ಇಬ್ಬರು ವ್ಯಕ್ತಿಗಳು ಭೇಟಿಯಾಗುವ ಕತೆಗಳು – ಕೇಶವ ಕುಲಕರ್ಣಿ

ಬಹಳ ವರ್ಷಗಳಾದ ಮೇಲೆ ಅಥವಾ ದಶಕಗಳು ಗತಿಸಿದ ಮೇಲೆ ಬೇರ್ಪಟ್ಟ ಪ್ರೇಮಿಗಳು ಮತ್ತೆ ಭೇಟಿಯಾದರೆ ಏನಾಗಬಹುದು ಎನ್ನುವ ಪ್ರಶ್ನೆ ಕತೆ ಬರೆಯುವವರಿಗೆ ಮತ್ತು ಸಿನೆಮಾ ಮಾಡುವವರಿಗೆ ತುಂಬ ಇಷ್ಟದ ವಿಷಯ. ಕತೆಯಲ್ಲಿ ಇಬ್ಬರದೂ ಈಗಾಗಲೇ ಮದುವೆಯಾಗಿರಬಹುದು, ಆಗದೆಯೂ ಇರಬಹುದು. ಒಬ್ಬರದು ಮಾತ್ರ ಆಗಿ, ಇನ್ನೊಬ್ಬರು ಭಗ್ನಪ್ರೇಮಿಯಾಗಿರಬಹುದು. ಒಬ್ಬರ ವಿಚ್ಚೇದನವಾಗಿರಬಹುದು. ಒಬ್ಬರಿಗೆ ಕೊನೆಗಾಲದ ಕ್ಯಾನ್ಸರ್ ಆಗಿರಬಹುದು. ಅವರಿಬ್ಬರು ಅಚಾನಕ್ಕಾಗಿ ಭೇಟಿಯಾಗಲು ಒಂದು ಕಾರಣ ಅಥವಾ ಘಟನೆ ಬೇಕು ಆಷ್ಟೇ,  ಕತೆ ಅಲ್ಲಿಂದ ಹಿಂದೆ ಮತ್ತು ಮುಂದೆ ಸಾಗುತ್ತ, ಓದುಗರನ್ನು/ನೋಡುಗರನ್ನು ತಮ್ಮ ಟೀನೇಜ್ ಮತ್ತು ಹದಿಕರೆಯದ ದಿನಗಳಿಗೆ ಕರೆದೊಯ್ಯುತ್ತ, ಯಾರದೋ ನೆನಪನ್ನು ತರುತ್ತ, ಮನಸ್ಸಿನಲ್ಲೊಂದು ಪ್ರೀತಿಯ ಸಂವೇದನೆಯನ್ನು ಹುಟ್ಟಿಸುತ್ತವೆ. ಇಂಥ ಬಹುತೇಕ ಸಿನೆಮಾಗಳು ವಾಸ್ತವದ ತಳಹದಿಯಲ್ಲಿ ಇದ್ದರೂ ರೋಮ್ಯಾಂಟಿಸಿಸಂನ ಭಾಷೆಯನ್ನು ಉಪಯೋಗಿಸುತ್ತವೆ. 

ಇಂಥ ನೂರಾರು ಪರ್-ಮ್ಯುಟೇಶನ್ ಮತ್ತು ಕಾಂಬಿನೇಶನ್-ನಿಂದ ಇಂಗ್ಲೀಷ್ ಭಾಷೆಯಲ್ಲಿ ನೂರಾರು ಕಾದಂಬರಿಗಳು ಮತ್ತು ಸಿನೆಮಾಗಳು ಬಂದಿವೆ. ಹಿಂದಿ ಭಾಷೆಯಲ್ಲಿ ಗುಲ್ಜಾರ್ ಬರೆದು ನಿರ್ದೇಶಿಸಿದ `ಇಜಾಜತ್` ಸಿನೆಮಾ ಆಗಿನ ದಿನಗಳಲ್ಲಿ ತುಂಬ ಕಾಡಿದ ಸಿನೆಮಾ. ಆ ಚಿತ್ರದಲ್ಲಿ ವಿಚ್ಛೇದನಗೊಂಡ ದಂಪತಿಗಳು ರೈಲುನಿಲ್ದಾಣದ ವೇಟಿಂಗ್-ರೂಮಿನಲ್ಲಿ ಭೇಟಿಯಾಗುವ ಕತೆ –  ಆ ಸಿನೆಮಾದ ಅಂತ್ಯ ಬಹಳ ಇಷ್ಟವಾಗಿತ್ತು. ಓ ಹೆನ್ರಿ ಕಥೆಯನ್ನು ಆಧರಿಸಿದ ಋತುಪರ್ಣ ಘೋಷ್ ನಿರ್ದೇಶನದ `ರೇನ್-ಕೋಟ್` ಸಿನೆಮಾ (ಅಜಯ್ ದೇವಗಣ್ ಮತ್ತು ಐಶ್ವರ್ಯಾ ರೈ) ಕೂಡ ಇಂಥದೇ ಕತೆ. `೯೬` ಎನ್ನುವ ತಮಿಳು ಸಿನೆಮಾ (ಕನ್ನಡದಲ್ಲಿ ಅದನ್ನೇ ೯೯ ಎಂದು ರಿಮೇಕ್ ಮಾಡಿದರು)ದಲ್ಲಿ ಪ್ರೇಮಿಗಳು ದಶಕಗಳಾದ ಮೇಲೆ ರಿ-ಯುನಿಯನ್ನಿನ ನೆಪದಲ್ಲಿ ಭೇಟಿಯಾಗುತ್ತಾರೆ. ಅವಳ ಮದುವೆಯಾಗುತ್ತದೆ, ಮಕ್ಕಳಾಗಿವೆ. ಆದರೆ ಈತ ಭಗ್ನಪ್ರೇಮಿ. ರೀ-ಯುನಿಯನ್ ಮುಗಿದ ಮೇಲೆ ಒಂದು ರಾತ್ರಿಯನ್ನು ಅವರು ಒಟ್ಟಿಗೇ ಕಳೆಯುತ್ತಾರೆ. ಕತೆ ಪದರು ಪದರಾಗಿ ತೆರೆದುಕೊಳ್ಳುತ್ತ ಆಪ್ತವಾಗುತ್ತ ಸಾಗುತ್ತದೆ. 

ಆದರೆ ಪ್ರೇಮಿಗಳಲ್ಲದ ಇಬ್ಬರು ವ್ಯಕ್ತಿಗಳ ನಡುವಿನ ಕತೆಗಳು ಮತ್ತು ಸಿನೆಮಾಗಳು ವಿರಳವೆಂದೇ ಹೇಳಬಹುದು. ಅಂಥ ಕತೆಗಳನ್ನು ಬರೆಯುವುದು, ಅದರಲ್ಲೂ ಸಿನೆಮಾ ಮಾಡುವುದು ತುಂಬ ಕಷ್ಟದ ಕೆಲಸ. ಎರಡೂ ವ್ಯಕ್ತಿಗಳು ಒಂದೇ ಲಿಂಗದವರಾಗಿರಬೇಕು (ಸಹೋದರ/ಪಿತೃ ಬಾಂಧವ್ಯವಿಲ್ಲದಿದ್ದರೆ). ಅವರು ಅಪರಿಚಿತರಿರಬಹುದು. ತುಂಬ ವರ್ಷಗಳಾದ ಮೇಲೆ ಭೇಟಿಯಾದ ಗೆಳೆಯರಿರಬಹುದು. ದಶಕಗಟ್ಟಲೇ ಭೇಟಿಯಾಗದ ಅಪ್ಪ-ಮಗನಿರಬಹುದು, ದಾಯಾದಿಗಳಿರಬಹುದು, ಸಹೋದರ-ಸಹೋದರಿಯರಿರಬಹುದು. ಇಂಥ ಕತೆಗಳ ವ್ಯಾಪ್ತಿ ಮತ್ತು ಆಳ ಎರಡೂ ಆಯಾ ಕತೆಗಾರನ ಅನುಭವ, ಓದು  ಮತ್ತು ಏನನ್ನು ಹೇಳಬೇಕು ಎನ್ನುವ ತುಡಿತದ ಮೇಲೆ ಅವಲಂಬಿಸಿಸಿರುತ್ತದೆ. 

ಇದನ್ನೆಲ್ಲ ಬರೆಯಲು ಕಾರಣ, ಇತ್ತೀಚೆಗೆ ಅಂಥ ಎರಡು ಸಿನೆಮಾಗಳನ್ನು ನೋಡಿದೆ. 

ಅಡಿಯೋಸ್ ಅಮಿಗೋ

ಸ್ಪ್ಯಾನಿಷ್ ಭಾಷೆಯಲ್ಲಿ ‘ಅಡಿಯೋಸ್ ಅಮಿಗೋ’ ಎಂದರೆ ‘ವಿದಾಯ ಗೆಳಯನೇ`’ ಎಂದು. ಆದರೆ ಇದು ಸ್ಪ್ಯಾನಿಷ್ ಚಿತ್ರವಲ್ಲ, ಕೇರಳದಲ್ಲಿ ಜರಗುವ ಶುದ್ಧ ಮಲಯಾಳಂ ಚಿತ್ರ! 

ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆಯ ಇಬ್ಬರು ಅಪರಿಚಿತರು ಆಕಸ್ಮಿಕವಾಗಿ ಭೇಟಿಯಾದರೆ ಏನಾಗಬಹುದು?  

ಒಬ್ಬ ಶ್ರೀಮಂತ ಮತ್ತು ಇನ್ನೊಬ್ಬ ಬಡವ. 

ಒಬ್ಬ ತುಂಬ ತೊಂದರೆಯಲ್ಲಿದ್ದಾನೆ, ಇನ್ನೊಬ್ಬ ಬೇಕಾಬಿಟ್ಟಿ ಬದುಕುತ್ತಿದ್ದಾನೆ. 

ಒಬ್ಬ ನಿರಾತಂಕದಲ್ಲಿರುವಂತೆ ತೋರುತ್ತಾನೆ, ಇನ್ನೊಬ್ಬ ಆತಂಕದಲ್ಲೇ ಕಾಯುತ್ತಿದ್ದಾನೆ. 

ಒಬ್ಬ ಹಣವನ್ನು ಹೇಗೆ ಬೇಕೆಂದ ಹಾಗೆ ಖರ್ಚು ಮಾಡುತ್ತಾನೆ,,ನ್ನೊಬ್ಬ ತನ್ನ ತಾಯಿಯ ಆಸ್ಪತ್ರೆಯ ಬಿಲ್‌ಗಳಿಗಾಗಿ ಹತಾಶರಾಗಿದ್ದಾನೆ. 

ಇಂಥ ವ್ಯತಿರಿಕ್ತ ಅಪರಿಚಿತರು ಬಸ್-ಸ್ಟ್ಯಾಂಡಿನಲ್ಲಿ ಭೇಟಿಯಾಗುತ್ತಾರೆ. ಕೇರಳದಾದ್ಯಂತ ಬಸ್, ಕಾರು ಮತ್ತು ದೋಣಿಯಲ್ಲಿ ೨೪ ಗಂಟೆಗಳ ಕಾಲ ಸುಮಾರಾಗಿ ಗೊತ್ತುಗುರಿಯಿಲ್ಲದ ಅರ್ಥಹೀನ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ಸಿನೆಮಾ ನಮ್ಮನ್ನು ಉದ್ದೇಶರಹಿತ ಪ್ರಯಾಣಕ್ಕೆ ಕರೆದೊಯ್ಯುತ್ತದೆ.

ಇಂಥ ಸಂಪೂರ್ಣ ವಿರುದ್ಧದ ಇಬ್ಬರ ಯಾತ್ರೆ, ಕಪ್ಪುಬಿಳಿಪಾಗಿ ಸಾಗುವುದಿಲ್ಲ. ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸವನ್ನು ಅನ್ವೇಷಿಸುವುದಿಲ್ಲ. ಯಾವುದೇ ಪಾತ್ರವನ್ನು ನಿರ್ಣಯಿಸುವುದಿಲ್ಲ. ಬೋಧನೆ ಇಲ್ಲ. ನೈತಿಕತೆಯ ಪಾಠಗಳಿಲ್ಲ.  ನಾನ್-ಜಡ್ಜ್-ಮೆಂಟಲ್ ಆಗಿ ದೈನಂದಿನ ಜೀವನದ ಸಾಮಾನ್ಯ ದೃಶ್ಯಗಳಲ್ಲಿ ವೈಭವೀಕರಣವಿಲ್ಲದೇ ತೋರಿಸುತ್ತ ಮನುಷ್ಯನ ಒಳಪದರುಗಳನ್ನು ಬಿಡಿಸುತ್ತ ಹೋಗುತ್ತದೆ. 

ಮೇಯಗನ್

ಮೇಯೞಗನ್, ಹೆಸರೇ ಹೇಳುವಂತೆ, ತಮಿಳು ಸಿನೆಮಾ. ಕನ್ನಡದಲ್ಲಿ ತಿಲಾಂಜಲಿ ಕೊಟ್ಟಿರುವ `ೞ` (ಳ) ಇರುವ ಅಚ್ಚ ತಮಿಳು ಹೆಸರಿನ ಸಿನೆಮಾ. 

ಈ ಸಿನೆಮಾದಲ್ಲೂ ಇಬ್ಬರು ಭೇಟಿಯಾಗುತ್ತಾರೆ. ಆದರೆ ಸಂಪೂರ್ಣ ಅಪರಿಚಿತರಲ್ಲ. ಆದರೆ ಕೆಲವು ದಶಕಗಳ ಮೇಲೆ ಭೇಟಿಯಾಗುತ್ತಾರೆ. 

ಒಬ್ಬ ನಗರ ನಿವಾಸಿಯ ಪ್ರತಿರೂಪ, ಇನ್ನೊಬ್ಬ ಹಳ್ಳಿಯ ಭೂಪ. 

ಒಬ್ಬ ತುಂಬ ಮಿತಭಾಷಿ, ಇನ್ನೊಬ್ಬ ಅರಳು ಹುರಿದಂತೆ ಮಾತಾಡುವ.

ಒಬ್ಬ ರಿಸರ್ವ್ಡ್, ಇನ್ನೊಬ್ಬ ಓಪನ್. 

ಒಬ್ಬನದು ಯಾರನ್ನೂ ಹೆಚ್ಚಾಗಿ ನಂಬದ ಬದುಕು, ಇನ್ನೊಬ್ಬನ ಬದುಕೇ ನಂಬುಗೆಯ ಮೇಲೆ ನಿಂತಿರುವುದು. 

ಒಬ್ಬನದು ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದ ನಡೆ,  ಇನ್ನೊಬ್ಬನದು ಎಲ್ಲರೂ ನಮ್ಮವರೇ ಎನ್ನುವ ಬಾಳು. 

ಒಬ್ಬನದು ಇತರರೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುವ ಸ್ವಭಾವ, ಇನ್ನೊಬ್ಬ ಪ್ರಾಣಿಗಳನ್ನೂ ಮಾತನಾಡಿಸಬಲ್ಲ. 

ದಶಕಗಳಾದ ಮೇಲೆ ಈ ನಗರವಾಸಿ ತಾನು ಹುಟ್ಟಿಬೆಳೆದ ಹಳ್ಳಿಗೆ ಹೋಗಬೇಕಾಗುವ ಪ್ರಸಂಗ ಬರುತ್ತದೆ, ಒಂದು ಮದುವೆಯ ಕಾರಣಕ್ಕಾಗಿ. ಅಲ್ಲಿ ನಗರವಾಸಿಯ ಉಪಚಾರವನ್ನು ನೋಡಿಕೊಳ್ಳಲು ಈ ಹಳ್ಳಿಯ ಭೂಪ. ಹಳ್ಳಿಯ ಭೂಪನಿಗೆ ನಗರವಾಸಿಯನ್ನು ನೋಡುತ್ತಿದ್ದಂತೆ ತನ್ನ ಅತ್ಯಂತ ಆಪ್ತಬಂಧು ಬಂದಂತೆ ವ್ಯವಹರಿಸುತ್ತಾನೆ.  ಆದರೆ ನಗರವಾಸಿಗೆ ಈ ಹಳ್ಳಿಯ ಭೂಪ ಯಾರೆಂದು ಏನು ಮಾಡಿದರೂ ಗೊತ್ತಾಗುತ್ತಿಲ್ಲ, ಅವನನ್ನೇ ನೀನಾರೆಂದು ಕೇಳಲು ಸಂಕೋಚ. ಮದುವೆಯ ಮಂಟಪದಲ್ಲಿ ಏನೆಲ್ಲ ಸಾಹಸ ಮಾಡಿದರೂ ಈ ಹಳ್ಳಿಯ ಭೂಪ ತನಗೆ ಹೇಗೆ ಸಂಬಂಧವಾಗಬೇಕು, ಅವನ ಹೆಸರೇನು ಎಂದು ಹರಸಾಹಸ ಮಾಡಿದರೂ ಗೊತ್ತಾಗುವುದೇ ಇಲ್ಲ!

ಈ ಸಿನೆಮಾದ ನಿರೂಪಣೆ ಮಾಸ್ತಿಯವರ ಅವರ ಸಣ್ಣ ಕಥೆಗಳಂತಿದೆ –  ಸರಳ, ಅಷ್ಟೇ ಆಳ. ಈ ಚಿತ್ರವೂ `ಅಡಿಯೋಸ್ ಅಮಿಗೋ` ಚಿತ್ರದಂತೆ ಬಹುತೇಕಕ ೨೪ ಗಂಟೆಗಳಲ್ಲಿ ನಡೆಯುತ್ತದೆ. ಪದರು ಪದರಾಗಿ ಮನುಷ್ಯನ ದೊಡ್ಡತನ ಮತ್ತು ಸಣ್ಣತನಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ಸಾಗುತ್ತದೆ. ನಗರಪ್ರಜ್ಞೆ ಮತ್ತು ಗ್ರಾಮೀಣ ನಂಬುಗೆಗಳು ರೋಮ್ಯಾಂಟಿಕ್ ಪದರುಗಳಲ್ಲಿ ಬಿಡಿಸಿಕೊಳ್ಳುತ್ತ ಹೋಗುತ್ತದೆ (ಕೆಲವೊಮ್ಮೆ ವ್ಯಾಚ್ಯವೂ ಆಗುತ್ತದೆ). 

(ಅಂದ ಹಾಗೆ  `ಮೇಯೞಗನ್` ಸಿನೆಮಾದ ನಿರ್ದೇಶಕನ ಮೊದಲ ಸಿನೆಮಾ ನಾನು ಮೇಲೆ ಹೇಳಿದ ೯೬). 

ಇಂಥ ಕೆಲವು ಕತೆಗಳು

ಆರ್ ಕೆ ನಾರಾಯಣರು ಬರೆದ `ಜ್ಯೋತಿಷಿಯ ದಿನ` ಕತೆಯೊಂದಿದೆ. ಅದರಲ್ಲಿ ವಿದ್ಯುಚ್ಛಕ್ತಿ ಇಲ್ಲದ ಆಗಿನ ಕಾಲದಲ್ಲಿ ಕತ್ತಲಾಗುವ ಹೊತ್ತಿನಲ್ಲಿ ಜ್ಯೋತಿಷಿಯ ಬಳಿ ವ್ಯಕ್ತಿಯೊಬ್ಬ ಬಂದು ತನ್ನನ್ನು ತುಂಬ ವರ್ಷಗಳ ಹಿಂದೆ ಹೆಚ್ಚು-ಕಡಿಮೆ ಕೊಂದೇ ಹಾಕಿದ ವ್ಯಕ್ತಿ ಎಲ್ಲಿರಬಹುದೆಂದು ಕೇಳುತ್ತಾನೆ. ಜ್ಯೋತಿಷಿಗೆ ಭವಿಷ್ಯ ಕೇಳಲು ಬಂದ ವ್ಯಕ್ತಿ ಯಾರು ಎನ್ನುವುದು ಗೊತ್ತು, ಆದರೆ ಆ ವ್ಯಕ್ತಿಗೆ ಜ್ಯೋತಿಷಿ ಯಾರೆಂದು ಗೊತ್ತಿಲ್ಲ, `ಮೇಯೞಗನ್` ಸಿನೆಮಾದಲ್ಲಿ ಆಗುವಂತೆ. ಆ ಕತೆಯ ವಸ್ತು, ಅದನ್ನು ಬರೆದ ಶೈಲಿ ಮತ್ತು ಕೊನೆಯವರೆಗೂ ಕಾದಿಡುವ ರಹಸ್ಯ ಈಗಲೂ ಕತೆ ಬರೆಯುವವರಿಗೆ ಹೇಳಿ ಮಾಡಿಸಿದ ಪಾಠದಂತಿದೆ.  

ವಿವೇಕ ಶಾನಭಾಗರು ಬರೆದ `ನಿರ್ವಾಣ` ಎನ್ನುವ ಕತೆಯೊಂದಿದೆ (ಘಾಚರ್ ಘೋಚರ್ ಸಂಕಲನ). ನಗರ ಜೀವನದ, ಕಾರ್ಪೋರೇಟ್ ಬದುಕಿನ ಪುಳ್ಳುತನವನ್ನು ಎಲ್ಲಿಯೂ ವ್ಯಾಚ್ಯವಾಗಿಸದೇ ಸಶಕ್ತವಾಗಿ ಬರೆದ ಕತೆ.  ಈ ಕತೆಯಲ್ಲೂ ಇಬ್ಬರು ವ್ಯಕ್ತಿಗಳು ಭೇಟಿಯಾಗುತ್ತಾರೆ, `’ಅಡಿಯೋಸ್ ಅಮಿಗೋ’ ತರಹ. `ಮೇಯೞಗನ್` ತರಹ. ಕಾರ್ಪೋರೇಟ್ ಜಗತ್ತಿನಲ್ಲಿ ಮ್ಯಾನೇಜರ್ ಜಾಗದಲ್ಲಿ ಇರುವ ಇಬ್ಬರು ಪರದೇಶದ ಹೊಟೇಲೊಂದರಲ್ಲಿ ಭೇಟಿಯಾಗುತ್ತಾರೆ. ಇಬ್ಬರೂ ಬಹಳ ವರ್ಷಗಳಾದ ಮೇಲೆ ಸಿಕ್ಕವರು. ಕಥಾನಾಯಕನಿಗೆ ಅವನನ್ನು ಮುಂಚೆ ನೋಡಿದ ಮಾತನಾಡಿಸಿದ ನೆನಪಿದೆ, ಆದರೆ ಪೂರ್ತಿ ನೆನಪಾಗುತ್ತಿಲ್ಲ. ಇರಲಿ, ಏನಂತೆ, ಇದೆಲ್ಲ ಕಾರ್ಪೋರೇಟ್ ಜಗತ್ತಿನಲ್ಲಿ ಸಾಮಾನ್ಯವಲ್ಲವೇ? ಇಬ್ಬರೂ ಸೇರಿ ಆತನ ರೂಮಿನಲ್ಲಿ ಗುಂಡು ಹಾಕುತ್ತಾ ಪರಸ್ಪರ ಉಭಯ ಕುಶಲೋಪರಿಯನ್ನು ಮಾತನಾಡುತ್ತಾರೆ. ಮಾತನಾಡುತ್ತ ಕಥಾನಾಯಕನಿಗೆ ಆತ ತಾನು ಅಂದುಕೊಂಡ ಆತನಲ್ಲ ಎಂದು ಗೊತ್ತಾಗುತ್ತದೆ! ಮುಂದೆ ಇನ್ನೂ ಏನೇನೋ ಆಗುತ್ತೆ, ಸಸ್ಪೆನ್ಸ್ ಹಾಗೇ ಇರಲಿ. 

ಇನ್ನೂ ಕೆಲವು ಕತೆಗಳಿರುತ್ತವೆ. ಆ ಕತೆಗಳಲ್ಲಿ ಒಂದೇ ವ್ಯಕ್ತಿ ಎರಡು ಹೋಳಾಗಿ ಎರಡು ವಿರುದ್ಧ ವ್ಯಕ್ತಿತ್ವದ ಮನುಷ್ಯರಾಗಿ, ಬೇರೆ ಬೇರೆಯಾಗಿ, ಮತ್ತೆ ಎದುರಾಗುತ್ತಾರೆ. ಹಾಗೆ ಎದುರಾದಾಗ ಎಂಥ ತೀವ್ರ ಸಂಘರ್ಷವಾಗುತ್ತದೆ ಅಲ್ಲವೇ!  ಕಾರ್ನಾಡರ `ನಾಗಮಂಡಲ` ಮತ್ತು ಕಂಬಾರರ `ಸಿರಿಸಂಪಿಗೆ` ಇದಕ್ಕೆ ಉದಾಹರಣೆಗಳು. ಅಮೋಲ್ ಪಾಲೇಕರ್ ನಿರ್ದೇಶಿಸಿದ `ಪಹೇಲಿ` (ಶಾರೂಕ್ ಖಾನ್ ನಟನೆ)ಯದೂ ಇಂಥದೇ ಕತೆ. ಎ ಕೆ ರಾಮಾನುಜನ್ ಬರೆದ `ಮತ್ತೊಬ್ಬನ ಆತ್ಮ ಚರಿತ್ರೆ`ಯನ್ನೂ ಇಂಥ ಕತೆಗಳ ಸಾಲಿಗೆ ಸೇರಿಸಬಹುದೇನೋ. 

ನಿಮಗೂ ಇಂಥ ಕಥೆಗಳು ಮತ್ತು ಸಿನೆಮಾಗಳು ಗೊತ್ತಿದ್ದರೆ, ಅವು ನಿಮ್ಮನ್ನು ಸ್ವಲ್ಪವಾದರೂ ಕಾಡಿದ್ದರೆ ನಿಮ್ಮ ಪ್ರತ್ರಿಕ್ರಿಯೆಯಲ್ಲಿ ಬರೆಯಲು ಮರೆಯಬೇಡಿ. 

ಮಾಯಾಲೋಕಗಳು

ಅಜ್ಜಿ ಕಥೆ

ನನ್ನ ಮೊಮ್ಮಕ್ಕಳು ರಜಾ ಬಂದಾಗ ನಮ್ಮ ಮನೆಗೆ ಬರುತ್ತಾರೆ. ಬಂದಾಗ ಅಜ್ಜಿ ಕತೆ ಹೇಳು ಅಂತ ಕೇಳುತ್ತಾರೆ. ಆಯಿತು. ಕೇಳಿ. ಇದು ನಡೆದ ಸಮಾಚಾರ. ಸುಮಾರು 100 ವರ್ಷ ಕಿಂತ ಮುಂಚೆ ನಡೆದ ಕಥೆ. ನನಗೆ ನನ್ನ ಅಮ್ಮ ಹೇಳಿದ್ದು. ಏನಪ್ಪಾ ಅಂದರೆ ನಾವು ಮೂಲತ: ಮಹಾರಾಷ್ಟ್ರದವರು. ಮಾದ್ವ ಬ್ರಾಹ್ಮಣರು. ವಿಪರೀತ ಮಡಿ, ಮೈಲಿಗೆ ಗಲಾಟೆ. ಮನೆಯ ಹೆಂಗಸರು ತುಂಬಾ ಜೋರು. ಆ ಕಾಲದಲ್ಲಿ ಕಚ್ಚೆ ಹಾಕಿಕೊಂಡು ಕುದರೆ ಸವಾರಿ ಮಾಡುತ್ತಿದ್ದರಂತೆ  ಅವರು ಪೂನಾ ಹತ್ತಿರ ಒಂದು ಊರಲ್ಲಿ ಇದ್ದರಂತೆ. ಪೇಶ್ವೆಗಳ ಹತ್ತಿರ ಸಿಪಾಯಿ ಗಳಾಗಿ ಇದ್ದರಂತೆ. ಇವರಿಗೆ ಮೈಸೂರಿನಲ್ಲಿ ನೆಂಟರು ಮದುವೆಗೆ ಬರಬೇಕೆಂದು ಕರೆದರಂತೆ. ಆ ಕಾಲದಲ್ಲಿ ಸಂಚಾರ ಮಾಡುವುದು ಬಹಳ ಕಷ್ಟ. ಕುದರೆಮೇಲೆ ಕಾಡಿನ ದಾರಿಯಲ್ಲಿ ಹೋಗಬೇಕು. ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ ರಾತ್ರಿ ಇರಬೇಕು. ಸಾಮಾನ್ಯವಾಗಿ ಮರಾಟಿಗ ಹೆಂಗಸರು ಗಟ್ಟಿಗರು, ಸರಿ ಅಂತ ಪ್ರಯಾಣಕ್ಕೆ ಎಲ್ಲ ಸಿದ್ದಮಾಡಿಕೊಂಡು ಗಂಡ ಮತ್ತು ಹೆಂಡತಿ ಎರಡು ಕುದರೆ ಮೇಲೆ ಹೊರಟರಂತೆ. ಸುಮಾರು ದಿನಗಳು ಕಳೆದವು. ಎಷ್ಟೂ ಕಾಡು, ಮೆಡು ಗಲ್ಲಿ ಸುತ್ತಿ, ನಾನಾ ತರಹದ, ಕಷ್ಟ ಅನುಭವಿಸಿದರು. ಹುಲಿ, ಸಿಂಹ, ಹಾವು, ಜಿಂಕೆ ನಾನಾ ತರಹದ ಪ್ರಾಣಿಗಳನ್ನು ನೋಡಿದರಂತೆ. ಅವರ ಹತ್ತಿರ ಬಂದೂಕು ಇತ್ತು. ಒಂದು ಸಲ ಅವರ ಹತ್ತಿರ ಇದ್ದ ತಿಂಡಿ ಸಾಮಾನು ಮುಗಿದುಹೋಯ್ಯಂತೆ. ಕಾಡಿನಲ್ಲಿ ಏನು ಮಾಡುವುದು ಅಂತ, ಜೇನು, ಹಣ್ಣು ಸಿಗುತ್ತಾ ಅಂತ ನೋಡುತ್ತಾ ಇದ್ದರಂತೆ. ಒಂದು ಬಂಡೆ ಮೇಲೆ ದೊಡ್ಡ ಮುದ್ದೆ ಕಾಣಿಸಿತು. ಹೋಗಿ ನೋಡಿದರೆ ಬೇಲದ ಹಣ್ಣು, ಜೇನುತುಪ್ಪ ಕಲಿಸಿ,ಇತ್ತಂತ್ತೆ. ಇವರು ಹಸಿವೆಯನ್ನು ತಡಯಲಾರದೆ ತಿಂದರಂತೆ. ಅಷ್ಟರಲ್ಲಿ ಒಂದು ಕರಡಿ, ತನ್ನ ಮಕ್ಕಳಲಂದಿಗೆ ಬರುತ್ತಾ ಇದ್ದಿದ್ದನ್ನು ನೋಡಿ, ಇಬ್ಬರು, ಕುದರೆಮೇಲೆ ಹತ್ತಿ ಓಡಿಹೋಗಿ ಜೀವ ಉಳಿಸಿಕೊಂಡರು.  ಕರಡಿ ಪಾಪ!ತನ್ನ ಮಕ್ಕಳಿಗೆ  ತಯಾರಿಸಿದ ಬೆಲದ ಹಣ್ಣು ಜೇನು ತುಪ್ಪದ ಫಲಾಹಾರ,ನಮ್ಮ ನೆಂಟರು ತಿಂದುಬಿಟ್ಟರು. ಕರಡಿ ಅಟ್ಟಿಸಿಕೊಂಡು, ಬರುವವಷ್ಟ್ರಲ್ಲಿ, ಇವರು ಕುದರೆಮೇಲೆ ದೌಡಾಯಿಸಿದರು.
ಹೀಗೆ ನಮ್ಮ ಅಮ್ಮ ನಮಗೆಲ್ಲ ಬೆಳದಿಂಗಳ ಊಟ ಕೈ ತುತ್ತು ಹಾಕುತ್ತ ಹೇಳುತ್ತಿದರು.

'ಅಜ್ಜಿ ಇದು ನಿಜವಾದ ಘಟನೆನಾ ಅಥವಾ ಬರಿ ಕಥೆನಾ?' ' ನನ್ನ ತಾಯಿಯ ಮುತ್ತಜ್ಜಿ,ಮುತ್ತಜ್ಜ ಪೂನಾದಿಂದ ಮೈಸೂರಿಗೆ ವಲಸೆಬಂದದ್ಫು ನಿಜ. ಕುದುರೆ ಮೇಲೆ ಕಾಡಿನಲ್ಲಿ ಬಂದಿದ್ಫು ನಿಜ. ಮಿಕ್ಕಿದೆಲ್ಲ ನನಗೆ ಗೊತ್ತಿಲ್ಲ' ಅಂತ ಜಾರಿಕೊಂಡೆ. ಇಲ್ಲದಿದ್ದರೆ Where is the proof? ಅಂದರೆ ಏನು ಮಾಡಲಿ? ನಾವೆಲ್ಲ ನಮ್ಮ ಅಮ್ಮ ಹೇಳಿದ ಕಥೆ 200% ನಂಬುತ್ತೀವಿ. ಒಂದು ಜನರೇಶನ್ ಗೆ ಮುಂದಿನ ಜನರೇಶನ್ ಕತೆ ಇನ್ನು ಜೀವಂತ ವಾಗಿದೆ.

~ ವತ್ಸಲಾ ರಾಮಮೂರ್ತಿ

ಜಾಹೀರಾತುಗಳ ಮಾಯಾಲೋಕ

ಇದೀಗ ಇಲ್ಲಿ  ಸಂಜೆಗಳೇ ಇಲ್ಲದ  ಬರೀ ಬೆಳಗು – ರಾತ್ರಿಗಳ ನವೆಂಬರ್. ಚಳಿರಾಯ ನಿಧಾನವಾಗಿ ತನ್ನ ಪಾದವೂರುವ  ಸನ್ನಾಹದಲ್ಲಿದ್ದಾನೆ.  ಚಕ್ಕುಲಿ- ಕರಚಿಕಾಯಿ, ದೇಸಿ ಘೀ ಯ ಬೇಸನ್ ಉಂಡಿಗಳ ದೀಷಾವಳಿ ಫರಾಳದ  ಪ್ರಭಾವವೋ ಅಥವಾ ಚಳಿರಾಯನ ಕರಾಮತ್ತೋ ಅಂತೂ ಸಣ್ಣನೆಯ ಕೆಮ್ಮು, ಗಂಟಲ ಕೆರೆತ,  ಮೈಕೈ ನೋವು...ಹೀಂಗ  ಒಂದೊಂದೇ ಕಿರಿಕರಿಗಳು ,ಕಾಡಲಿಕ್ಕೆ ಶುರುವಾಗೂ ದಿನಗಳಿವು. 

‘ ಗಲೇಂ ಮೆ ಖರಾಶ್ ಮಜೇದಾರ್ ಸ್ಟೆಪ್ಸಿಲ್ಸ’ , ‘ ವಿಕ್ಸ್ ಕೀ ಗೋಲಿ ಲೋ ಖಿಚ್ ಖಿಚ್ ದೂರ್ ಕರೋಂ ‘
ಇದೇನಿದು ಜಾಹೀರಾತು ಶುರು ಮಾಡಿದ್ರೆಲಾ ಅಂತೀರೇನು? ಹೌದ ನೋಡ್ರಿ ಈ ಜಾಹೀರಾತುಗಳ ಮಹಿಮಾ ಮತ್ತ ಮಾಯಾ ( ಮುನ್ನಾಭಾಯಿಗತೆ ಯೆ ಮಹಿಮಾ ಔರ್ ಮಾಯಾ ಕೌನ್ ಹೈ ಅಂತ ಮಾತ್ರ ಕೇಳಬ್ಯಾಡ್ರಿ ಮತ್ತ) ಭಾಳ ದೊಡ್ಡದು ಬಿಡ್ರಿ. ಖರೇ ಹೇಳಬೇಕಂದ್ರ ಈ ಇಂಟರ್ ನೆಟ್ , ಗೂಗಲ್ ಮಹಾಶಯ ಸಹಾಯಕ್ಕಿಲ್ಲ ದ ನಮ್ಮ ಆಗಿನ ದಿನಗಳಲ್ಲಿ ನಮಗೇನರೇ ಅಲ್ಪ-ಸ್ವಲ್ಪ ಲೋಕಜ್ಞಾನ, ಸಾಮಾನ್ಯ ಜ್ಞಾನ ಇತ್ತು ಅಂದ್ರ ಅದರಾಗ ಈ ಜಾಹೀರಾತುಗಳದೇ ದೊಡ್ಡ ಪಾತ್ರ ಅಂತ ನಿಸ್ಸಂಶ ಯವಾಗಿ ಹೇಳಬಲ್ಲೆ.
ಡಮಡಮು ಅಂತ ಬಾರಸಕೋತ ಮಂಗ್ಯಾ ಆಡಸಂವಾ ಬಂದ್ರ, ‘ಮನ ಡೋಲೆ ಮೋರಾ ತನ್ ಡೋಲೆ’ ಅಂತ ಪುಂಗಿ ಊದೋ ಹಾವಾಡಿಗನ ಆ ಬಿದಿರನ ಬುಟ್ಟಿ ಕಂಡ್ರ, ಬಾರಕೋಲಿನ ಚಾಟಿ ಮೈಮೇಲೆ ಬೀಸಕೋತ ‘ ನೀರ ಹಾಕ್ರಿ, ನೀರ ಹಾಕ್ರಿ’ ಅಂತ ದುರಗಮುರಗ್ಯಾ ಬಂದ್ರ , ಆನೆಯೋ- ಒಂಟೆಯೋ ಸವಾರಿಗಾಗಿ ಬಂದ್ರ, ಯಾರೋ ಕೌಲೆತ್ತು ತಂದ್ರ, ಆಕಾಶದಾಗೊಂದು ವಿಮಾನ ಹಾರಿದ್ರ ಮನೆಯೊಳಗಿಂದ ಹೊರಗೆ ಓಡೋಡಿ ಬಂದು ಜಗತ್ತಿನ ಅದ್ಭುತಗಳೆಲ್ಲ ಅಲ್ಲೇ ಮೇಳೈಸಿಬಿಟ್ಟಾವೇನೋ ಅನ್ನೂಹಂಗ ಬೆರಗುಗಣ್ಣಿಂದ ನೋಡುತ್ತ ಅವನ್ನೆಲ್ಲ ಆಸ್ವಾದಿಸುವ ಮುಗ್ಧ ಬಾಲ್ಯ – ಹದಿಹರೆಯಗಳವು. ಹೊಸತಾಗಿ ಆಗಷ್ಟೇ ಅವರಿವರ ಮನೆಯಲ್ಲಿ ಸಣ್ಣದಾಗಿ ಒಂದೊಂದೇ Black & white, portable T.V.ಗಳು ಬರಲು ಶುರುವಾಗಿದ್ದ ದಿನಗಳು. ಖರೇ ಹೇಳಬೇಕಂದ್ರ ಆಗ ಈ ಟಿ ವಿ ವೈಯಕ್ತಿಕ ಸ್ವತ್ತಾಗಿರಲಿಲ್ಲ. ಮನೆಯವರು ದುಡ್ಡನ್ನು ಪಾವತಿಸಿ T.V ತಂದರೂ ಅದರ ಮೇಲೆ ಇಡಿಯ ಓಣಿಯ ಜನರ ಅಧಿಕಾರವಿರುತ್ತಿತ್ತು. ಈಗಿನವರಿಗೆ ಇದು ನಂಬಲಸಾಧ್ಯವಾದರೂ ನಮ್ಮ ಕಾಲದ ಸೋಳಾಣೆ ಸತ್ಯ,ಶಂಬರ್ ಟಕ್ಕೆ ಖರೇ ಮಾತಾಗಿತ್ತು ಇದು.

ನಮ್ಮ ಓಣ್ಯಾಗ ಮೊದಲ ಉಕ್ಕಲಿ ಮಾಮಾ ಅವರ ಮನಿಗೆ ಟಿ.ವಿ. ಬಂದಿತ್ತು. ಅವರ ಮನೆಯ ಮೂರುಜನ ನಮ್ಮ ಮನೆಯ ಆರು ಜನ ಅದನ್ನು ನೋಡಲು ಕೂಡುವುದಿತ್ತು. ಆ ಟಿ.ವಿ. ಕಾರ್ಯಕ್ರಮಗಳಿಗೆ ತಕ್ಕಹಂಗ ಅವರು ತಮ್ಮ ಊಟ, ತಿನಸು ,ಛಾ ಮುಗಸಕೊಂಡು ಎಷ್ಟೋ ಸಲ ನಮಗೂ ಕೊಟ್ಟು ನಮ್ಮನ್ನೆಲ್ಲ ಕುರ್ಚಿ, ದಿವಾನದ ಮೇಲೆ ಕೂಡಿಸಿ ಪಾಪ ಅವರೇ ಕೆಳಗೆ ಚಾಪೆ ಮ್ಯಾಲೆ ಕೂಡೋ ಪಾಳಿ ಬರತಿತ್ತು. ಆದ್ರ ಮಜಾ ಅಂದ್ರ ಇವುಗಳ ಬಗ್ಗೆ ಅವರಿಗೂ ಬೇಸರವಿರಲಿಲ್ಲ. ಉಲ್ಟಾ ಎಂದರೇs ಒಮ್ಮೆ ನಾವು ಹೋಗದಿದ್ರ ಅವರ ಮಗಳು ರೇಖಾ ಕಟ್ಟಿ ಮ್ಯಾಲೆ ನಿಂತು ‘ ಚಿತ್ರಹಾರ್ ಶುರು ಆತು ಲಗೂನೇ ಬರ್ರಿ’ ಅಂತ ಕೂಗಿ ಕರೆಯುತ್ತಿದ್ದಳು. ರಾತ್ರಿ ಹೊತ್ತು ಪ್ರಸಾರವಾಗುತ್ತಿದ್ದ ‘ ಕಿಲ್ಲೆ ಕಾ ರಹಸ್ಯ’ ನೋಡಲು ಅವರು ನಿದ್ದೆ ಬಂದಿದ್ದರೂ ತೂಕಡಿಸುತ್ತ ನಮಗಾಗಿ ಕಾಯುತ್ತಿದ್ದದು ನನಗೀಗಲೂ ನೆನಪಿದೆ.

84 ರಲ್ಲಿ ನಮ್ಭ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯಾದಾಗಲಂತೂ ನಮ್ಮ ಹಿಂದಿನ ಓಣಿಯ ಗುನ್ನಾಳಕರ ಅವರು ತಮ್ಮ ಟಿ.ವಿ.ಯನ್ನು ಮನೆ ಯ ಅಂಗಳದಲ್ಲಿಟ್ಟು ನೂರಾರು ಮಂದಿಗೆ ಪ್ರಧಾನಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಕ್ರಿಕೆಟ್ ಮ್ಯಾಚ್ ಗಳು ಇದ್ದರೂ ಅಷ್ಟೇ. ಪಡಸಾಲೆಯ ಟಿ.ವಿ. ಅಂಗಳಕ್ಕೇ ಬರುತ್ತಿತ್ತು.

ನಂತರ ಗೌಡರ್ ಅವರ ಮನಿಗೆ ಕಲರ್ ಟಿ.ವಿ. ಬಂದು ನಾವು ಐದು ಜನ ಮಕ್ಕಳು, ಅವರ ಮನೆಯ ಆರು ಜನ ಮಕ್ಕಳು ತಮ್ಮ ತಮ್ಮ ಸ್ನೇಹಿತರಾದಿಯಾಗಿ ಬಂಧುಬಳಗ ಸಮೇತವಾಗಿ ಸತ್ಯನಾರಾಯಣ ಪೂಜೆಯಷ್ಟೇ ಶ್ರದ್ಧೆಯಿಂದ ರಮಾನಂದ ಸಾಗರರ ರಾಮಾಯಣ, ಬಿ.ಆರ್. ಛೋಪ್ರಾರ ಮಹಾಭಾರತ ನೋಡುತ್ತಿದ್ದೆವೆನ್ನುವುದು ಬಹಳ ಸುಂದರ ನೆನಪು. ಗೌಡರ್ ಮಾಲಾಕಾಕು ಅಂತೂ ಸ್ನಾನ ಮಾಡಿ ಒಗೆದ ಬಟ್ಟೆ ತೊಡದೇ ಹೋದ್ರ ರಾಮಾಯಣ – ಮಹಾಭಾರತ ನೋಡಲಿಕ್ಕೆ ಎಂಟ್ರಿ ಪಾಸ್ ನೇ ಕೊಡತಿದ್ದಿಲ್ಲ. ಹಿಂಗಾಗಿ ನಾವು ರಾಮ- ಸೀತಾನ ಬಗ್ಗೆ ಭಯಭಕ್ತಿ ಇರದಿದ್ರ ಅಷ್ಟೇ ಹೋತು ಮಾಲಾಕಾಕುಗ ಅಂಜಿ ರವಿವಾರ ಇದ್ರೂ ಲಗೂಲಗೂ ಸ್ನಾನ – ಹೆರಳು,ಎಲ್ಲಾ ಮುಗಿಸಿಕೊಂಡು ಲಕಾಲಕಾ ತಯಾರಾಗಿ ಬಿಡತಿದ್ವಿ ಅನ್ರಿ.

ಈಗ ಮನ್ಯಾಗ 65, 75 ಇಂಚಿನ ಟಿ.ವಿ., ಹೋಮ್ ಥೇಟರ್ ಅಂತ ಸುಟ್ಟುಸುಡುಗಾಡು ನೂರಾ ಎಂಟು ಇದ್ರೂ ಆಗಿನ ಮಜಾ ಇಲ್ಲ ಅನ್ನೂದು ನನ್ನೊಬ್ಬಳ ಅನಿಸಿಕೆನೋ ಅಥವಾ ನಿಮ್ಮದೂ ಹೌದೋ ನನಗೆ ‘ ಗೊತ್ತಿಲ್ಲ.

ಹೀಂಗ ಈ ಟಿ.ವಿ. ಬಂದಮ್ಯಾಲೆ ಜಾಹೀರಾತುಗಳ ಒಂದು ಸುಂದರ ಪ್ರಪಂಚ ನಮ್ಮ ಕಣ್ಣೆದುರು ತೆರೆದುಕೊಂಡುಬಿಟ್ಟಿತು. 5-10 ಪೈಸೆಯ ಪೆಪ್ಪರ್ ಮಿಂಟೋ, ಕಿಸ್ ಮಿ ಚಾಕಲೇಟುಗಳಿಗಷ್ಟೇ ಪರಿಚಿತರಾಗಿದ್ದ ನಮಗೆ ‘ ಕಿತನಾ ಮಜಾ ಆಯೇರೆ ದುನಿಯಾ ಡೇರಿ ಮಿಲ್ಕ್ ಕಿ ಬನ್ ಜಾಯೇರೆ’ ಅಂತ ಚಾಕಲೇಟಿನಂಥ ಹೊಸ ಜಗತ್ತನ್ನು ತೋರಿಸಿದ್ದೇ ಈ ಜಾಹೀರಾತುಗಳು. ‘ಕುಛ್ ಬಾತ್ ಹೈಂ ಹಮ್ ಸಭೀಮೆಂ..ಖಾಸ್ ಹೈಂ..ಕುಛ್ ಸ್ವಾದ್ ಹೈಂ..ಕ್ಯಾ ಸ್ವಾದ್ ಹೈಂ ಜಿಂದಗಿ ಮೆಂ’ ಅಂತ ಶುರುವಾಗೋ ಡೇರಿ ಮಿಲ್ಕ್ ನ ಜಾಹೀರಾತು ನಮ್ಮ ಬದುಕಿನಾಗೂ ಸ್ವಾದ ತುಂಬಿ ಖಾಸ್ ಆದ್ವು ಇದರ ಎಲ್ಲಾ ಜಾಹೀರಾತುಗಳೂ ಒಂದೊಂದೂ ಸುಂದರ..ಒಂದೊಂದೂ ಹೃದಯಸ್ಪರ್ಶಿ. ಅವುಗಳನ್ನು ತಯಾರಿಸಿದವರ ಸೃಜನಶೀಲತೆಗೆ ನನ್ನ ಶರಣು.

‘ ಆಡು ಮುಟ್ಟದ ಸೊಪ್ಪಿಲ್ಲ’ ಅನ್ನೂಹಂಗ ಈ ಜಾಹೀರಾತುಗಳು ಕೈಯಾಡಿಸದ ಕ್ಷೇತ್ರಗಳೇ ಇಲ್ ಅನ್ನಬಹುದು. ಆಗಷ್ಟೇ ಹುಟ್ಟಿದ ಮಗುವಿನ ಪಿಂಕೂ ಗ್ರೈಪ್ ವಾಟರ್ ನಿಂದ ಹಿಡಿದು ನಿಮ್ಮ ಮಕ್ಕಳ ಎತ್ತರ, ತೂಕಗಳಿಗಾಗಿ ಕೋಂಪ್ಲಾನ್ – ಹಾರ್ಲಿಕ್ಸ್ ಗಳವರೆಗೆ, ಸ್ವಾದ್ ಭರೆ ಶಕ್ತಿಭರೆ ಪಾರ್ಲೆ ಜಿ ಯ ಜೊತೆಗೆ ನಾವು ಯಾವ ಚಹಾ ಕುಡಿಯಬೇಕು, ಯಾವ ಹಪ್ಪಳ ತಿನ್ನಬೇಕು, ನಲ್ಲನ ಮನ ಗೆಲ್ಲಲು ಅಡುಗೆಗೆ ಯಾವ ಮಸಾಲೆ ಉಪಯೋಗಿಸಬೇಕು, ಬಿರಿಯಾನಿ ರುಚಿಯಾಗಲು ಯಾವ ಅಕ್ಕಿ ಹಾಕಬೇಕು ? ಬೆನ್ನು – ಸೊಂಟ- ಹಲ್ಲು ನೋವುಗಳಿಗೆ ಏನು ಮಾಡಬೇಕು? ಯಾವ ಸೋಪ್, ಕ್ರೀಂ, ಪೌಡರ್ ನಿಂದ ನಾವು ಚಿರ ಯೌವನಿಗರಾಗಬಹುದು? ಯಾವ ಶಾಂಪೂ, ಹೇರ್ ಆಯಿಲ್ ಗಳಿಂದ ನಾವು ನಾಗವೇಣಿಯರಾಗಬಹುದು? ಯಾವ ಶೇವಿಂಗ್ ಕ್ರೀಂ, ಡಿಯೊಡ್ರಂಟ್ ಗಳನ್ನು ಬಳಸಿದ್ರ ಹುಡುಗಿಯರು ಮೈಮೇಲೆ ಬಂದು ಬೀಳಬಹುದು? ಏನು ಮಾಡಿದರೆ ಮನೆಯ ಪೀಠೋಪಕರಣಗಳನ್ನು ಆಜೀವಪರ್ಯಂತ ಮುರಿಯದಂತೆ ಇಟ್ಟುಕೊಳ್ಳಬಹುದು? ಯಾವ ಗಾಡಿ, ಬೈಕು ತಗೊಂಡ್ರ ಎಷ್ಟೆಷ್ಟು ಮೈಲೇಜು, ಏನೇನು ಲಾಭ? ಯಾವ ಚಪ್ಪಲಿ, ಶೂಸ್ ಬಳಸಬೇಕು? ಯಾವ ಒಳ ಉಡುಪುಗಳನ್ನು ಧರಿಸಬೇಕು? ಯಾವ ಪೆನ್ನು- ಪೆನ್ಸಿಲ್ – ನೋಟ್ ಬುಕ್ ಗಳನ್ನು ಉಪಯೋಗಿಸಿದ್ರ ಛಂದನೆಯ – ದುಂಡನೆಯ ಅಕ್ಷರ ಬರೆದು ವಿದ್ಯಾವಂತರಾಗಬಹುದು? ಕೊಳೆಯಾದ ಬಟ್ಟೆಗಳನ್ನು ಹೆಂಗ ಕೊಕ್ಕರೆಯಂತೆ ಬಿಳಿ ಶುಭ್ರ ಮಾಡಬಹುದು .ಇತ್ಯಾದಿ ಅಮೂಲ್ಯ – ಅತ್ಯಮೂಲ್ಯ ವಿಚಾರಗಳನ್ನೆಲ್ಲ ನಮ್ಮ ತಿಳಿವಿಗೆ ತುರುಕಿದ್ದೇ ಈ ಜಾಹೀರಾತುಗಳಂದ್ಲ ತಪ್ಪಿಲ್ಲ.
ಇನ್ನು ಕೆಲವೊಂದು ಜಾಹೀರಾತುಗಳಂತೂ ನಮ್ಮ ನೆಚ್ಚಿನ ನಟ- ನಟಿಯರ ಸಲುವಾಗಿ ಫೇವರಿಟ್. ‘ಲಿಮ್ಕಾ..ಲಿಮ್ಕಾ’ ಎಂದು ಹಾಡುವ , ಲಖಾನಿ ಹವಾಯಿ ಚಪ್ಪಲ್ ಹಾಕಿಕೊಂಡು ಕುಣಿಯುವ ಸಲ್ಮಾನ್ ಖಾನ್ ಇರಲಿ, ‘ ಡಾಬರ್ ಆಮ್ಲಾ ಕೇಶ್ ತೈಲ್’ ಅಂತ ಕಪ್ಪನೆಯ ಕೇಶರಾಶಿಯನ್ನು ಹಾರಿಸುತ್ತ ತಿರುಗುವ ಜಯಪ್ರದಾ ಇರಲಿ, ಬಾರಾತಿಯೋಂ ಕಾ ಸ್ವಾಗತವನ್ನು ಪಾನ್ ಪರಾಗ್ ಪಾನ್ ಮಸಾಲಾದಿಂದ ಮಾಡುವ ಶಮ್ಮಿಕಪೂರ್, ಅಶೋಕ ಕುಮಾರ್ ಇರಲಿ, ‘ what an Idea sir ji’ ಎನ್ನುವ ಅಭಿಷೇಕ್ ಬಚ್ಚನ್ ಇರಲಿ, Dr.fixit ನ ಅಮಿತಾಭ್ ಬಚ್ಚನ್ ಇರಲಿ, ತೀರ ಇತ್ತೀಚಿನ cleethorpes max fresh ನ ರಣವೀರ ಸಿಂಗ್ ಇರಲಿ, ಮಧುಬಾಲಾನಿಂದ ಹಿಡಿದು ಮಾಧುರಿ ದೀಕ್ಷಿತವರೆಗಿನ Lux ಸೋಪಿನ ರೂಪದರ್ಶಿಯರಿರಲಿ ಎಲ್ಲರೂ..ಎಲ್ಲವೂ ನಮ್ಮ ಫೇವರಿಟ್. ಯಾಕಂದ್ರ ನಮಗ ಬಾಲಿವುಡ್ ತಾರಾಮಣಿಗಳಂದ್ರ ಅದೇನೋ ಹುಚ್ಚು ಸೆಳೆತ – ಪ್ರೀತಿ – ಅಪನಾಪನ್. ಇನ್ನ ಅವರು ಮಾಡಿದ ads ಅಂದ್ರ ಮುಗದೇ ಹೋತ. ಅಲ್ಲೇನ್ರಿ?

ಅಲ್ರೀ ಎಲ್ಲಾಬಿಟ್ಟು ಯಕ:ಶ್ಚಿತ್ ಉಪ್ಪಿನ ಬಗ್ಗೆನೂ ಎಷ್ಟೆಲ್ಲ ಜಾಹೀರಾತುಗಳ್ರಿ..ಅದ್ಯಾಕ ಯಕ:ಶ್ಚಿತ್ ಬಿಡ್ರಿ ಇದರ ಮಹತ್ವ ಏನು ಕಡಿಮೆದ? ಇದರ ಸಲುವಾಗಿ ದಂಡಿ ಸತ್ಯಾಗ್ರಹನೇ ನಡದು ಇತಿಹಾಸದಾಗೂ ಅದಕ್ಕೊಂದು ಸ್ಥಾನ ಸಿಕ್ಕೇಬಿಟ್ಟದ. ಟಾಟಾ ನಮಕ್ ದೇಶ್ ಕಾ ನಮಕ್- ಅದರಾಗ ಶುದ್ಧತೆ, ಅಯೋಡಿನ್ ಗಳಂತೂ ಅವನೇ ಅವ ಜೋಡಿಗೆ ಚುಟಕಿ ಭರ್ ಇಮಾನದಾರಿನೂ ಅದರಾಗಿರತದ ಅನ್ನೂದು ad ನೋಡೇ ಗೊತ್ತಾಗಿದ್ದು. ‘ ಡರ್ ಕೆ ಆಗೇ ಜೀತ್ ಹೈ’ ಎಂಬ ಅಮೂಲ್ಯ ವಿಚಾರ ತಿಳಿದದ್ದೂ ಈ ಜಾಹೀರಾತಿನಿಂದಲೇ.

ಇನ್ನ ನಾವು ನಮ್ಮ ರೆಡ್ ಲೇಬಲ್ ಟೀ ಯಿಂದ Taj ಗೆ ಪಕ್ಷಾಂತರ ಮಾಡಿದ್ದಕ್ಕೂ ಈ ಜಾಹೀರಾತೇ ಕಾರಣ. ಉದ್ದನೆಯ ಗುಂಗುರು ಕೂದಲು ಹಾರಿಸುತ್ತ, ಬೆರಳುಗಳಿಂದ ತಬಲಾದ ಮೇಲೆ ನಾದದ ನರ್ತನ ಮಾಡುತ್ತ ಉಸ್ತಾದ್ ಝಾಕೀರ್ ಹುಸೇನ್ ‘ ವಾಹ್ ತಾಜ್ ಬೋಲಿಯೆ’ ಅಂತ ಸೇಳಿದ ಮ್ಯಾಲೆ ನಮಗೆ ಬ್ಯಾರೆ ಹಾದೀನೇ ಇದ್ದಿದ್ದಿಲ್ಲ ಬಿಡ್ರಿ.

‘ ದೋ ಮಿನಿಟ್’ ನ ಮ್ಯಾಗಿ ನನ್ನ ಮಕ್ಕಳ ಪ್ರೀತಿಯ ಭೋಜನ. ನನಗೂ ಅವಸರದ ಆಪ್ತಬಂಧು. ಪುಳಿಯೋಗರೆ, ಪಾವ್ ಭಾಜಿ ಮಸಾಲೆಗಳು , ಖರ್ರಂ ಖುರ್ರಂನ ಲಿಜ್ಜತ್ ಪಾಪಡ್ ಗಳು ನಮ್ಮ ಅಡುಗೆ ಮನೆಗೆ ಆಪ್ತವಾದದ್ದು ಜಾಹೀರಾತುಗಳ ಕಮಾಯಿನೇ.ಹಾಲು ಬೇಡವೆಂದ ಮಕ್ಕಳಿಗೆ compla, horlicks ಗಳ ಆಮಿಷವೊಡ್ಡಿ ಕುಡಿಸಿ ‘ಮೈ ಬಢ ರಹಾ ಹೂಂ ಮಮ್ಮಿ’ ಅಂತ ಅವರ ಪರವಾಗೆ ನಾನೇ ಅಂದುಕೊಂಡು ಖುಷಿಪಟ್ಟದ್ದು, ಬ್ಯಾಸಗ್ಯಾಗ ರಸನಾ, ಆಟ ಆಡಿ ಬಂದಕೂಡಲೇ glucon-D, ಥಂಡ್ಯಾಗ ಚ್ಯವನ್ ಪ್ರಾಶ್ ಹೀಂಗ ಮಕ್ಕಳ ಆರೋಗ್ಯದ ದೇಖರೇಕಿ ಬಗ್ಗೆ ಅತ್ಯಪರೂಪದ ಮಾರ್ಗದರ್ಶಿಗಳಾಗಿದ್ದವು.
ಈ ಮೈ ತೊಳೆವ ಸಾಬಾಣಿನ (soap) ಜಾಹೀರಾತುಗಳಂತೂ ನನ್ನ ಚಿತ್ತದಾಗ ಪಟ್ಟಾಗಿ ಕೂತಬಿಟ್ಟಾವ ಲಾ..ಲಲಾ..ಲ..ಲಾ ಅಂತ ಹಾಡಕೋತ ಸ್ವಚ್ಛ ಶುಭ್ರವಾದ ನದಿ- ಜಲಪಾತದಾಗ Liril soap ಹಿಡಿದು ಸ್ನಾನ ಮಾಡೋ ಆ ರೂಪದರ್ಶಿನ್ಶ ನೋಡಿದ್ರ ಬಚ್ಚಲಿನಾಗೇ ಹತ್ತು ಸಲ ನಮ್ಮ ಕೈಯಿಂದ ಜಾರಿ ಜಾರಿ ಬೀಳುತ್ತಿದ್ದ ಸೋಪ್ ನೆನೆಸಿಕೊಂಡು , ಇಂಥ,ಹರಿವ ನೀರಿನ ರಭಸದಾಗೊ,ಅದ್ಹೆಂಗಿನ್ನೂ ಜಾರದs ಅಕಿನ ಕೈಯಾಗೇ ಉಳದದ ಅನ್ಶೂದೇ ಸೋಜಿಗ ಅನಸತಿತ್ಯು ನನಗೆ. ಇನ್ನ ಹೊಸಬಟ್ಟಿ, ಬಿಳಿಬಟ್ಟಿ ಕೆಸರು ಮಾಡಿಕೊಂಡು ಬಂದ್ರ ಮಕ್ಕಳಿಗೆ ಬಯ್ಯದ s ‘ ದಾಗ್ ಅಚ್ಛಾ ಹೈ...surf excell hai na? ಅನ್ನುವ ನಗುಮೊಗದ ಅಮ್ಮಂದಿರೂ ನನಗ ಬ್ಯಾರೆ ಲೋಕದವರ ಹಂಗೇ ಕಾಣಸತಾರ. ಯಾಕಂದ್ರ ಸಣ್ಣವರಿದ್ದಾಗ ಹೊಸ ಬಟ್ಟೆ, ಬಿಳಿ ಬಟ್ಟೆ ಕಲೆ ಮಾಡಿಕೊಂಡ್ರ ಮಸ್ತ್ ಮಂಗಳಾರತಿ ಮಾಡಿಸಕೋತಿದ್ವಿ ಮನ್ಯಾಗ. ಈಗ ನಾನೂ ಮಕ್ಕಳಿಗೆ ಮಂಗಳಾರತಿ ಮಾಡದಿದ್ರೂ ‘ ಸ್ವಲ್ಪ ನೋಡಕೊಂಡು ಸಾವಕಾಶ ಮಾಡಲಿಕ್ಕೆ ಬರಂಗಿಲ್ಲ s?’ ಅಂತ ಅನ್ನಬಹುದೇ ಹೊರತು ‘ ದಾಗ್ ಅಚ್ಛಾ ಹೈ’ ಅನ್ನುವ ಸಹನಶೀಲತಾ ನನ್ನ ಹತ್ರ ಇಲ್ಲ.

ಒಟ್ಟಿನಾಗ ನನಗ ಈ ಜಾಹೀರಾತುಗಳ ತಯಾರಿಕೆ, ಹಣಹೂಡಿಕೆ, ಗಳಿಕೆ, ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಅಷ್ಟೆಲ್ಲ ಜ್ಞಾನ ಇರದಿದ್ರೂ ಅವು ಕೊಡುವ ಮುದದ ಬಗ್ಗೆ ಬಹಳ ಖುಷಿ ಅನಸತದ. ಇವುಗಳ ಸತ್ಯಾಸತ್ಯತೆಗಳೇನೇ ಇರಲಿ ಸೆಕೆಂಡುಗಳ, ನಿಮಿಷಗಳ ಅತ್ಯಲ್ಪ ಅವಧಿಯಲ್ಲೇ ಅವುಗಳನ್ನು ಹೃದ್ಯವಾಗಿ ಪ್ರಸ್ತುತ ಪಡಿಸುವ ರೀತಿ ಇದೆಯಲ್ಲ ಅದು ನನ್ನನ್ನು ತಟ್ಟುತ್ತದೆ. ಕಿವಿ ಗುಳು ಗಳು ಅನ್ನುವಾಗ ಇಯರ್ ಬಡ್ ಹಾಕಿಕೊಂಡು ಗಲಗಲ ಮಾಡಿ ಪ್ರಪಂಚವನ್ನೇ ಒಂದು ಕ್ಷಣ ಮರೆತಂತೆ, ಕೈಗೆ ತಾಗದ ಬೆನ್ನಿಗೆ ತುರಿಕೆಯಿದಾಗ ಹಣಿಗೆಯೊಂದರಿಂದ ಅದನ್ನು ಕೆರೆದುಕೊಂಡಾಗ ಸಿಗುವ ಸುಖದಂತೆ, ಗಂಟಲಲ್ಲೇ ಅಡಗಿ ಕಾಡಿಸಿದ ಶೀನೊಂದು ‘ಆಕ್ಶೀ’ ಎಂದು ಪಟ್ಟನೇ ಹೊರಬಂದಾಗ ಸಿಗುವ ಸಮಾಧಾನದಂತೆ, ಒತ್ತಿ ಬರುತ್ತಿರುವ ತೂಕಡಿಕೆಗೊಂದು ಹೆಗಲು ದೊರೆತಾಗಿನ ನೆಮ್ಮದಿಯಂತೆ ಈ ಜಾಹೀರಾತುಗಳೂ ಕೂಡ ನಂಗ ಏನೋ ಒಂಥರಾ ಅನಿರ್ವಚನೀಯ ಅಂತಾರಲ್ಲ ಅಂಥ ಖುಷಿ, ಭರವಸೆ, ನೆಮ್ಮದಿ, ಉತ್ಸಾಹಗಳನ್ನು ಕೊಡತಾವ.

ಇದನ್ನೋದಿ ಒಂದೆರಡು ನಿಮ್ಮ ಫೇವರಿಟ್ ಜಾಹೀರಾತು ನಿಮಗ ನೆನಪಾದ್ರ, ಮನಸ್ಸು ಜರ್ ಅಂತ ಹಿಂಬರಿಕಿ ಜಾರಿಹೋದ್ರ ಅದನ್ನ ನಂಗೂ ಹೇಳೂದ ಮರೀಬ್ಯಾಡ್ರಿ.

~ ಗೌರಿಪ್ರಸನ್ನ