ಕತೆಯಾಯಿತು  ಮರ

  • ಯೋಗೀಂದ್ರ ಮರವಂತೆ

ನೂರ್ಕಾಲ ಬದುಕಿದರೆ ಮಾನವರಿಗೊಂದು ವಿಶೇಷ ಸಾಧನೆ. ಕೇವಲ ಆಯಸ್ಸು ವಿಶೇಷತೆಯ ಮಾನದಂಡವಾಗದು. ಸ್ಥಳದ ನಾವಿನ್ಯತೆ, ಜನಪ್ರಿಯತೆ ಅಲ್ಲಿನ ವೈಶಿಷ್ಟ್ಯವನ್ನು ಅವಲಂಬಿಸಿರುತ್ತದೆ. ಇಂಗ್ಲೆಂಡ್, ಸ್ಕಾಟ್ಲೆಂಡಿನ ಗಡಿಯುದ್ದಕ್ಕೂ ರೋಮನ್ನರು ಕಟ್ಟಿದ ಹೆಡ್ರಿಯನ್ ಗೋಡೆ (ಪಾಗಾರ) ಐತಿಹಾಸಿಕ ಕುರುಹು. ಆ ಪಾಗಾರ ಮುರಿದು ಬಿದ್ದ, ಎರಡು ಗುಡ್ಡಗಳ ನಡುವೇ ಬಳುಕುವ ಸೊಂಟದಂದದ ಜಾಗೆಯಲ್ಲಿ ಸುಮಾರು ನೂರೈವತ್ತು ವರ್ಷಗಳಿಂದ ಸ್ವತಂತ್ರವಾಗಿ ಹರಡಿ ಸೊಂಪಾಗಿ ಬೆಳೆದಿದ್ದ ಚೆಲುವೆ ಸಿಕಮೋರ್ ಗ್ಯಾಪ್ ಮರ. ಸಿಕಮೋರ್ ಮರಗಳು ಸರಿ ಸುಮಾರು ೩ ೦ ೦ -೪ ೦ ೦ ವರ್ಷಗಳ ಕಾಲ ಬಾಳ ಬಲ್ಲವು. ಮರಗಳ ಜಗತ್ತಿನಲ್ಲಿ ೩ ಶತಮಾನಗಳ ಬಾಳ್ವೆ ಏನೇನೂ ಅಲ್ಲ. ಸಹಸ್ರಾರು ವರ್ಷಗಳ ಕಾಲ ಬದುಕಿ ಮನುಕುಲದ ಉನ್ನತಿ ಅವನತಿಯ ಹಾದಿಯನ್ನೆಲ್ಲ ಅವಲೋಕಿಸುವ ಮರಗಳು ಜಗತ್ತಿನ ತುಂಬೆಲ್ಲ ಕಾಣ ಸಿಗುತ್ತವೆ. ಇಂದಿನ ಲೇಖನ ನೀವು ಊಹಿಸಿದಂತೆ ನಾರ್ಥಂಬಲ್ಯಾನ್ಡ್ ನ ಪ್ರಸಿದ್ಧ ಸಿಕಮೋರ್ ಗ್ಯಾಪ್ ಮರದ ಕಥೆ. ಯೋಗೀಂದ್ರ ಅವರ ಬರಹದಲ್ಲಿ ಹಿಂದೆ ನಾವು ಕಂಡಂತೆ ಅಮೂರ್ತವನ್ನು ಮೂರ್ತವಾಗಿಸುವ, ನಿರ್ಜಿವವನ್ನು ಸಜೀವಗೊಳಿಸುವ ವೈಶಿಷ್ಟ್ಯತೆ ಇದೆ. ಅದೇ ಹೊಳಹಿನಲ್ಲಿ ಮರವನ್ನು ಅವರು ಮಾನವ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಿಸಿದ್ದಾರೆ. ಈ ಲೇಖನವನ್ನು ಓದುವಾಗ ಕರುಣೆ, ಜಿಗುಪ್ಸೆ, ಕ್ರೌರ್ಯ, ಮತ್ಸರ, ಕುಹಕತೆ, ಇನ್ನಿತರ ಭಾವಗಳು ನಿಮ್ಮಲ್ಲಿ ಹೊಮ್ಮುವುದು ಖಚಿತ. ಕೊನೆಯಲ್ಲಿ ಮಾನವನ ಕ್ರೌರ್ಯಕ್ಕೆ ಸರಿ ಸಮನಾಗಿ ಪ್ರಕೃತಿ ಹಾಗೂ ಮಾನವನ ಧನ್ವಂತರಿ ಸ್ಪರ್ಶದ ಪರಿಣಾಮವನ್ನೂ ಕಾಣಬಹುದು.

-ಸಂಪಾದಕ

ಸಿಕಾಮೋರ್ ಗ್ಯಾಪ್ ಮರ ತನ್ನ ಉಚ್ಛ್ಛ್ರಾವಸ್ಥೆಯಲ್ಲಿ (ಚಿತ್ರ ಕೃಪೆ : ಅಂತರ್ಜಾಲ)

ಈಗಷ್ಟೇ ಕಳೆದ,  ಮೇ ತಿಂಗಳ ಒಂಬತ್ತನೆಯ ತಾರೀಕಿನಂದು  ಜಗತ್ತಿನ ಯಾವ ಯಾವ ನ್ಯಾಯಾಲಯದಲ್ಲಿ ಎಷ್ಟೆಷ್ಟು  ವಾದ ಪ್ರತಿವಾದ ನಡೆಯಿತೋ  ಗೊತ್ತಿಲ್ಲ, ಯಾರು ಕೊಲೆಗಾರ ಅಲ್ಲದಿದ್ದರೆ  ವಂಚಕ ಎಂದು ಸಾಬೀತಾಯಿತೋ ತಿಳಿದಿಲ್ಲ . ಎಷ್ಟು ಆಪಾದಿತರಿಗೆ ಶಿಕ್ಷೆಯ  ಘೋಷಣೆ , ಇನ್ನೆಷ್ಟು ನಿರಪರಾಧಿಗಳ ಖುಲಾಸೆ ಎಂದು ಹೇಳುವುದು ಅಸಾಧ್ಯ.
ಆದರೆ ಇಂಗ್ಲೆಂಡ್ ನ ಉತ್ತರ ಗಡಿಯ ನ್ಯೂ ಕಾಸಲ್ ಕ್ರೌನ್  ಕೋರ್ಟಿನ  ನ್ಯಾಯಾಧೀಶರು ಆ ದಿನದ  ಅತ್ಯಂತ ವಿಶಿಷ್ಟ ತೀರ್ಪೊಂದನ್ನು ನೀಡಿದ್ದರು. ಆ ತೀರ್ಪು , ಆ ದಿನದ ಮಾತ್ರವಲ್ಲ ,  ಇಡೀ ವರ್ಷದ, ದಶಕದ, ಶತಮಾನದ,  ಅಲ್ಲದಿದ್ದರೆ ಯಾವ ನ್ಯಾಯ ವ್ಯವಸ್ಥೆಯೂ ಎಂದೂ ಉಚ್ಛರಿಸಿರಲಾರದ  ಅಪೂರ್ವ ತೀರ್ಪೂ  ಆಗಿದ್ದಿರಬೇಕು. ಅಂದು ಕಟಕಟೆಯಲ್ಲಿ ನಿಂತಿದ್ದ ಇಂಗ್ಲೆಂಡ್ ನ ಉತ್ತರ-ಪಶ್ಚಿಮ (ವಾಯುವ್ಯ) ಪ್ರಾಂತ್ಯದ ಇಬ್ಬರು ಸಾಮಾನ್ಯ ವ್ಯಕ್ತಿಗಳ ಕಿಡಿಗೇಡಿತನ ಸಾಬೀತಾಗಿತ್ತು.  ಅವರೇ  ಅಪರಾಧಿಗಳು ಎಂದು ತೀರ್ಪು ಹೊರಬಿದ್ದಿತ್ತು ,  ಅಪರಾಧಕ್ಕೆ ತಕ್ಕುದಾದ ಶಿಕ್ಷೆ ಮುಂದಿನ ತಿಂಗಳು ಜುಲೈಯಲ್ಲಿ ನಿರ್ಧಾರವಾಗಲಿದೆ  ಎಂದೂ ತಿಳಿಸಲಾಗಿತ್ತು.

ಆರೋಪಿಗಳಿಗೆ ಶಿಕ್ಷೆ ಆಗುವುದೇನೂ ಹೊಸತಲ್ಲ ಬಿಡಿ.  ಅಂದು ಆರೋಪಿಯಿಂದ ಅಪರಾಧಿಗಳಾಗಿ ಬದಲಾದವರು ವಾಯುವ್ಯ ಇಂಗ್ಲೆಂಡ್ ನ ಕಂಬ್ರಿಯ  ಅಥವಾ ಅದೇ ಪ್ರಾಂತ್ಯದ ವಿಶ್ವವಿಖ್ಯಾತ ಹೆಸರಾದ  ಲೇಕ್ ಡಿಸ್ಟ್ರಿಕ್ಟ್ ಪ್ರದೇಶದ  ವಾಸಿಗಳು . ಅವರೊಂದು   ಕುಚೋದ್ಯವನ್ನು ಮಾಡಿದ್ದರು. ಸುಮಾರು ಎರಡು ವರ್ಷಗಳ ಹಿಂದಿನ ನಡುರಾತ್ರಿಗೆ, ತುಸು ದೂರ  ಕಾರು ಓಡಿಸಿಕೊಂಡು ಹೋಗಿ  ಆಮೇಲೆ ಇಪ್ಪತ್ತು ನಿಮಿಷ ನಡೆದು  ಗರಗಸ ಹಿಡಿದು ನಾರ್ಥಂಬರಲ್ಯಾಂಡ್ ಎನ್ನುವ ಪ್ರದೇಶಕ್ಕೆ ಬಂದಿದ್ದರು. ಜೋರು ಗಾಳಿ ಬೀಸುವ ತಣ್ಣಗಿನ ಹವೆಯ ಆ ರಾತ್ರಿ  ಅಲ್ಲಿದ್ದ ಒಂದು ಪುರಾತನ ವೃಕ್ಷವನ್ನು ವಿನಾಕಾರಣ ಕಡಿದಿದ್ದರು. ಸಕಾರಣವಾಗಿಯಾದರೂ ಒಂದು ಮರವನ್ನು ಕಡಿಯಬಹುದೇ ಎನ್ನುವುದೇ ಒಂದು ದೊಡ್ಡ ಜಿಜ್ಞಾಸೆ. ಮರಗಳಿಗೆ ವಿವೇಚನೆ ಇದ್ದರೆ , ಅದಕ್ಕೆ ತಕ್ಕುದಾಗಿ ಮಾತೂ  ಬಂದಿದ್ದರೆ ಅವುಗಳ ಅಭಿಪ್ರಾಯ  ಏನಿರುತ್ತಿತ್ತೋ? ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದೇ  ಎನ್ನುವ ಪ್ರಶ್ನೆಗೆ ಮನುಷ್ಯರು ನೀಡಬಹುದಾದ  ಉತ್ತರಕ್ಕಿಂತ ಮರಗಳು  ನೀಡುವ ಉತ್ತರ ಬಹಳ ಭಿನ್ನ ಇರಲಿಕ್ಕಿಲ್ಲ. ಹಾಗಂತ  ಭೂಮಿ ಆಕಾಶಗಳ ಪ್ರತಿ ಅಂಗುಲಕ್ಕೂ  ಅನಭಿಷಕ್ತ ದೊರೆಯಂತೆ ವರ್ತಿಸುವ ಮನುಷ್ಯರಿಗೆ ಮರಗಳನ್ನು ಕಡಿಯಬಹುದೇ ಎನ್ನುವ ಪ್ರಶ್ನೆಯೇ  ಅಪ್ರಸ್ತುತ ವಿಲಕ್ಷಣ ವಿನೋದವಾಗಿ ಕಂಡೀತು.

ಇರಲಿ, ಅಂತೂ ಆ ಇಬ್ಬರು ಜೊತೆಯಾಗಿ ಎಲ್ಲ ಅರ್ಥ ಜಿಜ್ಞಾಸೆಗಳನ್ನು ಮೀರಿ ಮರವೊಂದನ್ನು ಕಡಿದಿದ್ದರು. ಹಾಗೆ ತಾವು ಕಡಿದು ಒರಗಿಸಿದ ಮರದ ದಿಮ್ಮಿ ,ತೊಗಟೆ, ಎಲೆ, ಟೊಂಗೆ, ಟಿಸಿಲು, ಬೇರು ನಾರು ಯಾವುದೂ ಆ ಮರಕಟುಕರಿಗೆ ಬೇಕಿರಲಿಲ್ಲ. ಕಟ್ಟಿಗೆಗಾಗಿ ಮಾರಿ ಹಣ ಮಾಡುವ ಉದ್ದೇಶವೂ  ಅವರದಾಗಿರಲಿಲ್ಲ. ಯಾರೋ ನೆಟ್ಟ, ಯಾರದೋ ಇಚ್ಛೆಯಿಂದಾಗಿ ಆ ಸ್ಥಳದಲ್ಲಿ ಬೆಳೆದ, ನಿತ್ಯ ಜೀವನ್ಮುಖಿ  ಪ್ರಕೃತಿಗೆ ಆ ಪ್ರದೇಶದಲ್ಲೊಂದು ಹೊಸ ಆಯಾಮ ನೀಡಿದ, ಭೂಮಿ ಬಾನು ,ನಾಡು ಕಾಡು, ಹುಲ್ಲು ಹಸಿರು, ಕಲ್ಲು ಮಣ್ಣುಗಳು ಒಂದಾಗಿ ನಲಿಯುವ, ಬೆಟ್ಟ ಕಣಿವೆಗಳು ಒಂದಾಗಿ ಕುಣಿಯುವ  ಜಾಗದಲ್ಲಿ  ಬಲಿತ, ಯಾರಿಗೆ ಯಾವ ತೊಂದರೆಯನ್ನೂ ಕೊಡದ, ಸಾಧ್ಯ ಆದರೆ ತಂಪು ನೆರಳು ಶುದ್ಧ ಗಾಳಿ ಮತ್ತೆ ನಯನ ಮನೋಹರ ದೃಶ್ಯವನ್ನು ಸಹಜವಾಗಿ ಬಿಡಿಸುತ್ತ  ಅಸಂಖ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತ ಪ್ರಸಿದ್ಧವಾಗಿದ್ದ ಮರವೊಂದು  ಅಚಾನಕ್ ಇಲ್ಲದಿದ್ದರೆ ಜಗತ್ತು ಹೇಗೆ ಪ್ರತಿಕ್ರಿಯಿಸಬಹುದು  ಎಂದು ಆ ಇಬ್ಬರಿಗೆ ನೋಡಬೇಕಿತ್ತು. ಅಷ್ಟೇ. ಬರೇ ಅಷ್ಟೇ. ಒಂದು ಮರವನ್ನು ಕಡಿಯಲು ಅವರಿಗಿದ್ದದ್ದು ಅದೊಂದೇ  ಕ್ಷುಲ್ಲಕ ಕಾರಣ-ಪ್ರೇರಣೆ. ಕಾಲ, ಭೂಮಿ, ಜೀವಿ, ಜೀವನ  ಸಂದರ್ಭ ಎಲ್ಲವನ್ನು  ಒಂದು ಕ್ಷಣಕ್ಕಾದರೂ ಅಪಹಾಸ್ಯ ಮಾಡಲು ಅವರು ಕಂಡುಕೊಂಡ ದಾರಿ, ಪುರಾತನ ಚಾರಿತ್ರಿಕ ಸಿಕಮೋರ್ ಮರವನ್ನು ಕಡಿಯುವುದು. ಮತ್ತೆ  ಆ ಮರದ ಬಗ್ಗೆ ಕೇಳಿದವರ, ನೋಡಿದವರ, ಫೋಟೋ ತೆಗೆದವರ, ನೆರಳಲ್ಲಿ ಒಂದು ಘಳಿಗೆ ಕುಳಿತವರ, ತಮ್ಮ ಮೃತ ಆಪ್ತರ ಬೂದಿಯನ್ನು ಮರದ ಆಸುಪಾಸಲ್ಲಿ ಚೆಲ್ಲಿ ಆರ್ದ್ರರಾದವರ ಅಸಹಾಯಕತನ ಸಂಕಟವನನ್ನು ನೆನೆದು ಖುಷಿ ಪಡುವುದಿತ್ತು.  ಒಟ್ಟಾರೆ ಆ  ಮರಕಟುಕರಿಂದ ,
ಸುಮಾರು ೧೫೦ ವರ್ಷಗಳ ಹಿಂದೆ ನೆಡಲ್ಪಟ್ಟ ಸಸಿ ಮರ ಹೆಮ್ಮರವಾಗಿ ಬೆಳೆದು ಜಗತ್ತಿನ ಮೂಲೆಮೂಲೆಯ  ಪ್ರವಾಸಿಗಳಿಗೆ ಪರಿಸರ ಪ್ರೇಮಿಗಳಿಗೆ, ಸಿನೆಮಾ ನಿರ್ದೇಶಕರಿಗೆ, ಇವರ್ಯಾರೂ ಅಲ್ಲದ ಜನಸಾಮಾನ್ಯರಿಗೆ,  ಅಷ್ಟೇ ಏಕೆ ಇಡೀ ಈಶಾನ್ಯ ಇಂಗ್ಲೆಂಡಿಗೆ
ಹೆಗ್ಗುರುತೇ  ಆಗಿದ್ದ “ಸಿಕಮೋರ ಗ್ಯಾಪ್ ಮರ ” ಅಂದು ಕಡಿಯಲ್ಪಟ್ಟು ನೆಲದ ಮೇಲೆ ಧೊಫ್ ಎಂದು ಬಿದ್ದಿತ್ತು. ಕಡಿಯಲ್ಪಟ್ಟ ನಡುರಾತ್ರಿಯಿಂದ ಬೆಳಗಿನ ತನಕವೂ ಆ ಮರವನ್ನು ತಿಳಿದವರು ಎಲ್ಲೆಲ್ಲಿ ಹೇಗೇಗೆ ಇದ್ದರೂ ಅವರಿಗೆಲ್ಲ ತಮ್ಮ ಜಗತ್ತು ಏನೂ ಬದಲಾಗದೆ ನಿನ್ನೆಯಂತೆಯೇ ಇದೆ ಎನ್ನುವ ಭ್ರಮೆಯೇ  ಮುಂದುವರಿದಿತ್ತು.  ಹಾಗಂತ ಬೆಳಗಾಗುತ್ತಲೇ, ಒಂದು ಕೆಟ್ಟ ಹಾಸ್ಯಕ್ಕಾಗಿ ಮಾಡಿದ ಕೃತ್ಯ ನೂರೈವತ್ತು  ವರ್ಷಗಳ ಇತಿಹಾಸದ ಹಾದಿ ಬದಲಿಸಿತ್ತು. ೨೦೨೩ರ ಸೆಪ್ಟೆಂಬರ್ ೨೮ ರ ಬೆಳಿಗ್ಗೆ ಆ ಮರವನ್ನು ನೋಡಿ, ಕೇಳಿ, ತಿಳಿದಿದ್ದ ಎಲ್ಲರಿಗೂ ಆಘಾತ, ದುಗುಡ, ಹತಾಶೆ ಕಾದಿತ್ತು.

