ ಪಟ್ಟ
ಜೀವನ ಚದುರಂಗದಾಟ ರಾಜನಿಗೆ ಒಂದೇ ಚೌಕದೋಟ ರಕ್ಷಿಸುವಳು ರಾಣಿ ಆಡಿ ಪರದಾಟ ಆದರೂ ಕಟ್ಟುವೆವು ರಾಜನಿಗೆ ಪಟ್ಟ
ಪುಟ್ಟಿ ಹುಟ್ಟಿದರೆ ಬೇಡುವೆವು ಪುಟ್ಟ ಪುಟ್ಟಿಗೆ ಮನೆ ತವರೆಂದು ಮಾಡುವೆವು ಮನದಟ್ಟ ಹೊರುವಳು ಆಮನೆ ಈಮನೆ ಭಾರದ ಬೆಟ್ಟ ಆದರೂ ಕುಲೋದ್ಧಾರಕನೆಂಬ ಬಿರುದ ಪುಟ್ಟನೇತೊಟ್ಟ
ಪುಟ್ಟಿ ಮಾತನಾಡಿದರೆ ವಾಯಾಡಿ, ನಲಿದರೆ ವಯ್ಯಾರಿ ಕೋಪ ತೋರಿದರೆ ಬಜಾರಿ , ಬಾಯಿ ಮುಚ್ಚೆ ರಾಜಕುಮಾರಿ ಕೆಂಡ ಕಾರಿದರೆ ಕಾಳಿ, ಅನ್ಯಾಯ ವಿರೋಧಿಸಿದರೆ ಮನೆಹಾಳಿ ಸಹಸ್ರನಾಮದ ನಡುವೆ ಮನಬಿಚ್ಚಿ ಹೇಗೆ ಬಾಳಿಯಾಳು ಹೇಳಿ
ಪುಟ್ಟ ಹುಟ್ಟಿದ್ದಕ್ಕೆ ಜಾಣ, ಅಪ್ಪ ಅಮ್ಮಗೆ ಆಭರಣ ಮನೆತನದ ಹೆಸರು ಮುಂದುವರೆಸುವ ರಾಮಬಾಣ ಮಗನ ಹೆರದಿದ್ದರೆ ಕೊರಗುವರು ಇಡೀ ಕುಲವೇ ಭಣಭಣ ಕಾಲಾನುಕಾಲದಿಂದ ಭೇದಬಗೆಯುತಿದೆ ಸಮಾಜದ ಕಣಕಣ
ಪುಟ್ಟನಂತೆಯೇ ಪುಟ್ಟಿಯೂ ದೇವರ ವರ ಎತ್ತಾಡಿಸಿ ಪ್ರೋತ್ಸಾಹಿಸಿ ಒಂದೇ ತರ ಇಡೀ ಕುಲಕೆ ಪುಟ್ಟಿ ನೆರಳನೀಡುವ ಮರ ಹೊಸ ಜೀವವ ಪೋಣಿಸುವ ಮುತ್ತಿನ ಸರ
ಕಣ್ಣು ತೆರೆದು ತೀರಿಸೋಣ ಪುಟ್ಟಿಯರಿಗೆ ಮಾಡಿದ ನಷ್ಟ ಭೇದ ತಿಳಿಯದೇ ಮಾಡಿದರು ಸಹಿಸುವುದು ಕಷ್ಟ ಆರತಿಯೋ ಕೀರುತಿಯೋ ಅವರವರ ಇಷ್ಟ ಇದ ಮುಂದಿನ ಪೀಳಿಗೆಗೆ ಮಾಡೋಣ ಸ್ಪಷ್ಟ
ಸಮಾನರು ಪುಟ್ಟಿ ಪುಟ್ಟ ಕಟ್ಟೋಣ ಅರ್ಹತೆಗೆ ಪಟ್ಟ
- ಡಾ। ಸವಿತಾ ಕಲ್ಯಾ, ಯು.ಎಸ್.ಎ
***********************************
ಡಾ. ಮೀನಾ ಸುಬ್ಬರಾವ್: ಮೂಲತಃ ಕಡೂರಿನವರು. ಹುಟ್ಟಿ, ಬೆಳೆದುದೆಲ್ಲಾ ಕಡೂರು, ನಂತರ ನ್ಯಾಶನಲ್ ಕಾಲೇಜ್ ಬೆಂಗಳೂರು ಮತ್ತು ಮೈಸೂರು ವೈದ್ಯಕೀಯ ವಿದ್ಯಾಲಯಗಳಲಿ ವ್ಯಾಸಂಗ. ಅಮೇರಿಕಾದ ಲಾಸ್ ಆಂಜಲೀಸ್ನಲ್ಲಿ ಮಕ್ಕಳ ಆರೋಗ್ಯ ಶಾಸ್ತ್ರದಲ್ಲಿ ( ಪೀಡಿಯಾಟ್ರಿಕ್ಸ್) ರೆಸಿಡೆನ್ಸಿ ಮುಗಿಸಿ ಸುಂದರವಾದ ಕ್ಯಾಲಿಫೋರ್ನಿಯಾದ ಮಧ್ಯ ಕರಾವಳಿ/ ಸ್ಟೈನ್ಬೆಕ್ ದೇಶ ಎಂದೇ ಹೆಸರಾಗಿರುವ ಮಾಂಟೆರೆ ಪ್ರದೇಶದಲ್ಲಿ ವಾಸ ಮತ್ತು ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸುತಿದ್ದಾರೆ. ಕನ್ನಡದಲಿ ಕಥೆ, ಕವನ, ಪ್ರಬಂಧ, ಹಾಸ್ಯ ಮುಂತಾದ ರೂಪಕಗಳ ಬರೆದು ಸಂಪದ, ದಟ್ಸಕನ್ನಡ, ತನುಮನ ಬ್ಲಾಗ್ ಮುಂತಾದ ಜಾಲತಾಣಗಳಲಿ ಪ್ರಕಟಿಸಿದ್ದಾರೆ. ಸುಮಾರು ಭಕ್ತಿಗೀತೆಗಳ ರಚನೆ ಮಾಡಿ ಮೊದಲ 9 – ಹಾಡುಗಳ ಒಂದು ಆಲ್ಬಮ್ ಪುತ್ತೂರು ನರಸಿಂಹ ನಾಯಕರ ಸಂಗೀತ ಸಂಯೋಜನೆ, ಗಾಯನದಲ್ಲಿ ಧ್ವನಿ ಮುಗ್ರಿತವಾಗಿ ಪ್ರಕಟವಾಗಿದೆ. ಕನ್ನಡ ಕೂಟದ ಸಂಚಿಕೆಗಳು, ಕನ್ನಡ ಸಾಹಿತ್ಯ ರಂಗದ ( ಅಮೇರಿಕಾ) ಪುಸ್ತಕಗಳಲ್ಲೂ ಲೇಖನ, ಕಥೆಗಳು ಮತ್ತು ಇತರೆ ಬರಹಗಳು ಪ್ರಕಟವಾಗಿವೆ.
ಒಲವು!! (ದಿವ್ಯ ಅನುರಾಗ)
ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ!