ಕನ್ನಡ ಬಳಗ ದೀಪಾವಳಿ/ರಾಜ್ಯೋತ್ಸವ ನವೆಂಬರ್ ೨೦೨೫: ಅನಿವಾಸಿಯಿಂದ ಭೈರಪ್ಪನವರಿಗೆ ಶ್ರದ್ಧಾಂಜಲಿ

ಕನ್ನಡ ಬಳಗ, ಮಿಲ್ಟನ್ ಕಿನ್ಸ್ ನ ಅನಿಕೇತನ ಸಂಸ್ಥೆಯ ಜೊತೆ ಕೈ ಗೂಡಿಸಿ, ನವೆಂಬರ್ ೮ ರಂದು ದೀಪಾವಳಿ ಹಾಗು ರಾಜ್ಯೋತ್ಸವಗಳನ್ನು ಆಚರಿಸಿತು. ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ‘ಅನಿವಾಸಿ’ ಯ ಸಮಾನಾಂತರ ಸಭೆ ಈಗ ಸಂಪ್ರದಾಯವೇ ಆಗಿದೆ. ಹೆಚ್ಚಾಗಿ, ಮುಖ್ಯ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿತನುಡಿಗಳ ನಂತರದ ಸಮಯ ಇದಕ್ಕಾಗೇ ಮೀಸಲು. ಇತ್ತೀಚಿಗೆ ಕಾಣದ ಲೋಕಕ್ಕೆ ತೆರಳಿದ ಭೈರಪ್ಪನವರ ಅಗಲಿಕೆ ಕನ್ನಡಿಗರಿಗೆ ಅತೀವ ದುಃಖದಾಯಕ ಕಾರಣವಾಗಿದೆ. ಕನ್ನಡದ ಮಹಾನ್ ಕಾದಂಬರಿಕಾರರಲ್ಲಿ ಒಬ್ಬರಾದ ಭೈರಪ್ಪನವರಿಗೆ ಶ್ರದ್ಧಾಂಜಲಿ ಅರ್ಪಿಸುವುದೇ ಈ ಬಾರಿಯ ಅನಿವಾಸಿ ಕಾರ್ಯಕ್ರಮಕ್ಕೆ ತಕ್ಕುದಾದ ವಿಷಯವೆಂದು ಮೊದಲೇ ತೀರ್ಮಾನವಾಗಿತ್ತು. ಸದಸ್ಯರು ತಮಗೆ ಇಷ್ಟವಾದ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು ಮೊದಲ ಭಾಗ. ಮುಖ್ಯ ಅತಿಥಿಯಾಗಿ ಬರುವ ಶ್ರೀ. ಮತ್ತೂರು ನಂದಕುಮಾರರಿಂದ ಅವರ- ಭೈರಪ್ಪನವರ ಒಡನಾಟದ ವಿಶಿಷ್ಟ ಅನುಭವಗಳ ಅವಲೋಕನೆ ಎರಡನೇ ಭಾಗದಲ್ಲಿ ಎಂದು ನಿಶ್ಚಯಿಸಿದ್ದೆವು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ಆನಂದ್ ಕೇಶವಮೂರ್ತಿ ಹಾಗೂ ಅನ್ನಪೂರ್ಣ ಆನಂದ್, ಮುಖ್ಯ ಅತಿಥಿಯವರ ಅನುಮೋದನೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಿದರು. ಈ ಸಂಚಿಕೆಯಲ್ಲಿ ಕಾದಂಬರಿಗಳ ವಿಶ್ಲೇಷಣೆ ಹಾಗೂ ಮತ್ತೂರರ ಭಾಷಣವದ ವಿವರಗಳಿವೆ. ಜೊತೆಯಲ್ಲೇ ಆತಿಥೇಯ ನಗರ ಮಿಲ್ಟನ್ ಕೀನ್ಸ್ ನವರೇ ಆದ ನಾಗರಾಜ ಬಸವರಾಜು ಅವರು ಬರೆದ ಇಡೀ ದಿನದ ಕಾರ್ಯಕ್ರಮಗಳ ವರದಿಯೂ ಇದೆ. ಕೊನೆಯಲ್ಲಿ ಡಾ . ಶ್ರೀವತ್ಸ ದೇಸಾಯಿ ಅವರು ಚಿತ್ರೀಕರಿಸಿದ ಕಾರ್ಯಕ್ರಮದ ಮುಖ್ಯಾಂಶಗಳ ಚಿಕ್ಕ ವಿಡಿಯೋವನ್ನು ನೋಡಲು ಮರೆಯದಿರಿ. -ರಾಮಶರಣ ಲಕ್ಷ್ಮೀನಾರಾಯಣ

ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಪರಿಚಯವನ್ನು ಆನಂದ್ ಮಾಡಿಕೊಟ್ಟರು. ಮುಖ್ಯ ಅತಿಥಿಗಳ ಪರಿಚಯವನ್ನು ಶ್ರೀವತ್ಸ ದೇಸಾಯಿಯವರು ನೆರವೇರಿಸಿದರು. ಕೊನೆಯಲ್ಲಿ ಜಿ.ಎಸ್.ಶಿವಪ್ರಸಾದ್ ಸಾಂಗವಾಗಿ ಆಭಾರ ಮನ್ನಿಸಿದರು. 

ಪರ್ವ: ಸಾರ್ವಕಾಲಿಕ ನೆಚ್ಚಿನ ಕಾದಂಬರಿ – ಅನ್ನಪೂರ್ಣ ಆನಂದ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಹೈಸ್ಕೂಲಿನಿಂದ ಕಾದಂಬರಿ ಓದುವ ಗೀಳು ಹತ್ತಿತ್ತು. ನನಗೆ ಮೊದಲು ಸಿಕ್ಕಿದ ಭೈರಪ್ಪನವರ ಕಾದಂಬರಿ ‘ವಂಶವೃಕ್ಷ’. ಅವರ ಬರಹದ ಶೈಲಿ, ಪಾತ್ರ ಪೋಷಣೆ, ಕಥೆಯ ಹಂದರ ನನ್ನ ಮನತಟ್ಟಿದವು. ‘ಧರ್ಮಶ್ರೀ’ ಹಾಗು ‘ದೂರಸರಿದರು’ ಗಳ ನಂತರ ಕೈಗೆಟುಕಿದ್ದು ‘ಪರ್ವ’. ಭಾರತೀಯ ಮಕ್ಕಳೆಲ್ಲ ಮಹಾಭಾರತದ ಕಥೆಗಳನ್ನು ಓದಿ, ಕೇಳಿಯೇ ಬೆಳೆಯುತ್ತಾರೆ. ಮಂತ್ರ ಪ್ರಭಾವದಿಂದ ಮಕ್ಕಳಾಗುವುದು, ಗಾಂಧಾರಿ ಹೊಟ್ಟೆ ಕಿವುಚಿಕೊಂಡು ನೂರು ಮಕ್ಕಳನ್ನು ಪಡೆಯುವುದು, ಕೃಷ್ಣನ ಚಮತ್ಕಾರಗಳು, ಇವೆಲ್ಲ ಕಲ್ಪನೆಗೆ ಮೀರಿದ ವಿಚಿತ್ರ ಭಾವನೆಗಳನ್ನು ಮೂಡಿಸುತ್ತಿದ್ದವು. ‘ಪರ್ವ’ ಮಹಾಭಾರತದ ಪಾತ್ರಗಳನ್ನೆಲ್ಲ ಮಾನವ ಸದೃಶಗೊಳಿಸುತ್ತವೆ. ಇಲ್ಲಿ ಚಮತ್ಕಾರಗಳಿಲ್ಲ. ಕೃಷ್ಣ, ಚಾಣಾಕ್ಷನೂ, ಮುತ್ಸದ್ದಿಯೂ ಆದ ವ್ಯಕ್ತಿ. ಕಥೆಯೂ  ಅಂತಃ ಸಂವಾದ, ಕೆದಕಿದ ನೆನಪು, ಪ್ರತಿಕ್ರಿಯೆಯ ರೂಪದಲ್ಲಿ ಸಾಗುವುದರಿಂದ, ಪುರಾಣವಾಗದೇ ಒಂದು ಐತಿಹಾಸಿಕ ಕಥೆಯಾಗಿ ಅನಾವರಣಗೊಳ್ಳುತ್ತದೆ. ಕುರುಕ್ಷೇತ್ರ ಯುದ್ಧ ವೈಭವೀಕರಣಗೊಳ್ಳದೇ ಕೊಳೆತು ನಾರುವ ಹೆಣದ ರಾಶಿ, ಯುದ್ಧ ತರುವ ಗೋಳು, ಹೊಲಸು ಇವನ್ನೆಲ್ಲ ತೋರುತ್ತ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ. ಸ್ತ್ರೀಪಾತ್ರಗಳಿಗೆ ಇಲ್ಲಿ ಪುರುಷ ಪಾತ್ರಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಇದೆ. ದ್ರೌಪದಿಯ ಪ್ರತೀಕಾರ, ಕುಂತಿಯ ಆಂತರಿಕ ತಲ್ಲಣ, ಗಾಂಧಾರಿಯ ಮಾತೃತ್ವದ ಬಂಧನ ಮನತಟ್ಟುತ್ತವೆ. ‘ಪರ್ವ’ ವನ್ನು ನಾನು ಹಲವು ಬರಿ ಓದಿದ್ದೇನೆ; ಪ್ರತಿಸಲವೂ ಹೊಸತನ್ನು ಕಂಡಿದ್ದೇನೆ. ಭೈರಪ್ಪನವರ ಕಾದಂಬರಿಗಳಲ್ಲೆಲ್ಲ ಇದು ನನ್ನ ಸಾರ್ವಕಾಲಿಕ ನೆಚ್ಚಿನ ಕೃತಿ.   

ಧರ್ಮಶ್ರೀ: ೬೦ರ ಭಾರತದ ಚಿತ್ರಣ – ಆನಂದ್ ಕೇಶವಮೂರ್ತಿ 

ನಾನು ‘ಧರ್ಮಶ್ರೀ’ಯನ್ನು ಮೊದಲ ಬಾರಿಗೆ ಓದಿದ್ದು ೩೫-೪೦ ವರ್ಷಗಳ ಹಿಂದೆ. ಕಳೆದ ವಾರ ಮತ್ತೊಮ್ಮೆ ಓದಿದಾಗ ಕಂಡದ್ದು ಹಲವು ಹೊಸ ವಿಷಯಗಳು. ೧೯೬೧ ರಲ್ಲಿ ಈ ಕೃತಿ ಬೆಳಕು ಕಂಡಿತು. ಹಾಗಾಗಿ ಇದನ್ನು ಭೈರಪ್ಪನವರು ೧೯೫೯ ಅಥವಾ ೧೯೬೦ರಲ್ಲಿ ಬರೆದಿರಬಹುದು. ಆಗ ಅವರಿಗೆ ೩೦ರ ಹರೆಯ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಎಷ್ಟೊಂದು ಓದಿದ್ದರು, ಪ್ರೌಢಿಮೆ ಹೊಂದಿದ್ದರು ಎಂಬ ವಿಷಯ ಈ ಕಾದಂಬರಿಯನ್ನು ಓದಿದಾಗ ಅನಿಸುತ್ತದೆ. ೬೦ರ ದಶಕದ ಸಾಮಾಜಿಕ ಬದುಕು, ಕಿತ್ತು ತಿನ್ನುವ ಬಡತನ, ಹಿಂದೂ ಧರ್ಮದಲ್ಲಿ ತಂಡವವಾಡುತ್ತಿದ್ದ ಜಾತೀಯತೆ ಇವನ್ನೆಲ್ಲ ಧರ್ಮಶ್ರೀ ಪ್ರತಿಫಲಿಸುತ್ತದೆ. ಕಾದಂಬರಿಯ ಮೊದಲ ಪುಟಗಳು ಭೈರಪ್ಪನವರ ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಬರುವವರೆಗಿನ ಆತ್ಮ ಕಥೆಯೇ ಎಂದು ತಮ್ಮ ‘ಭಿತ್ತಿ’ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ಕಥಾನಾಯಕ ಕ್ರಿಸ್ತ ಧರ್ಮಕ್ಕೆ ಮತಾಂತರ ಹೊಂದಿದ ಮೇಲೆ ಅವನಿಗಾಗುವ ತಳಮಳ, ಅದರ ಪರಿಣಾಮಗಳು ಇದರಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿವೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಧ್ಯೇಯೋದ್ದೇಶ, ಸಂಘವನ್ನು ಹತ್ತಿಕ್ಕಲು ಅಂದಿನ ಸರಕಾರ ಮಾಡಿದ ಪ್ರಯತ್ನಗಳು ಇದರಲ್ಲಿವೆ. ಕ್ರಿಶ್ಚಿಯನ್ ಮಿಷನರಿಗಳು ಶೋಷಿತರನ್ನು ಗುರಿಯಾಗಿಸಿಕೊಂಡು, ಆಮಿಷಗಳನ್ನೊಡ್ಡಿ ಮತಾಂತರಗೊಳಿಸುತ್ತಿದ್ದ ಬಗೆ; ಸಮಾನ ಅಂತಸ್ತಿನ ಭರವಸೆ ನೀಡಿದರೂ ಶೋಷಿತರನ್ನು ಶೋಷಿಸುತ್ತಲೇ ಇದ್ದ ಸಂಗತಿಗಳನ್ನು ವಿವರಿಸುತ್ತಾರೆ. ದಿಸ್ತೀನ್ ಗೌಡನ ಪಾತ್ರದ ಮೂಲಕ ಧಾರ್ಮಿಕ ವ್ಯವಸ್ಥೆಯ ಕೊರತೆಗಳನ್ನು ಎತ್ತಿ ತೋರಿಸುತ್ತಾರೆ. ಈ ಕಾದಂಬರಿ ೬೦ರ ದಶಕದ ಸಮಾಜ ವ್ಯವಸ್ಥೆಯ ಅಧ್ಯಯನ, ಧಾರ್ಮಿಕ ಶೋಷಣೆಗೆ ಹಿಡಿಯುವ ಕೈಗನ್ನಡಿ ಎಂದು ಹೇಳಬಹುದು. 

ಮತದಾನ ಹಾಗೂ ಇತರ ಕಾದಂಬರಿಗಳು: ಹಾಜರಿ ಕಡಿಮೆಯಾಗಲು ಕಾರಣೀಭೂತ – ವಿನಯ್ ರಾಯಚೂರ್ 

ಭೈರಪ್ಪನವರ ಕಾದಂಬರಿಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೆಂದರೆ, ನಾನು ಕ್ಲಾಸಿಗೆ ಹೋಗದೇ ಪಟ್ಟಾಗಿ ಕುಳಿತು ಮುಗಿಸುತ್ತಿದ್ದೆ. ನನ್ನ ಹಾಜರಿ ಕಡಿಮೆಯಾಗಲು ಇವೇ ಮೂಲ ಕಾರಣ. ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ‘ಮತದಾನ’ ಇಷ್ಟವಾಗುವುದಕ್ಕೆ ಮೂರೂ ಕಾರಣಗಳಿವೆ: ಚಿಕ್ಕದಾದರೂ ಚೊಕ್ಕದು ಈ ಕೃತಿ; ಆದರ್ಶಕ್ಕೆ ಜೋತು ಬಿದ್ದರೆ ಬದುಕು ಸಾಗದು; ರಾಜಕೀಯ ಎಂದಿಗೂ ಹೊಲಸೇ ಎನ್ನುವುದನ್ನು ಸಾಬೀತು ಮಾಡುತ್ತದೆ. ‘ಗೃಹಭಂಗ’ ದಲ್ಲಿ ಸಂಘರ್ಷದ ಬದುಕಿನ ಚಿತ್ರಣದ ಜೊತೆಗೆ, ಅಂತಹ ಅನುಭವಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಧ್ವನಿಯಿದೆ. ಭೈರಪ್ಪನವರ ಕಾದಂಬರಿಗಳಲ್ಲಿ ತತ್ವಶಾಸ್ತ್ರದ ಹೊಳವು ಸರ್ವೇ ಸಾಮಾನ್ಯ. ‘ಸಾಕ್ಷಿ’ ಹಾಗೂ ‘ನಾಯಿ ನೆರಳು’ ಇವೆರಡರಲ್ಲಿ ಆಧ್ಯಾತ್ಮಿಕತೆ, ತತ್ವಶಾಸ್ತ್ರಗಳ ಪ್ರಭಾವವನ್ನು ದಟ್ಟವಾಗಿ ಕಾಣಬಹುದು. ಪುನರ್ಜನ್ಮದ ಜಿಜ್ಞಾಸೆ ಕೂಡ ನಾಯಿನೆರಳಿನಲ್ಲಿ ತೀವ್ರವಾಗಿದೆ. ಅವರ ಯಾವುದೇ ಕಾದಂಬರಿಗಳಲ್ಲಿ ಅಂತಿಮ ನಿಷ್ಕರ್ಷ ಕಾಣ ಬರುವುದಿಲ್ಲ. ಓದುಗರ ಊಹೆಗೆ, ಚರ್ಚೆಗೆ ಅವು ತೆರೆದುಕೊಳ್ಳುತ್ತವೆ. ಅವರ ಕಾದಂಬರಿಗಳಿಂದ ಪ್ರೇರಿತನಾಗಿ, ನಾನು ತತ್ವಶಾಸ್ತ್ರ, ವೈಚಾರಿಕತೆ ಇವನ್ನೆಲ್ಲ ಇನ್ನು ಹೆಚ್ಚಾಗಿ ಅರಿಯುವ ಪ್ರಯತ್ನ ಮಾಡಿದ್ದೇನೆ. 

ಉತ್ತರಕಾಂಡ: ಭೈರಪ್ಪನವರ ಕೊನೆಯ ಕಾದಂಬರಿ – ಕೇಶವ ಕುಲಕರ್ಣಿ 

‘ಪರ್ವ’ದಲ್ಲಿ ಮಹಾಭಾರತವನ್ನು ಬರೆದ ಭೈರಪ್ಪನವರು, ‘ಉತ್ತರಕಾಂಡ’ದಲ್ಲಿ ರಾಮಾಯಣವನ್ನು ಬರೆದದ್ದು ೪೦ ವರ್ಷಗಳ ನಂತರ. ಭಾರತದ ಉದ್ದಗಲಕ್ಕೂ ಗದ್ಯ ಹಾಗೂ ಕಾವ್ಯದ ರೂಪದಲ್ಲಿ ನೂರಾರು ರಾಮಾಯಣಗಳ ಆವೃತ್ತಿಗಳನ್ನು ಕಾಣಬಹುದು. ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಆಗುವವರೆಗೂ ರಾಮ ದೈವಾಂಶ ಸಂಭೂತನಾಗಿದ್ದ. ಆಧುನಿಕ ಕಾಲದಾರಂಭದಲ್ಲಿ ಪುರುಷೋತ್ತಮನಾದ. ವಿಚಾರವಾದ, ಹೊಸ ಸಿದ್ಧಾಂತಗಳ ಪ್ರಭಾವದಲ್ಲಿ ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಲಾಗಿದೆ. ಪೌರಾಣಿಕ ನೋಟದಿಂದ ಹೊರತಾಗಿ, ಐತಿಹಾಸಿಕ ಅಥವಾ ಸಮಕಾಲೀನ ಕಥಾನಕದಂತೆ ಕಂಡವರಿದ್ದಾರೆ. ಕನ್ನಡದಲ್ಲೇ ಪೋಲಂಕಿ ರಾಮಮೂರ್ತಿಯವರು ‘ಸೀತಾಯಣ’ ಬರೆದು ಸಾಕಷ್ಟು ಚರ್ಚೆಗೊಳಗಾಗಿದ್ದರು. 

ಉತ್ತರಕಾಂಡದ ವೈಶಿಷ್ಟ್ಯತೆಯೆಂದರೆ, ಕಥೆ ಪ್ರಾರಂಭವಾಗುವುದೇ ಲವ-ಕುಶ ರ ಜನ್ಮವಾದನಂತರ. ರಾಮಾಯಣವು ಇಲ್ಲಿ ಸೀತೆಯ ಸ್ವಗತದಲ್ಲಿ rewind ಆಗುತ್ತದೆ. ‘ಪರ್ವ’ದಂತೆ ಇಲ್ಲಿನ ಪಾತ್ರಗಳೆಲ್ಲ ಮಾನವೀಕೃತಗೊಂಡಿವೆ. ಸೀತೆಯ ದೃಷ್ಟಿಕೋನದಿಂದ ಭೈರಪ್ಪ ರಾಮನನ್ನು ‘ಕಟ್ಟುತ್ತ’ ಹೋಗುತ್ತಾರೆ. ರಾಜನಾಗಿ ಗೆಲ್ಲುವ ರಾಮ, ಗಂಡನಾಗಿ ಸೋಲುತ್ತಾನೆ. ಅವರು ಈ ಕೃತಿಯಲ್ಲಿ ಸಾಕಷ್ಟು ಕಥೆಗಾರನ ಸ್ವಾತಂತ್ರ್ಯವನ್ನು ಬಳಸಿದ್ದಾರೆ. ಇದನ್ನು ಓದಿದಾಗ, ಭೈರಪ್ಪನವರು ಸಾಹಿತ್ಯ ಓದುಗರ ಕಟ್ಟುಪಾಡನ್ನು ಮೀರಿ ಒಳಗಾಗದೇ ಪಂಥ ಮೀರಿ ಬರೆದದ್ದನ್ನು ಗುರುತಿಸಬಹುದು. ಕೊನೆಯಲ್ಲಿ ವಾಲ್ಮೀಕಿ “ಈ ಕಥೆಗೆ ಸುಖಾಂತವನ್ನೊದಗಿಸಲೆಂದು ಅಯೋಧ್ಯೆಗೆ ಹೋಗಿ ಧರ್ಮಸಭೆ ಏರ್ಪಡಿಸಿದೆ. ಆದರೂ ಕಥೆಯ ದಿಕ್ಕನ್ನು ಬದಲಾಗಿಸಲಾಗಲಿಲ್ಲ” ಎಂದು ಸೋಲೊಪ್ಪಿಕೊಳ್ಳುತ್ತಾನೆ. 

ಈ ಕಾದಂಬರಿ, ಭೈರಪ್ಪನವರ ಒಳ್ಳೆಯ ಕಾದಂಬರಿ ಎಂದು ನನಗೆನ್ನಿಸುವುದಿಲ್ಲ; ಇದು ಅಷ್ಟಾಗಿ ಚರ್ಚೆಗೋ, ವಿಮರ್ಶೆಗೋ ಒಳಗೊಳ್ಳಲಿಲ್ಲ. 

ಮಂದ್ರ, ಹೆಸರೇ ಸೂಚಿಸುವಂತೆ ಸಂಗೀತದ ತಳಹದಿಯ ಮೇಲೆ ನಿಂತ ಕೃತಿ. ಮುಖ್ಯ ಪಾತ್ರದಾರಿ ಮೋಹನಲಾಲ, ಅಪ್ರತಿಮ ಪ್ರತಿಭೆಯ ಸಂಗೀತಗಾರ. ಹರಿದ್ವಾರ ಘಾಟಿಯಿಂದ ಮುಂಬಯಿಯ ಶಾಸ್ತ್ರೀಯ ಸಂಗೀತ ಲೋಕದ ಮಹಾನ್ ತಾರೆಯಾಗಿ ಬೆಳಗಿದವ. ಆತನ ಬೆಳವಣಿಗೆಯ ಮೂಲಕ ಭೈರಪ್ಪನವರು ಹಿಂದೂಸ್ತಾನಿ ಸಂಗೀತದ ಒಳ ನೋಟದ ಪರಿಚಯ ಮಾಡಿಕೊಡುತ್ತಾರೆ. ಇಲ್ಲಿ ಗುರು-ಶಿಷ್ಯ ಪರಂಪರೆಯ ಚಿತ್ರಣವಿದೆ; ಘರಾಣೆಗಳ ವಿವರವಿದೆ. ಹಲವು ರಾಗಗಳ ವಿವರ, ರಾಗಗಳ ರಸ, ಸಂಗೀತಗಾರ ಹೇಗೆ ಸ್ವರಗಳ ಹಂದರದಲ್ಲಿ ಸ್ವಯಂ ರಸಾಸ್ವಾಧನೆ ಮಾಡುತ್ತ, ಶ್ರೋತೃಗಳಿಗೂ ಉಣಬಡಿಸುತ್ತಾನೆ ಎಂದು ತೋರಿಸುತ್ತಾರೆ. ಜೊತೆಗೇ, ಕಲಾವಿದರ ನಡುವಿನ ಈರ್ಷ್ಯೆ, ಅನಾರೋಗ್ಯಕರ ಸ್ಪರ್ಧೆ ಇವನ್ನೆಲ್ಲ ಕಾಣಬಹುದು. 

ಮೋಹನಲಾಲನ ವಿಷಯ ಲಂಪಟತನ, ಅವಕಾಶವಾದಿ ಮನೋಭಾವ ಸಂಗೀತಕ್ಕಿಂತಲೂ ಮುಖ್ಯವಾದ ವಸ್ತುವಾಗಿ ಕಾಣಬಹುದು. ಆತ ಮಧು ಷಾ ಎಂಬ ಶಿಷ್ಯೆಯನ್ನು ತನ್ನ ಆಪ್ತ ಶಿಷ್ಯೆಯೆಂದು ಕರೆಯುತ್ತ, ಸಂಗೀತದ ಸಂಪೂರ್ಣ ಜ್ಞಾನವನ್ನು ಕೊಡುವ ನೆಪದಲ್ಲಿ ಶೋಷಿಸುವುದನ್ನು ಓದಿದಾಗ, ಇತ್ತೀಚಿಗೆ ಸುದ್ದಿಯಾದ ಸಂಗೀತ ಲೋಕದ ಲೈಂಗಿಕ ಶೋಷಣೆಯ ಕಥೆಗಳ ನೆನಪಾಗುವುದು ಸಹಜ. ಮೋಹನಲಾಲ ತನ್ನ ವೃತ್ತಿ ಜೀವನದ ಮಧ್ಯದಲ್ಲೇ ಮನೋಹರಿ ದಾಸ್ ಎಂಬ ನರ್ತಕಿಯ ಹಿಂದೆ ಓಡಿ  ಹೋಗುತ್ತಾನೆ. ಆಕೆ ತನ್ನ ವೃತ್ತಿಯಲ್ಲಿ ಮುಂದೆಬರಲು ಪಟ್ಟ ಕಷ್ಟಗಳು, ಶೋಷಣೆಗೆ ಒಳಗಾದ ಸಂಗತಿಗಳು; ತದನಂತರ ಆಕೆಯೇ ಸಹ ನರ್ತಕರನ್ನು ಶೋಷಿಸುವ ಪ್ರಸಂಗಗಳು ಕಥೆಯನ್ನು ನೈಜವಾಗಿಡಲು ಸಹಕರಿಸುತ್ತವೆ. 

ಈ ಕಾದಂಬರಿಯಲ್ಲೂ, ಭೈರಪ್ಪನವರ ಇತರ ಕಾದಂಬರಿಗಳಂತೇ ಹಿಂದಿರುವ ಸಂಶೋಧನೆಯ ಆಳ, ವಿಷಯದ ಮೇಲಿರುವ ಹಿಡಿತ, ಪಾತ್ರಗಳು ತಂದಿಡುವ ನೈತಿಕ ಸಂಧಿಗ್ತತೆ ಗಹನವಾಗಿವೆ. ಸಂಗೀತ ಪ್ರಿಯರೆಲ್ಲ ಓದಬೇಕಾದ ಕೃತಿಯೆಂದು ನನ್ನ ಅನಿಸಿಕೆ.  

ಭೈರಪ್ಪನವರೊಡನೆ ಸಹಚಾರ: ಡಾ.ಮತ್ತೂರು ನಂದಕುಮಾರ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಇಂದು ಅನಿವಾಸಿಯ ಸದಸ್ಯರು ಸುಂದರವಾಗಿ ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣೆ, ಅನಿಸಿಕೆಗಳನ್ನು ಹಂಚಿಕೊಂಡರು. ಭೈರಪ್ಪನವರು ನನಗೆ ಆತ್ಮೀಯರು. ಅವರು ಮಿತಭಾಷಿ. ಎಂದೂ ಜನರ ಗಮನದ ಕೇಂದ್ರದಿಂದ ದೂರವುಳಿಯುತ್ತಿದ್ದರು. ಅವರ ಪ್ರಥಮ ಭೆಟ್ಟಿ, ನಾನು ಮೈಸೂರಿನಲ್ಲಿ ವ್ಯಾಸಂಗಕ್ಕೆ ಅಣ್ಣನ ಮನೆಯಲ್ಲಿದ್ದಾಗ. ಅಲ್ಲಿ ನಡೆದ ಕಾರ್ಯಕ್ರಮಕ್ಕೆ ದಿನವೂ ಬಂದು ಕುಳಿತು, ಕೇಳಿ ಸದ್ದಿಲ್ಲದೇ ಮರೆಯಾಗುತ್ತಿದ್ದರು. ಎಲ್ಲವನ್ನೂ ಗಮನವಿಟ್ಟು ಕೇಳುತ್ತಿದ್ದರು, ನೋಡುತ್ತಿದ್ದರು. ಸ್ಪಂಜಿನಂತೆ ವಿಚಾರಗಳನ್ನು ಹೀರಿಕೊಳ್ಳುತ್ತಿದ್ದರು. ಸಾಮಾನ್ಯರೊಡನೆ ಸಾಮಾನ್ಯರಾಗಿ ಬೆರೆಯುತ್ತಿದ್ದರು. ಪ್ರವಾಸಕ್ಕೆ ಹೋದಾಗ ಸ್ಥಳಿಯರೊಂದಿಗೇ ಉಳಿದು, ಅಲ್ಲಿನ ಆಚಾರ, ವಿಚಾರ, ವೈಶಿಷ್ಟ್ಯತೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು, ಹೊಟೇಲುಗಳಲ್ಲಿ ತಂಗಿ ನೀರ ಮೇಲಿನ ಕಮಲದ ಎಲೆಯಂತಿರುತ್ತಿರಲಿಲ್ಲ. ಮತ್ತೂರಿಗೆ ಬಂದಾಗ, ನಮ್ಮ ಮನೆಯಲ್ಲೇ ಅವರ ವಾಸ್ತವ್ಯ. ದಿನವೂ ಬೆಳಗ್ಗೆ ನನ್ನೊಡನೆ ಊರಿನ ಕೆರೆಯ ಸುತ್ತ ವಾಕಿಂಗ್ ಹೋಗಲೇ ಬೇಕಿತ್ತು. ಆಗ ಎದುರಾಗುವ ಜನರೊಡನೆ ಕಳೆಯುತ್ತಿದ್ದರು; ವಯಸ್ಸಿನ ಭೇದವಿಲ್ಲದೇ ಚರ್ಚೆ ಮಾಡುತ್ತಿದ್ದರು. ಲಂಡನ್ನಿಗೆ ಬಂದಾಗ ಕೂಡ ನಮ್ಮ ಮನೆಯಲ್ಲೇ ತಂಗುತ್ತಿದ್ದರು. ಆಗ ಅವರು ನನ್ನೊಡನೆ ನೀರನ್ನು ಯಾಕೆ ಪೋಲು ಮಾಡಬಾರದು ಎಂಬ ವಿಷಯವನ್ನು ವರ್ಣಿಸಿದ ನೆನಪು ಮನದಲ್ಲಿ ತೇವವಾಗಿಯೇ ಇದೆ. ದಿನವೂ ವಾಕಿಂಗ್ ಹೋದಾಗ ಹಲವಾರು ವಿಷಯಗಳ ಚರ್ಚೆ ಆಗುತ್ತಿತ್ತು. ಅವರು ಮಂದ್ರ ಬರೆಯುವ ಮೊದಲು ಬೇಕಿದ್ದ ಸಾಮಗ್ರಿಯನ್ನು ಕಲೆ ಹಾಕಲು ನಾನು ಸ್ವಲ್ಪ ಸಹಾಯ ಮಾಡಿದ್ದನ್ನು ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದು  ನನಗೆ ಹೆಮ್ಮೆಯ ಸಂಗತಿ – ಹೂವಿನೊಡನೆ ನಾರೂ ದೇವರ ಮುಡಿಗೇರಿದಂತೆ. ಅವರು ನಂಗೆ ತುಂಬಾ ಆತ್ಮೀಯರು. ಆತ್ಮೀಯರ ಬಗ್ಗೆ ಮಾತನಾಡುವಾಗ ಕಾಲ ಕಳೆದ ಅರಿವೇ ಇರುವುದಿಲ್ಲ.  ಇವತ್ತಿನ ಭೈರಪ್ಪನವರ ಸ್ಮರಣೆ ಅರ್ಥಪೂರ್ಣವಾಗಿದೆ. ಅವರನ್ನು ಓದಬೇಕು, ಓದಿ ಅವರ ನೆನಪನ್ನು ಹಸಿರಾಗಿಡಬೇಕು. 

ಆಂಗ್ಲನಾಡಿನಲ್ಲಿ ಕರುನಾಡ ಸೊಗಡು: ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ – ನಾಗರಾಜ ಬಸವರಾಜು

 ದೀಪಗಳ ಹಬ್ಬ ದೀಪಾವಳಿ ಮತ್ತು ನಮ್ಮೆಲ್ಲರ ಹೆಮ್ಮೆಯ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ — ಈ ಎರಡೂ ಹಬ್ಬಗಳು ಅನಿವಾಸಿ ಕನ್ನಡಿಗರಿಂದ ನವೆಂಬರ್ ೦೮, ೨೦೨೫ರಂದು ಮಿಲ್ಟನ್ ಕೀನ್ಸ್‌ನಲ್ಲಿ ಅದ್ಧೂರಿಯಾಗಿ ಆಚರಿಸಲ್ಪಟ್ಟವು. ದೂರದ ಬ್ರಿಟನ್ ನೆಲದಲ್ಲಿ, ಅನಿಕೇತನ ಮಿಲ್ಟನ್ ಕೀನ್ಸ್ (ಸ್ಥಳೀಯ ಸಮುದಾಯ ಸಂಸ್ಥೆ) ಮತ್ತು ೪೦ ವರ್ಷಗಳ ಸುದೀರ್ಘ ಇತಿಹಾಸವಿರುವ ಪ್ರತಿಷ್ಠಿತ ಕನ್ನಡ ಬಳಗ ಯು.ಕೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮವು ಕನ್ನಡಿಗರ, ಕರುನಾಡ ಕುಡಿಗಳ ಹೃದಯಗಳನ್ನು ಬೆಸೆದ ಬೃಹತ್ ಸಾಂಸ್ಕೃತಿಕ ಸೇತುವೆಯಾಗಿತ್ತು.

 ಆದಿಪೂಜಿತ ವಿನಾಯಕನ ಆರಾಧನೆಯೊಂದಿಗೆ, ಉಪಸ್ಥಿತರಿದ್ದ ಗೌರವಾನ್ವಿತ ಅತಿಥಿಗಳಾದ ಡಾ. ಎಂ. ಎನ್. ನಂದಕುಮಾರ್ ಹಾಗೂ ಗಾಯಕ ಶ್ರೀ ಸಂತೋಷ್ ವೆಂಕಿಯವರು ಎರಡೂ ಸಂಘ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ವಿದೇಶ ನೆಲದಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಆಚರಣೆಗಳು ಮೈಲಿಗಲ್ಲು. ಯುವ ಪೀಳಿಗೆಗೆ ನಮ್ಮ ನಾಡು-ನುಡಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಉತ್ಸವಕ್ಕೆ ಅಪಾರ ಸಂಖ್ಯೆಯ ಸ್ಥಳೀಯ ಕನ್ನಡಿಗರು ಹಾಗು ದೂರದೂರಿನ ಕನ್ನಡ ಬಳಗದ ಸದಸ್ಯರು ಕುಟುಂಬ ಸಮೇತ ಆಗಮಿಸಿ ಕರುನಾಡ ಸೊಗಡನ್ನು ಮೆರೆಸಿದರು. ಕಾರ್ಯಕ್ರಮದ ಗೌರವ ಅತಿಥಿ, ಡಾ. ಎಂ. ಎನ್. ನಂದಕುಮಾರ್ (ಕಾರ್ಯನಿರ್ವಾಹಕ ನಿರ್ದೇಶಕರು, ಭಾರತೀಯ ವಿಧ್ಯಾ ಭವನ, ಲಂಡನ್) ನೆರೆದವರನ್ನು ಉದ್ದೇಶಿಸುತ್ತ, ಈ ರೀತಿಯ ಕಾರ್ಯಕ್ರಮಗಳು ಮತ್ತು ಕನ್ನಡ/ಕರ್ನಾಟಕ ಕುರಿತಾದ ಕಾರ್ಯಕ್ರಮಗಳು ನಾಡಿನಿಂದ ದೂರದ ದೇಶದದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸೇತುವೆಯಾಗಿ, ಕರ್ನಾಟಕ ಭಾಷೆಗಳ, ಕಲಾ ಸಂಸ್ಕೃತಿ ಪರಂಪರೆಗಳ ಪರಿಚಯವಾಗಿ, ಈ ಅಭಿರುಚಿಗಳ ಬೆಳವಣಿಗೆಗೆ ಪೂರಕವಾಗಿರಲಿ ಎಂದು ಆಶಿಸಿದರು.

 ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಲವಾರು ಕಲಾವಿದರ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು. ಮಕ್ಕಳು, ಯುವಕರು ಮತ್ತು ಹಿರಿಯರು ಜಾನಪದ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಛದ್ಮವೇಶ, ಜನಪದ ಹಾಗು ಸಿನಿಮಾ ನೃತ್ಯಗಳು, ವಯಸ್ಕರ ಗಾಯನ, ದಂಪತಿಗಳ ಜೋಡಿ ನೃತ್ಯ, ನವರಸ ರೂಪಕ, ರಾಮಾಯಣ ಸಂಗೀತ ನೃತ್ಯ ಹಾಗು ಕರುನಾಡ ವೈಭವ ಕುರಿತಾದ ಫಿನಾಲೆ ನೃತ್ಯ ಸಭಿಕರ ಮನ ಸೂರೆಗೊಂಡವು. ಪ್ರತಿಯೊಂದು ಪ್ರದರ್ಶನವೂ ಕನ್ನಡಿಗರ ಕಲಾಭಿರುಚಿ ಮತ್ತು ನಾಡಿನ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾದವು. ದೀಪಾವಳಿಯ ಬೆಳಕು ಮತ್ತು ರಾಜ್ಯೋತ್ಸವದ ಕೆಂಪು-ಹಳದಿ ವರ್ಣಗಳು, ಎಲ್ಲರ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳು ಹಾಗೂ ಅದಕ್ಕನುಗುಣವಾಗಿ ಒಳಾಂಗಣ ಅಲಂಕಾರಗಳು ಸಮಾರಂಭದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು.

ಸ್ಮರಣಾಂಜಲಿ: ಕನ್ನಡದ ದಿಗ್ಗಜರಿಗೆ ನಮನ

ಈ ವರ್ಷ ನಮ್ಮಿಂದ ದೂರವಾದ, ಈ ಹಿಂದೆ ಕನ್ನಡ ಬಳಗ ಯು ಕೆ ಗೆ ಆಹ್ವಾನಿತ ಅತಿಥಿಯಾಗಿ ಬಂದಿದ್ದ ನಾಡೋಜ ಡಾ. ಎಸ್. ಎಲ್. ಭೈರಪ್ಪ ಮತ್ತು ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಲ್ಲದೆ, ಕನ್ನಡ ಬಳಗ ಯು.ಕೆಯ ಬೆಳವಣಿಗೆಗೆ ಶ್ರಮಿಸಿ, ಇತ್ತೀಚೆಗೆ ಅಗಲಿದ ಹಿರಿಯ ಸದಸ್ಯರ ಆತ್ಮಗಳಿಗೆ ಒಂದು ನಿಮಿಷದ ಮೌನ ಮತ್ತು ನುಡಿನಮನದ ಮೂಲಕ ಗೌರವ ಸಲ್ಲಿಸಲಾಯಿತು. ತಮ್ಮ ನೆಚ್ಚಿನ ಹಿರಿಯರನ್ನು ನೆನೆದು ಅನೇಕರು ಭಾವುಕರಾದರು.

ಬಹುಭಾಷಾ ಗಾಯಕ ಶ್ರೀಯುತ ಸಂತೋಷ್ ವೆಂಕಿ ಅವರ ಸಂಗೀತ ರಸಸಂಜೆ ಮೂಲಕ ನೆರೆದಿದ್ದ ಚಿಣ್ಣರು, ಯುವಕರು ಹಾಗೂ ಹಿರಿಯರೆಲ್ಲ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಕಾರ್ಯಕ್ರಮ ಕೇವಲ ಹಬ್ಬದ ಆಚರಣೆಯಾಗಿರದೆ, ಹೊರನಾಡ ಕನ್ನಡಿಗರು ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡು, ಹೊಸ ಪೀಳಿಗೆಗೆ ಕರುನಾಡ ವೈಭವಯುತ ಸಂಸ್ಕೃತಿಯ, ಪರಂಪರೆಯ ಮಹತ್ವವನ್ನು ತಿಳಿಸುವ ಶ್ಲಾಘನೀಯ ಪ್ರಯತ್ನವಾಯಿತು.

‘ಭೈರಪ್ಪನವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮಕ್ಕೆ ನೆರೆದ ಸಭಿಕರು – ಚಿತ್ರಕೃಪೆ ಆನಂದ ಕೇಶವಮೂರ್ತಿ

ಅರವತ್ತರ ದಶಕದಲ್ಲಿ ಇಂಗ್ಲೆಂಡ್ ಕನ್ನಡಿಗನ ಬದುಕು-ರಾಮಮೂರ್ತಿ

ಬದುಕಲ್ಲಿ ಕೆಲವೊಂದು ಘಳಿಗೆಗಳು ಬರುತ್ತವೆ. ಆಗ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು  ಬದಲಾವಣೆಯನ್ನಷ್ಟೇ ತರದೆ ನಮ್ಮ ಬದುಕಿನ ಭವಿಷ್ಯವನ್ನೇ ಬದಲಾಯಿಸಿಬಿಡುತ್ತವೆ. ಅಲ್ಲಿಂದ ಮುಂದಕ್ಕೆ ಆ ನಿರ್ಧಾರಗಳಿಗೆ ಬದ್ದರಾಗಿ ಬದುಕನ್ನು ಕಟ್ಟಿಕೊಳ್ಳುವುದು, ಕಂಡುಕೊಳ್ಳುವುದು ಮಾತ್ರವೇ ನಮ್ಮ ಪ್ರಯತ್ನದ ಮಿತಿಯಲ್ಲಿ ಉಳಿಯುತ್ತದೆ.

ಹಾಗೊಂದು ಘಳಿಗೆಯಲ್ಲೇ ನಾವೆಲ್ಲ ಈ ಪರದೇಶಕ್ಕೆ ಕಾಲಿಟ್ಟಿರುವುದು.

ಕನ್ನಡದ ಒಬ್ಬ ಬುದ್ದಿವಂತ, ರೂಪವಂತ, ವಿದ್ಯಾವಂತ ಯುವಕನೊಬ್ಬ ತುಂಬಾ ವರ್ಷಗಳ ಹಿಂದೆ ಈ ನಿರ್ಧಾರವನ್ನು ತೆಗೆದುಕೊಂಡಾಗ ಕಾಲ ಬಹಳ ಭಿನ್ನ ಬಣ್ಣವನ್ನು ಹೊಂದಿತ್ತು. ತಾಯ್ನಾಡಿನ ಸಂಬಂಧಗಳ ಸೆಳೆತ ತೀವ್ರವಾಗಿತ್ತು.ಪರನಾಡಿನ ಈ ನೆಲದಲ್ಲಿ ವರ್ಣೀಯರ ಬಗೆಗಿನ ಧೋರಣೆಗಳು ’ಮುಕ್ತ ’ವಾಗಿ ವ್ಯಕ್ತವಾಗುತ್ತಿದ್ದ ಕಾಲವದು! ನಮ್ಮಲ್ಲಿ ಬಹುತೇಕರು ಇನ್ನೂ ಹುಟ್ಟೇ ಇರಲಿಲ್ಲ.

1965 ರಲ್ಲಿ ರಾಮಮೂರ್ತಿಯವರು ಇಂಗ್ಲೆಂಡಿಗೆ ಬಂದಾಗ ಅವರು ಇಲ್ಲಿ ಕಂಡ ಬದುಕು, ಸಮಾಜ, ಜನರ ಧೋರಣೆಗಳು, ರಾಜಕೀಯ ಬದಲಾವಣೆಗಳು, ಅನುಭವಿಸಿದ ಒಂಟಿತನ ಅಸದಳವಾದ್ದು. ಆ ವಾತವರಣದಲ್ಲಿ ಅವರಂತೆಯೇ ಇಲ್ಲಿಗೆ ಬಂದಿದ್ದ ಕರ್ನಾಟಕ ಮೂಲದ ಬೆರಳೆಣಿಕೆಯಷ್ಟು ಜನರನ್ನು ಹುಡುಕಲು ನಡೆಸಿದ ಯತ್ನ, ಆ ಮೂಲಕ ಈ ದೇಶದ ಅತ್ಯಂತ ಹಿರಿಯ ಕನ್ನಡ ಸಂಘ ಹುಟ್ಟಿದ ವಿಚಾರಗಳ ಬಗ್ಗೆ ಇವರು ಮಹತ್ತರವಾದ ಲೇಖನವನ್ನು ಬರೆದಿದ್ದಾರೆ. ಅಂದಿನವರ ಬದುಕಿನ ಬಗ್ಗೆ  ಮತ್ತು ಅವರಿದ್ದ ಅಂದಿನ ವಾತಾವರಣದ ಬಗ್ಗೆ ಅರಿಯದಿದ್ದಲ್ಲಿ, ಎಂತಹ ದಿನಗಳಲ್ಲಿ ಕೆಲವರು ಕನ್ನಡ ಸಂಘವೊಂದನ್ನು ಕಟ್ಟಲು ಪ್ರಯತ್ನ ಪಟ್ಟರೆಂಬುದು ನಮಗೆ ಅರಿವಾಗುವುದು ಕಷ್ಟ.

ಈ ತಲೆಮಾರಿನವರ ಬದುಕಿನ ಬಗ್ಗೆ ಕೇಳಿದರೆ, ದೀರ್ಘಕಾಲದ ನೆನಪುಗಳ ಸರಣಿಯನ್ನು ಹೊತ್ತ ಇಂತವರು ಭಾವೋದ್ವೇಗಗಳಿಲ್ಲದ ಚುಟುಕು ಉತ್ತರಗಳನ್ನು ಕೊಡುತ್ತಲೇ ಯಾವುದನ್ನ ಹೇಳಲಿ ಎನ್ನುವ ಯೋಚನೆಯಲ್ಲಿ ಮೌನವಾಗುತ್ತಾರೆ. ಆದರೆ ಅವರು ನೀಡುವ ಯಾಧೃಚ್ಛಿಕ ಮಾಹಿತಿಗಳಲ್ಲಿನ ಭಾವತೀವ್ರತೆಯನ್ನು ಅರಿಯುವುದು ಕಷ್ಟವೇನಲ್ಲ. ಇದೇ ತಿಂಗಳು 8 ನೇ ತಾರೀಖು, ಬ್ರಿಟಿಷ್ ಬರಹಗಾರ್ತಿ, ಪತ್ರಿಕೋದ್ಯಮಿ, ಭಾರತದ ಪಂಜಾಬ್ ಮೂಲದ ಅನಿತಾ ಆನಂದ್ ರೇಡಿಯೋ 4 ನಲ್ಲಿ ರಿಸರ್ವ್ ಬ್ಯಾಂಕಿನ ಮೂಲಕ £3 ಪಡೆದು  ಈ ರೀತಿ ಬಂದ ಏಶಿಯನ್ನರ ಬಗ್ಗೆ ಅತ್ಯಂತ ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹಲವರನ್ನು ಸಂದರ್ಶಿಸಿದರು.ಆ ವೇಳೆಗಾಗಲೇ ರಾಮಮೂರ್ತಿಯವರು ತಮ್ಮ ನೆನಪಿನ ಬುತ್ತಿಯನ್ನು ಅನಿವಾಸಿಗಾಗಿ ಬಿಚ್ಚಿಟ್ಟಿದ್ದರು.

ಶ್ರೀಯುತ ರಾಮಮೂರ್ತಿಯವರು ಕನ್ನಡ ಬಳಗ ಹುಟ್ಟಿದ ಮತ್ತು ಬೆಳೆದು ಬಂದ ಬಗ್ಗೆ ಮಹತ್ತರವಾದ ಬರಹ- ದಾಖಲೆಯನ್ನು ಸೃಷ್ಟಿಸಿದ್ದಾರೆ.  ಈ ಲೇಖನ ಸಂದೇಶ ಎನ್ನುವ  ಸ್ಮರಣ ಸಂಚಿಕೆಯಲ್ಲಿ ಮುಂದಿನ ವರ್ಷ ಪ್ರಕಟವಾಗುವ ಮುನ್ನವೇ ಅನಿವಾಸಿಯ ಓದುಗರನ್ನು ತಲುಪಲಿದೆ. ಅವರ ಉದ್ದೇಶ ಮುಖ್ಯವಾಗಿ ಕನ್ನಡ ಬಳಗದ ಬಗ್ಗೆ ಬರೆಯುವುದೇ ಆಗಿತ್ತಾದರೂ ನನ್ನಂತವರ ಆಸಕ್ತಿ ಅವರ ಕಾಲದ ಬದುಕಿನ ಬಗ್ಗೆ ಅರಿಯುವುರಲ್ಲೇ ಹೆಚ್ಚಿನ ಉಮೇದನ್ನು ತೋರಿಸಿತ್ತು.ಒಂದನ್ನು ಅರ್ಥಮಾಡಿಕೊಂಡರೆ ಇನ್ನೊಂದರ ಮಹತ್ವವೂ ನಿಚ್ಚಳವಾಗಿ ಕಾಣಿಸುತ್ತದೆ ಎನ್ನುವ ಕಾರಣ ಕೂಡ.

ಐವತ್ತು ದಶಕಗಳ ಹಿಂದೆ ಈ ನೆಲದಲ್ಲಿ ಅವರು ಕಂಡುಕೊಂಡ ಹೊಸ ಬದುಕಿನ ಬಗೆಗಿನ ಅತ್ಯಂತ ಆಸಕ್ತಿದಾಯಕ ಬರಹವಿದು.  ಇದನ್ನು ಓದಿದ ನಂತರ, ಕಾಲ ತರುವ ಬದಲಾವಣೆಗಳ ಬಗ್ಗೆ, ನಮ್ಮ ಹಿರಿಯರಾದ ಕನ್ನಡಿಗರ ಬದುಕಿನ ಬಗ್ಗೆ, ನಿಮಗನ್ನಿಸಿದ್ದನ್ನು ಅಗತ್ಯವಾಗಿ ಬರೆದು ತಿಳಿಸಿ- ಡಾ.ಪ್ರೇಮಲತ ಬಿ.


  ಹಿಂದಿನ ಒಂದು ಕಥೆ…… 

ನಾನು 1965 ರಲ್ಲಿ ಇಂಗ್ಲೆಂಡ್ ಗೆ ಬಂದಾಗ ಇಲ್ಲಿ ಎಷ್ಟು ಜನ ಕನ್ನಡದವರಿದ್ದಾರೆ ಎನ್ನುವ ಪ್ರಶ್ನೆ ಬರಲಿಲ್ಲ ಮತ್ತು ಯೋಚನೆ ಸಹ  ಮಾಡಲಿಲ್ಲವೇನೋ. ಕಾರಣ, ಬರುವುದಕ್ಕೆ ಮುಂಚೆ ನನಗೆ ಇಲ್ಲಿ ನೆಲಸಿರುವ ಯಾರದೇ  ಮನೆಯವರ ಪರಿಚಯವೂ ಇರಲಿಲ್ಲ. ನಾನು  ಇಂಜಿನಿಯರ್ ಆಗಿ ಮಾಡುತಿದ್ದ LRDE ಎಂಬ ಸಂಸ್ಥೆ ಯಿಂದ  ಇಲ್ಲಿಗೆ ಕೆಲವು ತಿಂಗಳ ತರಬೇತಿಗೆ ಬಂದಿದ್ದ ಇಬ್ಬರು ಇಂಗ್ಲೆಂಡ್ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿದ್ದರು. ಆದರೆ ಇಲ್ಲಿಗೆ ಬಂದು ನೆಲಸುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಮತ್ತು ಯೋಚನೆಯೂ  ಬಂದಿರಲಿಲ್ಲ.

ಇಲ್ಲಿಗೆ ಬರಬೇಕಾದರೆ U.K  Home Office ನಿಂದ Employment Voucher ಪಡೆಯಬೇಕಾಗಿತ್ತು. ನನಗೆ ಯಾರೋ ಈ ವಿಚಾರ ಹೇಳಿದ್ದರು. ಅಂಚೆಯ ವಿಳಾಸ ಸಂಪಾದಿಸಿ ಒಂದು ಪತ್ರವನ್ನು ಟೈಪ್ ಮಾಡಿಸಿ ಪೋಸ್ಟ್ ಮಾಡಿ ಅದರ ಬಗ್ಗೆ ಮರತೆ . ಈ ಹೋಮ್ ಆಫೀಸ್ ಒಂದು ಸರಕಾರಿ ಕಚೇರಿ ಅಲ್ಲವೇ? ಇಂತಹ ಕಾಗದಗಳು ಎಷ್ಟೋ ಆದ್ದರಿಂದ ಅವರಿಂದ ಉತ್ತರ ಬರುವುದಿಲ್ಲ ಅಂತ ಭಾವಿಸಿ ಸುಮ್ಮನಾಗಿದ್ದೆ. ಆದರೆ ಸುಮಾರು 5-6 ತಿಂಗಳ ನಂತರ “On  Her Majesty’s Service ” ಲಕೋಟೆ ಯಲ್ಲಿ   Employment Voucher ಕೊಟ್ಟಿದ್ದೇವೆ ಇದರ ಅವಧಿ 6 ತಿಂಗಳು ಮಾತ್ರ ಎನ್ನುವ ಸಂದೇಶವು ಇತ್ತು. ಸರಿ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸ್ವಲ್ಪ ದುಡ್ಡು ಏರ್ಪಾರ್ಟ್ ಮಾಡಿ ಏರ್ ಇಂಡಿಯ ನಲ್ಲಿ one way ಟಿಕೆಟ್ ಬುಕ್ ಮಾಡಲಾಯಿತು, ನನ್ನ ಅಜ್ಜಿ,   ಒಳ್ಳೆ ಸರಕಾರಿ ಕೆಲಸ ಬಿಟ್ಟು ಯಾವುದೋ ದೇಶಕ್ಕೆ ಹೋಗುವುದಕ್ಕೆ  ನಿನಗೆ  ಹುಚ್ಚು ಎಂದರು. ಮುಂದಿನ ವರ್ಷ ಮಾದುವೆ ಮಾಡಿಕೊಳ್ಳುವ ಪ್ಲಾನ್ ಇತ್ತು ಆದರೆ  ಅದನ್ನು ಪ್ರೀಪೋನ್ ಮಾಡಿ ಆಗಸ್ಟ್ 1965 ರಲ್ಲಿ  ಮದುವೆಯೂ ಸರಳವಾಗಿ ನಡೆದು ಹೋಯಿತು! ಸಾಯಂಕಾಲ ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ  ಮೈಸೂರ್ ಅನಂತಸ್ವಾಮಿ ಅವರ ಸುಶ್ರಾವ್ಯ ಸಂಗೀತ ಕಛೇರಿ ನಡೆದ ಸುಂದರ ನೆನಪು .

ರಿಸರ್ವ್ ಬ್ಯಾಂಕ್ ನಿಂದ £3  ಪೌಂಡ್ ಪಡೆದು ಮುಂಬೈ ತಲುಪಿದಾಗ ಭಾರತ ಪಾಕಿಸ್ತಾನ್ ಯುದ್ಧ ಶುರುವಾಗಿ ವಿಮಾನ ಹೊರುಡುವದೇ ಸಂದೇಹವಿತ್ತು. ಆದರೆ ಎಲ್ಲವೂ ಸರಾಗವಾಗಿ ಆಗಿ ಲಂಡನ್ ಸೇರಿದೆ.

ಇಂಗ್ಲೆಂಡಿನಲ್ಲಿ 50 ವರ್ಷದ ಹಿಂದೆ ನೆಲಸಿದ್ದ ಕನ್ನಡದವರ ಬಗ್ಗೆ ಏನೂ ಮಾಹಿತಿ ನನ್ನಲ್ಲಿ  ಇರಲಿಲ್ಲ . ನಾನು ಬಂದ  ಕೆಲವೇ ತಿಂಗಳ ನಂತರ ನನ್ನ 3-4 ಸ್ನೇಹಿತರು  Employment Voucher ನಿಂದ ಬಂದರು, ಇವರೇ  ನಮ್ಮ ಕನ್ನಡ ಸಂಗಾತಿಗಳು ಅಷ್ಟೇ. ಒಂದು ಸಲ ಸ್ಥಳೀಯ ಟೆಲಿಫೋನ್ ಡೈರೆಕ್ಟರಿ ನಲ್ಲಿ  ರಾಮಸ್ವಾಮಿ ಅನ್ನುವ ಹೆಸರು ನೋಡಿ ಇವರು ಕನ್ನಡದವರು ಇರಬಹುದೆಂದು 4 ಪೆನ್ನಿ (ಹಳೆ ಪೆನ್ನಿ) ಗಳನ್ನೂ ಹಾಕಿ ಪೋಬ್ಲಿಕ್ ಫೋನ್ ಬಾಕ್ಸ್ ನಿಂದ ಕರೆ ಮಾಡಿದೆ. ಆದರೆ ಆ ಮನುಷ್ಯ ” Not interested ” ಅಂತ ಹೇಳಿ ಫೋನ್ ಇಟ್ಟ! ಕನ್ನಡದವರನ್ನು ಹುಡುಕುವ ಪ್ರಯತ್ನ ಪುನಃ ಮಾಡಲಿಲ್ಲ.

                      London streets and rooftops in 1960s

1960 ಕೊನೆಯಲ್ಲಿ  ಸುಮಾರಾಗಿ ವೈದ್ಯರು ಬರುವುದಕ್ಕೆ ಶುರುವಾಯಿತು. ಹೀಗೆ ನಮ್ಮ ಗೆಳೆಯ ದಿ : ರಾಜಾರಾಮ್ ಕಾವಳೆ ಅವರ ಪರಿಚಯು ಆಯಿತು.  ಆದರೆ ಭೇಟಿಯಾಗುವುದು ಸಮಸ್ಯೆ. ಕಾರು  ಇರಲಿಲ್ಲ. ರೈಲ್ ನಲ್ಲಿ ಪ್ರಯಾಣಕ್ಕೆ ಖರ್ಚು. ಟೆಲಿಫೋನ್ ಸಂಪರ್ಕ ಕಷ್ಟ.ಇನ್ನು ಮೊಬೈಲ್, ಇಂಟರ್ನೆಟ್ ಇವೆಲ್ಲ ಇಲ್ಲದ ಕಾಲವದು.

ಕ್ಷಮಿಸಿ,  ನಿಮ್ಮಲ್ಲಿ ಕೆಲವರಿಗೆ ನಾನು ಯಾವಾಗ ಬಂದೆ, ಏನು ಮಾಡಿದೆ ಅನ್ನೋ ವಿಷಯ ಕೇಳುವ ಆಸಕ್ತಿ ಅಥವಾ ಕುತೂಹಲ ಇಲ್ಲವೇನೋ. ಆದರೆ, ನಮ್ಮ ಸಂಪಾದಕರು ಐವತ್ತು ವರ್ಷದ ಹಿಂದೆ ನಮ್ಮ ಪೀಳೆಗೆಯವರು ಎದುರಿಸದ ಸಮಸ್ಯೆಗಳು ಮತ್ತು ಆಗಿನ ಸಮಾಜದ  ಪರಿಸ್ಥಿತಿ ಬಗ್ಗೆ ಬರೆಯಿರಿ ಅಂತ ಹೇಳಿದ್ದಾರೆ, ಆದ್ದರಿಂದ ಇಲ್ಲಿ ಕೆಲವು ಮಾತುಗಳು. 

ಇದು ಸುಮಾರು 1966-7 ರ ಸಮಯ. ಎರಡನೇ ಮಹಾಯುದ್ಧ ಮುಗಿದು ಕೇವಲ ಇಪ್ಪತ್ತು ವರ್ಷಗಳಾಗಿದ್ದರಿಂದ ಈ ದೇಶದ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲಿಲ್ಲ. ಹೊಸ ಮನೆಗಳು ಕಟ್ಟುವುದಕ್ಕೆ  ಶುರು  ಮಾಡಿದ್ದರು.  ನಮಗೆ ಬಾಡಿಗೆ ಮನೆ ಸಿಕ್ಕುವುದು ಸುಲಭವಾಗಿರಲಿಲ್ಲ. ನಮ್ಮ ವರ್ಣ ನೋಡಿ ಮನೆ ಬಾಡಿಗೆಗೆ ಇಲ್ಲ ಅಂತ ಸುಳ್ಳು ಹೇಳುವುದು ಸಾಮಾನ್ಯವಾಗಿತ್ತು. Race Relations Act ಅವಾಗ ಜಾರಿಯಲ್ಲಿ ಇರಲಿಲ್ಲ, ಐರಿಶ್ ಪ್ರಜೆಗಳಿಗೂ ಇದೇ ಗತಿ, ಕೆಲಸ ಸಿಗುವುದೇ ಕೆಲವರಿಗೆ ಕಷ್ಟವಾಗಿತ್ತು.

 

ಆದರೆ ನನಗೆ ಒಂದು ವಾರದಲ್ಲೇ ಕೆಲಸ ಸಿಕ್ಕಿತ್ತು. ವರ್ಷಕ್ಕೆ ಸಂಬಳ £850 ಅಂದರು.ಇಲ್ಲ £1000 ಕೊಡಿ ಅಂತ ಕೇಳಿ ಒಪ್ಪಿಸಿ ಸೇರಿದೆ.ಹತ್ತಿರದಲ್ಲೇ one bed ಫ್ಲಾಟ್ ಸಹ ವಾರಕ್ಕೆ £7 ರಂತೆ  ಬಾಡಿಗೆಗೆ ಸುಲಭವಾಗಿ ಸಿಕ್ಕಿತ್ತು. ನನ್ನ ಪತ್ನಿ ಸೀತ ಈಗ ಬಂದಿದ್ದಳು, ನಮ್ಮ  ಸಂಸಾರ Hounslow  ನಲ್ಲಿ  ಪ್ರಾರಂಭವಾಯಿತು. 

ಒಂದು ತಮಾಷಿ ವಿಚಾರ. ಸೀತ ಬರುವುದಕ್ಕೆ ಒಂದು ವಾರದ ಮುಂಚೆ ಹತ್ತಿರದಲ್ಲೇ ಇದ್ದ  ಈಗಿನ Boots  ನಲ್ಲಿ ಹೋಗಿ ಒಂದು ಬಾಟಲ್” ಸ್ನೋ” (Snow ) ಕೊಡಿ ಅಂತ ಕೇಳಿದೆ ಇದು 1966  ಬೇಸಿಗೆ ಕಾಲ ಪಾಪ ಆಕೆ ಕಕ್ಕಾಬಿಕ್ಕಿ ಯಾಗಿ ” you get snow only in winter dear, you can’t buy it in a bottle ” ಅಂದಳು, ನಾನು,  ಇಲ್ಲ ನೋಡಿ ಇದು ಬಾಟಲ್ ನಲ್ಲಿ ಬರುತ್ತೆ ಹೆಂಗಸರು ಮಖಕ್ಕೆ ಹಚ್ಚಿಕೊಳ್ಳುತ್ತಾರೆ ಅಂದೆ. ” Oh  you mean face  cream ” ಅಂದಳು. ನಗಬೇಡಿ,  ನನಗೆ ಇಂಡಿಯಾ ದಲ್ಲಿ Afghan Snow  ನೋಡಿದ್ದೆ , ಇಲ್ಲೋ ಇದು  ಸಿಗಬಹುದು ಅಂತ ಕೇಳಿದೆ ಅಷ್ಟೇ !! 25 ವರ್ಷದ ಹುಡಗನಿಗೆ ಇವೆಲ್ಲ ಹೊಸದು ಅಲ್ಲವೇ ?

ಆಗ ದೊಡ್ಡ ಸಮಸ್ಯೆ ನಮಗೆ ಬೇಕಾಗಿದ್ದ ದಿನಸಿ ಮತ್ತು ತರಕಾರಿಗಳು. ನಮ್ಮ ಮನೆ, sorry flat ಹತ್ತಿರ ಒಂದು ಸಣ್ಣ ಪಂಜಾಬಿ ಅಂಗಡಿ ಮಾತ್ರ ಇತ್ತು ಅಲ್ಲಿ ಅಕ್ಕಿ ಬೇಳೆ ಇತ್ಯಾದಿ ಇತ್ತು ಆದರೆ ತರಕಾರಿ ಇಲ್ಲ. ಇಲ್ಲಿ ಜನಕ್ಕೆ ಆಲೂಗೆಡ್ಡೆ ಈರುಳ್ಳಿ ಮತ್ತು ಕೋಸುಗೆಡ್ಡೆ ಮಾತ್ರ ಗೊತ್ತಿತ್ತು. ದೊಡ್ಡ Supermarket ಇರಲಿಲ್ಲ. ಹತ್ತಿರದಲ್ಲಿ sainsbury’s ಇತ್ತು. ಸುಮಾರು 30 ಅಡಿ ಉದ್ದ, 15 ಅಡಿ ಅಗಲದ ಅಂಗಡಿ. self Service ಇಲ್ಲ. ಅರ್ಧ ಪೌಂಡ್ (Metric ಇನ್ನೂ  ಇರಲಿಲ್ಲ )ಬೆಣ್ಣೆ ಅಥವಾ ಸಕ್ಕರೆ ಕೊಡಿ ಅಂತ ಕೇಳಬೇಕು.  ಹೊರಗೆ ಹೋಗಿ ತಿನ್ನುವುದು ದೊಡ್ಡ ಸಮಸ್ಯೆ ನಮ್ಮಂಥಹ ಸಸ್ಯಾಹಾರಿಗಳಿಗೆ. ಎಲ್ಲೊ ಒಂದು Indian Restaurant ಇತ್ತು.ಇಲ್ಲಿ ನಮ್ಮಂತ  ಗಿರಾಕಿಗಳು ಅವರಿಗೆ ಬೇಕಾಗಿರಲಿಲ್ಲ, ಇಲ್ಲಿಯ ಬಿಳಿಯವರು  ಮಾತ್ರ!

ನ್ಯಾಷನಲ್ ಫ್ರಂಟ್ ಅಂತ ಸಂಸ್ಥೆ ಆಗ ಪ್ರಭಲವಾಗಿತ್ತು. ಇವರು Non white  ಜನಗಳು ಈ ದೇಶಕ್ಕೆ ಬರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಏಪ್ರಿಲ್ 1968 ನಲ್ಲಿ Enoch Powell ಅನ್ನುವ ರಾಜಕಾರಣಿ “Rivers of Blood ” ಅನ್ನುವ ಭಾಷಣ ಮಾಡಿದ . ಈತ Conservative ಸರಕಾರದ ಮಂತ್ರಿ ಮತ್ತು ತುಂಬಾ ದೊಡ್ಡ ವಿದ್ಯಾವಂತ ಆದರೂ ಇಂತಹ ಭಾಷಣ ಕೇಳಿ ಪ್ರಧಾನ ಮಂತ್ರಿ ಎಡ್ವರ್ಡ್ ಹೀತ್ ಇವರನ್ನು ಖಂಡಿಸಿ ಮಂತ್ರಿಗಿರಿಯಿಂದ ತೆಗೆದರು. ಇದರಿಂದ ಈ ದೇಶದ ಜನರಿಗೆ ವರ್ಣ ಭೇದದ ಸಮಸ್ಯೆ ಅರಿವಾಗಿ ಮುಂದಿನ Race Relations Act ನ್ನು ಜಾರಿಗೆ ತರುವ ಪ್ರಯತ್ನ ಪ್ರಾರಂಭವಾಯಿತು ಅನ್ನುವುದರಲ್ಲಿ ಏನೂ  ಸಂದೇಹವಿಲ್ಲ.

1972-3 ನಲ್ಲಿ ಪೂರ್ವ ಆಫ್ರಿಕಾದ ಸಾವಿರಾರು ಭಾರತೀಯರನ್ನು ಅಲ್ಲಿಂದ ಓಡಿಸಿದಾಗ ಅವರೆಲ್ಲಾ  ಬಂದಿದ್ದು ಈ ದೇಶಕ್ಕೆ . ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಎಡ್ವರ್ಡ್ ಹೀತ್, ಜನಗಳು ಪ್ರತಿಭಟಿಸಿದರೂ, ಈ ನಿರ್ಧಾರವನ್ನು ಮಾನವೀಯ ಕಾರಣದಿಂದ ಮಾಡಿದ್ದನ್ನು ನಾವು ಯಾರೂ ಮರೆಯಬಾರದು. ಈ ಜನಾಂಗದಿಂದ ಈ ದೇಶದಲ್ಲಿ ಒಂದು shopping revolution  ಶುರು ಆಯಿತು ಎನ್ನುವುದು ಸತ್ಯ,.

English Premier League ಫುಟ್ ಬಾಲ್ ನಲ್ಲಿ ಆ ಕಾಲದಲ್ಲಿ ಒಬ್ಬನೂ Afro Caribbean ಅಥವಾ Asian ಮೂಲದವರ ಆಟಗಾರರು ಇರಲಿಲ್ಲ,  ಇದ್ದರೂ  ಅವರನ್ನು ದೂರ ಮಾಡಿದ್ದರು. ಈಗ ನೋಡಿ ಇಂಗ್ಲೆಂಡ್ ಟೀಮ್ ನಲ್ಲಿ ಎಷ್ಟು ಜನ ಇಂಥವರು ಇದ್ದಾರೆ.

ಮೊಟ್ಟಮೊದಲನೆಯ ಆಫ್ರೋ ಕಾರಿಯಾಬೀನ್ ಮೂಲದ Member of Parliament 1987 ರಲ್ಲಿ, ಲೇಬರ್ ಪಾರ್ಟಿ ಯ Dianne Abbott. ( ಆದರೆ ಇದಕ್ಕೆ ನೂರು ವರ್ಷದ ಹಿಂದೆ ಇಬ್ಬರು ಭಾರತೀಯರು Conservative ಮತ್ತು Liberal ಪಾರ್ಟಿ ಇಂದ ಇಲ್ಲಿಯ ಪಾರ್ಲಿಮೆಂಟಿಗೆ ಚುನಾಯಿತರಾಗಿದ್ದರು )

ಲಂಡನ್ನಲ್ಲಿ 1993 ನಲ್ಲಿ Stephen Lawrence ಎಂಬ 17 ವರ್ಷದ  Afro Caribbean ಹುಡುಗನ ಕೊಲೆ ಜನರ ಮನ ತಟ್ಟಿತು. ಪೊಲೀಸ್ ಇಲಾಖೆ ಇದರಲ್ಲಿ ಅಷ್ಟೇನು ಆಸಕ್ತಿ ತೋರಿಸಿ ತನಿಖೆ ಮಾಡಲಿಲ್ಲ. ಆದರೆ ಮೂರು ವರ್ಷದ ನಂತರ ಆಗಿನ ಸರಕಾರ ಹೈಕೋರ್ಟಿನ ನಿವೃತ  ನ್ಯಾಯಾಧೀಶ Sir William  McPherson ಅನ್ನುವರನ್ನು ಇದರ ಬಗ್ಗೆ ವಿಚಾರಣೆ ಮಾಡಲು ನೇಮಿಸಿದರು. ಇವರ ವರದಿ ಈ ದೇಶದ  ಜನರ ಹೃದಯವನ್ನು ಮುಟ್ಟಿತು. ಪೊಲೀಸ್ ಇಲಾಖೆ “Institutionally Racist ” ಅಂತ ತೀವ್ರ ವಾಗಿ ಖಂಡಿಸಿದರು, ಇಲ್ಲಿಂದ ಅನೇಕ ಸುಧಾರಣೆಗಳು ಜಾರಿಗೆ ಬಂದು ವರ್ಣ ಭೇದದ  ಹಾವಳಿ ತುಂಬಾ ಕಡಿಮೆ ಆಯಿತು

ಟೆಲಿವಿಷನ್ ನಲ್ಲಿ ವರದಿಗಾರರು ಬಿಳಿ ಮಖಗಳು ಮಾತ್ರ .  ಆದರೆ 1973 ನಲ್ಲಿ ಟ್ರಿನಿಡಾಡ್ ಮೂಲದವರಾಗಿದ್ದ Sir Trevor McDonald ಮೊದಲೆನೆಯ ಆಫ್ರೋ Caribbean ವರದಿಗಾರ ನಂತರ News ರೀಡರ್.

ಒಂದು ಹೇಳಬಲ್ಲೆ, ಈಗಿನ ಯುನೈಟೆಡ್ ಕಿಂಗ್ಡಮ್ ಮತ್ತು 20/30 ವರ್ಷದ ಹಿಂದಿನ ಯು.ಕೆ. ಬೇರೆ ಬೇರೆ ದೇಶಗಳು ಅನ್ನಬಹುದು.

ನನ್ನ ವೈಯಕ್ತಿಕ ಅನುಭವದಿಂದ ಒಂದು ಹೇಳಬಲ್ಲೆ, ಬಹುಷಃ ನಾನು ಅದೃಷ್ಟವಂತ.ಮೇಲೆ ಹೇಳಿದ ಸಮಸ್ಯೆಗಳು ನಮಗೆ ಬರಲಿಲ್ಲ. ನಾನು ಕೆಲಸ ಮಾಡಿದ ಕಡೆ ನನ್ನನ್ನು ಎಲ್ಲರೂ ತುಂಬಾ ಗೌರವದಿಂದ ಕಾಣುತ್ತಿದ್ದರು, Positive Discrimination ಅನ್ನುವುದು ನನಗೆ ಅನ್ವಯಿಸಿತ್ತು ಅಂದರೆ ತಪ್ಪಿಲ್ಲ.

ಈ ಸಮಸ್ಯೆಗಳನ್ನು ಎದುರಿಸಿ ನಮ್ಮ career ಮುಂದೆವರಿಸಿ ಮಕ್ಕಳನ್ನು ಬೆಳೆಸಿ ಅವರಿಗೆ ನಮ್ಮ ಸಂಸ್ಕೃತಿ ಮತ್ತು ಭಾಷೆ ಪರಿಚಯ ಮಾಡುವುದು ದೊಡ್ಡ ಕೆಲಸವಾಗಿತ್ತು.  ಇದಕ್ಕೆ 1983 ರಲ್ಲಿ ಪ್ರಾರಂಭವಾದ ಕನ್ನಡ ಬಳಗ ಇಲ್ಲಿ ನೆರವಾಗಿದ್ದು ನಮ್ಮ ಅಧೃಷ್ಠ.

ನಿಮಗೆ ಈ ಪುರಾಣ ಕೇಳಿ ಸಾಕಾಗಿರಬಹುದು, ಈಗ ನಮ್ಮ ಬಳಗದ ವಿಚಾರ .

                             -ರಾಮಮೂರ್ತಿ,ಬೇಸಿಂಗ್ಸ್ಟೋಕ್

(ಮುಂದಿನ ವಾರ- ಕನ್ನಡ ಬಳಗ ಬೆಳೆದು ಬಂದ ದಾರಿ)