ನಿತ್ಯವೂ ಜಗತ್ತಿನ ಮೂಲೆಮೂಲೆಗಳಲ್ಲಿ  ಮರಗಳು ಉರುಳುವುದು, ಗಿಡಗಳನ್ನು ಸವರುವುದು, ಕಟ್ಟಡವನ್ನು ಎಬ್ಬಿಸುವುದು, ರಸ್ತೆಯನ್ನು ಹಾಸುವುದು ಅಭಿವೃದ್ಧಿಯ ಸಂಕೇತವಾಗಿರುವಾಗ ಈಶಾನ್ಯ ಇಂಗ್ಲೆಂಡಿನ ಸಣ್ಣ ಊರಿನ ಹಳೆಯ ಮರವನ್ನು ಉರುಳಿಸಿದವರು ಯಾಕೆ
ಬಂಧನಕ್ಕೊಳಗಾದರು?  ಬಂಧಿಸಲ್ಪಟ್ಟವರನ್ನು ನ್ಯಾಯಾಲಯ ಏಕೆ  ಅಪರಾಧಿ ಎಂದು ತೀರ್ಮಾನಿಸಿತು? ಮನುಷ್ಯರಿಗೆ ಹೀಗೊಂದು ಪ್ರಶ್ನೆ ಬರುವ ಸಾಧ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ ನಿತ್ಯವೂ ಕಡಿಯಲ್ಪಡುವ ಅಷ್ಟೇನೂ ಪ್ರಸಿದ್ಧವಲ್ಲದ ಅತಿ ಸಾಮಾನ್ಯ ಮರಗಳ
ಸಂತತಿಗಾದರೂ ಹೀಗೊಂದು ಸಂದೇಹ ಕಾಡೀತು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ , ಇಂತಹದ್ದೆಂದು ದಾಖಲಾಗದ ದಿನದಂದು ವಕೀಲ, ಅನ್ವೇಷಕ ಮತ್ತೆ ಸದ್ರಿ ಸ್ಥಳದ ಅಂದಿನ ಮಾಲೀಕ ಜಾನ್ ಕ್ಲೇಟನ್ ಅಲ್ಲಿನ ಸುಂದರ ಪರಿಸರಕ್ಕೆ ಪೂರಕವಾಗಲಿ ಎಂದು  ಈ ಆ ಸಿಕಮೊರ್ ಸಸಿಯನ್ನು  ನೆಟ್ಟಿದ್ದ, ಇತಿಹಾಸ
ಪ್ರಸಿದ್ಧ ಹ್ಯಾಡ್ರಿಯನ್ ಗೋಡೆಯ ಪಕ್ಕದಲ್ಲಿ.   ರೋಮನ್ನರು ಇಂಗ್ಲೆಂಡಗೆ ಕಾಲಿಟ್ಟ ಆರಂಭಿಕ ಕಾಲವಾದ  ಒಂದನೆಯ ಶತಮಾನದಷ್ಟು ಹಿಂದೆಯೇ ೧೩೫ ಕಿಲೋಮೀಟರು ಉದ್ದದ ಆ ಗೋಡೆ  ಕಟ್ಟಲ್ಪಟ್ಟಿತ್ತು. ಆಧುನಿಕ ಕಾಲದಲ್ಲಿ  ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಗಳ
ಗಡಿಯಂತೆಯೂ ಕಾಣುವ ಹ್ಯಾಡ್ರಿಯನ್ ಗೋಡೆಯ ಉತ್ಖತನದಲ್ಲಿ  ಜಾನ್ ಕ್ಲೇಟನ್ ಐವತ್ತು ವರ್ಷ ತೊಡಗಿಸಿಕೊಂಡವನು. ಅನಾದಿ ಕಾಲದ ಗೋಡೆಯ ಸುದೀರ್ಘ ಭವಿಷ್ಯದ ಬಗ್ಗೆ ಕಾಳಜಿ ಇದ್ದವನು. ಆ ಗೋಡೆಯ ಕಲ್ಲುಗಳನ್ನು ಅವರಿವರು ಒಂದೊಂದೇ ಜಾರಿಸಿ ಕೊಂಡುಹೋಗಿ
ಮುಂದೊಂದೊಂದು ದಿನ ಗೋಡೆಯೇ ನಶಿಸಿ ಹೋಗುವ ಬಗ್ಗೆ ಅವನಿಗೆ ಆತಂಕ ಇತ್ತು. ಶ್ರೀಮಂತ ಹಿನ್ನೆಲೆಯ ಆತ  ಕೆಲವು ಕೋಟೆಗಳ ಜೊತೆಗೆ ಹ್ಯಾಡ್ರಿಯನ್  ಗೋಡೆಯ ಇಪ್ಪತ್ತು ಮೈಲಿ ಉದ್ದದ ಭಾಗದ ವಾರೀಸುದಾರನೂ ಆಗಿದ್ದ. ಸಹಜವಾಗಿ ಗುಡ್ಡ ಕಣಿವೆಗಳು ಹತ್ತಿಳಿಯುವ ಆ  ಗೋಡೆಯ ಒಂದು ನೈಸರ್ಗಿಕ ತಗ್ಗಿನಲ್ಲಿ ಸಿಕಮೊರ್  ಸಸಿಯನ್ನು ನೆಟ್ಟಿದ್ದ.  ಸಸಿ ಬೆಳೆದದ್ದು, ಬಲವಾದದ್ದು, ಜಗತ್ತಿನ ದಿಕ್ಕುದೆಸೆಯ ಪ್ರವಾಸಿಗಳಿಗೆ ಆಗಂತುಕರಿಗೆ, ಅಭ್ಯಾಗತರಿಗೆ ನಿರ್ಮಲ ಘಳಿಗೆಯನ್ನು ಹಂಚಿದ್ದು,  ಮತ್ತೆ ಎರಡು ವರ್ಷಗಳ ಹಿಂದೆ ಇಬ್ಬರ ಗರಗಸಕ್ಕೆ ಬಲಿಯಾಗಿ ಹ್ಯಾಡ್ರಿಯನ್ ಗೋಡೆಯ ಮೇಲೆಯೇ  ಉರುಳಿ ಬಿದ್ದದ್ದು  ಎಲ್ಲವೂ ಮರವೊಂದರ ದೀರ್ಘ ಇತಿಹಾಸದ ಅನಿರೀಕ್ಷಿತ ಇತ್ತೀಚಿನ ಮುಂದುವರಿಕೆ.

ಉರುಳಿ ಬಿದ್ದ ಮರದ ಭವಿಷ್ಯವನ್ನು ಸಜ್ಜುಗೊಳಿಸುವ ಕಾರ್ಯ

೨೦೨೩ರ ೨೮ ಸೆಪ್ಟೆಂಬರ್ ಬೆಳಿಗ್ಗೆ, ಬಿದ್ದಿದ್ದ ಮರವನ್ನು ನೋಡಿದ ಸ್ಥಳೀಯರು ಆರಕ್ಷಕರಿಗೆ  ದೂರು ಕೊಟ್ಟಿದ್ದರು. ಸಣ್ಣ ಸಣ್ಣ ಇತಿಹಾಸ ಕತೆ ದಂತಕಥೆಗಳನ್ನೂ ಗೌರವಯುತವಾಗಿ ಸ್ಮರಿಸುವ, ಆರೈಕೆ ಮಾಡಿ ಕಾಯ್ದಿಟ್ಟು ಮತ್ತೆ ಪ್ರವಾಸಿಗರಿಗೂ ಆಸ್ಥೆಯಿಂದ ತೋರಿಸಿ ಹೆಮ್ಮೆ ಪಡುವ  ಸಂಸ್ಕೃತಿಯ ಇಂಗ್ಲೆಂಡನಲ್ಲಿ ಜಗತ್ಪ್ರಸಿದ್ಧ ಮರ ಉರುಳಿದ್ದು “ಹೈ ಪ್ರೊಫೈಲ್ ಕೇಸ್” ಆಗಿತ್ತು; ಮತ್ತೆ ಅಪರೂಪದ್ದೂ.  ತನಿಖೆಯಲ್ಲಿ
ಭಾಗವಹಿಸಿದ ವಿಧಿವಿಜ್ಞಾನ ತಂಡದ ಅಧಿಕಾರಿ ಹೇಳುವಂತೆ “ನನ್ನ ಮೂವತ್ತೊಂದು ವರ್ಷದ ಸೇವೆಯಲ್ಲಿ ಅಪರಾಧದ ಕುರುಹಿಗಾಗಿ ಮರವೊಂದರ ಪರೀಕ್ಷೆಯನ್ನು ಹಿಂದೆಂದೂ ಮಾಡಿದ್ದಿಲ್ಲ”. ತನಿಖೆ ಮುಂದುವರಿದು , ಸುಳಿವು ಸಿಕ್ಕಿ ೨೦೨೪ರ ಏಪ್ರಿಲ್ ಅಲ್ಲಿ
ಡೇನಿಯಲ್ ಮತ್ತು ಆಡಮ್ ಎನ್ನುವ ಕಂಬ್ರಿಯದ  ವಾಸಿಗಳನ್ನು   ಐತಿಹಾಸಿಕ ಮರವನ್ನು ಕಡಿದ, ಮರವನ್ನು ಬೀಳಿಸಿ ಚಾರಿತ್ರಿಕ  ಹ್ಯಾಡ್ರಿಯನ್  ಕಲ್ಲುಗೋಡೆಗೆ ಹಾನಿ ಮಾಡಿದ ಕ್ರಿಮಿನಲ್ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಕೋರ್ಟಿನಲ್ಲಿ  ವಾದ-ಪ್ರತಿವಾದಗಳು ಜರುಗಿ ಅವರ ಅಪರಾಧ ಸಾಬೀತಾದದ್ದು ಮೊನ್ನೆಮೊನ್ನೆಯ ಅಂದರೆ ಇದೇ ವರ್ಷದ ಮೇ ತಿಂಗಳಿನಲ್ಲಿ. ವಿಚಾರಣೆಯ ಉದ್ದಕ್ಕೂ ಅಪರಾಧವನ್ನು ಅಲ್ಲಗಳೆಯುತ್ತಿದ್ದ, ಒಬ್ಬರು ಇನ್ನೊಬ್ಬರನ್ನು ದೂಷಿಸುತ್ತಿದ್ದ , ೩೯ ಹಾಗು ೩೨ ವರ್ಷದ ಅಪರಾಧಿ ಜೋಡಿ, ಮರ ಬೀಳುವ  ಸಂದರ್ಭವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಬಿದ್ದ
ಮರದ ಗೆಲ್ಲೊಂದನ್ನು ಪದಕದಂತೆ ತಮ್ಮೊಡನೆ ಒಯ್ದಿದ್ದರು. ೧೯೯೧ರಲ್ಲಿ ನಿರ್ಮಾಣಗೊಂಡ ರಾಬಿನ್ ಹುಡ್ ಸಿನೆಮಾದ ಒಂದು ಮುಖ್ಯ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿದ್ದ ಮರ, ೨೦೨೩ರ ಸೆಪ್ಟೆಂಬರ್ ೨೭ರ ಜೋರು ಗಾಳಿಯ ನಡುಇರುಳಿನಲ್ಲಿ ಕಿಡಿಗೇಡಿಗಳ ಬ್ಯಾಟರಿ ಚಾಲಿತ ಗರಗಸಕ್ಕೆ ತುತ್ತಾಗಿ ಮುನ್ನಲೆಯಲ್ಲಿ ಅಂತಿಮ ಉಸಿರಳೆದದ್ದು ಎಂತಹ ವಿಪರ್ಯಾಸ! ನಿಮಿಷಗಳಲ್ಲಿ ಆರಂಭವಾಗಿ ಮುಗಿಯುವ ಮರ ಕಡಿಯುವ ಸಂದರ್ಭವನ್ನು ನೋಡಿದವರಲ್ಲಿ ವಿಭಿನ್ನ  ಭಾವನೆಗಳು ಹುಟ್ಟಬಹುದಾದರೂ, ಇನ್ನೇನು ಬೀಳಲಿರುವ ಮರಕ್ಕೆ, ಒಂದು ಕ್ಷಣಕ್ಕೆ ತನ್ನನು ಬದುಕಿಸಲು ಆ ರಾಬಿನ್ ಹುಡ್ ಆದರೂ ಬರಬಾರದಿತ್ತೇ ಎಂದೂ ಅನಿಸಿರಬಹುದು, ತನ್ನನ್ನು ನೆಟ್ಟು ಬೆಳೆಸಿದ  ಜಾನ್ ಕ್ಲೇಟನ್ ಕಣ್ಣೆದುರು ಬಂದಿರಬಹುದು. ತನ್ನ ನೆರಳಲ್ಲಿ ತಂಗಿ ಮುಂದುವರಿದ ಕಾಲ್ನಡಿಗೆಯವರು, ತನ್ನ ಆಸುಪಾಸಿನ ಕ್ಷಣಭಂಗುರದಲ್ಲಿ ಲೀನರಾಗಿ ಮೈಮರೆತ ಲಕ್ಷ ಲಕ್ಷ ಅನಾಮಿಕ ಅಜ್ಞಾತ ಪ್ರವಾಸಿಗರು ಸ್ಮರಣೆಗೆ ಬಂದಿರಬಹುದು. ಬಿಡಿ,  ಫೋನು ತಪಾಸಣೆಯಲ್ಲಿ  ದೊರೆತ ಆ ವಿಡಿಯೋ ತುಣುಕು, ಜನರಲ್ಲಿ
ಎಬ್ಬಿಸುವ ಭಾವಲಹರಿ ಏನೇ ಇದ್ದರೂ ಕಾನೂನು ತನಿಖೆಯ ಮಟ್ಟಿಗೆ ಅತಿ ಅಗತ್ಯವಾದ ಪುರಾವೆಯನ್ನು  ಒದಗಿಸಿತ್ತು. ಮತ್ತೆ ನ್ಯೂ ಕಾಸಲ್ ಕ್ರೌನ್  ಕೋರ್ಟ್ ಆ ಇಬ್ಬರನ್ನು ಅಪರಾಧಿ ಎಂದು ಘೋಷಿಸಲು ಪ್ರಮುಖ ಆಧಾರವಾಗಿ ಒದಗಿತ್ತು.

ಪ್ರಸಿದ್ಧ ಮರದ ಅಕಾಲಿಕ ಸಾವಿನ  ಸುದ್ದಿ ಇಂಗ್ಲೆಂಡಿನ ಒಳಗಿನಿಂದ, ಹೊರಗಿನಿಂದ ತೀವ್ರ ಪ್ರತಿಕ್ರಿಯೆ ಪಡೆದಿತ್ತು. ಸಿಟ್ಟು, ಆಘಾತ, ಆಶ್ಚರ್ಯಗಳು ಸಾಮಾಜಿಕ ಜಾಲತಾಣವನ್ನು ತುಂಬಿದವು. ಸುದ್ದಿ ಪತ್ರಿಕೆಯ ಮುಖಪುಟದಲ್ಲಿ, ವೆಬ್ ಪೇಜ್ ಗಳಲ್ಲಿ ವಸಂತ ವೈಶಾಖದ ಹಸಿರಿನಲ್ಲಿ,  ಶರತ್ ಶಿಶಿರಗಳ  ಹಿಮಹೊದಿಕೆಯಲ್ಲಿ ವಿಭಿನ್ನ ರೂಪದ ಮರದ  ಚಿತ್ರಗಳು ಕಾಣಿಸಿಕೊಂಡವು. ಕೆಲವರು ಭಾವುಕರಾಗಿ ಕವಿತೆಗಳನ್ನು ಕಟ್ಟಿ ಹಾಡಿದ್ದರು. ಕವಿತೆಯ ಸಾಲುಗಳನ್ನು  ಕೇಳಿದ ಕೆಲವರು ಕಣ್ಣೀರು ಹಾಕಿದರು. ಪ್ರಕೃತಿ ಸೃಜಿತ ಗಾಳಿಯ ನಿನಾದ, ಮನುಷ್ಯ ನಿರ್ಮಿತ  ಗರಗಸದ ಕರ್ಕಶ ಸದ್ದುಗಳು ಜೊತೆಯಾದ ಹಿನ್ನೆಲೆ ಸಂಗೀತದಲ್ಲಿ ಶವವಾಗುವ ಮರದ ಚಿತ್ರತುಣುಕು , ಸಾಮಾಜಿಕ ಮಾಧ್ಯಮದಲ್ಲಿ ಅನಾಥ ಅಸಹಾಯಕ ಸಾಕ್ಷಿಗಳಂತೆ ಓಡಾಡಿದವು.

೨೦೨೩ರ ಅಕ್ಟೋಬರನಲ್ಲಿ , ಕಡಿದುಬಿದ್ದ ಮರವನ್ನು ಖಂಡ ತುಂಡು ಮಾಡಿ ಕ್ರೇನ್ ಮೂಲಕ ಸಾಗಿಸಲಾಯಿತು. ಅಕಾಲಿಕ ಸಾವಿನ ಪುರಾತನ ಮರದ ಕತೆಯ ಮುಂದುವರಿದ ಪುಟವಾಗಿ, ಇಲ್ಲಿನ ಹಲವು ನೈಸರ್ಗಿಕ ತಾಣಗಳ ಉಸ್ತುವಾರಿ ವಹಿಸಿಕೊಂಡಿರುವ ನ್ಯಾಷನಲ್ ಟ್ರಸ್ಟ್ ಸಂಸ್ಥೆ ಆ
ಮರದಿಂದ ನಲವತ್ತೊಂಬತ್ತು ಸಸಿಗಳನ್ನು ಬೆಳೆಸಿ ದೇಶದ ಬೇರೆ ಬೇರೆ ಚ್ಯಾರಿಟಿ ಮತ್ತಿತರ ಸಂಸ್ಥೆಗಳಿಗೆ ನೀಡಿತು. ತನ್ನ ಕೊನೆಯ ಕಾಲದಲ್ಲಿ ನಲವತ್ತೊಂಬತ್ತು ಅಡಿ ಉದ್ದ ಇದ್ದ ಮರದ ನೆನಪಿಗಾಗಿ ಬೆಳೆಸಿದ  ೪೯ ಸಸಿಗಳನ್ನು ಚ್ಯಾರಿಟಿ   ಸಂಸ್ಥೆಗಳಿಂದ ಪಡೆಯಲು ಜನರಿಂದ  ಅರ್ಜಿಗಳನ್ನು ಆಹ್ವಾನಿಸಲಾಯಿತು. ೪೯ ಗಿಡಗಳನ್ನು ಪಡೆಯಲು ಯುನೈಟೆಡ್ ಕಿಂಗ್ಡಮ್ ನ ಬೇರೆಬೇರೆ ಭಾಗಗಳಿಂದ  ೫೦೦ ಅರ್ಜಿಗಳು ಬಂದಿದ್ದವು. ಪ್ರತಿಯೋರ್ವ ಅರ್ಜಿದಾರರೂ ತಮಗ್ಯಾಕೆ ಒಂದು ಸಸಿ ಬೇಕು ಎಂದು ಬರೆದಿದ್ದರು. ಸಸಿ ಹಂಚುವ ಅಭಿಯಾನವನ್ನು “ನಾಳಿನ ಭರವಸೆಗಾಗಿ ಮರಗಳು” ಎಂದೂ ಕರೆಯಲಾಗಿತ್ತು. ನಲವತ್ತೊಂಬತ್ತರಲ್ಲಿ ಒಂದು ಸಸಿ, ಹ್ಯಾಡ್ರಿಯನ್ ಗೋಡೆಯಿಂದ ಬಹಳವೇನೂ ದೂರದಲ್ಲಿರದ ಹೆಕ್ಸ್ಹಮ್ ಪ್ರಾಂತ್ಯದಲ್ಲಿ ಮುಂದಿನ ಚಳಿಗಾಲಕ್ಕೆ ನೆಲ ನೆಲೆ ಕಾಣಲಿದೆ.  ಹೋಲಿ ನ್ಯೂಟನ್ ಎನ್ನುವಾಕೆಯ ಸಮಾಧಿಯ ಬಳಿ. ಹದಿನೈದು ವರ್ಷದವಳಿದ್ದಾಗ ಸಂಬಂಧ ಕೊನೆಗೊಂಡದ್ದನ್ನು ಒಪ್ಪಲಾಗದ ಮಾಜಿ ಪ್ರಿಯಕರ ಆಕೆಯನ್ನು ಕೊಲೆ ಮಾಡಿದ್ದ. ಕೊಲೆಯಾದ
ಮಗಳ ನೆನಪಿನಲ್ಲಿ ಬದುಕುತ್ತಿರುವ ಆಕೆಯ ಹೆತ್ತವರು ತಾವು ಪಡೆಯಲಿರುವ ಸಿಕಮೋರ್ ಸಸಿ ಅಳಿದ  ಮಗಳನ್ನು ಸ್ಮರಿಸುವ ಹೊಸ ದಾರಿಯಾಗಿದೆ ಎಂದು ಖುಷಿ ಪಡುತ್ತಿದ್ದಾರೆ. ಇನ್ನುಳಿದ ನಲವತ್ತೆಂಟು ಸಸಿಗಳೂ ಯು.ಕೆಯ ಬೇರೆ ಬೇರೆ ಭಾಗಗಳನ್ನು ಸೇರಿ ಅಲ್ಲೆಲ್ಲ,
ನಾಶವಾದ ಮರದ ಕತೆಯನ್ನು ಹೇಳಲಿವೆ  ನೆನಪನ್ನು ಹಸಿರಾಗಿಡಲಿವೆ .

ಒಂದು ಸಣ್ಣ ಸಹಜ ಸುಂದರ ಖುಷಿಯನ್ನು  ನಿರಂತರವಾಗಿ  ನೂರೈವತ್ತು ವರ್ಷಗಳ ಕಾಲ ಹಂಚಿದ,  ಪ್ರಾಕೃತಿಕ ದ್ರಶ್ಯಕಾವ್ಯದಲ್ಲಿ ಭೂಮಿ ಆಕಾಶದಷ್ಟೇ ಚಿರಂತನ ಎನಿಸಿದ ಮರ, ಕ್ಷುಲ್ಲಕ ಕಿಡಿಗೇಡಿತನದ ಪರಿಣಾಮವಾಗಿ  ಇಲ್ಲದಾದಾಗ, ನಿತ್ಯವೂ ನಮ್ಮನ್ನು ಕಾಯುವ
ಬದುಕಿನ ಭರವಸೆಯೇ ಕರಗಿ ಹೋಗುವ ಸಾಧ್ಯತೆ ಇದೆ. ಆದರೆ ಅಂತಹ ವಿಷಣ್ಣ ಸಾಧ್ಯತೆಯನ್ನು ಎದುರಿಸುವ ,ಮತ್ತೆ ಚೇತೋಹಾರಿ ಉತ್ಸಾಹವನ್ನು ನಮ್ಮ ಒಳಹೊರಗೆ ತುಂಬಿಸುವ  ಹೋರಾಟವನ್ನು ನಲವತ್ತೊಂಬತ್ತು ಸಸಿಗಳು ಆಗಲೇ ಆರಂಭಿಸಿವೆ. ಇನ್ನು ಈಶಾನ್ಯ ಇಂಗ್ಲೆಂಡಿನ ಹ್ಯಾಡ್ರಿಯನ್ ಗೋಡೆಯ ಪಕ್ಕದ  ಕಡಿದ ಬುಡದಲ್ಲೂ  ಚಿಗುರೆಲೆಗಳು  ಮೊಳೆತು “ಹೊಸತು ಜನ್ಮ”ದ  ಸೂಚನೆ ಕಾಣುತ್ತಿದೆ. ಒಂದು ವೇಳೆ ಆ ಮೊಳಕೆಗಳು ಚಿಗುರೆಲೆಗಳು ಬೆಳೆಯುತ್ತಲೇ ಹೋದರೆ ಮುಂದಿನ ಇನ್ನೂರು ವರ್ಷಗಳಲ್ಲಿ, ಎರಡು ವರ್ಷದ ಹಿಂದೆ ಬೀಳುವ ಮೊದಲಿನ  ಮರದಷ್ಟೇ ದೊಡ್ಡ ಮರವೊಂದು ಆಕಾರ ತಳೆಯಬಹುದು ಎಂದು ವೃಕ್ಷ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬರಡು ಬುಡವನ್ನೋ ಎಳೆಯ ಚಿಗುರನ್ನೋ ಅಥವಾ ಮುಂದೆಂದೋ ಅಲ್ಲೊಂದು ಮರ ಎದ್ದು ನಿಲ್ಲುವುದನ್ನೋ ಕನವರಿಸುತ್ತ  ಬರುತ್ತಿರುವವರಿಗೆ  “ಗೌರವದಿಂದ ನಡೆದುಕೊಳ್ಳಿ”ಎನ್ನುವ ಎಚ್ಚರಿಕೆಯ ಫಲಕ ಅಲ್ಲೇ  ತೂಗುಹಾಕಲ್ಪಟ್ಟಿದೆ. ಬಂದು ಮರಳುವವರಿಗೂ ,ಮರಳಿ ಬರುವವರಿಗೂ ,  ನಾಳಿನ  ಭರವಸೆ ಜೀವಂತವಾಗಿದೆ.

—————————

ಯೋಗೀಂದ್ರ ಮರವಂತೆ

ಅರವತ್ತರ ದಶಕದಲ್ಲಿ ಇಂಗ್ಲೆಂಡ್ ಕನ್ನಡಿಗನ ಬದುಕು-ರಾಮಮೂರ್ತಿ

ಬದುಕಲ್ಲಿ ಕೆಲವೊಂದು ಘಳಿಗೆಗಳು ಬರುತ್ತವೆ. ಆಗ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು  ಬದಲಾವಣೆಯನ್ನಷ್ಟೇ ತರದೆ ನಮ್ಮ ಬದುಕಿನ ಭವಿಷ್ಯವನ್ನೇ ಬದಲಾಯಿಸಿಬಿಡುತ್ತವೆ. ಅಲ್ಲಿಂದ ಮುಂದಕ್ಕೆ ಆ ನಿರ್ಧಾರಗಳಿಗೆ ಬದ್ದರಾಗಿ ಬದುಕನ್ನು ಕಟ್ಟಿಕೊಳ್ಳುವುದು, ಕಂಡುಕೊಳ್ಳುವುದು ಮಾತ್ರವೇ ನಮ್ಮ ಪ್ರಯತ್ನದ ಮಿತಿಯಲ್ಲಿ ಉಳಿಯುತ್ತದೆ.

ಹಾಗೊಂದು ಘಳಿಗೆಯಲ್ಲೇ ನಾವೆಲ್ಲ ಈ ಪರದೇಶಕ್ಕೆ ಕಾಲಿಟ್ಟಿರುವುದು.

ಕನ್ನಡದ ಒಬ್ಬ ಬುದ್ದಿವಂತ, ರೂಪವಂತ, ವಿದ್ಯಾವಂತ ಯುವಕನೊಬ್ಬ ತುಂಬಾ ವರ್ಷಗಳ ಹಿಂದೆ ಈ ನಿರ್ಧಾರವನ್ನು ತೆಗೆದುಕೊಂಡಾಗ ಕಾಲ ಬಹಳ ಭಿನ್ನ ಬಣ್ಣವನ್ನು ಹೊಂದಿತ್ತು. ತಾಯ್ನಾಡಿನ ಸಂಬಂಧಗಳ ಸೆಳೆತ ತೀವ್ರವಾಗಿತ್ತು.ಪರನಾಡಿನ ಈ ನೆಲದಲ್ಲಿ ವರ್ಣೀಯರ ಬಗೆಗಿನ ಧೋರಣೆಗಳು ’ಮುಕ್ತ ’ವಾಗಿ ವ್ಯಕ್ತವಾಗುತ್ತಿದ್ದ ಕಾಲವದು! ನಮ್ಮಲ್ಲಿ ಬಹುತೇಕರು ಇನ್ನೂ ಹುಟ್ಟೇ ಇರಲಿಲ್ಲ.

1965 ರಲ್ಲಿ ರಾಮಮೂರ್ತಿಯವರು ಇಂಗ್ಲೆಂಡಿಗೆ ಬಂದಾಗ ಅವರು ಇಲ್ಲಿ ಕಂಡ ಬದುಕು, ಸಮಾಜ, ಜನರ ಧೋರಣೆಗಳು, ರಾಜಕೀಯ ಬದಲಾವಣೆಗಳು, ಅನುಭವಿಸಿದ ಒಂಟಿತನ ಅಸದಳವಾದ್ದು. ಆ ವಾತವರಣದಲ್ಲಿ ಅವರಂತೆಯೇ ಇಲ್ಲಿಗೆ ಬಂದಿದ್ದ ಕರ್ನಾಟಕ ಮೂಲದ ಬೆರಳೆಣಿಕೆಯಷ್ಟು ಜನರನ್ನು ಹುಡುಕಲು ನಡೆಸಿದ ಯತ್ನ, ಆ ಮೂಲಕ ಈ ದೇಶದ ಅತ್ಯಂತ ಹಿರಿಯ ಕನ್ನಡ ಸಂಘ ಹುಟ್ಟಿದ ವಿಚಾರಗಳ ಬಗ್ಗೆ ಇವರು ಮಹತ್ತರವಾದ ಲೇಖನವನ್ನು ಬರೆದಿದ್ದಾರೆ. ಅಂದಿನವರ ಬದುಕಿನ ಬಗ್ಗೆ  ಮತ್ತು ಅವರಿದ್ದ ಅಂದಿನ ವಾತಾವರಣದ ಬಗ್ಗೆ ಅರಿಯದಿದ್ದಲ್ಲಿ, ಎಂತಹ ದಿನಗಳಲ್ಲಿ ಕೆಲವರು ಕನ್ನಡ ಸಂಘವೊಂದನ್ನು ಕಟ್ಟಲು ಪ್ರಯತ್ನ ಪಟ್ಟರೆಂಬುದು ನಮಗೆ ಅರಿವಾಗುವುದು ಕಷ್ಟ.

ಈ ತಲೆಮಾರಿನವರ ಬದುಕಿನ ಬಗ್ಗೆ ಕೇಳಿದರೆ, ದೀರ್ಘಕಾಲದ ನೆನಪುಗಳ ಸರಣಿಯನ್ನು ಹೊತ್ತ ಇಂತವರು ಭಾವೋದ್ವೇಗಗಳಿಲ್ಲದ ಚುಟುಕು ಉತ್ತರಗಳನ್ನು ಕೊಡುತ್ತಲೇ ಯಾವುದನ್ನ ಹೇಳಲಿ ಎನ್ನುವ ಯೋಚನೆಯಲ್ಲಿ ಮೌನವಾಗುತ್ತಾರೆ. ಆದರೆ ಅವರು ನೀಡುವ ಯಾಧೃಚ್ಛಿಕ ಮಾಹಿತಿಗಳಲ್ಲಿನ ಭಾವತೀವ್ರತೆಯನ್ನು ಅರಿಯುವುದು ಕಷ್ಟವೇನಲ್ಲ. ಇದೇ ತಿಂಗಳು 8 ನೇ ತಾರೀಖು, ಬ್ರಿಟಿಷ್ ಬರಹಗಾರ್ತಿ, ಪತ್ರಿಕೋದ್ಯಮಿ, ಭಾರತದ ಪಂಜಾಬ್ ಮೂಲದ ಅನಿತಾ ಆನಂದ್ ರೇಡಿಯೋ 4 ನಲ್ಲಿ ರಿಸರ್ವ್ ಬ್ಯಾಂಕಿನ ಮೂಲಕ £3 ಪಡೆದು  ಈ ರೀತಿ ಬಂದ ಏಶಿಯನ್ನರ ಬಗ್ಗೆ ಅತ್ಯಂತ ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹಲವರನ್ನು ಸಂದರ್ಶಿಸಿದರು.ಆ ವೇಳೆಗಾಗಲೇ ರಾಮಮೂರ್ತಿಯವರು ತಮ್ಮ ನೆನಪಿನ ಬುತ್ತಿಯನ್ನು ಅನಿವಾಸಿಗಾಗಿ ಬಿಚ್ಚಿಟ್ಟಿದ್ದರು.

ಶ್ರೀಯುತ ರಾಮಮೂರ್ತಿಯವರು ಕನ್ನಡ ಬಳಗ ಹುಟ್ಟಿದ ಮತ್ತು ಬೆಳೆದು ಬಂದ ಬಗ್ಗೆ ಮಹತ್ತರವಾದ ಬರಹ- ದಾಖಲೆಯನ್ನು ಸೃಷ್ಟಿಸಿದ್ದಾರೆ.  ಈ ಲೇಖನ ಸಂದೇಶ ಎನ್ನುವ  ಸ್ಮರಣ ಸಂಚಿಕೆಯಲ್ಲಿ ಮುಂದಿನ ವರ್ಷ ಪ್ರಕಟವಾಗುವ ಮುನ್ನವೇ ಅನಿವಾಸಿಯ ಓದುಗರನ್ನು ತಲುಪಲಿದೆ. ಅವರ ಉದ್ದೇಶ ಮುಖ್ಯವಾಗಿ ಕನ್ನಡ ಬಳಗದ ಬಗ್ಗೆ ಬರೆಯುವುದೇ ಆಗಿತ್ತಾದರೂ ನನ್ನಂತವರ ಆಸಕ್ತಿ ಅವರ ಕಾಲದ ಬದುಕಿನ ಬಗ್ಗೆ ಅರಿಯುವುರಲ್ಲೇ ಹೆಚ್ಚಿನ ಉಮೇದನ್ನು ತೋರಿಸಿತ್ತು.ಒಂದನ್ನು ಅರ್ಥಮಾಡಿಕೊಂಡರೆ ಇನ್ನೊಂದರ ಮಹತ್ವವೂ ನಿಚ್ಚಳವಾಗಿ ಕಾಣಿಸುತ್ತದೆ ಎನ್ನುವ ಕಾರಣ ಕೂಡ.

ಐವತ್ತು ದಶಕಗಳ ಹಿಂದೆ ಈ ನೆಲದಲ್ಲಿ ಅವರು ಕಂಡುಕೊಂಡ ಹೊಸ ಬದುಕಿನ ಬಗೆಗಿನ ಅತ್ಯಂತ ಆಸಕ್ತಿದಾಯಕ ಬರಹವಿದು.  ಇದನ್ನು ಓದಿದ ನಂತರ, ಕಾಲ ತರುವ ಬದಲಾವಣೆಗಳ ಬಗ್ಗೆ, ನಮ್ಮ ಹಿರಿಯರಾದ ಕನ್ನಡಿಗರ ಬದುಕಿನ ಬಗ್ಗೆ, ನಿಮಗನ್ನಿಸಿದ್ದನ್ನು ಅಗತ್ಯವಾಗಿ ಬರೆದು ತಿಳಿಸಿ- ಡಾ.ಪ್ರೇಮಲತ ಬಿ.


  ಹಿಂದಿನ ಒಂದು ಕಥೆ…… 

ನಾನು 1965 ರಲ್ಲಿ ಇಂಗ್ಲೆಂಡ್ ಗೆ ಬಂದಾಗ ಇಲ್ಲಿ ಎಷ್ಟು ಜನ ಕನ್ನಡದವರಿದ್ದಾರೆ ಎನ್ನುವ ಪ್ರಶ್ನೆ ಬರಲಿಲ್ಲ ಮತ್ತು ಯೋಚನೆ ಸಹ  ಮಾಡಲಿಲ್ಲವೇನೋ. ಕಾರಣ, ಬರುವುದಕ್ಕೆ ಮುಂಚೆ ನನಗೆ ಇಲ್ಲಿ ನೆಲಸಿರುವ ಯಾರದೇ  ಮನೆಯವರ ಪರಿಚಯವೂ ಇರಲಿಲ್ಲ. ನಾನು  ಇಂಜಿನಿಯರ್ ಆಗಿ ಮಾಡುತಿದ್ದ LRDE ಎಂಬ ಸಂಸ್ಥೆ ಯಿಂದ  ಇಲ್ಲಿಗೆ ಕೆಲವು ತಿಂಗಳ ತರಬೇತಿಗೆ ಬಂದಿದ್ದ ಇಬ್ಬರು ಇಂಗ್ಲೆಂಡ್ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿದ್ದರು. ಆದರೆ ಇಲ್ಲಿಗೆ ಬಂದು ನೆಲಸುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಮತ್ತು ಯೋಚನೆಯೂ  ಬಂದಿರಲಿಲ್ಲ.

ಇಲ್ಲಿಗೆ ಬರಬೇಕಾದರೆ U.K  Home Office ನಿಂದ Employment Voucher ಪಡೆಯಬೇಕಾಗಿತ್ತು. ನನಗೆ ಯಾರೋ ಈ ವಿಚಾರ ಹೇಳಿದ್ದರು. ಅಂಚೆಯ ವಿಳಾಸ ಸಂಪಾದಿಸಿ ಒಂದು ಪತ್ರವನ್ನು ಟೈಪ್ ಮಾಡಿಸಿ ಪೋಸ್ಟ್ ಮಾಡಿ ಅದರ ಬಗ್ಗೆ ಮರತೆ . ಈ ಹೋಮ್ ಆಫೀಸ್ ಒಂದು ಸರಕಾರಿ ಕಚೇರಿ ಅಲ್ಲವೇ? ಇಂತಹ ಕಾಗದಗಳು ಎಷ್ಟೋ ಆದ್ದರಿಂದ ಅವರಿಂದ ಉತ್ತರ ಬರುವುದಿಲ್ಲ ಅಂತ ಭಾವಿಸಿ ಸುಮ್ಮನಾಗಿದ್ದೆ. ಆದರೆ ಸುಮಾರು 5-6 ತಿಂಗಳ ನಂತರ “On  Her Majesty’s Service ” ಲಕೋಟೆ ಯಲ್ಲಿ   Employment Voucher ಕೊಟ್ಟಿದ್ದೇವೆ ಇದರ ಅವಧಿ 6 ತಿಂಗಳು ಮಾತ್ರ ಎನ್ನುವ ಸಂದೇಶವು ಇತ್ತು. ಸರಿ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸ್ವಲ್ಪ ದುಡ್ಡು ಏರ್ಪಾರ್ಟ್ ಮಾಡಿ ಏರ್ ಇಂಡಿಯ ನಲ್ಲಿ one way ಟಿಕೆಟ್ ಬುಕ್ ಮಾಡಲಾಯಿತು, ನನ್ನ ಅಜ್ಜಿ,   ಒಳ್ಳೆ ಸರಕಾರಿ ಕೆಲಸ ಬಿಟ್ಟು ಯಾವುದೋ ದೇಶಕ್ಕೆ ಹೋಗುವುದಕ್ಕೆ  ನಿನಗೆ  ಹುಚ್ಚು ಎಂದರು. ಮುಂದಿನ ವರ್ಷ ಮಾದುವೆ ಮಾಡಿಕೊಳ್ಳುವ ಪ್ಲಾನ್ ಇತ್ತು ಆದರೆ  ಅದನ್ನು ಪ್ರೀಪೋನ್ ಮಾಡಿ ಆಗಸ್ಟ್ 1965 ರಲ್ಲಿ  ಮದುವೆಯೂ ಸರಳವಾಗಿ ನಡೆದು ಹೋಯಿತು! ಸಾಯಂಕಾಲ ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ  ಮೈಸೂರ್ ಅನಂತಸ್ವಾಮಿ ಅವರ ಸುಶ್ರಾವ್ಯ ಸಂಗೀತ ಕಛೇರಿ ನಡೆದ ಸುಂದರ ನೆನಪು .

ರಿಸರ್ವ್ ಬ್ಯಾಂಕ್ ನಿಂದ £3  ಪೌಂಡ್ ಪಡೆದು ಮುಂಬೈ ತಲುಪಿದಾಗ ಭಾರತ ಪಾಕಿಸ್ತಾನ್ ಯುದ್ಧ ಶುರುವಾಗಿ ವಿಮಾನ ಹೊರುಡುವದೇ ಸಂದೇಹವಿತ್ತು. ಆದರೆ ಎಲ್ಲವೂ ಸರಾಗವಾಗಿ ಆಗಿ ಲಂಡನ್ ಸೇರಿದೆ.

ಇಂಗ್ಲೆಂಡಿನಲ್ಲಿ 50 ವರ್ಷದ ಹಿಂದೆ ನೆಲಸಿದ್ದ ಕನ್ನಡದವರ ಬಗ್ಗೆ ಏನೂ ಮಾಹಿತಿ ನನ್ನಲ್ಲಿ  ಇರಲಿಲ್ಲ . ನಾನು ಬಂದ  ಕೆಲವೇ ತಿಂಗಳ ನಂತರ ನನ್ನ 3-4 ಸ್ನೇಹಿತರು  Employment Voucher ನಿಂದ ಬಂದರು, ಇವರೇ  ನಮ್ಮ ಕನ್ನಡ ಸಂಗಾತಿಗಳು ಅಷ್ಟೇ. ಒಂದು ಸಲ ಸ್ಥಳೀಯ ಟೆಲಿಫೋನ್ ಡೈರೆಕ್ಟರಿ ನಲ್ಲಿ  ರಾಮಸ್ವಾಮಿ ಅನ್ನುವ ಹೆಸರು ನೋಡಿ ಇವರು ಕನ್ನಡದವರು ಇರಬಹುದೆಂದು 4 ಪೆನ್ನಿ (ಹಳೆ ಪೆನ್ನಿ) ಗಳನ್ನೂ ಹಾಕಿ ಪೋಬ್ಲಿಕ್ ಫೋನ್ ಬಾಕ್ಸ್ ನಿಂದ ಕರೆ ಮಾಡಿದೆ. ಆದರೆ ಆ ಮನುಷ್ಯ ” Not interested ” ಅಂತ ಹೇಳಿ ಫೋನ್ ಇಟ್ಟ! ಕನ್ನಡದವರನ್ನು ಹುಡುಕುವ ಪ್ರಯತ್ನ ಪುನಃ ಮಾಡಲಿಲ್ಲ.

                      London streets and rooftops in 1960s

1960 ಕೊನೆಯಲ್ಲಿ  ಸುಮಾರಾಗಿ ವೈದ್ಯರು ಬರುವುದಕ್ಕೆ ಶುರುವಾಯಿತು. ಹೀಗೆ ನಮ್ಮ ಗೆಳೆಯ ದಿ : ರಾಜಾರಾಮ್ ಕಾವಳೆ ಅವರ ಪರಿಚಯು ಆಯಿತು.  ಆದರೆ ಭೇಟಿಯಾಗುವುದು ಸಮಸ್ಯೆ. ಕಾರು  ಇರಲಿಲ್ಲ. ರೈಲ್ ನಲ್ಲಿ ಪ್ರಯಾಣಕ್ಕೆ ಖರ್ಚು. ಟೆಲಿಫೋನ್ ಸಂಪರ್ಕ ಕಷ್ಟ.ಇನ್ನು ಮೊಬೈಲ್, ಇಂಟರ್ನೆಟ್ ಇವೆಲ್ಲ ಇಲ್ಲದ ಕಾಲವದು.

ಕ್ಷಮಿಸಿ,  ನಿಮ್ಮಲ್ಲಿ ಕೆಲವರಿಗೆ ನಾನು ಯಾವಾಗ ಬಂದೆ, ಏನು ಮಾಡಿದೆ ಅನ್ನೋ ವಿಷಯ ಕೇಳುವ ಆಸಕ್ತಿ ಅಥವಾ ಕುತೂಹಲ ಇಲ್ಲವೇನೋ. ಆದರೆ, ನಮ್ಮ ಸಂಪಾದಕರು ಐವತ್ತು ವರ್ಷದ ಹಿಂದೆ ನಮ್ಮ ಪೀಳೆಗೆಯವರು ಎದುರಿಸದ ಸಮಸ್ಯೆಗಳು ಮತ್ತು ಆಗಿನ ಸಮಾಜದ  ಪರಿಸ್ಥಿತಿ ಬಗ್ಗೆ ಬರೆಯಿರಿ ಅಂತ ಹೇಳಿದ್ದಾರೆ, ಆದ್ದರಿಂದ ಇಲ್ಲಿ ಕೆಲವು ಮಾತುಗಳು. 

ಇದು ಸುಮಾರು 1966-7 ರ ಸಮಯ. ಎರಡನೇ ಮಹಾಯುದ್ಧ ಮುಗಿದು ಕೇವಲ ಇಪ್ಪತ್ತು ವರ್ಷಗಳಾಗಿದ್ದರಿಂದ ಈ ದೇಶದ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲಿಲ್ಲ. ಹೊಸ ಮನೆಗಳು ಕಟ್ಟುವುದಕ್ಕೆ  ಶುರು  ಮಾಡಿದ್ದರು.  ನಮಗೆ ಬಾಡಿಗೆ ಮನೆ ಸಿಕ್ಕುವುದು ಸುಲಭವಾಗಿರಲಿಲ್ಲ. ನಮ್ಮ ವರ್ಣ ನೋಡಿ ಮನೆ ಬಾಡಿಗೆಗೆ ಇಲ್ಲ ಅಂತ ಸುಳ್ಳು ಹೇಳುವುದು ಸಾಮಾನ್ಯವಾಗಿತ್ತು. Race Relations Act ಅವಾಗ ಜಾರಿಯಲ್ಲಿ ಇರಲಿಲ್ಲ, ಐರಿಶ್ ಪ್ರಜೆಗಳಿಗೂ ಇದೇ ಗತಿ, ಕೆಲಸ ಸಿಗುವುದೇ ಕೆಲವರಿಗೆ ಕಷ್ಟವಾಗಿತ್ತು.

 

ಆದರೆ ನನಗೆ ಒಂದು ವಾರದಲ್ಲೇ ಕೆಲಸ ಸಿಕ್ಕಿತ್ತು. ವರ್ಷಕ್ಕೆ ಸಂಬಳ £850 ಅಂದರು.ಇಲ್ಲ £1000 ಕೊಡಿ ಅಂತ ಕೇಳಿ ಒಪ್ಪಿಸಿ ಸೇರಿದೆ.ಹತ್ತಿರದಲ್ಲೇ one bed ಫ್ಲಾಟ್ ಸಹ ವಾರಕ್ಕೆ £7 ರಂತೆ  ಬಾಡಿಗೆಗೆ ಸುಲಭವಾಗಿ ಸಿಕ್ಕಿತ್ತು. ನನ್ನ ಪತ್ನಿ ಸೀತ ಈಗ ಬಂದಿದ್ದಳು, ನಮ್ಮ  ಸಂಸಾರ Hounslow  ನಲ್ಲಿ  ಪ್ರಾರಂಭವಾಯಿತು. 

ಒಂದು ತಮಾಷಿ ವಿಚಾರ. ಸೀತ ಬರುವುದಕ್ಕೆ ಒಂದು ವಾರದ ಮುಂಚೆ ಹತ್ತಿರದಲ್ಲೇ ಇದ್ದ  ಈಗಿನ Boots  ನಲ್ಲಿ ಹೋಗಿ ಒಂದು ಬಾಟಲ್” ಸ್ನೋ” (Snow ) ಕೊಡಿ ಅಂತ ಕೇಳಿದೆ ಇದು 1966  ಬೇಸಿಗೆ ಕಾಲ ಪಾಪ ಆಕೆ ಕಕ್ಕಾಬಿಕ್ಕಿ ಯಾಗಿ ” you get snow only in winter dear, you can’t buy it in a bottle ” ಅಂದಳು, ನಾನು,  ಇಲ್ಲ ನೋಡಿ ಇದು ಬಾಟಲ್ ನಲ್ಲಿ ಬರುತ್ತೆ ಹೆಂಗಸರು ಮಖಕ್ಕೆ ಹಚ್ಚಿಕೊಳ್ಳುತ್ತಾರೆ ಅಂದೆ. ” Oh  you mean face  cream ” ಅಂದಳು. ನಗಬೇಡಿ,  ನನಗೆ ಇಂಡಿಯಾ ದಲ್ಲಿ Afghan Snow  ನೋಡಿದ್ದೆ , ಇಲ್ಲೋ ಇದು  ಸಿಗಬಹುದು ಅಂತ ಕೇಳಿದೆ ಅಷ್ಟೇ !! 25 ವರ್ಷದ ಹುಡಗನಿಗೆ ಇವೆಲ್ಲ ಹೊಸದು ಅಲ್ಲವೇ ?

ಆಗ ದೊಡ್ಡ ಸಮಸ್ಯೆ ನಮಗೆ ಬೇಕಾಗಿದ್ದ ದಿನಸಿ ಮತ್ತು ತರಕಾರಿಗಳು. ನಮ್ಮ ಮನೆ, sorry flat ಹತ್ತಿರ ಒಂದು ಸಣ್ಣ ಪಂಜಾಬಿ ಅಂಗಡಿ ಮಾತ್ರ ಇತ್ತು ಅಲ್ಲಿ ಅಕ್ಕಿ ಬೇಳೆ ಇತ್ಯಾದಿ ಇತ್ತು ಆದರೆ ತರಕಾರಿ ಇಲ್ಲ. ಇಲ್ಲಿ ಜನಕ್ಕೆ ಆಲೂಗೆಡ್ಡೆ ಈರುಳ್ಳಿ ಮತ್ತು ಕೋಸುಗೆಡ್ಡೆ ಮಾತ್ರ ಗೊತ್ತಿತ್ತು. ದೊಡ್ಡ Supermarket ಇರಲಿಲ್ಲ. ಹತ್ತಿರದಲ್ಲಿ sainsbury’s ಇತ್ತು. ಸುಮಾರು 30 ಅಡಿ ಉದ್ದ, 15 ಅಡಿ ಅಗಲದ ಅಂಗಡಿ. self Service ಇಲ್ಲ. ಅರ್ಧ ಪೌಂಡ್ (Metric ಇನ್ನೂ  ಇರಲಿಲ್ಲ )ಬೆಣ್ಣೆ ಅಥವಾ ಸಕ್ಕರೆ ಕೊಡಿ ಅಂತ ಕೇಳಬೇಕು.  ಹೊರಗೆ ಹೋಗಿ ತಿನ್ನುವುದು ದೊಡ್ಡ ಸಮಸ್ಯೆ ನಮ್ಮಂಥಹ ಸಸ್ಯಾಹಾರಿಗಳಿಗೆ. ಎಲ್ಲೊ ಒಂದು Indian Restaurant ಇತ್ತು.ಇಲ್ಲಿ ನಮ್ಮಂತ  ಗಿರಾಕಿಗಳು ಅವರಿಗೆ ಬೇಕಾಗಿರಲಿಲ್ಲ, ಇಲ್ಲಿಯ ಬಿಳಿಯವರು  ಮಾತ್ರ!

ನ್ಯಾಷನಲ್ ಫ್ರಂಟ್ ಅಂತ ಸಂಸ್ಥೆ ಆಗ ಪ್ರಭಲವಾಗಿತ್ತು. ಇವರು Non white  ಜನಗಳು ಈ ದೇಶಕ್ಕೆ ಬರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಏಪ್ರಿಲ್ 1968 ನಲ್ಲಿ Enoch Powell ಅನ್ನುವ ರಾಜಕಾರಣಿ “Rivers of Blood ” ಅನ್ನುವ ಭಾಷಣ ಮಾಡಿದ . ಈತ Conservative ಸರಕಾರದ ಮಂತ್ರಿ ಮತ್ತು ತುಂಬಾ ದೊಡ್ಡ ವಿದ್ಯಾವಂತ ಆದರೂ ಇಂತಹ ಭಾಷಣ ಕೇಳಿ ಪ್ರಧಾನ ಮಂತ್ರಿ ಎಡ್ವರ್ಡ್ ಹೀತ್ ಇವರನ್ನು ಖಂಡಿಸಿ ಮಂತ್ರಿಗಿರಿಯಿಂದ ತೆಗೆದರು. ಇದರಿಂದ ಈ ದೇಶದ ಜನರಿಗೆ ವರ್ಣ ಭೇದದ ಸಮಸ್ಯೆ ಅರಿವಾಗಿ ಮುಂದಿನ Race Relations Act ನ್ನು ಜಾರಿಗೆ ತರುವ ಪ್ರಯತ್ನ ಪ್ರಾರಂಭವಾಯಿತು ಅನ್ನುವುದರಲ್ಲಿ ಏನೂ  ಸಂದೇಹವಿಲ್ಲ.

1972-3 ನಲ್ಲಿ ಪೂರ್ವ ಆಫ್ರಿಕಾದ ಸಾವಿರಾರು ಭಾರತೀಯರನ್ನು ಅಲ್ಲಿಂದ ಓಡಿಸಿದಾಗ ಅವರೆಲ್ಲಾ  ಬಂದಿದ್ದು ಈ ದೇಶಕ್ಕೆ . ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಎಡ್ವರ್ಡ್ ಹೀತ್, ಜನಗಳು ಪ್ರತಿಭಟಿಸಿದರೂ, ಈ ನಿರ್ಧಾರವನ್ನು ಮಾನವೀಯ ಕಾರಣದಿಂದ ಮಾಡಿದ್ದನ್ನು ನಾವು ಯಾರೂ ಮರೆಯಬಾರದು. ಈ ಜನಾಂಗದಿಂದ ಈ ದೇಶದಲ್ಲಿ ಒಂದು shopping revolution  ಶುರು ಆಯಿತು ಎನ್ನುವುದು ಸತ್ಯ,.

English Premier League ಫುಟ್ ಬಾಲ್ ನಲ್ಲಿ ಆ ಕಾಲದಲ್ಲಿ ಒಬ್ಬನೂ Afro Caribbean ಅಥವಾ Asian ಮೂಲದವರ ಆಟಗಾರರು ಇರಲಿಲ್ಲ,  ಇದ್ದರೂ  ಅವರನ್ನು ದೂರ ಮಾಡಿದ್ದರು. ಈಗ ನೋಡಿ ಇಂಗ್ಲೆಂಡ್ ಟೀಮ್ ನಲ್ಲಿ ಎಷ್ಟು ಜನ ಇಂಥವರು ಇದ್ದಾರೆ.

ಮೊಟ್ಟಮೊದಲನೆಯ ಆಫ್ರೋ ಕಾರಿಯಾಬೀನ್ ಮೂಲದ Member of Parliament 1987 ರಲ್ಲಿ, ಲೇಬರ್ ಪಾರ್ಟಿ ಯ Dianne Abbott. ( ಆದರೆ ಇದಕ್ಕೆ ನೂರು ವರ್ಷದ ಹಿಂದೆ ಇಬ್ಬರು ಭಾರತೀಯರು Conservative ಮತ್ತು Liberal ಪಾರ್ಟಿ ಇಂದ ಇಲ್ಲಿಯ ಪಾರ್ಲಿಮೆಂಟಿಗೆ ಚುನಾಯಿತರಾಗಿದ್ದರು )

ಲಂಡನ್ನಲ್ಲಿ 1993 ನಲ್ಲಿ Stephen Lawrence ಎಂಬ 17 ವರ್ಷದ  Afro Caribbean ಹುಡುಗನ ಕೊಲೆ ಜನರ ಮನ ತಟ್ಟಿತು. ಪೊಲೀಸ್ ಇಲಾಖೆ ಇದರಲ್ಲಿ ಅಷ್ಟೇನು ಆಸಕ್ತಿ ತೋರಿಸಿ ತನಿಖೆ ಮಾಡಲಿಲ್ಲ. ಆದರೆ ಮೂರು ವರ್ಷದ ನಂತರ ಆಗಿನ ಸರಕಾರ ಹೈಕೋರ್ಟಿನ ನಿವೃತ  ನ್ಯಾಯಾಧೀಶ Sir William  McPherson ಅನ್ನುವರನ್ನು ಇದರ ಬಗ್ಗೆ ವಿಚಾರಣೆ ಮಾಡಲು ನೇಮಿಸಿದರು. ಇವರ ವರದಿ ಈ ದೇಶದ  ಜನರ ಹೃದಯವನ್ನು ಮುಟ್ಟಿತು. ಪೊಲೀಸ್ ಇಲಾಖೆ “Institutionally Racist ” ಅಂತ ತೀವ್ರ ವಾಗಿ ಖಂಡಿಸಿದರು, ಇಲ್ಲಿಂದ ಅನೇಕ ಸುಧಾರಣೆಗಳು ಜಾರಿಗೆ ಬಂದು ವರ್ಣ ಭೇದದ  ಹಾವಳಿ ತುಂಬಾ ಕಡಿಮೆ ಆಯಿತು

ಟೆಲಿವಿಷನ್ ನಲ್ಲಿ ವರದಿಗಾರರು ಬಿಳಿ ಮಖಗಳು ಮಾತ್ರ .  ಆದರೆ 1973 ನಲ್ಲಿ ಟ್ರಿನಿಡಾಡ್ ಮೂಲದವರಾಗಿದ್ದ Sir Trevor McDonald ಮೊದಲೆನೆಯ ಆಫ್ರೋ Caribbean ವರದಿಗಾರ ನಂತರ News ರೀಡರ್.

ಒಂದು ಹೇಳಬಲ್ಲೆ, ಈಗಿನ ಯುನೈಟೆಡ್ ಕಿಂಗ್ಡಮ್ ಮತ್ತು 20/30 ವರ್ಷದ ಹಿಂದಿನ ಯು.ಕೆ. ಬೇರೆ ಬೇರೆ ದೇಶಗಳು ಅನ್ನಬಹುದು.

ನನ್ನ ವೈಯಕ್ತಿಕ ಅನುಭವದಿಂದ ಒಂದು ಹೇಳಬಲ್ಲೆ, ಬಹುಷಃ ನಾನು ಅದೃಷ್ಟವಂತ.ಮೇಲೆ ಹೇಳಿದ ಸಮಸ್ಯೆಗಳು ನಮಗೆ ಬರಲಿಲ್ಲ. ನಾನು ಕೆಲಸ ಮಾಡಿದ ಕಡೆ ನನ್ನನ್ನು ಎಲ್ಲರೂ ತುಂಬಾ ಗೌರವದಿಂದ ಕಾಣುತ್ತಿದ್ದರು, Positive Discrimination ಅನ್ನುವುದು ನನಗೆ ಅನ್ವಯಿಸಿತ್ತು ಅಂದರೆ ತಪ್ಪಿಲ್ಲ.

ಈ ಸಮಸ್ಯೆಗಳನ್ನು ಎದುರಿಸಿ ನಮ್ಮ career ಮುಂದೆವರಿಸಿ ಮಕ್ಕಳನ್ನು ಬೆಳೆಸಿ ಅವರಿಗೆ ನಮ್ಮ ಸಂಸ್ಕೃತಿ ಮತ್ತು ಭಾಷೆ ಪರಿಚಯ ಮಾಡುವುದು ದೊಡ್ಡ ಕೆಲಸವಾಗಿತ್ತು.  ಇದಕ್ಕೆ 1983 ರಲ್ಲಿ ಪ್ರಾರಂಭವಾದ ಕನ್ನಡ ಬಳಗ ಇಲ್ಲಿ ನೆರವಾಗಿದ್ದು ನಮ್ಮ ಅಧೃಷ್ಠ.

ನಿಮಗೆ ಈ ಪುರಾಣ ಕೇಳಿ ಸಾಕಾಗಿರಬಹುದು, ಈಗ ನಮ್ಮ ಬಳಗದ ವಿಚಾರ .

                             -ರಾಮಮೂರ್ತಿ,ಬೇಸಿಂಗ್ಸ್ಟೋಕ್

(ಮುಂದಿನ ವಾರ- ಕನ್ನಡ ಬಳಗ ಬೆಳೆದು ಬಂದ ದಾರಿ)